ವಿಷಯಕ್ಕೆ ಹೋಗು

ಕಲ್ಪಸೂತ್ರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಲ್ಪ (ವೇದಾಂಗ) ಇಂದ ಪುನರ್ನಿರ್ದೇಶಿತ)

ಕಲ್ಪಸೂತ್ರಗಳು ಯಜ್ಞವಿಧಿಗಳೇ ಮುಂತಾದ ಪ್ರಕ್ರಿಯೆಗಳನ್ನು ಸಮಗ್ರವಾಗಿಯೂ ಸಾಧಾರವಾಗಿಯೂ ನಿರೂಪಿಸುವ ವೈದಿಕಶಾಸ್ತ್ರಗ್ರಂಥಗಳು.

ಬ್ರಾಹ್ಮಣ ಮತ್ತು ಉಪನಿಷತ್ತುಗಳ ಕಾಲಕ್ಕೇ ಶಿಕ್ಷಾ, ವ್ಯಾಕರಣ, ಕಲ್ಪ ಮುಂತಾದ ಅಧ್ಯಯನ ವಿಷಯಗಳು ವೈದಿಕರ ಶಾಖೆಗಳಲ್ಲಿ ಪ್ರಚಲಿತವಾಗಿದ್ದ ಉಲ್ಲೇಖಗಳಿವೆ. ಆದರೆ ವೇದಾಂಗಗಳೆಂದು ಮುಂದೆ ಹೆಸರಾಂತ ಪ್ರತ್ಯೇಕ ಗ್ರಂಥಗಳು ಒಂದೊಂದು ವಿಷಯದಲ್ಲಿಯೂ ಉಪನಿಷತ್ತಿನ ಅನಂತರದ ಕಾಲದಲ್ಲಿ ರಚಿತವಾದುವು. ಇವು ಪ್ರತ್ಯೇಕ ವೈದಿಕ ಶಾಖೆಗಳಿಗೆ ಸೇರಿದ ಋಷಿಗಳಿಂದ ರಚಿತವಾದ ಕಾರಣ ಪೌರುಷೇಯ ಸ್ಮೃತಿಗಳಲ್ಲಿ ಬರುವುವೇ ಹೊರತು ಅಪೌರುಷೇಯವಾದ ಶ್ರುತಿಗಳಲ್ಲಲ್ಲ. ವೈದಿಕ ಧರ್ಮದ ಆಚರಣೆಗೆ ಅಗತ್ಯಬೀಳುವ ಸಕಲ ವಿಷಯಗಳೂ ಕಲ್ಪಸೂತ್ರಗಳ ವ್ಯಾಪ್ತಿಯಲ್ಲಿ ಬರುತ್ತವೆ. ಆದುದರಿಂದ ವೈದಿಕರಾದ ಪುರೋಹಿತವರ್ಗದವರಿಗೆ ಕಲ್ಪಸೂತ್ರಗಳೇ ಪರಮಪೂಜ್ಯ ಆಧಾರಗ್ರಂಥಗಳಾಗಿವೆಯೆನ್ನಬಹುದು.

ಸೂತ್ರವೆಂದರೆ ದಾರವೆಂಬರ್ಥವಿರುವಂತೆ ಕಿರಿದರಲ್ಲಿ ಹಿರಿದಾದ ಅರ್ಥವನ್ನೊಳಗೊಳ್ಳುವ ವಿಧಿವಾಕ್ಯವೆಂಬ ಅರ್ಥವೂ ಇದೆ. ಇಂಥ ಹಲವು ವಿಧಿವಾಕ್ಯಗಳ ಸರಮಾಲೆಯಂತಿರುವ ಇಡಿಯ ಗ್ರಂಥಕ್ಕೂ ಸೂತ್ರವೆಂಬ ಶಬ್ದವೇ ಅನ್ವಯಿಸುತ್ತದೆ. ಸಂಗ್ರಹವಾಗಿಯೂ ಸಾರವತ್ತಾಗಿಯೂ ಇರುವ ಕಾರಣ ಅಧ್ಯಯನ ಮಾಡಿ ನೆನಪಿಡಲು ಈ ಸೂತ್ರ ಗ್ರಂಥಗಳು ಬಹಳ ಉಪಯುಕ್ತವಾಗಿವೆ. ಕಲ್ಪದಂತೆ ಮಿಕ್ಕ ಎಲ್ಲ ವೇದಾಂತಗಳೂ ಷಡ್ದರ್ಶನಗಳೂ ಸೂತ್ರಗ್ರಂಥಗಳಿಂದಲೇ ಪ್ರಾರಂಭವಾಗಿರುವುದು ಸಂಸ್ಕೃತ ಸಾಹಿತ್ಯದ ಒಂದು ವೈಶಿಷ್ಟ್ಯ. ಇಂಥ ಸೂತ್ರಶೈಲಿಯ ರಚನೆಗಳು ಮತ್ತಾವ ಪ್ರಾಚೀನ ಸಾಹಿತ್ಯದ ಇತಿಹಾಸದಲ್ಲಿಯೂ ಕಾಣಬರುವುದಿಲ್ಲ.

ಮ್ಯಾಕ್ಸ್‌ ಮುಲ್ಲರ್, ಬ್ಯೂಲರ್ ಮುಂತಾದ ಪಾಶ್ಚಾತ್ಯ ವಿದ್ಯಾಂಸರು ಸೂತ್ರ ಸಾಹಿತ್ಯದ ಕಾಲವನ್ನು ಸುಮಾರು ಪ್ರ.ಶ.ಪೂ. ೭೦೦ ರಿಂದ ಪ್ರ.ಶ.ಪೂ. ೨೦೦ರ ವರೆಗೆ ಇರಬಹುದೆಂದು ಊಹಿಸಿದ್ದಾರೆ. ಅನಂತರದ ಕಾಲದಲ್ಲಿ ಸೂತ್ರಗ್ರಂಥಗಳಿಗೆ ಭಾಷ್ಯ ಮತ್ತು ಟೀಕೆಗಳು ರಚಿತವಾಗುತ್ತ ನಡೆದುದನ್ನು ನೋಡುತ್ತೇವೆ.[]

ಯಜ್ಞ, ಹೋಮ ಮುಂತಾದುವುಗಳ ಪ್ರಕ್ರಿಯಾನಿರೂಪಣೆ ಬ್ರಾಹ್ಮಣಗ್ರಂಥಗಳಲ್ಲಿಯೇ (ಬ್ರಾಹ್ಮಣಗಳು ಸೂತ್ರಗಳಿಗಿಂತ ಹಿಂದಿನ ಶ್ರುತಿಗಳು) ಬರುವುದು ನಿಜ. ಆದರೆ ಇಲ್ಲಿ ವಿಧಿನಿಯಮಗಳ ವ್ಯವಸ್ಥೆಯನ್ನು ನಿರ್ಣಯಿಸುವ ವಿವಕ್ಷೆಯಿಲ್ಲ. ನೂರಾರು ಸಂಗತಿಗಳನ್ನು ಪ್ರಸಕ್ತಾನುಪ್ರಸಕ್ತಿಯಿಂದ ಅಲ್ಲಿ ಕಲೆ ಹಾಕಿದಂತಿದೆ. ಅವನ್ನೆಲ್ಲ ಯಾಜಕನ ನಿತ್ಯವ್ಯವಹಾರದಲ್ಲಿ ಉಪಯುಕ್ತತೆಯ ದೃಷ್ಟಿಯಿಂದ ವಿಂಗಡಿಸಿ, ಪುನವರ್ಯ್‌ವಸ್ಥೆಗೆ ಒಳಪಡಿಸಿ, ಸಂಶಯಕ್ಕೆಡೆಯಿಲ್ಲದಂತೆ ನಿಯಮಗಳನ್ನು ಪ್ರತಿಪಾದಿಸುವ ಉದ್ದೇಶ ಕಲ್ಪಸೂತ್ರಕಾರರದಾಗಿತ್ತು. ಶ್ರುತಿಯಲ್ಲಿ ಎಂದರೆ ಬ್ರಾಹ್ಮಣ ಗ್ರಂಥಗಳಲ್ಲಿ ಉಕ್ತವಾದ ಯಜ್ಞವಿಧಿಗಳನ್ನು ಶಾಸ್ತ್ರೀಯವಾಗಿ ಪ್ರತಿಪಾದಿಸುವ ಕಲ್ಪಸೂತ್ರಗಳಿಗೆ ಶ್ರೌತ ಸೂತ್ರಗಳೆಂಬ ಹೆಸರು ಪ್ರಸಿದ್ಧವಾಗಿದೆ. ಅದರಂತೆ ಗೃಹಸ್ಥಾಶ್ರಮದಲ್ಲಿ ವೈದಿಕ ಕರ್ಮಾಚರಣೆಗೆ ಅಂಗವಾದ ಎಲ್ಲ ಸಂಸ್ಕಾರಗಳ ಹಾಗು ಪೂಜಾವಿಧಿಗಳ ನಿರೂಪಣೆಗೆ ಮೀಸಲಾದ ಸೂತ್ರಗಳಿಗೆ ಗೃಹ್ಯಸೂತ್ರಗಳೆಂದು ಪ್ರಸಿದ್ಧಿಯಿದೆ.

ಶ್ರೌತಸೂತ್ರಗಳು

[ಬದಲಾಯಿಸಿ]

ಅಗ್ನಿಹೋತ್ರಕ್ಕೆ ಅಗತ್ಯವಾದ ದಕ್ಷಿಣಾಗ್ನಿ, ಗಾರ್ಹಪತ್ಯ, ಆಹವನೀಯ ಮುಂತಾದ ಯಾಗಾಗ್ನಿಗಳ ವಿಧಿ, ದರ್ಶಪೂರ್ಣಮಾಸ ಯಜ್ಞಗಳು, ಅಗ್ನಿಷ್ಟೋಮ ಯಾಗ, ಋತುಗಳ ಅನುಕ್ರಮದಲ್ಲಿ ಮಾಡುವ ಯಾಗಗಳು, ಯಜ್ಞಪಶುಗಳು ಬೇಕಾಗುವ ಸೋಮಯಾಗ ಪ್ರಕಾರಗಳು ಇತ್ಯಾದಿಗಳನ್ನು ಕುರಿತ ಸಮಗ್ರ ವಿವರಗಳು ಶ್ರೌತಸೂತ್ರಗಳಲ್ಲಿ ಬರುತ್ತವೆ. ಭಾರತೀಯರ ಯಜ್ಞಪ್ರಕ್ರಿಯೆಯನ್ನು ಅರಿಯಲು, ವೈದಿಕ ಧರ್ಮದ ಒಳನೋಟವನ್ನು ಪಡೆಯಲು, ವಿಶ್ವದಲ್ಲಿ ಮತಧರ್ಮಗಳ ಪ್ರಗತಿವಿಕಾಸದ ಪರಂಪರೆಯನ್ನು ಅರ್ಥ ಮಾಡಿಕೊಳ್ಳುಲು ಶ್ರೌತಸೂತ್ರಗಳ ಅಧ್ಯಯನ ಇಂದಿಗೂ ತುಂಬ ಮಹತ್ತ್ವದ್ದಾಗಿದೆ.

ಗೃಹ್ಯಸೂತ್ರಗಳು

[ಬದಲಾಯಿಸಿ]

ಗೃಹ್ಯಸೂತ್ರಗಳಲ್ಲಿ ಬರುವ ವಿಷಯಗಳು ಇನ್ನೂ ಬಹುಮುಖವಾಗಿರುವಂತೆ ಕುತೂಹಲಕಾರಿಗಳೂ ಆಗಿವೆ. ಗರ್ಭಾದಾನದಿಂದ ಹಿಡಿದು ಅಪರಕರ್ಮದ ವರೆಗೆ ಮಾನವನನ್ನು ಪಾವನಗೊಳಿಸುವ ನಾನಾ ರೀತಿಯ ಗೃಹ್ಯಸಂಸ್ಕಾರಗಳೇ ಇಲ್ಲಿಯ ಮುಖ್ಯ ವಿಷಯಗಳು. ಶಾಂತಿಹೋಮಗಳು, ಹವನಗಳು, ಪ್ರೇತಕರ್ಮದ ಪರಿಗಳು_ಎಲ್ಲಕ್ಕೂ ಇಲ್ಲಿ ಪ್ರವೇಶವಿದೆ. ಇಂದಿಗೂ ಭಾರತೀಯರ ಧರ್ಮಾಚರಣೆಯಲ್ಲಿ ಉಳಿದು ಬಂದಿರುವ ಎಷ್ಟೋ ವಿಧಿಗಳು_ಸೀಮಂತೋನ್ನಯನ, ಗರ್ಭಾಧಾನ, ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೂಡಾಕರ್ಮ, ಉಪನಯನ, ಬ್ರಹ್ಮಚಾರಿ ವ್ರತ, ಸ್ನಾತಕವಿಧಿ, ಕನ್ಯಾವರಣ, ವಿವಾಹ ಇತ್ಯಾದಿ_ಅತ್ಯಂತ ಹೆಚ್ಚಿನ ವಿವರಗಳೊಂದಿಗೆ ಈ ಗೃಹ್ಯಸೂತ್ರಗಳಲ್ಲಿ ಪ್ರತಿಪಾದಿತವಾಗಿವೆ. ಇದರಂತೆ ಪಂಚಮಹಾಯಜ್ಞಗಳ ವಿಷಯವನ್ನೂ ಬ್ರಾಹ್ಮಣಗ್ರಂಥಗಳಿಗಿಂತ ಹೆಚ್ಚು ವಿಸ್ತಾರವಾಗಿ ಇಲ್ಲಿ ನಿರೂಪಿಸಿದೆ. ದೇವತಾರ್ಚನೆ, ಪಿತೃತರ್ಪಣ, ಅತಿಥಿಪೂಜೆ_ಇವೇ ಸರಳರೂಪದ ವಿಧಿಗಳಾದರೂ ಅತ್ಯಂತ ಮಹತ್ತ್ವವನ್ನು ಪಡೆದು ಹೇಗೆ ಮಹಾಯಜ್ಞಗಳೆನಿಸುವವೆಂಬುದನ್ನು ಇಲ್ಲಿ ಮಾರ್ಮಿಕವಾಗಿ ಕಾಣುತ್ತೇವೆ. ವೇದಾಧ್ಯಯನದ ಪ್ರಶಸ್ತಿಗೂ ಇಲ್ಲಿಯೇ ಸ್ಥಾನ ಸಿಕ್ಕುತ್ತದೆ. ಇದರಂತೆ ಶ್ರೌತಯಜ್ಞಗಳಾದ ಅಗ್ನಿಹೋತ್ರ, ದರ್ಶಪೂರ್ಣಮಾಸ, ಚಾತುರ್ಮಾಸ್ಯ ಮುಂತಾದವಕ್ಕೆ ಉಗಮವೆನಿಸಿರಬಹುದಾದ ಸರಳ ಯಜ್ಞವಿಧಿಗಳೂ ಇಲ್ಲಿ ವರ್ಣಿತವಾಗಿವೆ. ಇವುಗಳಲ್ಲಿ ಪ್ರಾತಸ್ಸವನ, ಸಾಯಂಸವನ, ದರ್ಶಪೂರ್ಣಮಾಸ ವಿಧಿಗಳು, ಯಜ್ಞಾಂಗವಾದ ವಾರ್ಷಿಕ ಉತ್ಸವಗಳು_ಮುಂತಾದವನ್ನು ಹೆಸರಿಸಬಹುದು. ಅದೂ ಅಲ್ಲದೆ ನಿತ್ಯಜೀವನದಲ್ಲಿ ಉಪಯುಕ್ತವಾದ ಗೃಹನಿರ್ಮಾಣ, ಪಶುಪಾಲನ, ಭೂಕರ್ಮ ಮುಂತಾದುವನ್ನು ಕುರಿತ ವಿಧಿಗಳೂ ರೋಗ ಮತ್ತು ಅಶುಭ ನಿವಾರಣೆಗೆ ಹೇಳಿರುವ ಶಾಂತಿಕರ್ಮಗಳೂ ರಕ್ಷೋಘ್ನ ಮುಂತಾದ ಮಂತ್ರವಿಚಾರಗಳೂ ಗೃಹ್ಯಸೂತ್ರಗಳಲ್ಲಿ ಬರುತ್ತವೆ.

ಎಲ್ಲಕ್ಕಿಂತ ಹೆಚ್ಚಾಗಿ, ಅಪರಕರ್ಮ ಮತ್ತು ಶ್ರಾದ್ಧವಿಚಾರ ಕೂಡ ಗೃಹ್ಯಸೂತ್ರಗಳ ಮುಖ್ಯ ಅಂಗವಾಗಿವೆ. ಅನಂತರ ಸ್ವಲ್ಪವೇ ಕಾಲಾವಧಿಯಲ್ಲಿ ಶ್ರಾದ್ಧಕಲ್ಪಕ್ಕೆಂದೇ ಮೀಸಲಾದ ಹತ್ತಾರು ಗ್ರಂಥಗಳು ರಚಿತವಾದುದನ್ನು ಇಲ್ಲಿ ಉಲ್ಲೇಖಿಸಬೇಕು.

ಹೀಗೆ, ಸಾಹಿತ್ಯದೃಷ್ಟಿಯಿಂದ ಹೆಚ್ಚೇನೂ ಮಹತ್ತ್ವದವಲ್ಲದಿದ್ದರೂ ಪ್ರಾಚೀನ ಭಾರತದ ಜನಜೀವನವನ್ನು ಅರಿಯಬೇಕೆಂಬ ಕೂತೂಹಲವುಳ್ಳವರಿಗೆ ಇಂದೂ ಗೃಹ್ಯ ಸೂತ್ರಗಳು ನಿಧಿಯಂತಿವೆ. ಪ್ರಾಚೀನ ಮಾನವರ ನಿತ್ಯಜೀವನವನ್ನರಿಯಲು ಇತರ ದೇಶಗಳಲ್ಲಿ ಸಂಶೋಧಕರು ಹತ್ತಾರು ದಿಕ್ಕಿನಿಂದ ಒಂದೊಂದೇ ತುಣುಕನ್ನು ಕಲೆ ಹಾಕುತ್ತ ಒದ್ದಾಡಬೇಕಾಗುತ್ತದೆ. ಆದರೆ ಜನತೆಯ ದಿನಚರಿಯನ್ನು, ಒಂದು ವಿವರವನ್ನೂ ಬಿಡದೆ, ಒಂದೆಡೆ ಹೀಗೆ ಸಂಗ್ರಹಿಸಿಟ್ಟಿರುವ ದಾಖಲೆ ಮತ್ತೆಲ್ಲಿಯೂ ಕಾಣಸಿಗದು. ಗೃಹ್ಯಸೂತ್ರಗಳನ್ನು ವಿಂಟರ್ನಿಟ್ಸ್‌ ಜನತೆಯ ದಿನಚರಿಗಳೆಂದಿದ್ದಾನೆ. ಅವು ಕೇವಲ ಧಾರ್ಮಿಕ ದಿನಚರಿಯನ್ನು ಮಾತ್ರ ಒಳಗೊಳ್ಳುತ್ತವೆಂದು ಮೇಲ್ನೋಟಕ್ಕೆ ತೋರಿದರೂ ವಸ್ತುತಃ ಪ್ರಾಚೀನ ಭಾರತೀಯರ ಜೀವನವನ್ನೆಲ್ಲ ಹಾಸುಹೊಕ್ಕಾಗಿ ಧರ್ಮವೇ ವ್ಯಾಪಿಸಿದ್ದುದನ್ನು ನೆನೆದರೆ, ಇಲ್ಲಿಯ ಜೀವನಚಿತ್ರಗಳು ಉಪಾದೇಯ ವೆನಿಸುವುದರಲ್ಲಿ ಸಂದೇಹವಿಲ್ಲ. ಇಂಡೋ-ಯುರೋಪಿಯನ್ ಜನವರ್ಗಗಳ ಜೀವನ ಕ್ರಮದ ಬಗೆಗೆ ಇತರತ್ರ ಸಿದ್ಧವಾಗಿರುವ ಅಂಶಗಳೊಡನೆ ಗೃಹ್ಯಸೂತ್ರಗಳಲ್ಲಿ ಬರುವ ಅಂಶಗಳನ್ನು ಹೋಲಿಸಿ ನೋಡಿದಾಗಲಂತೂ ಇವುಗಳಲ್ಲಿ ಕಾಣಬರುವ ಭಾವೈಕ್ಯ ಮತ್ತಷ್ಟು ಹೃದಯಸ್ಪರ್ಶಿಯಾಗುತ್ತದೆ. ಬೇರೆಡೆ ಭಾಷೆಯ ಅವಶೇಷಗಳಲ್ಲಿ ಮಾತ್ರ ಉಳಿದುಬಂದಿರುವ ಸಾಮ್ಯ ಆಚರಣೆಯ ಅಂಗಗಳಿಗೂ ವ್ಯಾಪಿಸಿದ್ದಿತೆಂಬುದನ್ನು ಗೃಹ್ಯಸೂತ್ರಗಳು ಎತ್ತಿ ತೋರಿಸುತ್ತವೆ.

ಧರ್ಮಸೂತ್ರಗಳು

[ಬದಲಾಯಿಸಿ]

ಶ್ರೌತಸೂತ್ರ ಮತ್ತು ಗೃಹ್ಯಸೂತ್ರಗಳಿಗಿಂತ ಮತ್ತೂ ಹೆಚ್ಚಿನ ಪ್ರಾಶಸ್ತ್ಯಕ್ಕೆ ಯೋಗ್ಯವಾದ ಮೂರನೆಯ ಸೂತ್ರಜಾತಿಯೊಂದಿದೆ. ಅದೇ ಧರ್ಮಸೂತ್ರ. ಧರ್ಮವನ್ನು ಕುರಿತ ನಿರ್ಣಾಯಕ ಶಾಸ್ತ್ರಗಳೇ ಧರ್ಮಸೂತ್ರಗಳು. ಧರ್ಮವೆಂದರೆ ಒಂದು ಕಡೆಗೆ ಕರ್ತವ್ಯಕರ್ಮ, ಯುಕ್ತವರ್ತನೆ, ಕಾನೂನು ಇತ್ಯಾದಿ ಅರ್ಥವಿರುವಂತೆ ಇನ್ನೊಂದು ಕಡೆಗೆ ಮತಧರ್ಮಾಚರಣೆ, ಸಾಂಪ್ರದಾಯಿಕ ಆಚಾರ, ನಡೆವಳಿಕೆ ಇತ್ಯಾದಿ ಅರ್ಥಗಳೂ ಇವೆ. ಆದುದರಿಂದ ಧರ್ಮಸೂತ್ರಗಳಲ್ಲಿ ವೈದಿಕ ಮತೀಯವಾದ ವಿಚಾರಗಳು ಮಾತ್ರವೇ ಇರದೆ ಮತೀಯವಲ್ಲದ ವಿಚಾರಗಳೂ ಬಹಳವಾಗಿ ಅಡಕವಾಗಿವೆ. ಪ್ರಾಚೀನ ಭಾರತದ ಕಾಯಿದೆಶಾಸ್ತ್ರವನ್ನು ಈ ಧರ್ಮಸೂತ್ರಕಾರರು ಸರ್ವಾಂಗೀಣ ನೈಪುಣ್ಯದಿಂದ ನಿರ್ವಚನಮಾಡಿದ್ದಾರೆ. ವಸ್ತುತಃ ಧರ್ಮಸೂತ್ರಗಳು ಸ್ವತಂತ್ರ ಕಾಯಿದೆ ಕಟ್ಟಳೆಗಳ ನಿರ್ಣಯಕ್ಕೆ ಆಧಾರಗಳೇ ಹೊರತು ಯಜ್ಞಕಲ್ಪದಲ್ಲಿ ಅವುಗಳ ಸ್ಥಾನ ಮುಖ್ಯವಲ್ಲ. ಆದರೆ ಶ್ರೌತ ಗೃಹ್ಯಸೂತ್ರಗಳಂತೆ ಧರ್ಮಶಾಸ್ತ್ರಗಳು ಕೂಡ ಒಂದೊಂದೇ ವಿಶಿಷ್ಟ ಶಾಖೆಯವರಿಂದ ರಚಿತವಾಗಿರುವ ಕಾರಣ ಅವಕ್ಕೂ ಕಲ್ಪ ಸೂತ್ರಗಳಲ್ಲಿ ಗಣನೆಯುಂಟಾಗುತ್ತದೆ.

ಶುಲ್ವಸೂತ್ರಗಳು

[ಬದಲಾಯಿಸಿ]

ಕಡೆಯದಾಗಿ, ಇವಲ್ಲದೆ ಶ್ರೌತಸೂತ್ರಗಳಿಗೆ ಅನುಬಂಧಗಳಂತಿರುವ ಶುಲ್ವಸೂತ್ರಗಳನ್ನೂ ಕುರಿತು ಇಲ್ಲಿ ಒಂದು ಮಾತು ಹೇಳಬೇಕು. ಶುಲ್ವವೆಂದರೆ ಅಳೆಯುವದಾರ. ಯಜ್ಞವೇದಿಕೆಯನ್ನು ಹೇಗೆ ನಿರ್ಮಿಸಬೇಕು. ಅದರ ಉದ್ದಗಲಗಳ ಪ್ರಮಾಣವೆಷ್ಟಿರಬೇಕು, ಉಪಯೋಗಿಸಬೇಕಾದ ಇಟ್ಟಿಗೆಗಳ ಸಂಖ್ಯೆ ಎಷ್ಟು_ಮುಂತಾದ ವಿವರಗಳು ಶುಲ್ವಸೂತ್ರಗಳಲ್ಲಿ ಬರುತ್ತವೆ. ಪ್ರಾಚೀನ ಭಾರತದಲ್ಲಿ ಭೂಮಿತಿಶಾಸ್ತ್ರದ ಉಗಮವನ್ನು ಈ ಶುಲ್ವಸೂತ್ರಗಳಲ್ಲಿ ಕಾಣುತ್ತೇವೆ.

ಕೃಷ್ಣಯಜುರ್ವೇದಶಾಖೆಗಳಲ್ಲಿ ಕಲ್ಪಸೂತ್ರಗಳು

[ಬದಲಾಯಿಸಿ]

ಕೃಷ್ಣಯಜುರ್ವೇದಕ್ಕೆ ಸೇರಿದ ಬೌಧಾಯನ ಮತ್ತು ಆಪಸ್ತಂಬ ಎಂಬೆರಡು ಶಾಖೆಗಳಲ್ಲಿ ಮಾತ್ರ ಉಕ್ತವಾದ ನಾಲ್ಕೂ ಬಗೆಯ ಕಲ್ಪಸೂತ್ರಗಳು ಸಿಕ್ಕುತ್ತವೆ. ಶ್ರೌತ, ಗೃಹ್ಯ, ಧರ್ಮ ಮತ್ತು ಶುಲ್ವ ಎಂಬ ನಾಲ್ಕೂ ಬಗೆಯ ಕಲ್ಪಸೂತ್ರಗಳು ಈ ಶಾಖೆಗಳಲ್ಲಿ ಎಷ್ಟೊಂದು ಅನ್ಯೋನ್ಯ ಸಂಬುಧವನ್ನು ಹೊಂದಿವೆಯೆಂದರೆ ಇವೆಲ್ಲ ಒಂದೇ ಬೃಹದ್ಗ್ರಂಥದ ಬಿಡಿಭಾಗಗಳೆಂದರೂ ಸಲ್ಲುತ್ತದೆ. ಪ್ರಾಯಶಃ ಬೌಧಾಯನ ಮತ್ತು ಅಪಸ್ತಂಬರೇ ಸ್ವತಃ ಈ ಕೃತಿಗಳನ್ನೆಲ್ಲ ರಚಿಸಿರಬೇಕೆನಿಸುತ್ತದೆ.

ಈ ಕೃಷ್ಣಯಜುಶ್ಶಾಖೆಗಳಲ್ಲದೆ ತೈತ್ತಿರೀಯ ಸಂಹಿತೆಗೆ ಸೇರಿದ ಭಾರದ್ವಾಜ ಮತ್ತು ಸತ್ಯಾಷಾಢ ಹಿರಣ್ಯಕೇಶಿ ಶಾಖೆಗಳಲ್ಲಿಯೂ ಕಲ್ಪಸೂತ್ರಗಳು ಸಿಕ್ಕುತ್ತವೆ. ವಾಧೂಲ ಮತ್ತು ವೈಖಾನಸ ಶಾಖೆಗಳೂ ಇದ್ದುವೆಂದು ತಿಳಿದುಬರುತ್ತದೆ.

ಮೈತ್ರಾಯಣೀ ಸಂಹಿತೆಯ ವೈದಿಕ ಶಾಖೆಗೆ ಸೇರಿದಂತೆ ಮಾನವಶ್ರೌತಸೂತ್ರ, ಮಾನವಗೃಹ್ಯಸೂತ್ರ, ಮಾನವಶುಲ್ವಸೂತ್ರಗಳು ಪ್ರಸಿದ್ಧವಾಗಿವೆ.

ಶುಕ್ಲಯಜರ್ವೇದ, ಋಗ್ವೇದ, ಸಾಮವೇದಗಳ ಶಾಖೆಗಳಲ್ಲಿ ಕಲ್ಪಸೂತ್ರಗಳು

[ಬದಲಾಯಿಸಿ]

ಆದರೆ ಕೃಷ್ಣಯಜುರ್ವೇದಶಾಖೆಗಳನ್ನು ಬಿಟ್ಟರೆ ಮಿಕ್ಕ ಶುಕ್ಲಯಜರ್ವೇದ, ಋಗ್ವೇದ, ಸಾಮವೇದಗಳ ಶಾಖೆಗಳಲ್ಲಿ ನಾಲ್ಕೂ ಬಗೆಯ ಕಲ್ಪಸೂತ್ರಗಳು ಉಪಲಬ್ಧವಿಲ್ಲ. ಸಿಕ್ಕುವುದೆಲ್ಲ ಇಲ್ಲೊಂದು ಶ್ರೌತಸೂತ್ರ, ಅಲ್ಲೊಂದು ಗ್ರಹ್ಯಸೂತ್ರ_ಹೀಗಿರುತ್ತದೆ. ಕಾತ್ಯಾಯನ ಶ್ರೌತಸೂತ್ರವೂ ಪಾರಸ್ಕರ ಗೃಹ್ಯಸೂತ್ರವೂ ಶುಕ್ಲಯಜುರ್ವೇದದ ಶಾಖೆಯ ರಚನೆಗಳು. ಆಶ್ವಲಾಯನರ ಶ್ರೌತ ಹಾಗು ಗೃಹ್ಯ ಸೂತ್ರಗಳೂ ಶಾಂಖಾಯನರ ಶ್ರೌತ ಹಾಗು ಗೃಹ್ಯಸೂತ್ರಗಳೂ ಋಕ್ ಶಾಖೆಯವು; ಲಾಟ್ಯಾಯನರ ಮತ್ತು ದ್ರಾಹ್ಯಾಯಣರ ಶ್ರೌತಸೂತ್ರಗಳು, ಜೈಮಿನೀಯ ಶ್ರೌತ ಮತ್ತು ಗೃಹ್ಯಸೂತ್ರಗಳು, ಗೋಭಿಲ ಮತ್ತು ಖಾದಿರ ಗೃಹ್ಯಸೂತ್ರಗಳು_ಇವೆಲ್ಲ ಸಾಮವೇದ ಶಾಖೆಯವು. ವೈತಾನಶ್ರೌತಸೂತ್ರವೆಂಬುದು ಅಥರ್ವಶಾಖೆಗೆ ಸೇರಿದೆ ಕೌಶಿಕಸೂತ್ರವೆಂಬುದೂ ಹಾಗೆಯೇ. ಇದರಲ್ಲಿ ಗೃಹ್ಯಸೂತ್ರದ ವಿಷಯಗಳ ಜೊತೆಗೆ ಆಥರ್ವಣ ಶಾಂತಿಕ ಪೌಷ್ಟಿಕ ಆಭಿಚಾರಿಕ ಕರ್ಮಗಳ ವಿಚಾರವೂ ಸೇರಿದೆ. ಕಾಲದೃಷ್ಟಿಯಿಂದ ನೋಡಿದರೆ ಕೃಷ್ಣಯಜುಶ್ಶಾಖೆಯ ಬೌಧಾಯನ ಕಲ್ಪಸೂತ್ರವನ್ನು ಎಲ್ಲಕ್ಕಿಂತ ಪ್ರಾಚೀನವೆಂದೂ ಅಥರ್ವಶಾಖೆಯ ವೈತಾನಸೂತ್ರವನ್ನು ಎಲ್ಲಕ್ಕಿಂತ ಅರ್ವಾಚೀನವೆಂದೂ ವಿಧ್ವಾಂಸರು ಭಾವಿಸುತ್ತಾರೆ.

ಅಧ್ಯಯನಗಳು

[ಬದಲಾಯಿಸಿ]

ವೈದಿಕ ಧರ್ಮದ ಆಧಾರಗ್ರಂಥಗಳಾದ ಈ ಕಲ್ಪಸೂತ್ರಗಳನ್ನೆಲ್ಲ ಹಸ್ತಪ್ರತಿಗಳಿಂದ ಪರಿಶೋಧಿಸಿ, ಪಾಠನಿರ್ಣಯ ಮಾಡಿ, ಶಾಸ್ತ್ರೀಯವಾಗಿ ಪರಿಷ್ಕೃತ ಮುದ್ರಣಗಳನ್ನು ಏರ್ಪಡಿಸಿದ್ದಲ್ಲದೆ ಕೂಲಂಕಷ ವಿವೇಚನೆಯನ್ನೂ ಮಾಡಿದ ಕೀರ್ತಿ ಹೆಚ್ಚಾಗಿ ಐರೋಪ್ಯ ಪಂಡಿತರಿಗೆ, ಅದರಲ್ಲೂ ಜರ್ಮನಿಯ ವಿದ್ವಾಂಸರಿಗೆ, ಸಲ್ಲುತ್ತದೆ. ಅತ್ಯಂತ ಪ್ರಾಚೀನವಾದ ಬೌಧಾಯನ ಶ್ರೌತಸೂತ್ರವನ್ನು ಪರಿಷ್ಕರಿಸಿ ಮುದ್ರಿಸಿದ್ದಲ್ಲದೆ ಅದರ ವಿಮರ್ಶಾತ್ಮಕ ವಿವರಣೆಯನ್ನು ಬರೆದಾತ ಕ್ಯಾಲಂಡ್. ಆಪಸ್ತಂಬೀಯ ಶ್ರೌತಸೂತ್ರವನ್ನು ಸಂಪಾದಿಸಿದಾತ ಗಾರ್ಬೆ. ಆಪಸ್ತಂಬೀಯ ಗೃಹ್ಯಸೂತ್ರವನ್ನು ಪ್ರಕಟಗೊಳಿಸಿದವ ವಿಂಟರ್ನಿಟ್ಸ್‌. ಹಿರಣ್ಯಕೇಶಿ ಗೃಹ್ಯಸೂತ್ರವನ್ನೂ ಭಾಷಾಂತರಿಸಿದವ ಓಲ್ಡೆನ್ಬರ್ಗ್. ವೈಖಾನಸ ಸೂತ್ರಗಳ ಮೇಲೆ ಆಧಾರಗ್ರಂಥ ಬರೆದವ ಬ್ಲಾಕ್. ಮಾನವಸೂತ್ರಗಳ ಸಂಪಾದಕ ಕ್ನಾಯೆಕ್. ಶಾಂಖಾಯನ ಶ್ರೌತಸೂತ್ರದ ಸಂಪಾದಕ ಹಿಲ್ಲೆಬ್ರಾಂಟ್. ಇವಲ್ಲದೆ ಪ್ರಾಯಃ ಎಲ್ಲ ಕಲ್ಪಸೂತ್ರಗಳನ್ನೂ ವಿಮರ್ಶಿಸಿ ಪೂರ್ಣ ವಿವರಗಳನ್ನು ಈ ಒಂದೂವರೆ ಶತಮಾನಗಳ ಅವಧಿಯಲ್ಲಿ ಪಾಶ್ಚಾತ್ಯ ಸಂಶೋಧಕರು ಒದಗಿಸಿದ್ದಾರೆ. ಭಾರತೀಯ ಪರಿಷ್ಕರಣಗಳಿಗಿಂತಲೂ ಪಾಶ್ಚಾತ್ಯರವು ಅಧ್ಯಯನಕ್ಕೆ ಅತ್ಯಂತ ಉಪಯುಕ್ತವಾಗಿವೆ.

ಉಪಯೋಗ

[ಬದಲಾಯಿಸಿ]

ವೇದಗಳ ಅರ್ಥನಿರ್ಣಯಕ್ಕೂ ಶ್ರೌತ ಮತ್ತು ಗೃಹ್ಯಸೂತ್ರಗಳಿಂದ ಎಷ್ಟೋ ಉಪಕಾರವಾಗಿದೆ. ಈ ಸೂತ್ರಗಳು ಕೇವಲ ಯಜ್ಞಪ್ರಕ್ರಿಯೆಯನ್ನು ಕುರಿತ ನಿಯಮಗಳನ್ನು ಮಾತ್ರ ಹೇಳಿ ಅಲ್ಲಿಗೆ ನಿಲ್ಲುವುದಿಲ್ಲ. ಯಾವ ವೇದಮಂತ್ರಗಳನ್ನು ಯಾವ ಕಾಲದಲ್ಲಿ ಉಚ್ಚರಿಸಬೇಕೆಂಬ ಬಗೆಗೆ ವಿನಿಯೋಗವನ್ನು ತಿಳಿಸುತ್ತವೆ. ಪ್ರಾಯಿಕವಾಗಿ ಇಲ್ಲಿ ಉದ್ಧೃತವಾದ ಮಂತ್ರಭಾಗಗಳು ಯಜುರ್ವೇದದ ವಿಧಿಗಳು. ಒಮ್ಮೊಮ್ಮೆ ಉಚ್ಚರಿಸುವ ಮಂತ್ರಕ್ಕೂ ಆಚರಿಸುವ ವಿಧಿಕಲಾಪಕ್ಕೂ ವೈಷಮ್ಯವಿದ್ದಂತೆ ಕಾಣಬಹುದಾದರೂ ಪ್ರಾಯಃ ಕಲಾಪದ ಪರಿಜ್ಞಾನದಿಂದ ವೇದಮಂತ್ರದ ಸ್ಪಷ್ಟಾರ್ಥದ ಕಲ್ಪನೆಗೂ ಎಷ್ಟೋ ಅವಕಾಶ ದೊರೆತಂತಾಗುತ್ತದೆ.

ಈ ಮಂತ್ರಭಾಗಗಳ ಪರಿಶೀಲನೆಯಿಂದ ಸೂತ್ರರಚನೆಗಳನ್ನು ವಿಭಿನ್ನ ವೈದಿಕ ಶಾಖೆಯವರು ಯಾವ ರೀತಿ ಕೈಗೊಂಡರೆಂಬುದರ ಪರಿಜ್ಞಾನವುಂಟಾಗುತ್ತದೆ. ಉದಾಹರಣೆಗೆ, ಕೃಷ್ಣಯಜುಶ್ಶಾಖೆಯವರ ಶ್ರೌತ ಮತ್ತು ಗೃಹ್ಯಸೂತ್ರಗಳಲ್ಲಿ ಕೃಷ್ಣಯಜುಸ್ಸಂಹಿತೆಯ ಮಂತ್ರಗಳು ಮಾತ್ರ ಅವುಗಳ ಮೊದಲ ಪ್ರತೀಕಗಳ ಉಚ್ಚಾರಣೆಯ ಮೂಲಕ ಉದಾಹೃತವಾಗಿವೆ. ಪೂರ್ಣಮಂತ್ರಗಳನ್ನು ಅಲ್ಲಿ ಎತ್ತಿ ಬರೆಯುವುದೇ ಇಲ್ಲ. ಆದರೆ ಋಕ್ಸಂಹಿತೆ ಅಥವಾ ಅಥರ್ವಸಂಹಿತೆಗಳಿಂದ ಉದಾಹರಿಸುವಾಗ ಇಡಿಯ ಮಂತ್ರವನ್ನೇ ಪೂರ್ಣವಾಗಿ ಉದಾಹರಿಸುತ್ತಾರೆ. ಈಗ ಉಪಲಬ್ಧವಿರುವ ವೇದಸಂಹಿತೆಗಳಲ್ಲಿ ಕಾಣಸಿಗದಂಥ ಕೆಲವು ವೇದಮಂತ್ರಗಳು ಕೂಡ ಈ ಕಲ್ಪಸೂತ್ರಗಳಲ್ಲಿ ಉದಾಹೃತವಾಗಿರುವುದನ್ನು ನೋಡುತ್ತೇವೆ. ವೇದಮಂತ್ರಗಳ ವಿಸ್ತಾರವನ್ನರಿಯಲು ಇದು ಸಹಾಯಕವಾಗುತ್ತದೆ. ಕೆಲವೊಮ್ಮೆ ಕಲ್ಪಸೂತ್ರಗಳಲ್ಲಿ ಎತ್ತಿಕೊಂಡ ಮಂತ್ರಪಾಠಗಳನ್ನೆಲ್ಲ ಒಂದು ಸೂಚಿಯಾಗಿ ಮಾಡಿ ಪ್ರತ್ಯೇಕ ಸೂತ್ರಗ್ರಂಥವೆನ್ನುವುದೂ ಉಂಟು. ಉದಾಹರಣೆಗೆ, ಆಪಸ್ತಂಬೀಯ ಗೃಹ್ಯಸೂತ್ರಕ್ಕೆ ಸೇರಿದ ಮಂತ್ರಪಾಠವನ್ನು ಇಲ್ಲಿ ಹೆಸರಿಸಬಹುದು.

ಹೀಗೆ ವೈದಿಕ ಧರ್ಮದ ಸೂಕ್ಷ್ಮ ಪರಿಶೀಲನೆಗೆ, ವೈದಿಕ ಜೀವನಕ್ರಮದ ಸಪ್ರಮಾಣ ಪರಿಜ್ಞಾನಕ್ಕೆ, ವೈದಿಕ ಮಂತ್ರರ್ಥವಿವೇಚನೆಗೆ, ವಿಶ್ವದ ಧರ್ಮಗಳ ಇತಿಹಾಸದಲ್ಲಿ ವೈದಿಕ ಧರ್ಮದ ತುಲನಾತ್ಮಕ ಪರೀಕ್ಷಣಕ್ಕೆ, ವೈದಿಕ ಸಂಸ್ಕಾರಗಳ ಸ್ವರೂಪ ನಿರೂಪಣೆಗೆ ಕಲ್ಪಸೂತ್ರಗಳೇ ನಮಗಿರುವ ಅಕ್ಷಯನಿಧಿ. ಇವುಗಳ ಆಳವಾದ ಅಧ್ಯಯನದಿಂದಲೇ ಪಾಶ್ಚಾತ್ಯ ವಿದ್ವಾಂಸರು ವೈದಿಕ ಸಂಸ್ಕೃತಿಯನ್ನು ಅರಿತು ಸಮರ್ಥವಾಗಿ ಅರುಹಲು ಶಕ್ತರಾದರು. ಇನ್ನೂ ಈ ಆಚಾರಗಳನ್ನು ಶ್ರದ್ಧೆಯಿಂದ ಪಾಲಿಸುತ್ತಿರುವ ಭಾರತೀಯರಿಗೆ ಇವುಗಳ ಮಹತ್ತ್ವವನ್ನು ಪ್ರತ್ಯೇಕವಾಗಿ ತಿಳಿಯ ಹೇಳುವ ಅಗತ್ಯ ಕಾಣದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

[ಬದಲಾಯಿಸಿ]