ಐ. ಕೆ. ಗುಜ್ರಾಲ್
ಇಂದ್ರಕುಮಾರ ಗುಜ್ರಾಲರವರು ಭಾರತದ ಹನ್ನೆರಡನೆಯ ಪ್ರಧಾನಿಯಾಗಿ ಎಪ್ರಿಲ್ ೧೯೯೭ರಿಂದ ಮಾರ್ ೧೯೯೮ರವರೆಗೆ ಸೇವೆಸಲ್ಲಿಸಿದ ಒಬ್ಬ ರಾಜಕಾರಣಿ. ಹೆಚ್.ಡಿ.ದೇವೇಗೌಡರನಂತರ ರಾಜ್ಯಸಭೆಯಿಂದ ನೇಮಕಗೊಂಡ ಎರಡನೇ ಪ್ರಧಾನಿಯಾಗಿದ್ದಾರೆ.
ಪರಿವಿಡಿ |
ರಾಜಕೀಯ ಪೂರ್ವ ಜೀವನ [ಬದಲಾಯಿಸಿ]
ಗುಜ್ರಾಲರವರು ಡಿಸೆಂಬರ್ ೪, ೧೯೧೯ರಂದು ಝೇಲಂನಲ್ಲಿ, ಅವತಾರ್ ನಾರಾಯಣ್ ಹಾಗೂ ಪುಷ್ಪಾ ಗುಜ್ರಾಲರಿಗೆ ಜನಿಸಿದರು. ಅವರ ಪ್ರಮಖ ವಿದ್ಯಾಭ್ಯಾಸವು ಲಾಹೋರ್‍ನಲ್ಲಿ ನಡೆಯಿತು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಅವರು ೧೯೪೨ರ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಜೈಲುವಾಸವನ್ನು ಕಂಡರು. ವಿದ್ಯಾರ್ಥಿ ಜೀವನದಲ್ಲಿ ಅವರು ಭಾರತೀಯ ಕಮ್ಯುನಿಷ್ಟ್ ಪಕ್ಷದ ಸದಸ್ಯರಾದರು. ಅವರಿಗೆ ಇಬ್ಬರುಗಂಡುಮಕ್ಕಳು ಹಾಗೂ ಮೂವರು ಮೊಮ್ಮಕ್ಕಳಿದ್ದಾರೆ. ಅವರ ಪತ್ನಿ ೧೧ನೇ ಜುಲೈ ೨೦೧೧ರಂದು ಕಾಲವಾದರು
ಪ್ರಾರಂಭಿಕ ರಾಜಕೀಯ ಜೀವನ [ಬದಲಾಯಿಸಿ]
೧೯೬೪ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರುವ ಪೂರ್ವದಲ್ಲಿ ಗುಜ್ರಾಲರು ೧೯೫೮ರಲ್ಲಿ ನವದೆಹಲಿಯ ಪೌರ ಸಮಿತಿಯ ಉಪಾಧ್ಯಕ್ಷರಾದರು. ಅವರು ೧೯೬೪ರಲ್ಲಿ ರಾಜ್ಯಸಭೆಯ ಸದಸ್ಯರಾದರು. ೧೯೭೫ರ ತುರ್ತು ಪರಿಸ್ಥಿತಿಯಲ್ಲಿ ಸೂಚನಾ ಮತ್ತು ಪ್ರಸಾರಣ ಮಂತ್ರಿಯಾಗಿದ್ದರು. ಆ ಸಮಯದಲ್ಲಿ ದೂರದರ್ಶನದ ಮೇಲ್ಚಿಚಾರಣೆಯನ್ನಲ್ಲದೇ, ಮಾಧ್ಯಮ ನಿಯಂತ್ರಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು ಜಲಸಂಪನ್ಮೂಲ ಖಾತೆಯನ್ನೂ ಕೂಡ ಸಂಭಾಳಿಸಿದ್ದಾರೆ. ನಂತರ ಇಂದಿರಾ ಗಾಂಧಿಯವರಿಂದ ಸೊವಿಯೆಟ್ ಒಕ್ಕೂಟದ ರಾಯಭಾರಿಯಾಗಿ ನೇಮಿಸಲ್ಪಟ್ಟು, ಮೊರಾರ್ಜಿ ದೇಸಾಯಿ ಹಾಗೂ ಚೌಧುರಿ ಚರಣ್ ಸಿಂಗ್‍ರ ಅಧಿಕಾರಾವಧಿಯಲ್ಲಿಯೂ ಕೂಡ ಮುಂದುವರೆದರು.
ಪ್ರಮುಖ ರಾಜಕೀಯ ಜೀವನ [ಬದಲಾಯಿಸಿ]
ಗುಜ್ರಾಲರು ೧೯೮೦ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ತೊರೆದು ಜನತಾ ದಳವನ್ನು ಸೇರಿಕೊಂಡರು. ೧೯೮೯ರ ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಪಂಜಾಬಿನ ಜಲಂಧರ್ ಮತಕ್ಷೇತ್ರದಿಂದ ಚುನಾಯಿತರಾದರು. ಆಗ ಪ್ರಧಾನಿ ವಿ. ಪಿ. ಸಿಂಗ್‍ರ ಮಂತ್ರಿಮಂಡಲದಲ್ಲಿ ವಿದೇಶಿ ವ್ಯವಹಾರಗಳ ಖಾತೆಯನ್ನು ನಿರ್ವಹಿಸಿದರು.
೧೯೯೬ರ ಚುನಾವಣೆಯ ನಂತರದ ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಸಂಯುಕ್ತ ರಂಗವು ಸರಕಾರ ರಚಿಸಿತು. ಹೆಚ್.ಡಿ.ದೇವೇಗೌಡರು ಪ್ರಧಾನಮಂತ್ರಿಯಾದಾಗ, ಗುಜ್ರಾಲರನ್ನು ವಿದೇಶಿ ವ್ಯವಹಾರಗಳ ಮಂತ್ರಿಯಾಗಿ ನೇಮಿಸಲಾಯಿತು. ಈ ಸಮಯದಲ್ಲಿ ಭಾರತವು ತನ್ನ ನೆರೆದೇಶಗಳ ಜೊತೆಗಿನ ಸಂಬಂಧವನ್ನು ಸಾಕಷ್ಟು ಸುಧಾರಿಸಿಕೊಂಡಿತು. ಮುಂದೆ ಗುಜ್ರಾಲರು ಪ್ರಧಾನಿಯಾದಾಗ ಈ ಸಂಬಂಧಗಳು ಮತ್ತಷ್ಟು ಬಲಪಟ್ಟವು. ಇವರು ಕೇಂದ್ರ ಮಂತ್ರಿಯಾಗಿ ಇನ್ನೂ ಕೆಲವು ಖಾತೆಗಳನ್ನು ನಿರ್ವಹಿಸಿದ್ದಾರೆ.
ಹೊರಗಿನಿಂದ ಸರಕಾರವನ್ನು ಬೆಂಬಲಿಸುತ್ತಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಪ್ರಧಾನ ಮಂತ್ರಿಯನ್ನು ಬದಲಾಯಿಸಬೇಕೆಂದು ಪಟ್ಟು ಹಿಡಿದಿದ್ದರಿಂದ, ಹೆಚ್.ಡಿ.ದೇವೇಗೌಡ ಕೆಳಗಿಳಿಸಿ ಗುಜ್ರಾಲರನ್ನು ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಇವರು ೨೧ ಎಪ್ರಿಲ್ ೧೯೯೭ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮರಣ [ಬದಲಾಯಿಸಿ]
ಶ್ವಾಸಕೋಶದ ತೊಂದರೆಯಿಂದಾಗಿ ಗುಜ್ರಾಲರನ್ನು ೧೯ನೇ ನವ್ಹೆಂಬರ ೨೦೧೨ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅವರು ೩೦ನೇ ನವ್ಹೆಂಗಬರ ೨೦೧೨ರಂದು ಕೊನೆಯುಸಿರೆಳೆದರು.