ವಿಷಯಕ್ಕೆ ಹೋಗು

ಗೋಲ್ಡಿಂಗ್, ವಿಲಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋಲ್ಡಿಂಗ್, ವಿಲಿಯಮ್ (1983)

1911-93. ನೊಬೆಲ್ ಪ್ರಶಸ್ತಿ ಪುರಸ್ಕೃತ ಇಂಗ್ಲಿಷ್ ಕಾದಂಬರಿಕಾರ.

ಬದುಕು

[ಬದಲಾಯಿಸಿ]

ತಂದೆ ವಿಚಾರವಾದಿ; ತಾಯಿ ಮಹಿಳೆಯರ ಹಕ್ಕುಬಾಧ್ಯತೆಗಳಿಗಾಗಿ ಹೋರಾಟ ನಡೆಸಿದಾಕೆ. ಈತ 1911ರ ಸೆಪ್ಟೆಂಬರ್ 19ರಂದು ಜನಿಸಿದ. ಆಕ್ಸ್‌ಫರ್ಡಿನಲ್ಲಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದ ಈತ ಅದನ್ನು ತೊರೆದು ಸಾಹಿತ್ಯದ ಅಧ್ಯಯನಕ್ಕೆ ತೊಡಗಿದ. ಅನಂತರ ಶಾಲಾ ಉಪಾಧ್ಯಾಯನಾಗಿ ದುಡಿದ. ಎರಡನೆಯ ಮಹಾಯುದ್ಧದಲ್ಲಿ ಪಾಲ್ಗೊಂಡ.

ಈತ 1993ರ ಜೂನ್ 19ರಂದು ನಿಧನನಾದ.

ಸಾಹಿತ್ಯ

[ಬದಲಾಯಿಸಿ]

ಎರಡನೆಯ ಮಹಾಯುದ್ಧ ಈತನಲ್ಲಿ ಲೋಕಸ್ವಭಾವದ ಅರಿವು ಮೂಡಿಸಿತು. ಒಂದು ದಿನ ಮಕ್ಕಳು ದೇವರೆಂಬುದು ನಿಜವೆ, ನಿಜಕ್ಕೂ ಅವರ ವರ್ತನೆ ಹೇಗೆ ಎಂಬ ಚಿಂತನೆಗೆ ತೊಡಗಿದ. ಇದರ ಫಲವಾಗಿ ಬಂದದ್ದು ನೊಬೆಲ್ ಪ್ರಶಸ್ತಿ ಪುರಸ್ಕೃತ ಕಾದಂಬರಿ ಲಾರ್ಡ್ ಆಫ್ ದಿ ಫ್ಲೈಸ್ (1954). ಇದು ಸಾಹಿತ್ಯ ವಿಮರ್ಶಕರ ಗಮನ ಸೆಳೆದಿರುವ ಆಧುನಿಕ ಮಹಾಕೃತಿ. ಇಲ್ಲಿಯದು ತಲ್ಲೀನಗೊಳಿಸುವ ಬೋಧಪ್ರದ ಕತೆ. ಒಳ್ಳೆಯ ಸುಧಾರಿತ ಮಕ್ಕಳ ಮುಗ್ಧತೆ, ಬೆಂಕಿಮಾಡುವಿಕೆ, ಬೇಟೆ, ಬುಡಕಟ್ಟು ನೃತ್ಯ, ಭೀತಿ, ಕೋಪ, ಕಾಮ - ಇಂಥ ಸಂಕೀರ್ಣ ಚಿತ್ರಣದ ಮೂಲಕ ಮಾನವೇತಿಹಾಸದ ಬೃಹತ್ ಪರಿಚ್ಛೇದವನ್ನೇ ಈತ ರೂಪಿಸಿದಹಾಗಿದೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ನಿರ್ಜನ ದ್ವೀಪವೊಂದರಲ್ಲಿ ಸಿಕ್ಕಿಬಿದ್ದ ಹುಡುಗರ ಕ್ರೂರ ಹಾಗೂ ವಿನಾಶಕಾರೀ ಪ್ರವೃತ್ತಿಯ ಇಲ್ಲಿನ ನಿರೂಪಣೆಯಲ್ಲಿ ಹುಡುಗರು ಕೇವಲ ಪ್ರತೀಕವಾಗಿದ್ದಾರೆ. ಮಾನವ ಪತನದ ಚಿತ್ರಣ ಇಲ್ಲಿದೆ.


ದಿ ಇನ್ಹೆರಿಟರ್ಸ್ (1955) ಐವತ್ತು ಸಾವಿರ ವರ್ಷಗಳಿಗೂ ಹಿಂದೆ ಬದುಕಿದ್ದ ನಿಯಾಂಡರ್ತಾಲ್ ಮಾನವನ ಬದುಕು ಹಾಗೂ ನಿರ್ನಾಮದ ಕತೆ. ಪಿಂಚರ್ ಮಾರ್ಟಿನ್ (1956) ಮಾನವನ ಬದುಕಿನ ಅನಂತರದ ಸ್ಥಿತಿ ಕುರಿತದ್ದು. ದಿ ಸ್ವೈರ್ (1964) ಮಧ್ಯಯುಗದ ಪುಜಾರಿಯೊಬ್ಬನ ಹುಚ್ಚು ಕನಸನ್ನು ಕುರಿತದ್ದು. ರೈಟ್ಸ್‌ ಆಫ್ ಪ್ಯಾಸೇಜ್ (1980) ಸಲಿಂಗರತಿ ಕುರಿತದ್ದು. ದಿ ಪೇಪರ್ಮೆನ್ (1984) ವಿಮರ್ಶಕರನ್ನೂ ಪತ್ರಕರ್ತರನ್ನೂ ತರಾಟೆಗೆ ತೆಗೆದು ಕೊಳ್ಳುವಂಥದ್ದು. ಈ ಕಾದಂಬರಿಗಳು ಮಾನವ ಸ್ವಭಾವದ ವಿವಿಧ ಮುಖಗಳ ವಿಶ್ಲೇಷಣೆ ಮಾಡುತ್ತವೆ.

ಈತನ ಎಲ್ಲ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಬರುವ ಸಮುದ್ರ ಚಿತ್ರಣ ಈತನ ಸಮುದ್ರ ಪ್ರೀತಿಗೆ ಸಂಕೇತವಾಗಿದೆ. ಈತ ನಾವಿಕನೂ ಆಗಿದ್ದ. ಮಾನವನ ಸುಪ್ತ ಮನಸ್ಸಿನ ಸಂಕೇತವಾಗಿ ಸಮುದ್ರ ಈತನ ಕೃತಿಗಳಲ್ಲಿ ಮಹತ್ತ್ವದ ಪಾತ್ರ ವಹಿಸಿದೆ.


ಈತ ಕವನಗಳನ್ನೂ ಬರೆದಿದ್ದಾನೆ. ದಿ ಬ್ರಾಸ್ ಬಟರ್ಫ್ಲೈ ಎಂಬ ನಾಟಕವನ್ನೂ ದಿ ಹಾಟ್ ಗೇಟ್ಸ್‌ ಎಂಬ ಪ್ರಬಂಧ ಸಂಕಲನವನ್ನೂ ಹೊರತಂದಿದ್ದಾನೆ.

ಪ್ರಶಸ್ತಿಗಳು

[ಬದಲಾಯಿಸಿ]

ರೈಟ್ಸ್‌ ಆಫ್ ಪ್ಯಾಸೇಜ್ ಪುಸ್ತಕಕ್ಕೆ ಬೂಕರ್ ಬಹುಮಾನ ದೊರೆತಿದೆ. ಲಾರ್ಡ್ ಆಫ್ ದಿ ಫ್ಲೈಸ್ ಕೃತಿಗೆ ನೊಬೆಲ್ ಪ್ರಶಸ್ತಿ ಸಂದಿದೆ (1983).