ಕಲ್ಗಿ - ತುರಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲ್ಗಿ - ತುರಾಯಿ : - ಉತ್ತರ ಕರ್ನಾಟಕದಲ್ಲಿ ಗುರುತಿಸಲಾದ ಒಂದು ಪ್ರಸಿದ್ಧ ಲಾವಣಿ ಸಂಪ್ರದಾಯ. ದಕ್ಷಿಣ ಕರ್ನಾಟಕದಲ್ಲಿಯೂ ಈ ಸಂಪ್ರದಾಯದ ಹಾಡುಗಳಿದ್ದವು ಎಂಬುದಕ್ಕೆ ಅಲ್ಲಲ್ಲಿ ನಿದರ್ಶನಗಳು ಲಭ್ಯವಾದರೂ ಇತ್ತೀಚೆಗೆ ಸಂಪೂರ್ಣವಾಗಿ ಅವು ಕಣ್ಮರೆಯಾಗಿ ಹೋಗಿವೆ. ಮೈಸೂರು ಮತ್ತು ಕಡೂರುಗಳಲ್ಲಿ ಕಲ್ಗಿ_ತುರಾಯಿ ಲಾವಣಿಗಳನ್ನು ಹಾಡುವವರು ಕಾಣಬರುತ್ತಿದ್ದರು.

ಕಲ್ಗಿ - ತುರಾಯಿಗಳು ಲಾವಣಿಕಾರರ ಎರಡು ವರ್ಗಗಳು. ಹರದೇಶಿ - ನಾಗೇಶಿ ಎಂದೂ ಇವರನ್ನು ಕರೆವುದಿದೆ. ಈ ಎರಡು ವರ್ಗದ ಲಾವಣಿಕಾರರೂ ಇದಿರುಬದಿರಾಗಿ ಸ್ಫರ್ಧೆಯಿಂದ ಹಾಡುತ್ತಾರೆ. ಹರದೇಸಿಯವರು ಗಂಡಿನ ಪಕ್ಷವನ್ನೂ ನಾಗೇಸಿಯವರು ಹೆಣ್ಣಿನ ಪಕ್ಷವನ್ನೂ ವಹಿಸಿ ಅಪೂರ್ವ ಲಾವಣಿಗಳನ್ನು ಹೇಳುತ್ತಾರೆ. ತಮ್ಮ ತಮ್ಮ ಪಕ್ಷಗಳನ್ನು ಎತ್ತಿ ಹಿಡಿದು ಹಾಡುವುದು ಇಲ್ಲಿಯ ಸಂಪ್ರದಾಯ. ಒಂದು ಇನ್ನೊಂದಕ್ಕಿಂತ ಮೇಲು ಎಂದು ಸ್ಥಾಪಿಸುವ ಭರದಲ್ಲಿ ಲಾವಣಿಯ ಲಾವಣ್ಯಕ್ಕೆ ಭಂಗವನ್ನುಂಟುಮಾಡುವ ಸಂದರ್ಭಗಳೂ ಉಂಟು.

ಲಾವಣಿಗಳಲ್ಲಿ ವಿಸ್ತಾರವಾದ ಲಾವಣಿಗಳೂ ಉಪಲಾವಣಿಗಳೂ ಉಂಟು. ಪೌರಾಣಿಕ, ಸಾಮಾಜಿಕ, ಐತಿಹಾಸಿಕ ವಿಷಯಗಳು ಸಾಮಾನ್ಯವಾಗಿ ಈ ಲಾವಣಿಯ ಮುಖ್ಯ ವಸ್ತುಗಳಾಗಿ ಕಂಡುಬರುತ್ತವೆ. ಶೃಂಗಾರ ಹಾಗೂ ಹಾಸ್ಯ ಪ್ರಧಾನ ಲಾವಣಿಗಳ ಪ್ರಾಚುರ್ಯ ಹೆಚ್ಚು. ಹಳೆಯ ಸಂಪ್ರದಾಯದ ಲಾವಣಿಗಳು, ಹೊಸ ಸಂಪ್ರಾದಯದ ಲಾವಣಿಗಳು ಎಂದು ಇವುಗಳ ಬಗೆಗಳನ್ನು ವಿಭಜಿಸಲಾಗಿದೆ. ಹಳೆಯ ಲಾವಣಿಗಳು ರಚನಾ ದೃಷ್ಟಿಯಿಂದ, ಕಲ್ಪನಾರಮ್ಯತೆಯ ದೃಷ್ಟಿಯಿಂದ ವಿಶಿಷ್ಟ ಸ್ಥಾನಕ್ಕೆ ಅರ್ಹವಾದವು.

ಸಾಮಾನ್ಯವಾಗಿ ಲಾವಣಿಕಾರರು ಪ್ರತಿ ಲಾವಣಿಯನ್ನು ಹಾಡುವಾಗಲೂ ಮೊದಲಿಗೊಂದು ಉಪೋದ್ಘಾತ ಸ್ವರೂಪದ ಚಿಕ್ಕ ಹಾಡನ್ನೂ ಕೊನೆಗೊಂದು ಉಪಸಂಹಾರ ಸ್ವರೂಪದ ಹಾಡನ್ನೂ ಹೇಳುವುದು ವಾಡಿಕೆ. ಸೂಚನ ಪಲ್ಲವಿಯನ್ನು ಸಖಿ ಎಂದೂ ಕೊನೆಯದನ್ನು ಖ್ಯಾಲಿ ಎಂದೂ ಹೆಸರಿಸುತ್ತಾರೆ. ಪ್ರತಿಲಾವಣಿಯಲ್ಲೂ ಚೌಕ ಎಂಬ ವಿಭಾಗವನ್ನು ಕಲ್ಪಿಸಿ, ಅದರಲ್ಲಿ ಕೆಲವು ನುಡಿಗಳು, ಒಂದು ಚಾಲ ಸೇರಿರಬೇಕೆಂದು ಇಟ್ಟುಕೊಂಡಿದ್ದಾರೆ. ಅಂಥ ನಾಲ್ಕೋ ಆರೋ ಚೌಕ ಸೇರಿದರೆ ಒಂದು ಇಡಿಯ ಲಾವಣಿ ಅಗುತ್ತದೆ.

ಲಾವಣಿ ಹಾಡುವಾಗ ಸಾಮಾನ್ಯವಾಗಿ ಇಬ್ಬರು ಜೊತೆಯಾಗುತ್ತಾರೆ. ಅವರು ಎಡಗೈಯಲ್ಲಿ ಕೈತಾಳ, ಬಲಗೈಯಲ್ಲಿ ದಪ್ಪ ಹಿಡಿದು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಹಾಡಲು ಸಿದ್ಧವಾಗುತ್ತಾರೆ. ಅವರ ಹಿಂದೆ ತಿಂತಿಣಿ ಎಂಬ ವಾದ್ಯವನ್ನು ಹಿಡಿದ ಸೂರಿನವ ನಿಂತಿರುತ್ತಾನೆ.

ಲಾವಣಿಕಾರ ಲಾವಣಿಯ ಕೊನೆಯಲ್ಲಿ ತನ್ನ ಊರು, ಅಧಿದೈವ, ಗುರುಪರಂಪರೆ, ಹಾಡುವ ಜೊತೆಗಾರರು ಮುಂತಾದ ವಿಷಯಗಳನ್ನೂ ತನ್ನ ಹಾಡು ಎಂಥ ಪ್ರಭಾವಶಾಲಿಯಾದುದು, ಪ್ರತಿಪಕ್ಷದವರನ್ನು ಹೇಗೆ ಆಕರ್ಷಿಸಬಲ್ಲುದು ಎಂಬ ಅಂಶವನ್ನೂ ಸೂಚಿಸುತ್ತಾನೆ.

   
ಮನ ಸಂತೋಷಾಯ್ತು ಬೆಳದಿಂಗಳ ಮಳಿಕುಟ್ಟಿ | ಮಳಿಕುಟ್ಟಿ |
ಸುತ್ತ ರಾಜ್ಯದಾಗ ಹಲಸಂಗಿ ಊರ ಕರಿಕೋಟಿ | ಕರಿಕೋಟಿ |
ಗಂಡು ಬಾಳು ವಸ್ತಾದರ ಆ ಕಡಿ ನಡಗಟ್ಟಿ | ನಡಗಟ್ಟಿ
ಕರನಾಟಕ ಹಲಸಂಗಿ ಊರ | ಮೆರಿಯತಾವ ತೂರ |
ಮಲಿಕ ಮೈತರ | ಹಚ್ಚಿ ವರಗಿ |
ಖಾಜ್ಯಾನ ಕವೀ ಸವಿ ಸಕ್ಕರಿ ಎಲ್ಲರಿಗಿ |
ಖಂಡೂನ ಸೂರ ಕೇಳಿ ಕಲ್ಲ ಮನಸು ಕರಗಿ |

ಕಲ್ಗಿ_ತುರಾಯಿ ಸಂಪ್ರದಾಯ ಹಾಗೂ ಆ ಸಂಬಂಧವಾದ ಲಾವಣಿಗಳು ಕರ್ನಾಟಕ ಜಾನಪದದ ಒಂದು ಪ್ರಮುಖ ಅಂಗ. ಅತ್ಯುತ್ಕೃಷ್ಟ ಲಾವಣಿಗಳು ಈ ಪರಂಪರೆಯಲ್ಲಿ ಲಭ್ಯವಾಗಿ ಕನ್ನಡ ಜನಪದ ಕಾವ್ಯಸಂಪತ್ತಿನ ಹಿರಿಮೆಯನ್ನು ಸಾರುತ್ತಿವೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: