ವಿಷಯಕ್ಕೆ ಹೋಗು

ಕನ್ನಡದಲ್ಲಿ ಸಾಂಗತ್ಯಕಾವ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡದಲ್ಲಿ ಸಾಂಗತ್ಯಕಾವ್ಯ :-- ಕನ್ನಡದಲ್ಲಿ ಸಾಂಗತ್ಯಕೃತಿಗಳು ವಿಪುಲವಾಗಿವೆ. ಕನ್ನಡದ ಮೊದಲ ಸಾಂಗತ್ಯ ಕೃತಿ ಸು.1410ರಲ್ಲಿದ್ದ ದೇಪರಾಜನ 'ಸೊಬಗಿನ ಸೋನೆ' ಪ್ರಥಮ ಸಾಂಗತ್ಯಕೃತಿ.

ಸಾಂಗತ್ಯ ಅಂಶಗಣ

[ಬದಲಾಯಿಸಿ]

ಸಾಂಗತ್ಯ ಅಂಶಗಣಗಳಿಂದ ಸಂಘಟಿತವಾದುದು. ಇದರಲ್ಲಿ ಒಟ್ಟು ಹದಿನಾಲ್ಕು ಗಣಗಳಿರುತ್ತವೆ. ಅದರ ಒಂದು ಮತ್ತು ಮೂರನೆಯ ಪಾದಗಳು ಒಂದು ಸಮನಾಗಿಯೂ ಎರಡು ಮತ್ತು ನಾಲ್ಕನೆಯ ಪಾದಗಳು ಮತ್ತೊಂದು ಸಮನಾಗಿಯೂ ಇರುತ್ತವೆ. ಒಂದು ಮತ್ತು ಮೂರನೆಯ ಪಾದಗಳಲ್ಲಿ ನಾಲ್ಕು ನಾಲ್ಕು ವಿಷ್ಣುಗಣಗಳೂ ಎರಡು ಮತ್ತು ನಾಲ್ಕನೆಯ ಪಾದಗಳಲ್ಲಿ ಎರಡೆರಡು ವಿಷ್ಣುಗಣಗಳೂ ಕೊನೆಯಲ್ಲಿ ಒಂದು ಬ್ರಹ್ಮಗಣವೂ ಇರುತ್ತವೆ. ಮಾದರಿಗಾಗಿ ಒಂದು ಪದ್ಯವನ್ನು ನೋಡಬಹುದು.

    ವಿ     +       ವಿ	  +    ವಿ     +   ವಿ     ಪರಮಪ | ರಂಜ್ಯೋತಿ | ಕೋಟಿಚಂ | ದ್ರಾದಿತ್ಯ
   ವಿ       +    ವಿ	     +  ಬ್ರ

ಕಿರಣಸು | ಜ್ಞಾನ ಪ್ರ | ಕಾಶ |

   ವಿ    +        ವಿ      +     ವಿ      +   ವಿ	     

ಸುರರಮ | ಕುಟಮಣಿ | ರಂಜಿತ | ಚರಣಾಬ್ದ

   ವಿ      +      ವಿ        +  ಬ್ರ	    

ಶರಣಾಗು | ಪ್ರಥಮಜಿ | ನೇಶ (ಭರತೇಶವೈಭವ)

ಸಾಂಗತ್ಯ ಹಾಡುಗಬ್ಬದ ಜಾತಿಗೆ ಸೇರಿದುದು. ಆದುದರಿಂದ ಅರ್ಥ ಸ್ವಾರಸ್ಯಕ್ಕಾಗಿ, ಹಾಡಿನ ಸೌಲಭ್ಯಕ್ಕಾಗಿ ವಿಷ್ಣುಗಣದ ಸ್ಥಾನದಲ್ಲಿ ಬ್ರಹ್ಮವೋ ರುದ್ರವೋ ಬ್ರಹ್ಮಗಣದ ಸ್ಥಾನದಲ್ಲಿ ವಿಷ್ಣುವೋ ರುದ್ರವೋ ಪರ್ಯಾಯವಾಗಿ ಬರುವುದುಂಟು. ಒಂದು ಉದಾಹರಣೆ:

  ಬ್ರ	             ವಿ		   ರು	           ವಿ

ಕುರುರಾ | ಯನಮೈದು | ನನಕೊಲೆಗೆ | ಧರ್ಮಜ

 ವಿ	          ವಿ	         ಬ್ರ

ನರನಕ | ಳುಪುವತೆ | ದೊಳು |

 ವಿ  	              ವಿ	      ವಿ	     ವಿ

ನರಪತಿ| ಯೊಡಬಟ್ಟು | ಕಳುಪಿದ | ರಾಮನ

  ವಿ            ವಿ	          ಬ್ರ

ಪರಬಲ | ಜಲನಿದಿ | ಯೆಡೆಗೆ |(ರಾಮನಾಥಚರಿತೆ)

ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಆದಿಪ್ರಾಸ ಒಂದು ಅಪರಿಹಾರ್ಯವಾದ ಅಂಶ. ಸಾಂಗತ್ಯಕಾರರೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದಾರೆ. ಆದರೆ ಕೆಲವು ಸಾಂಗತ್ಯಕೃತಿಗಳಲ್ಲಿ ಪ್ರಾಸೋಲ್ಲಂಘನೆಯಾಗಿರುವುದನ್ನು ಕಾಣಬಹುದು. ಸಮಯ ಕಾಲವನರಿತು ಗೆಲಬೇಕು ವೈರಿಯ ಮುಳುಗು ಮುಗ್ಗಿದ ಕಾಲದೊಳಗೆ ನರಿ ಬಂದು ಗುಂಡಿಯ ಕೆಡೆದಾಗ ಜನಕೊಂದು ಯಿಡಬೇಕು ಕಲ್ಲೆಂಬ ಗಾದೆ (ಕುಮಾರರಾಮನಸಾಂಗತ್ಯಗಳು)

ಪ್ರಾಚೀನ ಕನ್ನಡ ಛಂದಃಕಾರರು ಸಾಂಗತ್ಯದ ಲಕ್ಷಣವನ್ನು ಹೇಳಿಲ್ಲ. ನಾಗವರ್ಮನ ‍ಛಂದೋಂಬುಧಿಯಲ್ಲೂ ಜಯಕೀರ್ತಿಯ ಛಂದೋನುಶಾಸನದಲ್ಲೂ ಈಚಿನ ಇತರ ಕನ್ನಡ ಛಂದೋಗ್ರಂಥಗಳಲ್ಲಿಯೂ ಈಶ್ವರ ಕವಿಯ ಕವಿಜಿಹ್ವಾಬಂಧನದಲ್ಲೂ ನಂದಿಯ ನಂದಿ ಛಂದಸ್ಸಿನಲ್ಲೂ ಸಾಂಗತ್ಯದ ಉಲ್ಲೇಖವಿಲ್ಲ. ಕನ್ನಡ ಸಾಹಿತ್ಯದ ಪ್ರಥಮ ಸಾಂಗತ್ಯಕೃತಿಯೆಂದು ವಿದ್ವಾಂಸರು ಅಬಿಪ್ರಾಯಪಟ್ಟಿರುವ ದೇಪರಾಜನ ಸೊಬಗಿನ ಸೋನೆ ಒಂದು ವಿಶಿಷ್ಟ ರೀತಿಯದು. ಈ ಕೃತಿಯಲ್ಲಿನ ಪ್ರತಿಯೊಂದು ಪದ್ಯದಲ್ಲಿಯೂ ಬ್ರಹ್ಮಗಣಗಳಿಗೆ ಪರ್ಯಾಯವಾಗಿ ವಿಷ್ಣುಗಣಗಳನ್ನು ಬಳಸಲಾಗಿದೆ. ಕೆಲವು ವಿದ್ವಾಂಸರು ಇದನ್ನು ಬ್ರಹ್ಮಗಣ ಮತ್ತು ಒಂದು ಅಂಶ ಎಂದು ಅಬಿಪ್ರಾಯ ಪಡುತ್ತಾರೆ.

ಸೊಬಗಿನ | ಸೋನೆಯ | ನೊಲಿದಾ | ಲಿಸಿ ಕೇಳೆ ಸೊಬಗಿನೀ | ಸೋನೆಯೆ | ನಿಪಂ ಪ್ರಿಯೆ ಕಬರಿಯಿಂ | ದೆಸೆವಕಂ | ಜರಿಮಾಳ | ವನವರಿ ಸಬಲೆ ನೀ | ನೆಂದ ವಿ | ಕ್ರಮನೆಂದು (ಸೊಬಗಿನ ಸೋನೆ)

ಆಧುನಿಕ ವಿದ್ವಾಂಸರಲ್ಲಿ ಕೆಲವರು ಗೀತಿಕೆಯ ಎರಡು ಪದಗಳ ರೂಪಾಂತರವೆ ಸಾಂಗತ್ಯವಾಗಿ ತೋರುವುದು (ಕನ್ನಡ ಕೈಪಿಡಿ) ಎಂದೂ ಸಾಂಗತ್ಯ ತ್ರಿಪದಿಯಿಂದ ಹೊರಟ ಮಟ್ಟೆಂದೂ ತ್ರಿಪದಿಯ ಚರಣವನ್ನು ಆವೃತ್ತಿ ಮಾಡಿ ಹಾಡುವ ರೂಡಿ ಸಾಂಗತ್ಯದ ರೂಪನಿರ್ಮಾಣಕ್ಕೆ ದಾರಿಯನ್ನು ಮಾಡಿತು (ಕನ್ನಡ ಛಂದೋವಿಕಾಸ) ಎಂದೂ ಅಬಿಪ್ರಾಯಪಟ್ಟಿದ್ದಾರೆ. ಗೀತಿಕೆಯಿಂದಾಗಲಿ, ತ್ರಿಪದಿ ಅಥವಾ ಪಿರಿಯಕ್ಕರದಿಂದಾಗಲಿ ಸಾಂಗತ್ಯ ಆವಿರ್ಭವಿಸಿತೆಂದು ಹೇಳುವುದು ಅಷ್ಟು ಸಮಂಜಸವಾಗಿ ತೋರುವುದಿಲ್ಲ. ಏಕೆಂದರೆ ಅದನ್ನು ಸಾದಿಸುವುದು ಕಷ್ಟ. ಸಾಂಗತ್ಯ ಶುದ್ಧ ದೇಶೀಯ ಮಟ್ಟು. ಅಂಶಗಣ ಘಟಿತವಾದ ಸಾಂಗತ್ಯಕ್ಕಿಂತಲೂ ಪ್ರಾಚೀನವಾದ ತ್ರಿಪದಿ, ಕಾಲಕ್ರಮದಲ್ಲಿ ಮಾತ್ರಾಗಣಕ್ಕೆ ತಿರುಗಿದ್ದರೂ ಸಾಂಗತ್ಯ ಇಂದಿಗೂ ಅಂಶಗಣಘಟಿತವಾಗಿಯೇ ಉಳಿದುಕೊಂಡು ಬಂದಿರುವುದರಿಂದ ಇದಕ್ಕೆ ಪ್ರತ್ಯೇಕ ಅಸ್ತಿತ್ವವಿದ್ದಿತೆಂದು ಭಾವಿಸುವುದಕ್ಕೆ ಅವಕಾಶವುಂಟು. ಕನ್ನಡ ಸಾಹಿತ್ಯದ ಸಾಂಗತ್ಯಚರಿತ್ರೆಯಲ್ಲಿ ಬಸವೇಶ್ವರ ವಿರಚಿತ ಕಾಲಜ್ಞಾನವೇ ಪ್ರಥಮ ಕೃತಿಯೆಂದು ಹೇಳಿ ಕರ್ಕಿಯವರು ಕವಿಚರಿತ್ರೆಯಿಂದ ಒಂದು ಪದ್ಯವನ್ನು ಉದಾಹರಿಸಿದ್ದಾರೆ: ಮಳೆಯಿಲ್ಲ ಬೆಳೆಯಿಲ್ಲ ಹೊಳೆಯಿಲ್ಲ ಕೆರೆಯಿಲ್ಲ ನೆಳಲಿಲ್ಲ ಉದಕ ಮುನ್ನಿಲ್ಲ ಮೊಳೆಯಿಲ್ಲ ಸೂರ್ಯನ ಕಳೆಯಿಲ್ಲ ಗೆಲವಿಲ್ಲ ಉಳಿವಿಲ್ಲ ಆ ಪಾಪಿಗಳಿಗೆ (ಕನ್ನಡ ಛಂದೋವಿಕಾಸ)

ಈ ಪದ್ಯದಲ್ಲಿ ಪ್ರಧಾನವಾಗಿ ಎದ್ದುಕಾಣುವ ಅಂಶವೆಂದರೆ ಅಂಶಗಣಗಳಿಗೆ ಬದಲಾಗಿ ಮಾತ್ರಾಗಣಗಳು ಬಂದಿರುವುದು. ಪ್ರಥಮ ಸಾಂಗತ್ಯಕೃತಿಯೆಂದು ಭಾವಿಸಲಾಗಿರುವ ಈ ಕಾಲಾಜ್ಞಾನವಚನ ಬಸವೇಶ್ವರರ ಹೆಸರಿಗೆ ಆರೋಪಿಸಲ್ಪಟ್ಟಿರುವ ಪ್ರಕ್ಷಿಪ್ತ ಕೃತಿಯಾಗಿರ ಬಹುದು. ತರುವಾಯ ಕಾಣಿಸಿಕೊಳ್ಳುವ ಸಾಂಗತ್ಯಕಾರ ಕಾಲದ ದೃಷ್ಟಿಯಿಂದ ಸಂದಿಗ್ಧತೆ ಗೊಳಗಾಗಿರುವ ಶಿಶುಮಾಯಣ. ಆತನ ಕೃತಿಗಳು ತ್ರಿಪುರದಹನಸಾಂಗತ್ಯ ಮತ್ತು ಅಂಜನಾಚರಿತ್ರೆ, ಗುಣದ ದೃಷ್ಟಿಯಿಂದಲೂ ಗಾತ್ರದ ದೃಷ್ಟಿಯಿಂದಲೂ ಇವು ಮಿಗಿಲಾಗಿವೆ. ಅಂಜನಾಚರಿತ್ರೆ ಸಾಹಿತ್ಯ ಮತ್ತು ಐತಿಹಾಸಿಕ ದೃಷ್ಟಿಗಳಿಂದ ಉಲ್ಲೇಖಾರ್ಹವಾಗಿದೆ.

1೬ನೆಯ ಶತಮಾನ

[ಬದಲಾಯಿಸಿ]

16ನೆಯ ಶತಮಾನದಲ್ಲಿ ಶ್ರೇಷ್ಠ ಸಾಂಗತ್ಯಕೃತಿಗಳು ಸೃಷ್ಟಿಯಾದವು. ಈ ಶತಮಾನದಲ್ಲಿ ಸುಮಾರು ಇಪ್ಪತ್ತೆಂಟು ಸಾಂಗತ್ಯಕೃತಿಗಳು ಹುಟ್ಟಿಕೊಂಡಿವೆ. ಮೂರನೆಯ ಮಂಗರಸನ ನೇಮಿಜಿನೇಶ ಸಂಗತಿ, ಪ್ರಭಂಜನಚರಿತೆ, ಶ್ರೀಪಾಲ ಚರಿತೆಗಳು, ನಂಜುಂಡನ ರಾಮನಾಥಚರಿತೆ, ಕನಕದಾಸರ ಮೋಹನತರಂಗಿಣಿ, ರತ್ನಾಕರವರ್ಣಿಯ ಭರತೇಶವೈಭವ, ರಾಮರಸ ವಿರೂಪಾಕ್ಷ, ಬೊಂಬೆಯ ಲಕ್ಕ, ಹಲಗ,ಪಾಯಣ್ಣ ವತ್ರಿ(೧೬೦೦) ಸಮ್ಯಕ್ತ್ವಕೌಮುದಿ, ಓದುವಗಿರಿಯ ಇವರ ಸಾಂಗತ್ಯಕೃತಿಗಳು ಹೆಸರಿಸತಕ್ಕವು. ಈ ಶತಮಾನದ ಮತ್ತೊಂದು ಕೃತಿ ಕಿಕ್ಕೇರಿಯಾರಾಧ್ಯ ನಂಜುಂಡ ವಿರಚಿತ ಭೈರವೇಶ್ವರಕಾವ್ಯ. ಇದು ಛಂದಸ್ಸಿನ ದೃಷ್ಟಿಯಿಂದ ವಿದ್ವಾಂಸರ ಗಮನವನ್ನು ಸೆಳೆದಿದೆ. ಇದರ ಸಂಪಾದಕರು ಈ ಕಾವ್ಯವನ್ನು ಷಟ್ಪದಿಯೆಂದು ನಿರ್ಧರಿಸಿ ಪ್ರತಿಪದ್ಯವನ್ನೂ ಆರು ಪಾದಗಳಾಗಿ ವಿಂಗಡಿಸಿ ಅಚ್ಚುಮಾಡಿದ್ದಾರೆ. ಅವರ ಅಬಿಪ್ರಾಯದಂತೆ ಪ್ರತಿ ಪದ್ಯದ ಒಂದು ಎರಡು ನಾಲ್ಕು ಮತ್ತು ಐದನೆಯ ಪಾದಗಳು ಶರಷಟ್ಪದಿಯಲ್ಲೂ ಮೂರು ಮತ್ತು ಆರನೆಯ ಪಾದಗಳು ಕುಸುಮಷಟ್ಪದಿಯಲ್ಲೂ ರಚಿತವಾಗಿವೆ. ಒಂದು ಪದ್ಯದ ಬೇರೆ ಬೇರೆ ಪಾದಗಳು ಬೇರೆ ಬೇರೆ ಛಂದಸ್ಸಿನಲ್ಲಿ ರಚಿತವಾಗಿರುವುದು ಕನ್ನಡ ಸಾಹಿತ್ಯದಲ್ಲಿ ಎಲ್ಲೂ ಕಂಡುಬರುವುದಿಲ್ಲ. ವಾಸ್ತವವಾಗಿ ಈ ಕಾವ್ಯದ ಛಂದಸ್ಸು ಸಾಂಗತ್ಯ, ಷಟ್ಪದಿಯಲ್ಲ. ಪ್ರತಿ ಪದ್ಯದಲ್ಲೂ ಖಂಡ ಪ್ರಾಸವಿರುವುದೇ ಈ ಭ್ರಾಂತಿಗೆ ಕಾರಣ. ಈ ರೀತಿ ಖಂಡಪ್ರಾಸವನ್ನು ಒಳಕೊಂಡಿರುವ ಕೃತಿಗಳು ಇನ್ನೂ ಕೆಲವು ಕಂಡುಬರುತ್ತವೆ.

17ನೆಯ ಶತಮಾನ

[ಬದಲಾಯಿಸಿ]

17ನೆಯ ಶತಮಾನದಲ್ಲಿ ಸುಮಾರು ಅರವತ್ತು ಸಾಂಗತ್ಯ ಕೃತಿಗಳು ಹುಟ್ಟಿಕೊಂಡಿವೆ. ಶಾಂತಿಕೀರ್ತಿ ಮುನಿ-ಪುರದೇವ ಚರಿತೆ ಸಾಂಗತ್ಯ.ಸಂಖ್ಯಾದೃಷ್ಟಿಯಿಂದ ಈ ಶತಮಾನದ ಕೃತಿಗಳು ವಿಪುಲವಾಗಿದ್ದರೂ ಕಾವ್ಯಗುಣದ ದೃಷ್ಟಿಯಿಂದ ಹೇಳಿಕೊಳ್ಳುವಂಥವು ಹೆಚ್ಚಾಗಿಲ್ಲ. ಪಂಚಬಾಣನ ಭುಜಬಲಿಚರಿತೆ, ಶಾಂತಮಲ್ಲನ ಅನುಭವಮುದ್ರೆ, ಶೇಷಕವಿಯ ರುಕ್ಮಾಂಗದ ಚರಿತೆ, ತಿರುಮಲಾರ್ಯನ ಕರ್ಣವೃತ್ತಾಂತ ಕಥೆ, ಚಿಕುಪಾಧ್ಯಾಯನ ಯಾದವಗಿರಿ ಮಹಾತ್ಮೆ, ಪಶ್ಚಿಮರಂಗ ಮಹಾತ್ಮೆ, ರಂಗಧಾಮಸ್ತುತಿ ಸಾಂಗತ್ಯ, ರಂಗಧಾಮ ಪುರುಷ ವಿರಹ ಸಾಂಗತ್ಯ, ಚಿತ್ರಶತಕ ಸಾಂಗತ್ಯ, ರಂಗನಾಯಕ ರಂಗನಾಯಕೀ ಸ್ತುತಿ ಸಾಂಗತ್ಯ, ನೇಮಿವ್ರತಿಯ ಸುವಿಚಾರಚರಿತೆ, ಧರಣಿಪಂಡಿತನ ಬಿಜ್ಜಳರಾಯಚರಿತೆ, ಚದುರ ಚಂದ್ರಮನ ಕಾರ್ಕಳದ ಗೋಮ್ಮಟೇಶ್ವರಚರಿತೆ, ಪದ್ಮನಾಭನ ಪದ್ಮಾವತೀ ಚರಿತೆ, ಜಿನದತ್ತರಾಯನ ಚರಿತೆ, ಬಸವಕವಿಯ ರೇಣುಕಾಚಾರ್ಯಚರಿತೆ, ಚೆನ್ನಮಲ್ಲೇಶನ ದೀಪದ ಕಲಿಯರ ಕಾವ್ಯ, ಸಿದ್ಧಕವಿಯ ಸಿರುಮನ ಸಾಂಗತ್ಯ, ಚಾಮಯ್ಯನ ದೇವರಾಜೇಂದ್ರಸಾಂಗತ್ಯ ಇವು ಹೆಸರಿಸತಕ್ಕವು. ಗೋವಿಂದ ವೈದ್ಯನ ಕಂಠೀರವ ನರಸರಾಜವಿಜಯ ಒಂದು ಅಪೂರ್ವಕೃತಿ. ಈ ಕವಿ ವೀರರಸ ಪ್ರತಿಪಾದನೆಗೆ ಸಾಂಗತ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಸಾಧ್ಯವೆಂಬುದನ್ನು ತೋರಿಸಿಕೊಟ್ಟಿದ್ದಾನೆ. ಈ ಶತಮಾನದ ವೈಶಿಷ್ಟ್ಯವೆಂದರೆ ಸ್ತ್ರೀಯರು ಸಾಂಗತ್ಯರಚನೆಗೆ ತೊಡಗಿದ್ದು. ಚಿಕ್ಕದೇವರಾಜನ ಆಸ್ಥಾನದಲ್ಲಿದ್ದ ಸಂಚಿಯ ಹೊನ್ನಮ್ಮನ ಹದಿಬದೆಯ ಧರ್ಮ ಒಂದು ಉತ್ಕೃಷ್ಟ ಕೃತಿ. ಶೃಂಗಾರಮ್ಮ ಪದ್ಮಿನೀ ಪರಿಣಯವನ್ನು ಬರೆದಿದ್ದಾಳೆ.

18 ಮತ್ತು 19ನೆಯ ಶತಮಾನ

[ಬದಲಾಯಿಸಿ]

18 ಮತ್ತು 19ನೆಯ ಶತಮಾನಗಳಲ್ಲಿ ಸಾಂಗತ್ಯದ ಬೆಳಸು ಅಷ್ಟೊಂದು ಹುಲುಸಾಗಿದ್ದಂತೆ ಕಂಡುಬರುವುದಿಲ್ಲ. 18ನೆಯ ಶತಮಾನದಲ್ಲಿ ಕೇವಲ ಹದಿನೇಳು ಸಾಂಗತ್ಯಕೃತಿಗಳೂ 19ನೆಯ ಶತಮಾನದಲ್ಲಿ ಕೇವಲ ಎಂಟು ಸಾಂಗತ್ಯಕೃತಿಗಳೂ ಹೊರಬಂದಿವೆ. 18ನೆಯ ಶತಮಾನದಲ್ಲಿ ಗೋಪಾಲಾಚಾರ್ಯ ಶಿಷ್ಯನ ಜೀವೇಶ್ವರ ಸಾಂಗತ್ಯ, ತತ್ತ್ವದ ಸೊಬಗಿನ ಸೋನೆ, ಗುರುಸಿದ್ದಪ್ಪನ ಮಾದೇಶ್ವರ ಸಾಂಗತ್ಯ, ಚಲುವ ಕವಿಯ ಮಡಿವಾಳಯ್ಯನ ಚರಿತೆ, ದೇಪನ ದೇವಾಂಗಪುರಾಣ, ನೂರೊಂದಯ್ಯನ ಸೌಂದರಕಾವ್ಯ, ಪಾಯಣ್ಣನ ಅಹಿಂಸಾ ಚರಿತೆ, ಪದ್ಮನಾಭನ ರಾಮಚಂದ್ರಚರಿತೆ, ತರಳ ಚಲಪತಿಯ ಗಂಗೆಗೌರಿ ಸಂವಾದ -ಇವು ಮುಖ್ಯವಾದುದು. 1750ರಲ್ಲಿದ್ದ ಹೆಳವನಕಟ್ಟೆ ಗಿರಿಯಮ್ಮ ಚಂದ್ರಹಾಸನ ಕಥೆ, ಉದ್ದಾಳಿಕನಕಥೆ ಮೊದಲಾದ ಭಕ್ತಿ ಮತ್ತು ನೀತಿಪ್ರದವಾದ ಕೃತಿಗಳನ್ನು ರಚಿಸಿದ್ದಾಳೆ. ಮತ್ತೊಬ್ಬ ಕವಿಯಿತ್ರಿ ಚೆಲುವಾಂಬೆ ವರನಂದಿ ಕಲ್ಯಾಣ ಎಂಬ ಕೃತಿಯನ್ನು ರಚಿಸಿದ್ದಾಳೆ.[]

20ನೆಯ ಶತಮಾನ

[ಬದಲಾಯಿಸಿ]

20ನೆಯ ಶತಮಾನದಲ್ಲೂ ಸಾಂಗತ್ಯದ ರಚನೆ ಮುಂದುವರಿದುಕೊಂಡು ಬಂದಿದೆ. ಬಿ.ಎಂ.ಶ್ರೀಕಂಠಯ್ಯ, ಬೇಂದ್ರೆ, ಪು.ತಿ.ನರಸಿಂಹಾಚಾರ್, ಎಸ್.ವಿ.ಪರಮೇಶ್ವರಭಟ್ಟ ಮೊದಲಾದವರು ಸಾಂಗತ್ಯದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಪರಮೇಶ್ವರಭಟ್ಟರು ನೀಳವಾದ ತಮ್ಮ ಆತ್ಮವೃತ್ತವನ್ನು ಹೇಳುವುದಕ್ಕೂ ಬಿಡಿ ಮುಕ್ತಕ ರಚನೆಗೂ ಸಾಂಗತ್ಯವನ್ನು ಬಳಸಿದ್ದಾರೆ. ಪರಿಮಾಣ ಮತ್ತು ಯೋಗ್ಯತೆ ಎರಡು ದೃಷ್ಟಿಯಿಂದಲೂ ಇವರ ಸಾಂಗತ್ಯ ಕೃತಿಗಳು ಗಮನಾರ್ಹವಾಗಿವೆ. ಉದಾಹರಣೆಗೆ ಎರಡು ಸಾಂಗತ್ಯ ಪದ್ಯಗಳು:

ಕಳೆವುದು ಸಾಬೂನು ಬಟ್ಟೆಯ ಕೊಳೆಯನು ಕಳೆವುದು ಸೀಗೆ ಎಣ್ಣೆಯನು ಪ್ರಾರ್ಥನೆ ತೊಡೆವುದು ಮನದ ಕಿಲ್ಬಿಷವನು

   ಆ ಸೋಪು ಸೀಗೆಗಳಂತೆ	

(ಚಂದ್ರವೀಧಿ)

ಸ್ಕೂಟರು ಹೆಳವನಿಗೇನುಪಯೋಗವು ಬೋಳನಿಗೇಕೆ ಬಾಚಣಿಗೆ ಅರಸಿಕನಿಗೆ ಏಕೆ ಕಾವ್ಯದ ಗಮಕವು

   ಟ್ರಾನ್ಸಿಸ್ಟರೇಕೆ ಕೆಪ್ಪನಿಗೆ	

(ಇಂದ್ರಚಾಪ)

ಪ್ರಾಚೀನ ಕಾವ್ಯಪರಂಪರೆಯಲ್ಲಿ ಪ್ರಮುಖವಾದ ಚಂಪು, ಷಟ್ಪದಿ, ತ್ರಿಪದಿ ಮುಂತಾದ ಛದೋಬಂಧಗಳಲ್ಲಿ ನಿರೂಪಿತವಾಗಿದ್ದ ಕಾವ್ಯ, ಶಾಸ್ತ್ರ ಧರ್ಮ ಪ್ರತಿಪಾದನೆ ಮೊದಲಾದ ನಿಗೂಢ ವಿಷಯಗಳು ಜನಸಾಮಾನ್ಯಕ್ಕೆ ಸುಲಭವಾಗಿ ನಿಲುಕುವಂತೆ ಶುದ್ಧ ದೇಶೀಯ ಛಂದಸ್ಸಿನಲ್ಲಿ ಹೊರಬರುವುದಕ್ಕೆ ವಾಹಕವಾದುದು ಎಂದರೆ ಒಂದು ಸಾಂಗತ್ಯ, ಇನ್ನೊಂದು ಷಟ್ಪದಿ (ನೋಡಿ: ಕನ್ನಡದಲ್ಲಿ ಷಟ್ಪದಿ ಕಾವ್ಯಗಳು). ಕನ್ನಡ ಛಂದಶ್ಶಾಸ್ತ್ರದ ಇತಿಹಾಸದಲ್ಲಿ ಬೇರಾವ ಛಂದೋಪ್ರಕಾರಕ್ಕೂ ಇಲ್ಲದ ವೈಶಿಷ್ಟ್ಯ ಸಾಂಗತ್ಯಕ್ಕಿದೆ. ಇದು ತನ್ನ ಗೇಯತೆ ಮತ್ತು ಸೌಲಭ್ಯಗಳಿಂದ ಜನಪ್ರಿಯತೆಯನ್ನು ಗಳಿಸಿರುವುದೇ ಅಲ್ಲದೆ ಕನ್ನಡ ಸಾಹಿತ್ಯಕ್ಕೆ ಮಕುಟಪ್ರಾಯವಾದ ಕೃತಿಗಳನ್ನು ಒದಗಿಸಿದೆ. *

ಉಲ್ಲೇಖಗಳು

[ಬದಲಾಯಿಸಿ]