ಕನ್ನಡ ವೃತ್ತಿ ರಂಗಭೂಮಿಯ ನಟರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವೃತ್ತಿ ರಂಗಭೂಮಿಯ ನಟರು : ಕನ್ನಡ ನಾಡಿನ ನಟವರ್ಗದಲ್ಲಿ ಹಿರಿಯರು ಕೆಲವರು ಪ್ರಸಕ್ತಶಕದ ಆದಿಯಲ್ಲೆ ನೀಲಗಿರಿಯಲ್ಲಿ ತಮಿಳು ದೊರೆ ಶೆಂಗುಟ್ಟವನ್ ಎಂಬಾತನ ಸಮಕ್ಷದಲ್ಲಿ ನಾಟಕವಾಡಿ ತೋರಿಸಿದ್ದರೆಂದು ಶಿಲಪ್ಪದಿಗಾರಂ ಎಂಬ ತಮಿಳು ಗ್ರಂಥದಲ್ಲಿ ಉಲ್ಲೇಖವಾಗಿರುವುದನ್ನು ಆಧಾರವಾಗಿಟ್ಟುಕೊಳ್ಳುವುದಾದರೆ ಕನ್ನಡ ನಟವರ್ಗಕ್ಕೂ ಒಂದು ಪ್ರಾಚೀನ ಪರಂಪರೆ ಇದೆಯೆಂದು ಊಹಿಸಬಹುದು. ವಿಜಯನಗರದ ಉಚ್ಛ್ರಾಯಕಾಲದಲ್ಲಿ ಮೆರೆದ ಭಾರತದ ಆರ್ಯ ಸಂಸ್ಕೃತಿಯ ಪ್ರಾದೇಶಿಕ ಸ್ವರೂಪದಲ್ಲಿ ಕನ್ನಡ ನಾಟಕಗಳಿಗೂ ಯೋಗ್ಯಪಾತ್ರ ಬಂದಿತ್ತೆಂಬುದರಲ್ಲಿ ಸಂದೇಹವಿಲ್ಲ. ಮೈಸೂರಿನ ಒಡೆಯರ ಕಾಲದಲ್ಲಿ ಮತ್ತು ಹೈದರನ ಆಡಳಿತದಲ್ಲಿ ಕನ್ನಡ ನಾಟಕಗಳನ್ನು ಅಭಿನಯಿಸಿ ದೊರೆಗಳ ಮತ್ತು ಜನಗಳ ಮನವನ್ನೊಲಿಸುತ್ತಿದ್ದ ನಟ ನಟಿಯರಿದ್ದರೆಂದು ಕಾಣುತ್ತದೆ. ಚಿಕ್ಕದೇವರಾಜ ಒಡೆಯರ ಕಾಲದ ಮಿತ್ರವಿಂದಗೋವಿಂದ ನಾಟಕ ಯೋಗ್ಯ ನಟರಿಂದ ಅಭಿನಯಿಸಲ್ಪಟ್ಟಿದ್ದರಿಂದಲೇ ಬೆಳೆಕಿಗೆ ಬರುವುದು ಸಾಧ್ಯವಾಯಿತು. ಬರಬರುತ್ತ ರಾಜಾಶ್ರಯ ಕ್ಷಯಿಸಲು ಈ ನಟರು ಹಳ್ಳಿಯನ್ನು ಸೇರಿ ಅಥವಾ ತಮ್ಮ ಹುಟ್ಟೂರನ್ನು ಸೇರಿ, ಹರಿಕಥೆ ಮಾಡಿಯೋ, ಬಯಲಾಟ ನಡೆಸಿಯೋ, ಯಕ್ಷಗಾನ ಪ್ರಸಂಗ ತೋರಿಸಿಯೋ, ತಮ್ಮ ಹೊಟ್ಟೆ ಹೊರೆಯಬೇಕಾದ ಸ್ಥಿತಿ ಬಂತು.

ಆದ್ಯ ಪ್ರವರ್ತಕರು[ಬದಲಾಯಿಸಿ]

ಕನ್ನಡ ನಾಡಿನಲ್ಲಿ ಹೀಗೆ ಮೂಲೆ ಗುಂಪಾದ ನಟರಿಗೆ ಅದೃಷ್ಟದ ಬೆಳಕು ಬಂದುದು 19ನೆಯ ಶತಮಾನದ ಉತ್ತರಾರ್ಧದ ಸುಮಾರಿಗೆ ಮೈಸೂರರಸರಾಗಿದ್ದ ಮುಮ್ಮುಡಿ ಕೃಷ್ಣರಾಜ ಒಡೆಯರಿಗೆ ನಾಟಕ ನೋಡುವುದೆಂದರೆ ಬಹು ಪ್ರಿಯ. ಒಳ್ಳೆಯ ನಟನಟಿಯರಿಗೆ ಆಹ್ವಾನವಿತ್ತು. ತಮ್ಮ ರಾಣಿವಾಸ, ಪರಿವಾರ, ಬಂಧು ಜನರು, ಪುರಜನರಲ್ಲಿ ಗಣ್ಯರು ಇವರನ್ನು ಕರೆಸಿಕೊಂಡು ಅರಮನೆಯ ಅಂಗಳದಲ್ಲಿ ಅವರೆದುರಿಗೆ ನಾಟಕವಾಡುತ್ತಿದ್ದರಂತೆ. ಆ ಜನ ಮೆಚ್ಚಿದರೆಂದರೆ ದೊರೆಗೂ ಆನಂದ, ನಟರಿಗೆ ಯೋಗ್ಯ ಪುರಸ್ಕಾರ. ದೊರೆಯ ರಸಿಕ ಪ್ರಿಯತಮೆಯ ಕಥೆ ಕೇಳಿದ್ದ ಮಂಗಳೂರಿನ ದಶಾವತಾರದ ನಟರ ಗುಂಪೊಂದು ಮೈಸೂರಿಗೆ ಬಂದಿಳಿಯಿತು. ಊರ ಜನರೆಲ್ಲ ನೋಡಲೆಂದು ದೊರೆಯ ಆಸೆ. ಅರಮನೆಯ ಮುಂಭಾಗದಲ್ಲೇ ಒಂದು ಚಪ್ಪರ ನಿರ್ಮಾಣವಾಯಿತು. ನಾಟಕ ನೋಡಿ ಆನಂದಿಸಿದವರಲ್ಲಿ ನಗರದ ತರುಣರ ಗುಂಪೊಂದು ಸೇರಿ ಒಂದು ನಾಟಕವನ್ನು ಆರಿಸಿಕೊಂಡು ದೊರೆಯ ಮುಂದೆ ಅದೇ ರೀತಿ ಆಡಿ ಮೆಚ್ಚಿಸಿದಾಗ ಜನತೆಗೂ ಅದನ್ನು ತೋರಿಸಲು ಈಗಿನ ಪುರಭವನದ ಮುಂದಿನ ಮೈದಾನದಲ್ಲಿ ದೊಡ್ಡ ಚಪ್ಪರ ನಿರ್ಮಿಸಿ ನಾಟಕವಾಡಿದರಂತೆ. ಹೀಗೆ ಆಡಿದ ನಾಟಕ ದ್ರೌಪದೀ ಸ್ವಯಂವರ; ವಸ್ತು ಕುಮಾರವ್ಯಾಸನ ಭಾರತದ್ದು; ರಚಿಸಿದವರು ಗಿರಿಭಟ್ಟರ ತಮ್ಮಯ್ಯ. ಅನಂತರ ಬಂದದ್ದು ಜೈಮಿನಿ ಭಾರತದ ಆಧಾರದ ಮೇಲೆ ಬರೆದ ಸುಧನ್ವಕಾಳಗ. ಸು. 1860ರಲ್ಲಿ ಸುಮಾರಿಗೆ ಮೈಸೂರು ನಗರದ ನಟರೂ ಇದೇ ಕಾಲಕ್ಕೆ ಧಾರವಾಡದಲ್ಲಿ ಶೇಷಗಿರಿರಾಯ ರೆಂಬುವರು ಬರೆದ ಕನ್ನಡ ಶಾಕುಂತಲವಾಡಿದ ಮಂಡಲಿಯ ನಟರೂ ಹೆಸರಿಗೆ ಆಸೆಪಡದೆ ಎಲೆಮರೆಯ ಕಾಯಿಯಂತೆ ಜನ ಸೇವೆಗೈದರು. ಇವರೇ ಕನ್ನಡ ನಾಡಿನ ಈಚಿನ ಪ್ರಪ್ರಥಮ ನಟನಟಿಯರು.

ಆ ವೇಳೆಗೆ ಮೈಸೂರಿನಲ್ಲಿ ಇನ್ನೂ ಅನೇಕ ತರುಣರಿಗೆ ನಾಟಕದಲ್ಲಿ ಅಭಿರುಚಿ ಬೆಳೆಯಿತು. ಮಹಾರಾಜರ ಪ್ರೋತ್ಸಾಹದಿಂದ ಇಂಗ್ಲಿಷ್ ಸಂಸ್ಕೃತ ನಾಟಕಗಳ ಅನುವಾದಗಳ ಅಭಿನಯ ಯಶಸ್ವಿಯಾಯಿತು. ನಾಟಕದ ತಂಡ ಕಂಪನಿಯಾಗಿ ಬೆಳೆಯಲು ಒಬಿಬ್ಬ ಮುಖ್ಯ ನಟರು ಕಾರಣರಾಗಲೇಬೇಕಷ್ಟೆ. ಸಂಗೀತದಿಂದಲೇ ಗದ್ಯಭಾಗವನ್ನು ಸ್ಪಷ್ಟವಾಗಿ ಅಭಿನಯಪುರ್ವಕವಾಗಿ ನಟಿಸುವುದರಿಂದಲೇ ಜನಮನ ಮೆಚ್ಚಿಸುವುದು ಆಗಿನ ಪದ್ಧತಿ. ಸಂಗೀತದಿಂದ ಜನರನ್ನು ಮೆಚ್ಚಿಸಿದ ಮೈಸೂರಿನ ಮೊಟ್ಟ ಮೊದಲಿನ ನಟರು ಜುಂಜೋಟಿ ರಂಗಾಚಾರ್ಯ. ಒಳ್ಳೆಯ ಶಾರೀರ; ಹಾಡಿನ ಜೊತೆಗೇ ಗಂಭೀರವಾಗಿ ಔಚಿತ್ಯದ ಮೇರೆಯನ್ನು ಎಲ್ಲಿಯೂ ಮೀರದ ಹಾವಭಾವ ವಿಲಾಸವಿನ್ಯಾಸ; ಆ ವಿನ್ಯಾಸವನ್ನು ಎತ್ತಿ ಕಾಣಿಸುವಂಥ ಮನೋಹರವಾದ ಮುದ್ದಾದ, ಮಾಟವಾದ ಶರೀರ, ರೂಪ; ನಾಟಕದಲ್ಲಿ ನಾಯಕನ ಪಾತ್ರವನ್ನು ಅಚ್ಚೊತ್ತಿದಂತೆ ಅಭಿನಯಿಸಿ ತೋರಿಸುವ ಉತ್ಸಾಹ - ಇವು ರಂಗಾಚಾರ್ಯರ ಲಕ್ಷಣಗಳು. ಹಣವಂತರಿಗೂ ಆಚಾರ್ಯರನ್ನು ಕಂಡರೆ ಮೆಚ್ಚು. ಮೈಸೂರಿನ ಸಂತೆ ಪೇಟೆಯ ದೇವಸ್ಥಾನದ ಮುಂದಿನ ಚಪ್ಪರದಲ್ಲಿ ಅವರ ನಾಟಕಮಂದಿರ ವಿತ್ತು. ಅವರು ಜುಂಜೋಟಿ ರಾಗ ಹಾಡುತ್ತಿದ್ದುದು ಅರ್ಧ ಗಂಟೆ. ಆ ಸ್ವರ ಕೇಳಿಸುತ್ತಿದ್ದುದು ಅರ್ಧಮೈಲಿಗೆ. ಕೇಳಿದ ಜನ ರೋಮಾಂಚನಗೊಳ್ಳುತ್ತಿದ್ದರು. ಇವರ ಅನಂತರದವರು ಗೌರೀ ನರಸಿಂಹಯ್ಯ: ಒಳ್ಳೆಯ ನಟರಾಗಿ, ಗಾಯನಪಟುಗಳಾಗಿ ಕಂಪನಿಯ ನಾಯಕರಾಗಿ, ನಟರಿಗೂ ನಾಟಕಕ್ಕೂ ನಿರ್ದೇಶಕ ರಾಗಿ, ವಿಜೃಂಭಿಸಿದರು. ಗೌರೀನರಸಿಂಹಯ್ಯ ನವರಿಗೆ ದೈವದತ್ತವಾದ ಶರೀರ, ಶಾರೀರ; ನಾಯಗಕರಾಗಿ ಒಂದು ಗುಂಪನ್ನು ತಯಾರಿಸಿ ಶಿಸ್ತಿನಿಂದ ನಡೆಸಲು ಬೇಕಾದ ಆತ್ಮಶಕ್ತಿ ಮತ್ತು ಸತ್ತ್ವ ಇದ್ದುವು. ಈ ಸಂಪತ್ತಿನ ಯೋಗ್ಯ ಪ್ರದರ್ಶನದಿಂದಲೇ ಇವರು ನಡೆಸುತ್ತಿದ್ದ ಕಂಪನಿ ಜೀವಂತವಾಗಿತ್ತು.

ವರದಾಚಾರ್ಯರ ಯುಗ[ಬದಲಾಯಿಸಿ]

ಗೌರೀನರಸಿಂಹಯ್ಯನವರ ಶಿಷ್ಯರಲ್ಲಿ ವರದಾಚಾರ್ಯ ಆಗ್ರಗಣ್ಯ. ವರದಾಚಾರ್ಯರು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಓದಿದ್ದವರು. ಚಿಕ್ಕಂದಿನಿಂದಲೂ ಇವರಿಗೆ ನಾಟಕ ನೋಡುವ ಆಸೆ. ನಟರನ್ನು ಅನುಕರಿಸುವ ಹಂಬಲ. ಕ್ರಮೇಣ ಈ ಆಸೆ ಬಲವಾಗಿ ಇವರು ಕಾಲೇಜು ಬಿಟ್ಟು ಗೌರೀನರಸಿಂಹಯ್ಯ ನವರನ್ನು ಗುರುವಾಗಿ ಆರಿಸಿದರು. ಮುಂದೆ ಕೀರ್ತಿವಂತ ನಟನಾಗುವ ಲಕ್ಷಣವನ್ನು ವರದಾಚಾರ್ಯರಲ್ಲಿ ಕಂಡ ಗೌರೀನರಸಿಂಹಯ್ಯನವರು ವರದಾ ಚಾರ್ಯರಿಗೆ ಸಂಗೀತ ಶಾಸ್ತ್ರಾಭ್ಯಾಸ ಮಾಡಿಸಿ, ಅಭಿನಯ ದೊಂದಿಗೆ ಸಂಗೀತವನ್ನೂ ಹಿತಮಿತವಾಗಿ ಜೋಡಿಸುವ ಸೂಕ್ಷ್ಮತೆಯನ್ನು ಕಲಿಸಿದರು. ಅತ್ಯಂತ ಪ್ರತಿಭಾಶಾಲಿ ಗಳಾಗಿದ್ದ ವರದಾಚಾರ್ಯರಿಗೆ ಕೀರ್ತಿಯ ಹೆದ್ದಾರಿ ತೆರೆಯಿತು. ಗೌರೀನರಸಿಂಹಯ್ಯನವರಲ್ಲಿ ಶಿಷ್ಯವೃತ್ತಿ ಮುಗಿದಂತೆ ವರದಾಚಾರ್ಯರು ರತ್ನಾವಳೀ ಥಿಯೇಟ್ರಿಕಲ್ ಕಂಪನಿ ಯನ್ನು ಹುಟ್ಟುಹಾಕಿದರು. ಕಂಪನಿಯ ಆಡಳಿತವನ್ನು ನಿರ್ದುಷ್ಟವಾಗಿ ನಡೆಸಬಲ್ಲ ಕುಶಲತೆ, ನಾಟಕದಲ್ಲಿ ಜೊತೆಗೆ ಬರುವ ನಟವರ್ಗವನ್ನು ತಯಾರಿಸುವ ಸಾಮಥರ್ಯ್‌, ಯಥೋಚಿತವಾಗಿ ಬಾರಿಸುವ ವಾದ್ಯಗಾರರು, ನಾಟಕಕ್ಕೆ ಬೇಕಾದ ಪರದೆಗಳನ್ನು ಬರೆಸುವ ಚಾತುರ್ಯ ಇವೆಲ್ಲ ಆಚಾರ್ಯರಿಗೆ ಕರಗತವಾಗಿದ್ದುವು. ನಾಯಕನ ಪಾತ್ರಕ್ಕೆ ಬೇಕಾದ ಅಂಗಸೌಷ್ಠವ, ಗಾಂಭೀರ್ಯ ಎಲ್ಲ ಅವರಿಗೆ ಒಲಿದಿತ್ತು. ರೂಪಕ್ಕೆ ತಕ್ಕ ಪಾಂಡಿತ್ಯ ಅವರಿಗೆ ಪರಂಪರಾಗತ. ಅವರ ರೂಪ ಪಾಂಡಿತ್ಯ ಘನತೆಗಳು ಮರೆದುದು ಅವರ ಕಂಠಬಲದಿಂದ. 1904ರಲ್ಲಿ ಹೀಗೆ ಅವರಿಂದ ಆರಂಭವಾದ ರತ್ನಾವಳೀ ನಾಟಕ ಕಂಪನಿ ಒಳ್ಳೆಯ ದೆಸೆಯಲ್ಲೆ ಸುಮಾರು ಎರಡು ದಶಕಗಳ ಕಾಲ ಮುನ್ನಡೆಯಿತು. ಈ ಅವಧಿಯನ್ನು ವರದಾಚಾರ್ಯರ ಯುಗವೆನ್ನಬಹುದು.

ವರದಾಚಾರ್ಯರು ತಮ್ಮ ಕಂಪನಿಯಲ್ಲಿ ಅನೇಕಾನೇಕ ನಟರನ್ನು ತಯಾರಿಸಿ ಕೀರ್ತಿಭಾಜನರಾದರು. ವರದಾಚಾರ್ಯರ ಶಿಷ್ಯರು ರಂಗಭೂಮಿಯ ಮೇಲೆ ಬರುತ್ತಾರೆಂದರೆ, ಅವರ ಅಭಿನಯದ ಮಟ್ಟದ ಔನ್ನತ್ಯದ ಬಗ್ಗೆ ಜನತೆಯ ಮನಸ್ಸಿನಲ್ಲಿ ಆಗಲೇ ಒಂದು ನಿಶ್ಚಿತಾಭಿಪ್ರಾಯವಿರುತ್ತಿತ್ತು. ವರದಾಚಾರ್ಯರ ಯುಗದಲ್ಲಿ ಬೋಧಾರಾವ್, ಶಾಮರಾವ್, ಕೃಷ್ಣಮೂರ್ತಿ, ಜಯರಾವ್, ನಾಗೇಂದ್ರರಾವ್, ಮರಿರಾವ್, ದೊಡ್ಡ ಶೇಷಗಿರಿ, ಚಿಕ್ಕ (ಹಾರ್ಮೋನಿಯಂ) ಶೇಷಗಿರಿ, ಶಂಕರನಾರಾಯಣ, ವೆಂಕಟರಾಮು, ನರಸಿಂಹಮೂರ್ತಿ, ನರಸಿಂಹಯ್ಯ ಮುಂತಾದ ಶ್ರೇಷ್ಠ ನಟರು ಬಂದರು. ಆಚಾರ್ಯರು ರಂಗಸ್ಥಳದ ಮೇಲೆ ಕಾಣಿಸಿಕೊಂಡರೆಂದರೆ, ಜನ ಉಸಿರು ಕಟ್ಟಿದಷ್ಟು ನಿಶ್ಯಬ್ದವಾಗಿ ಅವರ ಮಾತು ಹಾಡುಗಳನ್ನು ಆಲಿಸುತ್ತಿದ್ದರು. ಆಚಾರ್ಯರು ನಟಿಸುತ್ತಿದ್ದರೆ ನಾಟಕ ಪ್ರಪಂಚದಲ್ಲಿ ಮೈಮರೆಯುತ್ತಿದ್ದರು. ಹಾಗೆಂದು ಅವರು ನೇಪಥ್ಯಕ್ಕೆ ತೆರಳಿದೊಡನೆ ಆ ಅನುಭವ ಮಾಯವಾಗುತ್ತಿತ್ತೆಂದಲ್ಲ. ಉಳಿದ ನಟರೂ ಜನದ ಮನವನ್ನು ನಾಟಕ ಪುರ್ತಿ ಸೆರೆಹಿಡಿದಿಟ್ಟು ಆಚಾರ್ಯರ ಪ್ರಭಾವ ಪ್ರತಿ ದೃಶ್ಯದಲ್ಲೂ ಮುಂದುವರಿಯುವಂತೆ ನಟಿಸು ತ್ತಿದ್ದರು. ವರದಾಚಾರ್ಯರ ನಾಟಕಕ್ಕೆ ಹೋಗುವುದೆಂದರೆ ಒಂದು ಸಣ್ಣ ಯಾತ್ರೆಯಲ್ಲಿ ಭಾಗವಹಿಸಿದಂತೆ: ಪುಣ್ಯಕ್ಷೇತ್ರದ ದಿವ್ಯದರ್ಶನಕ್ಕೆ ಹೋದಂತೆ. ಹೀಗೆ ಅವರ ನಾಟಕ ಜನತೆಗೆ ರಂಜನೆ ಯೊಂದನ್ನೇ ಒದಗಿಸುವ ವಸ್ತು ವಾಗಿರಲಿಲ್ಲ; ಅದು ಮಿದುಳಿಗೂ ಕೆಲಸ ಕೊಡುತ್ತಿತ್ತು. ಅನೇಕಾನೇಕ ವಿಷಯಗಳನ್ನು ಕುರಿತು ಚಿಂತನೆಗೆ ಅವಕಾಶ ಮಾಡಿಕೊಡುತ್ತಿತ್ತು. ನಾಟಕವೆಂದರೆ ಒಂದು ಊರಿಂದ ಇನ್ನೊಂದು ಊರಿಗೆ ಚಲಿಸಿ ಬುದ್ಧಿ ಕಲಿಸುವ ಜಾಣ್ಮೆಯ ವಿಶ್ವವಿದ್ಯಾ ನಿಲಯ ಎನ್ನಬಹುದಾಗಿತ್ತು. ನಾಟಕವೇ ವಿಶ್ವವಿದ್ಯಾನಿಲಯ ವಾಗಿದ್ದುದು ವರದಚಾರ್ಯರ ಯುಗದ ವೈಶಿಷ್ಟ್ಯ. ವರದಾಚಾರ್ಯರು ಕನ್ನಡ ನಾಟಕ ಅಭಿನಯವೊಂದರಿಂದ ರವೀಂದ್ರನಾಥ ಠಾಕೂರರನ್ನು ಮೆಚ್ಚಿಸಿದರು. ಡಾ. ಆನಿ ಬೆಸಂಟರು ಕೂಡ ಆಚಾರ್ಯರನ್ನು ಪ್ರತಿಭಾನ್ವಿತ ನಟನೆಂದು ಹೊಗಳಿದ್ದರು. ವರದಾಚಾರ್ಯರ ರತ್ನಾವಳೀ ನಾಟಕ ಕಂಪನಿಗೆ ಮಹಾಜನತೆಯ ಆಶ್ರಯವಿತ್ತು. ಅರಮನೆ ಕಂಪನಿಗೆ ರಾಜಾಶ್ರಯವಿತ್ತು. ಆ ಆಶ್ರಯದಲ್ಲಿ ದೇವರಾಜ್, ಸುಬ್ಬಣ್ಣ, ಲಕ್ಷ್ಮೀಪತಿಶಾಸ್ತ್ರಿ, ಶಾಮಣ್ಣ, ಮಲ್ಲಪ್ಪ, ಚಿಕ್ಕ ರಾಮರಾವ್ ಮುಂತಾದವರು ಕೀರ್ತಿವಂತರಾದರು. 19ನೆಯ ಶತಮಾನದ ಅಂತ್ಯದಲ್ಲಿ ಆರಂಭವಾದ ಅರಮನೆ ಕಂಪನಿಯ ಕೀರ್ತಿಯನ್ನು ವರದಾಚಾರ್ಯರ ಕೀರ್ತಿ ಮರುಕಳಿಸುವ ಸ್ಥಿತಿ ಬಂತು. ರತ್ನಾವಳೀ ನಾಟಕ ಕಂಪನಿಗೆ ಆರಂಭವಾದ ಶುಕ್ರದೆಸೆ ಹನ್ನೆರಡು ವರ್ಷಗಳಿಗೂ ಮಿಕ್ಕು ನಡೆದು ಬಂತು. ಹರಿಶ್ಚಂದ್ರ, ದುಷ್ಯಂತ, ಸಂತಾಪಕ ಕೀಚಕ, ಅರ್ಜುನ, ಶಿಶುಪಾಲ, ರಾವಣ, ಹಿರಣ್ಯಕಶಿಪು ಪಾತ್ರಗಳಲ್ಲಿ ವರದಾಚಾರ್ಯರೂ ಹಾಸ್ಯ ಪಾತ್ರಗಳಲ್ಲಿ ವಿದೂಷಕವಾಗಿ ಕೃಷ್ಣಮೂರ್ತಿ ರಾಯರೂ ಭೂದೇವಿ, ನಿರುಪಮ, ಸೀತೆಯರ ಪಾತ್ರಗಳಲ್ಲಿ ನಾಗೇಂದ್ರರಾಯರೂ ಮಗುವಾಗಿದ್ದಾಗ ಪ್ರಹ್ಲಾದ, ಧ್ರುವ, ಲೋಹಿತಾಶ್ವ ಪಾತ್ರಗಳಲ್ಲಿ ಮತ್ತು ದೊಡ್ಡವರಾದ ಮೇಲೆ ವಿದೂಷಕ, ನಂದನಕ ಪಾತ್ರಗಳಲ್ಲಿ ಮರಿರಾಯರೂ ಶಕುಂತಲೆ, ಕಮಲೆ, ವಾಸವದತ್ತೆ, ಕಯಾದು ಪಾತ್ರಗಳಲ್ಲಿ ಬೊಧರಾಯರೂ ವಿಶ್ವಾಮಿತ್ರ ಮುಂತಾದವರ ಪಾತ್ರಗಳಲ್ಲಿ ಶಾಮರಾಯರೂ ನಾರದ, ವಿಜಯವರ್ಮರ ಪಾತ್ರಗಳಲ್ಲಿ ಜಯರಾಯರೂ ಕೀರ್ತಿ ಗಳಿಸಿದರು. ಅರಮನೆ ಕಂಪನಿಯಾಗಿ ಮುಂದೆ ಶಾಕುಂತಲ ಕರ್ನಾಟಕ ನಾಟಕ ಸಭೆ ಮತ್ತು ಚಾಮುಂಡೇಶ್ವರಿ ಕರ್ಣಾಟಕ ಸಭೆಗಳಲ್ಲಿದ್ದಾಗ ಲಕ್ಷ್ಮೀಪತಿ ಶಾಸ್ತ್ರಿಗಳು ವಿದೂಷಕನ ಪಾತ್ರದಲ್ಲೂ ರಾಯಚೂಟಿ, ಚಿಕ್ಕ ರಾಮರಾವ್, ಶ್ರೀಕಂಠಯ್ಯ, ನರಸಿಂಹಯ್ಯ, ರಾಮಕೃಷ್ಣ ಮುಂತಾದವರು ವಿವಿಧ ನಾಯಕ ನಾಯಕಿಯರ ಪಾತ್ರಗಳಲ್ಲೂ ಬೆಳಗಿದರು. ಸುಬ್ಬಣ್ಣನವರ ಮೋಹಿನೀ ಮತ್ತು ಕೃಷ್ಣ, ಮಹಾಲಿಂಗಪ್ಪನವರ ದ್ರೌಪದಿ ಪಾತ್ರ - ಇವು ಅನ್ಯಾದೃಶವಾಗಿದ್ದುವು.

ಗುಬ್ಬಿ ವೀರಣ್ಣನವರ ಯುಗ[ಬದಲಾಯಿಸಿ]

ವರದಾಚಾರ್ಯರ ಯುಗದ ಅನಂತರ ಇನ್ನೊಂದು ಯುಗ ಆರಂಭವಾಯಿತು. ಅದು ಗುಬ್ಬಿವೀರಣ್ಣನವರ ಯುಗ. ಗುಬ್ಬಿ ಕಂಪನಿ ಚಂದ್ರಣ್ಣನವರಿಂದ ವೀರಣ್ಣನವರ ಕೈಗೆ ಬಂದದ್ದೇ ತಡ, ಬೆಂಗಳೂರಲ್ಲಿ ಖ್ಯಾತಿ ಗಳಿಸಿ ಮೈಸೂರಿಗೆ ಬಂದು, ಅಲ್ಲಿಯ ಜನರನ್ನು ಮೆಚ್ಚಿಸಿ ಹಿರಿಯರ ಕಂಪನಿಯ ಜೊತೆಗೆ ಕಿರಿಯ ನಟನಟಿಯರನ್ನು ಕಲೆಹಾಕಿ ಎರಡೂ ಕಂಪನಿಗಳನ್ನು ನಡೆಸಿಕೊಂಡು ಬಂದ ಕೀರ್ತಿ ವೀರಣ್ಣನವರದು. ವೀರಣ್ಣನವರು ಜನರನ್ನು ಅನಾಯಾಸವಾಗಿ ನಗಿಸಬಲ್ಲರು. ಸದಾರಮೆಯ ಕಳ್ಳನ ಪಾತ್ರದಲ್ಲಂತೂ ಇವರನ್ನು ಮೀರಿಸಿ ದವರಿಲ್ಲ. ಉತ್ತಮ ನಟರಾದದ್ದೇ ಅಲ್ಲದೆ ಹಲವಾರು ನಟ ನಟಿಯರನ್ನು ತಯಾರಿಸಿ ಇತರ ನಾಟಕ ಕಂಪನಿಗಳಿಗೆ ಕೊಟ್ಟ ಕೀರ್ತಿ ವೀರಣ್ಣನವರದು. ಕನ್ನಡ ನಾಡು ದಾಟಿ ತಮಿಳು, ತೆಲುಗು, ಮಹಾರಾಷ್ಟ್ರ ಪ್ರಾಂತ್ಯಗಳಲ್ಲೂ ಜಯಭೇರಿ ಬಾರಿಸಿದವರು ವೀರಣ್ಣ. ಚಲನಚಿತ್ರ ರಂಗದಲ್ಲೂ ಜಯಪ್ರದರು. ಇವರಿಂದಾಗಿ ಈ 20-25 ವರ್ಷಗಳಲ್ಲಿ ನೂತನ ದೃಶ್ಯ ಪರಿಕರಗಳು ಬಂದಿವೆ. ನವೀನ ರಂಗಸ್ಥಳಗಳೆದ್ದಿವೆ. ಇವೆಲ್ಲಕ್ಕೂ ವೀರಣ್ಣನವರ ಮೂಲವೆಂದರೆ ಸರಿಯಾದ ಮಾತು. ವೀರಣ್ಣನವರ ಕಂಪನಿ ನಡೆಯುತ್ತಿದ್ದ ಕಾಲದಲ್ಲೆ ಷಹಜಹಾನ್ ನಾಟಕದಲ್ಲಿ ದಾರಾಷಿಕೋನ ಪಾತ್ರವಹಿಸಿ ಕರುಳು ಕರಗಿಸುತ್ತಿದ್ದ ಮಹಮದ್ ಪೀರ್, ಸಂಸಾರ ನೌಕ ನಾಟಕದಲ್ಲಿ ಸಿಂಹ ಮತ್ತು ಡಿಕ್ಕಿ ಮಾಧವರಾವ್, ಚಾಮುಂಡೇಶ್ವರಿ ಕಂಪನಿಯ ದಾನಶೂರ್ಣದಲ್ಲಿ ಕೊಟ್ಟೂರಪ್ಪ, ರಾಜಸೂಯ ಯಾಗದಲ್ಲಿ ಬಸವರಾಜ್ ಸೋದರರು ಮತ್ತು ಗಂಗಾಧರರಾಯರು ಉತ್ತಮ ವರ್ಗದ ನಟರಾಗಿ ಖ್ಯಾತಿಗಳಿಸಿದರು. ಗಂಗಾಧರರಾಯರು ಹಿರಣ್ಯ ಕಶಿಪುವಿನ ಪಾತ್ರವಹಿಸಿ ನಟ ಭಯಂಕರರೆನಿಸಿ ಕೊಂಡವರು. ನಾಗೇಶರಾಯರು ಕಂದವೃತ್ತಗಳ ಹಾಡಿಕೆಯಲ್ಲಿ ವರದಾಚಾರ್ಯರಿಗಿಂತ ಒಂದು ಕೈ ಮೇಲೆನಿಸಿಕೊಂಡರು.

ಮಹಿಳಾ ವೃಂದದವರ ಪೈಕಿ ಮಳವಳ್ಳಿ ಸುಂದರಮ್ಮನವರು ಕಾಳಿದಾಸ ನಾಟಕದಲ್ಲಿ ರಾಜಕುಮಾರಿಯ ಪಾತ್ರದಲ್ಲೂ ಲಕ್ಷ್ಮೀಬಾಯಿಯವರು ಭೂಕೈಲಾಸದಲ್ಲಿ ಪಾರ್ವತಿ ಮಂಡೋದರಿಗಳ ಪಾತ್ರಗಳಲ್ಲೂ ಜಯಮ್ಮನವರೂ ಸುಂದರಮ್ಮನವರೂ ವೀರಣ್ಣನವರ ಜೊತೆಗೆ ಅನೇಕಾನೇಕ ನಾಯಕಿಯರ ಪಾತ್ರಗಳಲ್ಲೂ ವಿಜೃಂಭಿಸಿದ್ದಾರೆ.

ಇದೇ ಅವಧಿಯಲ್ಲಿ ಉತ್ತರ ಕರ್ನಾಟಕದಿಂದ ಮೈಸೂರು ಕಡೆ ಬಂದು ಒಂದೊಂದು ನಾಟಕವನ್ನೂ ಹತ್ತಿಪ್ಪತ್ತು ಬಾರಿ ಜನತೆಗೆ ತೋರಿಸಿದರೂ ಇನ್ನೂ ಒಮ್ಮೆ ನೋಡಬೇಕಾದುದು ಎನ್ನಿಸುವಂತೆ ಅಭಿನಯಿಸಿದ ವಾಮನರಾವ್ ಮಾಸ್ತರರು ಒಬ್ಬ ಕೀರ್ತಿವಂತ ನಟ. ಅವರ ಜೊತೆಗೇ ಗಂಗೂಬಾಯಿ ಗುಳೇದಗುಡ್ಡ ಅವರು ಸತಿ ಸಕ್ಕೂಬಾಯಿ ಪಾತ್ರದಲ್ಲಿ ಜನರನ್ನು ಮೈಮರೆಸುತ್ತಿದ್ದರು.

ಕಂಪನಿಗಳು[ಬದಲಾಯಿಸಿ]

ಗೌರೀನರಸಿಂಹಯ್ಯನವರಿಗಿಂತಲೂ ಮುಂಚೆ, ಅಂದರೆ 19ನೆಯ ಶತಮಾನದ ಕೊನೆಯ ಎರಡು ದಶಕಗಳ ಅವಧಿಯಲ್ಲಿ, ಕೆಲವು ಸಾಹಸಿಗಳು ಕಂಪನಿಗಳನ್ನು ಕಟ್ಟಿ ನಡೆಸಿದ ದಾಖಲೆಗಳು ಇವೆ. ಆದರೆ ಈ ಕಂಪನಿಗಳು ಒಬ್ಬೊಬ್ಬ ನಟರ ಅದೃಷ್ಟವನ್ನು ಮಾತ್ರ ಅವಲಂಬಿಸಿಕೊಂಡು ಬೆಳೆದುವು, ಕ್ಷೀಣಿಸಿದುವು, ಅಳಿದೂ ಹೋದುವು. ಅರಮನೆ ಕಂಪನಿಯ ಹುಟ್ಟಿನೊಂದಿಗೇ, ಬುಳ್ಳಪ್ಪ (1881) ರಸಿಕ ಮನೋಲ್ಲಾಸಿನೀ-ನಾಟಕ ಸಭಾದ ಪೇರಿ ಶಾಮ ಅಯ್ಯಂಗಾರ್ (1884) ಗೊಲ್ಲರ ಪೇಟೆಯ ನಾಟಕ ಕಂಪೆನಿಯ ನಟರು. "ಎಂ.ಎಲ್.ಶ್ರೀಕಂಠೇಶಗೌಡ" ಅವರು ೧೮೯೫ರಲ್ಲಿ "ಶ್ರೀಕಂಠೇಶ್ವರ ಕರ್ನಾಟಕ ನಾಟಕ ಸಭಾ" ಎನ್ನುವ ನಾಟಕ ಮಂಡಲಿಯನ್ನು ಸ್ಥಾಪಿಸಿದರು.ಸುರಭಿ ಮತ್ತು ವಿದ್ಯಾದಾಯಿನಿ ಮಾಸಪತ್ರಿಕೆಗಳನ್ನು ಪ್ರಾರಂಭಿಸಿದರು.ಪ್ರತಾಪ ರುದ್ರದೇವ,ಪ್ರಮಮೀಳಾರ್ಜುನೀಯಂ,ರಾಮವರ್ಮ -ಲೀಲಾವತಿ ,ಇವು ರೂಪಾಂತರ ನಾಟಕಗಳು. ಎಂ.ಎಲ್. ಶ್ರೀಕಂಠೇಶಗೌಡ ಇವರೆಲ್ಲ ನಟರಾಗಿದ್ದುದರ ಜೊತೆಗೆ ಕಂಪನಿಗಳನ್ನೂ ಕಟ್ಟಿ ನಡೆಸಿದರು. 1920ರ ವರೆಗೂ ಈ ಕಂಪನಿಗಳು ಮತ್ತು ಈ ನಟರ ಹೆಸರುಗಳು ಅಲ್ಲಲ್ಲಿ ಕೇಳಿಬರುತ್ತಿದ್ದುವು.

ಅರಮನೆ ಕಂಪನಿಗೆ ಸವಾಲು ಎಂಬಂತೆ ಬೆಳೆದ ರತ್ನಾವಳೀ ಕಂಪನಿ ಆರಂಭಿಸಿದವರು ಮಂಡ್ಯಂ ರಂಗಾಚಾರ್ಯ. ಸುಶಿಕ್ಷಿತರಾದ ವಕೀಲರ, ಅಧಿಕಾರಿಗಳ ನೆರವಿನಿಂದ ಈ ಕಂಪನಿ ಕೆಲಕಾಲ ಬೆಳೆಯಿತು. ಆದರೆ ಮಂಡ್ಯಂ ಅರಮನೆಕಂಪನಿ ಸೇರಿಬಿಟ್ಟರು. ರಂಗಾಚಾರ್ಯರ ಜೊತೆಗೆ ಸ್ತ್ರೀಪಾತ್ರಗಳನ್ನು ಬಹು ಯಶಸ್ವಿಯಾಗಿ ಅಭಿನಯಿಸುತ್ತಿದ್ದರೂ ಗೌರೀನರಸಿಂಹಯ್ಯನವರು ಕಂಪನಿಯ ಅವಶೇಷವನ್ನು ಕಲೆಹಾಕಿ 1886ರಲ್ಲಿ ಸರಸ್ವತೀ ವಿಲಾಸ ನಾಟಕ ಸಭಾ ಸ್ಥಾಪಿಸಿ ನಡೆಸಿದರು. 1889ರಲ್ಲಿ ನಾಟಕರಂಗದಲ್ಲಿ ಕಾಲಿಟ್ಟ ವರದಾಚಾರ್ಯರು ಇದನ್ನು 1904ರಲ್ಲಿ ರತ್ನಾವಳೀ ನಾಟಕ ಕಂಪನಿಯೆಂದೇ ಪುನರುಜ್ಜೀವನಗೊಳಿಸಿದರು. 1912ರಲ್ಲಿ ದಕ್ಷಿಣ ಭಾರತದ ಈರೋಡು, ಕೊಯಮತ್ತೂರು, ಕಾರೈಕುಡಿ, ಸೇಲಂ, ಕುಂಭಕೋಣಂ, ಮಂಗಳೂರು, ಉಡುಪಿ, ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಬಳ್ಳಾರಿಗಳಲ್ಲಿ ಪ್ರವಾಸ ಮಾಡಿದರು. ತಮ್ಮ ಎರಡು ದಶಕಗಳಿಗಿಂತಲೂ ಹೆಚ್ಚಿನ ರಂಗಭೂಮಿಯ ಸೇವೆಯಲ್ಲಿ 50ಕ್ಕೂ ಮಿಕ್ಕು ಮೊದಲ ವರ್ಗದ ನಟರನ್ನು ತಯಾರಿಸಿ ರಂಗಭೂಮಿಗೆ ಕಾಣಿಕೆಯಾಗಿ ಕೊಟ್ಟರು. ಕರ್ನಾಟಕದಲ್ಲಿ ಸುಶಿಕ್ಷಿತ ಗೌರವಯುತ ನಾಟಕರಂಗ ಎಂಬುದೇ ಇಲ್ಲದಿದ್ದಾಗ ವರದಾಚಾರ್ಯರು ನಾಯಕನಾಗಿ, ಕೃಷ್ಣಮೂರ್ತಿ ರಾಯರು ವಿದೂಷಕನಾಗಿ ಕನ್ನಡಕ್ಕೆ ಅದನ್ನು ರಚಿಸಿಕೊಟ್ಟರು. ಚಾಮುಂಡೇಶ್ವರೀ ಕರ್ನಾಟಕ ನಾಟಕ ಸಭೆಯ ನೇತಾರ ಎನ್. ಸುಬ್ಬಣ್ಣ (1919-1946). ಅನಂತರ ಅಲ್ಲಿಗೆ ತೆರಳಿ ಯಾಜಮಾನ್ಯ ವಹಿಸಿದ ಆರ್. ನಾಗೇಂದ್ರರಾವ್ ಅವರ ಹೆಸರು ಮೈಸೂರಿನಲ್ಲಿ ಮನೆಮಾತು. ಚಂದ್ರಕಲಾ ನಾಟಕಮಂಡಳಿ ಸ್ಥಾಪಿಸಿದ ಮಹಮದ್ ಪೀರ್ ಅಪೂರ್ವ ಪ್ರತಿಭಾವಂತರು. ಇವರ ಜೊತೆಗೆ ಚಂದ್ರಮ್ಮ ತೇಜೋವಂತ ನಟಿ. ಪೀರ್ ಕಂಪನಿ ಬಿ. ಪುಟ್ಟಸ್ವಾಮಯ್ಯನವರ ಷಹಜಹಾನ್ ನಾಟಕದಲ್ಲಿ ಬಹಳ ಕೀರ್ತಿ ಗಳಿಸಿತು. ಸುಬ್ಬಣ್ಣ, ನಾಗೇಂದ್ರರಾಯರ ಕಂಪನಿಯ ಜಿ. ನಾಗೇಶರಾವ್, ಟಿ. ಮಲ್ಲಪ್ಪ, ಕೃಷ್ಣಮೂರ್ತಿ, ಮರಿರಾವ್, ಬಿ. ರಾಚಪ್ಪ, ಕೊಟ್ಟೂರಪ್ಪ ಮುಂತಾದವರು ನಾಟಕ ವೃತ್ತಿಗೊಂದು ಭೂಷಣವಾಗಿದ್ದರು. ಮಹಮದ್ ಪೀರರ ಜೊತೆಗೆ ಅಭಿನಯಿಸಿ ಎಚ್.ಎಲ್.ಎನ್. ಸಿಂಹ, ಡಿಕ್ಕಿ ಮಾಧವರಾವ್ ಮತ್ತು ಎಂ.ವಿ. ರಾಜಮ್ಮ ಹೆಸರು ಗಳಿಸಿದರು.[೧]

ಅನಂತರ ಸಿ.ಬಿ. ಮಲ್ಲಪ್ಪನವರ ಶ್ರೀ ಚಂದ್ರಮೌಳೇಶ್ವರ ನಾಟಕ ಸಭೆ ಕಬೀರದಾಸ್, ತುಕಾರಾಮ್, ತುಲಸೀದಾಸ್ ನಾಟಕಗಳನ್ನಾಡಿ, ಮಲ್ಲಪ್ಪನವರಿಗೆ ಅಭಿನವ ಭಕ್ತಶಿರೋಮಣಿ ಎಂಬ ಪ್ರಶಸ್ತಿ ತಂದಿತ್ತಿತು. ಇವರಾದ ಮೇಲೆ ಮತ್ತೆ ನಾಟಕ ರಂಗಕ್ಕೆ ಹೊಸ ಹಾದಿ ಹಾಕಿಕೊಟ್ಟು ಜಯ ಗಳಿಸಿದವರು ಹಿರಣ್ಣಯ್ಯ. ಬೆಂಗಳೂರಿನ ಸುಗುಣಬೋಧಕ ಸಮಾಜ (1932), ತುಮಕೂರು ಟಿ. ಸೀತಾರಾಮಯ್ಯನವರ ಸೀತಾಮನೋಹರ ಕಂಪನಿ (1934), ಗುಬ್ಬಿ ಕಂಪನಿ (1935), ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಗಳೇ ಮುಂತಾದ ನಾಟಕ ಸಂಸ್ಥೆಗಳಲ್ಲಿ 15 ವರ್ಷಕಾಲ ಪಾಲುದಾರರಾಗೋ ಸಂಬಳದಾರರಾಗೋ ಬಿಟ್ಟಿಯಾಗೋ ಕೆಲಸ ಮಾಡಿ ಪುರ್ಣಾನುಭವ ಪಡೆದ ಹಿರಣ್ಣಯ್ಯನವರು ಎಚ್ಚಮನಾಯಕ, ಆಶಾಪಾಶ ನಾಟಕಗಳಿಂದ ಹೆಸರಾಂತವರಾಗಿದ್ದರು. 1942ರಲ್ಲಿ ತಮ್ಮದೇ ಆದ ಮಿತ್ರಮಂಡಳಿ ಸ್ಥಾಪಿಸಿದರು. 1954ರ ವರೆಗೆ 12 ವರ್ಷಕಾಲ ನಾಟಕರಂಗದಲ್ಲಿ ತಮ್ಮ ಧ್ವಜ ಸ್ಥಾಪಿಸಿ ಮೆರೆದರು. ಸ್ವಂತ ಕಲ್ಪನೆಯಾದ ದೇವದಾಸಿಯನ್ನು ಇವರು ಪ್ರದರ್ಶಿಸಿದ್ದು 1944ರಲ್ಲಿ. 1 ವರ್ಷ 22 ದಿನಗಳ ಕಾಲ-ಎಂದರೆ 387 ಬಾರಿ-ದೇವದಾಸಿ ಪ್ರದರ್ಶಿತವಾಯಿತು. ಜೊತೆಗೆ ಪಂಗನಾಮ ಮತ್ತು ಮಖಮಲ್ ಟೋಪಿ ಯಶಸ್ವಿ ಯಾದುವು. ಕೈಲಾಸಂರಂತೆ ಆಡುಭಾಷೆ ಯನ್ನು ನಾಟಕದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿದವರಲ್ಲಿ ಹಿರಣ್ಣಯ್ಯ ಅಗ್ರಗಣ್ಯ. ಇವರ ಜೊತೆಗೇ ಕನ್ನಡ ರಂಗಭೂಮಿಯ ಸೇವೆ ನಡೆಸಿದವರೆಂದರೆ ಸುಬ್ಬಯ್ಯ ನಾಯ್ಡು. ಎಂ.ಸಿ. ಮಹಾದೇವಸ್ವಾಮಿ, ಎ.ಎನ್. ಶೇಷಾಚಾರ್ಯ ಮೊದಲಾದವರು. ಕನ್ನಡ ನಾಟಕವನ್ನು ಇಡೀ ದಕ್ಷಿಣ ಭಾರತದಲ್ಲೇ ಅತ್ಯಂತ ಚೇತೋಹಾರಿಯಾಗಿಸುವುದಕ್ಕೆ ಶ್ರಮಿಸಿದರು. ಮೇಲ್ಕಂಡವರಲ್ಲದೆ ಗರೂಡ ಸದಾಶಿವರಾವ್, ವಾಮನರಾವ್ ಮಾಸ್ತರ್, ಹಂದಿಗನೂರು ಸಿದ್ಧರಾಮಪ್ಪ, ಬಸವರಾಜ ಮನ್ಸೂರ್, ಗಂಗೂಬಾಯಿ ಗುಳೇದಗುಡ್ಡ, ಪಂತುಲು, ಕರೆನಾಡಿನ ರಂಗನಾಥ ಭಟ್ಟ ಮತ್ತು ಕೆ. ಸೀತಾರಾಮಶಾಸ್ತ್ರಿ; ಬಳ್ಳಾರಿಯಲ್ಲಿ ಟಿ. ರಾಘವಾಚಾರಿ ಮತ್ತು ವಟ್ಟಂ ಶಾಮರಾವ್. 1890ರಿಂದ ಪ್ರಯೋಗಯುಗವಾಗಿಯೂ 1900ರ ಸುಮಾರಿನಿಂದ ಸ್ವರ್ಣಯುಗವಾಗಿಯೂ 1950ರಿಂದ ಹತ್ತು ವರ್ಷಗಳ ಕಾಲ ಗೊಂದಲಸ್ಪರ್ಧೆಯ ಯುಗವಾಗಿಯೂ 1950ರಿಂದ ಈಚೆಗೆ ಸ್ವಾತಂತ್ರ್ಯದ ಸ್ಫೂರ್ತಿಯಿಂದ ಹೊಮ್ಮಿದ ನವಯುಗದ ಪ್ರತೀಕವಾಗಿಯೂ ಕನ್ನಡ ರಂಗಭೂಮಿಯ ಇತಿಹಾಸ ಬೆಳೆದಿದೆ.

ಇತರ ಕೆಲವು ನಟರು[ಬದಲಾಯಿಸಿ]

ಎಳೆತನದಲ್ಲಿ ರಂಗಭೂಮಿಯಿಂದ ಆಕರ್ಷಿತರಾದ ಹಂದಿಗನೂರು ಸಿದ್ಧರಾಮಪ್ಪನವರ ದೈವದತ್ತ ವರವೆಂದರೆ ಅವರ ಕಂಠ. ಧ್ವನಿಯನ್ನು ಏರಿಸಿ ಇಳಿಸುವ ಕಲೆ ಅವರಿಗೆ ಲೀಲಾಜಾಲ. ತೂಕ ಮಾಡಿ ಮಾತನಾಡಿ ರಂಗವನ್ನೂ ಪ್ರೇಕ್ಷಕರನ್ನೂ ತಮ್ಮ ಕಿರುಬೆರಳ ಮೇಲಾಡಿಸುವ ಪ್ರತಿಭೆ ಅವರದು. ಅವರ ಭೀಷ್ಮ, ಕರ್ಣ ಪಾತ್ರಗಳಂತೂ ಆ ಮಹಾವ್ಯಕ್ತಿಗಳನ್ನು ಕಣ್ಣ ಮುಂದೆ ಕಡೆದು ನಿಲ್ಲಿಸುವಂತಿತ್ತು. ಸದಾಶಿವರಾವ್ ಗರೂಡರಿಂದ ಶಿಕ್ಷಣ ಪಡೆದ ಪ್ರತಿಭಾವಂತ ನಟರು ಬಿಜಾಪುರದ ಮಧ್ವರಾಜ ಉಮರ್ಜಿ. ಎಳೆತನದಲ್ಲೇ ರಂಗಭೂಮಿಗೆ ಕಾಲಿಟ್ಟು ಹತ್ತು ವರ್ಷ ಸೇವೆ ಸಲ್ಲಿಸಿದರು. ಹರಿಶ್ಚಂದ್ರ, ಅರ್ಜುನ, ಕೃಷ್ಣರ ಪಾತ್ರಗಳಲ್ಲಿ ಮೇಲುಗೈಯಾಗಿದ್ದ ಇವರು ತಮ್ಮ 38ನೆಯ ವಯಸ್ಸಿನಲ್ಲೇ ತೀರಿಕೊಂಡರು. 1947ರಲ್ಲಿ ಹಂದಿಗನೂರರ ಮರಣ, 1954ರಲ್ಲಿ ಉಮರ್ಜಿಯವರ ಮರಣ - ಇವುಗಳಿಂದ ರಂಗಭೂಮಿಯ ಎರಡು ತಾರೆಗಳು ಕಣ್ಮರೆಯಾದಂತಾಯಿತು.

ಸುಬ್ಬಯ್ಯನಾಯ್ಡು ಇನ್ನೊಬ್ಬ ಸಮರ್ಥನಟ. ಭೂಕೈಲಾಸ ನಾಟಕದ ರಾವಣನ ಪಾತ್ರ ಅವರಿಗೆ ಚೆನ್ನಾಗಿ ಒಪ್ಪುತ್ತಿತ್ತು. ಚಿಕ್ಕಂದಿನಲ್ಲಿ ದನ ಕಾದು, ಬಾಲ್ಯದಲ್ಲಿ ಕೈಗೆಲಸದ ಕೂಲಿಯ ಕಾಳು ತಿಂದು ತಾಯಿಯನ್ನೂ ಸಾಕಿ, ಬೆಳೆದಂತೆ ಮರಗೆಲಸ ಮಾಡುತ್ತ, ಒಮ್ಮೊಮ್ಮೆ ಕೊಟ್ಟಣ ಕುಟ್ಟಿ ಹೊಟ್ಟೆ ಹೊರೆದು ಸಂಕಟದಿಂದ ಬೆಳೆದ ಜೀವ ಅದು. ಅನಂತರ ಸಂಗೀತದ ಗೀಳು, ನಾಲ್ಕಾಣೆ ನಾಟಕಕ್ಕೆಂದು ಕೂಲಿ ಮಾಡಿ ನಾಟಕದಲ್ಲಿ ಪಾತ್ರ ವಹಿಸಿ, ನಾಟಕದ ಗೀಳೂ ವೃದ್ಧಿಯಾಗಿ ಗುಬ್ಬಿ ಕಂಪನಿ ಸೇರಿದರು. ರಾಜಭಕ್ತಿಯಲ್ಲಿ ವಿಕ್ರಾಂತನ, ಕರ್ನಾಟಕ ಸಾಮ್ರಾಜ್ಯದಲ್ಲಿ ತಿರುಮಲರಾಯನ, ಸ್ವಾಮಿನಿಷ್ಠೆಯಲ್ಲಿ ಶಿವಾಜಿಯ ಪಾತ್ರಗಳನ್ನು ನಿರ್ವಹಿಸಿ ನಾಟಕದಿಂದ ನಾಟಕಕ್ಕೆ ತಮ್ಮ ಕಲೆಯನ್ನು ಬೆಳೆಸಿಕೊಂಡು ದಕ್ಷಿಣ ಭಾರತ ತಮ್ಮ ಕಡೆಗೆ ನೋಡುವಂತೆ ಮಾಡಿಕೊಂಡವರು ಇವರು. ಪಾತ್ರದ ಔನ್ನತ್ಯಕ್ಕೆ ತಕ್ಕಂತೆ ಧ್ವನಿ ಏರಿಸಿ, ಇಳಿಸಿ, ಸ್ಪಷ್ಟವಾದ ಉಚ್ಚಾರಣೆಯಿಂದ ಕೂಡಿದ ಇವರ ಕನ್ನಡ ನಾಟಕವನ್ನು ನೋಡಿ ತಮಿಳರೂ ತಲೆದೂಗುವಂತೆ ಮಾಡಿದರು. (ಬಿ.ಎಸ್.ಆರ್.ಆರ್.)

ಉಲ್ಲೇಖಗಳು[ಬದಲಾಯಿಸಿ]