ಇಸ್ಲಾಮೀ ನ್ಯಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರತಿಯೊಬ್ಬ ಮುಸ್ಲಿಮನ ಜೀವನವನ್ನೂ ನಡೆಸುವ ಪ್ರೇರಕಶಕ್ತಿಗಳು ಎರಡು : ಒಂದು ಆತನ ಮತಧರ್ಮಶಾಸ್ತ್ರ; ಇನ್ನೊಂದು ನ್ಯಾಯಶಾಸ್ತ್ರ. ಅವನ ಶ್ರದ್ಧೆ, ನಂಬಿಕೆಗಳಿಗೆ ಮತಧರ್ಮಶಾಸ್ತ್ರ ಮೂಲ. ಏನನ್ನು ಮಾಡಬೇಕು, ಯಾವುದನ್ನು ಮಾಡಬಾರದು-ಎಂಬುದನ್ನು ನಿರ್ಣಯಿಸುವುದು ನ್ಯಾಯ. ನ್ಯಾಯದ ಅಡಿಗಲ್ಲಿನ ಮೇಲೆಯೇ ಮುಸ್ಲಿಮನ ವ್ಯಕ್ತಿತ್ವ ಬೆಳೆಯುತ್ತದೆ. ನ್ಯಾಯಸೂತ್ರಕ್ಕೆ ಬೇರಾವ ಧರ್ಮದಲ್ಲೂ ಇಲ್ಲದಷ್ಟು ಪ್ರಾಧಾನ್ಯ ಈ ಧರ್ಮದಲ್ಲಿ ಉಂಟು.

ತಲಾಖ್‌ ಎಂಬ ತೂಗುಗತ್ತಿ ಮತ್ತು ಪೂರ್ವಾಗ್ರಹ
*"ಸಾರಾ ಅಬೂಬಕರ್"*
[27 Oct,2016]
  • ಪ್ರಾರಂಭದಲ್ಲಿ ಸುನ್ನಿ ಮತ್ತು ಶಿಯಾ ಎಂಬ ಎರಡು ಪಂಗಡಗಳಾದವು. ಸುನ್ನಿಗಳು ಪ್ರವಾದಿಗಳ ಪ್ರಥಮ ಅನುಯಾಯಿ ಅಬೂಬಕ್ಕರ್‌ ಸಿದ್ಧಿಖ್‌ ಅವರ ಬೆಂಬಲಿಗರಾಗಿದ್ದರೆ, ಶಿಯಾ ಪಂಗಡವು ಪ್ರವಾದಿಗಳ ನಾಲ್ಕನೇ ಅನುಯಾಯಿಯೂ, ಅವರ ಅಳಿಯನೂ, ದಾಯಾದಿಯೂ ಆಗಿದ್ದ ಹಲಿ ಅವರ ಬೆಂಬಲಿಗರಾಗಿದ್ದಾರೆ. ಈ ಎರಡು ಪಂಗಡಗಳಲ್ಲಿ ಪರಸ್ಪರ ಎಷ್ಟೊಂದು ದ್ವೇಷವಿದೆಯೆಂದರೆ ಸುನ್ನಿಗಳು, ಶಿಯಾ ಪಂಗಡದವರನ್ನು ಮುಸ್ಲಿಮರೇ ಅಲ್ಲವೆನ್ನುತ್ತಾ ಪಾಕಿಸ್ತಾನದಲ್ಲಿ ಅವರ ಮಸೀದಿಗಳಿಗೆ ಬೆಂಕಿ ಹಚ್ಚುವುದು, ಮಸೀದಿಯಲ್ಲಿ ಪ್ರಾರ್ಥನೆ ಮಾಡುವವರನ್ನು ಹತ್ಯೆ ಮಾಡುವ ಮಟ್ಟಕ್ಕೆ ದ್ವೇಷ ಬೆಳೆದಿದೆ. ಈಗ ಈ ಎರಡೂ ಪಂಗಡಗಳು ಒಡೆದು ಹಲವಾರು ಹೋಳುಗಳಾಗಿವೆ.
  • ಈಗ ಇಸ್ಲಾಂ ಸಮಾಜದ ಎಲ್ಲ ಪುರುಷರೂ ಒಟ್ಟು ಸೇರಿ, ಬಾಯಿ ಮಾತಿನಲ್ಲಿ ಒಂದೇ ಉಸಿರಿನಲ್ಲಿ ಮೂರು ಬಾರಿ ತಲಾಖ್‌ ಹೇಳಿ ಹೆಣ್ಣೊಬ್ಬಳನ್ನು ನಿರ್ಗತಿಕಳನ್ನಾಗಿಸುವ ನಿಯಮದ ತಿದ್ದುಪಡಿಗೆ ಸರ್ಕಾರ ಮುಂದಾಗುವುದನ್ನು ವಿರೋಧಿಸಲು ಪ್ರಾರಂಭಿಸಿದ್ದಾರೆ. ಇಸ್ಲಾಂ ಧಾರ್ಮಿಕ ನಿಯಮದಲ್ಲಿ ಸರ್ಕಾರದ ಹಸ್ತಕ್ಷೇಪವೆಂಬ ಕೂಗು ಆರಂಭವಾಗಿದೆ. ವಿವಾಹ, ವಿಚ್ಛೇದನ, ಜೀವನಾಂಶ ಇವೆಲ್ಲವೂ ನಾಗರಿಕ ನಿಯಮಗಳೇ ಹೊರತು ಧಾರ್ಮಿಕ ನಿಯಮಗಳಲ್ಲ. ‘ನೀವು ಯಾವ ದೇಶದಲ್ಲಿ ಬದುಕುತ್ತಿದ್ದೀರೊ ಆ ದೇಶದ ನಾಗರಿಕ ನಿಯಮಗಳನ್ನು ಅನುಸರಿಸಿ’ ಎಂಬುದು ಪ್ರವಾದಿಗಳ ಉಪದೇಶವಾಗಿದೆ.
  • ಮುಸ್ಲಿಂ ಧಾರ್ಮಿಕ ನಿಯಮಗಳೆಂದರೆ, ನಿರಾಕಾರನಾದ ಏಕ ದೇವನಲ್ಲಿ ವಿಶ್ವಾಸ, ನಮಾಜ್‌, ಉಪವಾಸ ವ್ರತ, ಕಡ್ಡಾಯ ದಾನ, ಹಜ್‌ ಯಾತ್ರೆ ಇತ್ಯಾದಿ. ಈ ನಿಯಮಗಳಲ್ಲಿ ಸರ್ಕಾರ ಎಂದೂ ಹಸ್ತಕ್ಷೇಪ ಮಾಡುವುದಿಲ್ಲ. ಇನ್ನು ಏಕರೂಪ ನಾಗರಿಕ ಸಂಹಿತೆ ಕುರಿತು ಚಿಂತಿಸೋಣ. ನಮಗೆ ಏಕರೂಪ ನಾಗರಿಕ ಸಂಹಿತೆ ಬೇಡವಾದರೆ ಈಗ ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತಿರುವ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಕ್ರಿಮಿನಲ್‌ ಪ್ರೊಸೀಜರ್‌ ಕೋಡ್‌) ಯಾಕೆ ಬೇಕು? ಮುಸ್ಲಿಮರು ತಮ್ಮದೇ ದಂಡ ಪ್ರಕ್ರಿಯಾ ಸಂಹಿತೆಗೇ ಅಂಟಿಕೊಳ್ಳಬಹುದಲ್ಲವೇ?
  • ಕದ್ದಾತನ ಕೈ ಕಡಿಯಬೇಕು, ಕೊಲೆ ಮಾಡಿದವನ ತಲೆಯನ್ನು ಸಾರ್ವಜನಿಕ ಸ್ಥಳದಲ್ಲಿ ಕಡಿಯಬೇಕು, ಹೆಂಡ ಕುಡಿದವನಿಗೆ ನೂರು ಛಡಿ ಏಟು ನೀಡಬೇಕು, ಅನೈತಿಕ ಸಂಬಂಧ ಹೊಂದಿದ ಗಂಡು ಅಥವಾ ಹೆಣ್ಣಿಗೆ ನೂರು ಛಡಿ ಏಟಿನ ಶಿಕ್ಷೆ ನೀಡಬೇಕು... ಈ ರೀತಿ ಅಪರಾಧ ಎಸಗುವ ಮುಸ್ಲಿಮರಿಗೆ ಈ ದಂಡ ಸಂಹಿತೆಯೇ ಜಾರಿಗೆ ಬರಲಿ ಎನ್ನಲಾಗುತ್ತದೆಯೇ? ಅಂಥ ಶಿಕ್ಷೆ ಅನುಭವಿಸಿದವರಿಗೆ ಸ್ವರ್ಗದಲ್ಲಿ ಸೀಟು ಮೀಸಲಿಡಲಾಗುತ್ತದೆ!
  • ಇನ್ನು ‘ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ ಭಾರತದ ಎಲ್ಲ ಮುಸ್ಲಿಮರ ಪ್ರಾತಿನಿಧಿಕ ಸಂಘಟನೆ ಅಲ್ಲ. ಅವರು ಎಂತಹ ನಿಯಮವನ್ನು ನಮ್ಮ ಮೇಲೆ ಹೇರಿದರೂ ನನ್ನಂತಹವರ ಕುಟುಂಬಕ್ಕೆ ಅದು ಅನ್ವಯಿಸುವುದಿಲ್ಲ. ಪ್ರವಾದಿಗಳು ಎಂದೂ ಇಂತಹ ಸಂಘಟನೆ ಸ್ಥಾಪಿಸಿ ಅದರ ಆದೇಶದಂತೆ ಮುಸ್ಲಿಮರು ಬದುಕಬೇಕೆಂದು ಹೇಳಿಲ್ಲ. ನಾನು ಮತ್ತು ನನ್ನ ಕುಟುಂಬ ಈ ದೇಶದ ಸಂವಿಧಾನಕ್ಕನುಸಾರವಾಗಿ ಬದುಕುತ್ತಿದ್ದೇವೆ.
  • ಶಾಯಿರಾ ಬಾನು ಎಂಬ ಮಹಿಳೆಗೆ ಗಂಡ ಈ ರೀತಿ ತಲಾಖ್ ನೀಡಿದ್ದು ಮಾತ್ರವಲ್ಲ ಆಕೆ ತನ್ನ ಮಕ್ಕಳೊಡನೆ ಫೋನಿನಲ್ಲೂ ಮಾತನಾಡದಂತೆ ನಿರ್ಬಂಧ ಹೇರಿದ್ದಾನೆ.ಇಬ್ಬರು ಮಕ್ಕಳಾದ ಬಳಿಕ ಆಕೆಗೆ ನಾಲ್ಕೈದು ಬಾರಿ ಗರ್ಭಪಾತ ಮಾಡಿಸಿದ್ದಾನೆ. ಮಹಿಳೆಯರು ಇಂಥ ಸರ್ವಾಧಿಕಾರಿ ಮನೋಭಾವವನ್ನು ಅರ್ಥ ಮಾಡಿಕೊಳ್ಳಬೇಕು.(ಇಸ್ಲಾಮಿಕ್ ದೇಶವಾಗಿದ್ದರೂ,) ಇಂದು ಪಾಕಿಸ್ತಾನ, ಬಾಂಗ್ಲಾದೇಶ, ಅರಬ್ ದೇಶ ಮುಂತಾದೆಡೆಗಳಲ್ಲಿ ಒಮ್ಮೆಗೇ ಮೂರು ಬಾರಿ ತಲಾಖ್‌ ಹೇಳುವುದನ್ನು ರದ್ದುಪಡಿಸಲಾಗಿದೆ.
  • ಇಂದು ಅಮೆರಿಕ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಬದುಕುತ್ತಿರುವವರು ಅಲ್ಲಿ ಜಾರಿಯಲ್ಲಿರುವ ಸಂವಿಧಾನವನ್ನು ಅನುಸರಿಸಬೇಕೇ ಹೊರತು ನಾಗರಿಕ ಜೀವನದಲ್ಲಿ ತಮ್ಮ ಧಾರ್ಮಿಕ ನಿಯಮಗಳಂತೆ ಬದುಕಲು ಸಾಧ್ಯವಿಲ್ಲ. ಒಮ್ಮೆಗೇ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡುವುದಕ್ಕಾಗಲಿ, ವಿಚ್ಛೇದಿತೆಗೆ ಜೀವನಾಂಶ ನೀಡದೆ ಇರುವುದಕ್ಕಾಗಲಿ ಅಲ್ಲಿನ ನಿಯಮಗಳು ಅವಕಾಶ ನೀಡುವುದಿಲ್ಲ. ಅಲ್ಲಿ ಬದುಕುವವರೆಲ್ಲರೂ ಅಲ್ಲಿನ ನಾಗರಿಕ ನಿಯಮಗಳಿಗೆ ಅನುಸಾರವಾಗಿ ಬದುಕುವುದು ಕಡ್ಡಾಯವಾಗಿದೆ.
  • ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ ಮುಸ್ಲಿಂ ಹೆಣ್ಣು ಮಕ್ಕಳ ಬದುಕು ಎಷ್ಟೋ ಸುಧಾರಿಸಬಹುದು. ಆದುದರಿಂದ ಅವರ ತಲೆಯ ಮೇಲೆ ತೂಗಾಡುತ್ತಿರುವ ಈ ತ್ರಿವಳಿ ತಲಾಖ್‌ ಎಂಬ ಖಡ್ಗದಿಂದ ಅವರನ್ನು ರಕ್ಷಿಸಬೇಕಾಗಿದೆ.
  • "ಸಾರಾ ಅಬೂಬಕರ್",($)
.

ಇಸ್ಲಾಮೀ ನ್ಯಾಯ ಪವಿತ್ರ ನ್ಯಾಯಗಳ ಶ್ರೇಣಿಗೆ ಸೇರಿದೆ[ಬದಲಾಯಿಸಿ]

ಆದ್ದರಿಂದ ಆಧುನಿಕ ವಿಚಾರ ಪರಂಪರೆಯಲ್ಲಿ ಬರುವ ನ್ಯಾಯದ ಕಲ್ಪನೆಯಿಂದ ಇದು ಭಿನ್ನವಾದದ್ದು. ಇದು ಮಾನವ ಕಲ್ಪಿತವಲ್ಲ; ದೇವರಿಂದ ಮಹಮ್ಮದರ ಮುಖಾಂತರ ಬಂದದ್ದು; ಮಹಮ್ಮದರ ಮರಣದೊಂದಿಗೆ ನ್ಯಾಯ ಬರುವ ಬಾಗಿಲು ಮುಚ್ಚಿತು; ಇದು ದೈವಸಂಕಲ್ಪ; ಈ ನ್ಯಾಯ ಬದಲಾಗದು-ಈ ನಂಬಿಕೆಗಳೇ ಇದರ ವೈಶಿಷ್ಟ್ಯ. ಇಸ್ಲಾಂ ಧರ್ಮಕ್ಕೂ ಇಸ್ಲಾಮೀ ನ್ಯಾಯಕ್ಕೂ, ಮಹಮ್ಮದ್ ಪೈಗಂಬರ್ (570-632) ಮೂಲ ಕೇಂದ್ರ. ಅವರು 622ನೆಯ ಇಸವಿಯ ಜೂನ್ ತಿಂಗಳ ದಿನಾಂಕ 20ರಂದು ಮೆಕ್ಕದಿಂದ ಮದೀನಕ್ಕೆ ಓಡಿಹೋಗಬೇಕಾಯಿತು. ಇದಕ್ಕೆ ಹಿಜರತ್ ಎನ್ನುತ್ತಾರೆ. ಮುಂದೆ ಮಹಮ್ಮದರು ಮೊದಲು ಮದೀನದಲ್ಲೂ, ಆಮೇಲೆ ಇಡೀ ಅರೇಬಿಯದಲ್ಲೂ ಲೌಕಿಕ ಮತ್ತು ಧಾರ್ಮಿಕ ಸರ್ವಾಧಿಕಾರಿಯಾದರು. ಆಗ ಅವರು ಕುರಾನಿನ ಮೇರೆಗೆ ತೀರ್ಪು ಕೊಡುತ್ತಿದ್ದರು. ಕುರಾನಿನಲ್ಲಿ ಹೇಳಿರದ ವಿಷಯಗಳಿಗೆ ಸಂಪ್ರದಾಯಗಳನ್ನು ಹಾಕಿಕೊಟ್ಟರು. ಹೀಗೆ ಇಸ್ಲಾಮೀ ನ್ಯಾಯ ಮಹಮ್ಮದರ ಕಾಲದಲ್ಲೇ ಆಚರಣೆಯಲ್ಲಿ ಬಂತು. ಮಹಮ್ಮದರ ಮರಣಾನಂತರ (632) ಕಲೀಫರು ಯಾರಾಗಬೇಕೆಂಬ ಪ್ರಶ್ನೆ ಬಂತು. ಅಬೂಬಕರ್ ಮತ್ತು ಆಲಿ ಇವರಿಬ್ಬರೂ ಅವರ ಸಂಬಂಧಿಗಳೂ ಅನುಯಾಯಿಗಳೂ ಆಗಿದ್ದರು. ಅವರ ಪತ್ನಿಯರಲ್ಲಿ ಒಬ್ಬಳಾದ ಆಯಷಳ ತಂದೆಯಾದ ಅಬುಬಕರ್ ಬಹು ಜನದ ಅಭಿಪ್ರಾಯದ ಮೇರೆಗೆ ಕಲೀಫನಾದ. ಆದರೆ ಅಲ್ಪ ಸಂಖ್ಯಾತರು ಅವರ ಚಿಕ್ಕಪ್ಪನ ಮಗನೂ ಅವರ ಮಗಳಾದ ಫಾತಿಮಾಳ ಗಂಡನೂ ಆದ ಆಲಿಯೇ ಕಲೀಫನಾಗಬೇಕೆಂದು ಆಶಿಸಿದ್ದರು. ಕಲೀಫನನ್ನು ಆರಿಸಿದ ಬಹುಸಂಖ್ಯಾತರು ಸುನ್ನತ್ ಜಮಾತ್ ಎನಿಸಿಕೊಂಡರು. ಇಮಾಮನಲ್ಲಿ ನಂಬಿಕೆಯಿದ್ದ ಅಲ್ಪ ಸಂಖ್ಯಾತರು ಷಿಯ ಮತೀಯರಾದರು. ಹೀಗೆ ಈ ಇಬ್ಬರಿಂದ ಎರಡು ಮತಭೇದಗಳು ಹುಟ್ಟಿದುವು. ಇಸ್ಲಾಮೀ ನ್ಯಾಯವನ್ನು ಮುಸ್ಲಿಂ ಮತಭೇದಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅಬುಬಕರ್ ಮತ್ತು ಅಲಿ-ಇವರ ಸಂಪ್ರದಾಯಗಳು ಇಸ್ಲಾಮೀ ನ್ಯಾಯಕ್ಕೆ ಆಧಾರಗಳೂ ನ್ಯಾಯದ ಪ್ರಭೇದಗಳಿಗೆ ಕಾರಣಗಳೂ ಆದುವು.[೧]

ಇಸ್ಲಾಮೀ ನ್ಯಾಯ[ಬದಲಾಯಿಸಿ]

ಇಸ್ಲಾಮೀ ನ್ಯಾಯದ ಹೆಸರು ಷರೀಯತ್, ನೀರೆರೆವ ತಾಣಕ್ಕೆ ಕರೆದೊಯ್ಯುವ ಮಾರ್ಗ, ಮಾನವ ಕ್ರಮಿಸಬೇಕಾದ ಸತ್ಪಥ-ಎಂದು ಇದರ ಅರ್ಥ; ಮನುಷ್ಯನ ಸಕಲ ಕ್ರಿಯೆಗಳಿಗೂ ಅನ್ವಯವಾಗುವಂಥ ವಿಶಾಲವಾದ ಅರ್ಥ. ಫಿಕ್ ಅಥವಾ ನ್ಯಾಯಶಾಸ್ತ್ರ ಇದರಲ್ಲಿ ಅಂತರ್ಗತವಾದದ್ದು. ಹಿಜರತ್‍ನ ಮೊದಲ ಶತಮಾನದಲ್ಲಿಯೇ ಷರೀಯತ್ ಅಥವಾ ಬೃಹತ್ ಸ್ವರೂಪದ ಇಸ್ಲಾಮೀ ನ್ಯಾಯ ರೂಪುಗೊಳ್ಳಹತ್ತಿತು. ಈ ನ್ಯಾಯ ಎಲ್ಲ ಮತಭೇದಗಳಿಗೂ ಅನ್ವಯವಾಗುವಂತೆ ಏಕ ಸ್ವರೂಪದ್ದಲ್ಲ. ಮುಖ್ಯ ಮತಭೇದಗಳಿಗೂ ಅವುಗಳ ಒಳಪಂಗಡಗಳಿಗೂ ಅನ್ವಯವಾಗುವ ನ್ಯಾಯಸೂತ್ರಗಳಲ್ಲಿ ಪ್ರಭೇದಗಳು ಇವೆ. ಇಸ್ಲಾಮೀ ನ್ಯಾಯ ಬೆಳೆದಿರುವುದೂ ಹೀಗೆಯೇ.ಇಸ್ಲಾಮೀ ನ್ಯಾಯದ ಮೂಲ ಆಧಾರಗಳೆಂದರೆ 1 ಕುರಾನ್, 2 ಹದೀಸ್ ಮತ್ತು ಸುನ್ನಾ, 3 ಇಜ್ಮಾ ಮತ್ತು 4 ಕಿಯಾಸ್.[೨]

1 ಕುರಾನ್ : ಮಹಮ್ಮದರ ಕೊನೆಯ 23 ವರ್ಷಗಳಲ್ಲಿ ಆಗಾಗ, ಅವರು ಸ್ಫೂರ್ತಸ್ಥಿತಿಯಲ್ಲಿದ್ದಾಗ, ದೇವರಿಂದ ಅವರ ಮುಖಾಂತರ ಬಂದ ಸಂದೇಶಗಳೇ ಕುರಾನು. ಕುರಾನಿನಲ್ಲಿ 114 ಸೂರ ಅಥವಾ ಅಧ್ಯಾಯಗಳುಂಟು. ಇದರಲ್ಲಿ ದೇವತಾಶಾಸ್ತ್ರ ಮತ್ತು ನ್ಯಾಯಸೂತ್ರಗಳಿವೆ. ಇದರಲ್ಲಿ ಉಕ್ತವಾಗಿರುವ ನ್ಯಾಯ ಸೂತ್ರಗಳು ಇಸ್ಲಾಂ ಧರ್ಮದ ಎಲ್ಲ ಪಂಗಡಗಳಿಗೂ ಅನ್ವಯವಾಗುತ್ತವೆ.

2 ಹದೀಸ್ ಮತ್ತು ಸುನ್ನಾ : ಹದೀಸ್ ಎಂದರೆ ಸಂಪ್ರದಾಯ ಅಥವಾ ಗುರು ಆಜ್ಞೆ. ಪೈಗಂಬರರ ಆಚರಣೆಗಳನ್ನು ಸುನ್ನಾ ಎಂದು ಕರೆಯುತ್ತಾರೆ. ಮಹಮ್ಮದರ ಆಚರಣೆಗಳು, ಅವರು ಹಾಕಿಕೊಟ್ಟ ಸಂಪ್ರದಾಯಗಳು, ಅವರು ನೀಡಿದ ನಿರ್ಣಯಗಳು ಹಾಗೂ ಅವರ ಅನುಮತಿಗಳು ಇಸ್ಲಾಮೀ ನ್ಯಾಯಕ್ಕೆ ಆಧಾರಗಳಾದುವು. ಇದರಲ್ಲಿ ಮಹಮ್ಮದರ ಸಂಗಡಿಗರ ಸಂಪ್ರದಾಯಗಳೂ ಸೇರಿದುವು. ಬರಬರುತ್ತ ಕೃತ್ರಿಮ ಸಂಪ್ರದಾಯಗಳು ಸೇರಿಕೊಂಡುವು. ಸಂಪ್ರದಾಯಗಳ ಸಂಖ್ಯೆ 6 ಲಕ್ಷದಷ್ಟಾಗಿತ್ತು. ಅದರಲ್ಲಿ 7 ಸಾವಿರ ಸಂಪ್ರದಾಯಗಳು ಮಾತ್ರ ನಿಜವಾದವು ಇರಬಹುದೆಂದು ಅಲ್-ಬುಖಾರಿ ಹೇಳುತ್ತಾನೆ. ಅನೇಕ ನ್ಯಾಯವೇತ್ತರು ಈ ಸಂಪ್ರದಾಯಗಳ ಸಂಕಲನ ಮಾಡಿದ್ದಾರೆ.

(ಅ) ಸುನ್ನತ್ ಜಮಾತ್ ಪಂಗಡದ ಮುಖ್ಯ ಸಂಕಲನಗಳು : 1 ಇಮಾಮ್ ಮುಲಿಕ್‍ನ ಮುವತ್, 2 ಅಬು-ಅಬ್ದುಲ್-ಅಹಮದ್‍ಹನ್‍ಬಲ್‍ನ ಮಸನದ್, 3 ಅಲ್-ಬುಖಾರಿಯ ಸಾಹಿ ಬುಖಾರಿ ಮತ್ತು 4 ಇಮಾಮ್ ಮುಸ್ಲಿಮ್‍ನ ಸಾಹಿ ಮುಸ್ಲಿಂ. ಇವುಗಳಲ್ಲದೆ ಇಮಾಮ್ ಷಾಪಯ್ ಮೊದಲಾದವರ ಸಂಕಲನಗಳೂ ಪ್ರಸಿದ್ಧ.

(ಆ) ಷಿಯ ಮತದವರ ಸಂಕಲನಗಳು : 1 ಅಬುಜಾಫರನ ಎರಡು ಸಂಕಲನಗಳು : ತಹಜೀಬ-ಉಲ್-ಅಹಕಾಮ್ ಮತ್ತು ಇಸ್ತಿಬ್ಸಾರ್, 2 ಮಹಮದ್-ಬಿನ್-ಯಾಕೂಬನ ಜಮೀ-ಉಲ್-ಕಾಫಿಯ್, 3 ಷೇಖ್ ಮಹಮ್ಮದನ ಮನ್-ಲಾಯಸ್-ತಹಜೀರ್ಹುಲ್ ಮೊದಲಾದುವು. 3 ಇಜ್ಮಾ : ಇಜ್ಮಾ ಎಂದರೆ ಸರ್ವಸಮ್ಮತಿ ಅಥವಾ ಸಾಮಾನ್ಯ ಅಭಿಪ್ರಾಯ. ಕುರಾನ್ ಮತ್ತು ಸಂಪ್ರದಾಯಗಳ ಆಧಾರದ ಮೇಲೆಯೇ ಕಾಲಕ್ರಮದಲ್ಲಿ ಉದ್ಭವಿಸಿದ ಹೊಸ ಹೊಸ ಸಮಸ್ಯೆಗಳನ್ನು ನಿರ್ಧರಿಸುವುದು ಕಷ್ಟವಾಯಿತು. ಕುರಾನಿನ ಸೂರಗಳಲ್ಲಿಯೇ ನ್ಯಾಯವೇತ್ತರ ಮತ್ತು ಪಂಡಿತರ ಒಮ್ಮತ ಅಥವಾ ಸಾಮಾನ್ಯಾಭಿಪ್ರಾಯಕ್ಕೆ ಮಾನ್ಯತೆ ಕೊಡುವಂತೆ ಹೇಳಿದೆ. ಜನಸಾಮಾನ್ಯರ ಸಾಮಾನ್ಯಾಭಿಪ್ರಾಯಗಳನ್ನೂ ಆಗಾಗ್ಗೆ ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಪಂಡಿತರ (ಉಲೇಮಾಗಳ) ಮತ್ತು ಮೂಲಗ್ರಂಥಗಳ ಆಧಾರದ ಮೇಲೆ ತೀರ್ಪುಗಳನ್ನು ಅಭಿಪ್ರಾಯಗಳನ್ನೂ ಕೊಡುತ್ತಿದ್ದ ಮುಜ್ತಹಿದರ ಒಮ್ಮತಗಳು ನ್ಯಾಯ ವಿಷಯದಲ್ಲಿ ಪ್ರಮಾಣಗಳಾದುವು.

4 ಕಲಿಯಾಸ್ : ಮುಸ್ಲಿಂ ನ್ಯಾಯಶಾಸ್ತ್ರಜ್ಞರು ತಮ್ಮ ವಿವೇಕ, ಯುಕ್ತಾಯುಕ್ತ e್ಞÁನ ಮತ್ತು ತರ್ಕಶಕ್ತಿಗಳಿಂದ ವಿವೇಚಿಸಿ ಕುರಾನ್ ಮತ್ತು ಸಂಪ್ರದಾಯಗಳಿಗೆ ಅಧೀನವೂ ಸಮ್ಮತವೂ ಆಗಿರುವಂಥ ನಿರ್ಣಯಗಳನ್ನು ಕೊಡುತ್ತಿದ್ದರು. ಈ ಪ್ರಕಾರದ ತಾರ್ಕಿನ ಸಾದೃಶ್ಯದ ಪದ್ಧತಿಯ ಉಪಯೋಗವನ್ನು ಕಿಯಾಸ್ ಎಂದು ಹೇಳಬಹುದು. ಪಾಶ್ಚಾತ್ಯ ನ್ಯಾಯದಲ್ಲಿನ ವಿಧಿಪರಿಕಲ್ಪನೆ ಕಿಯಾಸ್ಗೆ ಹತ್ತಿರವಾದದ್ದು. ಮೌಜ್ನ ಉದಾಹರಣೆಯಿಂದ ಕಿಯಾಸ್‍ಗೆ ಮಹಮ್ಮದರ ಒಪ್ಪಿಗೆ ಇತ್ತು ಎಂಬುದು ತಿಳಿದು ಬರುತ್ತದೆ. ಕಿಯಾಸನ್ನು ಸುನ್ನತ್ ಜಮಾತ್‍ನವರು ಸಾಧಾರಣವಾಗಿ ಇಸ್ಲಾಮೀ ನ್ಯಾಯದ ಮೂಲಾಧಾರಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ. ಷಿಯ ಮತದ ಒಂದು ಒಳಪಂಗಡ ಮಾತ್ರ ಇದನ್ನು ಗಣನೆಗೆ ತೆಗೆದುಕೊಳ್ಳುತ್ತದೆ.


ಇಸ್ಲಾಮೀ ನ್ಯಾಯಕ್ಕೆ ಸಂಬಂಧಿಸಿದ ಶಾಖೆಗಳು[ಬದಲಾಯಿಸಿ]

ಇಸ್ಲಾಂ ಧರ್ಮದ ಭಿನ್ನ ಭಿನ್ನ ಪಂಗಡಗಳಿಗೆ ಅನ್ವಯವಾಗುವ ನ್ಯಾಯಸೂತ್ರಗಳು ಭಿನ್ನವಾಗಿದ್ದುವು. ಈ ವ್ಯತ್ಯಾಸಗಳು ಒಂದು ಸ್ಪಷ್ಟರೂಪದಲ್ಲಿ ಆಚರಣೆಯಲ್ಲಿ ಬರುವುದಕ್ಕೆ ಸ್ವಲ್ಪ ಕಾಲ ಹಿಡಿಯಿತು. 6ನೆಯ ಇಮಾಮರ ಕಾಲಕ್ಕೆ ಷಿಯ ಮತೀಯರಿಗೆ ಅನ್ವಯವಾಗುವ ನ್ಯಾಯ ಆಸ್ತಿತ್ವಕ್ಕೆ ಬಂತು. ಹೀಗೆ ಇಸ್ಲಾಂ ಧರ್ಮದ ಒಳಪಂಗಡಗಳ ವಿಚಾರ ಆಚಾರಗಳು, ಇಸ್ಲಾಂ ಪೂರ್ವದ ರೂಢಿಗಳು, ಇಸ್ಲಾಂ ಧರ್ಮವನ್ನು ಸ್ವೀಕರಿಸಿದವರಲ್ಲಿ ಉಳಿದುಬಂದ ಸಂಪ್ರದಾಯಗಳು, ಹೊಸದಾಗಿ ಬೆಳೆಯಹತ್ತಿದ ಇಸ್ಲಾಂ ಧರ್ಮಕ್ಕೂ ಇಸ್ಲಾಂ ರಾಜಕೀಯ ಅಧಿಕಾರಕ್ಕೂ ಒಳಗಾದ ಪ್ರದೇಶಗಳ ನಡೆವಳಿಕೆಗಳು, ಮತ್ತು ರೋಮನ್ ಮೊದಲಾದ ನ್ಯಾಯ ವ್ಯವಸ್ಥೆಗಳ ಬಾಹ್ಯ ಪ್ರಭಾವಗಳು ಇಸ್ಲಾಮೀ ನ್ಯಾಯದ ವಿವಿಧ ಶಾಖೆಗಳ ಆಸ್ತಿತ್ವಕ್ಕೂ ವಿಕಾಸಕ್ಕೂ ಕಾರಣವಾದುವು.

(ಅ) ಸುನ್ನತ್ ಜಮಾತ್‍ಗೆ ಸಂಬಂಧಿಸಿದ ಶಾಖೆಗಳು[ಬದಲಾಯಿಸಿ]

1 ಹನಾಫಿ ಶಾಖೆ : ಸುನ್ನತ್ ಜಮಾತ್‍ಗೆ ಸಂಬಂಧಿಸಿದ ಶಾಖೆಗಳಲ್ಲಿ ಹನಾಫಿ ಶಾಖೆ ಬಹಳ ಪ್ರಸಿದ್ಧಿ ಪಡೆದಿದೆ. ಈ ಶಾಖೆಯನ್ನು ಕುಫಾ ಶಾಖೆ ಎಂದು ಕರೆಯುವುದುಂಟು; ಆದರೂ ಹನಾಫಿ ಶಾಖೆ ಎಂಬ ಹೆಸರೇ ಪ್ರಚಾರದಲ್ಲಿದೆ. ಈ ಶಾಖೆಗೆ ಇರಾಕಿನ ಅಬುಹನೀಫನ (699-767) ಹೆಸರು ಬಂದಿದೆ. ಈ ಶಾಖೆಯವರು ಸಂಪ್ರದಾಯಗಳಿಗೆ ಮಹತ್ತ್ವ ಕೊಟ್ಟರೂ ನಿಜವಾದ ಸಂಪ್ರದಾಯಗಳಿಂದ ಖಚಿತಪಟ್ಟ ಕೆಲವೇ ಆಚಾರಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಕಿಯಾಸ್ ಎಂದರೆ ತರ್ಕದಿಂದ ಪ್ರಾದುರ್ಭವಿಸಿದ ಪ್ರಮಾಣಗಳು. ಇವರು ವಿಧಿಪರಿಕಲ್ಪನೆಯ ತತ್ತ್ವಗಳನ್ನು ಒಪ್ಪುತ್ತಾರೆ, ಇಜ್ಮಾದ ವ್ಯಾಪ್ತಿಯನ್ನು ಹೆಚ್ಚಿಸಿದ್ದಾರೆ. ಈ ಶಾಖೆಯ ಮುಖ್ಯ ತತ್ತ್ವ ಇಸ್ತಹ್ ಸಾನ್ ಅಥವಾ ಔಚಿತ್ಯ. ಅಬು ಹನೀಫನ ಶಿಷ್ಯರಲ್ಲಿ ಅಬು ಯೂಸುಫ್ (731-798). ಇಮಾಮ್-ಮಹಮ್ಮದ್ ಆಶ್-ಷಾಯ್ಬಾನಿ (749-802) ಮುಂತಾದವರು ಮುಖ್ಯರು. ಈ ಶಾಖೆಯ ಅನುಯಾಯಿಗಳು ಅರೇಬಿಯ, ಸಿರಿಯ, ಈಜಿಪ್ಟ್, ತುರ್ಕಿ, ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಉತ್ತರ ಭಾರತದಲ್ಲಿ ಇದ್ದಾರೆ. ಇದರ ಪ್ರಸಿದ್ಧಿಗೆ ಆಟೊಮನ್ ಚಕ್ರಾಧಿಪತ್ಯದ ಮಾನ್ಯತೆಯೂ ಕಾರಣವಾಯಿತು.

2 ಮಾಲಿಕಿ ಶಾಖೆ : ಈ ಶಾಖೆಯನ್ನು ಮದೀನದ ಮಲಿಕ್ ಇಬ್ನ ಅನಸ್ (713-795) ಸ್ಥಾಪಿಸಿದ. ಈತನ ಮುವತ್ ಎಂಬ ಸಂಕಲನಗ್ರಂಥ ಪ್ರಸಿದ್ಧವಾಗಿದೆ. ಈ ಶಾಖೆಯವರು ಕುರಾನ್ ಮತ್ತು ಸುನ್ನಾಗಳ ಜೊತೆಗೆ ಮದೀನದ ಸಂಪ್ರದಾಯಗಳಿಗೆ ಹೆಚ್ಚು ಮಹತ್ತ್ವ ಕೊಡುತ್ತಾರೆ. ಕಿಯಾಸ್‍ಗೆ ಬಹಳ ಮಹತ್ತ್ವ ಕೊಡದಿದ್ದರೂ ಸಾಧಾರಣವಾಗಿ ಇದನ್ನೂ ಗಣನೆಗೆ ತೆಗೆದುಕೊಳ್ಳುತ್ತಾರೆ. ಈ ಶಾಖೆಯ ಮುಖ್ಯ ತತ್ತ್ವ ಮುಸ್ಲಹತ್ ಅಥವಾ ಸಾರ್ವಜನಿಕ ಮೇಲ್ಮೆ ಎಂಬುದಾಗಿದೆ. ಉತ್ತರ ಮತ್ತು ಪಶ್ಚಿಮ ಆಫ್ರಿಕ, ಸೂಡಾನ್ ಮತ್ತು ಪರ್ಷಿಯ ದೇಶಗಳಲ್ಲಿ ಈ ಶಾಖೆಯವರು ಇದ್ದಾರೆ.

3 ಷಾಷಯ್ ಶಾಖೆ : ಈ ಶಾಖೆಗೆ ಇಮಾಂ ಷಾಷಯ್‍ನ (767-820) ಹೆಸರು ಬಂದಿದೆ. ಈತ ಮಹಮ್ಮದ್ ಪೈಗಂಬರರ ವಂಶಸ್ಥ. ಇಮಾಂ ಮಲಿಕ್ ಮತ್ತು ಇಮಾಂ ಮಹಮ್ಮದ್ ಈತನ ಗುರುಗಳು. ಷಾಷಯ್ ನ್ಯಾಯಶಾಸ್ತ್ರದಲ್ಲಿ ಪಂಡಿತನಾಗಿದ್ದನಲ್ಲದೆ, ಅದಕ್ಕೊಂದು ವ್ಯವಸ್ಥಿತ ರೂಪು ಕೊಟ್ಟ. ಈ ಶಾಖೆಯವರು ಇಸ್ತೆಹ್‍ಸಾನ್ ಮತ್ತು ಇಸ್ತೆಸ್ಲಾಹ್‍ಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಸಂಪ್ರದಾಯಗಳಿಗೆ ಹೆಚ್ಚು ಮಹತ್ತ್ವ ಕೊಡುವುದರ ಜೊತೆಗೆ ಸತ್ಯತೆಯ ಬಗ್ಗೆ ಸಂಶೋಧನೆ ನಡೆಸಿದ ಹಿರಿಮೆ ಈ ಶಾಖೆಗಿದೆ. ಇಜ್ಮಾಕ್ಕೆ ಪ್ರಾಧಾನ್ಯ ದೊರೆತದ್ದು ಷಾಷಯ್‍ನ ಕಾಲದಲ್ಲಿ ಎಂದು ಹೇಳಬಹುದು. ಈ ಶಾಖೆಯವರು ಅರೇಬಿಯ, ಪೂರ್ವ ಆಫ್ರಿಕ, ಸಿಂಹಳ, ದಕ್ಷಿಣ ಭಾರತ, ಜಾವ, ಇಂಡೊನೇಷ್ಯ, ಮಲಯ ಮುಂತಾದ ದೇಶಗಳಲ್ಲಿದ್ದಾರೆ.

4 ಹನ್‍ಬಲಿ ಶಾಖೆ : ಹೊಸ ಹೊಸ ತತ್ತ್ವಗಳೂ ಅಭಿಪ್ರಾಯಗಳೂ ಪೈಗಂಬರರ ಸಂಪ್ರದಾಯಗಳ ಮೂಲಕ ಬಂದ ನ್ಯಾಯದ ಸ್ವರೂಪವನ್ನು ಬದಲಿಸುತ್ತಿವೆ. ಹಾಗಾಗಬಾರದು ಎಂಬ ಪ್ರತಿಕ್ರಿಯೆ ಆರಂಭವಾಯಿತು. ಈ ರೀತಿಯ ಪ್ರತಿಕ್ರಿಯೆ ಇದ್ದವರು ಅಬು ಅಬ್ದುಲ್ ಅಹಮ್ಮದ್ ಹನ್‍ಬಾಲನ (780-855) ಅನುಯಾಯಿಗಳಾದರು. ಈ ಕಾರಣದಿಂದಾಗಿ ಈ ಶಾಖೆಗೆ ಹನ್ಬಲಿ ಶಾಖೆ ಎಂದು ಹೆಸರು ಬಂದಿದೆ. ಅಹಮ್ಮದ್ ಹನ್‍ಬಾಲನ ಸಂಪ್ರದಾಯಗಳ ಸಂಕಲನ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಈ ಶಾಖೆ ಕಿಯಾಸ್ ಮತ್ತು ಇಜ್ಮಾಗಳ ವ್ಯಾಪ್ತಿಯನ್ನು ಹೆಚ್ಚು ಪರಿಮಿತಗೊಳಿಸಿತಲ್ಲದೆ, ಸಂಪ್ರದಾಯಗಳಿಗೆ ಬಹಳ ಮಹತ್ತ್ವ ಕೊಟ್ಟಿತು. ಈ ಶಾಖೆಯವರು ಪರ್ಷಿಯ ಮತ್ತು ಮಧ್ಯ ಅರೇಬಿಯದಲ್ಲಿ ಇದ್ದಾರೆ.

5 ಈ ನಾಲ್ಕು ಮುಖ್ಯ ಶಾಖೆಗಳಲ್ಲದೆ ಹಲವಾರು ಶಾಖೆಗಳು ಹುಟ್ಟಿಕೊಂಡರೂ ಪ್ರಸಿದ್ಧಿಗೆ ಬಾರದೆ ಹೋದುವು; ಕೆಲವಂತೂ ಹೇಳ ಹೆಸರಿಲ್ಲವಾದುವು. ದಾವೂದ್-ಇಬ್ನ್-ಆಲಿಯ ಝಾಹಿರಿ ಶಾಖೆ ಸುಮಾರು ಒಂದು ಶತಮಾನ ಕಾಲ ಬದುಕಿತ್ತು. ಮಹ್‍ದವೀಯ ಎಂಬ ಒಂದು ಪಂಗಡವೂ ಉಂಟು. ಇವರು ದಕ್ಷಿಣ ಭಾರತದಲ್ಲಿ, ಅದರಲ್ಲೂ ಮೈಸೂರು ಮತ್ತು ಆಂಧ್ರ ಪ್ರದೇಶಗಳಲ್ಲಿ ಇದ್ದಾರೆ. ಇಂದಿಗೂ ಉಳಿದಿರುವ ಶಾಖೆಗಳಲ್ಲಿ ವಹಾಬೀಗಳದು ಒಂದು. ವಹಾಬೀಗಳು ಅರೇಬಿಯದ ಅಬ್ದುಲ್ ವಹಾಬನ ಮಗನಾದ ಮಹಮ್ಮದನ ಅನುಯಾಯಿಗಳು. 1691ರಲ್ಲಿ ಹುಟ್ಟಿದ ಮಹಮ್ಮದ್ ಇಸ್ಲಾಂ ಮತದ ಪುರಾತನ ತತ್ತ್ವಗಳನ್ನು ಮಾತ್ರ ಆಚರಣೆಗೆ ತರಬಯಸಿದ. ಈ ಶಾಖೆಯವರು ಕಠಿಣ ನ್ಯಾಯವಾದಿಗಳು. ಕುರಾನಿಗೂ ಮೂಲ ಸಂಪ್ರದಾಯಗಳಿಗೂ ಸ್ವಬುದ್ಧಿಗೂ ಪ್ರಾಧಾನ್ಯಕೊಟ್ಟರು. ವಹಾಬೀಗಳು ತಕ್‍ಲಿದ್ ಪದ್ಧತಿಯನ್ನು ಖಂಡಿಸುತ್ತಾರೆ. ವಹಾಬೀಗಳ ಹಲವು ಪಂಗಡಗಳು ಪಾಕಿಸ್ತಾನ ಮತ್ತು ಭಾರತಗಳಲ್ಲಿ ಇವೆ.

(ಆ) ಷಿಯ ಮತಕ್ಕೆ ಸೇರಿದ ಶಾಖೆಗಳು[ಬದಲಾಯಿಸಿ]

ಷಿಯ ಮತೀಯರಿಗೆ ಇಮಾಮರಲ್ಲಿ ನಂಬಿಕೆ. ಷಿಯ ಮತದವರಲ್ಲಿ ಕೂಡ ಹಲವು ಒಳಪಂಗಡಗಳು ಇವೆ. ಅವರಿಗೆ ಅನ್ವಯವಾಗುವ ನ್ಯಾಯಸೂತ್ರಗಳು ಅವರವರ ಶಾಖೆಗಳ ಪ್ರಕಾರವಾಗಿರುತ್ತವೆ. ಕುರಾನ್, ಮಹಮ್ಮದರ ಸಂಪ್ರದಾಯಗಳು ಇವು ನ್ಯಾಯ ವಿಷಯದಲ್ಲಿ ಇವರಿಗೆ ಪ್ರಮಾಣಗಳು, ಇಜ್ಮಾ ತತ್ತ್ವವನ್ನು ಇವರು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇಮಾಮರಿಂದ ನೇಮಕ ಹೊಂದಿದ ಮುಜ್ತಹಿಂದರಿಗೆ ಷಿಯ ಮತದವರು ಹೆಚ್ಚು ಮಹತ್ತ್ವ ಕೊಡುತ್ತಾರೆ. ಅವರಲ್ಲಿರುವ ಮುಖ್ಯ ಶಾಖೆಗಳು ಇವು :

1 ಅಸ್ನಾ-ಅಷಾರಿಗಳು : ಇವರು ಆಲಿಯಿಂದ ಹಿಡಿದು ಮಹಮ್ಮದನವರೆಗಿನ 12 ಇಮಾಮರ ಅನುಯಾಯಿಗಳು. ಇವರಲ್ಲಿ ಅಕ್ಬರಿಗಳು ಮತ್ತು ಉಸೂಲಿಗಳು ಎಂಬ ಒಳಪಂಗಡಗಳಿವೆ. ಅಕ್ಬರಿಗಳಿಗೆ ನ್ಯಾಯ ವಿಷಯಗಳಲ್ಲಿ ಮುಜ್ತಹಿದರ ಅಭಿಪ್ರಾಯಗಳೇ ಪ್ರಮಾಣ. ಉಸೂಲಿಗಳು ಹಲವು ವಿಷಯಗಳಲ್ಲಿ ಕಿಯಾಸನ್ನು ಗಣನೆಗೆ ತೆಗೆದುಕೊಳ್ಳುವುದುಂಟು. ವಿಶ್ವದ ಅನೇಕ ದೇಶಗಳಲ್ಲಿರುವ ಅಸ್ನಾ-ಆಷಾರಿಗಳು ಪರ್ಷಿಯ, ಪಾಕಿಸ್ತಾನ ಮತ್ತು ಭಾರತದಲ್ಲೂ ಇದ್ದಾರೆ.

2 ಝಯ್‍ದಿಗಳು : ಷಿಯ ಮತದವರಲ್ಲಿ ನಾಲ್ಕನೆಯ ಇಮಾಮರ ತರುವಾಯ ಭಿನ್ನಾಭಿಪ್ರಾಯಗಳು ಬಂದುವು. ಮಹಮ್ಮದ್ ಅಲಿ ಬಕೀರನನ್ನು ಐದನೆಯ ಇಮಾಮನೆಂದು ಪರಿಗಣಿಸಲಾಯಿತು. ಇದನ್ನು ಹಲವರು ಒಪ್ಪಲಿಲ್ಲ. ಅವರು ಈತನ ಸಹೋದರ ಝಯಿದನನ್ನು ಇಮಾಮನೆಂದು ಸ್ವೀಕರಿಸಿದರು. ಯೆಮೆನ್ನಿನ ಇಮಾಮರು ಇವನ ವಂಶಜರು. ಇವರ ನ್ಯಾಯಸೂತ್ರಗಳು ಸುನ್ನತ್ ಜಮಾತ್ ನ್ಯಾಯಸೂತ್ರಗಳಿಗೆ ಸಮೀಪವರ್ತಿಗಳಾಗಿವೆ. ಮುತಾ ಎಂಬ ಹಂಗಾಮಿ ವಿವಾಹವನ್ನು ಇವರು ಒಪ್ಪುವುದಿಲ್ಲ. ಇವರು ಪರ್ಷಿಯದ ಉತ್ತರ ಭಾಗದಲ್ಲೂ ಅರೇಬಿಯದ ದಕ್ಷಿಣ ಭಾಗದಲ್ಲೂ ಪಾಕಿಸ್ತಾನ ಮತ್ತು ಭಾರತದಲ್ಲೂ ಇದ್ದಾರೆ.

3 ಇಸ್ಮಾಯಿಲರು : ಆರನೆಯ ಇಮಾಮ್ ಜಾಫರನ ಮರಣಾನಂತರ ಬಂದ ಇಮಾಮ್ ಮೂಸಾ-ಅಲ್-ಕಾಸಿಮನನ್ನು ಇವರು ಇಮಾಮನೆಂದು ಸ್ವೀಕರಿಸುವುದಿಲ್ಲ. ಆದರೆ ಆತನ ಸಹೋದರ ಇಸ್ಮಾಯಿಲನನ್ನು 7ನೆಯ ಇಮಾಮನೆಂದು ಪರಿಗಣಿಸುತ್ತಾರೆ. ಇಸ್ಮಾಯಿಲರಲ್ಲಿ ಪೌರಸ್ತ್ಯ ಮತ್ತು ಪಾಶ್ಚಾತ್ಯ ಇಸ್ಮಾಯಿಲರೆಂಬ ಪಂಗಡಗಳು ಅಸ್ತಿತ್ತ್ವಕ್ಕೆ ಬಂದಿವೆ. ಅರೇಬಿಯ, ಪರ್ಷಿಯ, ಸಿರಿಯ, ಪಾಕಿಸ್ತಾನ, ಭಾರತ ಮೊದಲಾದ ದೇಶಗಳಲ್ಲಿ ಇಸ್ಮಾಯಿಲರು ಇದ್ದಾರೆ.ಈ ಪ್ರಭೇದಗಳಲ್ಲದೆ ಭೋರರು, ಬಾಬಿಗಳು, ಖೋಜರು, ಷೇಖಿಗಳು ಎಂಬ ಅನೇಕ ಒಳ ಪಂಗಡಗಳು ಇವೆ. ಭೋರರ ಮುಖ್ಯಸ್ಥ ಯೆಮೆನ್ನಿನಲ್ಲಿ ಇರುತ್ತಾನೆ. ಷಿರಾಜ್ ಅಲಿ ಮಹಮ್ಮದನ ಅನುಯಾಯಿಗಳೇ ಬಾಬಿಗಳು. ಖೋಜರು ಆಗಾಖಾನನನ್ನು ತಮ್ಮ ಲೌಕಿಕ, ಧಾರ್ಮಿಕ ಮುಖ್ಯಸ್ಥನೆಂದು ಪರಿಗಣಿಸುತ್ತಾರೆ. ಷೇಖ್ ಅಹಮ್ಮದ್ ಅಹ್‍ಸಾಯನ (1753-1826) ಪಂಗಡದವರು ಷೇಖಿಗಳು.

ಇಸ್ಲಾಮೀ ನ್ಯಾಯದ ರೂಪರೇಷೆಗಳು[ಬದಲಾಯಿಸಿ]

ನಮಗೆ ಸಮೀಪವಿರುವ, ನಮ್ಮನ್ನು ರಕ್ಷಿಸುವ, ದೇವರು ನಮ್ಮ ಸಕಲ ಕಾರ್ಯಗಳಿಗೂ ಸಾಕ್ಷಿಯಿರುವ ಕಾರಣ ತಾನು ತನ್ನವರೆನ್ನದೆ, ಬಡವ-ಬಲ್ಲಿದರೆನ್ನದೆ, ನ್ಯಾಯಸಂಬಂಧದಲ್ಲಿ ಆತ್ಮಸಾಕ್ಷಿಯಾಗಿ ನಿಶ್ಚಲ ಚಿತ್ತನಾಗಿರು ಎಂಬುದು ಕುರಾನಿನ ಉಕ್ತಿ. ಸರ್ವರೂ ನ್ಯಾಯವನ್ನು ತಿಳಿದಿರಬೇಕೆಂಬುದನ್ನು ಅಬು ಹನಿಫ್ ಬೇರೊಂದು ರೀತಿಯಲ್ಲಿ-ತನ್ನ ಹಕ್ಕುಬಾಧ್ಯತೆಗಳನ್ನು ಆತ್ಮ ಅರಿತುಕೊಳ್ಳುವುದೇ ನ್ಯಾಯಶಾಸ್ತ್ರ ಎಂದು ಹೇಳಿದ್ದಾನೆ. ಸರ್ವಸಮಾನತೆ ಇಸ್ಲಾಮೀ ನ್ಯಾಯದ ತಳಹದಿ. ನ್ಯಾಯ ಅನ್ವಯಿಸುವುದು ಮನುಷ್ಯನ ಕೃತ್ಯಗಳಿಗೆ. ಕೌಲ್ ಅಥವಾ ನುಡಿ, ಅಮಲ್ ಅಥವಾ ಕೆಲಸದ ರೂಪದ್ದಾಗಿರಬೇಕು. ಈ ಕೃತ್ಯದ ಹಿಂದೆ ನಿಯ್ಯಾ ಅಥವಾ ಉದ್ದೇಶ ಇರಬೇಕು. ಉದ್ದೇಶ ಒಂದಿಲ್ಲೊಂದು ರೀತಿಯಲ್ಲಿ-ಎಂದರೆ ಇಷಾರಾಮಾಹುದಾ ಅಥವಾ ಸಂಜ್ಞೆಯ ರೂಪದಲ್ಲೋ ರಿಜಾ ಅಥವಾ ಸಮ್ಮತಿಗಳ ರೂಪದಲ್ಲೋ-ಪ್ರಕಟಗೊಳ್ಳಬೇಕು. ಸಾಧಾರಣವಾಗಿ ಇಂಥ ಕೃತ್ಯಗಳು ನ್ಯಾಯದ ವ್ಯಾಪ್ತಿಯಲ್ಲಿ ಬರುತ್ತವೆ.ಆಸ್ತಿಯ ಸ್ವರೂಪವನ್ನು ವಿಶದೀಕರಿಸಿಲ್ಲ. ಹಲವು ವಸ್ತುಗಳನ್ನು ವ್ಯವಹಾರಗಳಿಂದ ದೂರವಿಡಲಾಗಿದೆ. ಆಸ್ತಿ ಸಾರ್ವಜನಿಕರಿಗೆ ಸೇರಿರಬಹುದು; ಅಥವಾ ಯಾವೊಬ್ಬ ವ್ಯಕ್ತಿಯ ಒಡೆತನಕ್ಕೊ ಸ್ವಾಧೀನಕ್ಕೋ ಒಳಪಟ್ಟಿರಬಹುದು. ವ್ಯವಹಾರದ ವಸ್ತು-ಮಾಲ್, ಅದರ ಒಡೆತನ-ಮಿಲ್ಕ್. ಅದರ ಸ್ವಾಧೀನ-ಯದ್. ಇವುಗಳಿಗೆ ಸಂಬಂಧಿಸಿದ ವ್ಯವಹಾರಗಳನ್ನೂ ಹಕ್ಕುಬಾಧ್ಯತೆಗಳನ್ನೂ ಇಸ್ಲಾಮೀ ನ್ಯಾಯ ನಿಯಂತ್ರಣಗೊಳಿಸುತ್ತದೆ. ಪೂರ್ವ ಕ್ರಯಾಧಿಕಾರದ ಹಕ್ಕು ಮತ್ತು ನ್ಯಾಸಕ್ಕೆ ಹತ್ತಿರವೆನಿಸಿದರೂ ಅವುಗಳಿಂದ ಭಿನ್ನವಾದ ವಕ್ಫ್‍ಗಳಿಗೆ ಸಂಬಂಧಿಸಿದ ನ್ಯಾಯಸೂತ್ರಗಳು ಇದರ ವೈಶಿಷ್ಟ್ಯ. ಇಮಾಮನ ಅನುಜ್ಞೆಯನ್ನು ಪಡೆದು ಮುಸ್ಲಮಾನ್ ಅಥವಾ ಧಿಮ್ಮಿಯ (ಮುಸ್ಲಿಮನಲ್ಲದವನ) ಒಡೆತನಕ್ಕೆ ಸೇರಿರದ ಭೂಮಿಯನ್ನು ಸಾಗುಮಾಡಬಹುದು. ನೀರು ಸಾರ್ವಜನಿಕರ ವಸ್ತು. ವೈಯಕ್ತಿಕ ಒಡೆತನಕ್ಕೆ ಸೇರಿದ ಭೂಮಿಯಲ್ಲಿರುವ ಬಾವಿ ಮತ್ತು ನಾಲೆಗಳಲ್ಲಿನ ನೀರನ್ನು ಕೂಡ ದೇವತಾ ಕಾರ್ಯಕ್ಕೆ ಮತ್ತು ಕುಡಿಯುವುದಕ್ಕೆ ಮುಸ್ಲಿಂ ಜನರು ಉಪಯೋಗಿಸಬಹುದು.ವ್ಯಕ್ತಿಗೆ ಹುಟ್ಟಿನೊಂದಿಗೆ ಹಲವು ಬಾಧ್ಯತೆಗಳೂ ಅಧಿಕಾರಗಳೂ ಲಭಿಸುತ್ತವೆ; ಮರಣದೊಂದಿಗೆ ಹೋಗುತ್ತವೆ. ಗರ್ಭದಲ್ಲಿರುವ ಮಗುವಿಗೆ ಉತ್ತರಾಧಿಕಾರ ಮತ್ತು ರಿಕ್ಥಗಳನ್ನು (ಲೆಗೆಸಿ) ಪಡೆಯುವ ಹಕ್ಕು ಅಂಥ ಸಂದರ್ಭದಿಂದ ಆರು ಚಾಂದ್ರಮಾನ ತಿಂಗಳುಗಳೊಳಗೆ ಹುಟ್ಟಿದರೆ ಮಾತ್ರ ಲಭಿಸುತ್ತದೆ. ಹಲವು ಅಧಿಕಾರಿಗಳು ಬಾಲಕ ಪ್ರಾಪ್ತವಯಸ್ಕನಾದ ಮೇಲೆ ಬರುತ್ತದೆ. ವ್ಯಕ್ತಿ ಸ್ವತಂತ್ರನಾಗಲಿ, ಗುಲಾಮನಾಗಲಿ ಇರಬಹುದು. ಗುಲಾಮರನ್ನು ಸಾಧಾರಣವಾಗಿ ಆಸ್ತಿಯಂತೆ ಪರಿಗಣಿಸಲಾಗುವುದು. ಒಡೆಯನ ಅನುಮತಿ ಪಡೆದು ಗುಲಾಮರು ಮದುವೆ ಮಾಡಿಕೊಳ್ಳಬಹುದು. ಗುಲಾಮ ಒಡೆಯನಿಗೆ ಹತ್ತಿರದ ಸಂಬಂಧಿಯಾದರೆ ಗುಲಾಮತನ ಹೋಗಿಬಿಡುತ್ತದೆ. ಬೇರೆ ರೀತಿಯಲ್ಲೂ ಗುಲಾಮತನ ಹೋಗಬಹುದು.

ಒಪ್ಪಂದ ಮಾಡಿಕೊಳ್ಳುವ ವಿಧಾನ[ಬದಲಾಯಿಸಿ]

ಒಪ್ಪಂದ ಮಾಡಿಕೊಳ್ಳಲು ಸ್ವಸ್ಥ ಮನದವನೂ ವಯಸ್ಕನೂ ಆಗಿರಬೇಕು. ಸಾಕ್ಷಿಯಾಗುವುದಕ್ಕೆ ಉತ್ತಮ ಚಾರಿತ್ರ್ಯ-ಅದಲ್-ಇರಬೇಕು. ಸ್ತ್ರೀಯರಿಗೆ ಆಸ್ತಿಯಲ್ಲಿ ಹಕ್ಕುಂಟು; ಆದರೆ ಪುರುಷರಿಗೆ ಎರಡು ಪಾಲಾದರೆ ಸ್ತ್ರೀಯರಿಗೆ ಒಂದು ಪಾಲು. ಒಪ್ಪಂದ ಮಾಡಿಕೊಳ್ಳುವುದರಲ್ಲಿ ಆಕೆ ಪುರುಷನಿಗೆ ಸರಿಸಮಾನ. ವಿವಾಹ ವಿಷಯಗಳಲ್ಲಿ ಆಕೆಯ ಸ್ಥಾನ ಮೇಲಾದರೆ, ವಿವಾಹ ವಿಚ್ಛೇದನದ ಸಂಬಂಧದಲ್ಲಿ ಅವನ ಹಕ್ಕುಗಳು ಹೆಚ್ಚು. ತಾಯಿ ಚಿಕ್ಕ ಮಕ್ಕಳ ಪಾಲನೆಯ ಹೊಣೆ ಹೊರಬಹುದು. ಪೋಷಕಳಾಗಲಾರಳು. ಕೆಲವು ವಿಷಯಗಳಲ್ಲಿ ಮಾತ್ರ ಸ್ತ್ರೀ ಕಾಜಿಯಾಗಬಲ್ಲಳು.ಇಸ್ಲಾಮೀ ನ್ಯಾಯ ಇಸ್ಲಾಮೇತರನ್ನು ಬಲಾತ್ಕಾರದಿಂದ ಇಸ್ಲಾಂ ಮತಕ್ಕೆ ಸೇರಿಸಿಕೊಳ್ಳುವುದನ್ನು ಒಪ್ಪುವುದಿಲ್ಲ . ಒಪ್ಪಂದಕ್ಕೊಳಗಾದ ಮುಸ್ಲಿಮೇತರರನ್ನು ಧಿಮ್ಮಿಗಳೆಂದು ಕರೆಯುತ್ತಾರೆ. ಇವರು ಇಸ್ಲಾಂ ಧರ್ಮಕ್ಕೂ ಮುಸ್ಲಿಂ ಸಮಾಜಕ್ಕೂ ವಿಧೇಯರಾಗಿ ನಡೆಯಬೇಕು.

ನಿಕಾ[ಬದಲಾಯಿಸಿ]

ಇಸ್ಲಾಂ ವಿವಾಹದಲ್ಲಿ ಪ್ರಧಾನ ಕರ್ಮ ನಿಕಾ. ಸಂಯೋಗ ಎಂಬರ್ಥದ ಈ ಪದಕ್ಕೆ ವಿವಾಹದ ಒಪ್ಪಂದ ಎನ್ನುವ ಅರ್ಥ ಹೇಗೋ ಬಂದಿದೆ. ವಿವಾಹನಿಷಿದ್ದ ವರ್ಗಕ್ಕೆ ಸೇರದ, ಪ್ರಾಪ್ತ ವಯಸ್ಸಿನ, ಸ್ವಸ್ಥ ಮನದ ಮುಸ್ಲಿಂ ಸ್ತ್ರೀ-ಪುರುಷರ ವಿವಾಹ ಸಮಾಜ ವ್ಯವಹಾರದ ಒಂದು ಒಪ್ಪಂದ. ಇಂಥ ಒಪ್ಪಂದದಲ್ಲಿ ಸ್ತ್ರೀಗೆ ಕೊಡಬೇಕಾದ ಹಣವನ್ನು (ಮಹರ್) ಸೂಚಿಸುವುದು ಅವಶ್ಯಕ. ಹಣವನ್ನು ವಿವಾಹ ಸಮಯದಲ್ಲಾಗಲಿ ಆಮೇಲಾಗಲಿ ಕೊಡಬಹುದು. ಪುರುಷರಿಗೆ ನಾಲ್ಕು ಜನ ಪತ್ನಿಯರಿರಬಹದು. ಹಲವು ಕಾರಣಗಳ ಮೇಲೆ ತಲಾಕ್ (ವಿವಾಹ ವಿಚ್ಛೇದನ) ಕೇಳಬಹುದು. ಇಬ್ಬರಿಗೂ ಈ ಹಕ್ಕು ಇರುವುದಾದರೂ, ಈ ಸಂಬಂಧದ ನ್ಯಾಯಸೂತ್ರಗಳು ಗಂಡನಿಗೆ ಅನುಕೂಲಕರವಾಗಿವೆ. ವಿವಾಹವಿಚ್ಛೇದನದ ರೂಪಗಳು ಹಲವುಂಟು. ವಿವಾಹವಿಚ್ಛೇದನದ ತರುವಾಯ ಇದ್ದತ್ ಅಥವಾ ನಿರೀಕ್ಷಣೆಯ ಅವಧಿ ಮುಗಿಯುವವರೆಗೆ ಮರು ಮದುವೆಗೆ ಅವಕಾಶವಿಲ್ಲ. ಇದ್ದತ್ ಅವಧಿಯಲ್ಲಿ ಹುಟ್ಟಿದ ಶಿಶುವನ್ನು ಔರಸ ಸಂತಾನವೆಂದು ಪರಿಗಣಿಸಲಾಗುತ್ತದೆ. ಇಂಥ ಅವಧಿಯಲ್ಲಿ ಇಬ್ಬರಲ್ಲಿ ಒಬ್ಬರು ಸತ್ತರೆ ಉಳಿದವರಿಗೆ ಕೆಲವು ಸಂದರ್ಭಗಳಲ್ಲಿ ಉತ್ತರಾಧಿಕಾರದ ಹಕ್ಕು ಹುಟ್ಟುತ್ತದೆ.

ಸುನ್ನತ್ ಜಮಾತ್ ಮತ್ತು ಷಿಯ ಮತ[ಬದಲಾಯಿಸಿ]

ಸಾಧಾರಣವಾಗಿ ಮೇಲೆ ಹೇಳಿದ ಎಲ್ಲ ವಿಷಯಗಳಿಗೂ ಅನ್ವಯವಾಗುವ ನ್ಯಾಯ ಸೂತ್ರಗಳಲ್ಲಿ ಸುನ್ನತ್ ಜಮಾತ್ ಮತ್ತು ಷಿಯ ಮತಗಳ ಒಳಪಂಗಡಗಳಿಗೆ ಸಂಬಂಧಪಟ್ಟಂತೆ ವ್ಯತ್ಯಾಸಗಳಿವೆ. ಆದರೆ ಉತ್ತರಾಧಿಕಾರಕ್ಕೆ ಸಂಬಂಧಿಸಿದ ನ್ಯಾಯಸೂತ್ರಗಳಲ್ಲಿ ವ್ಯತ್ಯಾಸಗಳು ಇನ್ನೂ ಹೆಚ್ಚಾಗಿವೆ. ಸುನ್ನತ್ ಜಮಾತ್‍ಗೆ ಸೇರಿದ ಎಲ್ಲ ಪಂಗಡಗಳೂ ಪುರುಷ ಸಂತತಿಗೆ ಪ್ರಾಧಾನ್ಯ ಕೊಡುತ್ತವೆ. ಆದರೆ ಷಿಯ ಮತದವರು ಹತ್ತಿರದ ಸಂಬಂಧವನ್ನು ನೋಡುತ್ತಾರೆ. ಆಸ್ತಿಯನ್ನು ಉಯಿಲಿನ ಮೇರೆಗೆ ವಿನಿಯೋಗ ಮಾಡಬೇಕಾದಲ್ಲಿ, 1/3 ಭಾಗವನ್ನು ಸ್ವಂತ ಇಚ್ಛೆಯಂತೆಯೂ 2/3 ಭಾಗವನ್ನು ಉತ್ತರಾಧಿಕಾರಿಗಳಿಗೂ ವಿನಿಯೋಗ ಮಾಡಬೇಕಾಗುತ್ತದೆ.ಇಸ್ಲಾಮೀ ದಂಡನ್ಯಾಯವು ವಿಶಿಷ್ಟವಾದದ್ದೆ. ಜೀವದಂಡನೆ, ಹದ್‍ದಂಡನೆ ಮುಂತಾದ ಕೆಲವು ರೂಪದ ದಂಡನೆಗಳಿದ್ದುವು. ಕೊಲೆಯಂಥ ಅಪರಾಧಗಳನ್ನೂ ರಾಜಿಮಾಡಿಕೊಳ್ಳುವುದರ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ವ್ಯವಹಾರಗಳಲ್ಲಿ ಅಪನಂಬಿಕೆ ತೋರಿಸಿದರೂ ದಂಡವಿತ್ತು. ಕುಸೀದ ಪದ್ಧತಿಯನ್ನು ನಿಷೇಧಿಸಲಾಗಿತ್ತು.ವಿಧಿ ವ್ಯಕ್ತಿಯನ್ನು ಇಸ್ಲಾಮೀ ನ್ಯಾಯ ಒಪ್ಪುವುದಿಲ್ಲ. ದಾನದ ಕಲ್ಪನೆ ಈ ನ್ಯಾಯಕ್ಕೆ ವಿಶಿಷ್ಟವಾದದ್ದು.ಕಾಜಿಯನ್ನು ಕಲೀಫರು, ಆಡಳಿತಗಾರರು ನೇಮಿಸುತ್ತಿದ್ದರು. ದಿವಾಣಿ ವಿಷಯಗಳು ಮತ್ತು ಮುಸ್ಲಿಂ ರಾಜ್ಯಗಳಲ್ಲಿ ಇಸ್ಲಾಮೇತರರ ವ್ಯಾಜ್ಯಗಳು ಇವರ ಅಧಿಕಾರಕ್ಕೊಳಪಟ್ಟಿರುತ್ತಿದುವು. ಸಾಕ್ಷ್ಯಾಧಾರಗಳನ್ನೂ ನ್ಯಾಯಪಂಡಿತರ ಅಭಿಪ್ರಾಯಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಮೇಲಧಿಕಾರಿಗಳಿಂದ ತೀರ್ಪುಗಳ ಪುನರ್ ವಿಮರ್ಶೆಗೂ ಅವಕಾಶವಿತ್ತು.

ಇಸ್ಲಾಮೀ ನ್ಯಾಯದ ಬೆಳವಣಿಗೆ[ಬದಲಾಯಿಸಿ]

ಪೈಗಂಬರರಿಂದ ಆಚರಣೆಗೆ ತರಲಾದ ಇಸ್ಲಾಮೀ ನ್ಯಾಯ ಹಿಜರತ್‍ನ ಮೊದಲ ಹತ್ತು ವರ್ಷಗಳಲ್ಲಿ ರೂಪುಗೊಳ್ಳಹತ್ತಿತ್ತು. ಆಮೇಲೆ ಆರಂಭದ ನಾಲ್ವರು ಕಲೀಫರು (632-661), ಮತ್ತು ತರುವಾಯದ ಉಮಾಯದ ಕಲೀಫರು (661-750) ಇಸ್ಲಾಮೀ ನ್ಯಾಯದ ಬೆಳವಣಿಗೆಗೆ ಸಹಾಯ ಮಾಡಿದರು. 711ನೆಯ ಇಸವಿಯ ಸುಮಾರಿಗೆ ಇಸ್ಲಾಂ ಅಧಿಪತ್ಯ ಭಾರತದ ಕಡೆಗೂ ಹಬ್ಬತೊಡಗಿತು. ಭಾರತದಲ್ಲೂ ಇಸ್ಲಾಮೀ ನ್ಯಾಯ ಬೆಳೆಯಿತು. ಕಾಲಕ್ರಮದಲ್ಲಿ ನಿರ್ಣಯಗಳನ್ನು ಕೊಡುವ ವಿಷಯದಲ್ಲಿ ಕೆಲವು ಪದ್ಧತಿಗಳು ಆಚರಣೆಯಲ್ಲಿ ಬಂದುವು. ಇಂಥ ಆಚರಣೆಗಳ ಕೊಡುಗೆಯೂ ಸಾಕಷ್ಟಿದೆ. ಕುರಾನ್ ಮತ್ತು ಅಧಿಕೃತ ಸಂಪ್ರದಾಯಗಳ ಮೇರೆಗೆ ತೀರ್ಪುಗಳನ್ನು ಕೊಡಲಾಗುತ್ತಿತ್ತು. ಈ ವಿಧಾನಕ್ಕೆ ಇಜ್ತಹದ್ ಎಂದೂ ಹೀಗೆ ತೀರ್ಪು ಕೊಡುವವರನ್ನು ಮುಜ್ತಹಿದ್ ಎಂದೂ ಕರೆಯಲಾಗುತ್ತದೆ. ಹಿಂದಿನ ನಿರ್ಣಯಗಳನ್ನು ಒಪ್ಪಿ, ಅವುಗಳ ಆಧಾರದ ಮೇಲೆ ತೀರ್ಪು ಕೊಡುವ ವಿಧಾನ ಆಮೇಲೆ ಬೆಳೆಯಿತು. ಇದನ್ನು ತಕ್‍ಲಿದ್ ಎನ್ನುತ್ತಾರೆ. ತಕ್‍ಲಿದ್ ಪದ್ಧತಿಯನ್ನು ಹನ್‍ಬಲಿ ಶಾಖೆಯವರು ಖಂಡಿಸಿದರು. ಅಬ್ಬಾಸಿದ್ ಕಲೀಫರ (750-1258) ಕಾಲದಲ್ಲಿ ಇಸ್ಲಾಮೀ ನ್ಯಾಯದ ವಿವಿಧ ಶಾಖೆಗಳು ಬೆಳೆಯುವುದರ ಜೊತೆಗೆ ಅವುಗಳ ವ್ಯತ್ಯಾಸಗಳು ಸ್ಪಷ್ಟವಾಗಿ ರೂಪುಗೊಂಡಿದ್ದುವು. ಷಾಪಯ್‍ನ (767-820) ಕಾಲಕ್ಕಾಗಲೇ ನ್ಯಾಯಪಂಡಿತರ-ಮುಫ್ತಿಗಳ ಗುಂಪುಗಳು ಅಸ್ತಿತ್ವಕ್ಕೆ ಬಂದಿದ್ದುವು. ಮುಫ್ತಿಗಳ ವಿವೇಚನಾತ್ಮಕ ಅಭಿಪ್ರಾಯಗಳಿಗೆ ಫತಾವ ಎನ್ನುತ್ತಾರೆ. ಮುಫ್ತಿಗಳ ಅಭಿಪ್ರಾಯಗಳು ನ್ಯಾಯನಿರ್ಣಯ ವಿಷಯಗಳಲ್ಲಿ ಕಾಜಿಗಳಿಗೆ ಸಹಾಯಕವಾಗುತ್ತಿದ್ದುವು. ಇಸ್ಲಾಮೀ ನ್ಯಾಯದ ಬೆಳೆವಣಿಗೆಗೆ ಫತಾವಗಳಿಂದ ಬಹಳ ಸಹಾಯವಾಗಿದೆ. ಆಟೊಮನ್ ಸುಲ್ತಾನರ ಕಾಲಕ್ಕೆ ಇಸ್ಲಾಮೀ ನ್ಯಾಯ ಸಂಪೂರ್ಣ ರೂಪುಗೊಂಡಿತ್ತು. ತುರ್ಕಿಯ ಆಟೊಮನ್ ಸುಲ್ತಾನರು 1517ರಲ್ಲಿ ತಾವೇ ಕಲೀಫರಾದರು. 1924ರಲ್ಲಿ ಖಿಲಾಫತ್ತು ರದ್ದಾಯಿತು. ಆಟೊಮನ್ ಸುಲ್ತಾನರಿಗೆ ಕಾನೂನುಗಳನ್ನು ಮಾಡುವ ಆಸಕ್ತಿ ಇದ್ದರೂ ಕಾಲಮಾನ ಪರಿಸ್ಥಿಯಿಂದಾಗಿ ಷರೀಯತ್‍ನಲ್ಲಿನ ನ್ಯಾಯಸೂತ್ರಗಳಿಗೆ ಬದ್ಧರಾಗಿದ್ದರು.

ಸುಲ್ತಾನ ಮಹಮ್ಮದನ (1451-81) ಕಾಲ[ಬದಲಾಯಿಸಿ]

ಸುಲ್ತಾನ ಮಹಮ್ಮದನ (1451-81) ಕಾಲದಲ್ಲಿ ಷರೀಯತ್‍ನ ಹದ್ ದಂಡನೆಗಳಿಗೆ ಬದಲಾಗಿ ತಜೀರ್ (ಚಾಟಿ ಹೊಡೆತ) ಮತ್ತು ದ್ರವ್ಯ ದಂಡನೆಗಳು ಆಚರಣೆಯಲ್ಲಿ ಬಂದುವು. ಸುಮಾರು 1850 ರ ವರೆಗೆ ಸ್ಥಳೀಯ ಸಂಪ್ರದಾಯಗಳನ್ನೂ ಸಾರ್ವಜನಿಕ ಶಾಂತಿ ಮತ್ತು ಮಾರುಕಟ್ಟೆಗಳಿಗೆ ಸಂಬಂಧಿಸಿದಂತೆ ಆಡಳಿತಗಾರರ ನಿಯಮಗಳನ್ನೂ ಬಿಟ್ಟರೆ ಪ್ರಪಂಚದ ಇಸ್ಲಾಂ ರಾಜ್ಯಗಳಲ್ಲೆಲ್ಲ ಷರೀಯತ್ ಆಚರಣೆಯಲ್ಲಿತ್ತು. ಸುಲ್ತಾನ ಅಬ್ದುಲ್ ಮಜೀದನ (1839-61) ಕಾಲದಲ್ಲಿ ಧಿಮ್ಮಿಗಳ ಸ್ಥಾನಮಾನ ಬದಲಾಗಿ, ಎಲ್ಲ ಇಸ್ಲಾಮೇತರರನ್ನೂ ರಾಜಕೀಯವಾಗಿ ಪ್ರಜೆಗಳೆಂದು ಪರಿಗಣಿಸಲಾಯಿತು. 1850ರ ವಾಣಿಜ್ಯ ಸಂಹಿತೆಯಿಂದಾಗಿ ಷರೀಯತ್‍ನ ಒಂದು ವಿಷಯ ಪ್ರವರ್ತನೆಯಲ್ಲಿ ಇಲ್ಲವಾಯಿತು.

ಆಟೊಮನ್ ದಿವಾಣಿ ಸಂಹಿತೆ[ಬದಲಾಯಿಸಿ]

1877ರ ಆಟೊಮನ್ ದಿವಾಣಿ ಸಂಹಿತೆ ಇಸ್ಲಾಮೀ ನ್ಯಾಯದ ರೂಪ ಬದಲಾವಣೆಗೆ ಬಹಳಷ್ಟು ಕಾರಣವಾಯಿತು. ಅಲ್ಲಿಂದ ಮುಂದೆ ಇಸ್ಲಾಮೀ ರಾಷ್ಟ್ರಗಳಲ್ಲಿ ಸುಧಾರಣೆಗಳು ನಡೆದಿವೆ. ಮಜಲಿಯನ್ನು 1926ರಲ್ಲಿ ರದ್ದುಗೊಳಿಸಲಾಗಿದೆ. 1883ರಿಂದ ಈಜಿಪ್ಟ್ ದೇಶದಲ್ಲಿ ಬದಲಾವಣೆಗಳು ನಡೆದಿವೆ. ಕೌಂಟುಬಿಕ ಹಕ್ಕು ಬಾಧ್ಯತೆಗಳಿಗೆ ಸಂಬಂಧಿಸಿದ ಆಟೊಮನರ 1917ರ ಕಾನೂನು ಈ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲು. ತುರ್ಕಿಯಲ್ಲಿ ಇದನ್ನು ರದ್ದುಗೊಳಿಸಲಾಗಿದ್ದರೂ ಲೆಬನಾನ್ ಮುಂತಾದ ದೇಶಗಳಲ್ಲಿ ಪ್ರವರ್ತನೆಯಲ್ಲಿ ಉಳಿಯಿತು. 1928ರಲ್ಲಿ ಅಲ್ಬೇನಿಯದಲ್ಲಿ ಕಾಜಿ ಪದ್ಧತಿಯ ನ್ಯಾಯಾಲಯಗಳು ರದ್ದಾದುವು. 1932ರಲ್ಲಿ ಲೆಬನಾನಿನಲ್ಲೂ 1949ರಲ್ಲಿ ಸಿರಿಯದಲ್ಲೂ 1953ರಲ್ಲಿ ಇರಾಕಿನಲ್ಲೂ ದಿವಾಣಿ ಸಂಹಿತೆಗಳು ಜಾರಿಗೆ ಬಂದಿವೆ. ಟ್ಯುನೀಷಿಯದಲ್ಲಿ 1956ರಲ್ಲಿ ವಕ್ಫ್‍ಗಳ ಸಂಬಂಧದ ಕಾನೂನು ಮಾಡಲಾಯಿತು. ಈಜಿಪ್ಟ್, ಸಿರಿಯ ಮುಂತಾದ ದೇಶಗಳಲ್ಲಿ ವಕ್ಫ್ ಬಗೆಗಿನ ಕಾನೂನುಗಳು ಬಂದಿವೆ. ಈಗ ಅನೇಕ ದೇಶಗಳಲ್ಲಿ ವ್ಯಕ್ತಿಗತ ವಕ್ಫ್‍ಗಳನ್ನು ರದ್ದುಗೊಳಿಸಲಾಗಿದೆ. ಇಲ್ಲವೆ ಅವಕ್ಕೆ ಸಮಯದ ನಿರ್ಬಂಧ ಹಾಕಲಾಗಿದೆ. 1961ರಲ್ಲಿ ಮಸ್ಲಿಂ ಕುಟುಂಬಗಳಿಗೆ ಅನ್ವಯಿಸುವ ನಿಯಮಗಳ ಅಧ್ಯಾದೇಶವನ್ನು (ಆರ್ಡಿನೆನ್ಸ್) ಪಾಕಿಸ್ತಾನ ಜಾರಿಗೆ ತಂದಿತ್ತು. 1963ರ ಇರಾಕಿನ ಕಾನೂನಿನ ಮೇರೆಗೆ ಅಲ್ಲಿಯ ಇಸ್ಲಾಂ ಮತದ ಎಲ್ಲ ಪಂಗಡದವರಿಗೂ ಷಿಯ ಮತದ ಉತ್ತರಾಧಿಕಾರದ ನಿಯಮಗಳೇ ಅನ್ವಯವಾಗುತ್ತವೆ.ಗುಲಾಮ ಪದ್ಧತಿ, ದಂಡನಿಯಮಗಳು, ಸಾಕ್ಷ್ಯ, ಗರ್ಭಕಾಲ (ಜೆಷ್ಟೇಷನ್), ಸ್ಥಾನಮಾನ, ಹಕ್ಕು ಬಾಧ್ಯತೆಗಳು ಮತ್ತು ವ್ಯವಹಾರಗಳಿಗೆ ಸಂಬಂಧಿಸಿದ ಇಸ್ಲಾಮೀ ನ್ಯಾಯಸೂತ್ರಗಳು ಎಲ್ಲ ದೇಶಗಳಲ್ಲಿಯೂ ಸಂಪೂರ್ಣವಾಗಿ ಮಾರ್ಪಾಟು ಹೊಂದಿವೆ. ವಿವಾಹ, ವಿವಾಹವಿಚ್ಛೇದನ ಮತ್ತು ಬಹುಪತ್ನೀತ್ವಕ್ಕೆ ಸಂಬಂಧಿಸಿದ ನ್ಯಾಯ ಸೂತ್ರಗಳು ವ್ಯತ್ಯಾಸಗೊಳ್ಳುತ್ತಿವೆ.

ಭಾರತದಲ್ಲಿ ಇಸ್ಲಾಮೀ ನ್ಯಾಯದ ಬೆಳೆವಣಿಗೆ[ಬದಲಾಯಿಸಿ]

ಮೊದಲು ವ್ಯಾಪಾರಿಗಳು ಮತ್ತು ಧರ್ಮಪ್ರಚಾರಕರ ಮೂಲಕ ಭಾರತಕ್ಕೆ ಇಸ್ಲಾಂ ಧರ್ಮ ಬಂತು. 712ರಲ್ಲಿ ಮಹಮ್ಮದ್ ಆಕ್ರಮಿಸಿದ ಸಿಂಧೂ ಪ್ರಾಂತ್ಯ 871ರ ವರೆಗೆ ಕಲೀಫರ ಆಳ್ವಿಕೆಯಲ್ಲಿತ್ತು. ತದನಂತರದ ಆಕ್ರಮಣಕಾರರಾದ ಗುಲಾಮೀ ಸಂತತಿಯ ಸುಲ್ತಾನರು, ಖಲ್ಜಿಗಳು, ತುಘಲಕರು ಉತ್ತರದಲ್ಲೂ, ಬಹಮನಿ ಅರಸರು ದಕ್ಷಿಣದಲ್ಲೂ ಇಸ್ಲಾಮೀ ನ್ಯಾಯದ ತಳಹದಿ ಹಾಕಿದರು. ಆಕ್ರಮಣಕಾರರು ಹನಾಫಿಗಳಾಗಿದ್ದದ್ದರಿಂದಲೂ ಆಗ ಇಸ್ಲಾಂ ದೇಶಗಳಲ್ಲಿ ಹನಾಫಿಗಳಿಗೆ ಮಾನ್ಯತೆಯಿದ್ದದ್ದರಿಂದಲೂ ಭಾರತದಲ್ಲೂ ಹನಾಫಿಗಳೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಮೊಗಲರ ಮತ್ತು ಪರ್ಷಿಯದ ಚಕ್ರವರ್ತಿಗಳ ಸಂಪರ್ಕಗಳು ಷಿಯ ಮತದ ನ್ಯಾಯಸೂತ್ರಗಳ ಆಚರಣೆಗೆ ಕಾರಣವಾದುವು. ಮೊಗಲರ ಕಾಲದಲ್ಲಿ ದೊಡ್ಡ ಪಟ್ಟಣಗಳಲ್ಲಿ ಕಾಜಿಗಳನ್ನು ನೇಮಿಸಲಾಗುತ್ತಿತ್ತು. ಹಿಂದೂಗಳ ವಿಷಯದಲ್ಲಿ ಆ ಮತದ ಪಂಡಿತರ ಸಲಹೆ ಪಡೆದು ತೀರ್ಪು ಕೊಡಲಾಗುತ್ತಿತ್ತು. ಈ ಪದ್ದತಿ 1772ರ ಮತ್ತು 1780ರ ವಿಧಿನಿಯಮಗಳ ಪ್ರಕಾರ ಪರಿಮಿತವ್ಯಾಪ್ತಿಯಲ್ಲಿ ಮುಂದುವರಿಯಿತು. 1862ರಲ್ಲಿ ಇಸ್ಲಾಮೀ ದಂಡನ್ಯಾಯವೂ 1872ರಲ್ಲಿ ಸಾಕ್ಷ್ಯಕ್ಕೆ ಸಂಬಂಧಿಸಿದ ನ್ಯಾಯಸೂತ್ರಗಳೂ ರದ್ದಾದುವು. ಹೀಗಾಗಿ ಮಾರಾಟ, ವ್ಯವಹಾರಗಳು, ಧಾರ್ಮಿಕವಲ್ಲದ ಇತರ ಹಕ್ಕು ಬಾಧ್ಯತೆಗಳು, ಸ್ಥಾನಮಾನ ಇವುಗಳಿಗೆ ಸಂಬಂಧಿಸಿದ ಇಸ್ಲಾಮೀ ನ್ಯಾಯಸೂತ್ರಗಳು ಆಚರಣೆಯಲ್ಲಿಲ್ಲ. ವಿವಾಹ, ವಿಚ್ಛೇದನ, ಔರಸತ್ವ, ಪೋಷಣೆ. ಉತ್ತರಾಧಿಕಾರ, ದಾನ, ಉಯಿಲು, ವಕ್ಫ್ ಮುಂತಾದ ವಿಷಯಗಳಿಗೆ ಸಂಬಂಧಪಟ್ಟ, ನ್ಯಾಯಸೂತ್ರಗಳು ಆಚರಣೆಯಲ್ಲಿವೆ. ಇವುಗಳಿಗೆ ಭಾರತೀಯ ಷರೀಯತ್ ಕಾನೂನು ಮತ್ತು ಇತರ ಕಾನೂನುಗಳು ಅನ್ವಯವಾಗುತ್ತವೆ. ಸುನ್ನತ್ ಜಮಾತ್‍ನವರ ಸಂಬಂಧದಲ್ಲಿ ಷೇಖ್ ಬುರ್‍ಹಾನುದ್ದೀನನ ಹಿದಾಯಹ್, ಕಾಜಿಖಾನನ (1195) ಫತಾವೇ ಕಾಜಿಖಾನ್, ಔರಂಗಜೇಬನ ಆಜ್ಞೆಯ ಮೇರೆಗೆ ಸಂಕಲನ ಮಾಡಿದ ಫತಾವೇ ಆಲಮ್‍ಗಿರಿ. ಮಹಮ್ಮದ್ ಅಲ್ಲಾವುದ್ದೀನ್ 1660ರಲ್ಲಿ ಬರೆದ ದುರಲ್ ಮುಖ್‍ತಾರ್, ಸಿರಾಜುದ್ದೀನನ ಸಿರಾಜೀಯ್ಯದ್ ಮುಂತಾದವು ಪ್ರಮಾಣಗ್ರಂಥಗಳಾಗಿವೆ. ಹಾಗೆಯೇ ಷಿಯ ಮತದವರ ಸಂಬಂಧದಲ್ಲಿ ಷೇಖ್ ನಿಜಾಮುದ್ದೀನನ ಷರಾಯೆ ಉಲ್ ಇಸ್ಲಾಂ, ಮಹಮ್ಮದನ ಮಫಾತೀಹ್, ತೆಹರಾನಿನ ಸಂಕಲನವಾದ ಜಾಮ್-ಉಷ್-ಷರಾಯೆ ಇವೇ ಮುಂತಾದ ಗ್ರಂಥಗಳನ್ನು ಪ್ರಮಾಣ ಗ್ರಂಥಗಳೆಂದು ಪರಿಗಣಿಸಲಾಗುತ್ತದೆ.

ಇಂಗ್ಲೀಷರ ಕಾಲದಲ್ಲಿ ಇಸ್ಲಾಮೀ ಬದಲಾವಣೆಗಳನ್ನು ತಂದ ಕೆಲವು ಕಾಯಿದೆಗಳು ಈ ರೀತಿ ಇವೆ.[ಬದಲಾಯಿಸಿ]

  • 1. 1913 ಮತ್ತು 1923ರ ವಕ್ಫ್ ಬಗೆಗಿನ ಕಾಯಿದೆಗಳು.
  • 2. 1935ರ ಭಾರತ ಸರ್ಕಾರಕ್ಕೆ ಸಂಬಂಧಿಸಿದ ಕಾಯಿದೆ.
  • 3. 1937ರ ಷರೀಯತ್ ಕಾಯಿದೆ.
  • 4. 1939ರ ಮುಸ್ಲಿಂ ವಿವಾಹಗಳ ವಿಚ್ಛೇದನಕ್ಕೆ ಸಂಬಂಧಿಸಿದ ಕಾಯಿದೆ.
  • 5. 1942ರ ಕಾಯಿದೆ, ಭಾರತದ ಸಂವಿಧಾನದ 225ನೆಯ ಅನುಚ್ಛೇದದ ಮೇರೆಗೆ


ಸಂವಿಧಾನಪೂರ್ವದಲ್ಲಿ ಆಚರಣೆಯಲ್ಲಿದ್ದ ಇಸ್ಲಾಮೀ ನ್ಯಾಯಕ್ಕೆ ಸಂಬಂಧಿಸಿದ ಕಾನೂನುಗಳು ಹಾಗೆಯೇ ಆಚರಣೆಯಲ್ಲಿ ಉಳಿದಿವೆ. 1954ರ ವಕ್ಫ್‍ಗಳ ಕಾಯಿದೆ ಸ್ವಾತಂತ್ರ್ಯ ಬಂದ ತರುವಾಯದಲ್ಲಿನ ಒಂದು ಮಹತ್ತ್ವದ ಹೆಜ್ಜೆಯಾಗಿದೆ. ಹಾಗೆ ನೋಡಿದರೆ ಮುಸ್ಲಿಂ ರಾಷ್ಟ್ರಗಳಲ್ಲಿ ಆದಷ್ಟು ಬದಲಾವಣೆಗಳು ಭಾರತದಲ್ಲಿ ಆಚರಣೆಯಲ್ಲಿರುವ ಇಸ್ಲಾಮೀ ನ್ಯಾಯದಲ್ಲಿ ಆಗಿಲ್ಲ.ಒಟ್ಟಿನಲ್ಲಿ ಈ ಪರಿವರ್ತನೆಯ ಯುಗದಲ್ಲೂ ಇಸ್ಲಾಮೀ ನ್ಯಾಯದ ಹಲವು ಮೂಲ ತತ್ತ್ವಗಳೂ ನ್ಯಾಯಿಕ ಕಲ್ಪನೆಗಳೂ ಉಳಿದುಕೊಂಡು ಬಂದಿವೆ. ವಿಶ್ವದ ಪ್ರಮುಖ ನ್ಯಾಯಪದ್ಧತಿಗಳಲ್ಲಿ ಇಸ್ಲಾಮೀ ನ್ಯಾಯಪದ್ಧತಿಯೂ ಒಂದು. ಉತ್ತರಾಖಂಡದ ಶಾಯರಾ ಬಾನು, ಗಂಡಿಗೆ ಸಮಾನವಾದ ಹಕ್ಕು ಹೆಣ್ಣಿಗೂ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ದೇಶದಾದ್ಯಂತ ತಲಾಖ್‌ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.

ತಲಾಖ್‌ ವಿರುದ್ಧ ಹೋರಾಟಕ್ಕೆ 30 ವರ್ಷ[ಬದಲಾಯಿಸಿ]

ತಲಾಖ್‌ ಜತೆಗೆ ಏಕರೂಪ ನಾಗರಿಕ ಸಂಹಿತೆಯೂ ಚರ್ಚೆಯಲ್ಲಿ ಸೇರಿಕೊಂಡಿದೆ. ರಾಷ್ಟ್ರೀಯ ಕಾನೂನು ಆಯೋಗವು ಏಕರೂಪದ ನಾಗರಿಕ ಸಂಹಿತೆ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲು ಆರಂಭಿಸಿದೆ.
  • ತಲಾಖ್‌ನ ಮೌಲಿಕತೆ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಬಹುದಾದ ತೀರ್ಪು ಮತ್ತು ಏಕರೂಪ ನಾಗರಿಕ ಸಂಹಿತೆ ಎರಡೂ ಧರ್ಮದ ಮೇಲೆ ಸರ್ಕಾರದ ಅತಿಕ್ರಮಣ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.
  • ಮಣಿಪುರದ ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಸೇರಿದಂತೆ ಹಲವು ಗಣ್ಯರು ತ್ರಿವಳಿ ತಲಾಖ್‌ ನಿಷೇಧಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಎಂಬ ಸಂಘಟನೆ ಶಾಯರಾ ಅವರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣದಲ್ಲಿ ವಾದಿಯಾಗಿ ಸೇರಿಕೊಂಡಿದೆ.
  • ಮುಸ್ಲಿಂ ಮಹಿಳೆಯರ ತಾರತಮ್ಯದ ಬಗೆಗಿನ ಚರ್ಚೆ ಮೂರು ದಶಕಗಳ ಅವಧಿಯಲ್ಲಿ ಒಂದು ಸುತ್ತು ಪೂರೈಸಿದೆ.
  • ಶಾಬಾನು ಪರ ನಿಂತ ಕೋರ್ಟ್‌
  • ಮಧ್ಯಪ್ರದೇಶದ ಇಂದೋರ್‌ನ 68 ವರ್ಷದ ಮಹಿಳೆ ಶಾಬಾನು ಅವರಿಗೆ ಅವರ ಗಂಡ ಮೊಹಮ್ಮದ್‌ ಅಹಮ್ಮದ್‌ ಖಾನ್‌ 1978ರಲ್ಲಿ ತಲಾಖ್‌ ನೀಡುತ್ತಾರೆ (ವಿಚ್ಛೇದನ).
  • ಜೀವನಾಂಶಕ್ಕಾಗಿ ಶಾಬಾನು ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತಾರೆ. ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್‌ 125ರ ಅಡಿಯಲ್ಲಿ ಸ್ಥಳೀಯ ನ್ಯಾಯಾಲಯ ಮತ್ತು ಹೈಕೋರ್ಟ್‌ ಕೂಡ ಶಾಬಾನು ಅವರಿಗೆ ಅಹಮ್ಮದ್‌ ಖಾನ್‌ ಜೀವನಾಂಶ ನೀಡಬೇಕು ಎಂದು ಆದೇಶಿಸುತ್ತವೆ.
  • ಹೈಕೋರ್ಟ್‌ ತೀರ್ಪನ್ನು ಖಾನ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತಾರೆ. ಸುಪ್ರೀಂ ಕೋರ್ಟ್‌ ಕೂಡ ಶಾಬಾನು ಪರವಾಗಿ 1985ರಲ್ಲಿ ತೀರ್ಪು ನೀಡುತ್ತದೆ
  • ಅಪರಾಧ ದಂಡ ಸಂಹಿತೆ 1973ರ ಸೆಕ್ಷನ್‌ 125ಕ್ಕೆ ನ್ಯಾಯಾಲಯದ ವ್ಯಾಖ್ಯಾನ:  ಯಾವುದೇ ವ್ಯಕ್ತಿಯು ಹೆಂಡತಿಯನ್ನು ನಿರ್ಲಕ್ಷಿಸಿದ್ದು ಖರ್ಚಿಗೆ ನೀಡುತ್ತಿಲ್ಲ ಎಂದಾದರೆ, ಅಥವಾ ಹೆಂಡತಿಗೆ ವಿಚ್ಛೇದನ ನೀಡಿದ್ದರೆ ಮತ್ತು ಆಕೆಗೆ ತನ್ನ ಖರ್ಚು ನೋಡಿಕೊಳ್ಳುವ ಶಕ್ತಿ ಇಲ್ಲದಿದ್ದರೆ (ಆಕೆ ಮರು ಮದುವೆ ಆಗುವ ತನಕ) ಅಂಥವರಿಗೆ ಪ್ರತಿ ತಿಂಗಳು ಜೀವನಾಂಶ ನೀಡುವಂತೆ ಮೊದಲ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರು ಆದೇಶಿಸಬಹುದು.
  • ಇದು ಎಲ್ಲ ಧರ್ಮಕ್ಕೆ ಸೇರಿದವರಿಗೂ ಅನ್ವಯ ಆಗುತ್ತದೆ. ನಿರ್ಲಕ್ಷಿತ ಹೆಂಡತಿಯರು ಅಥವಾ ವಿಚ್ಛೇದಿತ ಹೆಂಡತಿಯರ ಆರ್ಥಿಕ ಸ್ಥಿತಿ ಸುಧಾರಣೆಗಾಗಿಯೇ ಈ ಕಾನೂನು ಇದೆ.
  • ***
  • ‘ಮುಸ್ಲಿಮನಾಗಿರುವುದರಿಂದ ಜೀವನಾಂಶ ಕೊಡಬೇಕಿಲ್ಲ’
  • ಮುಸ್ಲಿಮರಾಗಿರುವುದರಿಂದ ತಮಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಾತ್ರ ಅನ್ವಯವಾಗುತ್ತದೆ. ‘ಇದ್ದತ್‌’ ಅವಧಿಯ (ವಿಚ್ಛೇದನದ ನಂತರದ ಮೂರು ತಿಂಗಳು) ನಂತರ ವಿಚ್ಛೇದಿತ ಹೆಂಡತಿಗೆ ಜೀವನಾಂಶ ನೀಡುವ ನಿಯಮ ವೈಯಕ್ತಿಕ ಕಾನೂನಿನಲ್ಲಿ ಇಲ್ಲ.
  • ಮದುವೆ ಸಂದರ್ಭದಲ್ಲಿ ನೀಡಲಾದ ‘ಮೆಹರ್‌’ ಎಂದು ಕರೆಯಲಾಗುವ ದಕ್ಷಿಣೆಯನ್ನು ಹಿಂದಿರುಗಿಸಲಾಗಿದೆ. ಹಾಗಾಗಿ ತಮಗೆ ಮಾಜಿ ಹೆಂಡತಿಯನ್ನು ಸಲಹುವ ಜವಾಬ್ದಾರಿ ಇಲ್ಲ. ಮುಸ್ಲಿಂ ವೈಯಕ್ತಿಕ ಕಾನೂನಿನ ಮೇಲೆ ದಂಡ ಸಂಹಿತೆಯ ಸೆಕ್ಷನ್‌ 125ಕ್ಕೆ ವ್ಯಾಪ್ತಿ ಇಲ್ಲ.
  • ಶಾಯರಾಗೆ ಕಿರುಕುಳ, ಹಿಂಸೆ, ತಲಾಖ್‌
  • ಉತ್ತರಾಖಂಡದ ಶಾಯರಾ ಬಾನು ಅವರಿಗೆ 2002ರಲ್ಲಿ ರಿಜ್ವಾನ್‌ ಅಹ್ಮದ್‌ ಜತೆ ಮದುವೆಯಾಯಿತು. ಮದುವೆಯಾದ ನಂತರ ಗಂಡನ ಜತೆಗೆ ಅವರು ಅಲಹಾಬಾದ್‌ಗೆ ಬಂದರು.
  • ಅಲ್ಲಿ ಬಂದಾಗ ಹೊಸ ನಗರ, ಹೊಸ ಜನರಿಗೆ ಹೊಂದಿಕೊಳ್ಳುವುದರ ಜತೆಗೆ ಸಾಯಿರಾ ಕಿರುಕುಳಕ್ಕೂ ಹೊಂದಿಕೊಳ್ಳಬೇಕಾಯಿತು. ಸುಮಾರು ಒಂದು ದಶಕದ ಕಾಲ ಗಂಡ ಮತ್ತು ಮನೆಯವರು ವರದಕ್ಷಿಣೆ ಬೇಡಿಕೆ, ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ಸಾಯಿರಾ ಅವರಿಗೆ ಮಾನಸಿಕ, ದೈಹಿಕ ಹಿಂಸೆ ನೀಡಿದರು. ಸಾಯಿರಾ ಅವರಿಗೆ ಮತ್ತು ಬರಿಸುವ ಔಷಧ ನೀಡುತ್ತಿದ್ದರು.
  • 2015ರಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಸಾಯಿರಾ ಅವರನ್ನು ತವರು ಮನೆಯವರು ಬಂದು ಕರೆದುಕೊಂಡು ಹೋದರು.
  • ಕೆಲವು ತಿಂಗಳ ನಂತರ ಗಂಡ ಸಾಯಿರಾ ಅವರಿಗೆ ತಲಾಖ್‌ ಕೊಟ್ಟರು. ಕುಟುಂಬದ ಬೆಂಬಲದೊಂದಿಗೆ ಸುಪ್ರೀಂ ಕೋರ್ಟ್‌ವರೆಗೆ ತಲುಪಿದ ಸಾಯಿರಾ ಪ್ರಕರಣ ಈಗ ದೇಶದಾದ್ಯಂತ ಚರ್ಚೆಯೊಂದನ್ನು ಹುಟ್ಟು ಹಾಕಿದೆ.
  • ಶಾಯಿರಾ ಬೇಡಿಕೆ ಏನು: ತಲಾಖ್‌, ನಿಕಾಹ್‌ ಹಲಾಲ, ಬಹುಪತ್ನಿತ್ವ, ಧರ್ಮ, ಜಾತಿ, ಲಿಂಗದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ನಿಷೇಧಿಸಿ.
  • ದೇಶದಾದ್ಯಂತ ಚರ್ಚೆ
  • ಸುಪ್ರೀಂ ಕೋರ್ಟ್‌ ನಲ್ಲಿ ವಿಚಾರಣೆ ನಡೆಯುತ್ತಿದೆ. ಒಮ್ಮೆಗೆ ಮೂರು ತಲಾಖ್‌ ಹೇಳುವುದಕ್ಕೆ ವಿರೋಧ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
  • ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ಸಲ್ಲದು ಎಂದು ಹೇಳಿದೆ. ದೇಶದಾದ್ಯಂತ ಮುಸ್ಲಿಂ ಮಹಿಳೆಯರು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದೆ.
  • **
  • ವಿವಾಹ ವಿಚ್ಛೇದನದ ವಿಧಗಳು
  • * ತಲಾಖ್‌: ಗಂಡ ವಿಚ್ಛೇದನ ನೀಡುವ ಕ್ರಮ (ಇದರಲ್ಲಿ ಒಮ್ಮೆಗೆ ಮೂರು ತಲಾಖ್‌ ಹೇಳುವುದೂ ಸೇರಿದೆ)
  • * ಖುಲಾ: ಹೆಂಡತಿ ವಿಚ್ಛೇದನ ನೀಡುವ ಕ್ರಮ
  • * ಫಸ್ಖ್‌–ಎ–ನಿಕಾಹ್‌: ಗಂಡನಿಗೆ ವಿಚ್ಛೇದನ ಬೇಡ, ಹೆಂಡತಿಗೆ ಬೇಕು ಎಂಬ ಸಂದರ್ಭದಲ್ಲಿನ ವಿಚ್ಛೇದನ ಕ್ರಮ
  • * ತಫ್‌ವೀದ್‌–ಎ–ತಲಾಖ್‌: ವಿಚ್ಛೇದನ ನೀಡುವ ಹಕ್ಕನ್ನು ಹೆಂಡತಿಗೆ ನೀಡುವ ಕ್ರಮ
  • **
  • ವಿವಾದ ಸೃಷ್ಟಿಸಿದ ರಾಜೀವ್ ಗಾಂಧಿ ಕಾನೂನು
  • 1986ರಲ್ಲಿ ರಾಜೀವ್‌ ಗಾಂಧಿ ಸರ್ಕಾರ ಮುಸ್ಲಿಂ ಮಹಿಳೆಯರ (ವಿಚ್ಛೇದನದ ನಂತರ ಹಕ್ಕುಗಳ ರಕ್ಷಣೆ) ಕಾಯ್ದೆ ಜಾರಿಗೆ ತರುತ್ತದೆ. ತಲಾಖ್‌ ನಂತರದ ಮೂರು ತಿಂಗಳ ಅವಧಿಗೆ ಮಾತ್ರ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವ ಹೊಣೆ ತಲಾಖ್‌ ನೀಡಿರುವ ಗಂಡನಿಗೆ ಇರುತ್ತದೆ. ಅದಾದ ನಂತರ ಮಹಿಳೆಯನ್ನು ಕುಟುಂಬದವರೇ ನೋಡಿಕೊಳ್ಳಬೇಕು ಎಂಬುದು ಈ ಕಾಯ್ದೆಯ ಮುಖ್ಯ ಮತ್ತು ವಿವಾದಾತ್ಮಕ ಅಂಶ.
  • **
  • 90 ದಿನದಲ್ಲಿ ಇಡೀ ಜೀವನಕ್ಕಾಗುವಷ್ಟು ಕೊಡಿ
  • ಮುಸ್ಲಿಂ ಮಹಿಳೆ (ವಿಚ್ಛೇದನದ ನಂತರ ಹಕ್ಕುಗಳ ರಕ್ಷಣೆ) ಕಾಯ್ದೆ 1985 ಅಂಗೀಕಾರವಾದ ನಂತರ ವಿಚ್ಛೇದನಕ್ಕೆ ಒಳಗಾದ ಮುಸ್ಲಿಂ ಮಹಿಳೆಯರಿಗೆ ಗಂಡ ಜೀವನಾಂಶ ನೀಡುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗಳು ವಿವಿಧ ರೀತಿಯ ಆದೇಶಗಳನ್ನು ನೀಡಿವೆ.
  • ಆದರೆ ಡಿ. ಲತೀಫ್‌ ಮತ್ತು ಭಾರತ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಪೂರ್ಣ ಪೀಠ ಈ ಬಗ್ಗೆ ಸ್ಪಷ್ಟವಾದ ತೀರ್ಪು ನೀಡಿತು. ಮುಸ್ಲಿಂ ಮಹಿಳೆ ವಿಚ್ಛೇದಿತ ಗಂಡನಿಂದ ವಿಚ್ಛೇದನದ ನಂತರದ 90 ದಿನಗಳ ಕಾಲ ಮಾತ್ರ ಜೀವನಾಂಶ ಪಡೆಯುವುದಕ್ಕೆ ಅವಕಾಶ ಇದೆ.
  • ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 125 ಮತ್ತು ಮುಸ್ಲಿಂ ಮಹಿಳೆ ಕಾಯ್ದೆಯ ಸೆಕ್ಷನ್‌ 3 (ಎ) ಎರಡನ್ನೂ ಪರಿಶೀಲನೆಗೆ ಒಳಪಡಿಸಿದ ಪೀಠ, ವಿಚ್ಛೇದಿತ ಮಹಿಳೆಯ ಇಡೀ ಜೀವನಕ್ಕೆ ಸಾಕಾಗುವಷ್ಟು ಮೊತ್ತವನ್ನು ವಿಚ್ಛೇದನದ 90 ದಿನಗಳೊಳಗೆ ನೀಡಬೇಕು ಎಂಬ ವ್ಯಾಖ್ಯಾನ ನೀಡಿದೆ.

ಮುಸ್ಲಿಂ ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಕಾನೂನುಗಳು:

  • ಶರೀಯತ್‌ ಕಾಯ್ದೆ 1932: ಶರೀಯತ್‌ ನಿಯಮಗಳ ಪ್ರಕಾರ ಮುಸ್ಲಿಂ ವೈಯಕ್ತಿಕ ವ್ಯವಹಾರಗಳನ್ನು ನಿರ್ಧರಿಸುತ್ತದೆ
  • ಮುಸ್ಲಿಂ ವಿವಾಹ ವಿಚ್ಛೇದನ ಕಾಯ್ದೆ 1939
  • ಮುಸ್ಲಿಂ ಮಹಿಳೆ (ವಿಚ್ಛೇದನದ ಬಳಿಕ ಹಕ್ಕುಗಳ ರಕ್ಷಣೆ) ಕಾಯ್ದೆ 1986
  • ಇತ್ತೀಚೆಗೆ, ಮಧ್ಯಮ ಮತ್ತು ಮೇಲ್ವರ್ಗದ ಜನರು ಹೆಚ್ಚಾಗಿ ತಮ್ಮ ಮದುವೆಯನ್ನು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳುತ್ತಾರೆ.
  • [೩]

ತ್ರಿವಳಿ ತಲಾಖ್‌[ಬದಲಾಯಿಸಿ]

  • ಮುಸ್ಲಿಂ ವೈವಾಹಿಕ ನಿಯಮಗಳು ಧಾರ್ಮಿಕ ನಿಯಮ ಹೇಗಾಗುತ್ತದೆ? ಮುಸ್ಲಿಂ ವಿವಾಹದ ಮುಖ್ಯ ಕ್ರಮ ‘ನಿಕಾಹ್‌’ ಆಗಿದೆ. ಇದು ಹುಡುಗಿಯ ತಂದೆ ಮತ್ತು ಹುಡುಗನ ತಂದೆಯ ನಡುವೆ ನಡೆಯುವ ಒಂದು ಒಪ್ಪಂದ. ಅಲ್ಲಿಯೂ ಆ ಕ್ರಮ ನಡೆಯುವಾಗ ಆ ಹೆಣ್ಣಿನ ಉಪಸ್ಥಿತಿ ಇಲ್ಲ. ಇದಕ್ಕೆ ನಾಲ್ಕು ಜನ ಸಾಕ್ಷಿ ಗಳೂ ಇರುತ್ತಾರೆ. ಇಬ್ಬರು ಗಂಡಸರ ನಡುವೆ ನಡೆಯುವ ಈ ಒಪ್ಪಂದ ಹೇಗೆ ಧರ್ಮವಾಗುತ್ತದೆ?[೪]
  • ತ್ರಿವಳಿ ತಲಾಖ್‌ನ ಬಗ್ಗೆ ಮುಸ್ಲಿಂ ಬಾಹುಳ್ಯವಿರುವ ಸುಮಾರು 25 ರಾಷ್ಟ್ರಗಳು ದೃಢವಾದ ನಿಲುವನ್ನು ತಳೆದು ಆ ವ್ಯವಸ್ಥೆಯ ವಿರುದ್ಧ ಸಕ್ಷಮವಾದ ಕಾನೂನನ್ನು ಜಾರಿಗೊಳಿಸಿವೆ. ಬಿಜೆಪಿಯ ಚುನಾವಣಾ ರಾಜಕೀಯದ ತಂತ್ರಗಾರಿಕೆಯ ಕ್ರಮವಾಗಿ ಮುಸ್ಲಿಂ ಮಹಿಳೆಯರ ಪ್ರಶ್ನೆ ಹೆಚ್ಚು ಚರ್ಚೆಯಾಗುತ್ತಿದೆ. ಅಷ್ಟಾಗಿಯೂ ತ್ರಿವಳಿ ತಲಾಖ್‌ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಬಹುತೇಕ ಜನರು ನಿರೀಕ್ಷೆ ಮತ್ತು ಕುತೂಹಲವನ್ನು ಹೊಂದಿದ್ದಾರೆ.[೫]
  • [೬]
  • ತ್ರಿವಳಿ ತಲಾಖ್‌, ಚರ್ಚೆಗೆ ಮುಕ್ತವಾದಲ್ಲಿ ತಪ್ಪೇನಿದೆ ? ಸಾರಾ ಅಬೂಬಕರ್;22 Apr, 2017:ಮುಸ್ಲಿಂ ವೈವಾಹಿಕ ನಿಯಮಗಳು ಧಾರ್ಮಿಕ ನಿಯಮ ಹೇಗಾಗುತ್ತದೆ? ಮುಸ್ಲಿಂ ವಿವಾಹದ ಮುಖ್ಯ ಕ್ರಮ ‘ನಿಕಾಹ್‌’ ಆಗಿದೆ. ಇದು ಹುಡುಗಿಯ ತಂದೆ ಮತ್ತು ಹುಡುಗನ ತಂದೆಯ ನಡುವೆ ನಡೆಯುವ ಒಂದು ಒಪ್ಪಂದ. ಅಲ್ಲಿಯೂ ಆ ಕ್ರಮ ನಡೆಯುವಾಗ ಆ ಹೆಣ್ಣಿನ ಉಪಸ್ಥಿತಿ ಇಲ್ಲ.ಅಲ್ಲಿಯೂ ಆ ಕ್ರಮ ನಡೆಯುವಾಗ ಆ ಹೆಣ್ಣಿನ ಉಪಸ್ಥಿತಿ ಇಲ್ಲ. ಇದಕ್ಕೆ ನಾಲ್ಕು ಜನ ಸಾಕ್ಷಿ ಗಳೂ ಇರುತ್ತಾರೆ. ಇಬ್ಬರು ಗಂಡಸರ ನಡುವೆ ನಡೆಯುವ ಈ ಒಪ್ಪಂದ ಹೇಗೆ ಧರ್ಮವಾಗುತ್ತದೆ? ಮುಸ್ಲಿಂ ವೈವಾಹಿಕ ಸಂಬಂಧಗಳಲ್ಲಿ ಮಹಿಳೆಯರಿಗೆ ಏನೇನೂ ರಕ್ಷಣೆ ಇಲ್ಲದ ಕಾರಣ, ಈಗಿರುವ ತ್ರಿವಳಿ ತಲಾಖ್‌ ಪದ್ಧತಿಯನ್ನು ರದ್ದುಪಡಿಸಿ ಮಹಿಳೆಯರಿಗೆ ಭದ್ರತೆ ದೊರೆಯುವಂತೆ, ವಿಚ್ಛೇದನವು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾದಂತಹ ನಿಯಮ ಜಾರಿ ಆಗಬೇಕು ಎಂದು ಮಹಿಳೆಯರು ಹೋರಾಡತೊಡಗಿದೊಡನೆ ‘ಅದು ನಮ್ಮ ಧಾರ್ಮಿಕ ನಿಯಮ, ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ’ ಎಂದು ಮುಸ್ಲಿಂ ಪುರುಷರು ಕಿರುಚಾಡತೊಡಗುತ್ತಾರೆ[೭]

‘ಖುಲಾ’ ಸ್ವಾತಂತ್ರ್ಯ[ಬದಲಾಯಿಸಿ]

  • ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಮಹಿಳೆಗೆ ರಕ್ಷಣೆ ಇಲ್ಲ ಎಂದು ವಾದಿಸುವವರಿಗೆ ಪುರುಷರ ‘ತಲಾಖ್’ ನಂತೆ ಮಹಿಳೆಯರ ‘ಖುಲಾ’ ಸ್ವಾತಂತ್ರ್ಯವೇಕೆ ಕಾಣುತ್ತಿಲ್ಲ? ತ್ರಿವಳಿ ತಲಾಖ್‌ಅನ್ನು ರದ್ದುಗೊಳಿಸಿದ ತಕ್ಷಣ ಮಹಿಳೆಗೆ ಎಲ್ಲಾ ರೀತಿಯ ರಕ್ಷಣೆ ಲಭಿಸಿಬಿಡುತ್ತದೆಯೇ? ಮುಸ್ಲಿಂ ಪುರುಷರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಂತಹ ಸಂದರ್ಭದಲ್ಲಿ ಮುಸ್ಲಿಂ ಮಹಿಳೆ ಹೇಗೆ ತಾನೇ ಸುರಕ್ಷಿತವಾಗಿ ಇರಬಲ್ಲಳು? ಇಂಥ ಸ್ಥಿತಿಯಲ್ಲಿ ಮಹಿಳೆಗಾಗಿ ಅನುಷ್ಠಾನಗೊಂಡಿರುವ ‘ಖುಲಾ’ ಸ್ವಾತಂತ್ರ್ಯವನ್ನು ಕಾರ್ಯರೂಪಕ್ಕೆ ತರಲು ಹೋರಾಡಬೇಕೇ ವಿನಾ ಪುರುಷರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದಕ್ಕಲ್ಲ.[೮]
  • ಖುಲಾ, ಎಂದರೆ ಸ್ತ್ರೀ ತನ್ನ ಪತಿಯಿಂದ ಬಿಡುಗಡೆಯನ್ನು ಕೇಳುವ ಸ್ವಾತಂತ್ರ್ಯ. ಆದರೆ, ಪುರುಷಪ್ರಧಾನ ಮನೋವೃತ್ತಿ ಇದನ್ನು ಅತ್ಯಂತ ಕಠಿಣ ಮತ್ತು ಅವಹೇಳನಕಾರಿಯಾಗಿ ಮಾಡಿದೆ. ‘ನಿನಗೆ ಹಕ್ಕು ಬೇಕಾ? ಅದನ್ನು ನೀನು ಹೇಗೆ ಅನುಭವಿಸುತ್ತೀಯೋ ನೋಡೋಣ’ ಎಂದು ಪುರುಷಸಮಾಜ ಬಡಪಾಯಿ ಸ್ತ್ರೀಯರಿಗೆ ಬೆದರಿಕೆಯ ಸವಾಲು ಹಾಕಿದಂತಿದೆ ಈ ಖುಲಾ ಪದ್ಧತಿ.[೯]

ಏಕಕಾಲ ತಲಾಕ್‍ -ವಿಚ್ಛೇದನ ಕ್ರಮ ನಿಯಮ ಬಾಹಿರ[ಬದಲಾಯಿಸಿ]

  • ವಿವಾದಿತ ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಐವರು ನ್ಯಾಯಮೂರ್ತಿಗಳ ಭಿನ್ನ ನಿಲುವಿನ ಹೊರತಾಗಿಯೂ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ದಿ.22 ಆಗಸ್ಟ್, 2017 ಮಂಗಳವಾರ ಈ ಪದ್ಧತಿಯನ್ನು ರದ್ದುಗೊಳಿಸುವ ತೀರ್ಪು ನೀಡಿದೆ. ಸಂವಿಧಾನ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳು ವಿಭಿನ್ನ ನಂಬುಗೆ ಮತ್ತು ಧಾರ್ಮಿಕ ಹಿನ್ನೆಲೆಯಿಂದ ಬಂದಿದ್ದರೂ ಈ ಪದ್ಧತಿ ಕೊನೆಗೊಳಿಸುವ ಆದೇಶ ಹೊರಡಿಸಿದ್ದಾರೆ. ಸಿಖ್‌ ಧರ್ಮಕ್ಕೆ ಸೇರಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದ ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ಅವರು ತ್ರಿವಳಿ ತಲಾಖ್ ಮಾನ್ಯತೆ ಎತ್ತಿಹಿಡಿದರು. ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ರೋಹಿಂಗ್ಟನ್ ನಾರಿಮನ್‌ ಮತ್ತು ಉದಯ್ ಲಲಿತ್ ಅವರು ತ್ರಿವಳಿ ತಲಾಖ್ ಸಂವಿಧಾನ ಬಾಹಿರ ಎಂದು ಅಭಿಪ್ರಾಯಪಟ್ಟರು. ಕುರಿಯನ್‌ ಜೋಸೆಫ್‌ ಕ್ರೈಸ್ತರಾದರೆ, ಯು.ಯು. ಲಲಿತ್‌ ಅವರು ಹಿಂದು. ರೋಹಿಂಗ್ಟನ್‌ ಎಫ್‌. ನಾರಿಮನ್‌ ಜೋರಾಸ್ಟ್ರಿಯನ್‌ ಧರ್ಮಕ್ಕೆ ಸೇರಿದವರು. ಬಹುಮತದ (3:2) ತೀರ್ಪಿನ ಆಧಾರದ ಮೇಲೆ ಸುಪ್ರೀಂಕೋರ್ಟ್‌ ತ್ರಿವಳಿ ತಲಾಖ್ ರದ್ದುಪಡಿಸಿದೆ. [೧೦]

ನೋಡಿ-ಹೆಚ್ಚಿನ ಓದಿಗೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. http://www.sahilonline.in/special-report/%E0%B2%95%E0%B2%B2%E0%B3%8D%E0%B2%B2%E0%B2%BF%E0%B2%95%E0%B3%8B%E0%B2%9F%E0%B3%86-%E0%B2%90%E0%B2%B8%E0%B2%BF%E0%B2%B8%E0%B3%8D-%E0%B2%87%E0%B2%B8%E0%B3%8D%E0%B2%B2%E0%B2%BE%E0%B2%AE%E0%B3%8D/#.WA2uD_l97IU[ಶಾಶ್ವತವಾಗಿ ಮಡಿದ ಕೊಂಡಿ]
  2. "ಆರ್ಕೈವ್ ನಕಲು". Archived from the original on 2016-03-30. Retrieved 2016-10-24.
  3. ಮತಬ್ಯಾಂಕ್‌ ರಾಜಕಾರಣದ ನಡುವೆ ಮಸುಕಾದ ಮಹಿಳಾ ಸಮಾನತೆಯ ಕೂಗು;ತಲಾಖ್‌ ವಿರುದ್ಧ ಹೋರಾಟಕ್ಕೆ 30 ವರ್ಷಹಮೀದ್ ಕೆ.;3 Nov, 2016
  4. "ತ್ರಿವಳಿ ತಲಾಖ್‌: ಚರ್ಚೆಗೆ ಮುಕ್ತವಾದಲ್ಲಿ ತಪ್ಪೇನಿದೆ ?;ಸಾರಾ ಅಬೂಬಕರ್;22 Apr, 2017;". Archived from the original on 2017-06-14. Retrieved 2017-04-23.
  5. "ತ್ರಿವಳಿ ತಲಾಖ್‌: ತೀರ್ಪಿನ ನಿರೀಕ್ಷೆಯಲ್ಲಿ...;27 Apr, 2017;ಬಾನು ಮಸ್ತಾಕ್;;". Archived from the original on 2017-04-27. Retrieved 2017-04-27.
  6. "ತಲಾಖ್: ಸ್ತ್ರೀವಾದಿ ವಿರುದ್ಧ ಪುರುಷವಾದಿ;ರಂಜಾನ್ ದರ್ಗಾ;17 May, 2017". Archived from the original on 2017-05-17. Retrieved 2017-05-17.
  7. "ತ್ರಿವಳಿ ತಲಾಖ್‌: ಚರ್ಚೆಗೆ ಮುಕ್ತವಾದಲ್ಲಿ ತಪ್ಪೇನಿದೆ ? ಸಾರಾ ಅಬೂಬಕರ್;22 Apr, 2017;". Archived from the original on 2017-06-14. Retrieved 2017-04-23.
  8. "ತಲಾಖ್, ಖುಲಾ ಮತ್ತು ಮುಸ್ಲಿಂ ಪುರುಷ;ಡಾ. ಷಾಕಿರಾ ಖಾನಂ;1 Jun, 2017". Archived from the original on 2017-06-03. Retrieved 2017-06-03.
  9. "'ಖುಲಾ' ಕುರಿತು ಒಂದಷ್ಟು ಖುಲಾಸಾ;ಎಂ. ಅಬ್ದುಲ್ ರೆಹಮಾನ್ ಪಾಷ;3 Jun, 2017". Archived from the original on 2017-06-02. Retrieved 2017-06-03.
  10. ನಿಲುವು: ಒಮ್ಮತದ ತೀರ್ಪು ಪ್ರಜಾವಾಣಿ ವಾರ್ತೆ 2೪ Aug, 2017[ಶಾಶ್ವತವಾಗಿ ಮಡಿದ ಕೊಂಡಿ]