ಹಬಲ್ ದೂರದರ್ಶಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Space shuttle Discovery ಇಂದ ಹಬಲ್ ದೂರದರ್ಶಕದ ಚಿತ್ರ

ಹಬಲ್ ದೂರದರ್ಶಕ ಭೂಮಿಯ ಸುತ್ತ ಬಾಹ್ಯಾಕಾಶದಲ್ಲಿ ಸುತ್ತುತ್ತಿರುವ ಒಂದು ದೂರದರ್ಶಕ. ಬಾಹ್ಯಾಕಾಶದಲ್ಲಿರುವುದರಿಂದ ಈ ದೂರದರ್ಶಕವು ಭೂಮಿಯ ವಾಯುಮಂಡಲದ ಹೊರಗಿರುವುದರಿಂದ ಬ್ರಹ್ಮಾಂಡದ ದೂರ ಪ್ರದೇಶಗಳಿಂದ ಬರುವ ದುರ್ಬಲ ಬೆಳಕನ್ನು ಕೂಡ ಪತ್ತೆ ಹಚ್ಚಬಲ್ಲದು. ೧೯೯೦ರಲ್ಲಿ ಅಂತರಿಕ್ಷದಲ್ಲಿ ಸ್ಥಾಪನೆಗೊಂಡ ನಂತರದಿಂದಲೂ ಇದು ಖಗೋಳವಿಜ್ಞಾನಕ್ಕೆ ಬ್ರಹ್ಮಾಂಡದ ಬಗ್ಗೆ ಅತ್ಯಮೂಲ್ಯ ಮಾಹಿತಿಗಳನ್ನು ನೀಡುತ್ತಾ ಬಂದಿದೆ.

ಪರಿಚಯ[ಬದಲಾಯಿಸಿ]

ಹಬಲ್ ದೂರದರ್ಶಕವು ಬಾಹ್ಯಾಕಾಶದಲ್ಲಿರುವ ಕಾರಣ, ಭೂಮಿ ಮೇಲಿನ ದೂರದರ್ಶಕಗಳಿಗೆ ಹೋಲಿಸಿದರೆ, ಗಮನಾರ್ಹವಾದ ವೀಕ್ಷಣಾ ಅನುಕೂಲತೆಗಳನ್ನು ಹೊಂದಿದೆ - ಚಿತ್ರಗಳನ್ನು ಮಬ್ಬುಗೊಳಿಸಲು ಯಾವುದೇ ವಾಯುಮಂಡಲವಿಲ್ಲದಿರುವುದು, ಗಾಳಿಯಿಂದ ಚದುರಿಸಲ್ಪಟ್ಟ ಹಿನ್ನೆಲೆ ಬೆಳಕು ಇಲ್ಲದಿರುವುದು, ಇತ್ಯಾದಿ. ಇವಲ್ಲದೆ, ಓಜೋನ್ ಪದರದ ಕಾರಣ, ಭೂಮಿಯಿಂದ ಮಾಡಿದ ವೀಕ್ಷಣೆಗಳಲ್ಲಿ ಅತಿನೇರಳೆ ಕಿರಣಗಳನ್ನು ವೀಕ್ಷಿಸಲಾಗುವುದಿಲ್ಲ. ಆದರೆ ಹಬಲ್ ದರ್ಶಕವು ಅತಿನೇರಳೆ ಕಿರಣಗಳನ್ನು ಸಹ ಕಾಣಬಲ್ಲದು. ಇದು ಮೊಟ್ಟ ಮೊದಲ ಬಾಹ್ಯಾಕಾಶ ದೂರದರ್ಶಕವಲ್ಲವಾದರೂ, ೧೯೯೦ರಲ್ಲಿ ಇದರ ಉಡಾವಣೆಯ ನಂತರ ಇದು ಖಗೋಳಶಾಸ್ತ್ರದ ಇತಿಹಾಸದಲ್ಲಿ ಒಂದು ಮುಖ್ಯ ಉಪಕರಣವಾಗಿ ಕಾರ್ಯ ನಿರ್ವಹಿಸಿದೆ.

ಹಬಲ್‌ನ ನಿರ್ಮಾಣ ಮತ್ತು ಉಡಾವಣೆಗಳು ಹಲವು ಹಣಕಾಸು ಸಮಸ್ಯೆಗಳಿಗೆ ಮತ್ತು ತಡಗಳಿಗೆ ಒಳಪಟ್ಟಿದ್ದವು. ಹಾಗೂ, ೧೯೯೦ರಲ್ಲಿ ಉಡಾವಣೆಯ ಸ್ವಲ್ಪವೇ ನಂತರ ಅದರ ಮುಖ್ಯ ಕನ್ನಡಿಯು ಗೋಳೀಯ ವಿಪಥನ ದೋಷದಿಂದ ಕೂಡಿದ್ದು ಗಮನಕ್ಕೆ ಬಂದಿತು. ಅದರ ನಿರ್ಮಾಣ ಕಾಲದಲ್ಲಿ ದೋಷಪೂರಿತ ಗುಣ ನಿಯಂತ್ರಣದಿಂದ ಆದ ಈ ತಪ್ಪಿನಿಂದ ದೂರದರ್ಶಕವು ಬಹಳ ಅದಕ್ಷವಾಯಿತು. ಆದರೆ, ೧೯೯೩ರ ದುರಸ್ತಿ ಯಾತ್ರೆಯ ಬಳಿಕ ದೂರದರ್ಶಕವು ತನ್ನ ನಿರೀಕ್ಷಿತ ದಕ್ಷತೆಯನ್ನು ತಲುಪಿ, ಖಗೋಳಶಾಸ್ತ್ರದಲ್ಲಿ ಒಂದು ಪ್ರಮುಖ ಸಂಶೋಧನಾ ಉಪಕರಣವಾಯಿತು.