ಗೌತಮ ಮಹರ್ಷಿ
ಗೌತಮ ಮಹರ್ಷಿ | |
---|---|
ಗೌರವಗಳು | one of the Saptarishis (Seven Great Sages Rishi) |
ಗೌತಮ ಮಹರ್ಷಿಸಪ್ತರ್ಷಿಗಳಲ್ಲಿ ಒಬ್ಬ. ದೀರ್ಘತಮ ಮತ್ತು ಪ್ರದ್ವೇಷಿಣಿಯರ ಮಗ. ಈತನ ತಂದೆ ಆಂಗಿರಸ ಕುಲದವನಿದ್ದು ಬೃಹಸ್ಪತಿಯ ಶಾಪದ ಮೂಲಕ ಹುಟ್ಟುಕುರುಡನಾಗಿದ್ದ. ಎಷ್ಟೋ ಕಡೆಗಳಲ್ಲಿ ದೀರ್ಘತಮ ತಾನೇ ಗೌತಮ ಎಂದು ಹೇಳಿಕೊಂಡಿದ್ದಾನೆ. ಗೌತಮನಿಗೆ ಔಶೀನರೀ ಎಂಬ ಶೂದ್ರ ಸ್ತ್ರೀಯಲ್ಲಿ ಕಕ್ಷೀವಾನ ಮುಂತಾದ ಮಕ್ಕಳು ಹುಟ್ಟಿದರು. ಸನತ್ಕುಮಾರ ಈತನಿಗೆ ಬ್ರಹ್ಮವಿದ್ಯೆ ಹೇಳಿಕೊಟ್ಟ ಗುರು. ಗೌತಮನಿಗೆ ಹಂಸ ಮತ್ತು ಪರಮಹಂಸ ಧ್ಯಾನವನ್ನು ಹೇಗೆ ಮಾಡಬೇಕೆಂದು ಗುರು ಹೇಳಿಕೊಟ್ಟ. ಗೌತಮನನ್ನು ಬ್ರಹ್ಮರ್ಷಿ ಎಂದು ಕರೆಯಲಾಗಿದೆ. ಬ್ರಹ್ಮದೇವನ ಮಾನಸಕನ್ಯೆ ಅಹಲ್ಯೆ ಈತನ ಹೆಂಡತಿ. ಗೌತಮೀ ಎಂಬುದು ಈಕೆಯ ಒಂದು ಹೆಸರು. ಶತಾನಂದ ಈಕೆಯ ಮಗ. ಈಕೆಯ ಹೆಸರಿನಿಂದಲೇ ಗೋದಾವರಿ ನದಿಗೆ ಗೌತಮೀ ಎಂಬ ಹೆಸರು ಬಂದಿದೆ. ವೃಷಾದರ್ಭಿ ಎಂಬ ರಾಜ ತನ್ನ ರಾಜ್ಯದಲ್ಲಿ ಅನ್ನ ಕ್ಷಾಮ ಒದಗಿದ್ದರಿಂದ ಋಷಿಗಳಿಗೆ ದಾನ ಕೊಡಲು ನಿಶ್ಚಯಿಸಿದಾಗ ಆ ದಾನವನ್ನು ನಿರಾಕರಿಸಿದ ಏಳು ಋಷಿಗಳಲ್ಲಿ ಗೌತಮನೂ ಒಬ್ಬ. ತನ್ನ ಶಿಷ್ಯ ಉದಂಕನಿಗೇ ಮಗಳನ್ನು ಕೊಟ್ಟು ಲಗ್ನ ಮಾಡಿದನೆನ್ನಲಾಗಿದೆ.
ಗೌತಮನ ಆಶ್ರಮ ಪಾರಿಯಾತ್ರ (ವಿಂಧ್ಯ) ಪರ್ವತದ ಹತ್ತಿರ ಇತ್ತೆಂದು ಹೇಳಲಾಗಿದೆ. ಅಲ್ಲಿ ಈತ ಅರುವತ್ತು ಸಾವಿರ ವರ್ಷಗಳವರೆಗೆ ತಪಸ್ಸು ಮಾಡಿದನೆಂದು ಪ್ರತೀತಿ. ಆಗ ಅಲ್ಲಿ ಪ್ರತ್ಯಕ್ಷನಾದ ಯಮನನ್ನು ಪಿತೃಋಣದಿಂದ ಮುಕ್ತನಾಗುವ ಬಗೆಯನ್ನು ವಿವರಿಸುವಂತೆ ಈತ ಕೇಳಿಕೊಂಡ. ಸತ್ಯ, ಧರ್ಮ, ತಪಸ್ಸು ಮತ್ತು ಶುಚಿತ್ವಗಳನ್ನವಲಂಬಿಸಿ ತಂದೆತಾಯಿಗಳ ಸೇವೆ ಮಾಡಿದರೆ ಪವಿತ್ರಲೋಕ ಪ್ರಾಪ್ತಿಯಾಗುತ್ತದೆಂದು ಯಮ ಈತನಿಗೆ ಉತ್ತರವಿತ್ತ. ಹನ್ನೆರಡು ವರ್ಷದ ಬರಗಾಲ ಪ್ರಾಪ್ತವಾದರೂ ಗೌತಮ ಅಲ್ಲಿನ ಋಷಿಗಳಿಗೆ ಊಟವನ್ನು ಒದಗಿಸಿ ಬದುಕಿಸಿದ.
ಗೌತಮನೆಂಬ ಇನ್ನೊಬ್ಬ ಋಷಿ ಆಂಗಿರಸ ಕುಲದಲ್ಲಿನ ಋಷಿಯೂ ಪ್ರವರವೂ ಆಗಿದ್ದಾನೆ. ವೈವಸ್ವತ ಮನ್ವಂತರದಲ್ಲಿ ಈತ 20ನೆಯ ಪರ್ಯಾಯದ ವ್ಯಾಸ.
ಶಾಕ್ಯರಿಗೆ ಪೂಜ್ಯನಾದ ಬುದ್ಧದೇವನಿಗೂ ಗೌತಮನೆಂಬ ಹೆಸರಿದೆ.