ಕನ್ನಡದಲ್ಲಿ ಮಕ್ಕಳ ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಕ್ಕಳ ಸಾಹಿತ್ಯ ಆರಂಭದಲ್ಲಿ ಕಿವಿಯ ಮೂಲಕ ಗ್ರಹಿಸುವ ಲಾಲಿ ಹಾಡುಗಳಿಂದಲೇ ಕೂಡಿದ್ದು, ಅನಂತರ ಕಥೆಗಳಿಂದ ಬೆಳೆದು ಬರಬಹುದು. ಹಾಡುವ ಹಾಗೂ ಕಥೆ ಹೇಳುವವರ ಹಾವ ಭಾವಗಳನ್ನು ನೋಡಿಯೂ ಮಗು ಗ್ರಹಿಸಬಹುದು. ಈ ಕಾರಣದಿಂದ ಮಾನವನ ಸಾಹಿತ್ಯದ ಬುನಾದಿ ಇದಾಗಿದೆ ಎಂದರೆ ತಪ್ಪಾಗಲಾರದು. ಎಂಬುದು ಇವರ ಮೂಲ ಆಶಯಜಾನಪದವಾಗಿರುವುದು. ಜಗತ್ತಿನಲ್ಲಿ ಇದು ಹೇಗೇ ಪ್ರಾರಂಭವಾಗಿರಲಿ ಮಕ್ಕಳಿಗೆ ಅತ್ಯಗತ್ಯವಾದುದು, ಉಪಯುಕ್ತವಾದುದು ಎನ್ನುವುದಕ್ಕೆ ಎರಡನೆಯ ಮಾತಿಲ್ಲ. ಹಿರಿಯರೂ ಇದನ್ನು ಸವಿಯಬಹುದು ಎನ್ನುವುದು ಇವರ ಒಂದು ವಿಶೇಷ ಲಕ್ಷಣ.

ಇತಿಹಾಸ[ಬದಲಾಯಿಸಿ]

ಮಕ್ಕಳ ಸಾಹಿತ್ಯ ಮಕ್ಕಳಿಗೆ ನಲಿವು, ತಿಳಿವು ಎರಡನ್ನೂ ಕೊಡಬೇಕು. ಸಂಸ್ಕೃತಿ, ಶಿಕ್ಷಣ, ಕುಟುಂಬ, ಪರಿಸರ ಈ ನಾಲ್ಕರ ಪ್ರಭಾವವ ಅದರಲ್ಲಿ ಬರಬೇಕು. ಮಕ್ಕಳ ಮಾನಸಿಕ, ಬೌದ್ಧಿಕ, ಸಾಮಾಜಿಕ ಮತ್ತು ಭಾಷಿಕ ಬೆಳೆವಣಿಗೆಗೆ ಸಹಾಯಕವಾಗಬೇಕು ಮೊದಲಾದ ಅನೇಕ ಅಬಿಪ್ರಾಯಗಳು ಈ ಸಾಹಿತ್ಯ ಕುರಿತು ವ್ಯಕ್ತವಾಗಿವೆ. ಒಟ್ಟಾರೆ ಮಕ್ಕಳ ಸಾಹಿತ್ಯ ಮಕ್ಕಳಿಗೆ ಸಂತೋಷ ನೀಡಬೇಕು, ಭಾಷೆಯನ್ನು ಕಲಿಸಬೇಕು, ಆಲೋಚನಾ ಶಕ್ತಿಯನ್ನು ಬೆಳೆಸಬೇಕು, ಜೊತೆಗೆ ಬದುಕುವ ವಿವೇಕವನ್ನು ಹೊಳೆಯಿಸಬೇಕು. ಆಗ ಅದು ಸಾರ್ಥಕವಾದೀತು.ಕಾವ್ಯ ಜಗತ್ತಿನಲ್ಲೇ ಮಕ್ಕಳ ಪದ್ಯಗಳನ್ನು ಫ್ರಾನ್ಸ್‌ ದೇಶದ ಪೆಕಾಟ್ ಎನ್ನುವಾತ ಮೊದಲು ಪ್ರಕಟಿಸಿದನೆಂದು ನಂಬಲಾಗಿದೆ. ‘ಸಾಂಗ್ಸ್‌ ಆಫ್ ನರ್ಸರಿ’ ೧೭೧೭ರಲ್ಲಿ ಪ್ರಕಟವಾಯಿತೆಂದು ತಿಳಿದುಬರುತ್ತದೆ. ಕನ್ನಡದಲ್ಲಿ ೧೮೬೨ರಲ್ಲಿ ಹೊರಬಂದ ಬಾಲ ಗೀತೆಗಳು ಎನ್ನುವ ಮೊದಲ ಸಂಕಲನವನ್ನು ಸಿದ್ಧಪಡಿಸಿದವರು ಜಿ.ಮ್ಯಾಕ್ ಅವರು (ಈ ಕೃತಿ ಅಲಭ್ಯ). ಕೆರೋಡಿ ಸುಬ್ಬರಾಯರು, ಎಸ್.ಜಿ.ನರಸಿಂಹಾಚಾರ್ಯರು ಇಂಗ್ಲಿಷ್ ಭಾಷೆಯಿಂದ ಮಕ್ಕಳಿಗಾಗಿ ಕೆಲವು ಕವಿತೆಗಳನ್ನು ಅನುವಾದಿಸಿದ್ದಾರೆ. ಇವುಗಳಲ್ಲಿ ಭಾಷೆ, ಛಂದಸ್ಸುಗಳು ಹಳೆಯ ಶೈಲಿಯಲ್ಲಿದ್ದರೂ ಇವು ಮೊದಲ ಪ್ರಯತ್ನಗಳಾಗಿವೆ.

೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಮಕ್ಕಳಿಗೆಂದೇ ಸಿದ್ಧಪಡಿಸಿದ ಪಠ್ಯ ಹಾಗೂ ಕ್ರಮಿಕ ಪುಸ್ತಕಗಳಲ್ಲಿ, ವಾಚಿಕೆಗಳಲ್ಲಿ ಮಕ್ಕಳ ಕವಿತೆಗಳು ಕಂಡುಬರುತ್ತವೆ. ಈ ಪ್ರಯತ್ನಗಳಲ್ಲಿ ಕ್ರೈಸ್ತ ಮಿಷನರಿಗಳದು ಶ್ಲಾಘನೀಯ ಪಾತ್ರ. ಮೊದಮೊದಲಿಗೆ ದೇವರ ಪ್ರಾರ್ಥನೆ, ಆದರ್ಶಗಳ ಬೋಧನೆ ಇಂಥವು, ಜೊತೆಗೆ ಕ್ಲಿಷ್ಟವಾದ ಪದಗಳ ಸಂಯೋಜನೆಗಳು ಕಾಣಿಸಿಕೊಂಡವು. ಬರಬರುತ್ತ ಸರಳವಾದ, ಸೊಗಸಾದ ರಚನೆಗಳು ಬಂದಿರುವುದು ಈಗ ಇತಿಹಾಸವಾಗಿದೆ. ಮುದ್ರಣಾಲಯಗಳು ಪ್ರಾರಂಭವಾದ ಮೇಲೆ ಹೊಸ ಕ್ರಾಂತಿಯೇ ನಡೆಯಿತು. ಜಯರಾಯಾಚಾರ್ಯರ ಅನುಕರಣ ಗೀತಗಳು, ಸೋಸಲೆ ಅಯ್ಯಾಶಾಸ್ತ್ರಿಗಳ ಪದ್ಯಗಳು ಗಮನ ಸೆಳೆಯುತ್ತವೆ. ಇಂಥವರು ಅನೇಕರು ಮಕ್ಕಳ ಕಾವ್ಯದ ಬೆಳೆಗಾಗಿ ನೆಲವನ್ನು ಹದ ಮಾಡಿದರು. ವಸ್ತು, ಭಾಷೆ, ತಂತ್ರಗಳಲ್ಲಿ ಪ್ರಯೋಗಗಳು ನಡೆಯುತ್ತ ಹೋದವು.

ಪಂಜೆ ಮಂಗೇಶರಾಯ, ಹೊಯಿಸಳ, ಜಿ.ಪಿ.ರಾಜರತ್ನಂ ಇವರು ಮೂವರನ್ನೂ ಮಕ್ಕಳ ಸಾಹಿತ್ಯದ ರತ್ನತ್ರಯರು ಎನ್ನಬಹುದು. ಕುವೆಂಪು, ಶಿವರಾಮ ಕಾರಂತ, ದಿನಕರ ದೇಸಾಯಿ, ರಾಘವ, ಎಲ್.ಗುಂಡಪ್ಪ, ಮೇವುಂಡಿ ಮಲ್ಲಾರಿ, ಸಿದ್ದಯ್ಯ ಪುರಾಣಿಕ, ತೋನ್ಸೆ ಮಂಗೇಶ ರಾವ್, ಸಿ.ಫ.ಕಟ್ಟೀಮನಿ ಮೊದಲಾದವರು ಕವಿತೆಗಳನ್ನು ರಚಿಸಿ ಮಕ್ಕಳನ್ನು ಖುಷಿ ಪಡಿಸಿದರು. ಜಿ.ಪಿ.ರಾಜರತ್ನಂ ಅವರ ಒಂದು ಚುಟುಕ ಹೀಗಿದೆ: ಗಡಗಡ ಓಡಿತು ರೈಲು! ನಿಮಿಷಕೆ ಸಾವಿರ ಮೈಲು! ಸಾವಿರ ಮೈಲನ್ನು! ಮೀರುತ ಹೋಗಲು! ಆಗದು ರೈಲಿನ ಕೈಲು!

ಅವರ ರಚನೆಗಳಲ್ಲಿ ಇಂತಹ ಚೋಟಾರಿ ಮೋಟಾರಿ ಚುಟುಕಗಳ ಜೊತೆಗೆ ಮಕ್ಕಳನ್ನು ಕುಣಿಸಿ, ತಣಿಸಬಲ್ಲ ಪದ್ಯಗಳಿವೆ. ಇಂಥ ಹಿರಿಯರೆಲ್ಲ ಬಿತ್ತಿದ ನೆಲಕ್ಕೆ ನೀರೆರೆದು ಗೊಬ್ಬರ ಹಾಕಿದವರು ಮುಂದಿನ ಹಂತದ ಕವಿಗಳು. ಶಂ.ಗು.ಬಿರಾದಾರ, ಕಯ್ಯಾರ ಕಿಞ್ಞಣ್ಣ ರೈ, ಸಿಸು ಸಂಗಮೇಶ, ಬಿ.ಎ.ಸನದಿ, ರಸಿಕ ಪುತ್ತಿಗೆ, ಶಶಿಕುಮಾರ, ಪಳಕಳ ಸೀತಾರಾಮ ಭಟ್ಟ, ಮುಂಡಾಜಿ ರಾಮಚಂದ್ರ ಭಟ್ಟ, ಶ್ರೀನಿವಾಸ ಶೆಟ್ಟಿ, ಈಶ್ವರ ಕಮ್ಮಾರ, ಚನ್ನವೀರ ಕಣವಿ, ಕಂಚ್ಯಾಣಿ ಶರಣಪ್ಪ, ಎಂ.ವಿ.ಸೀತಾರಾಮಯ್ಯ, ನೀ.ರೇ ಹಿರೇಮಠ ಮೊದಲಾದವರು ಈ ಸಾಲಿಗೆ ಸೇರುತ್ತಾರೆ. ತಲೆಯೆತ್ತಿದ ಸಸಿಗೆ ಆಧಾರ ನೀಡಿ ಅದನ್ನು ಪೋಷಿಸುತ್ತಿರುವವರು ಹಲವಾರು ಕವಿಗಳು. ಎಚ್.ಎಸ್.ವೆಂಟೇಶಮೂರ್ತಿ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಟಿ.ಎಸ್.ನಾಗರಾಜ ಶೆಟ್ಟಿ, ಎನ್.ಶ್ರೀನಿವಾಸ ಉಡುಪ, ಸಿ.ಎಂ.ಗೋವಿಂದ ರೆಡ್ಡಿ, ಸುಮತೀಂದ್ರ ನಾಡಿಗ, ಆರ್.ಕೆ.ಶಾನಭೋಗ, ಬಿ.ತಿಪ್ಪೇರುದ್ರಪ್ಪ ಮೊದಲಾದವರನ್ನು ಹೆಸರಿಸಬಹುದು.

ಮುಪ್ಪಿನ ಷಡಕ್ಷರಿಯ (ಸು.೧೫೦೦) ತಿರುಕನ ಕನಸು, ಹಳೆಯದಾದರೂ ಅತ್ಯಂತ ಆಕರ್ಷಕವ ಅರ್ಥಪುರ್ಣವ ಆದ ಗೋವಿನ ಹಾಡು, ಕುವೆಂಪು ಅವರ ಬೊಮ್ಮನ ಹಳ್ಳಿಯ ಕಿಂದರಿ ಜೋಗಿ, ಎನ್.ಶ್ರೀನಿವಾಸ ಉಡುಪರ ಕುಂಭಕರ್ಣನ ನಿದ್ದೆ ಶ್ರೇಷ್ಠಮಟ್ಟದ ಕಥನ ಕವನಗಳು. ಎಚ್.ಎಸ್.ವೆಂಕಟೇಶ ಮೂರ್ತಿಯವರ ಘಟ್ಟದ ಯೋಗಿ ಕೂಡ ಚೆನ್ನಾಗಿದೆ.

ಪದ್ಯ[ಬದಲಾಯಿಸಿ]

ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿ ಜೋಗಿಯ ಕೆಲವು ಸಾಲುಗಳು: ಇಲಿಗಳು! ಇಲಿಗಳು! ಇಲಿಗಳ ಹಿಂಡು! ಬಳಬಳ ಬಂದುವು ಇಲಿಗಳ ದಂಡು! ಅನ್ನದ ಮಡಕೆಯನಗಲಿದುವು! ಟೋಪಿಯ ಗೂಡನು ತ್ಯಜಿಸಿದುವು! ಬಂದುವು ಅಂಗಿಯ ಜೇಬನು ಬಿಟ್ಟು, ಮಕ್ಕಳ ಕಾಲಿನ ಚೀಲವ ಬಿಟ್ಟು, ಹಾರುತ ಬಂದುವು, ಓಡುತ ಬಂದುವು, ನೆಗೆಯುತ ಬಂದುವು, ಕುಣಿಯುತ ಬಂದುವು, ಜೋಗಿಯು ಬಾರಿಸೆ ಕಿಂದರಿಯ!

ಈ ಕವಿತೆ ಇಂಗ್ಲಿಷ್ ಕವಿ ರಾಬರ್ಟ್ ಬ್ರೌನಿಂಗ್ನ ದಿ ಪೈಡ್ ಪೈಪರ್ ಆಫ್ ಹ್ಯಾಮೆಲಿನ್ ಎನ್ನುವ ಕವನದ ಭಾವಾನುವಾದವಾಗಿದೆ. ನಮ್ಮ ನೆನಪಿನಲ್ಲಿ ಚಿರಕಾಲ ಉಳಿದು ಅನುರಣಿಸುವ ಗುಣಮಟ್ಟದ ಕವಿತೆಗಳು ಒಟ್ಟಾರೆ ಬಹಳ ಕಡಮೆಯಾಗಿವೆ ಎನ್ನದೆ ವಿದಿsಯಿಲ್ಲ. ಇತ್ತೀಚಿನ ಕೆಲವು ಕವಿಗಳ ರಚನೆಗಳು ಆಶಾದಾಯಕವಾಗಿವೆ. ಕೆ.ಚಿದಾನಂದರ ವಿಜ್ಞಾನ ಪದ್ಯಗಳು ವಿಜ್ಞಾನವನ್ನು ಮಕ್ಕಳಿಗೆ ಕವಿತೆಯ ಮೂಲಕ ತಿಳಿಸುವ ಸರಳ ಸುಂದರ ಕೊಡುಗೆ. ಕವಿಯ ಒಟ್ಟಾರೆಯ ಕವಿತೆಗಳು ಒಂದೆಡೆ ಸಿಗುವಂತೆ ಕೆಲವು ಸಂಪುಟಗಳು ಬಂದಿವೆ: ಪಂಜೆಯವರ ಪದ್ಯಗಳು, ಜಿ.ಪಿ.ರಾಜರತ್ನಂ ಅವರ ಕಂದನ ಕಾವ್ಯ ಮಾಲೆ, ಟಿ.ಎಸ್.ನಾಗರಾಜಶೆಟ್ಟಿ ಅವರ ಸಮಗ್ರ ಮಕ್ಕಳ ಕವಿತೆಗಳು, ಕಂಚ್ಯಾಣಿ ಶರಣಪ್ಪ ಅವರ ಆಯ್ದ ನೂರೊಂದು ಕವಿತೆಗಳು, ಎಂ.ಡಿ.ಗೋಗೇರಿ ಅವರ ಪುಟ್ಟನ ಪರಿಸರ. ಕತೆ: ಪಂಚತಂತ್ರ, ಕಥಾ ಸರಿತ್ಸಾಗರ, ಹಿತೋಪದೇಶ, ಇಂಥ ಕತೆಗಳು ಭಾರತದಲ್ಲಿ ಹುಟ್ಟಿ ಪ್ರಸಿದ್ಧವಾಗಿವೆ. ಪಂಚತಂತ್ರದ ಕತೆಗಾರಿಕೆ, ಚಮತ್ಕಾರ, ಬುದ್ಧಿವಂತಿಕೆ, ವ್ಯವಹಾರ, ಜ್ಞಾನ ಮುಂತಾದ ಗುಣಗಳು ಶ್ರೇಷ್ಠ ಕತೆಗಳ ಮಾದರಿಯೇ ಸರಿ. ಕತೆ ಎಂದರೆ ಸಾಕು ಮಕ್ಕಳ ಕಿವಿ ನೆಟ್ಟಗಾಗುತ್ತದೆ. ಅವರು ಕತೆ ಹೇಳಲು ಹಿರಿಯರನ್ನು ಪೀಡಿಸುವುದೂ ಉಂಟು. ನಮ್ಮ ಇಂದಿನ ಹಿರಿಯರು ಕುತೂಹಲ ಕೆರಳಿಸುವ, ಅವರ ಕಲ್ಪನಾ ಲೋಕದ ಬಾಗಿಲು ತೆರೆಯುವ, ಮನಸ್ಸಿಗೆ ಮುದ ನೀಡುವ ಕತೆಗಳನ್ನು ಹೆಣೆದು ಹೇಳಿದ್ದಾರೆ. ಪಂಜೆ ಮಂಗೇಶರಾಯ (ಇಲಿಗಳ ತಕ್ಕಥೈ, ಗುಡುಗುಡು ಗುಮ್ಮಟ ದೇವರು, ಸೀಗಡಿ ಯಾಕೆ ಒಣಗಲಿಲ್ಲ), ಹೊಯಿಸಳ (ಹೂವಿನ ಹಾಸಿಗೆ, ಪಠಾಕ್ಷಿ, ಪುಟ್ಟರಸು, ಪೋರಿ), ದೇವುಡು (ಬುದ್ಧಿಯ ಕತೆಗಳು, ಮಂಗಪ್ಪಾಜಿಯ ಪುರಾಣ), ಶಿವರಾಮ ಕಾರಂತ (ಗಜರಾಜ), ಜಿ.ಪಿ.ರಾಜರತ್ನಂ, ಟಿ.ಎಂ.ಆರ್.ಸ್ವಾಮಿ, ಮೇವುಂಡಿ ಮಲ್ಲಾರಿ, ಎಂ.ಎಸ್.ಪುಟ್ಟಣ್ಣ (ನೀತಿ ಚಿಂತಾಮಣಿ), ಸುಬೋಧ ರಾಮರಾಯರು, ಆನವಟ್ಟಿ ರಾಮರಾಯರು (ಬಾಲಕರ ನೀತಿ ಕಥಾವಳಿ) ಹೆಸರಿಸಬಹುದಾದ, ಮೊಟ್ಟ ಮೊದಲ ಮಕ್ಕಳ ಕಥೆಗಳ ಲೇಖಕರಾಗಿದ್ದಾರೆ. ಕತೆಗಳಲ್ಲಿ ಜಾನಪದ ಕತೆಗಳು, ಸಾಹಸದ ಕತೆಗಳು, ಪುರಾಣ ಕತೆಗಳು, ವೈಜ್ಞಾನಿಕ ಕತೆಗಳು, ಪ್ರಾಣಿ ಕತೆಗಳು, ಸಾಮಾಜಿಕ ಕತೆಗಳು ಮುಂತಾದ ಪ್ರಕಾರಗಳು ಕಂಡುಬರುತ್ತವೆ. ಇವೆಲ್ಲವ ಮಕ್ಕಳನ್ನು ಸದಾ ರಂಜಿಸಿವೆ. ಅವರಿಗೆ ವಿವಿಧ ವಿಷಯಗಳನ್ನು ತಿಳಿಸಿವೆ, ಕಲಿಸಿವೆ.

ನಾ.ಡಿಸೋಜ, ಸಿಸು ಸಂಗಮೇಶ (ನರಿಯ ಫಜೀತಿ), ರಸಿಕ ಪುತ್ತಿಗೆ (ಸುಕ್ಕಿನುಂಡೆ ಸುಬ್ಬ), ಟಿ.ಎಸ್.ನಾಗರಾಜ ಶೆಟ್ಟಿ (ಕರಡಿ ರಸಾಯನ) ಮತ್ತೂರು ಸುಬ್ಬಣ್ಣ (ಅಂಶು ಮತ್ತು ರಾಬೋಟ್), ಕೃ.ನಾರಾಯಣರಾವ್ (ದಿನಕ್ಕೊಂದು ಕತೆ), ಎಂ.ಜಿ.ಗೋವಿಂದರಾಜು (ಆಕಾಶದ ಅಂಚು), ರಾಜಶೇಖರ ಭೂಸನೂರಮಠ (ವೈಜ್ಞಾನಿಕ ಕತೆಗಳು) ಮೊದಲಾದವರು ಈಚಿನ ಕತೆಗಾರರು. ಇತ್ತೀಚೆಗೆ ಅಪಾರ ಸಂಖ್ಯೆಯ ಕತೆಗಳ ರಚನೆಗೊಂಡಿವೆ.

ಬಹುತೇಕ ಸಮಕಾಲೀನ ಮಕ್ಕಳ ಕತೆಗಳಲ್ಲಿ ಭಾವನೆಗಳನ್ನು ದುಡಿಸಿಕೊಳ್ಳುವ ಪ್ರಯತ್ನವಿದೆಯೇ ಹೊರತು ಅವರ ಬುದ್ಧಿಯನ್ನು ದುಡಿಸಿಕೊಂಡು ಯೋಚನೆ ಮಾಡುವಂತೆ ಪ್ರಚೋದಿಸುವ ಕತೆಗಳು ಕೆಲವೇ. ಹೆಚ್ಚು ಕಡಿಮೆ ಸಮಕಾಲೀನ ಬರೆಹಗಾರರಲ್ಲಿ ಯಾವುದೇ ಹೊಸ ಪ್ರಯೋಗ ಕಡಿಮೆ. ಬಹುಶಃ ಪ್ರಯೋಗ ನಡೆಸುವಷ್ಟು ಒತ್ತಡ ಕಂಡುಕೊಳ್ಳದಿರುವುದು ಅವರ ಸೃಜನಶೀಲತೆಯಲ್ಲಿ ಇರುವ ಕೊರತೆ ಎನಿಸುತ್ತದೆ. ಅಂದರೆ ಬದಲಾಗುತ್ತಿರುವ ಬದುಕಿನ, ಮಕ್ಕಳ ಪ್ರಪಂಚದ ರೀತಿ ನೀತಿಗಳಿಗೆ ನಮ್ಮ ಶಿಶು ಸಾಹಿತಿಗಳು ಸ್ಪಂದಿಸಿಲ್ಲ ಎಂದು ಎನ್.ಎಸ್.ರಘುನಾಥ್ ಅಬಿsಪ್ರಾಯಪಟ್ಟಿದ್ದಾರೆ. ಸಮಕಾಲೀನತೆಗೆ ಸ್ಪಂದಿಸುವ (ಕಂಪ್ಯುಟರ್ ಯುಗ) ಕತೆಗಳು ಇನ್ನೂ ಬರಬೇಕಾಗಿದೆ. ಅನುಪಮಾ ನಿರಂಜನ ಅವರು ಮಕ್ಕಳಿಗಾಗಿ ಸಂಪಾದಿಸಿ ಕೊಟ್ಟಿರುವ ದಿನಕ್ಕೊಂದು ಕತೆ ಸಂಪಟಗಳು ಒಂದು ಅಮೂಲ್ಯ ಕೊಡುಗೆ. ಬೇರೆ ಬೇರೆ ದೇಶಗಳ, ಭಾಷೆಗಳ ಕತೆಗಳೂ ಇದರಲ್ಲಿ ಸೇರಿವೆ. ಸಿಸು ಸಂಗಮೇಶರ ಆಯ್ದ ಕತೆಗಳು, ಟಿ.ಎಸ್.ನಾಗರಾಜ ಶೆಟ್ಟಿ ಅವರ ಕರಡಿ ರಸಾಯನ (ಇಪ್ಪತ್ತೈದು ಕತೆಗಳು) ಈ ಸಂಕಲನಗಳನ್ನು ಇಲ್ಲಿ ಹೆಸರಿಸಬಹುದು. ಬಿಡಿಬಿಡಿಯಾದ ಮಕ್ಕಳ ಕತೆಗಳ, ಕವಿತೆಗಳ ಪುಸ್ತಕಗಳನ್ನು ತರುವಲ್ಲಿ ಅನೇಕ ಸಂಸ್ಥೆಗಳು ದುಡಿದಿವೆ. ನವಕರ್ನಾಟಕ ಪ್ರೈ.ಲಿ., ಸಪ್ನ ಬುಕ್ ಹೌಸ್, ಟಿ.ನಾರಾಯಣ ಅಯ್ಯಂಗಾರ್ ಪ್ರಕಾಶನ, ಬಿಜಾಪುರದ ಭಾರತಿ ಪ್ರಕಾಶನ, ತಿಪಟೂರಿನ ನಿರ್ಮಲ ಪ್ರಕಾಶನ, ಮಿತ್ತಬೈಲಿನ ಶಿಶು ಸಾಹಿತ್ಯ ಮಾಲೆ, ಬೆಂಗಳೂರಿನ ಇಂಡಿಯ ಬುಕ್ಹೌಸ್ (ಅಮರ ಚಿತ್ರ ಕಥಾ ಮಾಲಿಕೆ), ಗುಬ್ಬಚ್ಚಿ ಪುಸ್ತಕ ಮಾಲೆ, ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ, ಮೈಸೂರು ರಾಜ್ಯದ ಶಿಕ್ಷಣ ಇಲಾಖೆ, ಮೈಸೂರಿನ ಕಾವ್ಯಾಲಯ ಪ್ರಕಾಶನ ಇತ್ಯಾದಿ ನೂರಾರು ಪ್ರಕಾಶಕರ ಸೇವೆ ಸ್ಮರಣೀಯವಾದುದು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರತಿ ವರ್ಷವ ಕನ್ನಡದ ನಿಯತಕಾಲಿಕೆಗಳಲ್ಲಿ ಪ್ರಕಟವಾಗುವ ಮಕ್ಕಳ ಕತೆ, ಕವನಗಳನ್ನು ಸಂಪಾದನೆ ಮಾಡಿಸಿ ಪ್ರಕಟಿಸುತ್ತಿದೆ. ಅಲ್ಲದೆ ಕಾಲು ಶತಮಾನದ ಸಾಹಿತ್ಯ ಮಾಲಿಕೆಯಲ್ಲಿ ಕತೆ ಹಾಗೂ ಕವಿತೆಗಳ ಒಂದೊಂದು ಸಂಪುಟವನ್ನು ಪ್ರತ್ಯೇಕವಾಗಿ ಪ್ರಕಟಿಸಿದೆ. ಇತ್ತೀಚೆಗೆ ಎನ್.ಎಸ್.ರಘುನಾಥ್ ಅವರ ಸಂಪಾದಕತ್ವದಲ್ಲಿ ಶತಮಾನದ ಮಕ್ಕಳ ಸಾಹಿತ್ಯ ಎಂಬ ಸಂಪುಟವನ್ನು ಹೊರತಂದಿದೆ. ಇದರಲ್ಲಿ ಆಯ್ದ ೧೦೧ ಕವಿತೆಗಳು, ೧೦೪ ಕತೆಗಳು ಮತ್ತು ೧೯ ನಾಟಕಗಳು ಸೇರಿವೆ.

ನಾಟಕ[ಬದಲಾಯಿಸಿ]

ಅಭಿನಯ, ಸಂಭಾಷಣೆ, ಹಾಡು, ವಿಶೇಷ ವಸ್ತ್ರ ವಿನ್ಯಾಸ, ದೃಶ್ಯ ವೈಭವ ಮುಂತಾದ ಹಲವು ಮಿಶ್ರಕಲೆಗಳ ಸಂಯೋಜನೆಯಾದ ನಾಟಕ ಎಲ್ಲರನ್ನು ಆಕರ್ಷಿಸುವ ಕಲೆ. ನೋಡಿ ಸಂತೋಷಿಸುವ ಹಾಗೆಯೇ ಓದಿಯೂ ಆನಂದಿಸಬಹುದು. ಈ ದಿಸೆಯಲ್ಲಿ ಆಲೋಚಿಸಿ ಬರೆದವರೆಂದರೆ ನಾರಾಯಣಸ್ವಾಮಿ (ಪೃಥ್ವೀರಾಜ ಜಯಚಂದ್ರ, ಹುಲಿ ಶಿಕಾರಿ, ೧೯೨೫), ಕುವೆಂಪು (ಮೋಡಣ್ಣನ ತಮ್ಮ, ೧೯೨೬), ಎಂ.ಎನ್.ಕಾಮತ್, ಪಂಜೆ ಮಂಗೇಶರಾಯ, ಎಂ.ಎಸ್.ಪುಟ್ಟಣ್ಣ, ಹೊಯಿಸಳ (ಮಕ್ಕಳ ಮಂಟಪ, ಚಂದ್ರಹಾಸ), ಚಿ.ಸದಾಶಿವಯ್ಯ, ಬೆಂ.ಶ್ರೀ.ಪಾಂಡುರಂಗರಾಯ (ಸುಳ್ಳಿನ ಸೋಲು ೧೯೪೦), ಶಿವರಾಮ ಕಾರಂತ (ಹೊಟ್ಟೆಯ ಹಾಡು, ನಾಲ್ಕನೆಯ ಪಿಶಾಚಿ), ಜಿ.ಪಿ.ರಾಜರತ್ನಂ (ಬೆಳೆಯುವ ಪೈರು, ಧ್ವಜ ವಂದನೆ) ಮೊದಲಾದವರನ್ನು ಹೆಸರಿಸಬಹುದು. ಕಾಲ ಕ್ರಮೇಣ ನಾಟಕಗಳ ರಚನೆಯ ಸಂಖ್ಯೆ ಹೆಚ್ಚಾಯಿತು. ವಿವಿಧತೆಯ ಜೊತೆಗೆ ಗುಣಮಟ್ಟ ಹೆಚ್ಚಿರುವ ನಾಟಕಗಳೂ ಬಂದುವು.

ಕೀರ್ತಿನಾಥ ಕುರ್ತಕೋಟಿಯವರ ಆ ಮನಿ ಮಕ್ಕಳ ಲೋಕವನ್ನು ಅದರ ಎಲ್ಲ ಗುಣಗಳೊಂದಿಗೆ ಕಣ್ಣೆದಿರು ತೆರೆದಿಡುವುದು ಆಕರ್ಷಕವಾಗಿದೆ. ಕುವೆಂಪು ಅವರ ಮೋಡಣ್ಣನ ತಮ್ಮ ಗೀತರೂಪಕವಾಗಿದ್ದು ಮಕ್ಕಳಲ್ಲಿ ನಿಸರ್ಗ ಪ್ರೀತಿಯನ್ನು ಮೂಡಿಸಬಲ್ಲುದು. ಆರ್ಯ ಅವರ ಮಳೆ ಬಂತು, ಚಂದ್ರಶೇಖರ ಕಂಬಾರರ ಆಲೀಬಾಬಾ ಮತ್ತು ನಲವತ್ತು ಮಂದಿಕಳ್ಳರು, ಪುಷ್ಪರಾಣಿ ಎನ್.ಎಸ್.ವೆಂಕಟರಾಮ್ ಅವರ ಹಿಮಾನಿ ಮತ್ತು ಏಳು ಜನ ಕಳ್ಳರು, ಅಬ್ದುಲ್ ರೆಹಮಾನ್ ಪಾಷ ಅವರ ನಕ್ಕಳಾ ರಾಜಕುಮಾರಿ ಜಾನಪದ ಸತ್ವವನ್ನು ಮೈಗೂಡಿಸಿಕೊಂಡಿವೆ. ಮೇವುಂಡಿ ಮಲ್ಲಾರಿ ಅವರ ಮಯೂರ ವರ್ಮ, ನಾರಾಯಣ ಸ್ವಾಮಿ ಅವರ ಶಿವಾಜಿ, ಎಂ.ವಿ.ಸೀತಾರಾಮಯ್ಯ ಅವರ ಕರುಣೆಯ ಕುಡಿ, ಶ್ರೀನಿವಾಸ ಅವರ ಬೈಲಂಗಡಿಯ ರಾಣಿ, ರಘುಸುತ ಅವರ ಹೊಸ ಬೆಳಕು ಮುಂತಾದವು ಐತಿಹಾಸಿಕ ನಾಟಕಗಳಾಗಿದ್ದು ಮಕ್ಕಳಲ್ಲಿ ಸಾಹಸಪ್ರಿಯತೆ, ಆದರ್ಶಗಳ ಬಗೆಗಿನ ಒಲವನ್ನು ಹೆಚ್ಚಿಸುವುದರ ಜೊತೆಗೆ ವಾಸ್ತವವಾಗಿ ನೆಲೆಸಿದ್ದ ಮಹಾನ್ ಸಾಧಕರ ಬಗೆಗಿನ ಕುತೂಹಲವನ್ನು ತಣಿಸಬಲ್ಲವು. ಹೆಗ್ಗೋಡಿನ ಅಕ್ಷರ ಪ್ರಕಾಶನ ಹೊರತಂದಿರುವ ಅನೇಕ ಮಕ್ಕಳ ನಾಟಕಗಳು (ಬಿ.ವಿ.ಕಾರಂತರ ಪಂಜರ ಶಾಲೆ, ಕಂಬಾರರ ಕಿಟ್ಟೀ ಕಥೆ, ಪ್ರಸನ್ನ ಅವರ ಒಂದಾನೊಂದು ಕಾಡಿನಲ್ಲಿ, ಕೆ.ವಿ.ಸುಬ್ಬಣ್ಣ ಅವರ ಬೆಟ್ಟಕ್ಕೆ ಚಳಿಯಾದರೆ, ನೀಲಿ ಕುದುರೆ) ಹೊಸ ಶೈಲಿಯಲ್ಲಿ ರಚನೆಯಾಗಿದ್ದು ರಂಗ ಪ್ರಯೋಗಗಳಾಗಿಯೂ ಅಪಾರ ಯಶಸ್ಸನ್ನು ಪಡೆದಿವೆ. ಇವುಗಳ ಜೊತೆಗೆ ವೈದೇಹಿ ಅವರ ಕೆಲವು ನಾಟಕಗಳೂ ಗುಣಮಟ್ಟದ ದೃಷ್ಟಿಯಿಂದ ಮೇಲು ಮಟ್ಟದವು. ಮಕ್ಕಳನ್ನು ಅಪಾರವಾಗಿ ರಂಜಿಸಬಲ್ಲವು ಕೂಡ. ಅದ್ಭುತ ರಮ್ಯತೆಯನ್ನು, ಪೌರಾಣಿಕ ಕತೆಗಳನ್ನು, ವಿಜ್ಞಾನ ಮನೋವಿಜ್ಞಾನಗಳನ್ನು ಬಳಸಿಕೊಂಡಿರುವ ನಾಟಕಗಳೂ ಇವೆ. ಸೂ.ಸುಬ್ರಹ್ಮಣ್ಯಂ ಅವರ ನಕ್ಕಿತು ನಕ್ಷತ್ರ - ನಕ್ಷತ್ರಗಳನ್ನು ಕುರಿತು ಹೊಸ ತಂತ್ರದ ಮೂಲಕ ತಿಳಿಯಪಡಿಸುವ ವಿಶಿಷ್ಟವಾದ ನಾಟಕವಾಗಿದೆ. ಈಚೆಗೆ ಪ್ರಕಟವಾಗಿರುವ ಆರ್.ಕೆ.ಶಾನಭೋಗರ ಅಪುರ್ವ ಹಾಗೂ ಉಪ್ಪಿನ ಕಾಯಿಯ ಅತ್ತೆ, ಬಿಳಿಗೆರೆ ಕೃಷ್ಣಮೂರ್ತಿ ಅವರ ಮಳೆ ಹುಚ್ಚ ಮತ್ತು ನವಿಲೂರಿನ ಕತೆ, ಗ.ಸು.ಭಟ್ಟ ಅವರ ನಲಿಯಿತು ನವಿಲು ಆಕರ್ಷಕ ಭಾಷೆಯಿಂದ ಕೂಡಿರುವ ಲವಲವಿಕೆಯ ನಾಟಕಗಳಾಗಿವೆ. ನಾಟಕಗಳ ಸಾರ್ಥಕತೆ ಇರುವುದು ರಂಗಾಬಿನಯದಲ್ಲಿ, ಪ್ರದರ್ಶನದಲ್ಲಿ. ಹೀಗೆ ನಾಟಕಗಳನ್ನು ಪ್ರದರ್ಶಿಸುವುದರಲ್ಲಿ ಹೆಗ್ಗೋಡಿನ ನೀನಾಸಂ, ತಿಪಟೂರಿನ ಅಬಿನಯ, ಬೆಂಗಳೂರಿನ ಬಿಂಬ, ಮೈಸೂರಿನ ರಂಗಾಯಣ, ತಮರಿಯ ಕಿನ್ನರ ಮೇಳ ಮುಂತಾದ ತಂಡಗಳು ಸಾಕಷ್ಟು ಆಸಕ್ತಿಯಿಂದ ದುಡಿಯುತ್ತಿವೆ.

ಕಾದಂಬರಿ[ಬದಲಾಯಿಸಿ]

ಕನ್ನಡದ ಮಕ್ಕಳ ಸಾಹಿತ್ಯದಲ್ಲಿ ಅತಿ ಹೆಚ್ಚು ಸಂಖ್ಯೆ ಯಲ್ಲಿ ಬಂದಿರುವುದು ಕತೆಗಳೇ. ಅನಂತರ ಜೀವನ ಚರಿತ್ರೆ, ವಿಜ್ಞಾನ ಮತ್ತಿತರ ವಿಷಯಕ ವಸ್ತುಗಳ ಕೃತಿಗಳು ಬಹಳವಾಗಿವೆ. ಕಾವ್ಯದ್ದು ಮೂರನೆಯ ಸ್ಥಾನ ಇರಬಹುದು. ನಾಟಕಗಳೂ ಬಹಳ ಕಡಿಮೆ. ಕಾದಂಬರಿಗಳ ಸಂಖ್ಯೆಯಂತೂ ಮತ್ತೂ ಕಡಿಮೆ. ಕಾದಂಬರಿ ಬಹು ಕಾಲದ ಓದುವ ಸಹನೆಯನ್ನು ಅಪೇಕ್ಷಿಸುತ್ತದೆ. ಬೆಳೆದ ಮಕ್ಕಳು (ಹನ್ನೆರಡು ವರ್ಷಗಳಿಗಿಂತ ದೊಡ್ಡವರು) ಮಾತ್ರ ಓದಬಲ್ಲರೆಂದು ಕಾಣುತ್ತದೆ. ಕನ್ನಡದಲ್ಲಿ ವಯಸ್ಸಿಗನುಗುಣವಾಗಿ ಸಾಹಿತ್ಯ ರಚನೆ ಆಗಿಲ್ಲ. ಇಂಗ್ಲಿಷಿನಲ್ಲಿ ಅಂಥ ಪ್ರಯತ್ನಗಳಾಗಿವೆ. ಐದರಿಂದ ಎಂಟು ವರ್ಷದ ವಯೋಮಾನದವರು, ಒಂಬತ್ತರಿಂದ ಹನ್ನೆರಡು ವಯಸ್ಸಿನ ಮಕ್ಕಳು, ಹದಿಮೂರರಿಂದ ಹದಿನೈದರವರೆಗಿನವರು ಎಂದು ಮಕ್ಕಳ ಸಾಹಿತ್ಯವನ್ನು ವಿಂಗಡಿಸಿದ್ದಾರೆ. ಆಯಾ ವಯಸ್ಸಿನ ಮಕ್ಕಳ ಸ್ವಭಾವ, ಸಾಮಥರ್ಯ್‌, ಅಗತ್ಯಗಳನ್ನು ಅನುಸರಿಸಿ ಸಾಹಿತ್ಯ ರಚನೆ ಆಗಬೇಕೆನ್ನುವುದು ಮನೋವಿಜ್ಞಾನಿಗಳ ಅಬಿಪ್ರಾಯ.

ಕಾದಂಬರಿ ಕ್ಷೇತ್ರದಲ್ಲಿ ಸಾಹಸ ಪ್ರಧಾನ ವಸ್ತುವಿನ ರಚನೆಗಳು ಮೇಲುಗೈ ಸಾದಿsಸಿವೆ. ರಸಿಕ ಪುತ್ತಿಗೆ ಅವರ ಕೆಂಪು ಕಾರು, ಎಂ.ಪಿ.ಮನೋಹರ ಚಂದ್ರನ್ ಅವರ ಪುಪ ಕಾಡಿನಲ್ಲಿ ಪಾಪು, ಎಚ್.ಎಸ್.ವೆಂಕಟೇಶಮೂರ್ತಿ ಅವರ ಅಮಾನುಷರು, ಅಗ್ನಿಮುಖಿ, ಸುಮತೀಂದ್ರ ನಾಡಿಗರ ಸಾಹಸ, ಬಿ.ಎಲ್.ವೇಣು ಅವರ ಗುಹೆ ಸೇರಿದವರು, ಟಿ.ಕೆ.ರಾಮರಾವ್ ಅವರ ದಿಬ್ಬದ ಮನೆ ಇವುಗಳನ್ನು ಹೆಸರಿಸಬಹುದು. ಹುಡುಗ ಹುಡುಗಿಯರ ಮನಸ್ಸಿನ ಕುತೂಹಲ ತಣಿಸುವಲ್ಲಿ, ಅವರನ್ನು ತುದಿಗಾಲಲ್ಲಿ ನಿಲ್ಲಿಸಿ ರೋಮಾಂಚನ ಗೊಳಿಸುವುದರಲ್ಲಿ, ಅನಿರೀಕ್ಷಿತ ತಿರುವುಗಳ ಮೂಲಕ ಬೆರಗು ಮೂಡಿಸುವುದರಲ್ಲಿ ಈ ಕೃತಿಗಳು ಯಶಸ್ವಿಯಾಗಿವೆ. ಆನಂದ ಪಾಟೀಲರ ಬೆಳದಿಂಗಳು, ಎನ್.ವಿ.ಶ್ರೀನಿವಾಸರಾವ್ ಅವರ ಹಾರೋ ಹನುಮ - ಈ ಕೃತಿಗಳು ಅದ್ಭುತ ರಮ್ಯತೆಯನ್ನು ಬಹಳ ಚೆನ್ನಾಗಿ ದುಡಿಸಿಕೊಂಡಿವೆ. ಆರ್.ವಿ.ಭಂಡಾರಿ ಅವರ ಬಿರುಗಾಳಿ ಒಂದು ವಿಶಿಷ್ಟ ಕಾದಂಬರಿ. ಜಂಬುನಾಥ ಕಂಚ್ಯಾಣಿ ಅವರ ಮಿಡಿದ ಕರುಳು ಮಕ್ಕಳಲ್ಲಿ ಭಾವೈಕ್ಯತೆಯ ಭಾವನೆ ಮೂಡಿಸುವುದರ ಜೊತೆಗೆ ರಂಜನೆಯನ್ನು ನೀಡಬಲ್ಲದು. ಗೀತಾ ಕುಲಕರ್ಣಿ ಅವರ ನೇಜಿ ಗುಬ್ಬಚ್ಚಿ ಕೂಡ ಬಹಳ ಅಪರೂಪದ ಕೃತಿ. ರಾಜಶೇಖರ ಭೂಸನೂರಮಠ ಅವರು ರಾಕ್ಷಸ ದ್ವೀಪ, ಅಟ್ಲಾಂಟಿಸ್ ಮುಂತಾದ ಮನಸೂರೆಗೊಳ್ಳುವ ಅನೇಕ ವೈಜ್ಞಾನಿಕ ಕಾದಂಬರಿಗಳನ್ನು ಹೆಣೆದು ಮಕ್ಕಳ ಕೈಗೆ ಇತ್ತಿದ್ದಾರೆ.

ಪಾತಾಳದಲ್ಲಿ ಪಾಪಚ್ಚಿ (ನಾ.ಕಾಸ್ತೂರಿ), ಪಿನೋಕಿಯೋ (ಅನು: ಎನ್.ಪ್ರಹ್ಲಾದರಾವ್), ಭೂಗರ್ಭ ಯಾತ್ರೆ, ಬನದ ಮಕ್ಕಳು, (ಎಂ.ಗೋಪಾಲ ಕೃಷ್ಣ ಅಡಿಗ), ಸಮುದ್ರ ತಳದಲ್ಲಿ ಇಪ್ಪತ್ತು ಸಾವಿರ ಯೋಜನೆಗಳು (ಅನು: ವಾಸುದೇವ ರಾವ್) ಮುಂತಾದ ಒಳ್ಳೆಯ ಹಲವು ಅನುವಾದಿತ ಕೃತಿಗಳೂ ಬಂದಿವೆ. ಕೆ.ನಟರಾಜ್ ಅವರ ಚಂದ್ರಲೋಕಕೆ ಹೋಗೋಣು ಬಾರಾ, ಪುಟಾಣಿ ಕಂಡ ಪರಮಾಣು ಲೋಕ, ಆರ್.ಕೆ.ಶಾನಭೋಗ ಅವರ ಅಂಟಾರ್ಕಟಿಕಾ - ಇವು ಉತ್ತಮ ವೈಜ್ಞಾನಿಕ ಕಾದಂಬರಿಗಳು. ಮಕ್ಕಳ ಕಾದಂಬರಿಕ್ಷೇತ್ರ ಸಾದಿsಸಬೇಕಾದದ್ದು ಇನ್ನೂ ಇದೆ. ಇದಕ್ಕೆ ಅವಕಾಶವೂ ಅಪಾರವಾಗಿದೆ.

ಕನ್ನಡ ಪತ್ರಿಕೋದ್ಯಮ ಕ್ಷೇತ್ರ ಮಕ್ಕಳ ಸಾಹಿತ್ಯ ಸೃಷ್ಟಿಗೆ ಸಾಕಷ್ಟು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಮೊದಲಾದ ನಿಯತಕಾಲಿಕಗಳಲ್ಲಿ ಮಕ್ಕಳ ಸಾಹಿತ್ಯ ಸೃಷ್ಟಿ ಸಾಕಷ್ಟು ನಡೆದಿದೆ. ಹೀಗೆಯೇ ಮಕ್ಕಳ ಸಾಹಿತ್ಯ ಪ್ರಕಟಣೆಗೇ ಮೀಸಲಾದ ಮಕ್ಕಳ ಪತ್ರಿಕೆಗಳು ಕೂಡ ಮಕ್ಕಳ ಸಾಹಿತ್ಯದ ಅಬಿsವೃದ್ಧಿಗೆ ಸಾಕಷ್ಟು ಶ್ರಮಿಸಿವೆ, ಶ್ರಮಿಸುತ್ತಿವೆ; ‘ಮಕ್ಕಳ ಪುಸ್ತಕ’ ಕನ್ನಡದ ಮೊತ್ತ ಮೊದಲ ಮಕ್ಕಳ ಪತ್ರಿಕೆ (೧೯೨೬). ಅಶ್ವತ್ಥ ನಾರಾಯಣರಾಯ ಎಂಬವರು ಇದನ್ನು ಹುಟ್ಟು ಹಾಕಿದರು. ಅನಂತರ ಇದನ್ನು ದ.ಕೃ.ಭಾರದ್ವಾಜ, ದೇವುಡು ಅವರು ಸಂಪಾದಕರಾಗಿ ಮನ್ನಡೆಸಿದರು. ದೇವುಡು ಅವರು ಅನಂತರ ನಮ್ಮ ಪುಸ್ತಕ ಎಂಬ ಒಂದು ಸ್ವತಂತ್ರ ಪತ್ರಿಕೆಯನ್ನೂ ನಡೆಸಿದರು. ಬಾಲವನ (ಶಿವರಾಮ ಕಾರಂತ), ಬಾಲಚಂದ್ರ (ಉಳ್ಳಾಲ ಮಂಗೇಶರಾಯ), ಕಂದಮಾಸಿಕ (ಆರ್.ಎಸ್.ಮೈಲಾರಯ್ಯ ಮತ್ತು ಡಿ.ಆರ್.ನಾಥ್), ತುತ್ತೂರಿ (ರಾ.ಮೋ.ವಿಶ್ವಾಮಿತ್ರ), ವಿಶ್ವಾಮಿತ್ರ (ಪದ್ಮನಾಭ ನಾಯಕ), ಮಕ್ಕಳ ಪತ್ರಿಕೆ (ಶಿವರಾಮ ಕಾರಂತ), ಕನ್ನಡ ಕಂದ (ಮೇವುಂಡಿ ಮಲ್ಲಾರಿ), ಬೆಂಗಳೂರಿನ ಮಕ್ಕಳ ಕೂಟ ಮಕ್ಕಳ ಬಾವುಟ (ಮೈಸೂರಿನ ಚಿಲ್ಡ್ರನ್ ಬುಕ್ ಕೌಲ್) ಬಾಲ ಭಾರತಿ (ಸಿಸು ಸಂಗಮೇಶ), ಮಕ್ಕಳ ಮನೆ (ಈಶ್ವರ ಕಮ್ಮಾರ) ಇವೆಲ್ಲ ಕೆಲ ಕಾಲ ನಡೆದು ನಿಂತು ಹೋದ ಪತ್ರಿಕೆಗಳು. ಬೆಂಗಳೂರಿನಿಂದ ಹೊರಟ ಪತ್ರಿಕೆಗಳಲ್ಲಿ ಪಾಪಚ್ಚಿ, ಸಂತೃಪ್ತಿ, ಪುಟಾಣಿ, ಚಂಪಕ - ಒಳ್ಳೆಯ ಪ್ರಯತ್ನಗಳು. ಕೇರಳದ ಮಂಗಳ ಪ್ರಕಾಶಕರು ಬಾಲ ಮಂಗಳ ಎಂಬ ಪಾಕ್ಷಿಕವನ್ನು ಹೊರತರುತ್ತಿದ್ದಾರೆ. ಮಣಿಪಾಲದ ಮಣಿಪಾಲ್ ಪ್ರಿಂಟರ್ಸ್‌ ಅಂಡ್ ಪಬ್ಲಿಷರ್ಸ್‌ ತುಂತುರು ಎಂಬ ಮಾಸ ಪತ್ರಿಕೆಯನ್ನು ಸುಂದರವಾಗಿ ಮುದ್ರಿಸುತ್ತಿದ್ದಾರೆ. ಮದರಾಸಿನಿಂದ ಬರುತ್ತಿದ್ದ ಚಂದಮಾಮ ಮತ್ತು ಬಾಲಮಿತ್ರ ಪತ್ರಿಕೆಗಳು ಕೆಲಕಾಲ ಸ್ಥಗಿತಗೊಂಡಿದ್ದು ಇದೀಗ ಮತ್ತೆ ಪ್ರಾರಂಭವಾಗಿವೆ. ಬೊಂಬೆ ಮನೆ ಇಂಥದೇ ಮತ್ತೊಂದು ಪತ್ರಿಕೆ. ಕರ್ನಾಟಕ ವಿಜ್ಞಾನ ಪರಿಷತ್ತು ಬಾಲ ವಿಜ್ಞಾನ ಎಂಬ ಬಹಳ ಉಪಯುಕ್ತವಾದ ವೈಜ್ಞಾನಿಕ ಮಾಸಿಕವನ್ನು ಹೊರಡಿಸುತ್ತಿದೆ. ಅಂಗಳ ಎಂಬ ಒಂದು ವಾರ ಪತ್ರಿಕೆ ಬೆಂಗಳೂರಿನಿಂದ ಹೊರಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗಾಗಿ ಜೀವನ ಚರಿತ್ರೆಗಳು, ಮಾಹಿತಿ ಪುಸ್ತಕಗಳು, ವಿಜ್ಞಾನ ವಿಚಾರಗಳು ಅಪಾರ ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ. ರಾಷ್ಟ್ರೋತ್ಥಾನ ಪರಿಷತ್ತು ‘ಭಾರತ ಭಾರತಿ’ ಪುಸ್ತಕ ಮಾಲಿಕೆಯಲ್ಲಿ ೫೧೦ ಪುಸ್ತಕಗಳನ್ನು ಪ್ರಕಟಿಸಿದೆ. ಐಬಿಎಚ್ ಪ್ರಕಾಶನ ಸಂಸ್ಥೆ ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆ ಮಾಲೆಯಲ್ಲಿ ಅನೇಕ ಕೃತಿಗಳನ್ನು ಪ್ರಕಟಿಸಿದೆ.[೧]

ಕನ್ನಡದಲ್ಲಿ ಮಕ್ಕಳ ಕಾಮಿಕ್ಸ್‌ಗಳಿಗೂ ಬರವಿಲ್ಲ. ಐ.ಬಿ.ಎಚ್.ನ. ಅಮರ ಚಿತ್ರಕಥಾಮಾಲಿಕೆಯಲ್ಲಿ ಪುರಾಣ ಪುಣ್ಯ ಪುರುಷರ ಕಥೆಗಳು ಅರ್ಥಪೂರ್ಣ ಚಿತ್ರಗಳೊಂದಿಗೆ ಅಚ್ಚಾಗಿವೆ. ಕಾಮಿಕ್ಸ್‌ ಲೋಕ ಮಕ್ಕಳ ಕಲ್ಪನಾ ರಮ್ಯತೆಯನ್ನು (ಫ್ಯಾಂಟಸಿ) ಗರಿಗೆದರಿಸುವಲೋಕ. ಅನೇಕ ಇಂಗ್ಲಿಷ್ ಕಾಮಿಕ್ಸ್‌ ಕಥಾಮಾಲಿಕೆಗಳು ಕನ್ನಡಕ್ಕೆ ಅನುವಾದಗೊಂಡು ಜನಪ್ರಿಯವಾಗಿವೆ. ಫ್ಯಾಂಟಮ್, ಮಾಡಸ್ಟಿಬ್ಲೇಸ್, ಮೋಗ್ಲಿ, ಮಾಂಡ್ರೇಕ್ ಮೊದಲಾದ ಕಥಾಮಾಲಿಕೆಗಳು ಮಕ್ಕಳನ್ನು ರಂಜಿಸಿವೆ.

ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶ್ವಕೋಶ ಮಾದರಿಯ ಪರಾಮರ್ಶನ ಗ್ರಂಥಗಳನ್ನು ಸಿದ್ಧಪಡಿಸುವ ಕಾರ್ಯವೂ ಕನ್ನಡದಲ್ಲಿ ಸಾಗಿದೆ. ಶಿವರಾಮ ಕಾರಂತರ ಬಾಲ ಪ್ರಪಂಚ (ಮೂರು ಸಂಪುಟ),ವಿಜ್ಞಾನ ಪ್ರಪಂಚ (ನಾಲ್ಕು ಸಂಪುಟ) ಮೊದಲ ಗಟ್ಟಿ ಪ್ರಯತ್ನಗಳು. ನಿರಂಜನರ ಸಂಪಾದಕತ್ವದಲ್ಲಿ ಪ್ರಕಟಗೊಂಡ ಜ್ಞಾನ ಗಂಗೋತ್ರಿ (ಏಳು ಸಂಪುಟ) ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಮೈಲುಗಲ್ಲೆನ್ನಬಹುದು. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಕಿರಿಯರಿಗಾಗಿ ಪ್ರಕಟಿಸಿರುವ ಕಿರಿಯರ ಕರ್ನಾಟಕ ವಿಶ್ವಕೋಶವನ್ನೂ ಇಲ್ಲಿ ಸ್ಮರಿಸಬಹುದು. ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿರುವ ಜ್ಞಾನ ವಿಜ್ಞಾನ ಕೋಶ (ನಾಲ್ಕು ಸಂಪುಟ) ಮಕ್ಕಳ ವಿಜ್ಞಾನ ಕ್ಷೇತ್ರದ ಅದ್ವೀತೀಯ ಕೊಡುಗೆಯಾಗಿದೆ. ಇದೇ ಪ್ರಕಾಶನದ ವಿಜ್ಞಾನ ಪದವಿವರಣಕೋಶ ಕೂಡ ಉಲ್ಲೇಖನೀಯ ಕೃತಿಯಾಗಿದ್ದು ಉಪಯುಕ್ತವಾಗಿದೆ. ಚಿತ್ತಾಕರ್ಷಕ ಬಣ್ಣದ ಚಿತ್ರಗಳ, ಉತ್ತಮ ಗುಣಮಟ್ಟದ ಕಾಗದದ ಬಳಕೆಯ, ಉತ್ಕೃಷ್ಟ ಖಚಿತಜ್ಞಾನದ ಈ ಬಗೆಯ ಉತ್ಪಾದನೆ ಕನ್ನಡದ ಮಟ್ಟಿಗೆ ಹೇಳುವುದಾದರೆ ಮೊದಲ ಮಾದರಿ ಎನ್ನಬಹುದು. ಇಂಥ ಚಿತ್ತಾಕರ್ಷಕವಾದ, ಕಣ್ಮನಗಳನ್ನು ತಣಿಸಬಲ್ಲ ವಿವಿಧ ವಿಷಯಕ ವಿಶ್ವಕೋಶಗಳ ಅಗತ್ಯ ಕನ್ನಡದ ಮಕ್ಕಳಿಗೆ ಇನ್ನೂ ಇದೆ. ಮಕ್ಕಳ ಸಾಹಿತ್ಯ ಕುರಿತಂತೆ ವಿಮರ್ಶಾತ್ಮಕ ಹಾಗೂ ವಿಶ್ಲೇಷಣಾತ್ಮಕವಾದ ಕೆಲವು ಕೃತಿಗಳೂ ಬಂದಿವೆ. ನಿರುಪಮಾ ಅವರ ನಿಮ್ಮ ಮಕ್ಕಳಿಗೆಂತಹ ಸಾಹಿತ್ಯ ಬೇಕು, ಟಿ.ಎಸ್.ನಾಗರಾಜ ಶೆಟ್ಟಿ ಅವರ ಮಕ್ಕಳ ಸಾಹಿತ್ಯ, ಏಕೆ ಬೇಕು? ಸಿಸು ಸಂಗಮೇಶ ಅವರ ಮಕ್ಕಳ ಸಾಹಿತ್ಯ ನಾನು ಕಂಡಂತೆ ಅಂಥವುಗಳಲ್ಲಿ ಪ್ರಮುಖವಾದವು. ಮಕ್ಕಳ ಪುಸ್ತಕಗಳ ವಿಷಯ ವೈವಿಧ್ಯ, ರಚನೆ, ಉತ್ಪಾದನೆ, ಮಾರಾಟ ಈ ಎಲ್ಲ ಕ್ಷೇತ್ರಗಳಲ್ಲಿಯೂ ಸಾಕಷ್ಟು ಸುಧಾರಣೆಗಳು ನಡೆಯಬೇಕಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-02-01. Retrieved 2016-10-27.