ವಿಷಯಕ್ಕೆ ಹೋಗು

ಜಾನ್ ಟೈಲರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾನ್ ಟೈಲರ್ (1790-1862). ಅಮೆರಿಕ ಸಂಯುಕ್ತ ಸಂಸ್ಥಾನಗಳ 10ನೆಯ ಅಧ್ಯಕ್ಷ (1841-1845).

ಬದುಕು

[ಬದಲಾಯಿಸಿ]

ವರ್ಜಿನಿಯದ ಗ್ರೀನ್‍ವೆಯಲ್ಲಿ 1790ರ ಮಾರ್ಚ್ 29ರಂದು ಹುಟ್ಟಿದ. ತಂದೆ ಜಾನ್ ಟೈಲರ್ ಒಬ್ಬ ನ್ಯಾಯವೇತ್ತ. ಶಾಲೆಯಲ್ಲಿದ್ದಾಗ ವಿದ್ಯಾರ್ಥಿಗಳ ಪ್ರೀತಿ ಗಳಿಸದ ಅಧ್ಯಾಪಕನೊಬ್ಬನ ವಿರುದ್ಧ ಹೋರಾಟದ ನಾಯಕತ್ವ ವಹಿಸಿ, ಆ ವಯಸ್ಸಿನಲ್ಲೇ ತನ್ನ ಸ್ಥೈರ್ಯವನ್ನೂ ಸ್ವತಂತ್ರ ಮನೋಭಾವವನ್ನೂ ಪ್ರದರ್ಶಿಸಿದ. ಮುಂದೆ ಆತನ ಜೀವಮಾನದ ಉದ್ದಕ್ಕೂ ಈ ಎರಡು ಗುಣಗಳೂ ಪದೇ ಪದೇ ಪ್ರಕಟವಾದುವು. ಈತ 1807ರಲ್ಲಿ ಪದವೀಧರನಾಗಿ ತಂದೆಯ ಕಛೇರಿಯಲ್ಲಿ ನ್ಯಾಯಾಭ್ಯಾಸ ಮಾಡಿ, 1809ರಲ್ಲಿ ವಕೀಲನಾದ.

ಟೈಲರನ ಸಾರ್ವಜನಿಕ ಜೀವನ ಆರಂಭವಾದ್ದು 1811ರಲ್ಲಿ. ಆ ವರ್ಷ ಅವನು ರಾಜ್ಯ ವಿಧಾನ ಮಂಡಲದ ಸದಸ್ಯನಾಗಿ ಆಯ್ಕೆಯಾದ. ಅದಕ್ಕೆ ಐದು ಬಾರಿ ಅನುಕ್ರಮವಾಗಿ ಆಯ್ಕೆ ಹೊಂದಿದ್ದ ಟೈಲರ್ 1816ರಲ್ಲಿ ರಾಜ್ಯ ಪರಿಷತ್ತಿಗೆ ಆಯ್ಕೆಯಾದಾಗ ಆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಮತ್ತೆ 1823 ರಲ್ಲಿ ಅದಕ್ಕೆ ಮರಳಿದ; ಪುನಃ 1839ರಲ್ಲಿ ಆಯ್ಕೆಯಾದ. ಅಧ್ಯಕ್ಷ ಮ್ಯಾಡಿಸನನ ಯುದ್ಧಕಾರ್ಯಗಳಿಗೆ ಬೆಂಬಲ ನೀಡಿದ ಈತ ನಡುವೆ (1813) ಸ್ವಲ್ಪ ಕಾಲ ಸೈನ್ಯವೊಂದರ ಕ್ಯಾಪ್ಟನ್ ಆಗಿದ್ದ.

1817-21ರಲ್ಲಿ ಅಮೆರಿಕದ ಪ್ರತಿನಿಧಿ ಸಭೆಯ ಸದಸ್ಯನಾಗಿ, ಯುದ್ಧದ ಪರಿಣಾಮಗಳ ಪರಿಹಾರ ಕ್ರಮಗಳಿಗೆ ಬೆಂಬಲ ನೀಡಿದ. ಟೈಲರ್ 1825ರಲ್ಲಿ ವರ್ಜಿನಿಯದ ರಾಜ್ಯಪಾಲರಾಗಿ ಆಯ್ಕೆಯಾದನಾದರೂ ಆ ಸ್ಥಾನದಲ್ಲಿ ಗೌರವವಿದ್ದರೂ ಅಧಿಕಾರವಿಲ್ಲದ್ದರಿಂದ ಬಹುಕಾಲ ಇರಲಿಲ್ಲ. 1827ರಲ್ಲಿ ಅದಕ್ಕೆ ರಾಜೀನಾಮೆ ನೀಡಿದ. ಅಮೆರಿಕದ ಸೆನೆಟಿಗೆ ಅವನ ಆಯ್ಕೆಯಾಯಿತು. 1836ರಲ್ಲಿ ಸೆನಟಿಗೆ ರಾಜೀನಾಮೆ ನೀಡಿದ ಡೆಮೊಕ್ರ್ಯಾಟಿಕ್ ಪಕ್ಷದಿಂದ ಹೊರಬಂದ ಟೈಲರ್ ಅದೇ ವರ್ಷ ಅಮೆರಿಕದ ಉಪಾಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಿ ಸೋತ. 1839ರಲ್ಲಿ ಹ್ವಿಗ್ ಪಕ್ಷ ಅವನನ್ನು ಉಪಾಧ್ಯಕ್ಷತೆಗೆ ಸ್ಪರ್ಧಿಯಾಗಿ ಸರ್ವಾನುಮತದಿಂದ ಆರಿಸಿತು. 1840ರಲ್ಲಿ ನಡೆದ ಚುನಾವಣೆಗಳಲ್ಲಿ ಅಧ್ಯಕ್ಷ. ಉಪಾಧ್ಯಕ್ಷರಾಗಿ ಹ್ವಿಗ್ ಅಭ್ಯರ್ಥಿಗಳು ಜಯಗಳಿಸಿದರು.

ಅಧ್ಯಕ್ಷನಾಗಿ ಆಯ್ಕೆ ಹೊಂದಿದ್ದ ಹ್ಯಾರಿಸನ್ ಅಧಿಕಾರಕ್ಕೆ ಬಂದ ಒಂದು ತಿಂಗಳಿಗೆ ತೀರಿಕೊಂಡಾಗ ಟೈಲರ್‍ಗೆ ಅಧ್ಯಕ್ಷತೆಯ ಅಧಿಕಾರ ಪ್ರಾಪ್ತವಾಯಿತು. ಮರಣಹೊಂದಿದ ಅಧ್ಯಕ್ಷನ ಸ್ಥಾನಕ್ಕೆ ಅಮೆರಿಕದಲ್ಲಿ ಬಡ್ತಿ ಹೊಂದಿದವರಲ್ಲಿ ಈತ ಮೊದಲಿಗ. ಈತ ಯಾವ ರಾಜಕೀಯ ಪಕ್ಷಕ್ಕೂ ಸೇರದ ಸ್ವತಂತ್ರ ಸದಸ್ಯನಾಗಿದ್ದರಿಂದ ಹ್ವಿಗ್ ಪಕ್ಷದವರಿಗೆ ಈತನಿಂದ ಯಾವ ಅನುಕೂಲವೂ ಆಗಲಿಲ್ಲ. ಸಂಯುಕ್ತ ಸಂಸ್ಥಾನಗಳ ರಾಷ್ಟ್ರೀಯ ಬ್ಯಾಂಕೊಂದರನ್ನು ಆರಂಭಿಸಬೇಕೆಂದು ಅವರು ಮಾಡಿದ ಯತ್ನಗಳನ್ನು ಈತ ಎರಡು ಬಾರಿ ನಿಷೇಧಿಸಿದ. ಸರ್ಕಾರಿ ಜಮೀನನ್ನು ಮಾರಾಟ ಮಾಡಿ ಬಂದ ಹಣವನ್ನು ಸಂಸ್ಥಾನ ಸರ್ಕಾರಗಳಲ್ಲಿ ಹಂಚಬೇಕೆನ್ನುವ ನಿಯಮವನ್ನು ಜಾರಿಗೆ ತರಲು ಅವರು ನಡೆಸಿದ ಯತ್ನಗಳನ್ನು ಸಹ ಮೂರು ಬಾರಿ ನಿಷೇಧಿಸಿದ. ಹ್ಯಾರಿಸನ್ ನೇಮಕ ಮಾಡಿದ್ದ ಮಂತ್ರಿಮಂಡಲದ ಎಲ್ಲ ಸದಸ್ಯರೂ. ವಿದೇಶಾಂಗ ಕಾರ್ಯದರ್ಶಿ ವೆಬ್ಸ್ಟರ್ ವಿನಾ, ಇವನು ಅಧಿಕಾರಕ್ಕೆ ಬಂದ ಆರು ತಿಂಗಳ ಅನಂತರ ರಾಜೀನಾಮೆ ನೀಡಿದರು. ಈಶಾನ್ಯ ಗಡಿ ಇತ್ಯರ್ಥಕ್ಕೆ ಸಂಬಂಧಿಸಿದ ಸಂಧಾನಗಳು ಪೂರೈಸಿದ ಅನಂತರ ವೆಬ್ಸ್ಟರನೂ ರಾಜೀನಾಮೆ ನೀಡಿದ. ಮೇನ್ ಮತ್ತು ನ್ಯೂ ಬ್ರನ್ಸ್‍ವಿಕ್‍ಗಳ ನಡುವಣ ಅರೂಸ್ಟೂಕ್ ನದೀಪ್ರದೇಶದ ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯವನ್ನು ಪರಸ್ಪರ ಚರ್ಚೆಗಳ ಮೂಲಕ ಪರಿಹರಿಸಿ, ಇತ್ಯರ್ಥ ಮಾಡಿದ್ದು ಅಧಿಕಾರಾವಧಿಯ ಒಂದು ಮಹತ್ವಪೂರ್ಣ ಸಾಧನೆ. ಟೆಕ್ಸಸ್ ಪ್ರದೇಶವನ್ನು ಸಂಯುಕ್ತ ಸಂಸ್ಥಾನಗಳೊಡನೆ ವಿಲೀನಗೊಳಿಸಲು ಅಮೆರಿಕದ ಎರಡು ಸಭೆಗಳು ಒಟ್ಟಾಗಿ ಒಪ್ಪಿಗೆ ನೀಡಿದ್ದು ಇವನ ಕಾಲದ ಇನ್ನೊಂದು ಸಾಧನೆ. ಟೇಲರ್ ಈ ವಿಧೇಯಕವನ್ನು ಸೆನೆಟ್ ಮುಂದೆ ಮಂಡಿಸಿದಾಗ ಅದರ ಒಪ್ಪಿಗೆ ದೊರಕಲಿಲ್ಲ (1844). ಸೆನೆಟ್ ಒಪ್ಪಿಗೆಗೆ 2/3 ಬಹುಮತದ ಅವಶ್ಯಕತೆ ಇತ್ತು. ಆದ್ದರಿಂದ 1844 ರ ಅಂತ್ಯದಲ್ಲಿ ಇನ್ನೊಮ್ಮೆ ಈ ಮಸೂದೆಯನ್ನು ಪ್ರತಿನಿಧಿ ಸಭೆ ಹಾಗೂ ಸೆನೆಟ್‍ಗಳ ಜಂಟಿ ಸಭೆಯ ಮುಂದಿರಿಸಿ ಅದರ ಅನುಮತಿ ಪಡೆದ. ಜಂಟಿ ಸಭೆಯ ಸಾಮಾನ್ಯ ಬಹುಮತ ಹಾಗೂ ಅಧ್ಯಕ್ಷನ ಒಪ್ಪಿಗೆ ಸಾಕಾಗಿದ್ದರಿಂದ ತೊಂದರೆಯಾಗಲಿಲ್ಲ. 1845ರ ಮಾರ್ಚ್ 1ರಂದು ಟೈಲರ್ ಇದಕ್ಕೆ ಸಹಿ ಹಾಕಿದ. ಅನಂತರ ಅಧಿಕಾರಕ್ಕೆ ಬಂದ ಪೋಕ್ ಮೆಕ್ಸಿಕೋದೊಡನೆ ಕದನ ಹೂಡಬೇಕಾಯಿತಾದರೂ ಟೆಕ್ಸಸ್ ಅಮೆರಿಕದಲ್ಲಿ ವಿಲೀನಗೊಳ್ಳಲು ದಿಟ್ಟ ಹೆಜ್ಜೆಯನ್ನು ಹಾಕಿದವನು ಟೈಲರ್. 1844ರಲ್ಲಿ ಅಧ್ಯಕ್ಷಸ್ಥಾನಕ್ಕೆ ಡೆಮೊಕ್ರ್ಯಾಟ್ ಅಭ್ಯರ್ಥಿಯಾಗಲು ಟೈಲರ್ ಪ್ರಯತ್ನಿಸಿದನಾದರೂ ಅವನಿಗೆ ಆ ಅವಕಾಶ ದೊರಕಲಿಲ್ಲ. ಮುಂದೆ ಅಕ್ರಮವಾದ ಸಮಾವೇಶವೊಂದರಿಂದ ನಾಮಕರಣ ಪಡೆದ. ಆದರೆ ಪೋಕನ ಪರವಾಗಿ ಸ್ಪರ್ಧೆಯಿಂದ ಹಿನ್ನಡೆದ. ಮುಂದೆ ಕೊನೆಯ ವರೆಗೂ ಡೆಮೊಕ್ರ್ಯಾಟಿಕ್ ಪಕ್ಷಕ್ಕೆ ನಿಷ್ಠೆಯಿಂದ ನಡೆದುಕೊಂಡ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: