ವಿಷಯಕ್ಕೆ ಹೋಗು

ಭವಿಷ್ಯವಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭವಿಷ್ಯವಾಣಿ ಅಥವಾ ಮುನ್ಸೂಚನೆಯು ಅನಿಶ್ಚಿತ ಘಟನೆ ಬಗ್ಗೆ ಒಂದು ಹೇಳಿಕೆ. ಇದು ಹಲವುವೇಳೆ (ಆದರೆ ಯಾವಾಗಲೂ ಅಲ್ಲ) ಅನುಭವ ಅಥವಾ ಜ್ಞಾನದ ಮೇಲೆ ಆಧಾರಿತವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಭವಿಷ್ಯದ ಬಗ್ಗೆ ಖಾತರಿಯಾದ ನಿಖರ ಮಾಹಿತಿಯು ಅಸಂಭವವಾದರೂ, ಭವಿಷ್ಯವಾಣಿಯು ಸಂಭಾವ್ಯ ಬೆಳವಣಿಗೆಗಳ ಬಗ್ಗೆ ಯೋಜನೆಗಳನ್ನು ಮಾಡಲು ನೆರವಾಗಲು ಉಪಯುಕ್ತವಾಗಬಹುದು; ವ್ಯಾಪಾರದಲ್ಲಿ ಭವಿಷ್ಯವಾಣಿಯು "... ಕನಿಷ್ಠಪಕ್ಷ ಎರಡು ವಿಷಯವಾಗಿರುತ್ತದೆ: ಮುಖ್ಯ ಹಾಗೂ ಕಠಿಣ" ಎಂದು ಹೊವರ್ಡ್ ಸ್ಟೀವನ್‍ಸನ್ ಬರೆಯುತ್ತಾರೆ.[]

ಸಂಖ್ಯಾಸಂಗ್ರಹಣಶಾಸ್ತ್ರದಲ್ಲಿ, ಭವಿಷ್ಯವಾಣಿಯು ಸಂಖ್ಯಾಶಾಸ್ತ್ರೀಯ ಅನುಮಾನದ ಭಾಗವಾಗಿದೆ. ಅಂತಹ ಅನುಮಾನದ ಒಂದು ನಿರ್ದಿಷ್ಟ ವಿಧಾನವನ್ನು ಭವಿಷ್ಯಸೂಚಕ ಅನುಮಾನ ಎಂದು ಕರೆಯಲಾಗುತ್ತದೆ, ಆದರೆ ಭವಿಷ್ಯವಾಣಿಯನ್ನು ಸಂಖ್ಯಾಶಾಸ್ತ್ರೀಯ ವಿಧಾನಗಳ ಹಲವಾರು ವಿಧಾನಗಳ ಪೈಕಿ ಯಾವುದರಲ್ಲಾದರೂ ಕೈಗೊಳ್ಳಬಹುದು. ವಾಸ್ತವವಾಗಿ, ಸಂಖ್ಯಾಸಂಗ್ರಹಣ ಶಾಸ್ತ್ರದ ಒಂದು ಸಂಭಾವ್ಯ ವಿವರಣೆ ಎಂದರೆ ಅದು ಜನಸಂಖ್ಯೆಯ ಒಂದು ಮಾದರಿ ಬಗ್ಗೆಗಿನ ಜ್ಞಾನವನ್ನು ಇಡೀ ಜನಸಂಖ್ಯೆಗೆ, ಮತ್ತು ಇತರ ಸಂಬಂಧಿತ ಜನಸಂಖ್ಯೆಗಳಿಗೆ ವರ್ಗಾಯಿಸುವ ಸಾಧನವನ್ನು ಒದಗಿಸುತ್ತದೆ ಎಂದು. ಇದು ಅಗತ್ಯವಾಗಿ ಕಾಲಾಂತರದ ಭವಿಷ್ಯವಾಣಿಗೆ ಸಮಾನವಲ್ಲ. ಮಾಹಿತಿಯನ್ನು ಕಾಲಾಂತರದಲ್ಲಿ, ಹಲವುವೇಳೆ ಕಾಲದಲ್ಲಿನ ನಿರ್ದಿಷ್ಟ ಬಿಂದುಗಳಿಗೆ ವರ್ಗಾಯಿಸಿದಾಗ, ಪ್ರಕ್ರಿಯೆಯನ್ನು ಮುನ್ಸೂಚನೆ ಎಂದು ಕರೆಯಲಾಗುತ್ತದೆ. ಮುನ್ಸೂಚನೆಗೆ ಸಾಮಾನ್ಯವಾಗಿ ಕಾಲ ಸರಣಿ ವಿಧಾನಗಳು ಬೇಕಾಗುತ್ತದೆ, ಆದರೆ ಭವಿಷ್ಯವಾಣಿಯನ್ನು ಹಲವುವೇಳೆ ಅಡ್ಡ-ಛೇದದ ದತ್ತದ ಮೇಲೆ ಮಾಡಲಾಗುತ್ತದೆ.

ವಿಜ್ಞಾನದಲ್ಲಿ, ಭವಿಷ್ಯವಾಣಿಯು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಏನಾಗುವುದೆಂದು ಮುಂದಾಗಿ ಹೇಳುವ ಒಂದು ಕಠಿಣ, ಹಲವುವೇಳೆ ಪರಿಮಾಣಾತ್ಮಕವಾದ ಹೇಳಿಕೆಯಾಗಿರುತ್ತದೆ; ಉದಾಹರಣೆಗೆ, ಒಂದು ಸೇಬಿನ ಹಣ್ಣು ಮರದಿಂದ ಬಿದ್ದರೆ ಅದು ಗುರುತ್ವದ ಕಾರಣ ಭೂಮಿಯ ಕೇಂದ್ರದ ಕಡೆಗೆ ನಿರ್ದಿಷ್ಟ ಮತ್ತು ಸ್ಥಿರ ವೇಗೋತ್ಕರ್ಷದಿಂದ ಆಕರ್ಷಿಸಲ್ಪಡುವುದು. ವೈಜ್ಞಾನಿಕ ವಿಧಾನವು ವೈಜ್ಞಾನಿಕ ಸಿದ್ಧಾಂತಗಳ ತಾರ್ಕಿಕ ಪರಿಣಾಮಗಳಾದ ಪರೀಕ್ಷಾತ್ಮಕ ಹೇಳಿಕೆಗಳ ಮೇಲೆ ನಿರ್ಮಿಸಲ್ಪಟ್ಟಿರುತ್ತದೆ. ಇದನ್ನು ಪುನರಾವರ್ತಿಸಬಲ್ಲ ಪ್ರಯೋಗಗಳು ಅಥವಾ ಅವಲೋಕನಾ ಅಧ್ಯಯನಗಳ ಮೂಲಕ ಮಾಡಲಾಗುತ್ತದೆ.

ಅವಲೋಕನಗಳು ಮತ್ತು ಸಾಕ್ಷ್ಯಾಧಾರದಿಂದ ಅಲ್ಲಗಳೆಯಲ್ಪಟ್ಟ ವೈಜ್ಞಾನಿಕ ಸಿದ್ಧಾಂತವನ್ನು ತಿರಸ್ಕರಿಸಲಾಗುತ್ತದೆ. ಅನೇಕ ಹೊಸ ಭವಿಷ್ಯವಾಣಿಗಳನ್ನು ಉತ್ಪತ್ತಿಮಾಡುವ ಹೊಸ ಸಿದ್ಧಾಂತಗಳನ್ನು ಹೆಚ್ಚು ಸುಲಭವಾಗಿ ಬೆಂಬಲಿಸಬಹುದು ಅಥವಾ ತಪ್ಪಾಗಿಸಬಹುದು. ಪರೀಕ್ಷಿಸಲಾಗದಂಥ ಭವಿಷ್ಯವಾಣಿಗಳನ್ನು ಮಾಡುವ ಕಲ್ಪನೆಗಳು ಸಾಮಾನ್ಯವಾಗಿ ವಿಜ್ಞಾನದ ಭಾಗವಾಗಿರುವುದಿಲ್ಲ ಎಂದು ಪರಿಗಣಿಸಲ್ಪಡುತ್ತವೆ, ಎಲ್ಲಿಯವರೆಗೆಂದರೆ ಪರೀಕ್ಷಿಸಬಹುದಂಥ ಭವಿಷ್ಯವಾಣಿಗಳನ್ನು ಮಾಡುವವರೆಗೆ. ಸ್ಥಾಪಿತ ವಿಜ್ಞಾನವು ಹಲವುವೇಳೆ ಬಹಳ ವಿಶ್ವಾಸಾರ್ಹ ಮತ್ತು ನಿಖರವಾದ ಉಪಯುಕ್ತ ಭವಿಷ್ಯವಾಣಿಗಳನ್ನು ಮಾಡುತ್ತದೆ; ಉದಾಹರಣೆಗೆ, ಗ್ರಹಣಗಳನ್ನು ವಾಡಿಕೆಯಾಗಿ ಮುಂದಾಗಿ ಹೇಳಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Stevenson, Howard, ed. Do lunch or be lunch. Boston: Harvard Business School Press, 1998

ದಿನ ಭವಿಷ್ಯ ಸುದ್ದಿ ಅಥವಾ ಈ ದಿನದ ಭವಿಷ್ಯವಾಣಿಯನ್ನು ಇಲ್ಲಿ ತಿಳಿದುಕೊಳ್ಳಬಹುದು