ಹುನಗುಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹುನಗುಂದ
ಹುನಗುಂದ
city
Population
 (2001)
 • Total೧೮,೦೩೭

ಹುನಗುಂದ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಪೂರ್ವದಲ್ಲಿ ರಾಯಚೂರು ಜಿಲ್ಲೆ, ದಕ್ಷಿಣದಲ್ಲಿ ಇಳಕಲ್ ತಾಲ್ಲೂಕು, ಪಶ್ಚಿಮದಲ್ಲಿ ಬಾಗಲಕೋಟೆ ತಾಲ್ಲೂಕು, ಉತ್ತರದಲ್ಲಿ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕು ಸುತ್ತುವರಿದಿವೆ. ಕರಡಿ, ಹುನಗುಂದ, ಅಮೀನಗಡ ಮತ್ತು ಇಳಕಲ್ಲು ಹೋಬಳಿಗಳು. ಎರಡು ಪಟ್ಟಣಗಳು ಮತ್ತು 168 ಗ್ರಾಮಗಳು ಇವೆ. ತಾಲ್ಲೂಕಿನ ವಿಸ್ತೀರ್ಣ 1,352.9 ಚ.ಕಿಮೀ. ಜನಸಂಖ್ಯೆ 2,87,073.

೧೨ನೆಯ ಶತಮಾನದ ಸಮಾಜ ಸುಧಾರಕರಾದ ಬಸವಣ್ಣರವರ ಐಕ್ಯ ಸ್ಥಳವಾದ ಕೂಡಲ ಸಂಗಮ ಈ ತಾಲ್ಲೂಕಿನಲ್ಲಿದೆ.

ಗುಡೂರ ಕೂಡ ಮಹತ್ವದ ಸ್ತಳ.ಇಲ್ಲಿ ಮುಂಚೆ ಗಾಜಿನ ಬಳೆಗಳು ತಯಾರಾಗುತ್ತಾದರೂ ಈಗ ಛಮಕಾ ಸೀರೆಗಳೂ ತಯಾರಿಸಲ್ಪಡುವದ್ರಿಂದ ಅಲ್ಲದೇ ಇಲ್ಲಿ ಹುಲ್ಲಪ್ಪ ದೇವರ ದೇವಸ್ತಾನ ಇದ್ದು ಆಗಿ ಹುಣ್ಣಿಮೆ ಜಾತ್ರೆ ತುಂಬಾ ಪ್ರಸಿದ್ದಿ ಪಡೆದಿದೆ.

ಇಲಕಲ್ಲ ನಗರವು ಹುನಗುಂದ ತಾಲೂಕಿನ ಅತಿ ದೊಡ್ಡ ನಗರ.

ಇಲ್ಲಿ ತಯಾರಾಗುವ ರೇಶ್ಮೆಯ ಶೀರೆಗಳು ಜಗತ್ಪ್ರಸಿದ್ಧವಾಗಿವೆ. ಇತ್ತೀಚೆಗೆ ಗ್ರೆನೈಟ್ ವಹಿವಾಟಿನಿಂದಾಗಿ ನಗರವು ಬಹಳ ಪ್ರಸಿದ್ಧವಾಗಿದೆ. ಇಲ್ಲಿ ದೊರೆಯುವ ಗುಲಾಬಿ ಬಣ್ಣದ ಗ್ರೆನೈಟ್ ಶಿಲೆಗಳು ಅನೇಕ ದೇಶಗಳಿಗೆ ರಫ್ತಾಗುತ್ತದೆ.

ಕರದಂಟಿಗೆ ಹೆಸರುವಾಸಿಯಾದ ಅಮೀನಗಡ ಇರುವದು ಇದೆ ತಾಲೂಕಿನಲ್ಲಿ.

ಹುನಗುಂದ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಬಾಗಲಕೋಟೆ-ರಾಯಚೂರು ಮಾರ್ಗದಲ್ಲಿ ಬಾಗಲಕೋಟೆಯ ಆಗ್ನೇಯಕ್ಕೆ 45 ಕಿಮೀ ದೂರದಲ್ಲೂ ಬಿಜಾಪುರಕ್ಕೆ ಆಗ್ನೇಯದಲ್ಲಿ 135 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 69,991.

ಭೌಗೋಳಿಕ ಲಕ್ಷಣಗಳು[ಬದಲಾಯಿಸಿ]

ಈ ತಾಲ್ಲೂಕು ಹುನಗುಂದ ಮೈದಾನ ಪ್ರದೇಶಕ್ಕೆ ಸೇರಿದೆ. ಕೆಂಪು ಮಣ್ಣಿನ ವಿಶಾಲ ಬಯಲಿನ ಮಧ್ಯೆ ಬೋಳುಗುಡ್ಡಗಳಿವೆ. ಕೃಷ್ಣಾ, ಮಲಪ್ರಭಾ ತಾಲ್ಲೂಕಿನ ಮುಖ್ಯ ನದಿಗಳು. ಇವುಗಳಲ್ಲದೆ ಹುನುಗುಂದದ ಮುಖಾಂತರ ಹರಿಯುವ ಕಡ್ಲಪ್ಪನ ನದಿ ಮತ್ತು ತಾಲ್ಲೂಕಿನ ದಕ್ಷಿಣದಿಂದ ಉತ್ತರಕ್ಕೆ ಹರಿದು ಕೃಷ್ಣಾನದಿಯನ್ನು ಸೇರುವ ಇಳಕಲ್ಲು ನದಿ ಇವೆ. ಮಲಪ್ರಭಾ ನದಿ ತಾಲ್ಲೂಕಿನ ಪಶ್ಚಿಮ ಗಡಿಯಾಗಿ ಹರಿದು ಬಾದಾಮಿ ತಾಲ್ಲೂಕನ್ನು ಬೇರ್ಪಡಿಸಿ ಹೂವಿನ ಹಳ್ಳಿ ಬಳಿ ತಾಲ್ಲೂಕನ್ನು ಪ್ರವೇಶಿಸುವುದು. ತಾಲ್ಲೂಕಿನಲ್ಲಿ ಈಶಾನ್ಯಾಭಿಮುಖವಾಗಿ ಹರಿದು ಸಂಗಮದ ಹತ್ತಿರ ಕೃಷ್ಣಾ ನದಿಯನ್ನು ಕೂಡಿಕೊಳ್ಳುವುದು. ತಾಲ್ಲೂಕಿನ ಉತ್ತರದಲ್ಲಿ ಕೃಷ್ಣಾನದಿ ತಾಲ್ಲೂಕಿನ ಗಡಿಯಾಗಿ ಹರಿದು ಮುದ್ದೇಬಿಹಾಳ ತಾಲ್ಲೂಕನ್ನು ಬೇರ್ಪಡಿಸಿದೆ. ಸಾಮಾನ್ಯ ಕುರುಚಲು ಗಿಡಗಳ ಅರಣ್ಯಪ್ರದೇಶವಿದೆ.

ಉತ್ತಮ ಹವೆ ಇದೆ. ವಾರ್ಷಿಕ ಸರಾಸರಿ ಮಳೆ 643.81 ಮಿಮೀ.

ಕೃಷಿ ಮತ್ತು ಕೈಗಾರಿಕೆ[ಬದಲಾಯಿಸಿ]

ತಾಲ್ಲೂಕಿನಲ್ಲಿ ವ್ಯವಸಾಯಕ್ಕೆ ಸಹಾಯಕವಾಗಿ ಕೆಲವು ಬಾವಿಗಳಿವೆ. ಇಳಕಲ್ಲು, ಬೂದಿಹಾಳ, ಚಿಕ್ಕಮಗಿ, ಅಮೀನಗಡ ಮುಂತಾದ ಕಡೆ ಜಿನಗು ಕೆರೆಗಳ ಬೇಸಾಯವಿದೆ. ಚಿತ್ತವಾಡಗಿ ಕೆರೆ ಯೋಜನೆಯಿಂದ ಲಾಭಪಡೆಯುವ ತಾಲ್ಲೂಕುಗಳಲ್ಲಿ ಹುನಗುಂದವೂ ಒಂದು. ಜೋಳ, ಸಜ್ಜೆ, ಸೇಂಗಾ, ದ್ವಿದಳ ಧಾನ್ಯಗಳು, ಗೋದಿ, ಹತ್ತಿ, ಕಬ್ಬು ಮುಂತಾದುವನ್ನು ಬೆಳೆಯುತ್ತಾರೆ. ಪಶುಪಾಲನೆಯಿದ್ದು ಅವುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ನೆರವಾಗುವ ಪಶುವೈದ್ಯಾಲಯ ಗಳಿವೆ. ಮತ್ಸ್ಯೋದ್ಯಮ ಸಾಧಾರಣವಿದೆ. ಈ ತಾಲ್ಲೂಕಿನಲ್ಲಿ ಹತ್ತಿ ಸಂಸ್ಕರಣ ಕಾರ್ಖಾನೆಗಳಿವೆ. ಕೈಮಗ್ಗದ ಖಣಗಳಿಗೆ, ಸೀರೆಗಳಿಗೆ ಈ ತಾಲ್ಲೂಕು ಪ್ರಸಿದ್ಧ. ಮರಗೆಲಸ, ಬಿದಿರು ವಸ್ತುಗಳ ತಯಾರಿಕೆ ಮುಂತಾದ ಕೈಗಾರಿಕೆಗಳಿವೆ.

ಪ್ರೇಕ್ಷಣಿಯ ಸ್ಥಳಗಳು[ಬದಲಾಯಿಸಿ]

ಹುನಗುಂದಕ್ಕೆ ಪಶ್ಚಿಮದಲ್ಲಿ 26 ಕಿಮೀ ದೂರದಲ್ಲಿರುವ ಐಹೊಳೆ (ನೋಡಿ- ಐಹೊಳೆ) ಬಾದಾಮಿ ಚಾಳುಕ್ಯರ ಕಾಲದ ಸುಂದರ ದೇವಾಲಯ ಸಮೂಹಗಳಿರುವ ಪ್ರವಾಸಿ ಕೇಂದ್ರ. ಹುನಗುಂದಕ್ಕೆ ಆಗ್ನೇಯದಲ್ಲಿ 13 ಕಿಮೀ ದೂರದಲ್ಲಿರುವ ಇಳಕಲ್ಲು ಸೀರೆಗಳಿಗೆ ಪ್ರಸಿದ್ಧ. ಹುನಗುಂದದ ಈಶಾನ್ಯಕ್ಕೆ 24 ಕಿಮೀ ದೂರದಲ್ಲಿರುವ ಕರಡಿ ಗ್ರಾಮದಲ್ಲಿ ಕರಡಿಯ ಮುಖದಂತಿರುವ ನಂದಿ ದೇವಾಲಯವಿದೆ. ಈ ಕರಡಿಮುಖದ ನಂದಿ ದೇವಾಲಯದಿಂದಲೇ ಈ ಗ್ರಾಮಕ್ಕೆ ಕರಡಿ ಎಂಬ ಹೆಸರು ಬಂತೆಂದು ಹೇಳುವರು ಕರಂಡಪೂರ ಇದರ ಹಳೆಯ ಹೆಸರು ಮತ್ತು ಈ ಊರಿನಲ್ಲಿ ನೆಲಗುಡಿ (ಗುಹೆ) ಇದೆ ಅದರಲ್ಲಿ ಶ್ರೀ ಈಶ್ವರ ದೇವರು ನೆಲೆಸಿದ್ದಾನೆ, ಅದಲ್ಲದೆ ರಕ್ಕಸತಂಗಡಿ ಕದನದ ಸಮಯದಲ್ಲಿನ ಎಷ್ಟೋ ಗುರುತುಗಳು ಉಳಿದಿವೆ.ಹುನಗುಂದ ದಿಂದ ಈಶಾನ್ಯಕ್ಕೆ 30ಕಿಮೀ ದೂರದಲ್ಲಿರುವ ಹಾಗೂ ಬಾಗಲಕೋಟ ಜಿಲ್ಲೆಯ ಕೊನೆಯ ಗ್ರಾಮ ಕೋಡಿಹಾಳ‌ಲ್ಲಿ ಗ್ರಾಮದೇವಿ ನೆಲೆಸಿದಾಳ್ಳೆ 3ವರ್ಷಕ್ಕೆ ಒಂದು ಸಾರಿ ಜಾತ್ರೆ ಅತಿ ವಿಜೃಂಭಣೆಯಿಂದ ನಡೆಯುತ್ತದೆ ವಿಜಯನಗರದ ರಾಮರಾಯ 1565ರ ರಕ್ಕಸಗಿತಂಗಡಿಗಿ ಯುದ್ಧದಲ್ಲಿ ಇಲ್ಲಿ ಬೀಡುಬಿಟ್ಟಿದ್ದನೆಂದು ಪ್ರತೀತಿ. ಹುನಗುಂದದ ಆಗ್ನೇಯಕ್ಕೆ ಸು. 24 ಕಿಮೀ ದೂರದಲ್ಲಿರುವ ನಂದವಾಡಗಿ ಇಳಕಲ್ಲಿಗೆ ಈಶಾನ್ಯದಲ್ಲಿ 29 ಕಿಮೀ ದೂರದಲ್ಲಿದೆ. ಇದೊಂದು ಪುರಾತನ ಗ್ರಾಮ. ಹಿಂದೆ ನಂದರಾಜನ ರಾಜಧಾನಿಯಾಗಿತ್ತೆಂದು ಹೇಳುವರು. ಗ್ರಾಮದ ಒಂದು ಪ್ರವೇಶದ್ವಾರದ ಮುಂದೆ ಎತ್ತರವಾದ ಜಗಲಿಕಟ್ಟೆಯಿದ್ದು ಅಲ್ಲಿ ಒಂದು ಬೇವಿನ ಮರವೂ ವಿಷ್ಣುಚಕ್ರವುಳ್ಳ ಒಂದು ಕಲ್ಲೂ ಇದೆ. ಕೋಟೆಯೊಳಗೆ ದೊಡ್ಡ ಈಶ್ವರದೇವಾಲಯವಿದೆ. ಹುನಗುಂದಕ್ಕೆ ಉತ್ತರದಲ್ಲಿ 19 ಕಿಮೀ ದೂರದಲ್ಲಿರುವ ಸಂಗಮ ಒಂದು ಪವಿತ್ರ ಕ್ಷೇತ್ರ. ಇದು ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಕೂಡುವಲ್ಲಿದೆ.

ಹುನಗುಂದದಲ್ಲಿ ಪುರಾತನ ದೇವಾಲಯಗಳು ಮತ್ತು ಊರಿಗೆ ಹೊಂದಿರುವ ಚಿಕ್ಕಗುಡ್ಡದ ಮೇಲೆ ಜೈನಬಸದಿಯ ಅವಶೇಷಗಳು ಇವೆ. ರಾಮಲಿಂಗ ದೇವಾಲಯವು ಊರೊಳಗಿದ್ದು ಗರ್ಭಗುಡಿಯು ನೆಲದಡಿ ಇದೆ. ಚಾಳುಕ್ಯ ಶೈಲಿಯ ಸ್ತಂಭಗಳು ಈ ಗುಡಿಯ ವೈಶಿಷ್ಟ್ಯ. ಎರಡು ಶಿಲಾಶಾಸನಗಳೂ ಇಲ್ಲಿವೆ. ಇಲ್ಲಿನ ಒಂದು ಪ್ರಾಥಮಿಕ ಶಾಲೆಯ ಅಡಿಯಲ್ಲಿ ಕಲ್ಲಿನ ಸ್ತಂಭಗಳ ಗುಹೆ ಇದೆ. ಮಲ್ಲಿಕಾರ್ಜುನ, ಮುದಮಾರುತಿ, ಸಂಗಮೇಶ್ವರ ದೇವಾಲಯಗಳು ಇತ್ತೀಚಿನವು. ಪ್ರತಿವರ್ಷ ಪಟ್ಟಣದಲ್ಲಿ ನಡೆಯುವ ಸಂಗಮೇಶ್ವರ ಜಾತ್ರೆ ಪ್ರಸಿದ್ಧ. ಹಳೆಯ ಕಾಲದ ಕೋಟೆಯ ಎರಡು ಅಗಸೀಬಾಗಿಲುಗಳುಂಟು. ಇಲ್ಲಿನ ಗುಡ್ಡದ ಮೇಲೆ ಹಳದಿ ಮಣ್ಣು ಸಿಕ್ಕುವುದರಿಂದ ಇದಕ್ಕೆ ಹೊನ್ನಕುಂಡ, ಹೊನ್ನಗುಂಡ ಎಂದು ಹಿಂದೆ ಕರೆಯತ್ತಿದ್ದರೆಂದು ತಿಳಿದುಬರುವುದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು[ಬದಲಾಯಿಸಿ]

ಪತ್ರಿಕೆ ಗಳು[ಬದಲಾಯಿಸಿ]

  • ಪರಿಸರ ವಾಣಿ
"https://kn.wikipedia.org/w/index.php?title=ಹುನಗುಂದ&oldid=1205740" ಇಂದ ಪಡೆಯಲ್ಪಟ್ಟಿದೆ