ವಿಷಯಕ್ಕೆ ಹೋಗು

ಡಿಪ್ಟರೊಕಾರ್ಪೇಸೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಿಪ್ಟರೊಕಾರ್ಪೇಸೀ - ದ್ವಿದಳ ಸಸ್ಯಗಳ ಗುಂಪಿಗೆ ಸೇರಿದ ಒಂದು ಕುಟುಂಬ.

ಸಾಲ್ (ಬಿಳೇಭೋಗಿ-ಶೋರಿಯ), ಜಾಲಾರಿ, ಕಿರಲ್‍ಬೋಗಿ (ಹೊಪಿಯ) ಮುಂತಾದ ಮರಗಳು ಈ ಕುಟುಂಬಕ್ಕೆ ಸೇರಿವೆ. ಇವು ಉಷ್ಣವಲಯದ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಬೆಳೆಯುತ್ತವೆ. ಭಾರತ, ಮಲಯ, ಬರ್ಮ ಮುಂತಾದ ದೇಶಗಳಲ್ಲಿ ಹೇರಳವಾಗಿ ಕಾಣದೊರೆಯುವುವು. ಬಲು ಎತ್ತರಕ್ಕೆ ಬೆಳೆಯುವ ವೃಕ್ಷಗಳಲ್ಲಿ ಇವು ಪ್ರಧಾನವಾದವು. ಇವುಗಳ ಕೊಂಬೆಗಳು ಬಲು ಕಡಿಮೆ. ಭಾರತದಲ್ಲಿ ಅಸ್ಸಾಮ್, ಪಶ್ಚಿಮಘಟ್ಟಗಳು, ದಂಡಕಾರಣ್ಯ ಮುಂತಾದೆಡೆಗಳಲ್ಲಿ ಈ ಕುಟುಂಬದ ವೃಕ್ಷಗಳ ವ್ಯಾಪ್ತಿ ಹೆಚ್ಚು.

ಎಲ್ಲ ಬಗೆಯವೂ ಬೃಹದಾಕಾರವಾಗಿ ಬೆಳೆಯುವ ಮರಗಳೇ. ಇವುಗಳ ಕಾಂಡದಲ್ಲಿ ರಾಳಪದಾರ್ಥ (ರೆಸಿûನ್) ಹೆಚ್ಚಾಗಿರುತ್ತದೆ. ಎಲೆಗಳು ಸರಳ ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಪ್ರತಿ ಎಲೆಯಲ್ಲೂ ಎದ್ದುಕಾಣುವಂಥ ವೃಂತಪರ್ಣಗಳು (ಸ್ಟಿಪ್ಯೂಲ್ಸ್) ಉಂಟು. ಹೂಗಳು ಉಭಯಲಿಂಗಿಗಳು ; ಇವಕ್ಕೆ ಸುವಾಸನೆಯುಂಟು. ಹೂಗಳಲ್ಲಿ ಪುಷ್ಪ ಪಾತ್ರೆ ಪುಷ್ಪಪೀಠಕ್ಕೊ ಅಂಡಾಶಯಕ್ಕೊ ಅಂಟಿಕೊಂಡಿದೆಯಲ್ಲದೆ ಕಾಯಿಯಲ್ಲೂ ಉದುರಿ ಹೋಗದೆ ಹಾಗೇ ಉಳಿದುಕೊಂಡಿರುತ್ತದೆ. ಅಲ್ಲದೆ ಕಾಯಿಯಲ್ಲಿ ಇದು ರೆಕ್ಕೆಗಳಂತೆ ಮಾರ್ಪಟ್ಟು ಫಲ ಪ್ರಸಾರಕ್ಕೆ ಸಹಾಯಮಾಡುತ್ತವೆ. ಉದಾಹರಣೆಗೆ ಸಾಲವೃಕ್ಷ. ಡಿಪ್ಟರೊಕಾರ್ಪಸ್ ಜಾತಿಗೆ ಸೇರಿದ ಸುಮಾರು 10 ಪ್ರಭೇದಗಳು ಅಸ್ಸಾಮ್ ಮತ್ತು ಅಂಡಮಾನ್ ದ್ವೀಪಗಳಲ್ಲಿ ಕಂಡುಬರುತ್ತವೆ. ಡಿಪ್ಟರೊಕಾರ್ಪಸ್ ಇಂಡಿಕಸ್, ಡಿ. ಮ್ಯಾಕ್ರೊಕಾರ್ಪಸ್, ಡಿ. ಟ್ಯೂಬಕ್ರ್ಯುಲೇಟಸ್, ಡಿ. ಟರ್ಬಿನೇಟಸ್ ಮುಂತಾದವು ಬಹಳ ಮುಖ್ಯವಾದ ಪ್ರಭೇದಗಳು. ಇವುಗಳ ಚೌಬೀನೆ ಬಲು ಭಾರವಾಗಿಯೂ ಗಟ್ಟಿಯಾಗಿಯೂ ಇದೆ. ಇದನ್ನು ಹಡಗು ನಿರ್ಮಿಸಲು ರೈಲು ಹಳಿಗಳಾಗಿ ಹಾಸಲು, ಬಹು ವಿಧದ ಮರದ ಸಾಮಾನುಗಳನ್ನು ತಯಾರಿಸಲು, ಪ್ಲೈವುಡ್ ಮಾಡಲು, ಇತ್ಯಾದಿ ಕೆಲಸಗಳಲ್ಲಿ ಉಪಯೋಗಿಸುತ್ತಾರೆ. ಅಲ್ಲದೆ ಎಲ್ಲ ಪ್ರಭೇದಗಳಲ್ಲೂ ರಾಳ ನಾಳಗಳುಂಟು. ಇವುಗಳ ಗರ್ಜನ ಎಣ್ಣೆ (ಗರ್ಜನ್ ಬಾಲ್ಸಮ್) ತೆಗೆಯುತ್ತಾರೆ. ಎಣ್ಣೆಯಲ್ಲಿ ಎರಡು ವಿಧಗಳಿವೆ. ಕಂದು ಅಥವಾ ಕಪ್ಪುಮಿಶ್ರಿತ ಹಸಿರುಬಣ್ಣದ ಮೃದುವಾದ ಬಗೆಯ ಎಣ್ಣೆಗೆ ಕನಿಯಿನ್ ತೈಲ ಎಂದು ಹೆಸರು. ತಿಳಿಬೂದುಬಣ್ಣದ ಇನ್ನೊಂದು ರೀತಿಯ ಎಣ್ಣೆಗೆ ಇನ್ ತೈಲ ಎಂದು ಹೆಸರು. ರಬ್ಬರು ಮರಗಳಿಗೆ ಮಾಡುವಂತೆ ಗಾಯಗಳನ್ನು ಮಾಡಿ ರಾಳವನ್ನು ಶೇಖರಿಸುತ್ತಾರೆ. ಕನಿಯನ್ ತೈಲವನ್ನು ಟರ್ಬಿನೇಟಸ್ ಪ್ರಭೇದದಿಂದಲೂ ಇನ್ ತೈಲವನ್ನು ಟ್ಯೂಬಕ್ರ್ಯುಲೇಟಸ್ ಪ್ರಭೇದದಿಂದಲೂ ಪಡೆಯುತ್ತಾರೆ. ಎರಡು ತೆರನ ತೈಲಗಳೂ ಮೆರುಗೆಣ್ಣೆಗಳಾಗಿ ಬಳಕೆಯಲ್ಲಿವೆ.

ಸಾಲವೃಕ್ಷ (ಶೋರಿಯ ರೊಬಸ್ಟ) ದಕ್ಷಿಣ ಭಾರತ, ಶ್ರೀಲಂಕಾ, ಫಿಲಿಪೀನ್ಸ್ ಮುಂತಾದ ಪ್ರದೇಶಗಳಲ್ಲಿ ಹೆಚ್ಚು ಬೆಳೆಯುತ್ತದೆ. ಇದರ ಹೂಗಳಿಗೆ ಬಹಳ ಸುವಾಸನೆಯುಂಟು. ಇದರ ಚೌಬೀನೆ ಹಳದಿ ಬಣ್ಣದ್ದು. ಅನೇಕ ವಿಧವಾದ ಮರದ ಸಾಮಾನುಗಳನ್ನು ಮಾಡಲು ಇದನ್ನು ಉಪಯೋಗಿಸುತ್ತಾರೆ. ಇದರ ಬೀಜಗಳಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿದೆ. ಇದರಿಂದ ಒಂದು ಬಗೆಯ ಬೆಣ್ಣೆಯನ್ನೂ ತೆಗೆಯುವುದುಂಟು. ಕೋಕೋ ಬೆಣ್ಣೆಗೆ ಬದಲಾಗಿ ಇದನ್ನು ಬಳಸುತ್ತಾರೆ. ಅಲ್ಲದೆ ಬೀಜಗಳನ್ನು ಹಾಗೆಯೇ ತಿನ್ನಬಹುದು.

ಧೂಪದ ಮರ (ವ್ಯಾಟೇರಿಯ ಇಂಡಿಕ) ಸೇಷಲ್ ದ್ವೀಪ ಮತ್ತು ಕೇರಳಗಳಲ್ಲಿ ಬೆಳೆಯುತ್ತದೆ. ಇದಕ್ಕೆ ಗುಗ್ಗುಳ, ಇಂಡಿಯನ್ ಕೋಪಾಲ್ ಮರ ಎಂಬ ಹೆಸರುಗಳೂ ಉಂಟು. ಇದರಿಂದ ಬರುವ ರಾಳವನ್ನು ಧೂಪವಾಗಿ ಬಳಸುವರು. ಇದರ ಬೀಜಗಳಲ್ಲಿ ಕೊಬ್ಬು ಉಂಟು. ಇದಕ್ಕೆ ಮಲಬಾರ್ ಕೊಬ್ಬು ಎಂದು ಹೆಸರು. ತುಪ್ಪಕ್ಕೆ ಬದಲಾಗಿ ಇದನ್ನು ಉಪಯೋಗಿಸುವುದಿದೆ.

ಡ್ರೈಬಲನಾಪ್ಸ್ ಎಂಬ ಹೆಸರಿನ ಮರದಿಂದ ಬೋರ್ನಿಯೊ ಕರ್ಪೂರವನ್ನು ತೆಗೆಯುತ್ತಾರೆ. ಅಲ್ಲದೆ ಕಿರಲ್‍ಬೋಗಿ ಮರದಿಂದ ಧೂಪವನ್ನು ಪಡೆಯುವುದುಂಟು. ಈ ಮರಗಳು ಅನೇಕ ಮರಗೆಲಸಗಳಿಗೂ ಉಪಯುಕ್ತವಾಗಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: