ಒಬೆಲಿಸ್ಕ್
ಒಬೆಲಿಸ್ಕ್: ಚಪ್ಪಟೆಯಾದ ನಾಲ್ಕು ಪಕ್ಕಗಳಿದ್ದು, ಮೇಲಕ್ಕೆ ಹೋದಂತೆಲ್ಲ ಸಪುರವಾಗಿ ತುತ್ತು ತುದಿಯಲ್ಲಿ ಪಿರಮಿಡ್ಡಿನಂತಿರುವ ಸ್ತಂಭ.
ಈಜಿಪ್ಟಿನ ಹಳೆಯ ಪ್ರಭುತ್ವದಲ್ಲಿ ಗೋರಿಯ ಸ್ಮಾರಕವಾಗಿ ಇದನ್ನು ನೆಡುತ್ತಿದ್ದರು. ದೊರೆಗಳ ಜೈತ್ರಯಾತ್ರೆಯೇ ಮುಂತಾದ ಸಾಹಸ ಕೃತಿಗಳನ್ನು ಬಣ್ಣಿಸುವ ಚಿತ್ರಲಿಪಿಗಳನ್ನು ಇವುಗಳ ಮೇಲೆ ಕೆತ್ತಲಾಗುತ್ತಿತ್ತು. ಎಲಿಫೆಂಟೈನಿಯಲ್ಲಿ ಸಾಬುಯಿಯ ಗೋರಿಯ ಮುಂದೆ ಎರಡು ಸ್ತಂಭಗಳನ್ನು ನೆಡಲಾಗಿತ್ತು. ಥೀಬ್ಸಿನಲ್ಲಿ ದೊರೆಗಳ ಗೋರಿಗಳ ಮುಂದೆ ಒಂದೊಂದೇ ಸ್ತಂಭ ನೆಡುವ ಪದ್ಧತಿ ಬಂತು. ಉದ್ಯಾನಗಳಲ್ಲೂ ಅರಮನೆಗಳ ಮುಂದೂ ಇವನ್ನು ಸ್ಥಾಪಿಸುತ್ತಿದ್ದರು. ಇವು ಸಾಮಾನ್ಯವಾಗಿ ಅಷ್ಟೇನೂ ಎತ್ತರವಾಗಿರುತ್ತಿರಲಿಲ್ಲ. ಮೊದಲು ನೆಟ್ಟಿದ್ದ ಸ್ಥಳದಲ್ಲೆ ಈಗಲೂ ನಿಂತಿರುವ ಅತ್ಯಂತ ಪುರಾತನ ಸ್ತಂಭವೆಂದರೆ ಪುರಾತನ ಹೀಲಿಯಾಪೊಲಿಸ್ನ ಅಲ್ಮಟಾರಿಯದಲ್ಲಿರುವ ಒಂದನೆಯ ಸೆನಸ್ರೆಟನ ಸ್ತಂಭ. ಇದರ ಎತ್ತರ 21 ಮೀ. ಅನಂತರದ ಸ್ತಂಭಗಳಂತೆ ಇದು ಮೇಲೆ ಬಲು ಹೆಚ್ಚಾಗಿ ಸಪುರವಾಗಿಲ್ಲ.
ಹೊಸ ಪ್ರಭುತ್ವ ಕಾಲದಲ್ಲಿ ಒಬೆಲಿಸ್ಕ್‌ಗಳಿಗೆ ದೇವಸ್ಥಾನದಲ್ಲಿ ಪ್ರಮುಖಸ್ಥಾನ ಲಭ್ಯವಾಯಿತು. 18ನೆಯ ಮನೆತನದ ಕಾಲದ ದೇವಸ್ಥಾನದಲ್ಲಿದ್ದ ಭಾಗಗಳು ಮುಖ್ಯವಾಗಿ ಮೂರು: ಮಹಾದ್ವಾರ, ಮುಖ ಮಂಟಪ ಮತ್ತು ಆರಾಧನ ಮಂದಿರ. ಕಾರ್ನಾಕಿನ ಅಮಾನ್ ದೇವಸ್ಥಾನದ ರಚನೆ ಈ ಬಗೆಯದು. ಈ ಸ್ತಂಭಗಳನ್ನು ಕಡೆದು ನಿಲ್ಲಿಸಲು ಏಳು ತಿಂಗಳುಗಳ ಕಾಲ ಬೇಕಾಯಿತೆಂದು ಅಲ್ಲಿನ ಒಂದು ಶಾಸನ ತಿಳಿಸುತ್ತದೆ. ಇಲ್ಲೂ ಒಂದೇ ಜೊತೆ ಸ್ತಂಭಗಳನ್ನು ನಿಲ್ಲಿಸುವ ಪದ್ಧತಿಯಿತ್ತು. ಈ ಪೈಕಿ ಒಂದನೆಯ ಥಟ್ಮೋಸ್ ನಿರ್ಮಿಸಿದ ಮಹಾದ್ವಾರದ ಮುಂದೆ ನಿಲ್ಲಿಸಿದ ಸ್ತಂಭಗಳೇ ಅತ್ಯಂತ ಪುರಾತನ. ಇವುಗಳ ಪೈಕಿ ಒಂದು ಇನ್ನೂ ಹಾಗೆಯೇ ನಿಂತಿದೆ. ಅದು 80 ಅಡಿಗಳಿಗಿಂತಲೂ ಮಿಗಿಲಾಗಿ ಎತ್ತರವಾಗಿದೆ; ಇದರ ಬುಡ ಆರು ಅಡಿಗಳ ಚಚ್ಚೌಕ; ತೂಕ 325 ಟನ್.
ಹಳೆಯ ಒಬೆಲಿಸ್ಕ್‌ಗಳನ್ನು ಸಾಮಾನ್ಯವಾಗಿ ನಿರ್ಮಿಸುತ್ತಿದ್ದದ್ದು ಸ್ಮರಣಾರ್ಥವಾಗಿ. ಆದರೆ ಸೂರ್ಯಪುಜೆಗೂ ಇವಕ್ಕೂ ಸಂಬಂಧವಿದೆಯೆಂದು ತೋರುತ್ತದೆ. ಗೀಜ಼ದ ಬಳಿಯ ಅಬೋಸಿರ್ನಲ್ಲಿನ ಒಂದು ದೇಗುಲದಲ್ಲಿ ಮಧ್ಯದ ಪುಜಾಸ್ಥಾನದಲ್ಲಿ ತಲೆ ಕೊಚ್ಚಿದ ಪಿರಮಿಡ್ ಮಾದರಿಯ ವೇದಿಕೆಯ ಮೇಲೆ ಒಂದು ಒಬೆಲಿಸ್ಕ್ ಇದೆ. ಅದರ ಮುಂದೆ ಬಲಿಪೀಠ. ಇಂಥ ಸ್ತಂಭಗಳ ಪಿರಮಿಡಾಕಾರದ ತುದಿಯ ಮೇಲೆ ಬಿಸಿಲನ್ನು ಪ್ರತಿಫಲಿಸುವ ಗುಣವುಳ್ಳ ಬೆಳ್ಳಿ-ಚಿನ್ನ ಮಿಶ್ರಿತ ಲೋಹದ ಕವಚ ತೊಡಿಸಲಾಗುತ್ತಿತ್ತು. ಎಲಿಫೆಂಟೈನಿಯಲ್ಲಿ ಸಿಕ್ಕಿರುವ ಅನೇಕ ಸಣ್ಣ ಒಬೆಲಿಸ್ಕ್‌ಗಳು ಸೂರ್ಯಮತಸಂಬಂಧವಾದ ದೇವಮಂದಿರಗಳಲ್ಲಿದ್ದಂಥವು. ದೊಡ್ಡ ಒಬೆಲಿಸ್ಕ್‌ಗಳನ್ನು ನಿರ್ಮಿಸಲು ಈಜಿಪ್ಟಿನ ಆಸ್ವಾನಿನ ಗ್ರ್ಯಾನೈಟನ್ನು ಬಳಸಲಾಗುತ್ತಿತ್ತು. ಅಲ್ಲಿ ನಿರ್ಮಿಸಿದ ಸ್ತಂಭಗಳನ್ನು ನೈಲ್ ನದಿಯ ಮೇಲೆ ನಿಯೋಜಿತ ಸ್ಥಳಕ್ಕೆ ಸಾಗಿಸುವುದಕ್ಕೆಂದೇ ವಿಶಿಷ್ಟವಾದ ದೋಣಿಗಳನ್ನು ತಯಾರಿಸುತ್ತಿದ್ದರು.
ಈಜಿಪ್ಟಿಗೂ ಕೆನಾನ್ಗೂ ಏರ್ಪಟ್ಟ ನಿಕಟ ಸಂಬಂಧದ ಫಲವಾಗಿ ಕೆನಾನೈಟರೂ ಫಿನಿಷಿಯನ್ನರೂ ಒಬೆಲಿಸ್ಕ್‌ಗಳನ್ನು ನಿರ್ಮಿಸಲಾರಂಭಿಸಿದರು. ಲೆಬನಾನಿನ ಬಿಬ್ಲಾಸಿನ ದೇವಸ್ಥಾನದಲ್ಲಿ ಇವುಗಳ ಒಂದು ಸಾಲೇ ಇತ್ತು. (2ನೆಯ ಸಹಸ್ರಮಾನ) ಅಸ್ಸಿರಿಯನ್ನರು ನಿರ್ಮಿಸುತ್ತಿದ್ದ ಒಬೆಲಿಸ್ಕ್‌ಗಳು ಕುಳ್ಳು; ಅವುಗಳ ಶಿರೋಭಾಗ ಮೆಟ್ಟಿಲಿನಂತಿತ್ತು. ಈ ಭಾಗದಲ್ಲಿ ಇತಿಹಾಸದ ಒಂದು ಸನ್ನಿವೇಶವನ್ನೊ ಘಟನೆಯನ್ನೊ ನಿರೂಪಿಸಲಾಗುತ್ತಿತ್ತು. ಇನ್ನೊಂದು ಬಗೆಯ ಒಬೆಲಿಸ್ಕ್ ಸಹ ಇತ್ತು. ಅದರ ಎರಡು ಪಕ್ಕಗಳು ಕಿರಿದಾಗಿದ್ದು ತುದಿ ಬೋಳಾಕಾರ. ಒಂದನೆಯ ಸೆನ್ವೋರ್ಸಿಗೆ ಸಂಬಂಧಿಸಿದ ಅಂಥ ಒಂದು ಒಬೆಲಿಸ್ಕ್, ಕೆತ್ತನೆಯ ಕೆಲಸದಿಂದಲೂ ಶಾಸನದಿಂದಲೂ ಕೂಡಿದ್ದು ಫಾಯೂಮಿನ ಎಬ್ಜೀಗಿನಲ್ಲಿ ಇದೆ. ಅಬಿಸೀನಿಯದಲ್ಲಿ ಅದ್ಭುತ ರೀತಿಯ, ಕಲಾತ್ಮಕವಾದ ಒಬೆಲಿಸ್ಕ್ ಮಾದರಿಯ ಸ್ಮಾರಕಗಳ ಶ್ರೇಣಿಯೇ ಇದೆ. ಇಸ್ರೇಲಿನ ಜೆಹು ದೊರೆಯ ಶರಣಾಗತಿಯನ್ನು ಚಿತ್ರಿಸುವ, ಪ್ರ.ಶ.ಪು, 9ನೆಯ ಶತಮಾನದ ಸ್ತಂಭ ಒಂದು ಉದಾಹರಣೆ. ಇದು ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿದೆ.
ಗ್ರೀಕ್-ರೋಮನ್ ಪದ್ಧತಿಯಲ್ಲಿ ಈಜಿಪ್ಟಿನ ಒಬೆಲಿಸ್ಕ್‌ಗಳ ನಿರ್ಮಾಣ ಮುಂದುವರಿಯಿತು. ರೋಮ್ ಚಕ್ರಾಧಿಪತ್ಯದ ಕಾಲದಲ್ಲಿ ಅನೇಕ ಒಬೆಲಿಸ್ಕ್‌ಗಳನ್ನು ಇಟಲಿಗೆ ಸಾಗಿಸಲಾಯಿತು. ಒಂದನ್ನು ಮೊದಲನೆಯ ಥೀಯೊಡೋಷಿಯಸ್ ಕಾನ್ಸ್ಟಾಂಟಿನೋಪಲಿಗೆ ಸಾಗಿಸಿದ. ಅತಿಶಯ ರೀತಿಯಲ್ಲಿ ಉಳಿಸಿಕೊಂಡು ಬಂದಿರುವ ಒಬೆಲಿಸ್ಕೊಂದರ ಮುಂಭಾಗದಲ್ಲಿ ಎತ್ತರವಾದ ಬಲಿಪೀಠವಿದ್ದು ಅದರಲ್ಲಿ ಗುಂಡಿಗಳು ತೋಡಲ್ಪಟ್ಟಿವೆ. ಪಿತೃಗಳಿಗೆ ಬಲಿಗೊಟ್ಟ ಪ್ರಾಣಿಗಳ ರಕ್ತವನ್ನು ಸಂಗ್ರಹಿಸುವುದಕ್ಕೆಂದೇ ಆ ಗುಂಡಿಗಳಿದ್ದುದು. ಪ್ರಸಿದ್ಧವಾದ ಪುರಾತನ ಒಬೆಲಿಸ್ಕ್‌ಗಳಲ್ಲಿ ಸು. 30 ಉಳಿದಿವೆ. ಅವುಗಳಲ್ಲಿ 12 ರೋಮ್ನಲ್ಲಿವೆ. ವಾಸ್ತುವಿನ್ಯಾಸದಲ್ಲಿ ಒಬೆಲಿಸ್ಕ್‌ಗಳನ್ನು ಹೊಂದಿಸುವ ಪದ್ಧತಿ 18ನೆಯ ಶತಮಾನದ ವೇಳೆಗೆ ಫ್ರಾನ್ಸ್ ಬ್ರಿಟನ್ಗಳಲ್ಲಿ ಪ್ರಚಾರದಲ್ಲಿತ್ತು. 19ನೆಯ ಶತಮಾನದಲ್ಲಿ ಕ್ಲಿಯೋಪಾತ್ರಗಳ ಸೂಜಿಗಳೆಂದು ಪ್ರಸಿದ್ಧವಾದ ಎರಡು ಒಬೆಲಿಸ್ಕ್‌ಗಳನ್ನು ಲಂಡನ್ ಮತ್ತು ನ್ಯೂಯಾರ್ಕ್ಗಳಿಗೆ ಒಪ್ಪಿಸಲಾಯಿತು. ಪ್ರ.ಶ.ಪು, 13ನೆಯ ಶತಮಾನದ ಒಂದು ಒಬೆಲಿಸ್ಕ್ ಪ್ಯಾರಿಸಿನ ದ ಲಾ ಕಾನ್ಕಾರ್ಡ್ ಸ್ಥಳದಲ್ಲಿದೆ. ಇದು ಈಜಿಪ್ಟಿನ ದೊರೆ ಮೆಹೆಮತ್ ಆಲಿಯ ಕೊಡುಗೆ (1831). ಪ್ರ.ಶ.ಪು, 1500ರಲ್ಲಿ ಹೆಲಿಯೊಪೊಲಿಸ್ನಲ್ಲಿ ಮೂರನೆಯ ಥಟ್ಮೋಸ್ ಇವನ್ನು ನಿರ್ಮಿಸಿದ. ಇವು ಈಗ ಲಂಡನಿನಲ್ಲಿ ಥೇಮ್ಸ್ ದಂಡೆಯ ಮೇಲೂ ನ್ಯೂಯಾರ್ಕಿನ ಸೆಂಟ್ರಲ್ ಪಾರ್ಕಿನಲ್ಲೂ ನಿಂತಿವೆ. ಇವನ್ನು ತಮ್ಮ ಮೊದಲಿನ ಸ್ಥಾನದಿಂದ ಪ್ರ.ಶ.ಪು, 14ರ ಸುಮಾರಿನಲ್ಲಿ ಆಗಸ್ಟಸ್ ಸೀಸರ್ ಕದಲಿಸಿ ಅಲೆಗ್ಸಾಂಡ್ರಿಯಕ್ಕೆ ಒಯ್ದಿದ್ದ. ಪ್ರ.ಶ.ಪು, 1250ರ ಸುಮಾರಿನಲ್ಲಿದ್ದ ಎರಡನೆಯ ರ್ಯಾಮ್ಸೆಸನ ಶಾಸನವನ್ನು ಇದರ ಮೇಲೆ ಕೆತ್ತಲಾಗಿದೆ. ಥೀಬ್ಸ್‌ನಗರದ ರಾಣಿ ಹಟ್ಷೆಪ್ಸಟಳ ದೇವಾಲಯದಲ್ಲಿರುವ ಕೆಲವು ಚಿತ್ರಗಳು ಒಬೆಲಿಸ್ಕ್‌ಗಳನ್ನು ಜಲಮಾರ್ಗವಾಗಿ ಸಾಗಿಸುತ್ತಿರುವುದನ್ನು ರೂಪಿಸುತ್ತವೆ. ಅಮೆರಿಕದ ವಾಷಿಂಗ್ಟನಿನಲ್ಲಿರುವ ವಾಷಿಂಗ್ಟನ್ ಸ್ಮಾರಕ ಆಧುನಿಕ ಒಬೆಲಿಸ್ಕಿನ ಉದಾಹರಣೆ. 555 ಅಡಿಗಳಿಗಿಂತಲೂ ಎತ್ತರವಿರುವ ಇದರ 500ನೆಯ ಅಡಿಯಲ್ಲಿ ಒಂದು ವೀಕ್ಷಣಾಲಯವಿದೆ. ಇಲ್ಲಿಗೆ ಹೋಗಲು ಕಟ್ಟಡದ ಒಳಗೇ ಮೇಲೆತ್ತಿಗೆಯೂ (ಎಲಿವೇಟರ್) ಮೆಟ್ಟಲುಗಳೂ ಉಂಟು
ಪಕ್ಕ ಟಿಪ್ಪಣಿ ಮುಂತಾದವುಗಳ ಕಡೆಗೆ ಗಮನ ಸೆಳೆಯಲು ಬಳಸುವ ಕಠಾರಿಯ ಗುರುತಿಗೂ (†) ಒಬೆಲಿಸ್ಕ್ ಎಂಬ ಹೆಸರಿದೆ.