ಯುಏವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟರಾನಿಸ್ ಯುಏವಿ

ಮಾನವರಹಿತ ವಾಯು ವಾಹನಗಳು (unmanned aerial vehicles) ಚಾಲಕರಿಲ್ಲದಿರುವ ವಿಮಾನಗಳು. ಇವುಗಳು ದೂರನಿಯಂತ್ರಿತ ಅಥವಾ ಮೊದಲೇ ಸಿದ್ಧಪಡಿಸಿದ ನಿರ್ದಿಷ್ಟ ಕಾರ್ಯಕ್ರಮದಂತೆ ಹಾರಾಡುತ್ತವೆ. ಪ್ರಸ್ತುತ ಈ ವಿಮಾನಗಳನ್ನು ಹೆಚ್ಚಾಗಿ ಸೈನ್ಯದ ಕಾರ್ಯಾಚರಣೆಗಳಿಗಾಗಿ ಬಳಸಲಾಗುತ್ತಿದೆಯಾದರೂ ನಾಗರಿಕ ಕಾರ್ಯಗಳಿಗೆ ಕೂಡಾ ಇವುಗಳ ಬಳಕೆ ನಡೆಯುತ್ತಿವೆ. ಈ ವಿಮಾನಗಳನ್ನು UAV, UAVS (Unmanned Aerial Vehicle System), UAS (Unmanned Aircraft System), RPV (Remotely Piloted Vehicles) ಎಂದೂ ಕರೆಯಲಾಗುತ್ತದೆ. UAV ಎಂಬ ಪದಕ್ಕೇ ಹಲವಾರು ವಿಕಸಿತ ರೂಪಗಳಿವೆ. Unmanned Air Vehicle ಹಾಗೂ Uninhabited Aerial Vehicle ಎಂದೂ ಕರೆಯಲಾಗುತ್ತದೆ. ಹಲವಾರು ಕಡೆಗಳಲ್ಲಿ ದೂರನಿಯಂತ್ರಿತ ಕ್ಷಿಪಣಿಗಳನ್ನು ಯುಏವಿ ಎಂದು ಕರೆಯಲಾಗುವುದರಿಂದ ಈ ಲೇಖನದಲ್ಲಿ, ಯುಏವಿ ಎಂದರೆ ದೂರನಿಯಂತ್ರಿತ, ಮಟ್ಟ ಹಾರಾಟ ಸಮರ್ಥವಾದ (level flight capable), ಜೆಟ್ ಅಥವಾ ಪಿಸ್ಟನ್ ಇಂಜಿನ್ನಿಂದ ಶಕ್ತಿಪಡೆಯುವ, ಸ್ವಯಂ ಆಯುಧವಲ್ಲದ ವಿಮಾನಗಳಾಗಿವೆ. ಕ್ಷಿಪಣಿಗಳು ಕೂಡ ದೂರ ನಿಯಂತ್ರಿತವಾಗಿದ್ದರೂ ಸ್ವಯಂ ಆಯುಧಗಳಾಗಿದ್ದು ಪುನಃರ್ಬಳಕೆ ಸಾಧ್ಯವಿಲ್ಲ.

ಇತಿಹಾಸ ಮತ್ತು ಬೆಳವಣಿಗೆ[ಬದಲಾಯಿಸಿ]

ಮೊತ್ತ ಮೊದಲ ಯುಏವಿಯಾದ ಹ್ಯೂಲೆಟ್ಟ್-ಸ್ಪೆರ್ರಿ Hewitt-Sperry_Automatic_Airplane ಸ್ವಯಂ ಚಾಲಿತ ವಿಮಾನವನ್ನು ಪ್ರಥಮ ಜಾಗತಿಕ ಯುದ್ಧಕಾಲದಲ್ಲಿ ಹಾಗೂ ಅನಂತರ ತಯಾರಿಸಲಾಗಿತ್ತು. ದ್ವಿತೀಯ ಜಾಗತಿಕ ಯುದ್ಧದ ಕಾಲವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ತಾಂತ್ರಿಕ ಅಭಿವೃದ್ಧಿ ಕಂಡಿತು. ಅದರಂತೆ ಯುಏವಿ ಕ್ಷೇತ್ರದಲ್ಲೂ ಹಲವಾರು ಬೆಳವಣಿಗೆಗಳಾದಾವು. ಮುಖ್ಯವಾಗಿ ಯುಏವಿಗಳನ್ನು ವಿಮಾನಗಳನ್ನು ಹೊಡೆಯಲೆಂದು ನೆಲದಲ್ಲಿ ಅಳವಡಿಸಿರುವ ಕೋವಿಗಳ ಗುರಿ (Anti-aircraft Guns) ತರಬೇತಿಗಾಗಿ ಮತ್ತು ಗುರಿ ಅಭ್ಯಾಸಕ್ಕಾಗಿ ಉಪಯೋಗಿಸಲಾಗುತ್ತಿತ್ತು. ಇವು ಗಾತ್ರದಲ್ಲಿ ಚಿಕ್ಕದಾಗಿದ್ದು ಹೆಚ್ಚೇನೂ ಉಪಯುಕ್ತವಾಗಿರಲಿಲ್ಲ.

ಗುಪ್ತಚರ ಕಾರ್ಯಗಳಿಗಾಗಿ ಹಾಗೂ ವ್ಯೂಹಾತ್ಮಕ ಬಳಕೆಗಳಿಗಾಗಿ ಯುಏವಿಗಳು[ಬದಲಾಯಿಸಿ]

ಮೊತ್ತ ಮೊದಲು ಗುಪ್ತಚರ ಕಾರ್ಯಗಳಿಗಾಗಿ ಯುಏವಿಗಳನ್ನು ಬಳಸತೊಡಗಿದ್ದು ಇಸ್ರೇಲಿಗರು ಎಂದು ನಂಬಲಾಗಿದೆ. ಚಿಕ್ಕ ಆಟಿಕೆಯಂತಹ ದೂರ ನಿಯಂತ್ರಿತ ವಿಮಾನದಲ್ಲಿ ವಿಡಿಯೋ ಕ್ಯಾಮರವೊಂದನ್ನು ಅಳವಡಿಸಿ ಶತ್ರುವಿನ ಆಕಾಶದಲ್ಲಿ ಹಾರಾಡಿಸಿ ಕ್ಯಾಮರದಲ್ಲಿ ವಿಡಿಯೋ ಮುದ್ರಿಸಿ ಅನಂತರ ಆ ವಿಡಿಯೋವನ್ನು ಗಮನಿಸಿ ಶತ್ರುವಿನ ವ್ಯೂಹಾತ್ಮಕ (strategic) ಹೆಜ್ಜೆಗಳನ್ನು ವಿಮರ್ಶಿಸಲಾಗುತ್ತಿತ್ತು. ಇದಕ್ಕಿಂತಲೂ ಮುಂಚೆ ಮಾನವಚಾಲಿತ ಯುದ್ಧ ವಿಮಾನಗಳಲ್ಲಿ ಸ್ಥಿರ ಚಿತ್ರಗಳ ಕ್ಯಾಮರ ಅಳವಡಿಸಿ ಶತ್ರು ಆಕಾಶದಲ್ಲಿ ಹಾರಾಡಿ ಚಿತ್ರಗಳನ್ನು ಸೆರೆಹಿಡಿದು ಅವುಗಳನ್ನು ಗಮನಿಸಲಾಗುತ್ತಿತ್ತು. ಇದರ ಋಣಾತ್ಮಕ ಅಂಶವೆಂದರೆ ಚಿತ್ರಗಳನ್ನು ಸೆರೆಹಿಡೆದು, ಸ್ವನೆಲಕ್ಕೆ ಹಿಂತಿರುಗಿ, ಚಿತ್ರ ಸುರುಳಿಯನ್ನು (ಫಿಲ್ಮ್ ರೋಲ್) ಸ್ಟುಡಿಯೋಕ್ಕೆ ಕಳುಹಿಸಿ, ಅಲ್ಲಿ ಮುದ್ರಿಸಿದ ಚಿತ್ರಗಳನ್ನು ಸೇನೆಯ ಮುಖ್ಯ ಕಾರ್ಯಾಲಯಕ್ಕೆ ಕಳುಹಿಸಲು ತಗಲುವ ಸಮಯ. ಸೇನೆಯ ವರಿಷ್ಠ ಅಧಿಕಾರಿಗಳು ಈ ಚಿತ್ರಗಳನ್ನು ಗಮನಿಸಿ ತೀರ್ಮಾನಗಳನ್ನು ಕೈಗೊಳ್ಳುವಾಗ ಸಮರ ದೃಶ್ಯವೇ (battle scenario) ಬದಲಾಗಿರುತಿತ್ತು. ಇದಕ್ಕಿಂತಲೂ ಮುಖ್ಯವಾದದ್ದು ಮಾನವ ಜೀವಕ್ಕಿರುವ ಅಪಾಯ. ಶತ್ರು ನೆಲದ ದೃಶ್ಯವನ್ನು ಸೆರೆಹಿಡಿಯಲು ಹೋದ ವಿಮಾನವನ್ನೇ ಶತ್ರುವು ಹೊಡೆದುರುಳಿಸುವ ಸಾಧ್ಯತೆ ಬಹುವಾಗಿತ್ತು. ಈ ಸಮಸ್ಯೆಗಳ ಪರಿಹಾರವಾಗಿ ಕ್ಯಾಮರ ಅಳವಡಿಸಿದ ಯುಏವಿಗಳ ಉಪಯೋಗ ಆರಂಭವಾಯಿತು. ಯುಏವಿಗಳ ಚಾಲಕರು ಇವುಗಳ ಹಾರಾಟ ಸ್ಥಳಕ್ಕಿಂತ ಬಹು ದೂರದಲ್ಲಿ (ತಮ್ಮದೇ ನೆಲದಲ್ಲಿ) ಭೂ ನಿಯಂತ್ರಣ ಕೊಠಡಿಯೊಂದರಲ್ಲಿ (Ground Control Station) ಸುರಕ್ಷಿತವಾಗಿ ಕುಳಿತು ಯುಏವಿಯನ್ನು ನಿಯಂತ್ರಿಸುತ್ತಿರುವುದರಿಂದ ಶತ್ರುವು ಯುಏವಿಯನ್ನು ಹೊಡೆದುರುಳಿಸಿದರೂ ಮಾನವ ಜೀವಕ್ಕೆ ಯಾವುದೇ ಅಪಾಯವಿರಲಿಲ್ಲ. ತಾಂತ್ರಿಕ ಅಭಿವೃದ್ಧಿಯಿಂದಾಗಿ ಯುಏವಿ ಕ್ಯಾಮರಾದ ಕಣ್ಣಿಗೆ ಕಾಣುವ ವಿಡಿಯೊ ಚಿತ್ರವನ್ನು ನೇರವಾಗಿ ನೆಲಕ್ಕೆ ಬಿತ್ತರಿಸಲು ಸಾಧ್ಯವಾಯಿತು. ಈ ವಿಡಿಯೊವನ್ನು ಭೂ ನಿಯಂತ್ರಣ ಕೊಠಡಿಯಿಂದ ಅಥವಾ ನೇರವಾಗಿ ಯುಏವಿಯಿಂದ ಸೇನೆಯ ಮುಖ್ಯ ಕಾರ್ಯಾಲಯಗಳಿಗೆ ಪ್ರಸಾರ ಮಾಡುವುದರಿಂದ ಸೇನೆಯ ವರಿಷ್ಠ ಅಧಿಕಾರಿಗಳಿಗೆ ಸಮರ ಕ್ಷೇತ್ರದ ದೃಶ್ಯವು ನಿಜ ಸಮಯದಲ್ಲೇ (Real-time) ಲಭ್ಯವಾಗತೊಡಗಿತು. ಇದರಿಂದಾಗಿ ತಕ್ಷಣ ನಿಜ-ಸಮಯದ ತೀರ್ಮಾನಗಳನ್ನು ಕೈಗೊಂಡು ಯುದ್ಧಕ್ಕೆ ಸಂಬಧಿಸಿದ ಮುಂದಿನ ಹೆಜ್ಜೆಗಳನ್ನು ನಿರ್ಧರಿಸಬಹುದಾಯಿತು. ಯುಏವಿಗಳ ಇನ್ನೂ ಒಂದು ಲಾಭವೆಂದರೆ ಕಡಿಮೆಯಾಗುವ ವೆಚ್ಚ. ವಿಮಾನದಲ್ಲಿ ಚಾಲಕನಿದ್ದರೆ ಆತನ ಆರಾಮಕ್ಕಾಗಿ ಹಲವಾರು ಸೌಲಭ್ಯಗಳನ್ನು ಅಳವಡಿಸಬೇಕಾಗುತ್ತದೆ. ವಾತಾನುಕೂಲ, ಗುರುತ್ವಾಕರ್ಷಣ ಶಕ್ತಿಯ ವಿರುದ್ಧ ವರ್ತಿಸುವ ಸೂಟ್ (Anti-G suit), ಯಾವುದೇ ಎತ್ತರ ಹಾಗೂ ಉಷ್ಣತೆಯಲ್ಲಿ ಕೆಲಸ ಮಾಡುವ ಚಾಲಕನಿಂದ ಉಪಯೋಗಿಸಲ್ಪಡುವ ಉಪಕರಣಗಳು ಹಲವು ಉದಾಹರಣೆಗಳು. ಚಾಲಕರಹಿತ ವಿಮಾನಗಳಲ್ಲಿ ಇವುಗಳ ಅವಶ್ಯಕತೆ ಇಲ್ಲದ್ದರಿಂದ ತಯಾರಿ ವೆಚ್ಚವು ಬಹಳವಾಗಿ ಕಡಿಮೆಯಾಗುತ್ತದೆ.

ಸಮರ ವಿಮಾನಗಳ (Fighter Aircraft) ದರ್ಜೆಗೆ ಯುಏವಿ[ಬದಲಾಯಿಸಿ]

ಗ್ಲೋಬಲ್ ಹಾಕ್ ಮತ್ತು ಪ್ರಿಡೇಟರ್

ಯುಏವಿ ಕ್ಷೇತ್ರದಲ್ಲಿ ಮುಂದಿನ ತಾರ್ಕಿಕ ಹೆಜ್ಜೆಯೆಂದರೆ ಯುಏವಿಗಳಲ್ಲಿ ಆಯುಧಗಳ ಅಳವಡಿಕೆ. ಇದರ ಮುಂಚೂಣಿಯಲ್ಲಿರುವುದು ಅಮೆರಿಕ ದೇಶ. ಅಮೆರಿಕದ ಯುಏವಿಗಳಲ್ಲಿ ಒಂದಾದ ’ಪ್ರಿಡೇಟರ್’ (MQ-1_Predator) ಎಂಬ ವಿಮಾನದಲ್ಲಿ ಹೆಲ್ ಫೈರ್ (Hellfire) ಎಂಬ ಆಕಾಶದಿಂದ ನೆಲಕ್ಕೆ ಹೊಡೆಯುವ (Air-to-Ground) ಕ್ಷಿಪಣಿಗಳನ್ನು ಅಳವಡಿಸಲಾಯಿತು. ೯/೧೧ರ ನಂತರ ಅಲ್-ಕಾಯಿದ ವಿರುದ್ಧ ಅಮೆರಿಕ ಸಾರಿರುವ ಯುದ್ಧದಲ್ಲಿ ಈ ವಿಮಾನಗಳನ್ನು ಅಫ್ಘಾನಿಸ್ತಾನ ಹಾಗೂ ಇರಾಕ್ಗಳಲ್ಲಿ ಬಹುವಾಗಿ ಉಪಯೋಗಿಸಲಾಗುತ್ತಿದೆ. ಯೆಮೆನ್ ದೇಶದಲ್ಲಿ, ಜೀಪ್ ಒಂದರಲ್ಲಿ ಪ್ರಯಾಣಿಸುತ್ತಿದ್ದ ಅಲ್-ಕಾಯಿದದ ಮುಖಂಡನೊಬ್ಬ ಹಾಗೂ ಆತನ ಅನುಚರರನ್ನು ಬಹು ಎತ್ತರದಲ್ಲಿ ಹಾರುತ್ತಿದ್ದ ಪ್ರಿಡೇಟರ್ ಯುಏವಿಯೊಂದರಿಂದ ಬಿಟ್ಟ ಹೆಲ್ ಫೈರ್ ಕ್ಷಿಪಣಿಯೊಂದು ನಿಖರವಾಗಿ ಗುರಿ ತಲುಪಿ ಕಬಳಿಸಿದ್ದು ೪ ವರ್ಷಗಳ ಹಿಂದೆ ಪ್ರಚಾರ ಪಡೆದಿತ್ತು. ಈ ವಿಮಾನವನ್ನು ನಿಯಂತ್ರಿಸುತ್ತಿದ್ದವರು ನೂರಾರು ಮೈಲಿಗಳ ಆಚೆ ಭೂ ನಿಯಂತ್ರಣ ಕೊಠಡಿಯಲ್ಲಿ ಅಂಗಿ ತೋಳುಗಳನ್ನು ಮಡಚಿ ಕುಳಿತಿರುವ ಅಮೆರಿಕದ ಗುಪ್ತಚರ ಸಂಸ್ಥೆಯಾದ ಸಿ.ಐ.ಎ.ಯ ಯುಏವಿ ಚಾಲಕರು. ಇದರಿಂದ ಯುಏವಿಗಳನ್ನು ಸೈನ್ಯದ ಬಲವರ್ಧಕ (Force Multiplier) ಸ್ಥಾನದಿಂದ ಸಮರ ವಿಮಾನಗಳ ಸ್ಥಾನಕ್ಕೆ ಏರಿಸಿದಂತಾಯಿತು.

ಸ್ವಯಂ ಚಾಲನೆ (Autonomous Flight) ಮತ್ತು ಅದರ ಪರಿಮಿತಿ[ಬದಲಾಯಿಸಿ]

ಆರಂಭದಲ್ಲಿ ಯುಏವಿಗಳನ್ನು “ಡ್ರೋನ್”ಗಳೆಂದು (Drone) ಕರೆಯಲಾಗುತ್ತಿತ್ತು. ಈ ವಿಮಾನಗಳ ವ್ಯವಸ್ಥೆ ಹೆಚ್ಚೇನೂ ಸಂಕೀರ್ಣವಾಗಿರದೆ ಅವು ಆಕಾಶದಲ್ಲಿ ಹಾರಾಡುತ್ತಿದ್ದಷ್ಟು ಕಾಲ ರೇಡಿಯೋ ಮೂಲಕ ಮಾನವ ಚಾಲಕನ (ಆಪರೇಟರ್) ನಿಯಂತ್ರಣದಲ್ಲಿರುತ್ತಿದ್ದವು. ತಾಂತ್ರಿಕತೆ ಮುಂದುವರಿದಂತೆ, ಹೆಚ್ಚು ಶಕ್ತಿಶಾಲಿಯಾದ ಕಂಪ್ಯೂಟರ್ ಹಾಗೂ ಆ ಕಂಪ್ಯೂಟರಿನೊಂದಿಗೆ ಹೊಂದಾಣಿಸಿದ (Integrated) ಸಂವೇದಕಗಳನ್ನು (Sensors) ಅಳವಡಿಸುವುದರಿಂದ ಯುಏವಿಗಳು ಮಾನವ ಚಾಲಕನ ನಿಯಂತ್ರಣವಿಲ್ಲದೆ ಹಾರಾಡಲು ಸಾಧ್ಯವಾಯಿತು. ಯುಏವಿಯಲ್ಲಿ ಅಳವಡಿಸಲಾದ ಕಂಪ್ಯೂಟರ್ ಮಾನವ ಚಾಲಕನ ಕೆಲವು ಸರಳವಾದ ಕಾರ್ಯಗಳನ್ನು ನಿರ್ವಹಿಸತೊಡಗಿತು. ವಿಮಾನದ ಹತೋಟಿ (Flight Control), ವೇಗ (Airspeed), ಹಾರಾಟದ ಎತ್ತರ (Altitude), ದಿಕ್ಕು (Heading) ನಿಯಂತ್ರಣ ಇತ್ಯಾದಿಗಳು ಈ ಕಾರ್ಯಗಳು. ಅಲ್ಲದೆ ಮೊದಲೇ ಸಿದ್ಧಪಡಿಸಿದ ನಿರ್ದಿಷ್ಟ ಕಾರ್ಯಕ್ರಮದಂತೆ (Preplanned Programme) ಸ್ಥಳದಿಂದ ಸ್ಥಳಕ್ಕೆ ಯುಏವಿಗಳು ಹಾರಾಡಬಲ್ಲವಾದವು. ಹಲವಾರು ಸ್ಥಳಗಳ (Waypoints) ಅಕ್ಷಾಂಶ-ರೇಖಾಂಶಗಳನ್ನು (co-ordinates) ಪಟ್ಟಿ ಮಾಡಿ, ಕಾರ್ಯಕ್ರಮವೊಂದನ್ನು ರೂಪಿಸಿ ಆ ಕಾರ್ಯಕ್ರಮವನ್ನು ಯುಏವಿಯ ಕಂಪ್ಯೂಟರಲ್ಲಿ ಅಳವಡಿಸಿದರೆ, ಕಂಪ್ಯೂಟರ್ ಯುಏವಿಯನ್ನು ಪಟ್ಟಿಯ ಪ್ರಕಾರ ಸ್ಥಳದಿಂದ ಸ್ಥಳಕ್ಕೆ ಹಾರಾಡಲು ನಿರ್ದೇಶಿಸುತ್ತದೆ. ಕಂಪ್ಯೂಟರ್ ತಾನು ಪ್ರಸ್ತುತವಾಗಿ ಇರುವ ಸ್ಥಳದ ಅಕ್ಷಾಂಶ-ರೇಖಾಂಶವನ್ನು ಅರಿಯಲು ಜಿಪಿಎಸ್ಅನ್ನು (Global Positioning Satellite System) ಉಪಯೋಗಿಸುತ್ತದೆ. ಸ್ವಯಂಚಾಲನೆಯ ಪರಿಮಿತಿ ನಿರಂತರವಾಗಿ ವಿಸ್ತರಿಸುತ್ತಿದೆ. ಸ್ವಯಂ ನಿಯಂತ್ರಣದ (Autonomy) ಮುಖ್ಯ ಉದ್ದೇಶವೆಂದರೆ ಮಾನವನ ನಿಯಂತ್ರಣವಿಲ್ಲದೆ ತೀರ್ಮಾನಗಳನ್ನು ತೆಗೆದುಕೊಳ್ಳುವುದು. ಯುಏವಿ ಕ್ಷೇತ್ರದಲ್ಲಿ ಸ್ವಯಂ ನಿಯಂತ್ರಣದ ಸೈನಿಕ ಗುರಿಯೆಂದರೆ ಒಂದು ಸಂಪೂರ್ಣ ಸಮರ ವಿಮಾನದಲ್ಲಿ ಚಾಲಕನ ಬದಲು ಕಂಪ್ಯೂಟರ್ ನಿಯಂತ್ರಣದ ಬಳಕೆ. ಅಮೆರಿಕ ಹಾಗೂ ಐರೋಪ್ಯ ದೇಶಗಳು ಈ ದಿಕ್ಕಿನತ್ತ ಈಗಾಗಲೇ ಧಾಪುಗಾಲಿಕ್ಕಿವೆ. ಮಾನವರಹಿತ ಸಮರ ವಿಮಾನವು ಅಭಿವೃದ್ಧಿಯ ಹಂತದಲ್ಲಿದೆ. ಇದನ್ನು ಯುಕ್ಯಾವ್ (Unmanned Combat Aerial Vehicle - UCAV) ಎಂದು ಕರೆಯಲಾಗಿದೆ. ಆದರೆ ಇದಿನ್ನೂ ಅಭಿವೃದ್ಧಿಯ ಹಂತದಲ್ಲಿರುವುದರಿಂದ ಇದರ ಹಾರಾಟವಿನ್ನೂ ಮಾನವ ನಿಯಂತ್ರಣದಲ್ಲಿದೆ ಎಂದು ನಂಬಲಾಗಿದೆ. ಇಂತಹ ಮಾಹಿತಿಗಳೆಲ್ಲವೂ ’ಅತಿ ರಹಸ್ಯ’ವೆಂಬ ಪರದೆಯ ಹಿಂದೆ ಅಡಗಿವೆ.

ಯುಏವಿಗಳ ಹಾರಾಟ ಕಾಲ[ಬದಲಾಯಿಸಿ]

ಯುಏವಿಗಳ ಹಾರಾಟವು ಮಾನವ ಚಾಲಕನ ದೈಹಿಕ ಮಿತಿಗಳಿಂದ ಬಾಧಿತವಾಗಿಲ್ಲದುದರಿಂದ ಇವುಗಳ ಹಾರಾಟ ಕಾಲದ ಮಿತಿಯು ಮಾನವ ಚಾಲಿತ ವಿಮಾನಗಳಿಗಿಂತ ಬಹಳ ಹೆಚ್ಚು. ಯುಏವಿಯನ್ನು ನಿಯಂತ್ರಿಸುವ ಚಾಲಕರು ಭೂ ನಿಯಂತ್ರಣ ಕೊಠಡಿಯಲ್ಲಿರುವುದರಿಂದ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬಹುದಾಗಿದೆ. ನೆಲದ ಮೇಲೆ ಚಾಲಕರಿಗೆ ವಿಮಾನದಲ್ಲಿ ದೊರಕುವಿದಕ್ಕಿಂತ ತುಂಬಾ ಆರಾಮದಾಯಕ ವಾತಾವರಣವನ್ನು ಒದಗಿಸಬಹುದು. ಇದರಿಂದ ಚಾಲಕರು ನಿಜ ಹಾರಾಟದ ದೈಹಿಕ ಹಾಗೂ ಮಾನಸಿಕ ಬಳಲುವಿಕೆಯಿಂದ ಹೊರತಾಗಿರಬಹುದು. ಯುಏವಿಗಳಲ್ಲಿ ಅಳವಡಿಸುವ ಇಂಜಿನ್ಗಳು ಇಂಧನ ಸಮರ್ಥವಾಗಿರುವುದರಿಂದ (fuel efficient) ವಿಮಾನವು ಸ್ವಲ್ಪವೇ ಇಂಧನದೊಂದಿಗೆ ಬಹಳ ಹೊತ್ತು ಹಾರಾಟ ನಡೆಸಬಹುದಾಗಿದೆ. ಹಿಲಿಯೋಸ್ ಎಂಬ ಮಾದರಿ (Helios Prototype) ಯುಏವಿಯೊಂದು ಸೌರಶಕ್ತಿಯಿಂದ ಶಕ್ತಿ ಪಡೆದು ಅನಿರ್ದಿಷ್ಟ ಕಾಲದವರೆಗೆ ಹಾರಾಟ ನಡೆಸಬಲ್ಲುದಾಗಿತ್ತು. ದುರಾದೃಷ್ಟಕರವಾಗಿ ತಾಂತ್ರಿಕ ದೋಷಗಳಿಂದಾಗಿ ಇದು ನೆಲಕ್ಕಪ್ಪಳಿಸಿ ನಾಶವಾಯಿತು. ಸದ್ಯದ ಯುಏವಿಗಳು ಗಾಳಿಯಲ್ಲೇ ಇಂಧನ ತುಂಬಿಸಿಕೊಳ್ಳಲು ಅಸಮರ್ಥವಾಗಿದ್ದು (Air-to-air refueling) ಈ ದಿಶೆಯಲ್ಲಿ ಪ್ರಯೋಗಗಳು ನಡೆಯುತ್ತಿವೆ. ಹಲವು ಯುಏವಿಗಳ ಹಾರಾಟ ಕಾಲಗಳನ್ನು ಕೆಳಗೆ ಕೊಡಲಾಗಿದೆ:

  • ಬೋಯಿಂಗ್ ಕಾಂಡೋರ್ (Boeing_Condor) – ೫೮ ಘಂಟೆಗಳು ೧೧ ನಿಮಿಷಗಳು
  • ಐಏಐ (ಇಸ್ರೇಲ್ ಏರ್ ಕ್ರಾಫ್ಟ್ ಇಂಡಸ್ಟ್ರೀಸ್) ಹೆರೋನ್ (IAI Heron) – ೫೨ ಘಂಟೆಗಳು
  • ಏಸಿ ಪ್ರೊಪಲ್ಶನ್ ಸೋಲಾರ್ ಇಲೆಕ್ಟ್ರಿಕ್ – ೪೮ ಘಂಟೆಗಳು, ೧೧ ನಿಮಿಷಗಳು
  • ಎಮ್ ಕ್ಯೂ-೧ ಪ್ರಿಡೇಟರ್ (MQ-1_Predator) – ೪೦ ಘಂಟೆಗಳು, ೦೫ ನಿಮಿಷಗಳು
  • ನ್ಯಾಟ್-೭೫೦ (GNAT-750) – ೪೦ ಘಂಟೆಗಳು
  • ಏರೋಸೋಂಡೆ (Insitu_Aerosonde) – ೩೮ ಘಂಟೆಗಳು ೧೮ ನಿಮಿಷಗಳು
  • ಐ-ನ್ಯಾಟ್ I-GNAT – ೩೮ ಘಂಟೆಗಳು, ಇನ್ನೂ ೧೦ ಘಂಟೆಗಳು ಉಳಿದಿರುವಾಗ ಕೆಳಕ್ಕೆ ಇಳಿಸಲಾಯಿತು
  • ಆರ್ ಕ್ಯೂ-೪ ಗ್ಲೋಬಲ್ ಹಾಕ್ (RQ-4_Global_Hawk) – ೩೦ ಘಂಟೆಗಳು ೨೪ ನಿಮಿಷಗಳು

ಯುಏವಿ ವಿಧಗಳು[ಬದಲಾಯಿಸಿ]

ಯುಏವಿಗಳನ್ನು ಅವುಗಳ ಕಾರ್ಯಕ್ಕನುಸಾರವಾಗಿ ಕೆಳಕೊಟ್ಟಂತೆ ವರ್ಗೀಕರಿಸಬಹುದಾದರೂ ಇತ್ತೀಚೆಗೆ ಬಹುಪಾತ್ರೀಯ (multi-role) ಯುಏವಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಅಂತರಾಷ್ಟ್ರೀಯ ಸೈನಿಕ ಹಾಗೂ ನಾಗರಿಕ ಮಾರುಕಟ್ಟೆಗಳಲ್ಲಿ ಲಭ್ಯವಾಗುತ್ತಿವೆ:

  • ಗುರಿ ಅಭ್ಯಾಸದ ಯುಏವಿಗಳು – ಸಮರ ವಿಮಾನಗಳ ಹಾಗೂ ನೆಲದಿಂದ ಹೊಡೆಯಲಾಗುವ ತುಪಾಕಿಗಳ ಗುರಿ ಅಭ್ಯಾಸಕ್ಕಾಗಿ ಶತ್ರು ವಿಮಾನಗಳನ್ನು ಅನುಕರಿಸುವ ಯುಏವಿಗಳು.
  • ಗುಪ್ತಚರ ಕಾರ್ಯಗಳ ಯುಏವಿಗಳು – ರಣರಂಗದ ಮಾಹಿತಿ ಒದಗಿಸಲು (ವಿಡಿಯೊ), ಶತ್ರುವಿನ ರೇಡಿಯೊ ಸಂಭಾಷಣೆಗಳನ್ನು ಕದ್ದಾಲಿಸಲು (Communication Intelligence) ಹಾಗೂ ಶತ್ರು ರಾಡಾರ್ಗಳನ್ನು ನಿಷ್ಕ್ರಿಯಗೊಳಿಸಲು (Radar Jamming) ಬಳಸಲಾಗುವ ಯುಏವಿಗಳು.
  • ಸಮರ ಯುಏವಿಗಳು – ಮಾನವ ಜೀವಕ್ಕೆ ಅತಿ ಅಪಾಯವಿರುವ ಸಂದರ್ಭಗಳಲ್ಲಿ ಆಕ್ರಮಣಕ್ಕಾಗಿ ಬಳಸಲಾಗುವ ಯುಏವಿಗಳು (ಯುಕ್ಯಾವ್ ನೋಡಿ)
  • ಪ್ರಯೋಗ ಮತ್ತು ಅಭಿವೃದ್ಧಿ ಯುಏವಿಗಳು – ಯುಏವಿ ಕ್ಷೇತ್ರದಲ್ಲಿ ನಿರಂತರ ಬೆಳವಣಿಗೆಗಾಗಿ ಹಾಗೂ ವಿವಿಧ ಬಳಕೆ ಮತ್ತು ಉಪಯೋಗಗಳ ಅಭಿವೃದ್ಧಿಗಾಗಿ ಬಳಸುವ ಯುಏವಿಗಳು.
  • ನಾಗರಿಕ ಮತ್ತು ವ್ಯಾಪಾರೀ ಯುಏವಿಗಳು – ನಾಗರಿಕ ಹಾಗೂ ವ್ಯಾಪಾರೀ ಉದ್ಧೇಶಗಳಿಗಾಗಿ ಬಳಸಲ್ಪಡುವ ಯುಏವಿಗಳು.

ಯುಏವಿಗಳನ್ನು ಅವುಗಳ ದೂರ ಮಿತಿ/ಎತ್ತರ ಮಿತಿಗಳಂತೆ ಕೂಡ ವರ್ಗೀಕರಿಸಬಹುದಾಗಿದೆ:

  • ಸಣ್ಣದಾದ, ಕೈಯಿಂದ ಹಾರಿಸಲಾಗುವ ೨೦೦೦ ಅಡಿಗಳಷ್ಟು ಎತ್ತರಕ್ಕೇರಬಲ್ಲ, ೨ ಕಿ. ಮೀ. (ತ್ರಿಜ್ಯ) ದೂರ ಹಾರಬಲ್ಲ ಯುಏವಿಗಳು.
    ಸಣ್ಣ, ಕೈಯಿಂದ ಹಾರಿಸಲಾಗುವ ಯುಏವಿ
  • ೫೦೦೦ ಅಡಿಗಳಷ್ಟು ಎತ್ತರಕ್ಕೇರಬಲ್ಲ ೧೦ ಕಿ. ಮೀ (ತ್ರಿಜ್ಯ) ದೂರ ಹಾರಬಲ್ಲ ಯುಏವಿಗಳು.
  • ನ್ಯಾಟೋ ವಿಧದ, ೧೦,೦೦೦ ಅಡಿಗಳಷ್ಟು ಎತ್ತರ ಹಾಗೂ ೫೦ ಕಿ.ಮೀ (ತ್ರಿಜ್ಯ) ದೂರ ಹಾರಬಲ್ಲ ಯುಏವಿಗಳು.
  • ಮಧ್ಯಮ ಎತ್ತರ, ಅತಿ ಹೆಚ್ಚು ಹಾರಾಟ ಕಾಲದ (MALE – medium altitude, long endurance) ಯುಏವಿಗಳು – ೩೦,೦೦೦ ಅಡಿಗಳಷ್ಟು ಎತ್ತರ ಹಾಗೂ ೨೦೦ ಕಿ.ಮೀ (ತ್ರಿಜ್ಯ) ದೂರ ಹಾರಬಲ್ಲವು.
  • ಹೆಚ್ಚು ಎತ್ತರ, ಅತಿ ಹೆಚ್ಚು ಹಾರಾಟ ಕಾಲದ (HALE – high altitude, long endurance) ಯುಏವಿಗಳು – ೩೦,೦೦೦ ಅಡಿಗಳಿಗೂ ಮೇಲ್ಪಟ್ಟು ಎತ್ತರ ಹಾಗೂ ಅನಿರ್ದಿಷ್ಟ ದೂರ ಮಿತಿ ಉಳ್ಳವು.

ಭಾರತೀಯ ಯುಏವಿಗಳು[ಬದಲಾಯಿಸಿ]

ಮುಖ್ಯ ಲೇಖನ: ಭಾರತೀಯ ಯುಏವಿಗಳು
ನಿಶಾಂತ್

ಭಾರತೀಯ ರಕ್ಷಣಾ ಪ್ರಯೋಗಾಲಾಯದ (Defence Research & Development Organisation, DRDO) ಮೂಲಕ ಪ್ರಾರಂಭಿಸಿತು. ಬೆಂಗಳೂರಿನಲ್ಲಿರುವ ವೈಮಾನಿಕ ಅಭಿವೃದ್ಧಿ ಕೇಂದ್ರವು (Aeronautical Development Establishment) ಗುಪ್ತಚರ ಕಾರ್ಯಗಳು, ಗುರಿ ಗುರುತಿಸುವಿಕೆ ಹಾಗೂ ಗಮನ (Target Identification & Observation), ನಷ್ಟ ಸಮೀಕ್ಷೆ (Damage Assessment) ಮುಂತಾದ ಕೆಲಸಗಳಿಗಾಗಿ ’ನಿಶಾಂತ್’ ಎಂಬ ದೂರ ನಿಯಂತ್ರಿತ ವಿಮಾನವನ್ನು (Remotely Piloted Vehicle) ಅಭಿವೃದ್ಧಿ ಪಡಿಸಿದೆ. ಸಕಾಲದಲ್ಲಿ ನಿಶಾಂತ್ ದೊರಕದ ಕಾರಣ ಭಾರತೀಯ ರಕ್ಷಣಾ ಪಡೆಗಳು ಸರ್ಚರ್ ಮಾರ್ಕ್-೨ ಹಾಗೂ ಹೆರಾನ್ Archived 2012-11-14 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ ಎರಡು ವಿಧದ ಯುಏವಿಗಳನ್ನು ಇಸ್ರೇಲಿನ ಐಎಐಯಿಂದ (ಇಸ್ರೇಲ್ ವಿಮಾನ ಕಾರ್ಖಾನೆ-Israel Aircraft Industries)

ಹೆರಾನ್ ಯುಏವಿ
ಲಕ್ಷ್ಯ

ಭಾರತವು ಗುರಿ ಅಭ್ಯಾಸಕ್ಕಾಗಿ ಲಕ್ಷ್ಯ ಎಂಬ ದೂರ ನಿಯಂತ್ರಿತ ವಿಮಾನವನ್ನು (Remotely Piloted Vehicle) ತಯಾರಿಸಿದೆ. ಇದನ್ನು ವಾಯು ಸೇನೆ ಹಾಗೂ ನೌಸೇನೆಗಳು ಗುರಿ ಅಭ್ಯಾಸಕ್ಕಾಗಿ ಬಳಸುತ್ತಿವೆ. ಇವಲ್ಲದೆ ಕಪೋತಕ ಎಂಬ ಸಣ್ಣ ಯುಏವಿಯೊಂದನ್ನು ಭಾರತ ಅಭಿವೃದ್ಧಿಗೊಳಿಸುತ್ತಿದೆ ಎಂದು ನಂಬಲಾಗಿದೆ.

ಯುಏವಿ ವ್ಯವಸ್ಥೆ: ಯುಏವಿಗಳು ಹೇಗೆ ಕೆಲಸ ಮಾಡುತ್ತವೆ?[ಬದಲಾಯಿಸಿ]

ಮುಖ್ಯ ಲೇಖನ: ಯುಏವಿ ವ್ಯವಸ್ಥೆ

ಒಂದು ಯುಏವಿ ವ್ಯವಸ್ಥೆಯಲ್ಲಿ ಮೂರು ಉಪವ್ಯವಸ್ಥೆಗಳಿರುತ್ತವೆ. ಇವೆಂದರೆ ಭೂ ನಿಯಂತ್ರಣ ಕೊಠಡಿ (Ground Control Station), ಯುಏವಿ ವಿಮಾನಗಳು ಮತ್ತು ಮಾಹಿತಿ ಕೊಂಡಿ (Datalink).

ಭೂ ನಿಯಂತ್ರಣ ಕೊಠಡಿ[ಬದಲಾಯಿಸಿ]

ಭೂ ನಿಯಂತ್ರಣ ಕೊಠಡಿ

ಭೂ ನಿಯಂತ್ರಣ ಕೊಠಡಿಯಲ್ಲಿ ಕುಳಿತು ಚಾಲಕರು ಯುಏವಿಯನ್ನು ಹಾರಬಿಡುತ್ತಾರೆ. ಇಲ್ಲಿ ಚಾಲಕರು ಬಳಸುವ ಎಲ್ಲಾ ಉಪಕರಣಗಳಿರುತ್ತವೆ. ಟಿವಿ ಪರದೆಯ ಮೇಲೆ ಯುಏವಿ ಬಿತ್ತರಿಸುವ ವಿಡಿಯೊ ಮೂಡಿ ಬರುತ್ತದೆ. ಇಲ್ಲಿಂದಲೇ ಯುಏವಿಯು ಮಾಡಬೇಕಾದ ಕಾರ್ಯಗಳ ಬಗ್ಗೆ ಚಾಲಕರು ಆಜ್ಞೆಗಳನ್ನು ಕಳುಹಿಸುತ್ತಾರೆ.

ಮಾಹಿತಿ ಕೊಂಡಿ (Datalink)[ಬದಲಾಯಿಸಿ]

ಭೂ ಮಾಹಿತಿ ಕೊಂಡಿ

ಭೂ ನಿಯಂತ್ರಣ ಕೊಠಡಿಯಿಂದ ಚಾಲಕರು ಕಳುಹಿಸುವ ಆಜ್ಞೆಗಳನ್ನು ವಿದ್ಯುದಾಯಸ್ಕಾಂತೀಯ ಅಲೆಗಳ (Electromagnetic/radio waves) ರೂಪದಲ್ಲಿ ಮಾಹಿತಿ ಕೊಂಡಿಯು ಯುಏವಿ ವಿಮಾನದತ್ತ ಬಿತ್ತರಿಸುತ್ತದೆ ಹಾಗೂ ಯುಏವಿಯು ಬಿತ್ತರಿಸುವ ಮಾಹಿತಿಯನ್ನು ಆಲಿಸಿ ಭೂ ನಿಯಂತ್ರಣ ಕೊಠಡಿಗೆ ಕಳುಹಿಸುತ್ತದೆ. ಈ ಬಿತ್ತರಿಕೆ ಟೆಲಿಮಿಟ್ರಿ ರೂಪದಲ್ಲಿರುತ್ತದೆ.

ಯುಏವಿ[ಬದಲಾಯಿಸಿ]

ಮಾಹಿತಿ ಕೊಂಡಿಯು ಬಿತ್ತರಿಸಿದ ಚಾಲಕರ ಆಜ್ಞೆಗಳನ್ನು ಯುಏವಿಯು ಆಲಿಸಿ ಅದರಂತೆ ನಡೆಯುತ್ತದೆ. ತನ್ನ ಧೋರಣೆಯನ್ನು [ಎತ್ತರ (Altitude), ವೇಗ (Airspeed), ದಿಕ್ಕು (Heading), ಸ್ಥಳ (Position), ಏರುವಿಕೆ (Climb), ಇಳಿಯುವಿಕೆ (Descent) ಇತ್ಯಾದಿ] ಅರಿಯಲು ಯುಏವಿಯು ತನ್ನಲ್ಲೇ ಅಳವಡಿಸಲಾದ ಸಂವೇದಕಗಳನ್ನು (Sensors) ಬಳಸುತ್ತದೆ ಹಾಗೂ ಈ ಮಾಹಿತಿಗಳನ್ನು ನೆಲಕ್ಕೆ ಬಿತ್ತರಿಸುತ್ತದೆ. ವಿಡಿಯೊಗಾಗಿ ಯುಏವಿಯಲ್ಲಿ ಶಕ್ತಿಶಾಲಿಯಾದ ಕ್ಯಾಮೆರವನ್ನು ಅಳವಡಿಸಲಾಗುತ್ತದೆ. ಈ ಕ್ಯಾಮೆರವು ಹಗಲು (Day camera) ಹಾಗೂ ರಾತ್ರಿಯಲ್ಲಿ (Infra-red) ಕೆಲಸ ಮಾಡಲು ಸಮರ್ಥವಾಗಿರುತ್ತದೆ. ಕ್ಯಾಮೆರ ಚಿತ್ರೀಕರಿಸುವ ವಿಡಿಯೊವನ್ನು ತಕ್ಷಣ ನಿಜ-ಸಮಯದಲ್ಲೇ ನೆಲಕ್ಕೆ ಬಿತ್ತರಿಸಲಾಗುತ್ತದೆ (ನೇರ ಪ್ರಸಾರದಂತೆ).

ಯುಏವಿಯ ಕ್ಯಾಮೆರ

ಯುಏವಿಗಳ ನಾಗರಿಕ ಬಳಕೆಗಳು[ಬದಲಾಯಿಸಿ]

ಯುಏವಿಗಳನ್ನು ಅನೇಕ ನಾಗರಿಕ ಬಳಕೆಗಳಿಗಾಗಿ ಉಪಯೋಗಿಸಲಾಗುತ್ತಿದೆ. ಇವುಗಳಲ್ಲಿ ಹಲವನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

  • ಪೋಲೀಸ್ ಉಪಯೋಗಗಳು: ನಕ್ಸಲ್ ಚಟುವಟಿಕೆಗಳನ್ನು ಗಮನಿಸಲು ಯುಏವಿಗಳನ್ನು ಉಪಯೋಗಿಸಲಾಗುತ್ತಿದೆ.
  • ಗಡಿ ಹಾಗೂ ಸಮುದ್ರ ತಟ ಪಹರೆ: ಅಕ್ರಮವಾಗಿ ಗಡಿ ದಾಟುವಿಕೆಯನ್ನು ಗುರುತಿಸಲು ಹಾಗೂ ಸಮುದ್ರ ತೀರಗಳಲ್ಲಿ ಕಳ್ಳಸಾಗಾಣಿಕೆಯನ್ನು ಪತ್ತೆ ಹಚ್ಚಲು ಯುಏವಿಗಳನ್ನು ಉಪಯೋಗಿಸಲಾಗುತ್ತಿದೆ.
  • ಹವಾಮಾನ ವರದಿ ಹಾಗೂ ಬಿರುಗಾಳಿ ಪತ್ತೆ: ಮಾನವ ಜೀವಕ್ಕೆ ಅಪಾಯವಿಲ್ಲದಿರುವುದರಿಂದ ಪುಟ್ಟ ಯುಏವಿಗಳನ್ನು ಬಳಸಲಾಗುತ್ತಿದೆ.
  • ಕೀಟನಾಶಕ ಸಿಂಪಡಿಕೆ: ಯುಏವಿಗಳ ಹಾರಾಟ ಕಾಲ ಬಹಳವಾಗಿರುವುದರಿಂದ ಇವು ನಿರಂತರವಾಗಿ ಕೀಟನಾಶಕ ಸಿಂಪಡಿಸಬಲ್ಲವು.
  • ಎಣ್ಣೆ ಕೊಳವೆ ಸಾಲುಗಳ ಪರೀಕ್ಷಣೆ: ಮರುಭೂಮಿಗಳಲ್ಲಿ ಹಾಗೂ ಗುಡ್ಡ ಕಾಡುಗಳ ಮೂಲಕ ಸಾಗುವ ಪೆಟ್ರೋಲಿಯಂ ಕೊಳವೆಗಳ ಪರೀಕ್ಷಣೆ.
  • ದೂರ ಸಂಚಾರ: ಮೊಬೈಲ್ ದೂರವಾಣಿ ಮರುಪ್ರಸಾರ ಉಪಕರಣವನ್ನು ಯುಏವಿಯಲ್ಲಿ ಅಳವಡಿಸಿ ಮೊಬೈಲ್ ಗೋಪುರದ ಬದಲು ಬಳಕೆ ಪ್ರಾಯೋಗಿಕವಾಗಿ ನಡೆದಿದೆ.
  • ನೈಸರ್ಗಿಕ ವಿಪತ್ತುಗಳಿಂದಾದ ವಿನಾಶದ ಸಮೀಕ್ಷೆ: ನೆರೆ, ಭೂಕಂಪ, ಕಾಳ್ಗಿಚ್ಚು ಮುಂತಾದವುಗಳಿಂದಾದ ವಿನಾಶದ ಸಮೀಕ್ಷೆ ಹಾಗೂ ವರದಿ.
  • ಮೀನುಗಾರಿಕೆಗಾಗಿ ಯುಏವಿ: ಸಮುದ್ರಗಳಲ್ಲಿ ಮೀನಿನ ಗುಂಪುಗಳ ಚಲನವಲನವನ್ನು ಗಮನಿಸಲು ಯುಏವಿಗಳ ಬಳಕೆಯಾಗುತ್ತಿದೆ.

ಭವಿಷ್ಯದ ಯುಏವಿಗಳು[ಬದಲಾಯಿಸಿ]

ಯುಏವಿ ಕ್ಷೇತ್ರದಲ್ಲಿ ನಿರಂತರವಾಗಿ ಬೆಳವಣಿಗೆಗಳಾಗುತ್ತಿರುವುದರಿಂದ ಅನೇಕಾನೇಕ ಅದ್ಭುತ ವಿನ್ಯಾಸಗಳು ಹೊರಬರುತ್ತಿವೆ. ಅಭಿವೃದ್ಧಿಯನ್ನು ಬಳಕೆಗಳು ನಿರ್ದೇಶಿಸುವುದರಿಂದ ಯುಏವಿಗಳಿಗಾಗಿ ಹೊಸ ಬಳಕೆಗಳನ್ನು ಆಯೋಜಿಸಲಾಗುತ್ತಿದೆ. ಮಾನವ ಚಾಲಿತ ವಿಮಾನಗಳಿಗೆ ತೀರ ಕಷ್ಟಕರವಾದ ಅಥವಾ ಅಸಾಧ್ಯವಾದ ಕಾರ್ಯಗಳಿಗಾಗಿ ಯುಏವಿಗಳನ್ನು ಬಳಸಲು ಪ್ರಯೋಗಗಳು ನಡೆಯುತ್ತಿವೆ. ಭವಿಷ್ಯದಲ್ಲಿ ಬಳಸಲಾಗುವ ಹಲವು ಯುಏವಿಗಳ ಬಗ್ಗೆ ಕೆಳಗೆ ಕೊಡಲಾಗಿದೆ.

ಯುಕ್ಯಾವ್ (UCAV)[ಬದಲಾಯಿಸಿ]

ಈ ಮೊದಲೇ ತಿಳಿಸಿದಂತೆ ಯುಕ್ಯಾವ್ಗಳು ಚಾಲಕರಹಿತ ಸಮರ ವಿಮಾನಗಳು. ಇವುಗಳು ಅತ್ಯಾಧುನಿಕ ಆಯುಧಗಳನ್ನು (ಅಣ್ವಸ್ತ್ರಗಳು ಸೇರಿದಂತೆ) ಹೊಂದಿರುತ್ತವೆ ಮತ್ತು ಗರಿಷ್ಠಮಟ್ಟದ ಸ್ವಯಂಚಾಲನೆಯ ವಿಮಾನಗಳಾಗಿರುತ್ತವೆ. ಯುಕ್ಯಾವ್ ಹಾರಬೇಕಾದ ಹಾದಿ (Route) ಹಾಗೂ ಅದರ ಲಕ್ಷ್ಯಗಳ (Targets) ಬಗ್ಗೆ ಅದರ ಕಂಪ್ಯೂಟರಲ್ಲಿ ಕಾರ್ಯಕ್ರಮವನ್ನು ಅಳವಡಿಸಲಾಗುತ್ತದೆ. ಈ ವಿಮಾನವು ತಾನೇ ಲಕ್ಷ್ಯಗಳನ್ನು ಹುಡುಕಿ ನಾಶ ಮಾಡುತ್ತದೆ.

ಯುಕ್ಯಾವ್ ತಯಾರಿಕೆಯಲ್ಲಿ ಹಲವು ದೇಶಗಳು ತೊಡಗಿದ್ದಾವೆ. ಅಮೆರಿಕದ ಬೋಯಿಂಗ್ ಕಂಪೆನಿಯು ಜೆ-ಯುಸಿಏಎಸ್ ಎಕ್ಸ್-೪೫ ಎಂಬ ಯುಕ್ಯಾವ್ಅನ್ನು ಸಿದ್ಧಪಡಿಸುತ್ತಿದೆ.

ಅಮೆರಿಕದ ನೌಕಾಸೇನೆಯ ಯುಕ್ಯಾವ್

ಫ್ರಾನ್ಸ್ ದೇಶದ ದಸ್ಸಾಲ್ಟ್ ಕಂಪೆನಿಯು ಎನ್-ಯೂರೋನ್ ಎಂಬ ಯುಕ್ಯಾವ್ಅನ್ನು ತಯಾರಿಸುತ್ತಿದೆ.

ಯೂರೋಸ್ಟೆಲ್ತ್ ಯುಕ್ಯಾವ್

ಯುಏವಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಇಸ್ರೇಲ್ ದೇಶವು ಐಟಾನ್ ಎಂಬ ಯುಕ್ಯಾವ್ಅನ್ನು ಅಭಿವೃದ್ಧಿಗೊಳಿಸುತ್ತಿದೆ. ಈ ಯುಕ್ಯಾವ್ ೨೬ ಅಡಿಗಳಷ್ಟು ಅಗಲವಿದ್ದು (ರೆಕ್ಕೆತುದಿಯಿಂದ ರೆಕ್ಕೆತುದಿಗೆ) ೪ ಟನ್ ಭಾರವಿದೆಯೆಂದು ನಂಬಲಾಗಿದೆ. ಇದೊಂದು ಬಹು ಪಾತ್ರೀಯ (Multi-role) ಯುದ್ಧ ವಿಮಾನವಾಗಿದ್ದು ಶತ್ರುವಿನ ಬಾಂಬ್ ತಾಣಗಳನ್ನು ಹುಡುಕಿ ನಾಶಪಡಿಸಲು ಶಕ್ತವಾಗಿರುತ್ತದೆಂದು ನಂಬಲಾಗಿದೆ. ಜರ್ಮನಿ ಹಾಗೂ ಚೀನಾ ತಮ್ಮದೇ ಆದ ಯುಕ್ಯಾವ್ ಕಾರ್ಯಕ್ರಮಗಳನ್ನು ಹೊಂದಿವೆ.

ಸ್ಕೈ ಟೋಟ್ ಯುಏವಿ[ಬದಲಾಯಿಸಿ]

ಏಎಫ್ಆರ್ಎಲ್ ತಯಾರಿಸುತ್ತಿರುವ ಸ್ಕೈಟೋಟ್ ಎಂಬ ಯುಏವಿಯ ಎರಡು ವಿಧಗಳಿದ್ದು ಇವುಗಳನ್ನು ರಣರಂಗದಲ್ಲಿ ಸೈನಿಕರಿಗೆ ಸಾಮಾನು ಸರಬರಾಜು ಮಾಡುವುದಲ್ಲದೆ ತುರ್ತು ಪರಿಸ್ಥಿತಿಯಲ್ಲಿ ಸೈನಿಕರನ್ನು ಸ್ಥಳಾಂತರಿಸಲು ಕೂಡಾ ಬಳಸುವಂತೆ ವಿನ್ಯಾಸವನ್ನು ಮಾಡಲಾಗಿದೆ. ಸ್ಕೈಟೋಟ್ ನೇರವಾಗಿ ಮೇಲ್ಮುಖವಾಗಿ ಆಕಾಶಕ್ಕೇರುವಂತಿದ್ದು ಯಾವುದೇ ಓಡುದಾರಿ ಅಥವಾ ಕವಣೆಯ ಅವಶ್ಯವಿರುವುದಿಲ್ಲ.

ಸ್ಕೈ ಟೋಟ್ ಯುಏವಿ

ಸೆನ್ಸರ್ ಕ್ರಾಫ್ಟ್[ಬದಲಾಯಿಸಿ]

ಇದು ಕೂಡ ಏಎಫ್ಆರ್ಎಲ್ ತಯಾರಿಸುತ್ತಿರುವ ಯುಏವಿಯಾಗಿದ್ದು ಸಂಪೂರ್ಣವಾಗಿ ಹೊಂದಾಣಿಸಿದ (Integrated) ಸಂವೇದಕಗಳನ್ನು ಹೊಂದಿದ್ದು ರಣರಂಗದ ಮೇಲೆ ಹಾರಾಡುತ್ತಾ ತುಪಾಕಿಗಳಿಗೆ (Artillery) ಗುರಿಗಳ ಸ್ಥಳದ ನಿಖರವಾದ ನಿಜ-ಸಮಯದ ಮಾಹಿತಿ ನೀಡುವುದಲ್ಲದೆ ತನ್ನ ಸುತ್ತಲಿನ ಗಾಳಿಯನ್ನು ಅಣು, ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳ ಕುರುಹುಗಳಿಗಾಗಿ ವಿಶ್ಲೇಷಿಸಿ ಅದರ ಮಾಹಿತಿಯನ್ನು ಚಾಲಕನಿಗೆ ಕಳುಹಿಸುತ್ತದೆ. ಶತ್ರುವಿನ ರೇಡಿಯೊ ಸಂಭಾಷಣೆಗಳನ್ನು ಕದ್ದಾಲಿಸುವುದಲ್ಲದೆ ಶತ್ರುವಿನ ರಾಡಾರ್ಗಳನ್ನು ನಿಷ್ಕ್ರಿಯಗೊಳಿಸುತ್ತದೆ.

ಸೆನ್ಸರ್ ಕ್ರಾಫ್ಟ್

ಸಣ್ಣ ಹಾಗೂ ಅತಿ ಸಣ್ಣ (Mini & Micro) ಯುಏವಿಗಳು[ಬದಲಾಯಿಸಿ]

ಯುಏವಿ ಕ್ಷೇತ್ರವು ಸಣ್ಣ ಹಾಗೂ ಅತಿ ಸಣ್ಣ ಯುಏವಿಗಳ ತಯಾರಿಕೆಯಲ್ಲೂ ಮುಂದಡಿಯಿಡುತ್ತಿದ್ದು ಈ ಯುಏವಿಗಳು ಅನೇಕ ಸೈನಿಕ ಹಾಗೂ ನಾಗರಿಕ ಬಳಕೆಗಳನ್ನು ಕಾಣುತ್ತಿವೆ. ಅಮೆರಿಕವು ಇರಾಕ್ ಆಕ್ರಮಣಕ್ಕೆ ಸಿದ್ಧತೆ ನಡೆಸುತ್ತಿರುವಾಗ ಯುದ್ಧದ ಬಹುಪಾಲು ನಗರಗಳಲ್ಲಿ ನಡೆಯುವುದೆಂದು ಸದ್ದಾಂ ಹುಸೇನ್ ಹೇಳಿದ್ದರು. ಇಂತಹ ಸಂದರ್ಭಗಳಿಗಾಗಿ ಇಸ್ರೇಲ್ ದೇಶವು ತಯಾರಿಸಿರುವ ಸಣ್ಣ ಯುಏವಿಯೊಂದು ನಗರದ ಓಣಿಗಳಲ್ಲಿ ಹಾರುತ್ತಾ ಕಟ್ಟಡಗಳ ಹಿಂದೆ ಅಡಗಿಕೊಂಡಿರುವ ಶತ್ರುಗಳ ವಿಡಿಯೊ ಚಿತ್ರವನ್ನು ನೇರವಾಗಿ ಸೈನಿಕರು ಕೈಗಡಿಯಾರದಂತೆ ಕಟ್ಟಿಕೊಂಡಿರುವ ಪುಟ್ಟ ಪರದೆಗೆ ರವಾನಿಸುತ್ತದೆ. ಇದರಿಂದ ಸೈನಿಕರು ನಗರ ಯುದ್ಧಗಳಲ್ಲಿ ಕೂಡ ಶತ್ರುವಿನ ಚಲನವಲನಗಳನ್ನು ಗಮನಿಸುತ್ತಾ ಮುನ್ನುಗ್ಗಬಹುದು. ಈ ಯುಏವಿಯನ್ನು ಇಸ್ರೇಲ್ ದೇಶವು ಕೆಲ ವರ್ಷಗಳ ಹಿಂದೇ ತಯಾರಿಸಿತ್ತಾದರೂ ಈ ವಿಷಯವನ್ನು ಅತಿ ರಹಸ್ಯವಾಗಿರಿಸಿತ್ತು. ಅತಿ ಸಣ್ಣ ಯುಏವಿಗಳನ್ನು ಕೂಡ ಗುಪ್ತಚರ ಕಾರ್ಯಗಳಿಗಾಗಿ ತಯಾರಿಸುತ್ತಿದ್ದರೂ ಇವುಗಳಿಗಾಗಿ ನಾಗರಿಕ ಬಳಕೆಗಳನ್ನೂ ಕಲ್ಪಿಸಲಾಗಿದೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಯುಏವಿ&oldid=1099724" ಇಂದ ಪಡೆಯಲ್ಪಟ್ಟಿದೆ