ಸಾಮ್ಯನ್ಯಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಸಾಮ್ಯನ್ಯಾಯವೆಂದರೆ ಸರಿಸಮಾನತೆ (ಈಕ್ವಾಲಿಟಿ), ನ್ಯಾಯ (ಜಸ್ಟಿಸ್) ಮತ್ತು ನೀತಿಯುಕ್ತತೆ (ಫೇರ್ನೆಸ್), ಅದು ಸಹಜ ನ್ಯಾಯ ಅಥವಾ ಸ್ವಾಭಾವಿಕ ನ್ಯಾಯ (ನ್ಯಾಚುರಲ್ ಜಸ್ಟಿಸ್.)

ಇತಿಹಾಸ[ಬದಲಾಯಿಸಿ]

ಕಿಂಗ್ಸ್ ಬೆಂಚ್, ಕಾಮನ್ ಪ್ಲೀಸಿನ ಕೋರ್ಟು, ಎಕ್ಸ್ಚೆಕರ್ - ಇವು 13ನೆಯ ಶತಮಾನದ ಅಂತ್ಯದಲ್ಲಿ ಇದ್ದ ಪ್ರಮುಖ ನ್ಯಾಯಾಲಯಗಳು. ಇವುಗಳೆಲ್ಲ ಪರಂಪರಾಗತವಾಗಿ ಬಂದ ಸಂಪ್ರದಾಯಮೂಲವಾದ ನ್ಯಾಯವನ್ನು ಜಾರಿ ಮಾಡುತ್ತಿದ್ದುವು. ಇವುಗಳೆಲ್ಲ ಒಂದಲ್ಲ ಒಂದು ನಿರೂಪದ (ರಿಟ್) ಮುಖಾಂತರವೇ ಆಗಬೇಕಿತ್ತು. ದೊರೆಯ ನ್ಯಾಯಾಲಯಗಳಲ್ಲಿ ನ್ಯಾಯ ಸಿಕ್ಕಬೇಕಾದರೆ ಪರಿಹಾರ ಪಡೆಯಬೇಕಾಗಿದ್ದಾತ ಕೇಳುವ ನಿವೃತ್ತ್ತಿಯನ್ನು ಯಾವುದಾದರೊಂದು ರಿಟ್ ಅಥವಾ ನಿರೂಪದ ಒಳಗೆ ಬರುವಂತೆ ಮಾಡಬೇಕಿತ್ತು. ನಿರೂಪ ಇಲ್ಲದಲ್ಲಿ ನ್ಯಾಯ ಅವನಿಗೆ ದೊರೆಯಲು ಅಸಾಧ್ಯವಾಗಿತ್ತು. ಸಂಪ್ರದಾಯನ್ಯಾಯದಲ್ಲಿ ಅನೇಕ ಕುಂದುಗಳಿದ್ದುವು. ಅವುಗಳ ಪ್ರಕಾರ ಎಲ್ಲ ವಿಚಾರಗಳಲ್ಲೂ ನ್ಯಾಯ ದೊರಕುತ್ತಿರಲಿಲ್ಲ. ಅವು ಕೊಡುತ್ತಿದ್ದ ನಿವೃತ್ತಿಗಳು ಅನೇಕ ಸಂದಂರ್ಭಗಳಲ್ಲಿ ಸರಿಯಾದ್ದಕ್ಕಿಂತ ಕಮ್ಮಿಯಾಗುತ್ತ್ತಿದ್ದುವು. ಅಲ್ಲಿ ನ್ಯಾಯವಿಧಾನ (ಪ್ರೊಸೀಜರ್) ಸೂಕ್ತವಾಗಿರಲಿಲ್ಲ. ಇವುಗಳನ್ನು ಪರಿಹರಿಸಲು ಸಾಮ್ಯನ್ಯಾಯ ಬಂತು.

ಶಕ್ತಿಯುತರಾದ ವ್ಯವಹಾರದಾರರು ಲಂಚರುಶುವತ್ತುಗಳಿಂದ ಅಥವಾ ಹೆದರಿಕೆ ಹಾಕಿ ಸಂಪ್ರದಾಯನ್ಯಾಯದ ನ್ಯಾಯದರ್ಶಿಗಳಿಂದ (ಜ್ಯೂರಿ) ತಮಗೆ ಬೇಕಾದ ತೀರ್ಪುಗಳನ್ನು ಪಡೆಯುತ್ತಿದ್ದರು. ಇದರಿಂದಾಗಿ ಸಂಪ್ರದಾಯನ್ಯಾಯಾಲಯಗಳಿಂದ ವಂಚಿತರಾದವರು ರಾಜನಿಗೆ ಅಥವಾ ಅವನ ಮಂತ್ರಿಸಭೆಗೆ ತಮ್ಮ ವ್ಯವಹಾರದ ವಿಚಾರಗಳನ್ನು ಹೇಳಿಕೊಂಡು ದೂರು ಕೊಡುವ ಕ್ರಮ ಬಂತು. ಅವುಗಳನ್ನು ತನಿಖೆ ಮಾಡಲು ಚಾನ್ಸಲರ್ (ಎಕ್ಸ್ಚೆಕರಿನ ಪ್ರಮುಖ ಅಧಿಕಾರಿ), ಚಾನ್ಸರಿಯ ಬೇರೆ ಅಧಿಕಾರಿಗಳು, ಪ್ರಮುಖವಾಗಿ ಮಾಸ್ಟರ್ ಆಫ್ ರೋಲ್ಸ್ ಇವರಿದ್ದರು. ಚಾನ್ಸಲರ್ ಈ ಮೊದಲೇ ಎಕ್ಸ್ಚೆಕರಿನ ಮುಖ್ಯನಾಗಿ ಸಂಪ್ರದಾಯವನ್ನು ಚಲಾಯಿಸುವ ಹಕ್ಕು ಪಡೆದಿದ್ದ. ಒಂದನೆಯ ಎಡ್ವರ್ಡನ ಕಾಲದಲ್ಲಿ ಅರ್ಜಿಗಳನ್ನು ರಾಜನ ಮಂತ್ರಿಸಭೆ ಚಾನ್ಸಲರನಿಗೆ ಕಳುಹುತ್ತಿತ್ತು. ಈ ಕ್ರಮದಿಂದ ಚಾನ್ಸರಿಯ ಹಕ್ಕು ನಿರ್ಮಿತವಾದಂತೆ ಕಾಣುತ್ತದೆ. ಬರಬರುತ್ತ ಅರ್ಜಿಗಳನ್ನು ಚಾನ್ಸಲರನಿಗೆ ಕೊಡುವ ರೂಢಿ ಬಂತು. ಚಾನ್ಸಲರ್ ರಾಜನ ಆತ್ಮಸಾಕ್ಷಿಯ ನಿರ್ವಾಹಕ (ಕೀಪರ್ ಆಫ್ ಕಿಂಗ್ಸ್ ಕಾನ್ಷನ್ಸ್). ಯಾರ ಮೇಲಾದರೂ ಅರ್ಜಿ ಬಂದಲ್ಲಿ ಆತ ಹಾಜರಾಗುವಂತೆ ಚಾನ್ಸಲರ್ ಆತನಿಗೆ ನಿರೂಪ ಕೊಡುತ್ತಿದ್ದ. ಅವನು ಬಂದು ಅದಕ್ಕೆ ಸರಿಯಾಗಿ ಉತ್ತರವೀಯದಿದ್ದಲ್ಲಿ ಚಾನ್ಸಲರ್ ತನಗೆ ನ್ಯಾಯವೆಂದು ತೋರಿದಂತೆ ಮಾಡುತ್ತ್ತಿದ್ದ. ಸಂಪ್ರದಾಯನ್ಯಾಯದ ಕೋರ್ಟುಗಳಲ್ಲಿರುವ ಮೊಕದ್ದಮೆಯನ್ನು ಮುಂದುವರಿಸಕೂಡ ದೆಂದೂ ತೀರ್ಪು ಪಡೆಯಕೂಡದೆಂದೂ ಆಜ್ಞೆ ಕೊಡುತ್ತಿದ್ದ. ಅದಕ್ಕೆ ತಪ್ಪಿದಲ್ಲಿ ದಂಡ, ಕಾರಾಗೃಹವಾಸ ವಿಧಿಸುವ ಹಕ್ಕು ಆತನಿಗಿತ್ತು.


ಸಾಮ್ಯನ್ಯಾಯವೆಂದರೆ ಸರಿಸಮಾನತೆ (ಈಕ್ವಾಲಿಟಿ), ನ್ಯಾಯ (ಜಸ್ಟಿಸ್) ಮತ್ತು ನೀತಿಯುಕ್ತತೆ (ಫೇರ್ನೆಸ್), ಅದು ಸಹಜ ನ್ಯಾಯ ಅಥವಾ ಸ್ವಾಭಾವಿಕ ನ್ಯಾಯ (ನ್ಯಾಚುರಲ್ ಜಸ್ಟಿಸ್.) ಇದು ನ್ಯಾಯಸ್ಥಾನಗಳು ಜಾರಿ ಮಾಡಲು ತಕ್ಕುದಾದ ಸಹಜನ್ಯಾಯವಾಗಿದ್ದರೂ ಚಾರಿತ್ರಿಕ ಕಾರಣಗಳಿಂದ ಸಂಪ್ರದಾಯ ನ್ಯಾಯಾಲಯಗಳು ಜಾರಿ ಮಾಡಲು ಸಾಧ್ಯವಿಲ್ಲದ್ದು. ಇಂಥದನ್ನು ಚಾನ್ಸರಿ ನ್ಯಾಯಾಲಯ ಜಾರಿ ಮಾಡಿದೆ ಎಂದು ಸ್ರೆಲ್ ಹೇಳುತ್ತಾನೆ. ನ್ಯಾಯ ಮತ್ತು ಸಾಮ್ಯವನ್ನು 1873 ಮತ್ತು 1875ರ ನ್ಯಾಯವ್ಯವಸ್ಥೆಯ ಕಾಯಿದೆಗಳು (ಜುಡಿಕೇಚರ್ ಆ್ಯಕ್್ಟ) ಸರಿಹೊಂದಿಸುವ ಮೊದಲೇ ಚಾನ್ಸರಿ ನ್ಯಾಯಾಲಯಗಳು ಜಾರಿಮಾಡುತ್ತಿದ್ದ ನ್ಯಾಯಕ್ಕೆ ಎಕ್ವಿಟಿ ಅಥವಾ ಸಾಮ್ಯನ್ಯಾಯವೆಂದು ಹೇಲ್ಸ್ ಹೇಳುತ್ತಾನೆ.

ಇದರ ಪ್ರಧಾನ ಕೆಲಸವೆಂದರೆ ಸಹಜನ್ಯಾಯ ಕೊಡುವುದು. ಆತ್ಮಸಾಕ್ಷಿ, ಕಾರಣ ಮತ್ತು ನ್ಯಾಯದಲ್ಲಿ ಒಳ್ಳೆಯ ನಂಬಿಕೆ - ಇವುಗಳನ್ನು ಎಕ್ವಿಟಿ ನ್ಯಾಯಾಲಯಗಳು ತಮ್ಮ ಮೂಲತತ್ತ್ವಗಳನ್ನಾಗಿ ಇಟ್ಟುಕೊಂಡಿದ್ದುವೆಂದು ಆದಿಯಲ್ಲಿ ನಂಬಲಾಗಿತ್ತು. ಅದು ಸರ್ವಸಾಮಾನ್ಯವಾಗಿ ನ್ಯಾಯ ಅನ್ಯಾಯಗಳ ವಿಚಾರದಲ್ಲಿ ಜನರಿಗಿರುವ ಅಭಿಪ್ರಾಯಗಳನ್ನು ಪ್ರತಿಬಿಂಬಿಸುತ್ತಿತ್ತೆಂದು ತಿಳಿಯಲಾಗಿತ್ತು. ಅದುವರೆಗೆ ಸ್ವೀಕೃತವಾಗಿದ್ದ ನ್ಯಾಯವನ್ನೇ ಕೊಡುತ್ತ್ತಿದ್ದುವೆಂದು ಪರಿಗಣಿಸಲಾಗಿದ್ದರೂ ವಾಸ್ತವವಾಗಿ ಆ ನ್ಯಾಯಾಲಯಗಳು ಹೊಸ ಹೊಸ ಮೂಲಗಳಿಂದ ತಮ್ಮ ತೀರ್ಪನ್ನು ಸಮರ್ಥಿಸಿವೆ.

ಸಾಮ್ಯನ್ಯಾಯ ಮಾಡಿದ ಕೆಲಸವನ್ನು ಸಂಕ್ಷಿಪ್ತವಾಗಿ ಜೆ. ಎಲ್. ಬ್ರಿಯರನ ಮಾತಿನಲ್ಲಿ ಹೀಗೆ ಹೇಳಬಹುದು : ಸಾಮ್ಯನ್ಯಾಯ ಕಾನೂನಿಗೆ ನ್ಯಾಸ (ಟ್ರಸ್ಟ್)ವಿಚಾರವಾದ ಸಮಗ್ರನ್ಯಾಯವನ್ನು ಅಳವಡಿಸಿತು : ಅದು ಭೋಗ್ಯಗಳ (ಮಾರ್ಟ್ಗೇಜ್) ವಿಚಾರವಾಗಿ ಕಾನೂನಿನಲ್ಲಿ ಮಾರ್ಪಾಡು ತಂದಿತು. ಕರಾರುಗಳ ಹಕ್ಕುಗಳನ್ನು ಇನ್ನೊಬ್ಬರಿಗೆ ಕೊಡಲು ಸಾಧ್ಯವಿರುವಂತೆಯೂ ಮೋಸ ತಪ್ಪುಗಳಿಂದ ಆದ ಕರಾರುಗಳಿಗೆ ಇರುವ ನಿವಾರಣೆ ಉತ್ತಮಗೊಳ್ಳುವಂತೆಯೂ ಸಾಧಿಸಿತು. ಸಂಪ್ರದಾಯನ್ಯಾಯದಲ್ಲಿ ಕೊಡುತ್ತಿದ್ದ. ನಿವೃತ್ತಿಗಳ ವಿಧಾನಗಳಲ್ಲಿ ಹೆಚ್ಚು ಸುಧಾರಣೆ ತಂದಿತು. ಉದಾಹರಣೆಗಾಗಿ ಕರಾರುಗಳನ್ನು ಮುರಿದಲ್ಲಿ ಬರಿ ನಷ್ಟ ಕೊಡುವುದು ಮಾತ್ರವಲ್ಲದೆ ಕರಾರಿನಂತೆ ನಡೆಯುವಂತೆ (ಸ್ಪೆಸಿಫಿಕ್ ಪರ್ಫಾರ್ಮೆನ್ಸ್) ಮಾಡಲು ತಪ್ಪು ಕೆಲಸ ಮಾಡದಿರುವಂತೆ ನಿರ್ಬಂಧಕ ಆಜ್ಞೆ (ಇಂಜಂಕ್ಷನ್) ಅಥವಾ ತಡೆಆಜ್ಞೆ ನೀಡುವಂತೆಯೂ ಅವಕಾಶ ಕಲ್ಪಿಸಿದವು.

ಸಾಮ್ಯನ್ಯಾಯದ ಕ್ಷೇತ್ರಾಧಿಕಾರವನ್ನು (ಜ್ಯೂರಿಸ್ಡಿಕ್ಷನ್) ಅನನ್ಯ (ಎಕ್ಸ್ ಕ್ಲೂ ಸಿವ್), ಸಹಗಾಮಿ (ಕನ್ಕರೆಂಟ್) ಮತ್ತು ಸಹಾಯಕ (ಆಗ್ಸಿಲಿಯರಿ) ಎಂಬುದಾಗಿ ವಿಂಗಡಿಸಬಹುದು. ತನ್ನ ಸ್ವಂತ ಹಕ್ಕಿನಲ್ಲಿ ಅದು ನ್ಯಾಸವೇ ಮುಂತಾದವುಗಳ ವಿಚಾರಣೆ ನಡೆಸುತ್ತಿತ್ತು. ಇದು ಅದರ ಅನನ್ಯ ಕ್ಷೇತ್ರ. ಸಂಪ್ರದಾಯನ್ಯಾಯದ ಕೋರ್ಟುಗಳಿಂದ ಹಕ್ಕು ಲಭ್ಯವಾಗಿದ್ದೂ ನಿವೃತ್ತಿ ಸಿಗದ ವಿಚಾರಗಳಲ್ಲಿ (ಉದಾ : ತಡೆಆಜ್ಞೆ) ತಕ್ಕ ನಿವೃತ್ತಿಗಳನ್ನು ಕೊಡುವುದು ಅದರ ಸಹಗಾಮಿ ಕ್ಷೇತ್ರಕ್ಕೊಳಪಟ್ಟಿತು. ಸಹಾಯಕ ಕ್ಷೇತ್ರದಲ್ಲಿ ಅದು ಸಂಪ್ರದಾಯ ನ್ಯಾಯಾಲಯಗಳಲ್ಲಿದ್ದ ಮೊಕದ್ದಮೆಗಳ ತೀರ್ಮಾನಕ್ಕೆ ಬೆಂಬಲ ಕೊಡುತ್ತಿತ್ತು. ಉದಾಹರಣೆಗಾಗಿ ದಾಖಲೆಗಳನ್ನು ಕೊಡುವಂತೆ ಆಜ್ಞೆ ಮಾಡಬಹುದಿತ್ತು. ಅವುಗಳನ್ನು ಪರೀಕ್ಷಿಸುವ ಅನುಮತಿ ಇತ್ಯಾದಿಗಳನ್ನು ದೊರಕಿಸಿಕೊಡುತ್ತಿತ್ತು.

ಚಾನ್ಸಲರನ ತೀರ್ಪುಗಳು ಖುಷಿ ಬಂದಂತೆ ಮಾಡುವ ತೀರ್ಪುಗಳೆಂದು ಅಪವಾದ ಬಂದರೂ ಬರಬರುತ್ತ ಸಂಪ್ರದಾಯನ್ಯಾಯದಲ್ಲಿ ಒಮ್ಮೆ ಮಾಡಿದ ತೀರ್ಪುಗಳು ಹೇಗೆ ಮುಂದೆ ಬಂದ ಮೊಕದ್ದಮೆಗಳಲ್ಲಿ ಮಾರ್ಗದರ್ಶಿಗಳಾದ ಕಾನೂನುಗಳಾಗಿ ನಿಂತುವೋ ಹಾಗೆಯೇ ಈ ತೀರ್ಪುಗಳೂ ಮುಂದೆ ಅದೇ ರೀತಿಯ ಸಂದರ್ಭಗಳು ಬಂದಾಗ ಅನುಸರಿಸತಕ್ಕ ಕಾನೂನುಗಳಾಗಿ ನಿಂತವು. ಬೇರೆ ಬೇರೆ ಚಾನ್ಸಲರರು ತಮಗೆ ಸರಿತೋರಿದಂತೆ, ತಮಗೆ ನ್ಯಾಯ ಕಂಡಂತೆ ತೀರ್ಪು ಕೊಡುತ್ತಿದ್ದರೆಂದು ಹೇಳಲಾಗಿದ್ದರೂ ಅವರು ಹಿಂದಿನ ತೀರ್ಪುಗಳ ಬಾಹುಳ್ಯದಿಂದ ನಿಖರವಾದ, ಸುಸ್ಪಷ್ಟವಾದ, ಒಂದೇ ರೀತಿಯ ನ್ಯಾಯಗಳನ್ನು ಕೊಡಬೇಕಾಯಿತು, ಕೊಡುತ್ತಿದ್ದರು.

ಮೊದಲ ಮತ್ತು ಎರಡನೆಯ ಎಡ್ವರ್ಡರ ಕಾಲದಲ್ಲಿ ಚಾನ್ಸರಿ ಕೋರ್ಟುಗಳು ಖಾಯಂ ಆದವು. ಅನೇಕ ವಿಚಾರಗಳಲ್ಲಿ ಚಾನ್ಸರಿ ಕೋರ್ಟುಗಳ ನ್ಯಾಯತೀರ್ಮಾನಕ್ಕೂ ವಿರೋಧಗಳುಂಟಾಗತೊಡಗಿದುವು. ಅವುಗಳ ತೀರ್ಮಾನದಲ್ಲಿ ಅಭ್ಯಂತರವಿದ್ದಲ್ಲಿ ಚಾನ್ಸರಿ ಕೋರ್ಟಿನ ತೀರ್ಮಾನವೇ ಸ್ವೀಕಾರಾರ್ಹವೆಂದು ಅರ್ಲ್ ಆಫ್ ಆಕ್ಸ್ಫರ್ಡ್ ಮೊಕದ್ದಮೆಯಲ್ಲಿ ಒಂದನೆಯ ಜೇಮ್ಸ್ ತೀರ್ಮಾನಿಸಿದ. 1875ರ ಜ್ಯುಡಿಕೇಚರ್ ಕಾಯಿದೆಯ 25ನೆಯ ವಿಧಿಯ ಪ್ರಕಾರ ಒಂದೇ ವಿಚಾರದಲ್ಲಿ ಸಂಪ್ರದಾಯನ್ಯಾಯದ ನಿಯಮಕ್ಕೂ ಸಾಮ್ಯನ್ಯಾಯದ ನಿಯಮಕ್ಕೂ ವಿರೋಧವಿದ್ದಲ್ಲಿ ಸಾಮ್ಯನ್ಯಾಯದ ನಿಯಮವನ್ನು ಅನುಸರಿಸಬೇಕೆಂದು ನಿರ್ಣಯಿಸಲಾಯಿತು.


Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: