ಉಪದ್ರವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪದ್ರವ: ಸ್ಥಿರಾಸ್ತಿ ಅಥವಾ ಭೂಮಿಯ ಉಪಯೋಗಕ್ಕೆ ಸಂಬಂಧಿಸಿದಂತೆ ಇತರರಿಗೆ ಅಪಾಯ ಅಥವಾ ತೊಂದರೆ ನೀಡುವ ರೀತಿಯ ಚಟುವಟಿಕೆ, ಸ್ಥಿತಿ (ನ್ಯೂಸೆನ್ಸ್‌). ನ್ಯಾಯಕ್ಷೇತ್ರದಲ್ಲಿ ಇದನ್ನು ಈ ಅರ್ಥದಲ್ಲಿ ಬಳಸಲಾಗಿದೆ. ಖಾಸಗಿ ಹಾಗೂ ಸಾರ್ವಜನಿಕ ವೆಂದು ಇದರಲ್ಲಿ ಎರಡು ಬಗೆಯುಂಟು. ನೆರೆಹೊರೆಯ ಖಾಸಗಿ ನೆಲವನ್ನು ಅನುಭವಿಸಲು ಜನಕ್ಕೆ ಅಡ್ಡಿಬರುವಂಥ ಚಟುವಟಿಕೆ ಅಥವಾ ಪರಿಸ್ಥಿತಿಯೇ ಖಾಸಗಿ ಉಪದ್ರವ. ಇಂಥ ಸಂದರ್ಭದಲ್ಲಿ ನೆರೆಹೊರೆಯ ಸ್ವಾಧೀನಾನುಭವದಲ್ಲಿರುವ ನೆಲದ ಅತಿಕ್ರಮಣವೇ ಆಗಬೇಕೆಂದೇನೂ ಇಲ್ಲ. ಅತಿ ಗಲಭೆ, ಹೊಲಸು ಹೊಗೆ, ದುರ್ಗಂಧ, ಕಂಪನ-ಇವೂ ವೈಯುಕ್ತಿಕ ಉಪದ್ರವದ ಉದಾಹರಣೆಗಳೆ. ಸಾರ್ವಜನಿಕ ಉಪದ್ರವ ಇನ್ನೂ ವ್ಯಾಪಕ ಪರಿಣಾಮಗಳುಳ್ಳದ್ದು. ಇದು ರಾಷ್ಟ್ರದ ವಿರುದ್ಧ ನಡೆಸಿದ ಅಪರಾಧ. ಈ ಉಲ್ಲಂಘನೆ ಎರಡು ಬಗೆ: 1 ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಾರ್ವಜನಿಕ ಭೂಮಿಯ ಮೇಲೆ ಆಗಿದ್ದು. ಉದಾ: ಸಾರ್ವಜನಿಕ ರಸ್ತೆಗೆ ಅಡಚಣೆ, ಹೊಳೆ, ಕೆರೆ ನೀರು ಕಶ್ಮಲ ಮಾಡುವಂಥ ಕಾರ್ಯಾಚರಣೆ. 2 ಸಮಾಜದ ಆರೋಗ್ಯ ನೀತಿ ಕ್ಷೇಮಗಳಿಗೆ ಭಂಗಬರುವಂಥದು. ಉದಾ: ವೇಶ್ಯಾಗೃಹ ನಿರ್ವಹಣೆ, ಆಸ್ಫೋಟಕ ವಸ್ತು ಶೇಖರಣೆ. ಸಾರ್ವಜನಿಕ ಉಪದ್ರವ ಸರ್ಕಾರದಿಂದ ಮಾತ್ರ ವ್ಯಾಜ್ಯಯೋಗ್ಯ (ಆಕ್ಷನಬಲ್). ಆದರೆ ಹಲವು ಸಂದರ್ಭಗಳಲ್ಲಿ ಸಾರ್ವಜನಿಕ ಉಪದ್ರವಕ್ಕೆ ಕಾರಣವಾದ ಸಂದರ್ಭವೇ ಖಾಸಗಿ ಉಪದ್ರವಕ್ಕೂ ಕಾರಣವಾಗಬಹುದು. ಜಾರಿಯಲ್ಲಿರುವ ಕಾನೂನು ಉಲ್ಲಂಘಿಸಿ ಒಂದು ಪ್ರದೇಶದಲ್ಲಿ ಉದ್ಯಮವೊಂದನ್ನು ನಡೆಸುವುದು ಸಾರ್ವಜನಿಕ ಉಪದ್ರವ ಹೇಗೊ ಹಾಗೆ ಅದು ವೈಯಕ್ತಿಕ ಉಪದ್ರವವೂ ಆಗಬಹುದು. ಆ ಉದ್ಯಮದ ಫಲವಾಗಿ ನೆರೆಹೊರೆಯ ಸ್ವತ್ತುಗಳ ಬೆಲೆ ತಗ್ಗಬಹುದು. ಖಾಸಗಿ ಉಪದ್ರವಕ್ಕೆ ನ್ಯಾಯಿಕ ಕ್ರಮವೆಂದರೆ ಹಣದ ಪರಿಹಾರ ಅಥವಾ ಆ ಉಪದ್ರವಕ್ಕೆ ತಡೆಯೊಡ್ಡುವಂತೆ ಸಾಮ್ಯನ್ಯಾಯ ರೀತ್ಯಾ ದಾವಾ ಹೂಡಿಕೆ. ತಡೆ ಆಜ್ಞೆಯಿಂದ ಸಮಾಜಕ್ಕೆ ಹೆಚ್ಚಿನ ತೊಂದರೆ ಆಗುವುದಿದ್ದರೆ ನ್ಯಾಯಾಲಯಗಳು ಹಣ ಪರಿಹಾರದ ನಿರ್ಣಯ ನೀಡಬಹುದು. ಉದಾ: ಅನೇಕರಿಗೆ ಉದ್ಯೋಗ ದೊರಕಿಸಿ ಕೊಡುತ್ತಿರುವ ಕಾರ್ಖಾನೆಯನ್ನು ಮುಚ್ಚುವುದರಿಂದ ಅವರಿಗೆಲ್ಲ ನಿರುದ್ಯೋಗ ಸಂಭವಿಸಬಹುದು. ಭಾರತದಲ್ಲಿ ಇಂಡಿಯನ್ ಪೀನಲ್ ಕೋಡಿನ 268ನೆಯ ಕಲಂ ಪ್ರಕಾರ ಸಾರ್ವಜನಿಕ ಉಪದ್ರವವೆಸಗುವುದು ಅಪರಾಧ. ಸಾರ್ವಜನಿಕರಿಗೆ ಅಥವಾ ಸಾರ್ವಜನಿಕರಲ್ಲಿ ಅನೇಕರಿಗೆ ಕಿರುಕುಳ, ಭಯ ಅಥವಾ ಕೇಡುಂಟುಮಾಡುವ ಕೃತ್ಯಗಳು ಈ ಉಪದ್ರವಕ್ಕೆ ಸೇರಿವೆ. ಸಾರ್ವಜನಿಕವಾಗಿ ಉಪಯೋಗಿಸುವ ರಸ್ತೆ, ಕೊಳ, ಬಾವಿ, ಉದ್ಯಾನ, ರೈಲು ಅಥವಾ ಬಸ್ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಅಡ್ಡಿಯಾಗುವಂತೆ ಅಥವಾ ಹೇಸಿಗೆಯಾಗುವಂಥ ಕೃತ್ಯವೆಸಗುವುದು ಉಪದ್ರವ. ದುರ್ವಾಸನೆಯುಂಟುಮಾಡುವುದು, ಕುಡಿಯುವ ನೀರು ಕೆಡಿಸುವುದು, ಮನೆ ಅಥವಾ ಅಂಗಡಿಯ ಸೂರುಗಳನ್ನು ಸಾರ್ವಜನಿಕರಿಗೆ ತೊಂದರೆಯಾಗು ವಂತೆ ಮುಂದೆ ಚಾಚುವುದು, ವಾಸದ ಮನೆಯಲ್ಲಿ ಜೂಜಾಡುವುದು ಮುಂತಾದವೂ ಉಪದ್ರವಗಳು. ತೊಂದರೆಗೀಡಾದವರು ನ್ಯಾಯಾಧೀಶರಿಗೆ ದೂರು ಕೊಡಬಹುದು. ತುರ್ತುಪರಿಸ್ಥಿತಿಯಲ್ಲಿ ತಕ್ಷಣವೇ ಕ್ರಮಕೈಕೊಳ್ಳಲು ಕ್ರಿಮಿನಲ್ ಪ್ರೊಸೀಜರ್ ಕೋಡಿನ 144 ಮತ್ತು 145ನೆಯ ಕಲಂ ಪ್ರಕಾರ ಸಂಬಂಧಪಟ್ಟ ನ್ಯಾಯಾಧೀಶರಿಗೆ ಅಧಿಕಾರವಿರುತ್ತದೆ. ಅಪಕೃತ್ಯದಲ್ಲಿ ಉಪದ್ರವ ಪರಿಹಾರ ಪಡೆಯುವ ಕೃತ್ಯವಾಗುತ್ತದೆ. ಯಾವ ಸಂದರ್ಭಗಳಲ್ಲಿ ಈ ಉಪದ್ರವವಾಗುತ್ತದೆ ಎಂಬುದನ್ನು ನ್ಯಾಯಾಲಯ ನಿರ್ಣಯಿಸುತ್ತದೆ. ಸಂಗೀತಗಾರ ರೊಬ್ಬರ ಪಕ್ಕದ ಮನೆಯಲ್ಲಿದ್ದವರೊಬ್ಬರು ಸಂಗೀತದ ಪಾಠಗಳಿಂದ ತೊಂದರೆಗೊಂಡು, ಪ್ರತಿದಿನ ಸಂಗೀತ ಆರಂಭವಾದೊಡನೆ ಕೂಗುವುದು, ಶಿಳ್ಳೆಹೊಡೆಯುವುದು, ತಟ್ಟೆ ಬಡಿಯುವುದು ಮುಂತಾದ ಕೃತ್ಯಗಳಲ್ಲಿ ನಿರತರಾಗಿ ಸಂಗೀತ ಪಾಠ ಮುಂದುವರಿಯದಂತೆ ಅಡ್ಡಿ ಮಾಡಿದರು. ಅವರು ಸಂಗೀತಗಾರರಿಗೆ ಪರಿಹಾರ ಕೊಡಬೇಕೆಂದು ಒಂದು ಮೊಕದ್ದಮೆಯಲ್ಲಿ ತೀರ್ಮಾನವಾಯಿತು. (ಎಂ.ಎಸ್.ಆರ್.)

"https://kn.wikipedia.org/w/index.php?title=ಉಪದ್ರವ&oldid=715567" ಇಂದ ಪಡೆಯಲ್ಪಟ್ಟಿದೆ