ಬಾದಾಮಿ ವಿಧಾನಸಭಾ ಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಗಲಕೋಟೆ ಜಿಲ್ಲೆಯ ನಕ್ಷೆ. ಬಾದಾಮಿ ವಿಧಾನಸಭಾ ಕ್ಷೇತ್ರವನ್ನು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ.

ಬಾದಾಮಿ ವಿಧಾನಸಭಾ ಕ್ಷೇತ್ರ (ಕ್ಷೇತ್ರ ಸಂಖ್ಯೆ-೨೩) ಬಾಗಲಕೋಟೆ ಜಿಲ್ಲೆಗೆ ಸೇರಿರುವ ಕ್ಷೇತ್ರ. ಈ ಜಿಲ್ಲೆಯಲ್ಲಿ ಒಟ್ಟು ೭ ವಿಧಾನಸಭಾ ಕ್ಷೇತ್ರಗಳಿವೆ. ಬೀಳಗಿ, ಬಾಗಲಕೋಟೆ ಮತ್ತು ಹುನಗುಂದ ವಿಧಾನಸಭಾ ಕ್ಷೇತ್ರಗಳು ಬಾದಾಮಿ ಕ್ಷೇತ್ರದ ಮಗ್ಗುಲಲ್ಲಿ ಇರುವ ವಿಧಾನಸಭಾ ಕ್ಷೇತ್ರಗಳಾಗಿವೆ. ಇದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಭಾಗವಾಗಿಯೂ ಗುರುತಿಸಿಕೊಂಡಿದೆ.

ಕ್ಷೇತ್ರದ ವಿಶೇಷತೆ[ಬದಲಾಯಿಸಿ]

ಬಾದಾಮಿಯ ಮೂಲ ಹೆಸರು ವಾತಾಪಿ. ೬ ರಿಂದ ೮ ನೇ ಶತಮಾನದವರೆಗೆ ಬಾದಾಮಿ ಚಾಲುಕ್ಯರ ರಾಜಧಾನಿಯಾಗಿ ಗುರುತಿಸಿಕೊಂಡಿತ್ತು. ತಮಿಳುನಾಡಿನ ನಾಗಪಟ್ಟಣಮ್ ಜಿಲ್ಲೆಯ, ತಿರುಚೆನ್ಕಟ್ಟನ್‌ಕುಡಿಯಲ್ಲಿರುವ ಉತ್ತರಾಪಥೇಶ್ವರ ದೇವಾಲಯದಲ್ಲಿರುವ ಗಣಪತಿ ಮಂದಿರದಲ್ಲಿರುವ ಗಣಪತಿಯ ವಿಗ್ರಹದ ಮೂಲ ಬಾದಾಮಿ ಎಂಬುದು ಐತಿಹಾಸಿಕ ಸಂಗತಿಯಾಗಿದೆ. ಪಲ್ಲವರು ಮತ್ತು ಚಾಲುಕ್ಯರ ನಡುವೆ ನಡೆದ ಯುದ್ಧದಲ್ಲಿ ಪಲ್ಲವರು ಚಾಲುಕ್ಯರನ್ನು ಸೋಲಿಸಿ, ಅವರ ರಾಜಧಾನಿಯಾಗಿದ್ದ ಬಾದಾಮಿಯ ಮೇಲೆ ಆಕ್ರಮಣಗೈದ ಪಲ್ಲವರು ಅಲ್ಲಿನ ಗಣಪತಿ ಮಂದಿರದ ಗಣಪತಿಯ ವಿಗ್ರಹವನ್ನು ತಮಿಳುನಾಡಿಗೆ ಹೊತ್ತೊಯ್ದು ಅಲ್ಲಿ ಪ್ರತಿಷ್ಠಾಪಿಸಿದರು ಎನ್ನಲಾಗುತ್ತದೆ. ಖ್ಯಾತ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರು ರಚಿಸಿರುವ ವಾತಾಪಿ ಗಣಪತಿಮ್ ಭಜೇಹಮ್ ಕೃತಿಯೂ ಸಹ ಇದೇ ಗಣಪತಿಯ ಕುರಿತಾಗಿದೆ[೧].

ಚುನಾವಣಾ ಇತಿಹಾಸ[ಬದಲಾಯಿಸಿ]

ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಮೊದಲ ಸಲ ಚುನಾವಣೆಗಳು ನಡೆದದ್ದು ೧೯೫೧ ರಲ್ಲಿ. ಆಗ ಈ ಕ್ಷೇತ್ರ ಮುಂಬಯಿ - ಕರ್ನಾಟಕದ ಭಾಗವಾಗಿ ಗುರುತಿಸಿಕೊಂಡಿತ್ತು. ೧೯೫೧ ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವೆಂಕನಗೌಡ ಹನಮಂತಗೌಡ ಪಾಟೀಲ್ ಅವರು ಗೆದ್ದರು ಮತ್ತು ಬಾದಾಮಿಯ ಪ್ರಥಮ ಶಾಸಕರಾಗಿ ಆಯ್ಕೆಯಾಗಿದ್ದರು[೨]. ೧೯೫೭ ರಿಂದ ೨೦೧೮ ರವರೆಗೆ ನಡೆದ ಚುನಾವಣೆಗಳಲ್ಲಿ ಪ್ರತೀ ಎರಡು ಅವಧಿಯಲ್ಲಿ ಒಂದೇ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಬಾದಾಮಿ ಕ್ಷೇತ್ರದ ವಿಶೇಷತೆ. ಒಟ್ಟು ೧೦ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು (೧೯೫೭, ೧೯೬೨, ೧೯೭೨, ೧೯೭೮, ೧೯೮೩, ೧೯೯೪, ೧೯೯೯, ೨೦೧೩, ೨೦೧೮ ಮತ್ತು ೨೦೨೩) ೨ ಬಾರಿ ಬಿಜೆಪಿ ಮತ್ತು ತಲಾ ೧ ಬಾರಿ ಪಕ್ಷೇತರ, ಜನತಾಪಕ್ಷ ಮತ್ತು ಜನತಾದಳದ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿ ಬಿ ಚಿಮ್ಮನಕಟ್ಟಿ ಅವರು ಅತೀ ಹೆಚ್ಚು ಬಾರಿ ಅಂದರೆ ೬ ಬಾರಿ ಈ ಕ್ಷೇತ್ರದಲ್ಲಿ ಗೆದ್ದುಬಂದ ಶಾಸಕರು.

ಮತದಾರರು[ಬದಲಾಯಿಸಿ]

ಅಂಕಿ ಅಂಶಗಳು[ಬದಲಾಯಿಸಿ]

ಬಾದಾಮಿ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ ೨,೧೯,೭೮೬[೩]

  • ಪುರುಷ ಮತದಾರರು - ೧,೧೦,೯೫೨
  • ಮಹಿಳಾ ಮತದಾರರು - ೧,೦೮,೮೧೯
  • ತೃತೀಯ ಲಿಂಗಿಗಳು - ೧೫

ಜಾತಿವಾರು ಲೆಕ್ಕಾಚಾರ[ಬದಲಾಯಿಸಿ]

ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಕುರುಬ ಮತಗಳದ್ದೇ ಹೆಚ್ಚು ಪ್ರಾಬಲ್ಯವಿದೆ. ಕುರುಬ ಸಮುದಾಯದ ಶಾಸಕ ಬಿ ಬಿ ಚಿಮ್ಮನಕಟ್ಟಿ ಅವರು ೬ ಬಾರಿ ಆಯ್ಕೆಯಾಗಿರುವುದು ಇದಕ್ಕೆ ಸ್ಪಷ್ಟವಾದ ನಿದರ್ಶನ ಎನ್ನಬಹುದು. ಕುರುಬರಲ್ಲದೆ ಲಿಂಗಾಯಿತ ಮತಗಳೂ ಹೆಚ್ಚು ಪ್ರಾಬಲ್ಯ ಪಡೆದಿರುವ ಸಮುದಾಯವಾಗಿದೆ. ಆದರೆ ಹಾಲುಮತದ ಮತದಾರರು ನಿರ್ಣಾಯಕ ಎನಿಸುವ ಸಮುದಾಯವಾಗಿದೆ. ಇದಲ್ಲದೆ, ಎಸ್ ಸಿ, ಎಸ್ ಟಿ ಮತ್ತು ಮುಸ್ಲಿಮ್ ಸಮುದಾಯದ ಮತದಾರರು ಇಲ್ಲಿ ಇದ್ದಾರೆ[೪].

ಇವನ್ನೂ ಓದಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ವಾತಾಪಿ ಗಣಪತಿ ಭಜೆ". kannadaprabha.com. ಕನ್ನಡಪ್ರಭ. Retrieved 6 June 2023.
  2. "ಬಾದಾಮಿ ವಿಧಾನಸಭಾ ಕ್ಷೇತ್ರ". eedina.com. ಈ ದಿನ. Retrieved 6 June 2023.
  3. "23-Badami Information". kgis.ksrsac.in. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ. Retrieved 6 June 2023.
  4. "ಬಾದಾಮಿ ವಿಧಾನಸಭಾ ಕ್ಷೇತ್ರ". eedina.com. ಈ ದಿನ. Retrieved 6 June 2023.