ವಿಷಯಕ್ಕೆ ಹೋಗು

ಕಬೀರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಬೀರ್ ದಾಸ್
ಶಿಷ್ಯನೊಂದಿಗೆ ಕಬೀರ್ ದಾಸರ :ಒಂದು ವರ್ಣಚಿತ್ರ
ಒಂದು ೧೮೨೫ರ ವರ್ಣಚಿತ್ರ ಕಬೀರರ ಜೊತೆಗೆ ಒಬ್ಬ ಅನುಯಾಯಿಯನ್ನು ಚಿತ್ರಿಸುತ್ತದೆ
ಜನನಶ ೧೪೪1
ಕಾಶಿಯ ಬಳಿಯ ಲಾಹರ್ತಾರ
ಮರಣಶ ೧೫೧9
ವೃತ್ತಿ(ಗಳು)ನೆಯ್ಗೆಯವ, ಕವಿ
ಗಮನಾರ್ಹ ಕೆಲಸಗಳುಭಕ್ತಿ ಪಂಥ ಹರಿಕಾರ, ಸಿಖ್ ಧರ್ಮ, ಸಂತ ಮಠ ಮತ್ತು ಕಬೀರ್ ಪಂಥ

ಕಬೀರ್ (ಸುಮಾರು ೧೪೪೦-೧೫೧೮) ಭಾರತದ ಒಬ್ಬ ಅನುಭಾವಿ ಕವಿ ಮತ್ತು ಸಂತರಾಗಿದ್ದರು, ಮತ್ತು ಇವರ ಬರಹಗಳು ಭಕ್ತಿ ಚಳುವಳಿಯ ಮೇಲೆ ಮಹತ್ತರ ಪ್ರಭಾವಬೀರಿವೆ. ಕಬೀರ್ ಹೆಸರು ಅರಬ್ಬೀ ಭಾಷೆಅಲ್-ಕಬೀರ್ ಅಂದರೆ ಮಹಾನ್‍ನಿಂದ ಬರುತ್ತದೆ. ಕಬೀರ್‌ರ ಕೊಡುಗೆಯನ್ನು ಇಂದು, ಅವರನ್ನು ಅದರ ಸ್ಥಾಪಕರೆಂದು ಗುರುತಿಸುವ ಮತ್ತು ಸಂತ ಮತ ಪಂಥಗಳಲ್ಲಿ ಒಂದಾದ ಒಂದು ಧಾರ್ಮಿಕ ಸಮುದಾಯವಾದ, ಕಬೀರ್ ಪಂಥ ಮುಂದಕ್ಕೆ ಸಾಗಿಸುತ್ತಿದೆ.

1440-1518. ಭರತ ವರ್ಷದ ಉತ್ತರ ಭಾಗಗಳಲ್ಲಿ, ಬಹಳವಾಗಿ ಪ್ರಚಾರಕ್ಕೆ ಬಂದ ಒಂದು ಧರ್ಮ ಪಂಥದ ಸ್ಥಾಪಕ. ಹುಟ್ಟಿದ್ದು ವಾರಾಣಸಿಯಲ್ಲಿ. ಅಲ್ಲಿಯ ಮುಸಲ್ಮಾನ ನೇಯ್ಗೆಕಾರ ಒಬ್ಬ ಊರಿಂದ ಕೆಲವು ಮೈಲಿಗಳ ದೂರದ ಲಹರ್ ತಲಾವ್ ಎಂಬ ಕೆರೆಯಲ್ಲಿ ತೇಲುತ್ತಿದ್ದ ಮಗುವೊಂದನ್ನು ಕಂಡು ಎತ್ತಿಕೊಂಡು ಮನೆಗೆ ತಂದನಂತೆ. ಅವನ ಹೆಂಡತಿ ಮಗುವನ್ನು ಸಾಕಿದಳು. ಅವರು ಅದಕ್ಕೆ ಕಬೀರ್ ಎಂದು ಹೆಸರಿಟ್ಟರು. ಕಬೀರ್ ಎಂದರೆ ಅರಬ್ಬೀಭಾಷೆಯಲ್ಲಿ ಮಹಾನ್ ಎಂದು ಅರ್ಥ. ಬೆಳೆಯುವ ದಿನದಲ್ಲಿ ಗೋಸಾಯಿ ಅಷ್ಟಾವಂದ್ ಎಂಬಾತನ ಪ್ರಭಾವದಿಂದ ಕಬೀರ್ ದೇವರನ್ನು ಹರಿ ಎಂದೂ ರಾಮ ಎಂದೂ ಕರೆದ. ಮುಸ್ಲಿಂ ಜನ ಇವನನ್ನು ಧರ್ಮಭ್ರಷ್ಟ ಎಂದು ದೂರಿದರು. ಧರ್ಮಭ್ರಷ್ಟ ನಾನಲ್ಲ, ಕೆಟ್ಟ ಬಾಳು ನಡೆಸುವ ಜನ ಧರ್ಮಭ್ರಷ್ಟರು ಎಂದು ಪ್ರತಿ ಹೇಳಿದ. ಜಾತಿಮುಖ್ಯವಲ್ಲ. ಗುಣ ಮುಖ್ಯ ಎಂಬ ನಂಬಿಕೆಯಲ್ಲಿ ನಡೆದು ಕಬೀರ್ ಜನರಲ್ಲಿ ಒಬ್ಬ ಪ್ರಮುಖನಾಗಿ ನಿಂತ. ಕಬೀರ್ ಒಮ್ಮೆ ಜನಿವಾರ ಹಾಕಿಕೊಂಡು ತಾನು ದ್ವಿಜನಾದೆ ಎಂದನಂತೆ. ಒಬ್ಬ ಬ್ರಾಹ್ಮಣ ಈ ನಡತೆಯನ್ನು ನಿಷೇಧಿಸಿದ. ಜನಿವಾರ ಹೃದಯದಲ್ಲಿ ದೇವರಿರುವುದರ ಗುರುತು. ನನ್ನ ಹೃದಯದಲ್ಲಿ ದೇವರಿದ್ದಾನೆ. ನಿನ್ನ ಹೃದಯದಲ್ಲಿಲ್ಲ. ಇದನ್ನು ಹಾಕಿಕೊಳ್ಳುವುದಕ್ಕೆ ನಿನಗಿಂತ ನನಗೆ ಹೆಚ್ಚು ಅಧಿಕಾರ-ಎಂದು ಕಬೀರ್ ಕೇಳಿದನಂತೆ. ದಿನ ಕಳೆದಂತೆ ಜನ ಇವನನ್ನು ಒಬ್ಬ ಸಂತನೆಂದು, ಗುರು ಎಂದು ಒಪ್ಪಿಕೊಂಡರು. ಶುಷ್ಕ ಆಚಾರ, ಭಾವಹೀನ ಪುಜನ ಇಂಥ ವ್ಯರ್ಥವರ್ತನವನ್ನು ಕಬೀರ್ ಖಂಡಿಸಿ, ನಿಷ್ಕಾಮಕರ್ಮದ ಉಪದೇಶಕನಾದ. ರಾಮಾನಂದನಲ್ಲಿಗೆ ಹೋಗಿ ಅವನನ್ನು ಗುರುವಾಗಿ ಸ್ವೀಕರಿಸಿದ. ದೇವರನ್ನು ರಾಮ ಎಂದು ರಹೀಮ್ ಎಂದು ಹೇಗೆ ಕರೆದರೂ ಸರಿಯೇ, ಭಕ್ತಿಯಿಂದ ಕರೆಯಿರಿ, ಎಂದು ಹೇಳಿ ಕಬೀರ್ ಆಚಾರವಂತ ಹಿಂದೂ ಆಚಾರವಂತ ಮುಸಲ್ಮಾನ ಇವರ ಎರಡು ಸಮುದಾಯವನ್ನೂ ಹಗೆ ಮಾಡಿಕೊಂಡ. ಆದರೆ ಇವನನ್ನು ಮೆಚ್ಚಿ ಅನೇಕ ಜನ ಇವನ ಅನುಯಾಯಿಗಳಾದರು. ತನ್ನ ಶುದ್ಧ ಜೀವನದಿಂದ ಕಬೀರ್ ಅನೇಕ ಸಿದ್ಧಿಗಳನ್ನು ಗಳಿಸಿದ. ಇವನ ಮಹಿಮೆಯನ್ನು ಕೇಳಿ ಬಾದಷಹ ಸಿಕಂದರ್ ಲೋದಿ ಇವನಿಗೆ ಹಣವನ್ನು, ನೆಲವನ್ನು ಕೊಡುವೆನೆಂದ. ಕಬೀರ್ ಅವನ್ನು ಸ್ವೀಕರಿಸಲಿಲ್ಲ. ಕಬೀರನನ್ನು ಕುರಿತು ಅನೇಕ ಪವಾಡ ಕಥೆಗಳಿವೆ. ಧರ್ಮವನ್ನು ಕುರಿತು ವಾದಿಸಲು ಬಂದ ಅನೇಕರನ್ನು ಕಬೀರ್ ಸೋಲಿಸಿದ. ಅದಕ್ಕೂ ಹೆಚ್ಚಿನ ಸಂಗತಿ ಇವನ ಹಗೆಗಳು ಇವನಿಗೆ ಒಡ್ಡಿದ ಪ್ರಲೋಭನ, ವಿಷಪರೀಕ್ಷೆಗಳಲ್ಲಿ ಇವನು ಸೋಲದೆ ನಿಂತದ್ದು. ವಾರಾಣಸಿ ಪುಣ್ಯಕ್ಷೇತ್ರ, ಅಲ್ಲಿ ಸತ್ತವರಿಗೆ ಮುಕ್ತಿ-ಎಂಬ ಮಾತಿನಲ್ಲಿ ಹುರುಳಿಲ್ಲ ಎಂದು ತೋರಿಸುವುದಕ್ಕೆ ಕಬೀರ್ ಇಲ್ಲಿ ಸತ್ತವರು ಕತ್ತೆಯಾಗಿ ಹುಟ್ಟುತ್ತಾರೆ ಎಂದು ಪ್ರತೀತಿ ಪಡೆದಿದ್ದ ಮಗಹರ ಎಂಬ ಸ್ಥಳದಲ್ಲಿ ನಿಂತು ಅಲ್ಲಿ ತೀರಿಕೊಂಡನಂತೆ. ಜನ ಮಹನೀಯರೆಂದು ಗಣಿಸಿರುವ ಇಂಥ ಇತರ ಹಿರಿಯರ ವಿಷಯದಲ್ಲಿ ಬೆಳೆದಿರುವಂತೆ ಇವನ ವಿಷಯದಲ್ಲೂ ಒಂದು ಕಥೆ ಬೆಳೆದಿದೆ. ಶಿಷ್ಯರಲ್ಲಿ ಹಿಂದೂಗಳಾದವರು ಇವನ ದೇಹವನ್ನು ಸುಡಬೇಕೆಂದೂ ಮುಸಲ್ಮಾನರು ಹೂಳಬೇಕೆಂದೂ ಅಪೇಕ್ಷಿಸಿದರು. ದೇಹ ಇವರಿಗೂ ಸಿಕ್ಕಲಿಲ್ಲ. ಅವರಿಗೂ ಸಿಕ್ಕಲಿಲ್ಲ. ಅದಕ್ಕೆ ಹೊದಿಸಿದ್ದ ಹಚ್ಚಡವನ್ನು ತೆಗೆದು ನೋಡಿದಾಗ ಅದರಡಿ ಒಂದಿಷ್ಟು ಹೂವಿನ ರಾಶಿ ಮಾತ್ರ ಇತ್ತು. ಶಿಷ್ಯವರ್ಗದವರು ಇದರ ಮೇಲೆ ಒಂದು ಮಂದಿರವನ್ನೂ ಒಂದು ಸಮಾಧಿಯನ್ನೂ ಅಕ್ಕಪಕ್ಕದಲ್ಲಿ ಕಟ್ಟಿದರು. ಮೃತನಾದ ಕಬೀರ್ ಆಮೇಲೆ ಮರಳಿ ಎದ್ದನೆಂದೂ ತನ್ನ ಅನಂತರ ಗುರುವಾಗಿರಲು ತಾನೇ ನೇಮಿಸಿದ ಧರ್ಮದಾಸನಿಗೆ ಇತರ ಕೆಲವು ಶಿಷ್ಯರಿಗೆ, ಕಂಡನೆಂತಲೂ ಇನ್ನೊಂದು ಕಥೆ ಹೇಳುತ್ತದೆ. ಹೀಗೆ ಕಂಡಾಗ ಅವನು ತನ್ನ ಪಂಥದ ಆಧಾರ ಸೂತ್ರಗಳೆಂದು 42 ಸಂಗತಿಗಳನ್ನು ಹೇಳಿ ಅನಂತರ ದಿವ್ಯವನ್ನು ಸೇರಿದನಂತೆ.

ಗೀತೆಗಳು

[ಬದಲಾಯಿಸಿ]

ಕಬೀರನ ಗೀತೆಗಳು ನೂರಾರು. ಕನ್ನಡ ದೇಶದಲ್ಲೂ ಭಕ್ತಜನರು ಭಜನೆಗಳಲ್ಲಿ ಇವನ ಗೀತಗಳನ್ನು ಹಾಡುತ್ತಾರೆ. ಕಹತ ಕಬೀರಾ ಸುನೋ ಭೈ ಸಾಧು-ಎಂಬ ಕೊನೆಯ ಪಲ್ಲವಿಯನ್ನುಳ್ಳ ಹಲವು ಹಾಡುಗಳು ನಮಗೆಲ್ಲ ಪರಿಚಿತವಾಗಿವೆ. ಬೆತ್ತಲೆ ನಡೆದಾಡಿ ಸಾಯುಜ್ಯ ಪಡೆಯುವುದಾದರೆ ಅರಣ್ಯದ ಮೃಗಗಳೆಲ್ಲ ಮುಕ್ತ ಜೀವಿಗಳೆ. ಬೆತ್ತಲೆ ನಡೆದೂ ಇಲ್ಲ; ತೊಗಲನ್ನು ಹೊದೆದೂ ಏನೂ ಫಲವಿಲ್ಲ. ಒಳಗೆ ದೈವಸಿದ್ಧಿ ಆಗಬೇಕು. ತಲೆ ಬೋಳಿಸಿಕೊಂಡಷ್ಟಕ್ಕೆ ಒಬ್ಬ ಪುರ್ಣನಾಗಬಹುದಾದರೆ ಉಣ್ಣೆ ಕತ್ತರಿಸಿದ ಕುರಿಗಳು ಏಕೆ ಪುರ್ಣ ಅಲ್ಲ? ಇಂದ್ರಿಯ ಸುಖವನ್ನು ಕಾಣದವ ಮುಕ್ತನೆನ್ನುವುದಾದರೆ ಷಂಡರು ಷಂಡರಾದ ಕಾರಣದಿಂದಲೆ ಬ್ರಹ್ಮವನ್ನು ಮುಟ್ಟಿರಬೇಕು. ಕಬೀರ ಹೇಳುತ್ತಾನೆ, ಕೇಳಿ, ಸಾಧು ಸಹೋದರರೆ ಭಗವಂತನ ಪಾವನ ನಾಮದ ಮೂಲಕ ಹೊರತು ಯಾರಿಗೂ ಮುಕ್ತಿ ದೊರಕಿಲ್ಲ. ಇದು ಒಂದು ಕಬೀರವಚನ. (ಎಂ.ವಿ.ಐ.; ಎಚ್.ಆರ್.ಆರ್.ಐ.)

ಕಬೀರನ ಉಪದೇಶಗಳಲ್ಲಿ ಸೂಫಿಪಂಥದ ಮತ್ತು ವೇದಾಂತಧರ್ಮದ ಸಾಮರಸ್ಯವನ್ನು ಕಾಣಬಹುದು. ವೇದಾಂತಿಯಾಗಿದ್ದರೂ ಈತ ಆರಾಧಿಸುತ್ತಿದ್ದ ದೇವರು ನಿರ್ಗುಣಬ್ರಹ್ಮನೇ ಸಗುಣೇಶ್ವರನೆ ಎಂಬ ವಿಷಯದಲ್ಲಿ ವಿವಾದ ಹುಟ್ಟಿದೆ. ಇವನು ನಿರ್ಗುಣ ಪಂಥಕ್ಕೆ ಸೇರಿದವನೆಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಮತ್ತೆ ಕೆಲವರು ಇವನ ಇಷ್ಟದೇವತೆ ರಾಮನಾಗಿದ್ದನೆಂದೂ ಇವನು ಸಗುಣೇಶ್ವರೋಪಾಸಕನೆಂದೂ ಅಭಿಪ್ರಾಯ ಪಡುತ್ತಾರೆ. ಇವನಿಗೆ ಕರ್ಮ ಮತ್ತು ಪುನರ್ಜನ್ಮಗಳಲ್ಲಿ ನಂಬಿಕೆ ಇದ್ದಂತೆ ತೋರುತ್ತದೆ. ಇವನ ಪದ್ಯಗಳಲ್ಲಿ ಭಗವದ್ಭಕ್ತಿ ತುಳುಕಾಡುತ್ತದೆ.

ಪದ್ಯಗಳು

[ಬದಲಾಯಿಸಿ]

ಕಬೀರನ ಪದ್ಯಗಳು ಹಿಂದೀ ಭಾಷೆಯ ರೂಪಾಂತವಾದ ಅವಧಿ ಭಾಷೆಯಲ್ಲಿದೆ. ಇವನ ಕವಿತೆಗಳು ಕೃತಕ ಶೈಲಿಯಲ್ಲಿದೆ ಸಹಜವಾಗಿ ಹೃದಯದಿಂದ ಹೊರಹೊಮ್ಮಿದ ಮಾತುಗಳಂತೆ ಇವೆ. ಸು. 1570ರಲ್ಲಿ ಕಬೀರನ ಪದ್ಯಗಳ ವಚನಗಳ ಸಂಕಲನ ಬೀಜಕ್ ಎಂಬ ಹೆಸರಿನಿಂದ ಪ್ರಕಟವಾಯಿತು. ಇದಾದ ಸು. 30 ವರ್ಷಗಳ ಅನಂತರ ಇವನ ವಚನಗಳು ಸಿಖ್ಖರ ಗ್ರಂಥದೊಳಗೆ ಅಳವಟ್ಟುವು. ಕಬೀರನ ಅನುಯಾಯಿಗಳು ಕಬೀರ ಪಂಥಿಗಳೆಂದು ಕರೆದುಕೊಂಡಿದ್ದಾರೆ. ಇದಲ್ಲದೆ ಕಬೀರನ ಸ್ಫೂರ್ತಿಯಿಂದ ಹುಟ್ಟಿದ ಭಕ್ತಿಪಂಥಗಳು ನಾನಾ ಬಗೆಯಾಗಿವೆ. ಇವುಗಳಲ್ಲಿ ಪ್ರಸಿದ್ಧವಾದವು ಸಿಖ್ಖರು, ದಾದುಪಂಥಿಗಳು, ಲಾಲ್ದಾಸಿಗಳು ಮೊದಲಾದವರು. ಸಿಖ್ ಧರ್ಮದ ಸ್ಥಾಪಕನಾದ ನಾನಕ್ ಮತ್ತು ದಾದು ಎಂಬ ಸಂತರ ಮೇಲೆ ಕಬೀರನ ಪ್ರಭಾವ ವಿಶೇಷವಾಗಿ ಬಿದ್ದಿದೆ. ಕಬೀರನಿಂದ ಸ್ಫೂರ್ತಿಗೊಂಡ ಈ ಎಲ್ಲ ಪಂಥಗಳಿಗೆ ಸಮಾನವಾದ ಅಭಿಪ್ರಾಯಗಳು ಹೀಗಿವೆ:

1. ಜಗತ್ತಿಗೆಲ್ಲ ದೇವರು ಒಬ್ಬನೇ. ಅವನನ್ನೇ ಆರಾಧನೆ ಮಾಡಬೇಕು. ಅವನ ಪುಜೆ ವಿಗ್ರಹದ ಮೂಲಕವಾಗಿ ಅಲ್ಲ. 2. ಅಧ್ಯಾತ್ಮ ಸಾಧನೆ ಜಾತಿ ಕುಲ ಭೇದಗಳಿಲ್ಲದೆ ಎಲ್ಲರಿಗೂ ತೆರೆದ ದಾರಿಯಾಗಿದೆ. 3. ಭಕ್ತಿಪಂಥ ಹಿಂದೂಗಳಿಗೂ ಮುಸಲ್ಮಾನರಿಗೂ ಸಮಾನವಾಗಿ ತೆರೆದಿಟ್ಟ ಪಂಥ. 4. ಅಧ್ಯಾತ್ಮ ಜೀವನದಲ್ಲಿ ಮುಂದುವರಿಯಬೇಕಾದರೆ ಸದ್ಗುರುವಿನ ಸಾನ್ನಿಧ್ಯ ಆವಶ್ಯಕ. 5. ಭಕ್ತಿ ಸಾಹಿತ್ಯವೆಲ್ಲ ಪಂಡಿತರ ಭಾಷೆಯಲ್ಲಿಲ್ಲದೆ ಸಾಮಾನ್ಯ ಜನಕ್ಕೆ ಎಟುಕಬಲ್ಲ ಸಾಮಾನ್ಯ ದೇಶಭಾಷೆಯಲ್ಲಿರಬೇಕು. ಬರಬರುತ್ತ ಕಬೀರನ ಪಂಥ ಹಿಂದೂಧರ್ಮದ ಇತರ ಭಾವ ಭಾವನೆಗಳನ್ನು ಅಳವಡಿಸಿಕೊಂಡು ಹಿಂದೂಧರ್ಮದ ಇತರ ಪಂಥಗಳಂತೆ ಅದರ ಒಂದು ಶಾಖೆಯಾಗಿ ಪರಿವರ್ತಿತವಾಯಿತು. ರವೀಂದ್ರನಾಥ ಠಾಕೂರರು ಕಬೀರನ 100 ಆರಿಸಿದ ಪದ್ಯಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದ್ದಾರೆ. ಕನ್ನಡಕ್ಕೂ ಅನೇಕ ವಚನಗಳು ಅನುವಾದವಾಗಿವೆ. (ಎಂ.ವೈ.)

ಕಬೀರ ತನ್ನ ಭಾಷೆಯನ್ನು ಪುರಬೀ (ಪುರ್ವದ ಭಾಷೆ) ಎಂದಿದ್ದಾನೆ. ಭೋಜಪುರೀ ಭಾಷೆಗೆ ಪುರಬೀ ಎಂದು ಹೆಸರಿದೆ. ವಾರಾಣಸಿಯಿಂದ ಗೋರಖ್ಪುರದವರೆಗಿನ ಭಾಷೆ ಭೋಜಪುರೀ. ಕಬೀರ ಬಾಳಿ ಬದುಕಿದ್ದುದು ವಾರಾಣಸಿಯಲ್ಲಿ.ಆದರೆ ಇವನ ಭಾಷೆಯ ಮೇಲೆ ಪಂಜಾಬೀ ಭಾಷೆಯ ಪ್ರಭಾವ ಎದ್ದುಕಾಣುತ್ತದೆ. ಈತನ ಪಂಜಾಬದತ್ತಣ ಲಿಪಿಕಾರಶಿಷ್ಯರ ಕಾರ್ಯ ಇದಾಗಿರಬೇಕೆಂದು ರಾಮಕುಮಾರವರ್ಮರ ಅಭಿಮತವಾಗಿದೆ.

ಕಬೀರ ಲೋಕಸಂಚಾರಿ. ಜನತೆಯ ಮಡಿಲಲ್ಲಿಯೇ ಮೆರೆದವ. ಹೋದ ಹೋದ ಕಡೆಯ ಜನಭಾಷೆಯ ಪ್ರಭಾವ ಅವನ ಭಾಷೆಯ ಮೇಲೆ ಬಿದ್ದಿರುವುದು ಸಹಜವಾದದ್ದು. ಹೀಗಾಗಿ ಅವನದು ಭೋಜಪುರೀ, ಪಂಜಾಬೀ, ವ್ರಜ, ಅವಧೀ ಹಾಗೂ ಖಡಿಬೋಲಿಯಗಳ ಸಮ್ಮಿ ಶ್ರವಾದ ಲೋಕಭಾಷೆಯಾಗಿದೆ. ಇದನ್ನು ರಾಮಚಂದ್ರ ಶುಕ್ಲ ಸಾಧುಕ್ಕಡೀ (ಸಾಧುಗಳ ಭಾಷೆ) ಎಂದಿದ್ದಾರೆ. ಕಬೀರ ಸರ್ವಜ್ಞನಂತೆ ನಿರಂತರ ವಾಗ್ವಿಭೂತಿಯ ಚೆಲುವನ್ನು ಬೆಳಗುವ ದೇವದೂತನಾಗಿದ್ದ. ಇವನ ಸಾಹಿತ್ಯ ಅಪಾರವಾದದ್ದು. ತಾನೇ ಹೇಳಿಕೊಂಡಿರುವಂತೆ ಈತ ಮಸಿ ಕಾಗದ ಮುಟ್ಟಿಲ್ಲ, ಕರದಲ್ಲಿ ಲೇಖನಿ ಹಿಡಿದಿಲ್ಲ. ಆದರೆ ನಾಲ್ಕು ಯುಗಗಳ ಮಹಾತ್ಮ್ಯವನ್ನು ಬಾಯ ಮಾತಿನಿಂದಲೇ ಸಾರಿದ್ದಾನೆ. ಶಿಷ್ಯರು ಅವನ್ನು ಸಂಗ್ರಹಿಸಿದರು, ಅಷ್ಟೇ.

ಕಬೀರರ ಕೃತಿಗಳು

[ಬದಲಾಯಿಸಿ]

1. ಕಬೀರ ಸಾಹಬಕೀ ಶಬ್ದಾವಲಿ, 2. ಕಬೀರನಕೇ ಪದ, 3. ಸಾಖಿಯಾಂ, 4. ಬೀಜಕ್, 5. ಸಂತಕಬೀರ, 6. ಕಬೀರ ವಚನಾವಲಿ ಹಾಗೂ 7. ಕಬೀರ ಗ್ರಂಥಾವಲಿ-ಈ ಗ್ರಂಥಗಳಲ್ಲಿ ಕಬೀರ ಗ್ರಂಥಾವಲಿ ಹೆಚ್ಚು ಪ್ರಾಮಾಣಿಕವೆಂದು ನಂಬಲಾಗಿದೆ. ಇವನ ಕೃತಿಗಳು ಹಾಡುಗಳ ಹಾಗೂ ಪದ್ಯಗಳ ರೂಪವಾಗಿ ರಚಿಸಲ್ಪಟ್ಟಿವೆ. ಅವನ್ನು ಮೂರು ವಿಧವಾಗಿ ವಿಂಗಡಿಸಿದ್ದಾರೆ. 1. ಸಾಖೀ, 2. ಸಬದ ಅಥವಾ ಸಬದೀ 3. ರಮೈನೀ.

1.ಸಾಖೀ : ಇದು ಸಾಕ್ಷಿ ಶಬ್ದದ ವಿಕೃತರೂಪ. ಸಾಕ್ಷೀಭೂತವಾಗಿ ಕಂಡು ಅನುಭವಿಸಿದ ಈ ಉಕ್ತಿಗಳಿಗೆ ಸಾಕ್ಷಿ ಎಂದು ಹೆಸರು. ಸಾಕ್ಷಿಯೇ ಜ್ಞಾನದ ಅಕ್ಷಿ ಎಂದು ಈತನೇ ಒಂದೆಡೆ ಘೋಷಿಸಿದ್ದಾನೆ. ಇವೆಲ್ಲ ದೋಹಾ ಹಾಗೂ ಸೋರಠಾ ಎಂಬ ದ್ವಿಪದಿ ಛಂದಗಳಲ್ಲಿ ವ್ಯಕ್ತವಾಗಿದೆ. ಕಬೀರನ ಜ್ಞಾನದ ಭಂಡಾರಗಳೇ ಈ ಸಾಕ್ಷಿಗಳು. ಇವನ್ನು ಗುರುವಿನ ಅಂಗ, ವಿರಹ ವಿಚಾರ, ಸ್ಮರಣೆಯ ವಿಚಾರ-ಎಂದು ಮುಂತಾಗಿ ವಿಭಾಗಿಸಿದ್ದಾರೆ. 2. ಸಬದ್ ಅಥವಾ ಸಬದೀ : ಕಬೀರ ಹಾಡಿದ ಪದಗಳ ಸಂಗ್ರಹಕ್ಕೆ ಸಬದ್ ಅಥವಾ ಸಬದೀ ಎನ್ನುತ್ತಾರೆ. ಕಬೀರನ ನಿಜವಾದ ರಸಸ್ರೋತವಿರುವುದೇ ಇವುಗಳಲ್ಲಿ. ಸಬದೀ ಎಂದರೆ ಧ್ವನಿ. ಅಂತರಂಗಸ್ಫೂರ್ತ ಆ ನಾದಧ್ವನಿಯೇ ಸಬದಿಯಾಗಿ ಹೊರಬಂದಿದೆ-ಎಂಬ ಭಾವ ಇದರದಾಗಿರಬೇಕು.[]

ದಾಂಪತ್ಯಪ್ರೇಮಶೀಲವಾದ ಕಬೀರನ (ಮಧುರಾ) ಭಕ್ತಿಗೀತೆಗಳು ಲೋಕಪ್ರಸಿದ್ಧವಾಗಿವೆ.

ಘೂಂಘಟಕಾ ಪಟ ಖೋಲರೇ, ಅಬ ಪೀವ ಮಿಲೇಂಗೆ (ಮುಖದ ಸೆರಗನ್ನು ಸರಿಸು ರಮಣೀ, ಈಗ ಪ್ರಿಯತಮನ ಮಿಲನ ಸಮಯ) ಎಂಬ ಲೋಕವಿಖ್ಯಾತ ಗೀತ ಈ ಸಬದಿಯ ಒಂದು ರೂಪವೆನ್ನಬೇಕು.

3. ರಮೈನೀ : ಅಧ್ಯಾತ್ಮದಲ್ಲಿ ಸೂಕ್ಷ್ಮ ವಿಚಾರಗಳ ಉದ್ಘಾಟನೆಯೇ ರಮೈನೀಯಾ ಗಿರಬೇಕು. ರಮೈನೀಗಳು ದೋಹಾ (ದ್ವಿಪದಿ) ಹಾಗೂ ಚೌತಾಯಿ (ಚೌಪದಿ) ಗಳಲ್ಲಿ ರಚಿಸಲ್ಪಟ್ಟಿವೆ. ಜ್ಞಾನಮಾರ್ಗದ ಅನೇಕ ತತ್ತ್ವಗಳು ಇಲ್ಲಿ ನಿರೂಪಿತವಾಗಿವೆ. (ಆರ್.ಜಿ.ಕೆ.)

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-11-11. Retrieved 2017-05-19.
"https://kn.wikipedia.org/w/index.php?title=ಕಬೀರ್&oldid=1139230" ಇಂದ ಪಡೆಯಲ್ಪಟ್ಟಿದೆ