ವಿಷಯಕ್ಕೆ ಹೋಗು

ರೈತವಾರಿ ಪದ್ಧತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ರಿಟಿಷ್ ಆಳ್ವಿಕೆಯ ಸಮಯದ ಸಾಗುವಳಿ ಭೂಮಿಯ ತೆರಿಗೆ ಪಾವತಿಯ ವಿಭಿನ್ನ ಪದ್ದತಿಗಳಲ್ಲಿ ಪ್ರಮುಖವಾದದ್ದು ರೈತವಾರಿ ಪದ್ಧತಿ. ಬಾರಾಮಹಲ್ ಜಿಲ್ಲೆಯಲ್ಲಿ ಆಗಿನ ಆಡಳಿತಾಧಿಕಾರಿಯಾಗಿದ್ದ ಕ್ಯಾಪ್ಟನ್ ಅಲೆಕ್ಸಾಂಡರ್ ಜಾರಿ ಮಾಡಿದ್ದ ಹಲವಾರು ಭೂ ಸುಧಾರಣಾ ನಿಯಮಾವಳಿಗಳನ್ನು ಅನುಸರಿಸಿ ಆಗಿನ ಮದ್ರಾಸ್ ನ ಗವರ್ನರ್ ಸರ್. ಥಾಮಸ್ ಮುನ್ರೋ ಚಾಲ್ತಿಗೆ ತಂದ ಪದ್ಧತಿ ಇದಾಗಿದೆ[]. ಅದಕ್ಕೂ ಹಿಂದೆ ಅಂದರೆ ಮುಘಲ್ ಆಳ್ವಿಕೆಯಿದ್ದ ಕಾಲದಲ್ಲಿ ದೆಹಲಿಯ ಚಕ್ರವರ್ತಿಗಳು ಆಡಳಿತದ ಕೇಂದ್ರ ಬಿಂದುಗಳಾಗಿದ್ದು ಸಾಗುವಳಿ ಭೂಮಿ ಸಂಬಂಧಿತ ತೆರಿಗೆಗಳ ವಸೂಲಾತಿಗೆ ವಿಶೇಷ ವ್ಯವಸ್ಥೆಯೊಂದನ್ನು ಪರಿಚಯಿಸಿದ್ದರು. ಚಕ್ರವರ್ತಿಗಳು ಆಡಳಿತಾತ್ಮಕ ದೃಷ್ಟಿಯಲ್ಲಿ ಪ್ರಮುಖವಾಗಿದ್ದ ಕಾರಣ ಅವರಾಳುತ್ತಿದ್ದ ಪ್ರಾಂತದ ಅನೇಖ ಕಾರ್ಯ ಕಟ್ಟಳೆಗಳು ಅವರ ದಿನ ನಿತ್ಯದ ಕಾರ್ಯಸೂಚಿಗಳಲ್ಲಿರುತ್ತಿದ್ದವು. ಪ್ರತೀ ಉಪ ಪ್ರಾಂತಕ್ಕೂ ಒಬ್ಬ ಅಧಿಕಾರಿಯನ್ನು ನೇಮಿಸುತ್ತಿದ್ದರು ಹಾಗು ಆತನನ್ನು 'ಸುಬೇದಾರ್' ಎಂದು ಕರೆಯಲಾಗುತ್ತಿತ್ತು. ಸುಬೇದಾರನಿಗೆ ಒಂದು ಪ್ರಾಂತದ ಸಂಪೂರ್ಣ ಸಾಗುವಳಿ ಭೂಮಿಯನ್ನು ಕೊಡ ಮಾಡಲಾಗುತ್ತಿತ್ತು. ಆ ಭೂಮಿಯನ್ನು ಸುಬೇದಾರನು ಹಲವಾರು ಜಮೀನುದಾರರಿಗೆ ಹಂಚುತ್ತಿದ್ದನು. ಜಮೀನುದಾರರು ಅದೇ ಭೂಮಿಯನ್ನು ರೈತರಿಗೆ ಹಂಚಿ ಅದರಲ್ಲಿ ಬರುವ ತೆರಿಗೆಯ ಸ್ವಲ್ಪ ಭಾಗವನ್ನು ತಾವು ಇಟ್ಟುಕೊಂಡು ಉಳಿದಿದ್ದನ್ನು ಜಾಗೀರುದಾರರಿಗೆ ಕೊಡುತ್ತಿದ್ದರು. ಅಲ್ಲಿಂದ ಮುಂದೆ ಅದೇ ಧನ ಪ್ರಾಂತದ ಬೊಕ್ಕಸಕ್ಕೆ ಸೇರುತ್ತಿತ್ತು. ಈ ವ್ಯವಸ್ಥೆಯಲ್ಲಿ ಗಮನಿಸಬೇಕಾದ ಬಹು ಮುಖ್ಯ ಅಂಶವೆಂದರೆ ರೈತರಿಗೂ ಹಾಗು ಅವರ ಪ್ರಾಂತದ ಸರ್ಕಾರಕ್ಕೂ ಯಾವುದೇ ನೇರ ಸಂಬಂಧಗಳಿರಲಿಲ್ಲ.

ಆದರೆ ಸರ್ ಥಾಮಸ್ ಮುನ್ರೋ ಪರಿಚಯಿಸಿದ ರೈತವಾರಿ ಪದ್ದತಿಯಲ್ಲಿ ರೈತರೇ ನೇರವಾಗಿ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ತೆರಿಗೆಯ ವಸೂಲಾತಿಗೆಂದೇ ಸರ್ಕಾರದ ಪರವಾಗಿ ಕಲೆಕ್ಟರ್ ಗಳನ್ನೂ ನೇಮಕ ಮಾಡಲಾಯಿತು. ಜೊತೆಗೆ ಹೊಸ ಭೂಮಿಯನ್ನು ಸಾಗುವಳಿಗೆ ಅನುವು ಮಾಡಿಕೊಳ್ಳುವ ಅಥವಾ ಈಗಾಗಲೇ ಸಾಗುವಳಿಯಲ್ಲಿ ಚಾಲ್ತಿಯಲ್ಲಿರುವ ಭೂಮಿಯನ್ನು ಬಿಟ್ಟುಬಿಡುವ ಅವಕಾಶವನ್ನು ರೈತರ ವಿವೇಚನೆಗೇ ಬಿಟ್ಟು ಬಿಡಲಾಯಿತು[].

ಸರಿ ಸುಮಾರು ಮೂವತ್ತು ವರ್ಷಗಳ ಕಾಲ ಜಾರಿಯಲ್ಲಿದ್ದ ಈ ತೆರಿಗೆಯ ಪಾವತಿ ಪದ್ಧತಿ ಮೊಘಲ್ ಕಾಲದ ತೆರಿಗೆಯ ಪದ್ದತಿಯ ಹಲವಾರು ಗುಣ ಲಕ್ಷಗಳನ್ನು ಹೊಂದಿತ್ತು. ಬ್ರಿಟಿಷ್ ಭಾರತದ ಕೆಲವೇ ಕೆಲವು ಭಾಗಗಲ್ಲಿ ಜಾರಿಯಾದ ಈ ನಿಯಮ ಆಗ್ಗೆ ಬ್ರಿಟಿಷ್ ಭಾರತದಲ್ಲಿದ್ದ ಎರಡು ಪ್ರಮುಖ ಸಾಗುವಳಿ ಭೂ-ತೆರಿಗೆಯ ವಸೂಲಿ ಪದ್ಧತಿಗಳಲ್ಲಿ ಒಂದಾಗಿತ್ತು. ಈ ತೆರಿಗೆಯು ಬರಿಯ ತೆರಿಗೆಯೆಂದಷ್ಟೇ ಪರಿಗಣಿತವಾಗದೆ ರೈತರ ಹಣವನ್ನು ತೆರಿಗೆಯ, ಭೂಮಿಯ ಬಾಡಿಗೆ ಎಂಬ ಅಂಶಗಈಳೂ ಅದರೊಳಗೆ ಸೇರಿಸಿ ವಸೂಲು ಮಾಡಲಾಗುತ್ತಿತ್ತು. ಭೂತೆರಿಗೆ ಪಾವತಿಗೆ ರೈತರನ್ನೇ ನೇರವಾಗಿ ಹೊಣೆ ಮಾಡಿದ ಕಾರಣ ಈ ಪದ್ದತಿಯನ್ನು ರೈತವಾರಿ ಪದ್ಧತಿ ಎಂದು ಕರೆಯಲಾಯಿತು. ಭಾರತದ ಇನ್ನಿತರ ಭಾಗಗಳಲ್ಲಿ ಜಮೀನುದಾರರ ಮುಖಾಂತರ ರೈತರು ತೆರಿಗೆ ಪಾವತಿ ಮಾಡುತ್ತಿದ್ದರು, ಅಂತಹ ಪದ್ದತಿಯನ್ನು ಜಮೀನ್ದಾರಿ ಪದ್ಧತಿ ಎಂಬುದಾಗಿ ಕರೆಯಲಾಗುತ್ತದೆ. ಬ್ರಿಟಿಷ್ ಭಾರತದ ಬಾಂಬೆ, ಮದ್ರಾಸ್, ಅಸ್ಸಾಂ ಹಾಗು ಬರ್ಮಾ ಪ್ರಾಂತಗಳಲ್ಲಿ ರೈತವಾರಿ ಪದ್ಧತಿ ಜಾರಿಯಲ್ಲಿದ್ದ ಕಾರಣ ಜಮೀನುದಾರರಿಗೆ ಆಸ್ಪದವಿರಲಿಲ್ಲ, ಬದಲಾಗಿ ರೈತರೇ ನೇರವಾಗಿ ಸರ್ಕಾರದ ಸಂಪರ್ಕದಲ್ಲಿರುತ್ತಿದ್ದರು.

ಇತರೆ ತೆರಿಗೆ ಪದ್ಧತಿಗಳು

[ಬದಲಾಯಿಸಿ]

ಬಂಗಾಳ ಪ್ರಾಂತ ಹಾಗು ಉತ್ತರಭಾರತ ಭಾಗಗಳಲ್ಲಿ ಜಾರಿಯಲ್ಲಿದ್ದ ಪ್ರಮುಖ ಪದ್ಧತಿ ಜಮೀನ್ದಾರಿ ಪದ್ಧತಿ. ಜಮೀನ್ದಾರಿ ಪದ್ದತಿಯ ಸ್ವರೂಪ ಇಂತಿತ್ತು[],

  • ಸಾಗುವಳಿ ಭೂಮಿಯ ತೆರಿಗೆಯನ್ನು ಇಂತಿಷ್ಟೇ ಎಂದು ನಿಗದಿಪಡಿಸದೆ ಬ್ರಿಟೀಷರು ಟೆಂಡರ್ ರೀತಿಯಲ್ಲಿ ಜಮೀನುಗಳನ್ನು ಜಮೀನುದಾರರಿಗೆ ಹರಾಜು ಪ್ರಕ್ರಿಯೆಯ ಮೂಲಕ ಸ್ವಾಧೀನಕ್ಕೆ ಕೊಡುತ್ತಿದ್ದರು. ಅಂದರೆ ಜಮೀನುದಾರರನ್ನೆಲ್ಲಾ ಕೂಡಿಸಿ 'ಬಿಡ್' ಕರೆಯುವ ಪ್ರಕ್ರಿಯೆ ನಡೆಸಿ ಯಾವ ಜಮೀನಿಗೆ ಯಾರು ಹೆಚ್ಚು ತೆರಿಗೆ ಕೊಡಲು ಸಿದ್ಧರಿರುತ್ತಾರೋ ಅವರಿಗೆ ಆ ಜಮೀನು ದಕ್ಕುತ್ತಿತ್ತು. ಅದೇ ಜಮೀನನ್ನು ಜಮೀನುದಾರರು ಸಣ್ಣ ಹಿಡುವಳಿದಾರರಿಗೆ ಹಂಚುತ್ತಿದ್ದರು. ಮುಂದೆ ಅವರಿಂದಲೇ ತೆರಿಗೆ ಸಂಗ್ರಹಣೆ ಮಾಡುತ್ತಿದ್ದರು.
  • ಆ ಜಮೀನಿನಲ್ಲಿ ಈಗಾಗಲೇ ಸಾಗುವಳಿ ಮಾಡುತ್ತಿದ್ದ ರೈತರು ಜಮೀನಿನ ಮೇಲಿನ ತಮ್ಮ ಹಕ್ಕು ಕಳೆದುಕೊಂಡು ಕೇವಲ ಜಮೀನಿನ ಪಾಲುದಾರರಾಗಿ ಗುರುತಿಸಿಕೊಂಡರು.
  • ಹಿಡುವಳಿದಾರರು ಜಮೀನ್ದಾರರಿಗೆ ತೆರಿಗೆಯನ್ನು ಹಣದ ರೂಪದಲ್ಲಿ ಮಾತ್ರವೇ ಕೊಡುವಂತೆ ತಾಕೀತು ಮಾಡಲಾಯಿತು.
  • ಯಾವುದೇ ಜಮೀನ್ದಾರನು ಬಿಡ್ ಪ್ರಕ್ರಿಯೆಯಲ್ಲಿ ತಾನು ಒಪ್ಪಿಕೊಂಡಷ್ಟು ತೆರಿಗೆಯನ್ನು ಕಾರಣಾಂತರಗಳಿಂದ ಕೊಡಲು ಅಸಮರ್ಥನಾದಾಗ ಆತನ ಸ್ವಾಧೀನದಿಂದ ಜಮೀನನ್ನು ಹಿಂತಿರುಗಿ ಪಡೆದುಕೊಳ್ಳಲಾಗುತ್ತಿತ್ತು.

ಬ್ರಿಟಿಷರ ಜಮೀನ್ದಾರಿ ಪದ್ಧತಿಗಿಂತ ಹಿಂದೆ ಇದ್ದ ಅರಸರು/ಮೊಘಲರ ಜಮೀನ್ದಾರಿ ಪದ್ದತಿಯ ಹೊರ ಸ್ವರೂಪ ಹೀಗೆಯೇ ಇದ್ದವಾದರೂ ನಿಯಮಗಳಲ್ಲಿ ಅತೀವ ಕಟ್ಟುಪಾಡುಗಳಿರಲಿಲ್ಲ,

  • ತೆರಿಗೆಯನ್ನು ಹಣ ಅಥವಾ ಇತರೆ ರೂಪದಲ್ಲಿಯೂ ಪಾವತಿಸಬಹುದಾಗಿತ್ತು (ರೈತ ಸಮುದಾಯದಲ್ಲಿ ದವಸ, ಧಾನ್ಯಗಳನ್ನೇ ತೆರಿಗೆಯಾಗಿ ಕೊಡುವ ರೂಢಿ ಹಿಂದೆ ಚಾಲ್ತಿಯಲ್ಲಿತ್ತು).
  • ಜಮೀನಿನ ಮಾಲೀಕತ್ವ ಅದನ್ನು ಸಾಗುವಳಿ ಮಾಡುವ ರೈತನದೇ ಆಗಿರುತ್ತಿತ್ತು.
  • ರಾಜನಿಗೆ ಸಂದಾಯವಾಗುವ ತೆರಿಗೆ ಹಣ ಸ್ವರೂಪದ್ದಾಗಿಲ್ಲದ ಸಂಧರ್ಭದಲ್ಲಿ ಅದು ಜಮೀನಾಗಿರುತ್ತಿತ್ತು, ಅಂತಹ ಸನ್ನಿವೇಶಗಳಲ್ಲಿ ರಾಜನು ಆ ಜಮೀನುಗಳನ್ನು ಹಿಡುವಳಿ ದಾರರಿಗೆ ಹಿಂದಿರುಗಿ ಮಾರಾಟ ಮಾಡುತ್ತಿದ್ದನು.
  • ಬರಗಾಲ ಅಥವಾ ಇತರೆ ಪ್ರಕೃತಿ ವಿಕೋಪಗಳಿಂದಾಗಿ ರೈತರ ಬೆಲೆ ನಾಶವಾದಾಗ ತೆರಿಗೆಯ ದರದಲ್ಲಿ ಸಡಿಲಿಕೆ ಕೊಡಲಾಗುತ್ತಿತ್ತು.

ಬ್ರಿಟೀಷರ ಜಮೀನ್ದಾರಿ ಪದ್ದತಿಗೂ ಹಾಗು ಅದಕ್ಕಿಂತಲೂ ಹಿಂದೆ ಜಾರಿಯಲ್ಲಿದ್ದ ಮೊಘಲ್ ಕಾಲದ ಜಮೀನ್ದಾರಿ ಪದ್ದತಿಗೂ ಇದ್ದ ಪ್ರಮುಖ ವ್ಯತ್ಯಾಸ ಹಾಗು ಅವುಗಳಿಂದ ಉಂಟಾದ ಕೆಲವು ಸಮಸ್ಯೆಗಳು,

  • ತೆರಿಗೆಯನ್ನು ಕೇವಲ ಹಣದ ರೂಪದಲ್ಲಿ ಮಾತ್ರವೇ ಪಾವತಿ ಮಾಡಬೇಕಾದ್ದರಿಂದ ರೈತರು ತಾವು ಬೆಳೆದ ಬೆಳೆಯನ್ನು ಇತರೇ ರೈತರಾಗಿ ಅದರಲ್ಲೂ ಬೇರೇ ಬೆಲೆ ಬೆಳೆದ ರೈತನಿಗೇ ಮಾರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
  • ಕೆಲವಾರು ರೈತರು ಹಣದ ರೂಪದಲ್ಲಿ ತೆರಿಗೆ ಕಟ್ಟಲೋಸುಗ ತಮ್ಮ ಜಮೀನಿನ ಕೆಲವು ಭಾಗವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತು.
  • ಕೃಷಿಕ ರೈತ ಜಮೀನನ್ನು ಮಾರಾಟದ ವಸ್ತುವಾಗಿ ಪರಿಗಣಿಸಬೇಕಾದ ಒತ್ತಡ ನಿರ್ಮಾಣವಾಗಿ ರೈತರಿಗೆ ತಮ್ಮ ಜಮೀನಿನ ಮೇಲಿದ್ದ ಭಾವನಾತ್ಮಕ ಸಂಬಂಧಕ್ಕೆ ಧಕ್ಕೆ ಉಂಟಾಯಿತು.
  • ರಾಜಕೀಯ ಕಾರಣಗಳಿಂದಾಗಿ ಆಗಾಗ್ಗೆ ಏರಿಕೆಯಾಗುತ್ತಿದ್ದ ತೆರಿಗೆ ಹಾಗು ಅದರ ಸ್ವರೂಪಗಳು ಸಾಗುವಳಿ ಭೂಮಿಗಳ ಮೇಲೆ ಹಾಗು ಕೃಷಿಕರ ಮೇಲೆ ಒತ್ತಡ ಸೃಷ್ಟಿಯಾಗುವಂತೆ ಮಾಡಿದವು.ಇದು ಸ್ಥಳೀಯ ರಾಜನ ವಿರುದ್ಧ ಜನ ಸಾಮಾನ್ಯರು ತಿರುಗಿ ಬೀಳುವಂತಹ ಸನ್ನಿವೇಶಗಳಿಗೆ ದಾರಿ ಮಾಡಿಕೊಟ್ಟ ಕಾರಣ ಅದನ್ನೇ ಉಪಯೋಗಿಸಿಕೊಂಡ ಬ್ರಿಟೀಷರು ತಮ್ಮ ನೇರ ಆಡಳಿತ ಬರುವಂತೆ ನೋಡಿಕೊಳ್ಳಲು ಸಫಲರಾದರು.

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ರೈತವಾರಿ ಪದ್ದತಿಯ ಕುರಿತಾದ ಬ್ರಿಟಾನಿಕಾ ಎನ್ಸೈಕ್ಲೋಪೀಡಿಯಾದ ಲೇಖನ".
  2. "ಭಾರತದ ಆರ್ಥಿಕ ಇತಿಹಾಸ, ಆಂಗ್ಲ ಪಿ.ಡಿ.ಎಫ್ ಮಾದರಿ ಪುಸ್ತಕ. ಲೇಖಕರು: ರಮೇಶ್ ದತ್" (PDF). Archived from the original (PDF) on 2018-09-10. Retrieved 2019-01-05. ಮದ್ರಾಸ್ ಪ್ರಾಂತದಲ್ಲಿ ಮುನ್ರೋ ಹಾಗು ರೈತವಾರಿ ಪದ್ಧತಿ ಅನುಷ್ಠಾನ, ೧೮೨೦-೨೭.ಪುಟ: ೧೫೩-೧೭೧
  3. "ಸಾಗುವಳಿ ಭೂಮಿಯ ಪಾಲುದಾರಿಕೆ ಆಂಗ್ಲ ವಿಕಿ ಪುಟದ ಮಾಹಿತಿ".