ಜಾಲಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಲಾರಿ - ಡಿಪ್ಟರೊಕಾರ್ಪೇಸೀ ಕುಟುಂಬಕ್ಕೆ ಸೇರಿದ ಒಂದು ಪರ್ಣಪಾತಿ ಕಾಡುಮರ. ಜಾಲಾದ, ಅರಗಿನ ಮರ ಪರ್ಯಾಯ ನಾಮಗಳು. ಶೋರಿಯ ಟಾಲೂರ ಇದರ ಶಾಸ್ತ್ರೀಯ ಹೆಸರು.

ದಕ್ಷಿಣಭಾರತದಲ್ಲಿ ಆಂಧ್ರಪ್ರದೇಶದ ಕಡಪ, ಅನಂತಪುರ, ತಮಿಳುನಾಡಿನ ವೈನಾಡು, ಕೊಯಮತ್ತೂರು ಹಾಗೂ ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗ, ಮೈಸೂರು, ಕೊಡಗು, ತುಮಕೂರು, ಬೆಂಗಳೂರು ಜಿಲ್ಲೆಗಳಲ್ಲೆಲ್ಲ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ.

ಜಾಲಾರಿ 20-30ಮೀ. ಎತ್ತರ ಬೆಳೆಯುವ ದೊಡ್ಡಗಾತ್ರದ ಮರ. ಚಳಿಗಾಲದ ಕೊನೆಗೆ ಎಲೆಗಳೆಲ್ಲ ಉದುರಿಹೋಗುವುದು ಈ ಮರದ ಒಂದು ಮುಖ್ಯ ಲಕ್ಷಣ. ಆ ವೇಳೆಗೆ ಬಿಳಿ ಬಣ್ಣದ ಹಾಗೂ ಸುವಾಸನೆಯುಳ್ಳ ಹೂಗಳು ಅರಳತೊಡಗುತ್ತವೆ. ಜಾಲಾರಿಯ ಚೌಬೀನೆ ಗಡುಸಾದುದೂ ಬಾಳಿಕೆ ಬರುವಂಥದೂ ಆಗಿದೆ. ಇದರ ಬಣ್ಣ ಕೆಂಪು ಮಿಶ್ರಿತ ಕಂದು. ಇದಕ್ಕೆ ಚೆನ್ನಾಗಿ ಪಾಲಿಷ್ ಕೊಡಬಹುದು. ಇದರಿಂದಾಗಿ ಇದನ್ನು ಕಟ್ಟಡ ನಿರ್ಮಾಣದಲ್ಲಿ ಬಳಸಿಕೊಳ್ಳುವುದುಂಟು.

ಜಾಲಾರಿ ಅರಗುಕೀಟಗಳಿಗೆ ಆಶ್ರಯದಾತ ವೃಕ್ಷವೆಂದು ಹೆಸರಾಗಿದೆ. ಈ ಕಾರಣದಿಂದಲೇ ಇದಕ್ಕೆ ಆರ್ಥಿಕ ಪ್ರಾಮುಖ್ಯ ಉಂಟು. ಅರಗುಕೀಟಗಳ ಗೂಡುಗಳಿರುವ ಚಿಕ್ಕ ಚಿಕ್ಕ ಕಟ್ಟಿಗೆ ತುಂಡುಗಳನ್ನು ಕಟ್ಟುಗಳಾಗಿ ಕಟ್ಟಿ ಜಾಲಾರಿ ಮರದ ಮೇಲ್ಭಾಗದಲ್ಲಿರುವ ರೆಂಬೆಗಳಿಗೆ ಕಟ್ಟುತ್ತಾರೆ. ಕಾಲಕ್ರಮೇಣ ಕೀಟಗಳು ರೆಂಬೆಗಳಿಗೆ ಹರಡಿ ಗೂಡು ಕಟ್ಟತೊಡಗುತ್ತವೆ. ಕರ್ನಾಟಕದಲ್ಲಿ ಮೈಸೂರು ಜಿಲ್ಲೆಯ ನಾರಾಯಣದುರ್ಗ, ಬೆಂಗಳೂರಿನ ದೊರೆಸಾನಿಪಾಳ್ಯ ಮತ್ತು ಆನೇಕಲ್, ತುಮಕೂರಿನ ಚೀಲೂರು ಮತ್ತು ಮಧುಗಿರಿಗಳು ಜಾಲಾರಿ ಅರಗುಕೀಟ ಸಾಕಣೆಗೆ ಪ್ರಸಿದ್ಧವಾಗಿವೆ.

ಜಾಲಾರಿಮರವನ್ನು ಬೀಜಗಳಿಂದ ವೃದ್ಧಿಸಲಾಗುತ್ತದೆ. ಬೀಜಗಳನ್ನು ನರ್ಸರಿಗಳಲ್ಲಿ ಬಿತ್ತಿ ಸಸಿಗಳನ್ನು ಪಡೆದು ಅವು ಸುಮಾರು 0.5 ಒ. ಎತ್ತರಕ್ಕೆ ಬೆಳೆದಾಗ ತೋಟಗಳಿಗೆ ವರ್ಗಾಯಿಸಲಾಗುತ್ತದೆ. ಜೇಡಿಮಿಶ್ರಿತ ಮರಳು ಮಣ್ಣು ಜಾಲಾರಿಯ ಬೆಳವಣಿಗೆಗೆ ಅತ್ಯುತ್ತಮ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಾಲಾರಿ&oldid=1073865" ಇಂದ ಪಡೆಯಲ್ಪಟ್ಟಿದೆ