ನಂದಳಿಕೆ
ನಂದಳಿಕೆ ಗ್ರಾಮವು ಕರ್ನಾಟಕ ರಾಜ್ಯದ ಕಾರ್ಕಳ ತಾಲೂಕಿನ ಉಡುಪಿ ಜಿಲ್ಲೆಯಲ್ಲಿದೆ. ಕಾರ್ಕಳ ಪಟ್ಟಣದಿಂದ ೧೫ ಕಿ.ಮೀ ದೂರದಲ್ಲಿದ್ದು,ಬೆಳ್ಮಣ್ ಗ್ರಾಮದಿಂದ ೫ ಕಿ.ಮೀ ದೂರದಲ್ಲಿದೆ. ನಂದಳಿಕೆಯಲ್ಲಿ ಮಹಾಲಿಂಗೇಶ್ವರ ದೇವಾಲಯವು ಪ್ರಸಿದ್ಧ ಮತ್ತು ಇತಿಹಾಸವನ್ನು ಒಳಗೊಂಡಿದೆ.ಈ ದೇವಾಲಯದಲ್ಲಿ ಅಬ್ಬಗ-ದಾರಗ ಎಂಬ ಅವಳಿ ಮೂರ್ತಿಗಳನ್ನು, ಗಣೇಶ ಮತ್ತು ವಿಶೇಷವಾಗಿ ಮಹಾಲಿಂಗೇಶ್ವರ ದೇವರನ್ನು ಇಲ್ಲಿ ಆರಾಧಿಸಲಾಗುತ್ತದೆ.[೧]
ಹಿನ್ನೆಲೆ
[ಬದಲಾಯಿಸಿ]ಸತ್ಯ ಲೋಕದ ಬ್ರಹ್ಮನ ಸಭೆಯಲ್ಲಿ ಬ್ರಹ್ಮನು,ಹೊಸ ಕಥೆಯನ್ನು ಬರೆಯಬೇಕು, ವಿದ್ಯೆಯನ್ನು ಸತ್ಯ ಲೋಕವೂ ನೋಡಬೇಕೆನ್ನುವ ಉದ್ದೇಶದಿಂದ ಸಪ್ತಮಾತೃಕೆ ಯರನ್ನು ನಾಟ್ಯವಾಡಲು ಸಭೆಗೆ ಆಹ್ವಾನಿಸುತ್ತಾನೆ. ಸಪ್ತ ಮಾತೃಕೆ ಯರು ಮತ್ತ ರಾಗಿ ನಾಟ್ಯವಾಡುತ್ತಾರೆ. ಬ್ರಹ್ಮ ಕುಪಿತನಾಗಿ ನೀವು ಭೂಮಿಯಲ್ಲಿ ಮರ್ತ್ಯ ರಾಗಿ ಜನಿಸಿ ಎಂದು ಮುನಿಸಿಂದ ನುಡಿದ. ಮಾತೃಕೆಯರು ಭಕ್ತಿಯಿಂದ ಕ್ಷಮೆ ಯಾಚಿಸಿದರು, ಆಗ ಬ್ರಹ್ಮನು ಭೂಮಿಯಲ್ಲಿ ಜನಿಸಿ ಸತ್ಯದೈವಗಳಾಗಿ ಭಕ್ತರನ್ನು ಸಲಹಿ ಎಂದು ವರವಿತ್ತನು.ಅನಂತರ ದಲ್ಲಿ ಮೆರೆದವರು ಸಿರಿ, ಅಬ್ಬಗ ದಾರಗ, ಸೊನ್ನೆ.
ಬೆಳ್ಮಣ್ಣು, ನಂದಳಿಕೆಯ ನೆರೆ ಗ್ರಾಮದಲ್ಲಿ ಶ್ರೀಮಂತ ಬ್ರಾಹ್ಮಣ ವಾಸಗೃಹವಾದ ಮಡುಕು ಮನೆಯ ಭಟ್ಟರ ಮಡದಿಗೆ 9 ತಿಂಗಳು. ಮಡದಿಗೆ ತಂದೇವಿನ ಮರದೆಲೆಯಲ್ಲಿ ಅಕ್ಕಿ ಹಿಟ್ಟಿಟ್ಟು ಮಡಿಸಿ ಬೇಯಿಸಿದ ಗಟ್ಟಿ ಯನ್ನು ತಿನ್ನಬೇಕೆಂಬ ಆಸೆ ಹುಟ್ಟಿತು. ಮರುದಿನವೇ ಭಟ್ಟರು ತನ್ನ ಆಳನ್ನ ಕಾಡಿಗೆ ಎಲೆ ತರಲು ಕಳುಹಿಸಿದರು . ಆಳು ತಂದೇವಿನ ಎಲೆ ತರಲು ಹೋದಾಗ ಒಂದು ಮಾಯದ ಹೆಬ್ಬುಲಿಯು ತಂದೇವಿನ ಮರದ ಕೆಳಗೆ ಇದ್ದದ್ದು ಕಣ್ಣಿಗೆ ಬಿತ್ತು. ಭಯದಿಂದ ಅಲ್ಲೇ ಕುಳಿತ ಆಳು ಇನ್ನೇನು ಈ ಹುಲಿ ಅಲ್ಲಿಂದ ತೆರಳಬಹುದು ಎಂದು ಕಾದರೂ ಹುಲಿ ಅಲ್ಲಿಂದ ಕದಲಲಿಲ್ಲ. ಆಳು ಮಡುಕು ಮನೆಗೆ ತೆರಳಿ ಭಟ್ಟರಿಗೆ ವಿಷಯ ತಿಳಿಸಿದಾಗ ಭಟ್ಟರು ಕಾಡಿಗೆ ಆಗಮಿಸಿದರು.ಹುಲಿ ಅಲ್ಲೇ ಇತ್ತು, ಇದು ಸಾಮಾನ್ಯದ ಹುಲಿಯಲ್ಲ ಮಾಯದ ಹೆಬ್ಬುಲಿ ಎಂಬುದು ಭಟ್ಟರಿಗೆ ತಿಳಿಯಿತು. ನಂತರ ಭಟ್ಟರು ಹೆಬ್ಬುಲಿ ಗೆ ನನಗೆ ಹುಟ್ಟುವ ಮಗುವನ್ನ ನಿನಗೆ ಅರ್ಪಿಸುವೆ ದಯವಿಟ್ಟು ಇಲ್ಲಿಂದ ಹೊರಟು ಹೋಗು ಎಂದು ಪ್ರಾರ್ಥಿಸಿದರು. ಆ ಕ್ಷಣವೇ ಹೆಬ್ಬುಲಿ ಅಲ್ಲಿದ್ದ ಹೊರಟು ಹೋಯಿತು. ಮಡದಿಯ ಆಸೆಯಂತೆ ಮರದೆಲೆಯ ಗಟ್ಟಿಮಾಡಿ ತಿನಿಸಿದರು . ಭಟ್ಟರ ಮಡದಿ ಚಂದ್ರಾವತಿಯು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಮಡಕು ಮನೆಯ ಭಟ್ಟರು ಅಂದು ಮಾಯದ ಹೆಬ್ಬುಲಿ ಗೆ ಹೇಳಿದ ಹರಕೆಯನ್ನು ಮರೆತಿರುತ್ತಾರೆ. ನಂತರ ಒಂದು ದಿನ ಭಟ್ಟರು ಪ್ರೀತಿಯಿಂದ ಮಗುವನ್ನ ಲಾಲಿಸುತ್ತಾ ಅಂಗಳದಲ್ಲಿ ಮಲಗಿಸಿ ಅಲ್ಲಿಂದ ಕ್ಷಣ ಕಾಲಕ್ಕೆಂದು ಒಳಗೆ ತೆರಳಿರುತ್ತಾರೆ. ಹಿಂತಿರುಗಿ ಬಂದಾಗ ಮಗು ಅಲ್ಲಿ ಇರುವುದಿಲ್ಲ ಭಟ್ಟರು ಅದೆಷ್ಟು ಕಡೆ ಹುಡುಕಿದರೂ ಮಗು ಸಿಗಲಿಲ್ಲ.
ಶ್ರೀಮಂತ ಹೆಗ್ಗಡೆ ಕುಟುಂಬದಲ್ಲಿ ಇದ್ದ ಕಾನಬೆಟ್ಟುವಿನ ಚಂದು ಪೆರ್ಗಡೆಯವರು 'ಅಜ್ಜ'ನೆಂದು ಹೆಸರುವಾಸಿಯಾದವರು. ಅವರಿಗೆ 'ಸೊನ್ನೆ' ಎಂಬ ಹೆಸರಿನ ಮಗಳಿದ್ದಳು.ಕಾನಬೆಟ್ಟು ವಿನ ಐವರು ಹೆಂಗಸರು ಕಾಡಿಗೆ ತೆರಳಿ ಅಲ್ಲಿನ ತರಗೆಲೆಗಳನ್ನು ಸಂಗ್ರಹಣೆ ಮಾಡುವ ವೇಳೆಯಲ್ಲಿ ಮಗು ಅಳುವ ಶಬ್ದ ಕೇಳುತ್ತದೆ. ಆ ಮಗುವು ಮಾಯದ ಹೆಬ್ಬುಲಿಯೊಂದಿಗೆ ಇರುವುದನ್ನು ಕಂಡು ಭಯಭೀತರಾಗಿ ಚಂದು ಪೆರ್ಗಡೆ ಅಜ್ಜನಿಗೆ ವಿಷಯವನ್ನು ತಿಳಿಸುತ್ತಾರೆ.ಅಜ್ಜರು, ಅರಮನೆಯಿಂದ ಕಾಡಿಗೆ ಬಂದಾಗ ಮಾಯದ ಹೆಬ್ಬುಲಿಯನ್ನು ಮತ್ತು ಅದರ ಮುಂದಿರುವ ಮಗುವನ್ನು ನೋಡುತ್ತಾರೆ. ಮಾಯದ ಹೆಬ್ಬುಲಿ ಗೆ ಪ್ರಾರ್ಥಿಸಿ, ಅಲ್ಲಿಂದ ಮಗುವನ್ನು ತನ್ನ ಅರಮನೆಗೆ ಕೊಂಡೊಯುತ್ತಾರೆ. ನಂತರ ಹೆಣ್ಣು ಮಗುವನ್ನು ಅಜ್ಜ ಸಾಕಿ ಸಲಹುತ್ತಾರೆ. ಆ ಮಗುವಿಗೆ 'ಗಿಂಡಿ ' ಎಂಬ ಹೆಸರಿಟ್ಟರು. ತನ್ನ ಮಗು 'ಸೊನ್ನೆ'ಗೆ ತಂಗಿಯಾಗಿ 'ಗಿಂಡಿ' ಯೂ ಆ ಮನೆಯಲ್ಲಿ ಒಬ್ಬಳಾದಳು. ಮಗು ಸಿಕ್ಕ ಸುದ್ದಿ ಊರೂರು ಹಬ್ಬಿತು. ಹಾಗೆಯೇ ಮಡಕು ಮನೆಯ ಬ್ರಾಹ್ಮಣನ ಕಿವಿಗೂ ಬಿತ್ತು. ಅಂದೊಮ್ಮೆ ಕಳೆದು ಹೋದ ತನ್ನ ಮಗುವನ್ನು ನೆನೆದು, ಅದು ತನ್ನ ಮಗು ಇರಬಹುದು ಎಂದು ಪೆರ್ಗಡೆ ಅಜ್ಜನ ಮನೆಗೆ ಆತುರಾತುರವಾಗಿ ತೆರಳುತ್ತಾನೆ . ತನ್ನ ಎಲ್ಲಾ ನೋವನ್ನು ಅಜ್ಜನಿಗೆ ತಿಳಿಸಿ ಕಣ್ಣೀರಿಟ್ಟರು. ಆಗ ಚಂದು ಪೆರ್ಗಡೆ ಹಿರಿಯರಾದ ನೀವು ಸಮಾಧಾನ ತಂದುಕೊಳ್ಳಿ ಒಂದು ಮಗು ನನಗೆ ಸಿಕ್ಕಿದ್ದು ನಿಜ,ಆ ಮಗು ನಿಮ್ಮದೆಂದು ಒಂದು ಬಾರಿ ನೋಡಿ ಹೇಳಿ "ಎಂದರು.ಆ ಮಗು ಭಟ್ಟರದ್ದೇ ಆಗಿತ್ತು. ಆದರೆ ಮನಸ್ಸು ಕೇಳಲಿಲ್ಲ, ಹರಕೆ ತೀರಿಸದ ನೋವು, ಜನರು ಏನೆನ್ನುವರು ಎಂಬ ತಳಮಳ. ಪ್ರಸಂಗದ ಸಂದರ್ಭದಲ್ಲಿ ಚಂದು ಪೆರ್ಗಡೆ ಮತ್ತು ಭಟ್ಟರ ನಡುವೆ ಒಂದು ನಿರ್ಧಾರವಾಗುತ್ತದೆ. ಮಗು ಉಪ್ಪು ಮತ್ತು ಅನ್ನದ ವ್ಯತ್ಯಾಸವನ್ನು ತಿಳಿದರೆ ಆ ಮಗುವು ಅಜ್ಜರ ಮನೆಯಲ್ಲಿಯೇ ಬೆಳೆಯಲಿ ಎಂಬುದಾಗಿತ್ತು. ಗಿಂಡಿ ಯು ಆ ವ್ಯತ್ಯಾಸವನ್ನು ತಿಳಿದ ಕಾರಣ ಅಜ್ಜರ ಮನೆಯಲ್ಲಿಯೇ ಬೆಳೆದಳು. ಅಜ್ಜರು ನನ್ನ ಮಗುವಿನಂತೆ ಆ ಮಗುವನ್ನ ಸಾಕುತ್ತೇನೆ ಎಂದು ಭಟ್ಟರಿಗೆ ಮಾತು ಕೊಡುತ್ತಾರೆ. ತುಂಬಾ ನೋವಿನಿಂದ, ದುಃಖದಿಂದ, ಕಂಬನಿ ಇತ್ತು ಭಟ್ಟರು ಅಲ್ಲಿಂದ ನಿರ್ಗಮಿಸುತ್ತಾರೆ. ಆಡ್ತಾ ಕುಣಿಯುತ್ತಾ ಸೊನ್ನೆ,ಗಿಂಡಿ ಇಬ್ಬರು ಬೆಳೆದು ದೊಡ್ಡವರಾಗುತ್ತಾರೆ.
ಅಣ್ಣ ಕೆದಿಂಜೆಯ ಜಾರುಮಾರ್ಲ, ತಮ್ಮ ಗುರುಮಾರ್ಲ.ಇವರಿಬ್ಬರೂ ಸೂರ್ಯ- ಚಂದ್ರರಂತೆ, ರಾಮ -ಲಕ್ಷ್ಮಣನಂತಿದ್ದರು. ಚಂದು ಪೆರ್ಗಡೆ ಅಜ್ಜರು ಸೊನ್ನೆಗೆ ಮದುವೆ ಮಾಡಬೇಕೆಂದಿದ್ದರು.ಈ ಪ್ರಸ್ತಾಪವನ್ನ ಜಾರು ಮಾರ್ಲನಿಗೆ ತಿಳಿಸಿದಾಗ ಗುರುಮಾರ್ಲನನ್ನು ಸೊನ್ನೆಗೆ ಕೊಡುವುದಾಗಿ ಒಪ್ಪಿಕೊಳ್ಳುತ್ತಾನೆ. ಸೊನ್ನೆ ಯ ಮದುವೆಯ ನಂತರ ತನ್ನ ಪತಿ ಗುರುಮಾರ್ಲ ನೋಂದಿಗೆ ಸಂತೋಷವಾಗಿ ಜೀವನ ನಡೆಸುತ್ತಾಳೆ. ಒಂದು ದಿನ ಊರಿನ ಎಲ್ಲಾ ಹೆಂಗಸರು ಚಂದು ಪೆರ್ಗಡೆ ಅಜ್ಜರ ಮನೆಗೆ ಸಾಲಾಗಿ ಹೋಗುತ್ತಿರುತ್ತಾರೆ, ಪ್ರೀತಿಯ ತಂಗಿ ಗಿಂಡಿ ಮೈನೆರೆದ ಸುದ್ದಿ ಕೇಳಿದ ಸೊನ್ನೆ ನೀರ ಹಬ್ಬಕ್ಕೆ ದಿನ ಲೆಕ್ಕ ಮಾಡಿದಳು. ಇನ್ನೇನು ಹೊರಡುವ ಆತುರದಲ್ಲಿದ್ದಳು .ಊರ ಹೆಂಗಸರನೆಲ್ಲರನ್ನು ಅಜ್ಜರು ಬರ ಹೇಳಿದ್ದರು, ಆದರೆ ಸೊನ್ನೆಗೆ ಮಾತ್ರ ಅಜ್ಜರ ಕರೆ ಬರಲಿಲ್ಲ. ಅಜ್ಜರು ಕರೆಯನ್ನು ತಿಳಿಸಲು ಎಲ್ಲೋ ಮರೆತಿರಬಹುದು ಎಂದು ತಿಳಿದು,ಪತಿ ಗುರುಮಾರ್ಲನೊಂದಿಗೆ ಹೋಗಲು ಅನುಮತಿ ಕೇಳುತ್ತಾಳೆ. ಕರೆ ಬರದ ಕಾರಣ, ಹೋಗಲು ಅನುಮತಿಸಲು ಪತಿ ಹಿಂಜರಿಯುತ್ತಾನೆ. ಅವಳ ಭಾವ ಜಾರುಮಾರ್ಲ ನೊಂದಿಗೆ ಕೇಳಿದಾಗ ಕೊನೆಯ ಬಾರಿಗೆ ಸೊನ್ನೆಯ ಒತ್ತಾಯಕ್ಕೆ ಮಣಿದು ಹೋಗಲು ಅನುಮತಿ ನೀಡುತ್ತಾನೆ. ಇತ್ತ ಕಾನಬೆಟ್ಟು ವಿನಲ್ಲಿ ಬಂದಂತಹ ಹಲವಾರು ಹೆಂಗಸರು ಅಜ್ಜರಿಗೆ " ಈ ನೀರ ಹಬ್ಬಕ್ಕೆ ಇನ್ನೂ ಪುಷ್ಪವತಿ ಯಾಗದ ಸೊನ್ನೆ ಯು ಬರಬಾರದು. ಒಂದು ವೇಳೆ ಅವಳು ಬಂದರೆ ನಾವು ಇಲ್ಲಿಂದ ಹೊರಡುತ್ತೇವೆ. ಇಲ್ಲಿನ ಎಲ್ಲ ಕೆಲಸವು ಅರ್ಧದಲ್ಲಿ ನಿಂತು ಹೋಗುತ್ತದೆ." ಎಂದು ಸೊನ್ನೆಗೆ ಅಪಹಾಸ್ಯ ಮಾಡುತ್ತಾರೆ. ಚಂದು ಪೆರ್ಗಡೆಯವರು ಇದಕ್ಕೆ ಒಪ್ಪಿಗೆ ಕೊಡುತ್ತಾರೆ. "ಯಾವುದೇ ಕಾರಣಕ್ಕೂ ನೀವು ಇಲ್ಲಿಂದ ಹೋಗಬೇಡಿ, ಗಿಂಡಿಯ ನೀರ ಹಬ್ಬವನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಡಿ " ಎಂದು ವಿನಂತಿಸುತ್ತಾನೆ. ಸೊನ್ನೆಯು ಸಂತೋಷದಿಂದ ಕಾನಬೆಟ್ಟಿಗೆ ಹೊರಡುತ್ತಾಳೆ. ದೂರದಿಂದ ಸೊನ್ನೆ ಬರುವುದನ್ನ ಹೆಂಗಸರು ನೋಡಿ ಅಲ್ಲಿಂದ ಹೊರ ಹೋಗಲು ತಯಾರಾಗುತ್ತಾರೆ,ಭಯಗೊಂಡ ಚಂದು ಪೆರ್ಗಡೆಯವರು ಹೆಂಗಸರನ್ನು ನಿಲ್ಲಿಸಿ, " ಸೊನ್ನೆಯನ್ನು ನಾನು ಹಿಂದೆ ಹೋಗಲು ಹೇಳುತ್ತೇನೆ ನೀವು ಇಲ್ಲಿಯೇ ಇರಿ" ಎಂಬುದಾಗಿ ಹೇಳುತ್ತಾನೆ. ದೂರದಿಂದ ಬರುವ ಸೊನ್ನೆಯ ಮುಖವನ್ನು ನೋಡದೆ,ಅಜ್ಜರು ಕಣ್ಣೀರು ಹಾಕಿ ಎಲ್ಲಾ ವಿಷಯವನ್ನ ಹೇಳಿ ಸೊನ್ನೆಯನ್ನು,ಒಲ್ಲದ ಮನಸ್ಸಿನಿಂದಲೇ ಹಿಂದೆ ಕಳುಹಿಸುತ್ತಾರೆ. ಕೋಪ ಗಂಡ ಸೊನ್ನೆ ಸತ್ಯ ಲೋಕದವಳಾದ್ದರಿಂದ ಗಿಂಡಿಯನ್ನು ಅಲ್ಲಿಂದ ಮಾಯಮಾಡುತ್ತಾಳೆ, ನಂತರದಲ್ಲಿ ತನ್ನ ತಪ್ಪಿಗೆ ಪರಿ ತಪ್ಪಿಸುತ್ತಾಳೆ. ತಾನು ಪುಷ್ಪವತಿ ಆಗಬೇಕು. ತಾನು ಒಂದು ಮಗುವಿಗೆ ಜನ್ಮವನ್ನು ಕೊಡಬೇಕು. ಎಂಬ ಆಸೆಯಿಂದ "ಉರಿ ಬ್ರಹ್ಮನ ಗುಂಡಕ್ಕೆ ನನ್ನ ಮೂಗುತಿ ತೆಗೆದು ಮುಗುಳಿ ಇಡಿಸುವೆ.ಕೈಯ ಕಂಕಣ ತೆಗೆದು,ಅಂಕಣ ಕಟ್ಟಿಸುವೆ.ಕತ್ತಿನ ಕಿಲವಂದಿ ತೆಗೆದು, ಬ್ರಹ್ಮರ ಮೂರ್ತಿಗೆ ಬಲಿಮಂಟಪ ಕಟ್ಟಿಸುವೆ" ಎಂದು ಹರಕೆ ಹೊರುತ್ತಾಳೆ.
ದಿನ ಕಳೆದಂತೆ ಸೊನ್ನೆ ಗರ್ಭವತಿಯಾಗುತ್ತಾಳೆ.ಎರಡು ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ.ಈ ವಿಷಯ ತಿಳಿದಂತಹ ಹೆಂಗಸರಿಗೆ ಆಶ್ಚರ್ಯ ಅವಳು ಮಗುವನ್ನು ಹೆತ್ತಿದ್ದಾಳೋ?? ಅಥವಾ ಮಣೆ ಯನ್ನು ಹೆತ್ತಿದ್ದಾಳೋ? ಎಂದು ಕೊಂಕು ನುಡಿದರು. ನೋಡಲು ಆತರವಾಗಿ ಸೊನ್ನೆಯ ಮನೆಗೆ ಆಗಮಿಸುತ್ತಾರೆ. ಈಗಾಗಲೇ ಆ ಹೆಂಗಸರು ಸೊನ್ನೆಗೆ ಅವಮಾನ ಮಾಡಿದ್ದರು,ಅದನ್ನು ತಿಳಿದು ಆ ಹೆಂಗಸರಿಗೆ ಮಗುವನ್ನು ನೋಡಬೇಕೆಂದರೆ ನಿಮ್ಮ ಮೂಗುತಿಯನ್ನು ಬಿಚ್ಚಿಟ್ಟು ಬರಬೇಕು, ಎಂದು ಕೋಪದಿಂದ ಹೇಳುತ್ತಾಳೆ. ಹೆಂಗಸರಿಗೆ ಮಗುವನ್ನು ನೋಡಲೇಬೇಕೆಂಬ ಆತುರದ ಕಾರಣಕ್ಕೆ ಅವರು ತನ್ನ ಮೂಗುತಿಯನ್ನು ಬಿಚ್ಚಿಟ್ಟು ಒಳಗೆ ಹೋಗುತ್ತಾರೆ. "ಸೊಕ್ಕು, ಮಿಕ್ಕಿ, ನಕಲಿ ಮಾಡಿ ನಕ್ಕವರು. ನನ್ನ ಸೀಮಂತಕ್ಕೆ ಬಾರದವರು ನೀವು ಈಗಲಾದರೂ ಬಂದಿರೇ? ಹೆತ್ತದ್ದು ಮಗುವೆಂದು ಗೊತ್ತಾಯಿತಲ್ಲ?? ಎಂದು ಸೊನ್ನೆ ವ್ಯಂಗ್ಯವಾಗಿ ನುಡಿದು,ನಸುನಕ್ಕಳು. ಹಿಂದೆ ಆಡಿದ,ಮಾಡಿದ,ತಮ್ಮ ತಪ್ಪನ್ನರಿತು ಬಂದವರು ನೊಂದು ನಾಚಿ ಒಂದಾಗಿ ಹೊರಟು ಹೊರಹೋದರು. ಸೊನ್ನೆ ತನ್ನ ಇಬ್ಬರು ಅವಳಿ ಮಕ್ಕಳಿಗೆ ಅಬ್ಬಗ -ದಾರಗ ಎಂದು ಹೆಸರಿಟ್ಟಳು. ದಿನಗಳು ಕಳೆದಂತೆ ಅಬ್ಬಗ -ದಾರಗರು ಮದುವೆಯ ವಯಸ್ಸಿಗೆ ಬಂದರು. ಸೊನ್ನೆ ಅಂದು ಹೇಳಿದಂತಹ ಹರಕೆಯನ್ನು ಸುಖದ ಮತ್ತಿನಲ್ಲಿ ಮರೆತಳು.
ಅಬ್ಬಗ -ದಾರಗರನ್ನು ಕಡಾರಿ ಕಾರ್ಕಳದ ಚಂದ್ರಮಾಶೆಟ್ಟರ ಇಬ್ಬರು ಅವಳಿ ಮಕ್ಕಳು ರಾಮ -ಲಕ್ಷ್ಮಣರಿಗೆ ಕೊಡಬೇಕು ಎಂದು ಮದುವೆ ನಿಶ್ಚಯ ಮಾಡುತ್ತಾರೆ.ಮದುವೆ ನಿಶ್ಚಯದ ನಂತರ ಆಮಂತ್ರಣ ಕೊಡುವುದಕ್ಕಾಗಿ ಒಂದು ದಿನ ತೆರಳುವ ಸಂದರ್ಭದಲ್ಲಿ ಸೊನ್ನೆ ಮತ್ತು ಗುರುಮಾರ್ಲರು ಮಕ್ಕಳಿಗೆ,"ಜಾಗರಿಕರಾಗಿರಿ ನಾವು ಆಮಂತ್ರಣ ಕೊಡಲು ಹೋಗಿ ಬರುತ್ತೇವೆ "ಎಂದು ಹೇಳಿ ಹೊರಡುತ್ತಾರೆ.
ದಾರಿಯಲ್ಲಿ ಹೋಗುವಾಗ ಉರಿ ಬ್ರಹ್ಮ ದೇವರು ಅವರಿಗೆ ಓರ್ವ ಬ್ರಾಹ್ಮಣನ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಭವಿಷ್ಯ ಹೇಳುವ ಮೂಲಕ ಹರಕೆಯನ್ನು ಜ್ಞಾಪಿಸಿದಾಗ,ಸೊನ್ನೆಯು ಕೋಪಗೊಂಡು "ಭಟ್ಟರೆ ಕೊಟ್ಟ ಸಲುಗೆ ಹೆಚ್ಚಾಯಿತು. ನೀವು ಹುಟ್ಟು ಬ್ರಾಹ್ಮಣವೆಂದು ಹೆಮ್ಮೆಯೋ??..ಜ್ಯೋತಿಷ್ಯ ತಿಳಿದವನೆಂದು ಏನಾದರೂ ಹೇಳುವ ದಿಟ್ಟತನವೋ?? ನಾನು ಹರಕೆ ಹೇಳುವಾಗ ನೀವು ನನ್ನ ತಲೆಯ ಮೇಲ್ಗಡೆ ಇದ್ದೀರೋ? ಅಥವಾ ಕಾಲ ಬುಡದಲ್ಲಿ ಇದ್ದೀರೋ? " ಸೊನ್ನೆ ಸಿಡಿದು ಕಿಳಿಕಿಡಿಯಾಗಿ ನುಡಿದಳು. ಮದುವೆಯಾದ ನಂತರ ಹರಕೆ ತೀರಿಸಿದರಾಯಿತು ಎಂದು ಆಮಂತ್ರಣ ಕೊಡಲು ಹೊರಡುತ್ತಾರೆ. ಅಬ್ಬನಡ್ಕದಲ್ಲಿ ಮಾಯವಾದ ಮಾಯದ ಭಟ್ಟರು ಉರ್ಕಿ ದೊಟ್ಟುವಿನ ಮನೆಯ ಮುಂಭಾಗದಲ್ಲಿ ಪ್ರತ್ಯಕ್ಷವಾದರು. ಅಬ್ಬಗ -ದಾರಗರಿಬ್ಬರೂ ಒಳ ನಡೆದು ಹರಿವಾಣದಲ್ಲಿ ಒಂದು ಸೇರಕ್ಕಿ,ತೆಂಗಿನಕಾಯಿ, ಜೋಡು ಸೌತೆಗಳನ್ನು ಇಟ್ಟು ಭಟ್ಟರನ್ನು ಚಾವಡಿಗೆ ಕರೆತಂದು ಪಡಿ ಕೊಟ್ಟರು. ಭಟ್ಟರು ಅಬ್ಬಗ -ದಾರಗರಿಗೆ, "ನೀವು ಸೊನ್ನೆಯ ಮಕ್ಕಳು.ಚೆನ್ನೆ ಆಟದಲ್ಲಿ ಅತಿ ಚತುರತೆ ಎಂದು ಕೇಳಿದ್ದೇನೆ .ನೀವು ಚೆನ್ನೆಆಡುವ ಚೆನ್ನ ನಾನು ನೋಡಬೇಕಲ್ಲಾ,ಒಂದು ಆಟ ಆಡಿ ನೋಡೋಣ" ಎಂದರು.
ಅಬ್ಬಗ -ದಾರಗರು ಒಳಗೋಡಿ ಕಲೆಂಬಿ ನೋಡಿದಾಗ ಬೀಗ ತೆರೆದಿತ್ತು. ಚಿನ್ನದ ಚೆನ್ನೆ ಮಣೆ,ಬೆಳ್ಳಿಯ ಕಾಯಿಗಳನ್ನು ಚಾವಡಿಗೆ ತಂದಿಟ್ಟು ಆಡಲು ಶುರು ಮಾಡಿದರು.
ಆಟವಾಡಿದಾಗ ಮೂರು ಬಾರಿಯೂ ಅಬ್ಬಗ ಸೋತಳು . ಗೆದ್ದ ದಾರಗ ಳು,ಅಬ್ಬಗಳನ್ನು ಹಂಗಿಸಿ ಚಾಳಿಸಿದಳು. ಅಬ್ಬಗ ಸಿಟ್ಟಿನಲ್ಲಿ ಚೆನ್ನೆ ಮಣೆಯನ್ನ ತಂಗಿಯ ತಲೆಗೆ ಬೀಸಿ ಹೊಡೆದಳು.ಬಲವಾಗಿ ಬಿದ್ದ ಪೆಟ್ಟಿಗೆ ದಾರಗಳ ನೆತ್ತಿ ಒಡೆಯಿತು. ರಕ್ತ ಚಿಮ್ಮಿ ನೆಲಕ್ಕೆ ಬಿದ್ದಳು.ನೆತ್ತರ ಮಡುವಲ್ಲಿ ಮಡಿದ ದಾರಾಗಳನ್ನು ಅಬ್ಬಗ ನೋಡಿ, "ತಂದೆ ತಾಯಿ ಹಿಂದೆ ಬರುವ ವೇಳೆಯಲ್ಲಿ ಏನೆಂದು ಉತ್ತರಿಸಲಿ" ಇಂದು ಭಯಗೊಂಡಳು. "ನೀನು ಬದುಕುವುದಕ್ಕಿಂತ ಬಾವಿಗಾದರೂ ಬಿದ್ದು ಸಾಯುವುದೇ ಲೇಸು" ಎಲ್ಲವನ್ನು ನಿಟ್ಟಿಸುತ್ತ ನಿಂತಿದ್ದ ಭಟ್ಟರು ನುಡಿದರು. ಅಬ್ಬಗ ವೀಳ್ಯದೆಲೆಯೊಂದನ್ನು ತಂದು ಮೂಗಿನ ಮೂಗುತ್ತಿ ತೆಗೆದು ಓಲೆ ಬರೆದಳು.ಓಲೆಯನ್ನ ಕಲ್ಲಿನ ಮೇಲೆ ಇಟ್ಟು ಬಾವಿಗೆ ಹಾರಿದಳು. ಅಲ್ಲಿಂದ ಭಟ್ಟರು ಆ ಕ್ಷಣಾರ್ಧದಲ್ಲಿ ಮಾಯವಾಗಿ, ದೂರದಲ್ಲಿ ಹಿಂದೆ ಬರುತ್ತಿದ್ದ ಸೊನ್ನೆ ಮತ್ತು ಅವಳ ಪತಿ ಯ ಮುಂದೆ ಪ್ರತ್ಯಕ್ಷವಾದರು. ಅಲ್ಲಿನ ರೋಧನೆಯನ್ನು ಪರೋಕ್ಷವಾಗಿ ತಿಳಿಸಿ,ಜೋರಾಗಿ ಹೆಂಗಸರು ಅಳುವ ಸದ್ದು ಕೇಳುತ್ತಿರುವುದು ಎಂದಾಗ ಸೊನ್ನೆ ಮತ್ತು ಗುರು ಮಾರ್ಲರು ಓಡೋಡಿ ಹೋಗುತ್ತಾರೆ. ಶವ ವನ್ನು ನೋಡಿ ಜೋರಾಗಿ ಅಳುತ್ತಾರೆ. ಹರಕೆ ತೀರಿಸದ ಪರಿಣಾಮವಾಗಿ ಇಷ್ಟೆಲ್ಲಾ ಆಗಿ ಹೋಗಿತು ಎಂಬುದು ಸೊನ್ನೆಗೆ ಅರಿವಾಯಿತು. ಬಾವಿಯಲ್ಲಿನ ಶವಗಳು ಹಿಂಗಾರದ ಹೂಗಳಾಗಿ ತೇಲಿದವು. ಶವದ್ವಯಗಳು ಬಂಗಾರದ ಜೋಡು ದುಂಬಿಗಳಾಗಿ ಮೇಲೇರಿಹಾರಿ ಮಾಯವಾದವು,ಕೂಡಿದ ಜನ ನೋಡಿ ಬೆರಗಾದರೂ.
ಸತ್ಯವನ್ನು ತಿಳಿಸಲು ಪರಮೇಶ್ವರಿಯ ಸಖಿಯಾದ ಸಿರಿ ಭೂಮಿಯಲ್ಲಿ ಜನಿಸಿ,ಇಂದು ದೇವರ ಪಾದದಡಿಯಲ್ಲಿ ಕುಳಿತು. ಇಂದಿಗೂ ಭಕ್ತಿಯಿಂದ ಸ್ಮರಿಸಿ, ಪೂಜೆ -ನೇಮ,ಬಲಿ,ತಂಬಿಲಗಳಿಂದ ಆರಾಧಿಸುವ ಭಕ್ತ ಜನರ ಇಷ್ಟ ಸಲ್ಲಿಕೆ ಸಲಹುತ್ತಾರೆ. ಅಬ್ಬಗ -ದಾರಗರು ದೇವರ ಬಲಭಾಗದಲ್ಲಿ ಮೂರ್ತಿರೂಪವಾಗಿ ಆರಾಧ್ಯರಾದರು. ಭಕ್ತರಿಗೆ ಸತ್ಯ ತಿಳಿಯಲು ಬಂದಂತಹ ಸಪ್ತ ಮಾತೃಕೆಯರು ಇದು ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆರಾಧ್ಯದೈವಗಳಾಗಿ ಭಕ್ತರನ್ನು ಸಲಹುತ್ತಾರೆ.
ನಂದಳಿಕೆ ಸಿರಿಜಾತ್ರೆ
[ಬದಲಾಯಿಸಿ]ವರ್ಷಕ್ಕೆ ಒಂದು ಬಾರಿ ನಂದಳಿಕೆಯಲ್ಲಿ ಸಿರಿಜಾತ್ರೆಯನ್ನು ಆಚರಿಸಲಾಗುತ್ತದೆ.ಸಿರಿಗಳು ಇಲ್ಲಿ ನೆಲೆಸಿದ್ದಾರೆ ಎಂಬ ಮಾತನ್ನು ಇತಿಹಾಸಗಳು ತಂದುಕೊಟ್ಟಿದೆ. ಅತೀ ವಿಷೇಶವಾಗಿ ಸಿರಿ ಜಾತ್ರೆಯ ದಿನಗಳಲ್ಲಿ ಅಲ್ಲಿನ ಜನರು ಹರಕೆ ಹೊರುತ್ತಾರೆ,ತಮ್ಮ ಸಂಕಷ್ಟಗಳಿಗಾಗಿ ಪ್ರಾರ್ಥಿಸುತ್ತಾರೆ.ಸಿರಿಜಾತ್ರೆಯು ಅತೀ ಪ್ರಸಿದ್ಧತೆಯನ್ನು ಪಡೆದು ಸಂಭ್ರಮದಿಂದ ಆಚರಿಸಲಾಗುತ್ತದೆ. ಇತಿಹಾಸಗಳ ಕಥೆಗಳು ಮೈ ಜುಮ್ಮ್ ಎನ್ನುವಷ್ಟು ರೋಚಕವಾಗಿದೆ.ಸಾವಿರಾರು ಜನರು ಇಲ್ಲಿಗೆ ಆಗಮಿಸುತ್ತಾರೆ.ಕುಮಾರ ಮತ್ತು ಅಬ್ಬಗ-ದಾರಗರು ಹರಕೆ ಹೊತ್ತ ಜನರ ಮೈಮೇಲೆ ಆಹ್ವಾನಿಸಿಕೊಳ್ಳುತ್ತಾರೆ.ಅವಳಿ ಮಕ್ಕಳು ಈ ದೇವಸ್ಥಾನಕ್ಕೆ ಬರಬಾರದೆಂಬ ಮಾತಿದೆ. ಮೈನವಿರೇಳಿಸುವಂತಹ ಇತಿಹಾಸಗಳ ಪುಟಗಳನ್ನು ತೆರೆದಿಟ್ಟ ನಂದಳಿಕೆ ಗ್ರಾಮವು ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲಿದೆ. ವರ್ಷಕ್ಕೆ ಒಂದು ಬಾರಿ ನಡೆಯುವ ಈ ಸಿರಿಜಾತ್ರೆಯು ತನ್ನದೇ ಆದ ಪ್ರಸಿದ್ಧತೆಯನ್ನು ಪಡೆದಿದೆ. ವಿಜೃಂಭಣೆಯಿಂದ ನಡೆಯುವ ಈ ಸಿರಿಜಾತ್ರೆಯಲ್ಲಿ ಅಬ್ಬಬ್ಬಾ ಎಷ್ಟೊಂದು ಜನರು.ನಾಲ್ಕು ಸ್ಥಾನ ನಂದಳಿಕೆಯ ಶ್ರೀ ಮಹಾಲಿಂಗೇಶ್ವರ ದೇಗುಲವು ಶ್ರೀ ಉರಿಬ್ರಹ್ಮ, ವೀರಭದ್ರ, ಗಣಪತಿ, ಸಿರಿಕುಮಾರ, ಅಬ್ಬಗ-ದಾರಗ, ಚಾಮುಂಡಿ, ಕ್ಷೇತ್ರಪಾಲ, ಭೂತರಾಜ, ಮಹಾನಾಗರಾಜಸ್ವಾಮಿ, ಅಣ್ಣಪ್ಪ ಹೀಗೆ ಹಲವು ಸಾನಿಧ್ಯಗಳನ್ನು ಈ ಕ್ಷೇತ್ರವು ಹೊಂದಿದೆ. ಇಲ್ಲಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಇಷ್ಟಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವರ ಜೊತೆಯಲ್ಲಿ ಅಬ್ಬಗ-ದಾರಗರಾದ ಅವಳಿ ಕುವರಿಯರ ಮೂರ್ತಿಯ ಸ್ಥಾಪನೆಯಾಗಿದೆ.ತುಳುನಾಡಿನಲ್ಲಿ ನ್ಯಾಯಕ್ಕಾಗಿ ಹೋರಾಡಿ, ಅಧರ್ಮ ಮೆಟ್ಟಿ ನಿಂತ ಅಬ್ಬಗ ದಾರಗರ ಜಾತ್ರೆ ಕೂಡ ಅದ್ಭುತ ವೈಭವ. ನಂದಳಿಕೆಯು ತುಳುನಾಡಿನ ಎಲ್ಲಾ ಸಿರಿ ಕ್ಷೇತ್ರಗಳಿಗೆ ಮೂಲ ಕ್ಷೇತ್ರವಾಗಿದ್ದು, ಇಲ್ಲಿಂದಲೇ ಸಪ್ತ ಸಿರಿಗಳ ಆರಾಧನೆ ಸಂಪನ್ನಗೊಂಡು ಮೂಲ ಸಿರಿ ಕ್ಷೇತ್ರಗಳ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿರಿಜಾತ್ರೆಯು ನಂದಳಿಕೆಯಿಂದ ಪ್ರಾರಂಭಗೊಂಡು ಮುಂದೆ ಹಿರಿಯಡ್ಕ, ಕವತ್ತಾರು, ಬೆಳ್ತಂಗಡಿಯ ನಿಡಗಲ್ ಮುಂತಾದ ಆಲಡೆಯಲ್ಲಿ ವರ್ಷಂಪ್ರತಿ ನಡೆಯುವ ಸಿರಿ ಜಾತ್ರೆ ಬಹಳ ಪ್ರಸಿದ್ಧತೆ ಹೊಂದಿದೆ. ಅಷ್ಟೇ ಅಲ್ಲದೆ ಸಿರಿ ಕುಮಾರ ಆರಾಧನೆಯು ಅತ್ಯಂತ ವಿಶೇಷತೆಯನ್ನು ಪಡೆದಿದೆ. ಮನೆಯಲ್ಲಿನ ತೊಂದರೆಗಳನ್ನು ನಿವಾರಿಸಲು ಜನರು ಇಲ್ಲಿ ಹರಕೆ ಹೊರುತ್ತಾರೆ. ಆ ಹರಕೆಗಳನ್ನು ತೀರಿಸುವ ದಿನವೇ ಸಿರಿ ಜಾತ್ರ ದಿನವಾಗಿದೆ. ನೂರಾರು ಮಹಿಳೆಯರ ಮೇಲೆ ಸಪ್ತಸಿರಿಗಳು ಆವೇಶ ಗೊಳ್ಳುತ್ತಾರೆ. ಕೆಲವರಲ್ಲಿ ದೈವಗಳ ಆವೇಶ. ಮಹಿಳೆಯರು ಬಿಳಿ,ಕೆಂಪು ವಸ್ತ್ರ ತೊಟ್ಟು ಹಿಂಗಾರವನ್ನು ಕೈಯಲ್ಲಿ ಹಿಡಿದು ಆವೇಶಗೊಳ್ಳುವುದನ್ನು ನೋಡುವಾಗಲೇ ಮೈ ರೋಮಾಂಚನಗೊಳ್ಳುತ್ತದೆ.ಸಾವಿರಾರು ಜನರು ಸಿರಿ ಜಾತ್ರೆಗೆ ಆಗಮಿಸಿ, ಹರಕೆಗಳನ್ನ ತೀರಿಸುವುದರೊಂದಿಗೆ ಭಕ್ತಿಯಿಂದ ದೇವರನ್ನು ಪೂಜಿಸಲು ಕಾತುರರಾಗಿರುತ್ತಾರೆ. ಅಷ್ಟೇ ಅಲ್ಲದೆ ಚೆಂಡೆವಾದನ,ತಾಲೀಮು ರಂಗ, ಕೀಲುಕುದುರೆ ನರ್ತನಗಳು, ವೀರಗಾಸೆ, ಡೊಳ್ಳು ಕುಣಿತ, ಅಲಂಕಾರಗೊಂಡ ಚಾವಡಿ ಅರಮನೆ, ಮುಂಭಾಗದಲ್ಲಿ ಅದೆಷ್ಟೋ ಕಾರ್ಯಕ್ರಮಗಳು,ಮೆರವಣಿಗೆಗಳು,ಸುಡುಮದ್ದುಗಳು ಮತ್ತು ಸುತ್ತಲೂ ಸೇರಿದ ಸಂತೆಯ ಸೊಬಗನ್ನ ನೋಡುವುದೇ ಒಂದು ಖುಷಿ. ಬೆಳಗಾಗುವವರೆಗೂ ಅಲ್ಲೇ ಇರಬೇಕೆನ್ನುವ ಹುಮ್ಮಸ್ಸು.ಭಕ್ತಿಯಲಿ ಸೌಂದರ್ಯದಲ್ಲಿ ಈ ಜಾತ್ರೆಯ ಸೊಬಗು ಅಪಾರವಾದದ್ದು.
ಉಲ್ಲೇಖ
[ಬದಲಾಯಿಸಿ]- ↑ "Nandalike Map".
- ↑ Upadhyaya, U. Padmanabha (1986). "Folk Epics of Tulunad: Papers Presented in the Seminar on the Eve of the Kalevala Festival at Udupi, 12-10-1985" (in ಇಂಗ್ಲಿಷ್). Regional Resources Centre for Folk Performing Arts. Retrieved 17 December 2022.