ಬಂಟ್ವಾಳ ನರಸಿಂಹ ಲಕ್ಷುಮಣ ಗಣಪತಿ ಬಾಳಿಗಾ
ಬಂಟ್ವಾಳ ನರಸಿಂಹ ಲಕ್ಷುಮಣ ಗಣಪತಿ ಬಾಳಿಗಾ (ಜನನ-೨೨ ಮಾರ್ಚ್ ೧೯೦೫ ಮತ್ತು ಮರಣ- ೧೫ ಸೆಪ್ಟಂಬರ್ ೧೯೬೪) ಇವರು ಬಂಟ್ವಾಳದಲ್ಲಿ ದೀಗ ನರಸಿಂಹ ಬಾಳಿಗಾ, ಮಗ್ಗಾ ನರಸಿಂಹ ಬಾಳಿಗಾ, ನಾಟಕಾ ನರಸಿಂಹ ಬಾಳಿಗಾ, ಎನ್.ಎಲ್. ಬಂಟ್ವಾಳಕಾರ್ ಎಂಬ ಹೆಸರುಗಳಲ್ಲಿ ಪ್ರಖ್ಯಾತರಾಗಿದ್ದರು. ಇವರು ಬಂಟ್ವಾಳದ ಪ್ರಖ್ಯಾತ ಬಾಳಿಗಾ ಕುಟುಂಬದ ಆಗರ್ಭ ಶ್ರೀಮಂತರಾದ ಗಣಪತಿ ದಾಂ ಬಾಳಿಗಾ ಮತ್ತು ಶ್ರೀದೇವಿ ಯಾನೆ ಸತ್ಯಭಾಮಾ ಇವರ ದ್ವಿತೀಯ ಪುತ್ರ ಲಕ್ಷುಮಣ ಬಾಳಿಗಾ ಮತ್ತು ಪದ್ಮಾವತಿ ಇವರ ಕೊನೆಯ ಮಗನಾಗಿ ೧೯೦೫ ಮಾರ್ಚ್ ೨೨ ರಂದು ಜನಿಸಿದರು. ಇವರ ಪ್ರಾರ್ಥಮಿಕ ವಿದ್ಯಾಭ್ಯಾಸವು ವೆಂಕಟರಮಣ ದೇವಳದ ಶಾಲೆಯಲ್ಲಿ ಪ್ರಾರಂಭವಾಯಿತು. ಹಲವಾರು ಕಾರಣಗಳಿಂದ ಅವರಿಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದೇ ೭ನೇ ತರಗತಿಗೆ ಮುಕ್ತಾಯಗೊಳಿಸಬೇಕಾಯಿತು.
ವೈವಾಹಿಕ ಜೀವನ
[ಬದಲಾಯಿಸಿ]ಇವರ ವಿವಾಹವು ಬಂಟ್ವಾಳದಲ್ಲಿಯೇ ನೆಲೆಸಿರುವ ಗುರುಪುರ್ ವೆಂಕಟ್ರಾಯ ಪ್ರಭುರವರ ಹಿರಿಯ ಪುತ್ರಿ ರಮಾ ಇವರೊಂದಿಗೆ ೧೯೨೫ ರಂದು ದೇವಳದ ಶಾಲೆಯ ಪಕ್ಕದಲ್ಲಿರುವ ತಮ್ಮ ಸ್ವಗೃಹದಲ್ಲಿ ಬಹಳ ವಿಜೃಂಬಣೆಯಿಂದ ನೆರವೇರಿತು. ೧೯೨೬ರಲ್ಲಿ ಮೊದಲ ಗಂಡು ಮಗು ಜನನವಾಯಿತು. ಅದಕ್ಕೆ ವೈಕುಂಠ ಎಂದು ನಾಮಕರಣ ಮಾಡಿದರು. ನಂತರ ೧೯೩೧ರಂದು ಹೆಣ್ಣು ಮಗುವಿನ ಜನನವಾಯಿತು. ಅದೇ ಸಮಯದಲ್ಲಿ ಭಾರತ ಸ್ವಾತಂತ್ರ್ಯಸಂಗ್ರಾಮವು ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದು ಇವರು ಕೂಡ ಇದರಲ್ಲಿ ಭಾಗವಹಿಸಿರುವ ಕಾರಣ ದೇಶದ ಮೇಲಿನ ಅಭಿಮಾನದಿಂದ ಮಗುವಿಗೆ ಭಾರತಿ ಎಂದು ಹೆಸರಿಡಲಾಯಿತು. ಮುಂದೆ ಮಹಾತ್ಮಾ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ೧೯೩೦-೩೨ರ ನಡುವಿನ ಸಮಯದಲ್ಲಿ ಜೈಲುವಾಸವನ್ನು ಕೂಡಾ ಅನುಭವಿಸಿದರು. ಅದೇ ಸಮಯದಲ್ಲಿ ಅಂದರೆ ೧೯೩೨ರಂದು ಗಂಡು ಮಗುವಿನ ಜನನವಾಯಿತು. ಅದಕ್ಕೆ ಗಾಂಧೀಜಿಯವರ ಹೆಸರಾದ ಮೋಹನದಾಸ ಎಂಬುದಾಗಿ ಇಡಲಾಯಿತು. ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿ ವ್ಯವಹಾರ ಹಾಗೂ ಸಂಸಾರವನ್ನು ಕಡೆಗಣಿಸಿ ತುಂಬಾ ಕಷ್ಟ,ನಷ್ಟಗಳನ್ನು ಅನುಭವಿಸಿದರು. ೧೯೩೮ರಲ್ಲಿ ರತ್ನಾ ಎಂಬ ಹೆಣ್ಣು ಮಗುವಿನ ಜನನವಾಯಿತು, ಹೀಗೆ ನಂತರ ಕ್ರಮವಾಗಿ ೧೯೪೨ ಲಕ್ಷ್ಮಣ,೧೯೪೪ (ಯಶವಂತ)ವೆಂಕಟ್ರಾಯ,೧೯೪೭ ವಾಮನ,೧೯೪೯ ನಿರ್ಮಲಾ ಹಾಗೂ ೧೯೫೩ರಲ್ಲಿ ನಾಗವೇಣಿಯ ಜನನವಾಯಿತು. ಹೀಗೆ ತುಂಬು ಸಂಸಾರ.
ಸ್ವಾತಂತ್ರ್ಯ ಹೋರಾಟಗಾರ
[ಬದಲಾಯಿಸಿ]೧೯೨೮ರಿಂದ ಸ್ವಾತಂತ್ರ್ಯ ಚಳುವಳಿಯ ಕಡೆಗೆ ಗಮನಹರಿಸಲಾರಂಬಿಸಿದರು. ಮಹಾತ್ಮಾ ಗಾಂಧೀಜಿಯವರು ಕರೆಕೊಟ್ಟ ಎಲ್ಲಾ ಚಳುವಳಿಗಳಲ್ಲಿ ಭಾಗವಹಿಸಿ ಜೈಲುವಾಸವನ್ನು ಅನುಭವಿಸಿದರು. ನಂತರ ಬಂದ ಕಷ್ಟ ನಷ್ಟಗಳನ್ನು ಸಹಿಸಲಾಗದೆ ತನ್ನ ಹಿರಿಯಕ್ಕ ಯಶೋದಾರವರನ್ನು ಬೊಂಬಾಯಿಗೆ (ಈಗಿನ. ಮುಂಬಯಿ)ಹಡಗಿನಲ್ಲಿ ಕಳುಹಿಸಲು ಬಂದವರು ಯಾರಿಗೂ ತಿಳಿಸದೆ ತಾವೂ ಮುಂಬಯಿಗೆ ಪಲಾಯನ ಮಾಡಿದರು. ಅಲ್ಲಿ ಸುಮಾರು ಮೂರು ವರುಷ ತುಂಬಾ ಕಷ್ಟದ ಜೀವನವನ್ನು ನಡೆಸಿ ೧೯೪೧ರಲ್ಲಿ ಬಂಟ್ವಾಳಕ್ಕೆ ಹಿಂತಿರುಗಿದರು. ಬಂಟ್ವಾಳಕ್ಕೆ ಹಿಂತಿರುಗಿದ ನಂತರ ಮುಂಬಯಿಯಲ್ಲಿರುವಾಗ ಕೆಲಸ ಮಾಡಿದ ಜವುಳಿ ಅಂಗಡಿಯ ಶೇಟ್ ಇವರ ಆರ್ಥಿಕ ಸಹಾಯದಿಂದ ಬಂಟ್ವಾಳದಲ್ಲಿ ಅವರ ಹೆಸರಿನಲ್ಲಿ ವ್ಯಾಪಾರವನ್ನು ಪ್ರಾರಂಭಿಸಿದರು. ಇದರಲ್ಲಿ ಕೂಡಾ ನಷ್ಟ ಅನುಭವಿಸಿ, ಮಂಗಳೂರಿನ ಸ್ವದೇಶೀ ಸ್ಟೋರ್ಸ್ ನ ಮಾಲಕ ತನ್ನ ಪತ್ನಿಯ ತಂದೆಯ ಸಹೋದರರ ಮಗನಾದ ಗುರುಪುರ್ ಮುಕುಂದ ಪ್ರಭುರವರ ಸಹಾಯದಿಂದ ಖಾದಿ ಭಂಡಾರವನ್ನು ಪ್ರಾರಂಭಿಸಿದರು. ಸ್ವಾತಂತ್ರ್ಯ ಹೋರಾಟದ ಒಂದು ಅಂಗವಾದ ಸ್ವದೇಶೀ ಚಳುವಳಿಗಾಗಿ ಮನೆಮನೆಗಳಲ್ಲಿ ಖಾದಿಯ ನೂಲನ್ನು ನೇಯಲು ಅಗತ್ಯವಾದ ಚರಕವನ್ನು ತಯಾರಿಸಲು ಮಗ್ಗದ ಕೈಗಾರಿಕಾ ಘಟಕವನ್ನು ಬಂಟ್ವಾಳದ ಭಂಡಾರಿಬೆಟ್ಟಿನಲ್ಲಿರುವ ದೇವಳದ ಖಾಲಿ ಇರುವ ಕಟ್ಟಡವನ್ನು ಉಪಯೋಗಿಸಿದರು. ಈಗಲೂ ಆ ಕಟ್ಟಡವನ್ನು ಮಗ್ಗಾ ಶಾಲೆಯೆಂಬುದಾಗಿ ಕರೆಯಲ್ಪಡುತ್ತದೆ. ಅಲ್ಲಿಯೂ ನಷ್ಟವಾಗಿ ನಂತರ ಬಂಟ್ವಾಳದಲ್ಲಿ ಪ್ರಾರಂಭಿಸಿದ ಬಂಟ್ವಾಳ ಟೌನ್ ಬ್ಯಾಂಕಿನಲ್ಲಿ ಕಾರ್ಯದರ್ಶಿಯಾಗಿ ಜವಾಬ್ದಾರಿಯುತ ಹುದ್ದೆಯನ್ನು ವಹಿಸಿಕೊಂಡರು. ಇಲ್ಲಿ ಹಲವಾರು ವರುಷಗಳ ಕೆಲಸವನ್ನು ನಿರ್ವಹಿಸಿ ಅನಾರೋಗ್ಯದ ಕಾರಣ ಉದ್ಯೋಗವನ್ನು ಬಿಡಬೇಕಾಯಿತು. ಬಹಳ ನಿಷ್ಠುರವಾದಿಯಾದ ಇವರು ಲಂಚವನ್ನು ಕೊಡಲು ನಿರಾಕರಿಸಿದ ಕಾರಣ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುವ ಪಿಂಚಣಿಯಾಗಲೀ ಹತ್ತು ಎಕರೆ ಜಾಗವಾಗಲೀ ತಾನು ಬದುಕಿರುವ ವರೆಗೆ ಸಿಗಲಿಲ್ಲಾ. ಶ್ರೀಯುತ ವೈಕುಂಠ ಬಾಳಿಗರು ಚುನಾವಣೆಗೆ ಬೆಳ್ತಂಗಡಿ ಕ್ಷೇತ್ರದಿಂದ ನಿಂತಾಗ ಪ್ರಚಾರದ ಕೆಲಸದಲ್ಲಿ ಭಾಗವಹಿಸುವುದಿಲ್ಲಾ ಎಂದು ಹೇಳಿದನ್ನು ಕೇಳಿದ ಶ್ರೀ ವೈಕುಂಠ ಬಾಳಿಗರು ಮನೆಗೆ ಬಂದಾಗ ತಾನು ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ಮಾಡಿದ ಶಪಥದ ಪ್ರಕಾರ ಯಾರಿಗೂ ಲಂಚವನ್ನು ಕೊಡದ ಕಾರಣ ತನಗೆ ಸಿಗಬೇಕಾದ ಪಿಂಚಣಿ ಹಾಗೂ ಜಾಗ ಸಿಗದ ವಿಷಯವನ್ನು ಅವರಲ್ಲಿ ಹೇಳಿದಾಗ ಅವರಿಂದ ಮಾಡಿಸಿಕೊಡುವ ಆಶ್ವಾಸನೆಯನ್ನು ಪಡೆದು ಅವರ ಪರವಾಗಿ ಪ್ರಚಾರಕ್ಕೆ ಪ್ರಾರಂಭಿಸಿದರು. ಶ್ರೀಯುತ ವೈಕುಂಠ ಬಾಳಿಗಾರವರು ತಾನು ಕೊಟ್ಟ ಮಾತಿನ ಪ್ರಕಾರ ಪಿಂಚಣಿ ಹಾಗೂ ಜಾಗವನ್ನು ಮಂಜೂರು ಮಾಡಿಸಿದರು. ಆದರೆ ಜಾಗವನ್ನು ಅಳೆದು ಕೊಡುವ ಉಗ್ರಾಣಿಗೆ ರೂಪಾಯಿ ಐದನ್ನು ಕೊಡಲೊಪ್ಪದ ಕಾರಣ ಜಾಗ ಕೈಗೆ ಸಿಗಲಿಲ್ಲಾ. ಸಾಯುವ ತನಕ ಪಿಂಚಣಿಯೂ ಸಿಗಲಿಲ್ಲಾ. ನಂತರ ಅವರ ಪತ್ನಿಗೆ ಪಿಂಚಣಿ ಸಿಗಲಾರಂಭಿಸಿತು.