ಕಡಿಬಂಡೆ
ಭೂಗೋಳ ಶಾಸ್ತ್ರ ಮತ್ತು ಭೂವಿಜ್ಞಾನದಲ್ಲಿ, ಕಡಿಬಂಡೆ ಎಂದರೆ ಒಂದು ಲಂಬರೇಖೆಯ, ಅಥವಾ ಬಹುತೇಕವಾಗಿ ಲಂಬರೇಖೆಯ, ಬಂಡೆ ಒಡ್ಡಿಕೆ. ಶಿಥಿಲಗೊಳ್ಳುವಿಕೆ ಮತ್ತು ಸವೆತ ಪ್ರಕ್ರಿಯೆಗಳಿಂದ ಸವೆತದ ಭೂರೂಪಗಳಾಗಿ ಕಡಿಬಂಡೆಗಳ ರಚನೆಯಾಗುತ್ತದೆ. ಕಡಿಬಂಡೆಗಳು ಕರಾವಳಿಗಳ ಮೇಲೆ, ಪರ್ವತ ಪ್ರದೇಶಗಳಲ್ಲಿ, ಇಳಿಜಾರುಗಳಲ್ಲಿ ಮತ್ತು ನದಿಗಳ ಉದ್ದದಲ್ಲಿ ಸಾಮಾನ್ಯವಾಗಿರುತ್ತವೆ. ಸಾಮಾನ್ಯವಾಗಿ ಶಿಥಿಲಗೊಳ್ಳುವಿಕೆ ಮತ್ತು ಸವೆತಕ್ಕೆ ನಿರೋಧ ಒಡ್ಡುವ ಬಂಡೆಯಿಂದ ಕಡಿಬಂಡೆಗಳ ರಚನೆಯಾಗುತ್ತವೆ. ಕಡಿಬಂಡೆಗಳಾಗಿ ರೂಪವಾಗುವ ಹೆಚ್ಚು ಸಾಧ್ಯತೆಯುಳ್ಳ ಮಡ್ಡಿ ಶಿಲೆಗಳಲ್ಲಿ ಮರಳುಗಲ್ಲು, ಸುಣ್ಣ ಕಲ್ಲು, ಸೀಮೆಸುಣ್ಣ, ಮತ್ತು ಡೋಲಮೈಟ್ ಸೇರಿವೆ. ಗ್ರಾನೈಟ್ ಮತ್ತು ಬ್ಯಾಸಾಲ್ಟ್ನಂತಹ ಅಗ್ನಿಶಿಲೆಗಳು ಕೂಡ ಹಲವುವೇಳೆ ಕಡಿಬಂಡೆಗಳನ್ನು ರಚಿಸುತ್ತವೆ.
ಇಳಿಜಾರು ಮುಖವು ಭೂ ಸ್ತರಭಂಗ ಅಥವಾ ಭೂ ಕುಸಿತದ ಚಲನೆಯಿಂದ, ಅಥವಾ ಭಿನ್ನ ಗಡಸುತನದ ಶಿಲಾಪದರಗಳ ಭೇದಾತ್ಮಕ ಸವೆತದಿಂದ ರೂಪಗೊಳ್ಳುವ ಒಂದು ಬಗೆಯ ಕಡಿಬಂಡೆ.
ಬಹುತೇಕ ಕಡಿಬಂಡೆಗಳು ತಮ್ಮ ತಳಹದಿಯಲ್ಲಿ ಯಾವುದೋ ರೂಪದ ಸಣ್ಣ ಕಲ್ಲುಗಳ ಇಳಿಜಾರನ್ನು ಹೊಂದಿರುತ್ತವೆ. ಶುಷ್ಕ ಪ್ರದೇಶಗಳಲ್ಲಿ ಅಥವಾ ಎತ್ತರದ ಕಡಿಬಂಡೆಗಳ ಕೆಳಗೆ, ಸಾಮಾನ್ಯವಾಗಿ ಪತನವಾದ ಬಂಡೆಯ ಒಡ್ಡಿಕೊಂಡ ಬೆರಕೆ ಇರುತ್ತದೆ. ಹೆಚ್ಚು ಆರ್ದ್ರತೆಯ ಪ್ರದೇಶಗಳಲ್ಲಿ, ಓರೆ ಕಲ್ಲುರಾಶಿಯನ್ನು ಮಣ್ಣಿನ ಇಳಿಜಾರು ಮಸುಕುಗೊಳಿಸಬಹುದು. ಅನೇಕ ಕಡಿಬಂಡೆಗಳು ಉಪನದಿ ಜಲಪಾತಗಳು ಅಥವಾ ಬಂಡೆ ಮರೆಗಳನ್ನು ಮುಖ್ಯಲಕ್ಷಣವಾಗಿ ಹೊಂದಿರುತ್ತವೆ. ಕೆಲವೊಮ್ಮೆ ಕಡಿಬಂಡೆಯು ಪರ್ವತ ಶ್ರೇಣಿಯ ಕೊನೆಯಲ್ಲಿ ಕಿರಿದಾಗಿ ರಚನೆಯಾಗಿರುತ್ತದೆ, ಮತ್ತು ಚಹಾ ಮೇಜು ರಚನೆಗಳು ಅಥವಾ ಇತರ ಬಗೆಯ ಬಂಡೆ ಕಂಬಗಳು ಉಳಿದುಕೊಂಡಿರುತ್ತವೆ. ಕರಾವಳಿ ಸವೆತವು ಕಿರಿದಾಗುತ್ತ ಹೋಗುವ ಕರಾವಳಿಯ ಉದ್ದಕ್ಕೆ ಸಮುದ್ರ ಕಡಿಬಂಡೆಗಳ ರಚನೆಗೆ ಕಾರಣವಾಗಬಹುದು.
ಒಂದು ಕಡಿಬಂಡೆಯು ನಿಖರವಾಗಿ ಲಂಬವಾಗಿರಬೇಕೆಂಬುದೇನಿಲ್ಲ ಎಂಬ ವಾಸ್ತವಾಂಶವನ್ನು ಪರಿಗಣಿಸಿ, ಒಂದು ನಿರ್ದಿಷ್ಟ ಇಳಿಜಾರು ಕಡಿಬಂಡೆಯೋ ಅಲ್ಲವೋ ಮತ್ತು ನಿರ್ದಿಷ್ಟ ಇಳಿಜಾರಿನ ಎಷ್ಟು ಪ್ರಮಾಣವನ್ನು ಕಡಿಬಂಡೆಯಾಗಿ ಪರಿಗಣಿಸಬೇಕು ಎಂಬ ಬಗ್ಗೆ ಅಸ್ಪಷ್ಟತೆ ಇರಬಹುದು. ಉದಾಹರಣೆಗೆ, ಅತಿ ಕಡಿದಾದ ಇಳಿಜಾರಿನ ಮೇಲಿನ ನಿಜವಾಗಿಯೂ ಲಂಬವಾದ ಬಂಡೆ ಗೋಡೆಯನ್ನು ಪರಿಗಣಿಸಿದಾಗ, ಒಬ್ಬರು ಕೇವಲ ಬಂಡೆ ಗೋಡೆಯನ್ನು ಅಥವಾ ಎಲ್ಲದರ ಸಂಯೋಜನೆಯನ್ನು ಕಡಿಬಂಡೆ ಎಂದು ಪರಿಗಣಿಸಬಹುದು. ಹಾಗಾಗಿ ಕಡಿಬಂಡೆಗಳ ಪಟ್ಟಿ ಮಾಡುವುದು ಮೂಲಸ್ವರೂಪವಾಗಿ ಅನಿರ್ದಿಷ್ಟವಾಗಿದೆ.
ಭೂಮಿಯ ಮೇಲಿನ ಅತ್ಯಂತ ದೊಡ್ಡ ಕಡಿಬಂಡೆಗಳಲ್ಲಿ ಕೆಲವು ನೀರಿನಡಿ ಕಂಡುಬರುತ್ತವೆ. ಉದಾಹರಣೆಗೆ, ಕರ್ಮಾಡೆಕ್ ಕಂದಕದ ಒಳಗೆ ಕುಳಿತುಕೊಂಡಿರುವ ಒಂದು ಪರ್ವತ ಶ್ರೇಣಿಯಲ್ಲಿ ೪,೨೫೦ ಮೀ. ಹರವಿನಲ್ಲಿ ಒಂದು ೮,೦೦೦ ಮೀಟರ್ ಕುಸಿತವನ್ನು ಕಾಣಬಹುದು.