ದಾದಿ
- ಪರಿಚರ್ಯೆಯ ವೃತ್ತಿ ನಡೆಸುವವಳನ್ನೂ ದಾದಿ/ಆಯಾ ಎಂದು ಕರೆಯಲಾಗುತ್ತದೆ.
ದಾದಿ ಎಂದರೆ ಮಕ್ಕಳ ಕುಟುಂಬ ಪರಿಸರದಲ್ಲಿ ಮಕ್ಕಳಿಗೆ ಆರೈಕೆ ಒದಗಿಸುವವಳು. ಸಾಂಪ್ರದಾಯಿಕವಾಗಿ, ದಾದಿಯರು ದೊಡ್ಡ ಮನೆಗಳಲ್ಲಿ ಸೇವಕಿಯರಾಗಿದ್ದರು ಮತ್ತು ನೇರವಾಗಿ ಮನೆಯ ಯಜಮಾನಿಗೆ ವರದಿ ಒಪ್ಪಿಸುತ್ತಿದ್ದರು. ಇಂದು, ಆಧುನಿಕ ದಾದಿಯರು, ಇತರ ಮನೆಯಾಳುಗಳಂತೆ, ಅವರ ಪರಿಸ್ಥಿತಿಗಳು ಮತ್ತು ಅವರ ಉದ್ಯೋಗದಾತರ ಪರಿಸ್ಥಿತಿಗಳನ್ನು ಆಧರಿಸಿ ಮನೆಯ ಒಳಗೆ ಅಥವಾ ಹೊರಗೆ ಇರಬಹುದು. ಮಕ್ಕಳ ಆರೈಕೆಯಲ್ಲಿ ಪರಿಣತಿಗಳಿಸಿದ ಅನೇಕ ಉದ್ಯೋಗ ಸಂಸ್ಥೆಗಳಿವೆ.
ದಾದಿಯರು ಇತರ ಶಿಶುಪಾಲನೆ ಒದಗಿಸುವವರಿಂದ ಸ್ವಲ್ಪ ಭಿನ್ನವಾಗಿರುತ್ತಾರೆ. ಶಿಶುಪಾಲಕಿಯು ತನ್ನ ಸ್ವಂತ ಮನೆಯಿಂದ ಕೆಲಸಮಾಡುತ್ತಾಳೆ, ಮತ್ತು ಸಣ್ಣ ವ್ಯವಹಾರವಾಗಿ ನಿರ್ವಹಿಸುತ್ತಾಳೆ; ಅವರು ಇರುವ ದೇಶವನ್ನು ಆಧರಿಸಿ, ಸರ್ಕಾರಿ ನೋಂದಣಿ ಅಗತ್ಯವಿರಬಹುದು ಅಥವಾ ಇಲ್ಲದಿರಬಹುದು. ಮನೆಯೊಳಗೆ ಅಥವಾ ಹೊರಗೆ ಇರಬಹುದಾದ ತಾಯಿಯ ಸಹಾಯಕಿಯು ಮನೆಯ ಯಜಮಾನಿಗೆ ಸಾಮಾನ್ಯ ಮನೆಗೆಲಸದಲ್ಲಿ ಮತ್ತು ಮಕ್ಕಳ ಆರೈಕೆ ಮಾಡುವಲ್ಲಿ ನೆರವಾಗುತ್ತಾಳೆ. ಓ ಪೇರ್ ಪದವು ಸಾಮಾನ್ಯವಾಗಿ ಆತಿಥೇಯ ಕುಟುಂಬದಲ್ಲಿರಲು ಮತ್ತು ಸ್ಥಳೀಯ ಸಂಸ್ಕೃತಿ ಹಾಗೂ ಭಾಷೆಯನ್ನು ಕಲಿಯಲು ವಿದೇಶದಿಂದ ಬಂದ, ತರಬೇತಿ ಹೊಂದಿರದ ಯುವತಿಯನ್ನು ಸೂಚಿಸುತ್ತದೆ. ಜೊತೆಗೆ ಮಕ್ಕಳನ್ನು ನೊಡಿಕೊಳ್ಳಲು ಸಹಾಯ ಮಾಡುತ್ತಾಳೆ. ಗೃಹಶಿಕ್ಷಕಿಯು ಮಕ್ಕಳಿಗೆ ಅವರ ಸ್ವಂತ ಮನೆಯಲ್ಲಿ ಶಿಕ್ಷಣ ನೀಡುವುದರ ಮೇಲೆ ಗಮನ ಹರಿಸುತ್ತಾಳೆ, ಮತ್ತು ಶಿಶುವಿಹಾರ ಅಥವಾ ಪ್ರಾಥಮಿಕ ಶಾಲೆಯೂ ಇದನ್ನೇ ಮಾಡುತ್ತದೆ, ಆದರೆ ಶಾಲಾ ಪರಿಸರದಲ್ಲಿ.
ವಸಾಹತುಶಾಹಿ ಯುಗ
[ಬದಲಾಯಿಸಿ]ವಿಶ್ವದಾದ್ಯಂತ ಐರೋಪ್ಯ ವಸಾಹತುಶಾಹಿ ಸಾಮ್ರಾಜ್ಯಗಳ ಆಡಳಿತಗಾರರ ಮನೆಗಳಲ್ಲಿ ದಾದಿಯರಿದ್ದರು. ಐರೋಪ್ಯ ಆಡಳಿತಾಧಿಕಾರಿಗಳ ಮಕ್ಕಳನ್ನು ಸ್ಥಳೀಯ ಮಹಿಳೆಯರ ಆರೈಕೆಯಲ್ಲಿ ಒಪ್ಪಿಸುವುದು ವಸಾಹತುಶಾಹಿ ಸಮಾಜದ ಒಂದು ವಿಶಿಷ್ಟ ಲಕ್ಷಣವಾಗಿತ್ತು.
ವಸಾಹತು ಕಾಲದಲ್ಲಿ ದಾದಿಯರು ತಮ್ಮ ಜೀವನವನ್ನು ತಮ್ಮ ಮಾಲೀಕರ ಮನೆಗಳಲ್ಲಿ ಕಳೆಯುತ್ತಿದ್ದರು, ಹಲವುವೇಳೆ ಬಾಲ್ಯದಿಂದ ವೃದ್ಧಾಪ್ಯದವರೆಗೆ, ಮತ್ತು ಈ ಹುದ್ದೆಯ ಅವಧಿಯನ್ನು ಅವಲಂಬಿಸಿ ಒಂದಕ್ಕಿಂತ ಹೆಚ್ಚು ಪೀಳಿಗೆಯ ಆರೈಕೆ ಮಾಡುತ್ತಿದ್ದರು. ಆಡಳಿತಾಧಿಕಾರಿಗಳನ್ನು ಸ್ವದೇಶಕ್ಕೆ ಅಥವಾ ಮತ್ತೊಂದು ದೇಶಕ್ಕೆ ನಿಯೋಜಿಸಲಾದಾಗ ಈ ದಾದಿಯರನ್ನು ತಮ್ಮ ಸ್ಥಳೀಯ ದೇಶದಿಂದ ಹೊರಗೆ ಕುಟುಂಬದ ಜೊತೆಗೆ ಕರೆತರುವುದು ಅಸಾಮಾನ್ಯವಾಗಿರಲಿಲ್ಲ.
ಬ್ರಿಟಿಷ್ ಭಾರತದಲ್ಲಿ ದಾದಿಯನ್ನು ಆಯಾ ಎಂದು ಕರೆಯಲಾಗುತ್ತಿತ್ತು. ಈ ಪದವು ಈಗ ಉಪಖಂಡದ ವಿವಿಧ ಭಾಷೆಗಳ ಶಬ್ದಕೋಶದ ಭಾಗವಾಗಿದೆ. ಇದು ಸೇವಕಿ ಅಥವಾ ಕೆಲಸದವಳು ಎಂಬ ಅರ್ಥವನ್ನೂ ಹೊಂದಿದೆ.