ವಿಷಯಕ್ಕೆ ಹೋಗು

ಖಾರ್ಟೂಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖಾರ್ಟೂಂ - ಸೂಡಾನ್ ಗಣರಾಜ್ಯದ ರಾಜಧಾನಿ. ಖಾರ್ಟೂಂ ಪ್ರಾಂತ್ಯದ ಆಡಳಿತಕೇಂದ್ರ. ನೀಲಿ ಮತ್ತು ಬಿಳಿ ನೈಲ್‍ಗಳ ಸಂಗಮ ಸ್ಥಳದಲ್ಲಿದೆ. ಇಲ್ಲಿಯ ಜನಸಂಖ್ಯೆ 93,103 (1956). ಖಾರ್ಟೂಂ ಉತ್ತರ ಮತ್ತು ಆಮ್‍ಡರ್ಮನ್ ನಗರಗಳೊಂದಿಗೆ ಕೂಡಿದಂತೆ ಇದು ಇಡೀ ಸೂಡಾನಿನಲ್ಲೇ ದೊಡ್ಡ ನಗರಪ್ರದೇಶವಾಗಿ ಬೆಳೆಯುತ್ತಿದೆ. ಉತ್ತರದಲ್ಲಿ ನೀಲಿ ನೈಲ್‍ನ ಬಲದಂಡೆಯ ಮೇಲೆ ಖಾರ್ಟೂಂ ಉತ್ತರವೂ ಸಂಗಮದ ಉತ್ತರಕ್ಕೆ ಪಶ್ಚಿಮದಂಡೆಯ ಮೇಲೆ ಆರ್ಮ್‍ಡರ್ಮನ್ ನಗರವೂ ಇವೆ.

ಇಲ್ಲಿರುವವರಲ್ಲಿ 83% ಜನರ ಭಾಷೆ ಅರಬ್ಬೀ.

ಖಾರ್ಟೂಂ ನಗರವನ್ನೊಳಗೊಂಡ ಕೆಂದ್ರೀಯ ಪ್ರಾಂತ್ಯ ಉ.ಅ. 15º ಮತ್ತು 17º ನಡುವೆ ಇದೆ. ತ್ರಿಕೋಣಕಾರವಾದ ಈ ಪ್ರಾಂತ್ಯದ ದಕ್ಷಿಣಾಗ್ರದ ಕಡೆಯಲ್ಲಿ ಖಾರ್ಟೂಂ, ಖಾರ್ಟೂಂ ಉತ್ತರ ಮತ್ತು ಅಮ್‍ಡರ್ಮನ್ ಪಟ್ಟಣಗಳಿವೆ. ಜಬಲ್ ಆಲಿಯ ಕಟ್ಟೆ ಇರುವುದು ಈ ಕೊನೆಯಲ್ಲಿ. ಪ್ರಾಂತ್ಯದ ಉತ್ತರದ ಎಲ್ಲೆ ನೈಲ್ ನದಿಯನ್ನು ಅದರ ಆರನೆಯ ಅಬ್ಬಿಯ ಬಳಿ ಹಾದುಹೋಗುತ್ತದೆ. ಜನಸಂಖ್ಯೆ 5,04,023 (1956). ವಿಸ್ತೀರ್ಣ 8,097. ಚ.ಮೈ. ಪ್ರಾಂತ್ಯದ ಅರ್ಧದಷ್ಟು ಜನ ಅಲ್ಲಿಯ ಮೂರು ನಗರಗಳಲ್ಲಿ ವಾಸಮಾಡುತ್ತಾರೆ.

ಪ್ರಾಂತ್ಯದಲ್ಲಿರುವ ಮೂರು ಪಟ್ಟಣಗಳಿಗೂ ಮೂರು ಪುರಸಭೆಗಳಿವೆ. ಪ್ರಾಂತ್ಯವನ್ನು ಎರಡು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಒಂದು ಜಿಲ್ಲೆಗೆ ಖಾರ್ಟೂಂ ಉತ್ತರವೂ ಇನ್ನೊಂದಕ್ಕೆ ಅಮ್ ಡರ್ಮನ್ನೂ ಆಡಳಿತ ಕೇಂದ್ರಗಳು. ಖಾರ್ಟೂಂ ಉತ್ತರ ಮುಖ್ಯ ಕೈಗಾರಿಕಾ ಕೇಂದ್ರ. ಜನಸಂಖ್ಯೆ 39,082. ಅಲ್ಲಿ ಸೇ. 95 ಮಂದಿ ಅರಬ್ಬೀ ಭಾಷೆ ಆಡುವವರು.

ಇತಿಹಾಸ

[ಬದಲಾಯಿಸಿ]

ಅರಬ್ಬೀ ಭಾಷೆಯಲ್ಲಿ ಖಾರ್ಟೂಂ ಎಂದರೆ ಅನೆಯ ಸೊಂಡಿಲು, ನದೀಸಂಗಮದ ಬಳಿ ಸೊಂಡಿಲಂತೆ ಚಾಚಿಕೊಂಡಿರುವ ಸ್ಥಳದಲ್ಲಿ ಬೀಡುಬಿಟ್ಟಿದ್ದ (1821) ಈಜಿಪ್ಟ್ ಸೈನಿಕ ಶಿಬಿರವನ್ನು ಮೊದಲು ಹೀಗೆಂದು ಕರೆಯಲಾಗುತ್ತಿತ್ತು. ಕಾಲಕ್ರಮದಲ್ಲಿ ಸೈನಿಕ ಶಿಬಿರದ ಸುತ್ತ ವ್ಯಾಪಾರಿಗಳು ಪೇಟೆ ನಿರ್ಮಿಸಿದರು. ಪೇಟೆಯೇ ಕೋಟೆಯೊಳಗಿನ ಊರಾಯಿತು. ಸೂಡಾನಿನ ಗವರ್ನರ್-ಜನರಲ್ ಆಗಿದ್ದ ಮೇಜರ್ ಜನರಲ್ ಚಾಲ್ರ್ಸ್ ಗಾರ್ಡನನ್ನು ಮಹದಿಸ್ಟ್ ಸೈನಿಕರು ಕೊಂದುಹಾಕಿದರು. ಇದರಿಂದ ಖಾರ್ಟೂಮನ್ನು ಪರಿತ್ಯಜಿಸಲಾಗಿತ್ತು. 1898ರಲ್ಲಿ ಮೇಜರ್ ಜನರಲ್ ಎಚ್.ಎಚ್. ಕಿಚನರ್ ಇದನ್ನು ಗೆದ್ದುಕೊಂಡಮೇಲೆ ನಗರವನ್ನು ಮತ್ತೆ ನಿರ್ಮಿಸಲಾಯಿತು. 1954ರ ವರೆಗೂ ಇದು ಆಂಗ್ಲೋ-ಈಜಿಪ್ಟಿಯನ್ ಸರ್ಕಾರದ ಕೇಂದ್ರವಾಗಿತ್ತು; 1954ರಿಂದ ಈಚೆಗೆ ಇದು ಸ್ವತಂತ್ರ ಸೂಡಾನಿನ ರಾಜಧಾನಿಯಾಗಿದೆ.

ನಗರದ ಪ್ರಮುಖ ಸ್ಥಳಗಳು

[ಬದಲಾಯಿಸಿ]

ಸರ್ಕಾರಿ ಕಚೇರಿಗಳ ಪೇಟೆ ವಲಯಗಳ ಸುತ್ತಲೂ ಖಾರ್ಟೂಂ ಬೆಳೆದಿದೆ. ಸಾಲು ಮರಗಳಿಂದ ವಿಶಾಲರಸ್ತೆಗಳೂ ಚೌಕಗಳೂ ಸುಂದರವಾಗಿವೆ. ನೀಲಿ ನೈಲ್ ನದಿಯ ದಂಡೆಯಲ್ಲಿ ಸರ್ಕಾರಿ ಅಧಿಕಾರಿಗಳ ನಿವಾಸಗಳ ಕಚೇರಿಗಳೂ ವಸ್ತುಸಂಗ್ರಹಾಲಯವೂ ಅರಮನೆ ಮತ್ತು ಶಾಸನಸಭಾ ಭವನವೂ ವಿಶ್ವವಿದ್ಯಾಲಯವೂ ಇವೆ. ಸಾಲುಮರಗಳಿಂದ ಕೂಡಿದ ರಸ್ತೆಯೊಂದು ನೀಲಿ ನೈಲ್ ಗುಂಟ ಸಾಗಿ, ಬಿಳಿ ನೈಲ್ ರಸ್ತೆ ಸೇತುವೆಯನ್ನು ಕೂಡುತ್ತದೆ. ಆಮ್‍ಡರ್ಮನ್‍ಗೆ ಹೋಗುವ ದಾರಿಯಿದು. ನದಿಯಲ್ಲಿ ನೌಕೆಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಈ ಸೇತುವೆಯ ಕಮಾನು ತೆರೆಯಬಹುದು. ರೋಮನ್ ಕ್ಯಾಥೊಲಿಕ್, ಆಂಗ್ಲಿಕನ್ ಮತ್ತು ಕಾಪ್ಟಿಕ್ ಆರಾಧನ ಮಂದಿರಗಳೂ ಗ್ರೀಕ್ ಮತ್ತು ಮರೊನೈಟ್ ಚರ್ಚುಗಳೂ ಆವುಗಳ ಶಾಲೆಗಳೂ ಮೃಗಾಲಯ ಮತ್ತು ಸಸ್ಯಶಾಸ್ತ್ರಕ ಉದ್ಯಾನಗಳೂ ಇಲ್ಲಿಯ ಹಸುರಿನ ನಡುವೆ ಕಂಗೊಳಿಸುತ್ತವೆ. ಈ ಸ್ಥಳದ ಹಿಂದೆ ಇರುವುದೇ ಮಾರುಕಟ್ಟೆ. ಅದರಿಂದಾಚೆಗೆ ಮಸೀದಿಗಳು, ಪೌರ ಆಸ್ಪತ್ರೆ, ವಿಶ್ವವಿದ್ಯಾಲಯ ವೈದ್ಯ ಶಿಕ್ಷಣಶಾಲೆ ಮತ್ತು ಪ್ರಯೋಗಾಲಯ ಇವೆ.

ಉದ್ಯಾನ ಭೂಯಿಷ್ಠವಾದ ಆಧುನಿಕ ಉಪನಗರಗಳು ಇರುವುದು ಆಗ್ನೇಯದಲ್ಲಿ, ಅಂತರ ರಾಷ್ಟ್ರೀಯ ವಿಮಾಣ ನಿಲ್ದಾಣದ ಬಳಿ.

ಸಾರಿಗೆ ಮತ್ತು ಕೈಗಾರಿಕೆಗಳು

[ಬದಲಾಯಿಸಿ]

ನಗರದ ದಕ್ಷಿಣದಲ್ಲಿರುವ ರೈಲ್ವೆ ನಿಲ್ದಾಣದಿಂದ ಎರಡು ಮುಖ್ಯ ರೈಲ್ವೆಮಾರ್ಗಗಳುಂಟು. ಇವುಗಳಲ್ಲಿ ಒಂದು ಮಾರ್ಗ ದಕ್ಷಿಣಾಗ್ನೇಯಾಭಿಮುಖವಾಗಿ ಸಾಗುತ್ತದೆ. ನೈಲ್ ನದಿಯ ಮೇಲೆ ಅಲ್ಲದೆ ಈ ಮಾರ್ಗವಾಗಿಯೂ ಖಾರ್ಟೂಂ ನಗರಕ್ಕೆ ಅನೇಕ ಸಾಮಗ್ರಿಗಳು (ಮೇಣ. ಚರ್ಮ, ಎಣ್ಣೆ ಬೀಜ) ಪರಿಷ್ಕರಣಕ್ಕಾಗಿ ಬರುತ್ತವೆ. ಉತ್ತರದ ರೈಲುಮಾರ್ಗ ಈ ಸರಕುಗಳೊಂದಿಗೆ ಪೋರ್ಟ್ ಸೂಡಾನಿಗೂ ಈಜಿಪ್ಟಿಗೂ ಸಾಗುತ್ತದೆ. ಆ ಮಾರ್ಗವಾಗಿ ಖಾರ್ಟೂಂಗೆ ಗ್ಯಾಸೊಲಿನ್, ಸೀಮೆಯೆಣ್ಣೆ, ಯಂತ್ರ, ಜವಳಿ ಮುಂತಾದವು ಬರುತ್ತವೆ. ನಗರದ ಆಗ್ನೇಯ ಭಾಗದಲ್ಲಿ ಕೈಗಾರಿಕೆಗಳುಂಟು. ಹತ್ತಿ ಮತ್ತು ಮೇಣ ಪರಿಷ್ಕರಣ, ಚರ್ಮ ಸಂಸ್ಕರಣ, ಗಿರಣಿ, ಯಂತ್ರಗೆಲಸ, ಮುದ್ರಣ, ಗಾಜು ತಯಾರಿಕೆ, ಹೆಂಚು, ಹೆಣಿಗೆ ವಸ್ತ್ರ, ಸೌಮ್ಯಪಾನೀಯ, ಮಿಠಾಯಿ ತಯಾರಿಕೆ ಇವು ಇಲ್ಲಿಯ ಕೈಗಾರಿಕೆಗಳು.

ವಾಯುಗುಣ ಮತ್ತು ಪ್ರಾಕೃತಿಕ ಲಕ್ಷಣಗಳು

[ಬದಲಾಯಿಸಿ]

ಖಾರ್ಟೂಂ ಪ್ರಾಂತ್ಯ ಸಮುದ್ರಮಟ್ಟದಿಂದ 1,200' ಎತ್ತರದಲ್ಲಿದೆ. ಸೆಪ್ಟೆಂಬರ್‍ನಿಂದ ಜೂನ್‍ವರೆಗೆ ಇಲ್ಲಿ ಒಣಹವೆ ಇರುತ್ತದೆ. ಮೇ, ಜೂನ್ ಗಳಲ್ಲಿ ಮಧ್ಯಕ ಗರಿಷ್ಠ ಉಷ್ಣತೆ 41.7ಲಿಸೆಂ. ಜನವರಿಯಲ್ಲಿ 15.6ಲಿ ಸೆಂ. ಜುಲೈಯಿಂದ ಸೆಪ್ಟೆಂಬರ್ ಮೊದಲ ಭಾಗದ ವರೆಗೆ ಆಗಿಂದಾಗ್ಗೆ ಮಳೆ ಬೀಳುವುದುಂಟು. ಆದರೆ ವರ್ಷದ ಮಳೆಯ ಮೊತ್ತ 7"ಗಿಂತ ಹೆಚ್ಚಿಲ್ಲ. ಬೆಟ್ಟಗಳ ಸುತ್ತ ಮತ್ತು ಅಲ್ಲಲ್ಲಿ ಅಲ್ಪಸ್ವಲ್ಪ ನೀರು ನಿಂತು ಹುಲ್ಲು, ನಾರುಬೇರು, ಪೊದೆಗಿಡ ಬೆಳೆಯಲು ಕಾರಣವಾಗುತ್ತದೆ. ಕುರಿ ಆಡು ಒಂಟೆಗಳಿಗೆ ಇವು ಮೇವು. ಒಣಹವೆಯ ಕಾಲದಲ್ಲಿ ಈ ಪ್ರಾಣಿಗಳನ್ನು ನೀರಿನ ಆಸರೆ ಇರುವಲ್ಲಿಗೆ ಹೊಡೆದೊಯ್ಯುತ್ತಾರೆ. ನಗರಗಳಿಗೆ ಮಾಂಸ, ಮೇಕೆಯ ಹಾಲು ಬರುವುದು ಈ ಪ್ರದೇಶದಿಂದ.

ಜುಲೈ ಮಧ್ಯಭಾಗದಿಂದ ಡಿಸೆಂಬರ್‍ವರೆಗೆ ನೈಲ್ ನದಿಯಲ್ಲಿ ಬರುವ ಪ್ರವಾಹದಿಂದ ತಗ್ಗಿನ ನೆಲವೂ ದ್ವೀಪಗಳೂ ಮುಚ್ಚಿಹೋಗುತ್ತವೆ. ಪ್ರವಾಹ ಇಳಿದಾಗ ಇಲ್ಲೆಲ್ಲ ಹುರುಳಿ, ಕಲ್ಲಂಗಡಿ, ಕರಬೂಜು, ಜೋಳ, ಕಬ್ಬು, ತರಕಾರಿ ಬೆಳೆಯುತ್ತಾರೆ. ಪಂಪ್ ಸಹಾಯದಿಂದ ಹಣ್ಣು, ತರಕಾರಿ, ದನದ ಮೇವು ಬೆಳೆಯುವುದುಂಟು.

ಚಿತ್ರಗಳು

[ಬದಲಾಯಿಸಿ]
ಖಾರ್ಟೂಂ ನ ಉಪಗ್ರಹ ಚಿತ್ರ
ಬಿಳಿ ಮತ್ತು ನೀಲಿ ನೈಲ್ ಗಳೊಂದಿಗೆ ಖಾರ್ಟೂಂ
ನೈಲೆ ನದಿಯ ಹೊರಳಿನಲ್ಲಿ ಖಾರ್ಟೂಂ
ಖಾರ್ಟೂಂನ ಪನೋರಮ ಚಿತ್ರ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಖಾರ್ಟೂಂ&oldid=809853" ಇಂದ ಪಡೆಯಲ್ಪಟ್ಟಿದೆ