ರಕ್ತಹೀನತೆ
ರಕ್ತದಲ್ಲಿ ಕೆಂಪು ರಕ್ತಕಣಗಳ(ಆಂಗ್ಲ ಭಾಷೆಯಲ್ಲಿ ಹಿಮೋಗ್ಲೋಬಿನ್) ಕೊರತೆ ಉಂಟಾಗುವುದು ಅಥವಾ ದೇಹದ ವಿವಿಧ ಅಂಗಗಳಿಗೆ ರಕ್ತವು ಆಮ್ಲಜನಕವನ್ನು ಒಯ್ಯುವ ಸಾಮರ್ಥ್ಯದಲ್ಲಿ ಉಂಟಾಗುವ ಕೊರತೆಯನ್ನು ರಕ್ತಹೀನತೆ (ಆಂಗ್ಲ ಭಾಷೆಯಲ್ಲಿ ಅನಿಮಿಯಾ) ಎಂದು ಕರೆಯುತ್ತಾರೆ. ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ ಎರಿಥ್ರೋಸೈಟೋಫೆನಿಯಾ ಎಂಬ ಹೆಸರೂ ಇದೆ.
ತೀವ್ರವಾದ ಅಪಘಾತದಲ್ಲಿ ಸಂದರ್ಭದಲ್ಲಿ, ಮಹಿಳೆಯರಲ್ಲಿ ಪ್ರಸವ ಸಮಯದಲ್ಲಿ ಆಗುವ ಅಸಹಜ ರಕ್ತಸ್ರಾವದ ಕಾರಣದಿಂದಾಗಿ ಮತ್ತು ರಕ್ತದಲ್ಲಿ ಕಬ್ಬಿಣಾಂಶದ ಕೊರತೆಯಿಂದಾಗಿ ರಕ್ತಹೀನತೆಯು ಕಾಣಿಸಿಕೊಳ್ಳಬಹುದು.
ವಿವರಣೆ
[ಬದಲಾಯಿಸಿ]ನಮ್ಮ ದೇಹದೊಳಗೆ ನಡೆಯುವ ವಿವಿಧ ಜೈವಿಕ ಪ್ರಕ್ರಿಯೆಗಳಲ್ಲಿ ರಕ್ತದ ಪಾತ್ರ ಹಿರಿದು. ರಕ್ತದಲ್ಲಿ ಎರಡು ರೀತಿಯ ರಕ್ತಕಣಗಳು ಇರುತ್ತವೆ.
- ಬಿಳಿ ರಕ್ತಕಣಗಳು
- ಕೆಂಪು ರಕ್ತಕಣಗಳು
- ಬಿಳಿ ರಕ್ತಕಣಗಳು ನಮ್ಮ ದೇಹಕ್ಕೆ ಮಾರಕವಾದ ಬ್ಯಾಕ್ಟೀರಿಯಾ, ವೈರಸ್ಸುಗಳಿಂದ ಬರುವ ಕಾಯಿಲೆಗಳ ವಿರುದ್ಧ ಹೋರಾಡುತ್ತವೆ. ಆ ಮೂಲಕ ನಮ್ಮ ದೇಹದ ಮೇಲಾಗುವ ದಾಳಿಗಳಿಂದ ರಕ್ಷಣೆಯನ್ನು ಒದಗಿಸುತ್ತದೆ.
- ಕೆಂಪುರಕ್ತಕಣಗಳು ಶ್ವಾಸಕೋಶದಿಂದ ಎಲ್ಲಾ ಅಂಗಗಳಿಗೆ, ಜೀವಕೋಶಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕವನ್ನು ಸರಬರಾಜು ಮಾಡುತ್ತವೆ. ಹಾಗೆಯೇ, ಅಂಗಾಂಶಗಳಿಂದ ವಿಸರ್ಜಿಸಲ್ಪಟ್ಟ ಇಂಗಾಲದ ಡೈಆಕ್ಸೈಡನ್ನು ಶ್ವಾಸಕೋಶಕ್ಕೆ ತಲುಪಿಸುತ್ತದೆ.
ಈ ಕೆಂಪುರಕ್ತಕಣಗಳು ನಿಯಮಿತವಾಗಿ ಆಮ್ಲಜನಕವನ್ನು ಪೂರೈಸಬೇಕಾದರೆ ರಕ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣಾಂಶ ಇರಬೇಕು. ಕಬ್ಬಿಣಾಂಶ ಬೇಕಾದ ಪ್ರಮಾಣದಲ್ಲಿ ಪೂರೈಕೆಯಾಗದೆ ಹೋದಾಗ, ಕೆಂಪು ರಕ್ತಕಣದ ಗಾತ್ರವು ಚಿಕ್ಕದಾಗುತ್ತದೆ. ಕೆಂಪು ಕಣದ ಗಾತ್ರ ಚಿಕ್ಕದಾದಾಗ, ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಪೂರೈಸುವಲ್ಲಿ ಅವು ವಿಫಲವಾಗುತ್ತವೆ.
ಒಬ್ಬ ಸಾಮಾನ್ಯ ಆರೋಗ್ಯವಂತ ಗಂಡಸರ ರಕ್ತದಲ್ಲಿ ೧೪-೧೮ ಗ್ರಾಂ/ಪ್ರತಿ ಡೆಸಿಲೀಟರ್‌ನಷ್ಟು ಮತ್ತು ಹೆಂಗಸರಲ್ಲಿ ೧೨-೧೬ ಗ್ರಾಂ/ಪ್ರತಿ ಡೆಸಿಲೀಟರ್‌ನಷ್ಟು ಕೆಂಪುರಕ್ತಕಣಗಳು ಇರುತ್ತವೆ. ಈ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಪರೀಕ್ಷೆಗಳನ್ನು ನಡೆಸಿ, ಸಕಾಲದಲ್ಲಿ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ.[೧]
ಕಾರಣಗಳು
[ಬದಲಾಯಿಸಿ]ರಕ್ತಹೀನತೆ ಕಾಣಿಸಿಕೊಳ್ಳಲು ಹಲವಾರು ಕಾರಣಗಳಿದ್ದು, ಅತಿ ಸಾಮಾನ್ಯವಾದ ಕಾರಣವೆಂದರೆ ಕಬ್ಬಿಣಾಂಶದ ಕೊರತೆ ಮತ್ತು ಪ್ರಸವ ಅಥವಾ ಗಂಭೀರ ಸ್ವರೂಪದ ದೈಹಿಕ ಅಪಘಾತದ ಸಂದರ್ಭದಲ್ಲಿ ಸಂಭವಿಸುವ ತೀವ್ರ ರಕ್ತಸ್ರಾವ.
- ಗ್ರಾಮಾಂತರ ಪ್ರದೇಶಗಳಲ್ಲಿ ಲಿಂಗ ತಾರತಮ್ಯದಿಂದ ಹೆಣ್ಣುಮಕ್ಕಳಿಗೆ ಪೌಷ್ಠಿಕ ಆಹಾರ ನೀಡದೆ ಇರುವುದರಿಂದ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ರಕ್ತಹೀನತೆ ಕಂಡುಬರುತ್ತದೆ. ಪದೇ ಪದೇ ಗರ್ಭಪಾತ ಹಾಗೂ ಹೆಚ್ಚು ಅಂತರವಿಲ್ಲದೆ ಗರ್ಭಧರಿಸುವುದರಿಂದ ಮಹಿಳೆಯರಲ್ಲಿ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಮೂಢ ನಂಬಿಕೆಗಳಿಂದಾಗಿ ಹಲವಾರು ಆಹಾರಗಳನ್ನು ಸೇವಿಸದೆ ಇರುವುದರಿಂದಲೂ ರಕ್ತಹೀನತೆ ಉಂಟಾಗುತ್ತದೆ. ಬಯಲು ಮಲ ವಿಸರ್ಜನೆ ಹಾಗೂ ಪಾದರಕ್ಷೆಗಳಿಲ್ಲದೆ ಓಡಾಡುವುದರಿಂದ ಪಾದಗಳ ಮೂಲಕ ಕೊಕ್ಕೆಹುಳುಗಳು ದೇಹವನ್ನು ಸೇರಿ ದೇಹದ ಪೌಷ್ಠಿಕತೆಯನ್ನು ಹೀರುತ್ತದೆ. ಇದರಿಂದಾಗಿ ರಕ್ತಹೀನತೆ ಉಂಟಾಗುತ್ತದೆ.
- ಸಾಮಾನ್ಯ ಸಂದರ್ಭದಲ್ಲಿ, ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣಾಂಶದ ಪೂರೈಕೆ ಇಲ್ಲದಿದ್ದಾಗ ಅಥವಾ ಅಗತ್ಯ ಪ್ರಮಾಣದ ವಿಟಮಿನ್‌ಗಳ ಕೊರತೆಯಾದಾಗ ಕೆಂಪುರಕ್ತಕಣಗಳ ಸಂಖ್ಯೆಯಲ್ಲಿ ಇಳಿಕೆ ಉಂಟಾಗಬಹುದು.
- ರಕ್ತಕಣಗಳು ದೇಹದೊಳಗಿನ ಮೂಳೆಯ ಮಜ್ಜೆಯಲ್ಲಿ ಉತ್ಪಾದನೆಯಾಗುತ್ತವೆ. ಕೆಲವೊಂದು ಗಂಭೀರವಾದ ಕಾಯಿಲೆಗಳಾದ ಕ್ಯಾನ್ಸರ್, ಸಂಧಿವಾತ ಹೆಚ್‌ಐವಿ, ಏಡ್ಸ್‌ನಂತಹ ರೋಗಗಳು ಬಂದಾಗ ನಮ್ಮ ದೇಹದಲ್ಲಿ ರಕ್ತಕಣಗಳ ಉತ್ಪಾದನೆ ಕುಂಠಿತವಾಗುತ್ತದೆ.
- ಮೂತ್ರಪಿಂಡಕ್ಕೆ ಸಂಬಂಧಿಸಿದ ಖಾಯಿಲೆಗಳು ಸಹ ರಕ್ತಹೀನತೆಗೆ ಕಾರಣವಾಗಬಲ್ಲವು. ಮೂತ್ರಪಿಂಡವು ಎರಿತ್ರೋಪೋಟಿನ್ ಎಂಬ ಚೋದಕವನ್ನು ತಯಾರಿಸುತ್ತದೆ. ಈ ಚೋದಕವು ಮೂಳೆಯ ಮಜ್ಜೆಯಲ್ಲಿ ಅಗತ್ಯ ಪ್ರಮಾಣದ ರಕ್ತದ ಉತ್ಪಾದನೆಯಾಗಲು ಉತ್ತೇಜಕದಂತೆ ಕೆಲಸ ಮಾಡುತ್ತದೆ. ಮೂತ್ರಪಿಂಡವು ರೋಗಕ್ಕೀಡಾದಾಗ ಅಥವಾ ಕಾರ್ಯನಿರ್ವಹಿಸಲು ವಿಫಲವಾದಾಗ, ಈ ಎರಿತ್ರೋಪೋಟಿನ್ ಉತ್ಪಾದನೆ ಕಡಿಮೆಯಾಗುತ್ತದೆ. ತತ್ಪರಿಣಾಮವಾಗಿ ರಕ್ತಕಣಗಳ ಉತ್ಪಾದನೆಯ ಮೇಲೂ ದುಷ್ಪರಿಣಾಮ ಬೀರುತ್ತದೆ.
- ನಿರ್ನಾಳ ಗ್ರಂಥಿಗಳಿಗೆ-ಥೈರಾಯ್ಡ್ ಗ್ರಂಥಿಗಳು, ಪಿಟ್ಯುಟರಿ ಗ್ರಂಥಿಗಳು ಇತ್ಯಾದಿ- ಸಂಬಂಧಿಸಿದ ಕಾಯಿಲೆಗಳು ಬಂದಾಗ ರಕ್ತಕಣಗಳ ಉತ್ಪಾದನೆಯ ಮೇಲೆ ಪ್ರಭಾವ ಬೀರಬಹುದು.
ರೋಗಲಕ್ಷಣಗಳು
[ಬದಲಾಯಿಸಿ]ಹೆಚ್ಚಿನವರಿಗೆ ರಕ್ತಹೀನತೆ ಇರುವುದು ಗೊತ್ತೇ ಇರುವುದಿಲ್ಲ. ಬೇರೆ ಯಾವುದಾದರೂ ಖಾಯಿಲೆಗೆ ತುತ್ತಾಗಿ ರಕ್ತ ಪರೀಕ್ಷೆ ಮಾಡುವ ಸಂದರ್ಭದಲ್ಲಿ ರಕ್ತಹೀನತೆ ಇರುವುದು ಕಂಡುಬರುವ ಸಾಧ್ಯತೆ ಇರುತ್ತದೆ.
ಗಂಭೀರವಲ್ಲದ ಸಂದರ್ಭದಲ್ಲಿ ಅಥವಾ ನಿಧಾನವಾಗಿ ಬರುವ ಸಂದರ್ಭದಲ್ಲಿ, ಈ ರೋಗ ಸೌಮ್ಯವಾದ ಅಥವಾ ಅಸ್ಪಷ್ಟವಾದ ಲಕ್ಷಣಗಳನ್ನು ಲಕ್ಷಣಗಳನ್ನು ತೋರಿಸುತ್ತದೆ. ಅಂದರೆ- ಸುಸ್ತಾದಂತೆ ಅನಿಸುವುದು, ನಿಃಶಕ್ತಿ, ಉಚ್ವಾಸ-ನಿಶ್ವಾಸ ತೆಗೆಯಲು ಕಷ್ಟವಾಗುವುದು ತಲೆನೋವು, ಗಮನವನ್ನು ಕೇಂದ್ರೀಕರಿಸಲು ವಿಫಲವಾಗುವುದು ಇತ್ಯಾದಿ.
ರಕ್ತಹೀನತೆಯು ಗಂಭೀರ ಹಂತಕ್ಕೆ ತಲುಪಿದಾಗ, ಆಗ ಗಂಭೀರವಾದ ಲಕ್ಷಣಗಳು ಕಾಣಿಸಬಹುದು. ಅಂದರೆ- ಗೊಂದಲ, ತಲೆ ತಿರುಗುವಿಕೆ, ಪ್ರಜ್ಞೆ ತಪ್ಪುವುದು, ವಿಪರೀತ ಬಾಯಾರಿಕೆ, ಎದೆ ಬೇನೆ, ಹೃದಯಬಡಿತದಲ್ಲಿ ವ್ಯತ್ಯಾಸ ಇತ್ಯಾದಿ. ಕೆಲವೊಮ್ಮೆ ಈ ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಅದೇ ರೀತಿ, ಸೌಮ್ಯರೂಪದ ರಕ್ತಹೀನತೆಯು ದೀರ್ಘಕಾಲದವರೆಗೆ ಮುಂದುವರಿದರೆ, ದೇಹವು ಈ ಬದಲಾವಣೆಗೆ ಹೊಂದಿಕೊಳ್ಳಬಹುದು.
ಇನ್ನು ಕೆಲವೊಮ್ಮೆ ರಕ್ತಹೀನತೆಗೆ ಕಾರಣವಾಗುವ ಅಂಶಗಳು ಬದಲಾದಂತೆ ಲಕ್ಷಣಗಳು ಬದಲಾಗುತ್ತವೆ. ಉದಾಹರಣೆಗೆ, ರಕ್ತದಲ್ಲಿ ಕಬ್ಬಿಣಾಂಶದ ಕೊರತೆ ಆದಾಗ ಚರ್ಮದ ಬಣ್ಣದಲ್ಲಿ ಬದಲಾವಣೆ ಕಂಡುಬರುತ್ತದೆ.
ದೀರ್ಘಕಾಲದ ರಕ್ತಹೀನತೆಯು ಶಿಶುಗಳಲ್ಲಿ ನರಮಂಡಲದ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು. ಪರಿಣಾಮವಾಗಿ ಮಕ್ಕಳಲ್ಲಿ ನಡವಳಿಕೆಯಲ್ಲಿನ ವ್ಯತ್ಯಾಸಕ್ಕೆ ಕಾರಣವಾಗಬಹುದು. ಮತ್ತು ಶಾಲಾ ಮಕ್ಕಳ ಕಲಿಕೆಯ ಕಾರ್ಯಕ್ಷಮತೆಯನ್ನು ಕಡಿಮೆ ಮಾಡಬಹುದು.
ಪರೀಕ್ಷೆ ಮತ್ತು ಪತ್ತೆ
[ಬದಲಾಯಿಸಿ]ಹೆಚ್ಚಿನ ಸಂದರ್ಭದಲ್ಲಿ ರಕ್ತಹೀನತೆ ರೋಗಲಕ್ಷಣಗಳನ್ನು ಹೊಂದಿಲ್ಲದೇ ಇರಬಹುದು. ಬೇರೆ ಯಾವುದಾದರೂ ರೋಗಲಕ್ಷಣಗಳನ್ನು ಪರಿಶೀಲಿಸುವಾಗ ರಕ್ತಹೀನತೆ ಇರುವುದು ತಿಳಿದು ಬರಬಹುದು.
ರಕ್ತಹೀನತೆಯನ್ನು ಸಾಮಾನ್ಯವಾಗಿ ಸಂಪೂರ್ಣ ರಕ್ತದ ಎಣಿಕೆ(Complete Blood Count CBC)ಯ ಮೇಲೆ ರೋಗನಿರ್ಣಯ ಮಾಡಲಾಗುತ್ತದೆ. ಕೆಂಪು ರಕ್ತಕಣಗಳ ಸಂಖ್ಯೆ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ವರದಿ ಮಾಡುವುದರ ಜೊತೆಗೆ, ಸ್ವಯಂಚಾಲಿತ ಕೌಂಟರ್‌ಗಳು ಮತ್ತು ಫ್ಲೋ ಸೈಟೊಮೆಟ್ರಿಯಂತಹ ಯಂತ್ರಗಳನ್ನು ಬಳಸಿಕೊಂಡು, ಕೆಂಪು ರಕ್ತಕಣಗಳ ಗಾತ್ರ, ಸಂಖ್ಯೆಯನ್ನು ಅಳೆಯಲಾಗುತ್ತದೆ.
ಇನ್ನು, ಆರ್ಥಿಕವಾಗಿ ಹಿಂದುಳಿದ ದೇಶಗಳಲ್ಲಿ ಸ್ವಯಂಚಾಲಿತ ಪರೀಕ್ಷಾ ಯಂತ್ರಗಳ ಲಭ್ಯತೆ ಕಡಿಮೆ ಇರುವುದರಿಂದ, ರಕ್ತದ ಮಾದರಿಯನ್ನು ಲೇಪಿಸಿದ ಗಾಜಿನ ಪಟ್ಟಿಯನ್ನು ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿ ಫಲಿತಾಂಶಗಳನ್ನು ಪಡೆಯಲಾಗುತ್ತದೆ.
ಕೆಲವೊಂದು ಪರೀಕ್ಷೆಗಳ ಮಾಹಿತಿ:
- ರಕ್ತದ ಸಂಪೂರ್ಣ ಎಣಿಕೆ (Complete Blood Count - CBC)
ಹೆಸರೇ ಹೇಳುವಂತೆ ಬಿಳಿ ರಕ್ತ ಕಣಗಳು, ಕೆಂಪು ರಕ್ತ ಕಣಗಳು ಮತ್ತು ಪ್ಲೇಟ್‌ಲೆಟ್‌ಗಳು, ಹಿಮೋಗ್ಲೋಬಿನ್‌ನ ಸಾಂದ್ರತೆ ಮತ್ತು ಹೆಮಾಟೋಕ್ರಿಟ್ (ಕೆಂಪು ರಕ್ತಕಣಗಳ ಪರಿಮಾಣದ ಶೇಕಡಾವಾರು ಪ್ರಮಾಣ)- ಇವೆಲ್ಲವನ್ನೂ ಪರೀಕ್ಷಿಸುವ ಒಂದು ಪರೀಕ್ಷಾ ವಿಧಾನ. ಕೆಂಪು ರಕ್ತ ಕಣಗಳ ಸರಾಸರಿ ಗಾತ್ರ ಮತ್ತು ಹಿಮೋಗ್ಲೋಬಿನ್ ಅಂಶವನ್ನು ಸೂಚಿಸುವ ಕೆಂಪು ರಕ್ತಕಣ ಸೂಚ್ಯಂಕಗಳನ್ನು ಸಹ ಪರೀಕ್ಷಾ ವರದಿಯಲ್ಲಿ ಸೇರಿಸಲಾಗುತ್ತದೆ.
- ಫೆರಿಟಿನ್ ಪರೀಕ್ಷೆ
ಫೆರಿಟಿನ್, ಜೀವಕೋಶಗಳಲ್ಲಿ ಕಬ್ಬಿಣಾಂಶದ ಸಂಗ್ರಹ ಮತ್ತು ಬಿಡುಗಡೆಯನ್ನು ನಿಯಂತ್ರಿಸುವ ಪ್ರೋಟೀನ್‌ಗಳಲ್ಲಿ ಒಂದಾಗಿದೆ. ಜೀವಕೋಶದೊಳಗೆ ಇದ್ದು ಕೆಲಸ ಮಾಡುವ ಈ ಪ್ರೋಟೀನ್, ಕಬ್ಬಿಣಾಂಶವನ್ನು ಕರಗುವ ಮತ್ತು ವಿಷಕಾರಿಯಲ್ಲದ ರೂಪದಲ್ಲಿ ತನ್ನೊಳಗೆ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಮಾನವರಲ್ಲಿ, ಇದು ಕಬ್ಬಿಣದ ಕೊರತೆ ಮತ್ತು ಕಬ್ಬಿಣದ ಮಿಗತೆಯ ಸಮಯದಲ್ಲಿ ಸ್ವಯಂಚಾಲಿತ ನಿಯಂತ್ರಕವಾಗಿ ಕಾರ್ಯನಿರ್ವಹಿಸುತ್ತದೆ.
ಫೆರಿಟಿನ್ ಪರೀಕ್ಷೆಯಲ್ಲಿ, ರಕ್ತದಲ್ಲಿನ ಫೆರಿಟಿನ್ ಮಟ್ಟವನ್ನು ಪರಿಶೀಲಿಸಲಾಗುತ್ತದೆ. ಮತ್ತು ಕಬ್ಬಿಣವನ್ನು ಸಂಗ್ರಹಿಸುವ ದೇಹದ ಸಾಮರ್ಥ್ಯವನ್ನು ನಿರ್ಣಯಿಸಲಾಗುತ್ತದೆ. ಕಡಿಮೆ ಫೆರಿಟಿನ್ ಮಟ್ಟವು ಕಬ್ಬಿಣದ ಕೊರತೆಯನ್ನು ಸೂಚಿಸುತ್ತದೆ.
- ಮೂಳೆ ಮಜ್ಜೆ ಮಾದರಿಯ ಪರೀಕ್ಷೆ
ಮೇಲೆ ಹೇಳಿದ ಪರೀಕ್ಷೆಯಲ್ಲಿನ ಫಲಿತಾಂಶಗಳಲ್ಲಿ ಅಸ್ಪಷ್ಟತೆ ಕಂಡುಬಂದರೆ, ಮೂಳೆ ಮಜ್ಜೆಯ ಮಾದರಿಯನ್ನು ತೆಗೆದುಕೊಂಡು ಪರೀಕ್ಷಿಸಲಾಗುತ್ತದೆ.
ಮುಂದುವರಿದ ದೇಶಗಳಲ್ಲಿ ಮತ್ತು ಅತ್ಯಾಧುನಿಕ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ರೆಟಿಕ್ಯುಲೋಸೈಟ್(ಬಾಲ ರಕ್ತಕಣ) ಎಣಿಕೆಗಳನ್ನು ನಡೆಸಲಾಗುತ್ತದೆ. ರೆಟಿಕ್ಯುಲೋಸೈಟ್ ಎಣಿಕೆಯು ಮೂಳೆ ಮಜ್ಜೆಯು ಎಷ್ಟು ಪ್ರಮಾಣದಲ್ಲಿ ಹೊಸ ಕೆಂಪು ರಕ್ತಕಣಗಳನ್ನು ಉತ್ಪಾದಿಸುತ್ತದೆ ಎಂಬುದರ ಪರೀಕ್ಷೆಯಾಗಿದೆ.
ರೋಗನಿದಾನ
[ಬದಲಾಯಿಸಿ]ರಕ್ತಹೀನತೆಯ ಕಾರಣ ಮತ್ತು ತೀವ್ರತೆಯನ್ನು ಅವಲಂಬಿಸಿ ರೋಗಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಬಾಯಿಯ ಮೂಲಕ ವಿಟಮಿನ್ ಗುಳಿಗೆಗಳನ್ನು ಅಥವಾ ಚುಚ್ಚುಮದ್ದಿನ ರೂಪದಲ್ಲಿ ಅತ್ಯಗತ್ಯ ಔಷಧಗಳನ್ನು ನೀಡಲಾಗುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ, ನಿಯಮಿತವಾಗಿ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸುವ ಮೂಲಕ ರಕ್ತಹೀನತೆಯಿಂದ ಪಾರಾಗಬಹುದು. ಕೆಲವೊಂದು ಚಿಕಿತ್ಸಾಕ್ರಮಗಳನ್ನು ಕೆಳಗೆ ವಿವರಿಸಲಾಗಿದೆ.
- ಪೌಷ್ಟಿಕಾಂಶಯುಕ್ತ ಆಹಾರ ಸೇವನೆ
ಬಹಳಷ್ಟು ಸಂದರ್ಭದಲ್ಲಿ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆಯಿಂದ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ಉತ್ತಮ ಆಹಾರದಿಂದ ಮಾತ್ರ ಸಾಧ್ಯ. ಹದಿಹರೆಯದವರಿಗೆ ಉತ್ತಮ ಪೌಷ್ಠಿಕಾಂಶಗಳುಳ್ಳ ಆಹಾರವನ್ನು ನೀಡಬೇಕು. ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ಅತ್ಯಗತ್ಯ. ರಕ್ತಹೀನತೆಗೆ ಪ್ರಮುಖ ಕಾರಣ ದೇಹದಲ್ಲಿ ಕಬ್ಬಿಣಾಂಶ ಕೊರತೆ. ಆದ್ದರಿಂದ ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಯಬಹುದು. ತರಕಾರಿ, ಸೊಪ್ಪು, ರಾಗಿ, ಮೊಳಕೆ ಕಟ್ಟಿದ ಕಾಳುಗಳು, ಬೆಲ್ಲ, ನೆಲ್ಲಿಕಾಯಿ, ಕಿತ್ತಳೆ ಹಣ್ಣು, ಮುಂತಾದವುಗಳ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ಹೊರೆಯುತ್ತದೆ[೨].
- ಜೀವಸತ್ವಗಳ ಪೂರೈಕೆ
ಬಿ-೧೨ ಜೀವಸತ್ವವು ಆರೋಗ್ಯಕರ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಬಿ-೧೨ ಜೀವಸತ್ವದ ಕೊರತೆಯು ಕೆಂಪು ರಕ್ತಕಣಗಳ ಬೆಳವಣಿಗೆ ಮತ್ತು ಕಾರ್ಯನಿರ್ವಹಣೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಆ ಮೂಲಕ ತಾತ್ಕಾಲಿಕ ರಕ್ತಹೀನತೆಗೆ ಕಾರಣವಾಗುತ್ತದೆ. ಬಿ-೧೨ ಜೀವಸತ್ವ ದೇಹವು ಮೈಲಿನ್(ನರಕೋಶವನ್ನು ಸುತ್ತುವರೆದಿರುವ ಒಂದು ರಕ್ಷಣಾತ್ಮಕ ಲೇಪನ) ಅನ್ನು ತಯಾರಿಸಲು ಸಹಾಯ ಮಾಡುತ್ತದೆ. ಬಿ-೧೨ ಜೀವಸತ್ವದ ಕೊರತೆಯಿಂದ ಈ ಪೊರೆಗೆ ಹಾನಿ ಉಂಟಾಗಬಹುದು[೩].
ಆಹಾರದಲ್ಲಿರುವ ಕಬ್ಬಿಣವನ್ನು ಕರುಳಿನಲ್ಲಿ ಹೀರಿಕೊಳ್ಳಲು (ಕಬ್ಬಿಣ ಕೆಂಪು ರಕ್ತ ಜೀವಕೋಶಗಳಲ್ಲಿರುವ ಹೀಮೋಗ್ಲೋಬಿನ್ ತಯಾರಿಕೆಗೆ ಅತ್ಯವಶ್ಯ) ಸಿ ಜೀವಸತ್ವವು ಸಹಾಯ ಮಾಡುತ್ತದೆ. ಇದರ ಕೊರತೆ ಆದಾಗ ಆಹಾರದಲ್ಲಿನ ಕಬ್ಬಿಣಾಂಶವು ರಕ್ತಕ್ಕೆ ಸೇರದೆ ಇರಬಹುದು. ಆ ಮೂಲಕ ರಕ್ತದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆ. ಹಣ್ಣುಗಳು, ಲಿಂಬೆ, ಕಿತ್ತಳೆ, ಮೋಸಂಬಿ, ಪೇರಲ, ಹಸಿರು ತರಕಾರಿಗಳಲ್ಲಿ ಯಥೇಚ್ಚ ಪ್ರಮಾಣದಲ್ಲಿ ಸಿ ಜೀವಸತ್ವ ಇರುವುದರಿಂದ ಇವುಗಳನ್ನು ಸೇವಿಸುವ ಮೂಲಕ ಸಿ ಜೀವಸತ್ವವನ್ನು ಪಡೆಯಬಹುದು.
- ಬಾಯಿಯ ಮೂಲಕ ಕಬ್ಬಿಣಾಂಶದ ಪೂರೈಕೆ
ಕಬ್ಬಿಣದ ಮಾತ್ರೆ(ಕಬ್ಬಿಣದ ಸಲ್ಫೇಟ್, ಕಬ್ಬಿಣದ ಫ್ಯೂಮರೇಟ್ ಅಥವಾ ಕಬ್ಬಿಣದ ಗ್ಲುಕೋನೇಟ್)ಅನ್ನು ಬಾಯಿಯ ಮೂಲಕ ಸೇವಿಸುವುದರಿಂದ ಕಡಿಮೆ ಗಂಭೀರತೆಯ ರಕ್ತಹೀನತೆಯನ್ನು ತಹಬಂದಿಗೆ ತರಬಹುದು. ಇವುಗಳನ್ನು ತೆಗೆದುಕೊಳ್ಳುವಾಗ, ಹೊಟ್ಟೆಯಲ್ಲಿ ಒಂದು ರೀತಿಯ ಕಿರಿಕಿರಿ ಉಂಟಗುವುದು ಅಥವಾ ಮಲವು ಕಪ್ಪಾಗುವುದು ಸಾಮಾನ್ಯವಾದ ಅಡ್ಡಪರಿಣಾಮವಾಗಿದೆ. ಇಂಥ ಸಂದರ್ಭದಲ್ಲಿ ಕಬ್ಬಿಣವನ್ನು ಆಹಾರದೊಂದಿಗೆ ತೆಗೆದುಕೊಳ್ಳುವ ಮೂಲಕ ಹೊಟ್ಟೆಯ ಸಮಸ್ಯೆಯನ್ನು ನಿವಾರಿಸಬಹುದು.
- ಚುಚ್ಚುಮದ್ದಿನ ಮೂಲಕ
ಬಾಯಿಯ ಮೂಲಕ ಕೊಡಲಾಗುವ ಔಷಧಗಳ ಪ್ರಭಾವ ಕಡಿಮೆ ಎನಿಸಿದಾಗ ಅಥವಾ ಗಂಭೀರ ಪರಿಸ್ಥಿತಿಯ ರಕ್ತಹೀನತೆಗೆ ಇವು ಸಾಲದಾದಾಗ, ಔಷಧವನ್ನು ಚುಚ್ಚುಮದ್ದಿನ ಮೂಲಕ ಪೂರೈಸಲಾಗುತ್ತದೆ. ಗಂಭೀರವಾದ ರಕ್ತಹೀನತೆ ಇರುವ ಸಂದರ್ಭದಲ್ಲಿ, ರೋಗಿಯು ೧,೦೦೦ ಮಿಲಿಗ್ರಾಂಗಿಂತ ಹೆಚ್ಚಿನ ಕಬ್ಬಿಣದ ಕೊರತೆಯನ್ನು ಹೊಂದಿರಬಹುದು. ಇಂತಹ ಪರಿಸ್ಥಿತಿಯನ್ನು ಸುಧಾರಿಸಲು, ಅಂದರೆ ರಕ್ತದಲ್ಲಿ ಕಬ್ಬಿಣಾಂಶದ ಮಟ್ಟವನ್ನು ಮರಳಿ ಮೊದಲಿನ ಸ್ಥಿತಿಗೆ ತರಲು ಹಲವಾರು ತಿಂಗಳುಗಳೇ ಬೇಕಾಗಬಹುದು.
ಚುಚ್ಚುಮದ್ದಿನ ಮೂಲಕ ಕೊಡಲಾಗುವ ಮದ್ದಿನಿಂದ, ರಕ್ತದಲ್ಲಿ ಕಬ್ಬಿಣಾಂಶವನ್ನು ತ್ವರಿತವಾಗಿ ಸಹಜ ಸ್ಥಿತಿಗೆ ತರಬಹುದು. ಪ್ರಸವಾನಂತರದ ರಕ್ತಸ್ರಾವ ಮಾತ್ರವಲ್ಲದೆ ಉರಿಯೂತದ ಕರುಳಿನ ಕಾಯಿಲೆ, ಮತ್ತು ದೀರ್ಘಕಾಲದ ಹೃದಯದ ಖಾಯಿಲೆ ಇರುವವರಿಗೂ ಸಹ ಈ ಚಿಕಿತ್ಸೆ ಪರಿಣಾಮಕಾರಿಯಾಗಿದೆ[೪].
ಅಂಕಿಅಂಶಗಳು
[ಬದಲಾಯಿಸಿ]ವಿಶ್ವ
[ಬದಲಾಯಿಸಿ]ವಿಶ್ವದ ಒಟ್ಟು ಜನಸಂಖ್ಯೆಯ ೨೭ ಪ್ರತಿಶತ ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಅದರಲ್ಲೂ ಆಫ್ರಿಕಾ ದೇಶದ ೫ ವರ್ಷದೊಳಗಿನ ಮಕ್ಕಳಲ್ಲಿ ೬೦% ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಪೌಷ್ಟಿಕತೆ. ೨೦೧೯ರಲ್ಲಿ ತಿಳಿದುಬಂದಂತೆ, ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆಯ ಹರಡುವಿಕೆಯು ೨೯.೯% ಆಗಿತ್ತು. ಮತ್ತು ಈ ಪ್ರಮಾಣ ಗರ್ಭಿಣಿ ಮಹಿಳೆಯರಲ್ಲಿ ೩೬.೫% ಇತ್ತು. ಇದೇ ಸಮಯದಲ್ಲಿ ರಕ್ತಹೀನತೆಯ ಹರಡುವಿಕೆಯು ೬-೫೯ ತಿಂಗಳ ವಯಸ್ಸಿನ ಮಕ್ಕಳಲ್ಲಿ ೩೯.೮%ರಷ್ಟಿತ್ತು[೫].
ಭಾರತ
[ಬದಲಾಯಿಸಿ]ಭಾರತದಲ್ಲಿ ರಕ್ತಹೀನತೆ ಹೆಚ್ಚಿನ ಪ್ರಮಾಣದಲ್ಲಿದೆ. ಒಟ್ಟು ಜನಸಂಖ್ಯೆಯ 58.6% ಮಕ್ಕಳು, 53.2% ಮಹಿಳೆಯರು ಮತ್ತು 50.4% ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಕಂಡುಬಂದಿದೆ[೬]. ಭಾರತ ಸರ್ಕಾರವು ೨೦೧೯ರಿಂದ ೨೦೨೧ರವರೆಗೆ ೫ನೇ ಆವೃತ್ತಿಯ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು ನಡೆಸಿತು. ಒಟ್ಟು ಎರಡು ಹಂತಗಳಲ್ಲಿ(ಮೊದಲ ಹಂತ- 17 ಜೂನ್ 2019 ರಿಂದ 30 ಜನವರಿ 2020. ಎರಡನೇ ಹಂತ 2 ಜನವರಿ 2020 ರಿಂದ 30 ಏಪ್ರಿಲ್ 2021 ರವರೆಗೆ) ಈ ಸಮೀಕ್ಷೆಯನ್ನು ನಡೆಸಲಾಯಿತು. 636,699 ಕುಟುಂಬಗಳ 724,೧೧೫ ಮಹಿಳೆಯರು, ೧೦೧,೮೩೯ ಪುರುಷರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ 6 ರಿಂದ 59 ತಿಂಗಳ ವಯಸ್ಸಿನ ಮಕ್ಕಳು ಮತ್ತು 15 ರಿಂದ 49 ವರ್ಷ ವಯಸ್ಸಿನ ಮಹಿಳೆಯರು ಮತ್ತು ಪುರುಷರು[೭]. ಈ 22 ರಾಜ್ಯಗಳು ಮತ್ತು ಯುಟಿಗಳಲ್ಲಿ 15 ರಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅದೇ ರೀತಿ, ಈ 14 ರಾಜ್ಯಗಳು ಮತ್ತು ಯುಟಿಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ರಕ್ತಹೀನತೆ ಹೊಂದಿರುವ ಮಕ್ಕಳು ಮತ್ತು ಮಹಿಳೆಯರ ಪ್ರಮಾಣವು ಲಕ್ಷದ್ವೀಪ, ಕೇರಳ, ಮೇಘಾಲಯ, ಮಣಿಪುರ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ನಲ್ಲಿ ತುಲನಾತ್ಮಕವಾಗಿ ಕಡಿಮೆಯಾಗಿದೆ ಮತ್ತು ಲಡಾಖ್, ಗುಜರಾತ್, ಜೆ & ಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನದಾಗಿದೆ[೮].
ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷರಲ್ಲಿ ರಕ್ತಹೀನತೆಯು ಶೇಕಡಾ 30 ಕ್ಕಿಂತ ಕಡಿಮೆಯಿತ್ತು.[೯].
ಉಲ್ಲೇಖಗಳು
[ಬದಲಾಯಿಸಿ]- ↑ https://www.medicinenet.com/hemoglobin/article.htm
- ↑ "ರಕ್ತಹೀನತೆ ಸಮಸ್ಯೆ ನಿಯಂತ್ರಿಸುವ ಪವರ್ ಈ ನೈಸರ್ಗಿಕ ಆಹಾರದಲ್ಲಿ ಅಡಗಿದೆ!". vijaykarnataka.com. ವಿಜಯ ಕರ್ನಾಟಕ ಆನ್‍ಲೈನ್. Retrieved 3 April 2022.
- ↑ "Vitamins C & B12". healthyeating.sfgate.com. SFGATE. Archived from the original on 28 ಮೇ 2022. Retrieved 3 April 2022.
- ↑ "Iron therapy for preoperative anaemia". ncbi.nlm.nih.gov. National Center for Biotechnology Information, U.S. National Library of Medicine. Retrieved 3 April 2022.
- ↑ "Anaemia in women and children". WHO.INT. WHO. Retrieved 3 April 2022.
- ↑ "Improve Women's Education, Health Services To Reduce India's Anaemia Burden, World's Highest". indiaspend.com. Swagata Yadavar. Retrieved 3 April 2022.
- ↑ "NFHS-5 FACT SHEETS FOR KEY INDICATORS BY INDIA AND STATE/UTs" (PDF). rchiips.org. National Family Health Survey, India. Archived from the original (PDF) on 21 ಜನವರಿ 2022. Retrieved 3 April 2022.
- ↑ "Explained: Why are more than half of India's children, women anaemic?". indianexpress.com. Indian Express. Retrieved 3 April 2022.
- ↑ "Explained: Why are more than half of India's children, women anaemic?". indianexpress.com. Indian Express. Retrieved 3 April 2022.