ರೊಡ್ಡಾ ಕಂಪನಿಯ ಶಸ್ತ್ರಾಸ್ತ್ರ ಕಳ್ಳತನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೊಡ್ಡಾ ಕಂಪನಿಯ ಶಸ್ತ್ರಾಸ್ತ್ರ ಕಳ್ಳತನ ಬ್ರಿಟಿಷ್ ಭಾರತದ ಕಲ್ಕತ್ತಾದಲ್ಲಿ ೨೬ ಆಗಸ್ಟ್ ೧೯೧೪ ರಂದು ನಡೆಯಿತು. ಬಂಗಾಳಿ ಕ್ರಾಂತಿಕಾರಿ ಸಂಘಟನೆಯ ಜುಗಂತರ್ ಬಣದ ಸದಸ್ಯರು, ಅನುಶೀಲನಾ ಸಮಿತಿಯ ಸದಸ್ಯರು ಕಸ್ಟಮ್ಸ್ ಮನೆಯಿಂದ ಬ್ರಿಟಿಷ್ ಕಂಪನಿಯ ಗೋದಾಮಿಗೆ ಹೋಗುವ ಮಾರ್ಗದಲ್ಲಿದ್ದ ಕಲ್ಕತ್ತಾದ ಬಂದೂಕು ವ್ಯಾಪಾರಿ ಮೆಸ್ಸರ್ ರೊಡ್ಡಾ ಮತ್ತು ಕಂಪನಿಗೆ ಸೇರಿದ ಮೌಸರ್ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಸಾಗಿಸುವುದನ್ನು ತಡೆದರು.[೧][೨] ಇದೊಂದು ಸಂವೇದನಾಶೀಲ ಘಟನೆಯಾಗಿದ್ದು, ಇದನ್ನು ದಿ ಸ್ಟೇಟ್ಸ್‌ಮನ್ ಎಂಬ ಪತ್ರಿಕೆಯು ಶ್ರೇಷ್ಠ ಹಗಲು ದರೋಡೆ ಎಂದು ಬಣ್ಣಿಸಿದ್ದಾರೆ.[೩] ೧೯೨೨ ರ ಹೊತ್ತಿಗೆ, ಪೋಲಿಸರು ಕದ್ದ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು.

ಹಿನ್ನೆಲೆ[ಬದಲಾಯಿಸಿ]

ಮಾಣಿಕ್ ಟೋಲ್ಲಾ ಪಿತೂರಿಯ ನಂತರದ ಪಾಶ್ಚಿಮಾತ್ಯ ಅನುಶೀಲನಾ ಸಮಿತಿಯು ಜತೀಂದ್ರ ನಾಥ್ ಮುಖರ್ಜಿಯಲ್ಲಿನ ಪ್ರಮುಖ ನಾಯಕತ್ವ ಗುಣವನ್ನು ಕಂಡುಕೊಂಡಿತು. ತದನಂತರದಲ್ಲಿ ಅದು ಜುಗಂತರ್ ಗುಂಪಾಗಿ ಸ್ಪಷ್ಟವಾಗಿ ಹೊರಹೊಮ್ಮಿತು. ಏತನ್ಮಧ್ಯೆ, ರಾಸ್ ಬಿಹಾರಿ ಬೋಸ್‍ರನ್ನು ಭಾರತದ ಅತ್ಯಂತ ಅಪಾಯಕಾರಿ ಕ್ರಾಂತಿಕಾರಿ[೪] ಎಂದು ಹೇಳಲಾಯಿತು. ಈ ಗುಂಪುಗಳು ಉತ್ತರ ಭಾರತಕ್ಕೆ ತಲುಪಿದವು. ಅಲ್ಲಿ ಜತೀನರು ಡೆಹ್ರಾಡೂನ್ ನಲ್ಲಿರುವ ಭಾರತೀಯ ಅರಣ್ಯ ಸಂಸ್ಥೆಯಲ್ಲಿ ಕೆಲಸಕ್ಕಾಗಿ ಸೇರಿಕೊಂಡರು. ಜುಗಂತರ್ ಪಕ್ಷ ಎಂದು ಕರೆಯಲ್ಪಡುವ ರಹಸ್ಯ ಸಮಾಜದ ನಾಯಕತ್ವವನ್ನು ಜತೀಂದ್ರನಾಥ ಮುಖರ್ಜಿ ವಹಿಸಿಕೊಂಡರು. ಅವರು ಕಲ್ಕತ್ತಾದ ಕೇಂದ್ರ ಸಂಸ್ಥೆ ಮತ್ತು ಅದರ ಹಲವಾರು ಶಾಖೆಗಳ ನಡುವಿನ ಸಂಬಂಧವನ್ನು ಬಂಗಾಳ, ಬಿಹಾರ, ಒರಿಸ್ಸಾ ಮತ್ತು ಯುಪಿಯ ಹಲವಾರು ಸ್ಥಳಗಳಲ್ಲಿ ಪುನರುಜ್ಜೀವನಗೊಳಿಸಿದರು. ಇದರೊಂದಿಗೆ ಭೂಗತರಾದ ಕ್ರಾಂತಿಕಾರೀ ಸದಸ್ಯರಿಗಾಗಿ ಸುಂದರ್‌ಬನ್ಸ್‌ನಲ್ಲಿ ಅಡಗುತಾಣಗಳನ್ನು ತೆರೆದರು. ಅಮರೇಂದ್ರ ಚಟರ್ಜಿ, ನರೇನ್ ಭಟ್ಟಾಚಾರ್ಯ ಮತ್ತು ಇತರ ಉದಯೋನ್ಮುಖ ನಾಯಕರ ನೆರವಿನಿಂದ ಮತ್ತು ಮುಖರ್ಜಿಯವರ ಸತತ ಪ್ರಯತ್ನಗಳಿಂದ ಮಾರ್ಗದರ್ಶಿಸಲ್ಪಟ್ಟ ಗುಂಪು ನಿಧಾನವಾಗಿ ಮರುಸಂಘಟಿತವಾಯಿತು. ಹೌರಾ-ಸಿಬ್ಪುರ್ ಪಿತೂರಿ ಪ್ರಕರಣದ ನಂತರ ಸಂಘಟನೆಯು ಶ್ರಮಜೀಬಿ ಸಮಬಯಾ (ದಿ ಲೇಬರರ್ಸ್ ಕೋಆಪರೇಟಿವ್) ಮತ್ತು ಹ್ಯಾರಿ ಆಂಡ್ ಸನ್ಸ್ ಎಂಬ ಬೇರ್ಪಟ್ಟ ಎರಡು ತೋರಿಕೆಯ ಸಂಘಟನೆಗಳ ಹಣೆಪಟ್ಟಿಯಡಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿತ್ತು. ಈ ಸಮಯದಲ್ಲಿ, ಜತಿನ್ ೧೦ನೇ ಜಾಟ್ ರೆಜಿಮೆಂಟ್‌ನೊಂದಿಗೆ ಸಂಪರ್ಕವನ್ನು ಸ್ಥಾಪಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದರು. ೧೯೧೨ರ ಸಮಯದಲ್ಲಿ ದಂಗೆಗೆ ಬೇಕಾದ ಹಣವನ್ನು ಪಡೆಯಲು ನರೇಂದ್ರ ನಾಥ್ ಹಲವಾರು ದರೋಡೆಗಳನ್ನು ನಡೆಸಿದರು.ಯುರೋಪಿನಲ್ಲಿ, ಜರ್ಮನ್ ಸಹಾಯದಿಂದ ಪ್ಯಾನ್-ಇಂಡಿಯನ್ ಕ್ರಾಂತಿಯ ಯೋಜನೆಗಳು ಹೊರಹೊಮ್ಮುತ್ತಿದ್ದವು. ರಾಸ್ ಬಿಹಾರಿ ಬೋಸ್ ಯುಎಸ್ಎ ಮತ್ತು ಕೆನಡಾದ ವಲಸಿಗ ಭಾರತೀಯ ಗುಂಪುಗಳೊಂದಿಗೆ ಸಮನ್ವಯ ಸಾಧಿಸಲು ಪ್ರಯತ್ನಿಸಿದರು. ಇದರೊಂದಿಗೆ ಅವರು ಫೆಬ್ರವರಿ ೧೯೧೫ರಲ್ಲಿ ಬ್ರಿಟಿಷರ ವಿರುದ್ಧ ಸಂಘಟಿತ ದಂಗೆಯನ್ನು ಯೋಜಿಸಿದರು. ಪವಿತ್ರ ಹಿಂದೂ ನಗರವಾದ ಬೃಂದಾವನಕ್ಕೆ ತೀರ್ಥಯಾತ್ರೆ ಮಾಡುವಾಗ ನಿರಾಲಂಬ ಸ್ವಾಮಿಯ ಮೂಲಕ ರಾಸ್ ಬಿಹಾರಿ ಅವರ ಕೆಲಸವನ್ನು ಜತಿನ್ ಅವರಿಗೆ ತಿಳಿಸಲಾಯಿತು. ಬಂಗಾಳಕ್ಕೆ ಹಿಂದಿರುಗಿದ ಜತಿನ್ ತನ್ನ ಗುಂಪನ್ನು ಮರುಸಂಘಟಿಸಲು ಪ್ರಾರಂಭಿಸಿದ. ರಾಸ್ ಬಿಹಾರಿ ಬೋಸ್ ಅವರು ೧೯೧೨ರಲ್ಲಿ ಲಾರ್ಡ್ ಹಾರ್ಡಿಂಗ್ ರ ಮೇಲೆ ಬಾಂಬ್ ಎಸೆಯುವ ಪ್ರಯತ್ನವನ್ನು ಮಾಡಿದ ನಂತರ ಬನಾರಸ್‌ನಲ್ಲಿ ತಲೆಮರೆಸಿಕೊಂಡಿದ್ದರು. ಆದರೆ ಅವರು ೧೯೧೩ ರ ಕೊನೆಯಲ್ಲಿ ಜತಿನ್‌ರನ್ನು ಭೇಟಿಯಾಗಿ, ಪ್ಯಾನ್-ಇಂಡಿಯನ್ ಕ್ರಾಂತಿಯ ಬಗೆಗೆ ವಿವರಿಸಿದರು. ಶ್ರೀಮಂತ ಬಂಗಾಳಿ ಕುಟುಂಬಗಳ ಮೇಲೆ ಹಲವಾರು ಸಂವೇದನಾಶೀಲ ದಾಳಿಗಳನ್ನು ನಡೆಸಿ ದರೋಡೆಗಳಿಂದ ಹಣಕಾಸು ಸಂಗ್ರಹಿಸಿದ ಜುಗಂತರ್ ಗೆ ೧೯೧೩-೧೪ರಲ್ಲಿ ಎಂದಿಗಿಂತಲೂ ಹೆಚ್ಚು ಶಸ್ತ್ರಾಸ್ತ್ರಗಳ ಅಗತ್ಯವಿತ್ತು.

ದರೋಡೆ[ಬದಲಾಯಿಸಿ]

ರೊಡ್ಡಾ ಮತ್ತು ಕಂಪನಿ ಕಲ್ಕತ್ತಾದ ವ್ಯಾನ್ಸಿಟ್ಟಾರ್ಟ್ ರೋನಲ್ಲಿರುವ ಬ್ರಿಟಿಷ್ ಒಡೆತನದ ಪ್ರಮುಖ ಬಂದೂಕು ಅಂಗಡಿಯಾಗಿತ್ತು.[೫] ಅದರ ಉದ್ಯೋಗಿಗಳಲ್ಲಿ ಅನುಶೀಲನ ಸಮಿತಿಯ ಸಕ್ರಿಯ ಸದಸ್ಯರಾದ ಶ್ರೀಶ್ ಚಂದ್ರ ಮಿತ್ರ ಅಲಿಯಾಸ್ ಹಬು ಕೂಡ ಇದ್ದರು. ಆಗಸ್ಟ್ ೧೯೧೪ರಲ್ಲಿ ಸಂಸ್ಥೆಗೆ ರವಾನೆಯಾಗುತ್ತಿರುವ ಪ್ರಮುಖ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಬಗ್ಗೆ ಮಿತ್ರಾರಿಗೆ ತಿಳಿದಿತ್ತು. ಶಸ್ತ್ರಾಸ್ತ್ರಗಳ ಆಗಮನದ ಬಗ್ಗೆ ಮಾಹಿತಿ ನೀಡಿದ ಅನುಕುಲ್ ಮುಖರ್ಜಿ ನೇತೃತ್ವದ ಜುಗಂತರ್ ಸದಸ್ಯರ ಗುಂಪು ೨೪ ಆಗಸ್ಟ್ ೧೯೧೪ರಂದು ಕಲ್ಕತ್ತಾದ ಬೌಬಜಾರ್ ಉಪನಗರದಲ್ಲಿ ಭೇಟಿಯಾಯಿತು. ಸಭೆಯಲ್ಲಿ ಉಪಸ್ಥಿತರಿದ್ದವರಲ್ಲಿ ನರೇನ್ ಭಟ್ಟಾಚಾರ್ಯ ಅವರು ಶಸ್ತ್ರಾಸ್ತ್ರಗಳನ್ನು ಕದ್ದುವ ಯೋಜನೆಯನ್ನು ವಿರೋಧಿಸಿ ಸಭೆಯಿಂದ ನಿರ್ಗಮಿಸಿದರು. ನಂತರ ೧೯೧೪ರ ಆಗಸ್ಟ್ ೨೬ರಂದು ದರೋಡೆ ಮಾಡುವ ದಿನವೆಂದು ನಿರ್ಧರಿಸಲಾಯಿತು.

ಆಗಸ್ಟ್ ೨೬ ರಂದು, ರೊಡ್ಡಾ ಮತ್ತು ಕಂಪನಿಯ ಪರವಾಗಿ ಸಾಗಣೆಯನ್ನು ಸ್ವೀಕರಿಸಲು ಶ್ರೀಶ್ ಚಂದ್ರ ಮಿತ್ರ ಕಲ್ಕತ್ತಾದ ಕಸ್ಟಮ್ಸ್ ಮನೆಗೆ ತೆರಳಿದರು. ಅವರೊಂದಿಗೆ ಏಳು ಎತ್ತಿನಬಂಡಿಗಳು ಇದ್ದವು. ಮಿತ್ರಾರು ಮುಕ್ತಿ ಸಂಘ ಎಂಬ ಜುಗಂತರ್‌ನ ಶಾಖೆಯ ಮತ್ತೊಬ್ಬ ಸದಸ್ಯ ಹರಿದಾಸ್ ದತ್ತಾ ರನ್ನು ತನ್ನೊಂದಿಗೆ ಕೊಂಡೊಯ್ದ ಬಂಡಿಗಳಲ್ಲಿ ಒಂದಕ್ಕೆ ಕಾರ್ಟ್ ಡ್ರೈವರ್ ಆಗಿ ನೇಮಿಸಿದ್ದರು . ಶ್ರೀಶ್ ಚಂದ್ರ ಮಿತ್ರ ಸ್ವೀಕರಿಸಿದ ಒಟ್ಟು ೨೦೨ ಪೆಟ್ಟಿಗೆಗಳಲ್ಲಿ ೧೯೨ ಪೆಟ್ಟಿಗೆಗಳನ್ನು ಮೊದಲ ಆರು ಬಂಡಿಗಳಿಗೆ ತುಂಬಿಸಿ, ಉಳಿದ ೧೦ ಪೆಟ್ಟಿಗೆಗಳನ್ನು ದತ್ತಾರು ಚಾಲಕನಾಗಿದ್ದ ಬಂಡಿಗೆ ಕೊಂಡೊಯ್ಯಲಾಯಿತು. ದತ್ತಾ ಅವರ ಬಂಡಿಯೊಂದಿಗೆ ಇತರ ಇಬ್ಬರು ಕ್ರಾಂತಿಕಾರಿಗಳಾದ ಶ್ರೀಶ್ ಪಾಲ್ ಮತ್ತು ಖಾಗೇಂದ್ರ ನಾಥ್ ದಾಸ್ ಕೂಡ ಇದ್ದರು. ಮಿತ್ರಾ ತನ್ನ ಸರಕುಗಳೊಂದಿಗೆ ಕಸ್ಟಮ್ಸ್ ಮನೆಯಿಂದ ನಿರ್ಗಮಿಸುವಾಗ, ದತ್ತಾ ಅವರ ಬಂಡಿ ಕೊನೆಯದಾಗಿ ಉಳಿಯುವಂತೆ ನೋಡಿಕೊಂಡರು. ಉಳಿದ ಬಂಡಿಗಳು ಕಂಪನಿಯ ಗೋದಾಮಿಗೆ ತೆರಳುತ್ತಿದ್ದಂತೆ, ದತ್ತಾ, ಪಾಲ್ ಮತ್ತು ದಾಸ್ ಮೂವರು ಮಿಷನ್ ರೋ ದ ಮೂಲಕ ಕಲ್ಕತ್ತಾದ ಮೊನೊಂಗಾ ಲೇನ್ ಉಪನಗರಕ್ಕೆ ತೆರಳಿದರು. ಈ ಯಶಸ್ವಿ ದರೋಡೆಯಲ್ಲಿ ಜುಗಂತರ್ ೫೦ ಮೌಸರ್ ಪಿಸ್ತೂಲ್‌ಗಳನ್ನು ಮತ್ತು ೪೬,೦೦೦ ಸುತ್ತುಗಳ ಮದ್ದುಗುಂಡುಗಳನ್ನು ಅಪಹರಿಸಿತು.[೬]

ನಂತರ[ಬದಲಾಯಿಸಿ]

ಶಸ್ತ್ರಾಸ್ತ್ರ ದರೋಡೆಯ ಸುದ್ದಿ ಸಂವೇದನಾಶೀಲವಾಯಿತು. ದಿ ಸ್ಟೇಟ್ಸ್‌ಮನ್ ಪತ್ರಿಕೆಯು, ಆಗಸ್ಟ್ ೩೦, ೧೯೧೪ ರಂದು ತನ್ನ ಆವೃತ್ತಿಯಲ್ಲಿ ದರೋಡೆಯನ್ನು ಅತ್ಯಂತ ದೊಡ್ಡ ಹಗಲು ದರೋಡೆ ಎಂದು ಬಣ್ಣಿಸಿದೆ. ಹರಿದಾಸ್ ದತ್ತಾ ಅವರನ್ನು ಸೆಪ್ಟೆಂಬರ್ ೧೯೧೪ರಲ್ಲಿ ಬಂಧಿಸಲಾಯಿತು, ಮತ್ತು ದರೋಡೆ ಮಾಡಿದ್ದಕ್ಕಾಗಿ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಇವರ ಜೊತೆಗೆ ಕಾಳಿದಾಸ್ ಬಸು, ಭುಜಂಗ ಧಾರ್ ಮತ್ತು ಗಿರಿಂದ್ರನಾಥ್ ಬ್ಯಾನರ್ಜಿ ಅವರಿಗೂ ಶಿಕ್ಷೆಯನ್ನು ವಿಧಿಸಿದರು . ತದನಂತರ ಕದ್ದ ಶಸ್ತ್ರಾಸ್ತ್ರಗಳನ್ನು ಕಲ್ಕತ್ತಾ ಮತ್ತು ಬಂಗಾಳದಲ್ಲಿ ೧೯೧೭ರವರೆಗೆ ನಡೆದ ಹೆಚ್ಚಿನ ಕ್ರಾಂತಿಕಾರಿ ಘಟನೆ ನಡೆದ ಸಂದರ್ಭಗಳಲ್ಲಿ, ಬುಧಬಲಂಗಾ ನದಿಯ ದಡದಲ್ಲಿ ನಡೆದ ಬಾಗಾ ಜತಿನ್ ರವರ ಅಂತಿಮ ಹೋರಾಟದ ಸಮಯದಲ್ಲಿ ವಶಪಡಿಸಿಕೊಂಡರು. ೧೯೨೨ ರ ಹೊತ್ತಿಗೆ, ಪೊಲೀಸರು ಕದ್ದ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು.

ಸ್ಮರಣಾರ್ಥ[ಬದಲಾಯಿಸಿ]

ದರೋಡೆಯ ಯೋಜಕ ಜತೀಂದ್ರ ನಾಥ್ ಮುಖರ್ಜಿ, ಜತೀಂದ್ರ ನಾಥ್ ಬ್ಯಾನರ್ಜಿ, ಹರಿದಾಸ್ ದತ್ತಾ ಮತ್ತು ಬಿಪಿನ್ ಬಿಹಾರಿ ಗಂಗೂಲಿ ಅವರನ್ನುಇಂದಿಗೂ ಕಲ್ಕತ್ತಾದಲ್ಲಿ ಸ್ಮರಿಸಲಾಗುತ್ತದೆ. ಅಲ್ಲದೇ ಅವರ ಪ್ರತಿಮೆಗಳನ್ನು ಮೊನೊಂಗಾ ಲೇನ್‌ನಲ್ಲಿ ನಿರ್ಮಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. name= Statesman>"Kolkata's 'greatest daylight robbery' all but forgotten". The Statesman. 25 August 2013. Archived from the original on 21 September 2016.
  2. name=Sarkar147>Sarkar 1983, p. 147 In Bengal, the revolutionaries achieved a major success in August 1914, when a large consignment of 50 Mauser pistols and 46,000 rounds of ammunition was appropriated by them from the Rodda firm in Calcutta through a sympathetic employee.
  3. name= Statesman>"Kolkata's 'greatest daylight robbery' all but forgotten". The Statesman. 25 August 2013. Archived from the original on 21 September 2016.
  4. Popplewell 1995, p. 112
  5. "Kolkata's 'greatest daylight robbery' all but forgotten". The Statesman. 25 August 2013. Archived from the original on 21 September 2016.
  6. Sarkar 1983, p. 147 In Bengal, the revolutionaries achieved a major success in August 1914, when a large consignment of 50 Mauser pistols and 46,000 rounds of ammunition was appropriated by them from the Rodda firm in Calcutta through a sympathetic employee.