ವಿಷಯಕ್ಕೆ ಹೋಗು

ಆಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಡೆತನದ ಹಕ್ಕುಗಳಿಗೆ ಒಳಪಡಿಸಬಹುದಾದ ಹಾಗೂ ಆರ್ಥಿಕ ಮೌಲ್ಯವುಳ್ಳ ಪದಾರ್ಥ. ಒಂದು ಪದಾರ್ಥಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳ ನಡುವೆ ಏರ್ಪಟ್ಟಿರುವ ಸಂಬಂಧಗಳ ವಿನ್ಯಾಸವೇ ಸ್ವತ್ತು. ಇಂಥ ಸಂಬಂಧಗಳ ವಿನ್ಯಾಸ ಸರ್ಕಾರದಿಂದ ಅಂಗೀಕೃತವಾಗಿರಬೇಕು, ಸ್ಥಾಪಿಸಲ್ಪಟ್ಟಿರಬೇಕು.


ಆಸ್ತಿ ಮತ್ತು ಸ್ವತ್ತು ಎಂಬ ಪದಗಳನ್ನು ಸಾಮಾನ್ಯವಾಗಿ ಸಮಾನಾರ್ಥಕ ಪದಗಳಾಗಿ ಬಳಸಲಾಗುತ್ತಿದ್ದರೂ ಶಾಸ್ತ್ರೀಯ ವಿವೇಚನೆಗಾಗಿ ಇಲ್ಲಿ ಇವೆರಡಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಗಮನಿಸಬೇಕು. ಆಸ್ತಿ ಎಂಬ ಪದವನ್ನು ಮೊದಲಿನ ಸಂಕುಚಿತ ಅರ್ಥದಲ್ಲೂ ಸ್ವತ್ತು ಎಂಬ ಪದವನ್ನು ಎರಡನೆಯ ವಿಶಾಲ ಅರ್ಥದಲ್ಲೂ ಇಲ್ಲಿ ಬಳಸಲು ಪ್ರಯತ್ನಿಸಿದೆ. ಅನೇಕ ಸಂದರ್ಭಗಳಲ್ಲಿ ಇವೆರಡನ್ನೂ ಪ್ರತ್ಯೇಕಿಸುವುದೂ ಕಷ್ಟವಾಗುತ್ತದೆ. ಸ್ಥಿತಿವಂತ ಎಂಬ ಪದವನ್ನು ಜನ ಬಳಸುವಾಗ ಒಬ್ಬಾತನ ಸ್ವಾಮ್ಯಕ್ಕೊಳಪಟ್ಟಿರುವ ಎಲ್ಲ ಬಗೆಯ ಮೂರ್ತ ಆಸ್ತಿಗಳನ್ನೇ ಅಲ್ಲದೆ ಅಮೂರ್ತವಾದ ಎಲ್ಲ ಬಗೆಯ ಹಕ್ಕುಗಳನ್ನೂ ಗಮನದಲ್ಲಿಟ್ಟು ಕೊಂಡು ಈ ಮಾತು ಹೇಳುವುದು ವಾಡಿಕೆಯಾಗಿದೆ.[]


ಕಾಯಿದೆಯ ದೃಷ್ಟಿಯಲ್ಲಿ ಆಸ್ತಿ ಹಾಗೂ ಸ್ವತ್ತಿನ ವಿವರಣೆಯನ್ನು ಇಲ್ಲಿ ಮೊದಲ ಭಾಗದಲ್ಲಿ ಕೊಡಲಾಗಿದೆ. ಕೊನೆಯ ಭಾಗದಲ್ಲಿ ಸಮಾಜದ ದೃಷ್ಟಿಯಿಂದ ಸ್ವತ್ತಿನ ಕಲ್ಪನೆಯನ್ನು ವಿವೇಚಿಸಿದೆ. ಒಂದು ಉದ್ಯಮದಲ್ಲಿ ತೊಡಗಿಸಿದ ಆಸ್ತಿಗಳನ್ನು ಕುರಿತ ವಿವೇಚನೆಯನ್ನು ಲೇಖನದಲ್ಲಿ (ಮುಂದೆ) ಕೊಟ್ಟಿದೆ.

ಅಸ್ತಿ ಎಂದರೆ ಇದೆ ಎಂದರ್ಥ. ಅಸ್ತಿತ್ವದಲ್ಲಿರುವುದು ಯಾವುದೋ ಅದು ಆಸ್ತಿ. ಸ್ವಂತದ್ದು ಯಾವುದೋ ಅದು ಸ್ವತ್ತು. ಪ್ರಾಪರ್ಟಿ ಎಂಬ ಇಂಗ್ಲಿಷ್ ಪದ ಪ್ರೊಪ್ರೈಟಸ್, ಪ್ರೊಪ್ರಿಯಸ್ ಎಂಬ ಲ್ಯಾಟಿನ್ ಪದಗಳಿಂದ ಬಂದಿದೆ. ಪ್ರೊಪ್ರಿಯಸ್ ಎಂಬ ಪದದ ಅರ್ಥ ಸ್ವಂತದ್ದು ಎಂದು, ಸ್ವತ್ತು ಎಂಬುದು ಪ್ರಾಪರ್ಟಿ ಎಂಬ ಮಾತಿಗೆ ಬಹು ಸಮೀಪವಾಗಿದೆ.

ಅಸ್ತಿತ್ವದಲ್ಲಿರುವುದೆಲ್ಲ ಆಸ್ತಿ ಎಂಬುದಾದರೆ, ಅಸ್ತಿತ್ವದಲ್ಲಿರುವುದು ಯಾವುದು-ಎಂಬ ಪ್ರಶ್ನೆ ಏಳುತ್ತದೆ. ಕಣ್ಣಿಗೆ ಕಾಣುವ, ಕೈಯಿಂದ ಮುಟ್ಟಿ ಅನುಭವಿಸುವ ವಸ್ತುಗಳು ಮಾತ್ರ ಅಸ್ತಿತ್ವದಲ್ಲಿವೆಯೆ ? ಜಡವಸ್ತುಗಳೆಲ್ಲ, ವಾಸ್ತವವಾಗಿ ಯಾವುದನ್ನು ಸ್ವಾಧೀನಕ್ಕೆ ತೆಗೆದುಕೊಂಡು ಅವುಗಳ ಮೇಲೆ ಒಡೆತನವನ್ನು ಸ್ಥಾಪಿಸಲು ಸಾಧ್ಯವಾಗುವುವೋ ಆ ವಸ್ತು ಅಥವಾ ಸ್ವತ್ತುಗಳೆಲ್ಲ, ಅಸ್ತಿತ್ವದಲ್ಲಿವೆ ಎಂಬ ವಿಚಾರವನ್ನು ಗ್ರಹಿಸುವುದು ಕಷ್ಟವಲ್ಲ. ಭೂಮಿ, ಮನೆ, ಧನ, ಧಾನ್ಯ, ಪಶು, ಪಕ್ಷಿ ಮುಂತಾದುವು ಆಸ್ತಿಗಳೆಂದು ತಿಳಿಯುವುದಕ್ಕೆ ಕಷ್ಟವಾಗುವುದಿಲ್ಲ. ಆದರೆ, ಕಣ್ಣಿಗೆ ಕಾಣದ ಆಸ್ತಿಗಳೂ ಆಸ್ತಿಗಳೆ  ? ಎಲ್ಲ ಹಕ್ಕುಗಳೂ ಗ್ರಂಥಕರ್ತನಿಗೆ ಸೇರಿವೆ ಎಂದು ಒಬ್ಬ ಗ್ರಂಥಕರ್ತ ತನ್ನ ಪುಸ್ತಕದಲ್ಲಿ ಸೂಚಿಸಿದಾಗ, ಯಾವುದರ ಮೇಲಿರುವ ಹಕ್ಕುಗಳು  ?-ಎಂಬುದು ಪ್ರಶ್ನೆ. ಅಚ್ಚಾದ ಗ್ರಂಥದ ಆ ಒಂದು ಪ್ರತಿಯ ಮೇಲಿನ ಹಕ್ಕು ಅದಾಗಿದ್ದರೆ, ಅದನ್ನು ಕ್ರಯ ಕೊಟ್ಟು ಪಡೆದವನು ಆ ಹಕ್ಕನ್ನೂ ಕೊಂಡಂತಾಗುತ್ತದೆ. ಆದರೆ, ಒಂದು ಪ್ರತಿಯನ್ನು ಕ್ರಯಕ್ಕೆ ಕೊಳ್ಳುವುದರಿಂದ ಗ್ರಂಥಕರ್ತನ ಹಕ್ಕುಗಳಿಗೆ ಲೋಪ ಬರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಮಾತು. ಎಂದಮೇಲೆ, ಗ್ರಂಥಕರ್ತನ ಆ ‘ಆಸ್ತಿ’ ಕಣ್ಣಿಗೆ ಕಾಣುವ ಕೈಯಿಂದ ಗ್ರಹಿಸುವ ಗ್ರಂಥಕ್ಕಿಂತಲೂ ಬೇರೆಯೇ ಆಗಿದೆ (ಗ್ರಂಥಸ್ವಾಮ್ಯ). ಅದೂ ಆಸ್ತಿಯೇ ಎಂದಂತಾಯಿತು. ಏಕೆಂದರೆ, ಆ ಆಸ್ತಿಯ ಮೇಲೆ ಗ್ರಂಥಕರ್ತನಿಗೆ ಸ್ವಾಮ್ಯವಿದೆ. ಎಂದರೆ ಆಸ್ತಿ ಕೇವಲ ಜಡವಸ್ತುಗಳಿಗೇ ಪರಿಮಿತವಾಗಿಲ್ಲ.

ಬಹುಕಾಲದವರೆಗೆ ಒಂದು ಸ್ಥಳದಲ್ಲಿ ವ್ಯಾಪಾರ ನಡೆಸುತ್ತಿರುವ ಒಂದು ಅಂಗಡಿ ಮಾಲೀಕ ತನ್ನ ಸರಕು ಹಾಗೂ ತನ್ನ ಅಂಗಡಿಯ ಬಗ್ಗೆ ಒಂದು ಬಗೆಯ ಸದ್ಭಾವನೆ ಮತ್ತು ಖ್ಯಾತಿ ಪಡೆಯುತ್ತಾನೆ. ಆ ಖ್ಯಾತಿ ಅವನ ಅಂಗಡಿಯ ಅವಿಭಾಜ್ಯ ಭಾಗವಾಗುತ್ತದೆ. ಇದನ್ನು ಸುನಾಮ (ಗುಡ್ವಿಲ್) ಎನ್ನುತ್ತಾರೆ. ಒಂದು ವೇಳೆ ಆ ಅಂಗಡಿಯ ಮಾಲೀಕ ತನ್ನ ಅಂಗಡಿಯನ್ನು ಮಾರಿದರೆ, ಅದರೊಡನೆ ಅದರ ಸುನಾಮವನ್ನೂ ಮಾರುತ್ತಾನೆ. ಆಗ ಅದು ಆಸ್ತಿ ಎಂಬ ಹೆಸರಿಗೆ ಅರ್ಹವಾಗುತ್ತದೆ. ಅದಕ್ಕೂ ಬೆಲೆಯಿದೆ.

ಒಬ್ಬಾತನಿಗೆ ಭೂಮಿ ಮನೆ ಮುಂತಾದ ಸ್ಥಾವರ ಆಸ್ತಿಗಳಿಲ್ಲದಿದ್ದರೂ ಕಂಪನಿಗಳಲ್ಲಿ ಷೇರುಗಳ ರೂಪದಲ್ಲಿ ಅಥವಾ ಜನರಿಂದ ಬರಬೇಕಾದ ಸಾಲದ ರೂಪದಲ್ಲಿ ಆಸ್ತಿಯಿರಬಹುದು. ಷೇರು ಮತ್ತು ಸಾಲದ ಈ ಆಸ್ತಿಯ ಮೇಲೆ ಪ್ರಸ್ತಾಪಿಸಿದ ಭೂಮಿ ಅಥವಾ ಮನೆ ಮುಂತಾದ ಸ್ಥಾವರ ಆಸ್ತಿಗಿಂತ ಬೇರೆಯಾಗಿದೆ. ಹಾಗೆಯೇ ಗ್ರಂಥಸ್ವಾಮ್ಯ ಸುನಾಮಕ್ಕಿಂತ ಭಿನ್ನವಾಗಿದೆ. ಒಬ್ಬಾತ ಒಂದು ಕಂಪನಿಯ ಇಂತಿಷ್ಟು ಸಾವಿರ ರೂಪಾಯಿ ಸಾಲ ಬರುವುದಿದೆ-ಎಂದಾಗ ಆ ಷೇರು ಅಥವಾ ಸಾಲಪತ್ರಗಳೇ ಆಸ್ತಿ ಎಂಬ ಅಭಿಪ್ರಾಯವಲ್ಲ. ಅವು ಬರಿಯ ಕಾಗದ ಪತ್ರ. ಯಾರ ಹೆಸರಿನಲ್ಲಿ ಷೇರು ಅಥವಾ ಸಾಲಪತ್ರಗಳಿವೆಯೋ ಅವರಿಗೆ ಅಷ್ಟು ಹಣವನ್ನು ವಸೂಲು ಮಾಡಿಕೊಂಡು ಪಡೆಯುವ ಹಕ್ಕು ಇದೆ ಎಂದು ಅರ್ಥವಾಗುತ್ತದೆ. ಇಂಥ ಹಕ್ಕುಗಳೂ ಆಸ್ತಿಗಳೇ.

ಈ ಮೇಲೆ ಗಮನಿಸಿದ ಆಸ್ತಿಗಳಲ್ಲದೆ, ಇನ್ನೊಂದು ಬಗೆಯ ಆಸ್ತಿಯೂ ಅದರಲ್ಲಿರಬಹುದು. ಇದಕ್ಕೆ ವಿದ್ಯುಚ್ಛಕ್ತಿ ಒಂದು ಉದಾಹರಣೆ. ಕೆಲವು ಕಂಪನಿ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿ ನಗರ ಸಭೆಗಳಿಗೂ, ಗಿರಣಿಗಳಿಗೂ, ಕಾರ್ಖಾನೆಗಳಿಗೂ ಮಾರುತ್ತವೆ. ಆ ಕಂಪನಿಗಳು ಉತ್ಪಾದಿಸುವ ವಿದ್ಯುಚ್ಛಕ್ತಿಯೂ ಒಂದು ಆಸ್ತಿ. ಅದು ಭೂಮಿಯಂತೆ ಭೌತಿಕವಾದ ಸ್ಥಾವರವಲ್ಲ. ಗ್ರಂಥಕರ್ತನ ಗ್ರಂಥಸ್ವಾಮ್ಯ, ಅಂಗಡಿಯ ಸುನಾಮ, ಷೇರುಪತ್ರ ಮತ್ತು ಬಾಂಡುಗಳಂತೆ ಕೇವಲ ಹಕ್ಕುಗಳ ಸಂದಾಯವಲ್ಲ. ಅದು ಕಣ್ಣಿಗೆ ಕಾಣುವುದಿಲ್ಲ. ಆದರೂ ಅದು ಕೇವಲ ಕಾಲ್ಪನಿಕ ಹಕ್ಕುದಾರಿಕೆಯಲ್ಲ. ಭೂಮಿಯಂತೆ ಜಡವಲ್ಲ. ಅದರದು ಶಕ್ತಿರೂಪ. ಅಸ್ತಿತ್ವದಲ್ಲಿ ಇರುವುದೆಲ್ಲ ಆಸ್ತಿಯೆಂಬುದಾದರೆ, ವಿದ್ಯುಚ್ಛಕ್ತಿಯೂ ಆಸ್ತಿಯೇ. ಕೆಲವರನ್ನು ಮಾನಧನರು ತಪೋಧನರು ಎಂದು ಕರೆಯುವ ವಾಡಿಕೆಯುಂಟು. ಒಬ್ಬ ವ್ಯಕ್ತಿಯ ಮಾನವೂ ಧನವಾಗಿರಬಲ್ಲದು. ಆ ಧನವನ್ನು ಅಪಹರಿಸುವ ಹಕ್ಕು ಯಾರಿಗೂ ಇಲ್ಲ. ಒಂದು ವೇಳೆ ಯಾರಾದರೂ ಇನ್ನೊಬ್ಬರ ಮಾನವನ್ನು ಅಪಹರಿಸಿದರೆ, ಅದನ್ನು ‘ಅಪಮಾನ’ ಎಂದು ಶಾಸನದ ಭಾಷೆಯಲ್ಲಿ ಕರೆಯುತ್ತಾರೆ. ಇದು ಆಲಂಕಾರಿಕವಾಗಿ ಈಗ ತೋರಿದರೂ ಇದು ನಿಜವಾಗಿ ಆಸ್ತಿಯೇ. ಆಸ್ತಿ ಎಂದು ನಾವು ಕರೆಯುವುದನ್ನು ಸಂಸ್ಕೃತದಲ್ಲಿ ಧನ, ದ್ರವ್ಯ, ವಿತ್ತ, ಅರ್ಥ-ಎಂದು ಕರೆಯುತ್ತಾರೆ. ಆಸ್ತಿ ಎಂಬ ಮಾತು ಇತ್ತೀಚೆಗೆ ರೂಢಿಯಿಂದ ಪ್ರಚಾರದಲ್ಲಿದೆ.

ಆಸ್ತಿಯ ಪ್ರಭೇದಗಳು

[ಬದಲಾಯಿಸಿ]

ಮೇಲಿನ ಪ್ರಸ್ತಾಪದಿಂದ ಆಸ್ತಿ ಎಂಬ ಮಾತಿಗೆ ಈ ಕೆಳಗಿನ ಅರ್ಥಗಳಿವೆ.

  1. ಜಡರೂಪದಲ್ಲಿ ಸ್ಥಿರವಾಗಿರುವ ಆಸ್ತಿ. ಅದನ್ನು ಸ್ಥಿರ ಅಥವಾ ಸ್ಥಾವರ ಎನ್ನುತ್ತೇವೆ.
  2. ಜಡರೂಪದಲ್ಲಿದ್ದರೂ ಅಸ್ಥಿರವಾದ ಆಸ್ತಿ. ಸಜೀವ ನಿರ್ಜೀವ ಚರವಸ್ತುಗಳು ಈ ಗುಂಪಿಗೆ ಸೇರುತ್ತವೆ. ಅದನ್ನು ಜಂಗಮ ಅಥವಾ ಚರಾಸ್ತಿ ಎನ್ನುತ್ತೇವೆ.
  3. ಜಡರೂಪದಲ್ಲಿ ಇಲ್ಲದಿದ್ದರೂ ಭೌತ ಪ್ರಪಂಚದಲ್ಲಿ ಶಕ್ತಿರೂಪದಲ್ಲಿ ಇರುವ ವಿದ್ಯುಚ್ಛಕ್ತಿಯಂಥ ಆಸ್ತಿ.
  4. ಗ್ರಂಥಕರ್ತನ ಗ್ರಂಥಸ್ವಾಮ್ಯ, ಅಂಗಡಿಕಾರನ ವ್ಯಾಪಾರೋದ್ಯಮ ಸಂಪಾದಿಸಿರುವ ಸುನಾಮ-ಇನ್ನೊಂದು ಬಗೆಯ ಆಸ್ತಿ.
  5. ಷೇರುಗಳು, ಬಾಂಡುಗಳು, ಪತ್ರಗಳು-ಮುಂತಾದ ಹಕ್ಕುಪತ್ರಗಳಲ್ಲಿರುವ ಹಕ್ಕುಗಳ ಸಮುದಾಯ ಇನ್ನೊಂದು ಬಗೆಯ ಆಸ್ತಿ.
  6. ಕೊನೆಯದಾಗಿ, ವ್ಯಕ್ತಿಗತ ಮಾನವೂ ಒಂದು ಆಸ್ತಿ.

ಹೀಗೆ ಆಸ್ತಿ ಎಂಬ ಮಾತಿಗೆ ಅತ್ಯಂತ ವಿಶಾಲವಾದ ಅರ್ಥದಲ್ಲಿ ಒಬ್ಬಾತನಿಗೆ ಸ್ಥಿರ, ಚರ, ಮೂರ್ತ, ಅಮೂರ್ತವಾದ ಎಲ್ಲ ವಸ್ತುಗಳ ಮೇಲಿರುವ ಸಮಸ್ತ ಹಕ್ಕುಗಳ ಸಮುದಾಯ ಎಂದು ಅರ್ಥವಾಗುತ್ತದೆ. ಹಾಗೂ ತನ್ನ ವೈಯಕ್ತಿಕ ಬುದ್ಧಿಶಕ್ತಿ, ಮತ್ತೊಬ್ಬನಿಂದ ತನಗೆ ಸಲ್ಲಬೇಕಾದ ಋಣ. ಅದು ಹಣದ ರೂಪದಲ್ಲಿರಬಹುದು, ಇಲ್ಲವೇ ಸಲ್ಲಬೇಕಾದ ಗೌರವರೂಪದಲ್ಲಿರಬಹುದು ಎಂದೂ ಅರ್ಥವಾಗುತ್ತದೆ. ಮೇಲೆ ಹೇಳಿದ ಆರು ಬಗೆಯ ಆಸ್ತಿಗಳಲ್ಲಿ ಮೊದಲನೆಯ ನಾಲ್ಕು ಬಗೆಯ ಆಸ್ತಿಗಳು ಒಂದು ಗುಂಪಿಗೆ ಸೇರುತ್ತವೆ. ಕೊನೆಯ ಎರಡು ಇನ್ನೊಂದು ಗುಂಪಿಗೆ ಸೇರುತ್ತವೆ. ಮೊದಲನೆಯ ಗುಂಪಿನ ಆಸ್ತಿಗಳು ಅಸ್ತಿತ್ವದಲ್ಲಿರುವ ಸ್ಥಾವರ, ಜಂಗಮ, ಮೂರ್ತ ಅಮೂರ್ತ ಆಸ್ತಿಗಳು. ಎರಡನೆಯ ಗುಂಪಿನ ಆಸ್ತಿಗಳು ವೈಯಕ್ತಿಕ ಆಸ್ತಿಗಳು. ಮೊದಲನೆಯ ಗುಂಪಿಗೆ ಸೇರಿದ ಆಸ್ತಿಯನ್ನು ಇಂಗ್ಲಿಷ್ ಶಾಸನದಲ್ಲಿ ಪ್ರಾಪರ್ಟಿ ಇನ್ ರೆಮ್ ಎಂದೂ ಮತ್ತು ಎರಡನೆಯ ಗುಂಪಿಗೆ ಸೇರಿದ ಆಸ್ತಿಯನ್ನು ಪ್ರಾಪರ್ಟಿ ಇನ್ ಪರ್ಸೋನಮ್ ಎಂದೂ ಕರೆಯುತ್ತಾರೆ. ಪ್ರಾಪರ್ಟಿ ಇನ್ ಪರ್ಸೋನಮ್ ಎಂದರೆ, ಪ್ರತಿವಾದಿ ವಾದಿಗೆ ವೈಯಕ್ತಿಕವಾಗಿ ತೀರಿಸಬೇಕಾದ ಋಣ; ಅಥವಾ ಯಾವುದಾದರೊಂದು ಒಪ್ಪಂದದಿಂದ ಉದ್ಭವಿಸುವ ಕರ್ತವ್ಯದ ಋಣ. ನ್ಯಾಯಾಲಯ ಈ ಬಗೆಯ ಹಕ್ಕನ್ನು ಅಂಗೀಕರಿಸಿ ಪರಿಹಾರ ಕೊಡುವಾಗ ಇಂಥ ವ್ಯಕ್ತಿ ಇಂಥ ಇನ್ನೊಬ್ಬ ವ್ಯಕ್ತಿಗೆ ಈ ರೂಪದಲ್ಲಿ ಋಣ ತೀರಿಸತಕ್ಕದ್ದೆಂದು ಡಿಕ್ರಿ ಕೊಡುತ್ತದೆ. ಇದಕ್ಕೆ ವಿರುದ್ಧವಾದದ್ದು ‘ಪ್ರಾಪರ್ಟಿ ಇನ್ ರೆಮ್’. ಇದಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ನ್ಯಾಯಾಲಯ ಕೊಡುವ ಪರಿಹಾರ ಮತ್ತೊಬ್ಬ ವ್ಯಕ್ತಿ ಮಾಡಬೇಕಾದ, ಇಲ್ಲವೆ ಮಾಡಬಾರದ ಕರ್ತವ್ಯರೂಪದಲ್ಲಿರುವುದಿಲ್ಲ. ಅಸ್ತಿತ್ವದಲ್ಲಿರುವ ಒಂದು ವಸ್ತುವಿನಲ್ಲಿ ಒಬ್ಬಾತನಿಗಿರುವ ಹಕ್ಕನ್ನು ಮನ್ನಿಸಿ, ಆ ಆಸ್ತಿಯ ಬಗ್ಗೆ ಇಡೀ ಲೋಕವೇ ನಡೆದುಕೊಳ್ಳಬೇಕಾದ ರೀತಿಯನ್ನು ನಿರ್ದೇಶಿಸುತ್ತದೆ. ಈ ಎರಡು ಬಗೆಯ ಹಕ್ಕುಗಳನ್ನು ಉದಾಹರಣೆಯಿಂದ ಸ್ಪಷ್ಟಪಡಿಸಬಹುದು. ‘ಅ’ ಎಂಬಾತ ‘ಇ’ ಎಂಬಾತನಿಗೆ ಸಾವಿರ ರೂಪಾಯಿ ಸಾಲ ಕೊಡುವುದಿದ್ದರೆ, ಅಥವಾ ಹತ್ತು ಕ್ವಿಂಟಲ್ ಬತ್ತ ಮಾರಲು ಒಪ್ಪಿಕೊಂಡಿದ್ದರೆ ‘ಇ’ಗೆ ಇರುವ ಆಸ್ತಿ ಎಂದರೆ ‘ಅ’ ನಿಂದ ಆ ಹಣ ಮತ್ತು ಒಪ್ಪಿಕೊಂಡ ವಸ್ತುವನ್ನು ಇಲ್ಲವೆ ಅದಕ್ಕೆ ಸಮನಾದ ಹಣದ ರೂಪದ ಬೆಲೆಯನ್ನು ವೈಯಕ್ತಿಕವಾಗಿ ವಸೂಲು ಮಾಡಿಕೊಳ್ಳುವುದು. ಈ ವ್ಯವಹಾರ ‘ಅ’ ಮತ್ತು ‘ಇ’ ಇಬ್ಬರಿಗೆ ಮಾತ್ರ ಸಂಬಂಧಿಸಿದ್ದು. ತದ್ವಿರುದ್ಧವಾಗಿ ‘ಇ’ ಎಂಬಾತನಿಗೆ ‘ಈ’ ಎಂಬ ಆಸ್ತಿಯಲ್ಲಿ ಹಕ್ಕು ಇದ್ದರೆ, ನ್ಯಾಯಾಲಯ ಅದನ್ನು ಎತ್ತಿ ಹಿಡಿದರೆ, ಇಡೀ ಲೋಕದ ಜನರೆಲ್ಲ ಆ ಹಕ್ಕನ್ನು ಮಾನ್ಯ ಮಾಡಲೇಬೇಕು.

ನಾವು ಈಗ ಚರ್ಚಿಸಬೇಕಾದ್ದು ಮೇಲೆ ಹೇಳಿದ ಮೊದಲನೆಯ ಗುಂಪಿಗೆ ಸೇರಿದ ನಾಲ್ಕು ಆಸ್ತಿಗಳ ವಿಚಾರವಾಗಿ. ಎರಡನೆಯ ಗುಂಪಿಗೆ ಸೇರಿದ ಎರಡು ತರದ ಆಸ್ತಿಗಳನ್ನು ಇಲ್ಲಿ ಚರ್ಚಿಸುವುದಿಲ್ಲ.

ಆಸ್ತಿಗಳನ್ನು ಮೂರ್ತ ಮತ್ತು ಅಮೂರ್ತ, ಸ್ಥಿರ ಮತ್ತು ಚರ, ವಾಸ್ತವ ಮತ್ತು ವೈಯಕ್ತಿಕ-ಎಂದು ವಿಭಜಿಸುವುದುಂಟು.

ಮೂರ್ತ, ಅಮೂರ್ತ (ಕಾರ್ಪೋರಿಯಲ್, ಇನ್ಕಾರ್ಪೋರಿಯಲ್) ಆಸ್ತಿಗಳು: ಹಕ್ಕುಳ್ಳ ಆಸ್ತಿ ಮೂರ್ತವಾಗಿ (ಭೌತ) ಇರಬಹುದು; ಅಮೂರ್ತವಾಗಿರಬಹುದು. ಆಸ್ತಿಯ ಹಕ್ಕು ಬಹುಮಟ್ಟಿಗೆ ಮೂರ್ತವಾದ ಭೌತಿಕ ವಸ್ತುಗಳಿಗೆ ಸಂಬಂಧಿಸಿದೆ. ಭೌತ ವಸ್ತುಗಳ ಆಸ್ತಿ ಅವುಗಳನ್ನು ಉಪಯೋಗಿಸುವ ಹಕ್ಕಿಗೆ ನೇರವಾಗಿ ಸಂಬಂಧಪಟ್ಟುದು. ನ್ಯಾಯಶಾಸ್ತ್ರದ ಈ ಶಾಖೆಯ ಮುಖ್ಯ ಉದ್ದೇಶ, ಮಾನವನ ಸುಖಜೀವನಕ್ಕೆ ಬೇಕಾದ ಪ್ರಾಪಂಚಿಕ ವಸ್ತುಗಳನ್ನು, ಅವರವರಿಗೆ ಸಲ್ಲಬೇಕಾದಷ್ಟನ್ನು ನಿಗದಿ ಮಾಡಿ ಹಂಚುವುದೇ ಆಗಿದೆ. ಅಮೂರ್ತ ಆಸ್ತಿ ಎಂಬುದು ಮಾನವನ ಜಾಣತನ ಮತ್ತು ಕುಶಲಕರ್ಮದಿಂದ ನಿರ್ಮಿತವಾದುದಕ್ಕೆ ಪರಿಮಿತವಾಗಿದೆ. ಶಾಸನ ಇಂಥ ಅಮೂರ್ತ ಆಸ್ತಿಯನ್ನು ಮಾನ್ಯಮಾಡುತ್ತದೆ. ಸರ್ವಸಾಧಾರಣವಾಗಿ ಯಾರು ಏನನ್ನು ಸ್ವಬುದ್ಧಿಯಿಂದ ಸ್ವಶಕ್ತಿಯಿಂದ ಕಾಯಕಷ್ಟದಿಂದ ಉತ್ಪಾದಿಸುತ್ತಾರೋ ರಚನೆಮಾಡುತ್ತಾರೋ ಅದು ಆ ಕರ್ತೃವಿಗೇ ಸೇರುತ್ತದೆ. ಮನುಷ್ಯನ ಮೇಧಾಶಕ್ತಿಯಿಂದ ನಿರ್ಮಿತವಾದ ಅಮೂರ್ತವಸ್ತು ಅವನ ಭೂಮಿಕಾಣಿಯಷ್ಟೇ ಬೆಲೆಯುಳ್ಳದ್ದಾಗಿರಲು ಸಾಧ್ಯ. ಆದ್ದರಿಂದ ಶಾಸನ ಅಂಥ ಆಸ್ತಿಗಳ ಬಗ್ಗೆ ಅವುಗಳನ್ನು ನಿರ್ಮಿಸಿದಾತನಿಗೆ ಸಂಪುರ್ಣ ಒಡೆತನ, ಹಕ್ಕು, ಅಧಿಕಾರ ನೀಡುತ್ತದೆ. ಒಂದು ವಸ್ತುವನ್ನು ಕದಿಯುವುದನ್ನು, ಇನ್ನೊಬ್ಬರ ಭೂಮಿಯಲ್ಲಿ ಅಕ್ರಮಪ್ರವೇಶ ಮಾಡುವುದನ್ನು ಶಾಸನ ನಿಷೇಧಿಸಿ, ಆಯಾ ವಸ್ತುಗಳ ಒಡೆಯನ ಹಕ್ಕನ್ನು ಹೇಗೆ ರಕ್ಷಿಸುವುದೋ ಹಾಗೆಯೇ ಒಬ್ಬ ವ್ಯಕ್ತಿ ನಿರ್ಮಿಸಿದ ಕುಶಲಕರ್ಮದ ಹಕ್ಕನ್ನೂ ರಕ್ಷಿಸುತ್ತದೆ. ಈ ಗುಂಪಿಗೆ ಗ್ರಂಥಕರ್ತನ ಗ್ರಂಥಸ್ವಾಮ್ಯ, ಕಲಾಕೃತಿಗಳ ಸ್ವಾಮ್ಯ, ಸಂಗೀತ ಮತ್ತು ನಾಟಕದ ಒಡೆತನ, ವಾಣಿಜ್ಯ ಸುನಾಮ, ವ್ಯಾಪಾರ ಚಿಹ್ನೆ (ಟ್ರೇಡ್ ಮಾರ್ಕ್) ಮತ್ತು ಏಕಸ್ವ (ಪೇಟೆಂಟ್)- ಇವು ಸೇರುತ್ತವೆ.

ಸ್ಥಿರ ಚರ ಆಸ್ತಿಗಳು

[ಬದಲಾಯಿಸಿ]

[]ಸ್ಥಿರಾಸ್ತಿ ಭೂಮಿ, ಮನೆ ಇತ್ಯಾದಿ. ಇದಕ್ಕೆ ವಿರುದ್ಧವಾದದ್ದು ಚರ ಅಥವಾ ಜಂಗಮ ಆಸ್ತಿ. ಚರ ಎಂದರೆ ಚಲಿಸುವುದು; ಅಶಾಶ್ವತವಾದದ್ದು ಎಂದಾಗುತ್ತದೆ. ಒಂದು ಮೂರ್ತವಸ್ತು (ಭೌತ ವಸ್ತು) ತಾನಾಗಿಯೇ ಚಲಿಸಬಹುದು-ಪಶು ಪಕ್ಷಿ ಪ್ರಾಣಿಗಳು ಅಥವಾ ಮಾನವ ಸಹಾಯದಿಂದ ಚಲಿಸುವಂಥದ್ದಾಗಿರಬಹುದು. ನಾವು ಉಪಯೋಗಿಸುವ ನಿರ್ಜೀವ ವಸ್ತುಗಳೆಲ್ಲ ಈ ಗುಂಪಿನವು. ಸ್ಥಾವರ ಅಥವಾ ಸ್ಥಿರಾಸ್ತಿಗೆ ಅದರ ಹೆಸರೇ ಸೂಚಿಸುವಂತೆ ಒಂದು ಬಗೆಯ ಶಾಶ್ವತತೆ ಇರುತ್ತದೆ. ಭೂಮಿ ಈ ದೃಷ್ಟಿಯಿಂದ ಸ್ಥಿರ. ಭೂಕಂಪ ಮುಂತಾದ ನಿಸರ್ಗ ಅನರ್ಥಗಳು ಸಂಭವಿಸಿದಾಗ ಭೂಮಿಯೂ ಅಶಾಶ್ವತವೇ. ಆದರೆ ಇತರ ಯಾವ ಭೌತ ವಸ್ತುವಿಗಿಂತಲೂ ಭೂಮಿ ಹೆಚ್ಚು ಶಾಶ್ವತ. ನ್ಯಾಯಶಾಸ್ತ್ರದ ದೃಷ್ಟಿಯಲ್ಲಿ ಸ್ಥಿರಾಸ್ತಿ ಈ ಗುಣಗಳಿಂದ ಕೂಡಿರುತ್ತದೆ:

  1. ನಿರ್ದಿಷ್ಟವಾದ ಭೂಭಾಗ.
  2. ಆ ಭೂಭಾಗದ ಕೆಳಗಡೆ ಭೂಗರ್ಭದಲ್ಲಿ ಅಡಗಿರುವ ಭೂಮಿ.
  3. ಭೂಮಿಯ ಮೇಲ್ಭಾಗದ ಆಕಾಶ.
  4. ಭೂಗರ್ಭದಲ್ಲಿ ನೈಸರ್ಗಿಕವಾಗಿರುವ ಜಲ, ತರು, ನಿಧಿ, ನಿಕ್ಷೇಪ, ಪಾಷಾಣಾದಿ ಸಂಪತ್ತು ಮತ್ತು ಭೂಮಿಯ ಮೇಲೆ ಬಿದ್ದಿರುವ ಕಲ್ಲು ಇತ್ಯಾದಿ.
  5. ಕೊನೆಯದಾಗಿ, ಭೂಮಿಯನ್ನು ಭದ್ರವಾಗಿ ಹೂತುಕೊಂಡಿರುವ ಅಥವಾ ಉದ್ದೇಶಪಟ್ಟು ಭೂಮಿಗೆ ಶಾಶ್ವತವಾಗಿ ಕೂಡಿಸಿರುವ ಇತರ ಎಲ್ಲ ವಸ್ತುಗಳೂ ಸ್ಥಿರಾಸ್ತಿ ಎನಿಸಿಕೊಳ್ಳುತ್ತವೆ.

ಈ ಗುಂಪಿಗೆ, ಭೂಮಿಯ ಮೇಲೆ ಕಟ್ಟಿದ ಮನೆ, ನೆಟ್ಟ ಮರ, ತೋಡಿದ ಬಾವಿ, ಹೊಸ ಯಂತ್ರೋಪಕರಣಗಳು ಸೇರುತ್ತವೆ. ಮರ ಕಡಿದಾಗ ಚರಾಸ್ತಿಯಾಗುತ್ತದೆ. ಯಂತ್ರೋಪಕರಣ ಭೂಮಿಯಿಂದ ಕಿತ್ತು ಮೇಲೆತ್ತಿದಾಗ ಚರಾಸ್ತಿಯಾಗುತ್ತದೆ. ಆದರೆ, ಮನೆಯ ಗೋಡೆಗೆ ತೂಗುಹಾಕಿದ ಅಲಂಕಾರದ ವಸ್ತುಗಳು, ನೆಲಕ್ಕೆ ಹಾಸಿದ ಜಮಖಾನ ಸ್ಥಿರಾಸ್ತಿಯಲ್ಲ.

ವಾಸ್ತವ ಮತ್ತು ವೈಯಕ್ತಿಕ ಆಸ್ತಿಗಳು

[ಬದಲಾಯಿಸಿ]

ವಾಸ್ತವ ಆಸ್ತಿ ಭೂಮಿಯ ಮೇಲೆ ನಮಗಿರುವ ಎಲ್ಲ ಹಕ್ಕುಗಳಿಗೂ ಸಂಬಂಧಿಸಿದುದು. ಅದು ಮೇಲೆ ಹೇಳಿದ ಭೂ ಆಸ್ತಿಗಳನ್ನೆಲ್ಲ ಒಳಗೊಂಡಿದೆ. ಆದರೆ ವೈಯಕ್ತಿಕ ಆಸ್ತಿ ಇಷ್ಟಕ್ಕೆ ಪರಿಮಿತವಾಗಿಲ್ಲ. ಮೇಲೆ ವಿವರಿಸಿದ ಮೂರ್ತ, ಚರ ಮತ್ತು ಅಮೂರ್ತ ಸ್ವತಂತ್ರ ಕೃತಿ ರಚನೆ ಹಾಗೂ ಕುಶಲಕರ್ಮಗಳನ್ನೆಲ್ಲ ಒಳಗೊಳ್ಳುತ್ತದೆ.

ಸ್ವತ್ತಿನ ವಿಕಾಸ

[ಬದಲಾಯಿಸಿ]
  1. ಸ್ವತ್ತಿನ ಉಗಮ ಹೇಗಾಯಿತು? ಸ್ವಂತದ್ದು ಯಾವುದೋ ಅದು ಸ್ವತ್ತು ಎನಿಸಿಕೊಂಡಿತು ಎಂದು ಈ ಹಿಂದೆ ಹೇಳಿದೆ. ಹಾಗಾದರೆ ಒಂದು ವಸ್ತು ಸ್ವಂತದ್ದು ಹೇಗಾಯಿತು? ಜನಾಂಗ ಅತೀ ಬಾಲ್ಯಾವಸ್ಥೆಯಲ್ಲಿದ್ದಾಗ ಆಸ್ತಿ ಅಪರಿಮಿತವಾಗಿ ದೊರೆಯುತ್ತಿತ್ತು. ಆಗ ಯಾವುದು ಏನು ಬೇಕಾದರೂ ಹೇರಳವಾಗಿ ಸಿಗುತ್ತಿತ್ತು. ಎಷ್ಟು ಆಸ್ತಿಯನ್ನು ಹಿಡಿದುಕೊಂಡರೆ ಅಷ್ಟೂ ಅವನದೇ ಆಗುತ್ತಿತ್ತು. ಸ್ವಾಧೀನವೇ ಸ್ವತ್ತಿಗೆ ಮೂಲ-ಎಂಬ ಒಂದು ಸಿದ್ಧಾಂತ ನ್ಯಾಯಶಾಸ್ತ್ರದಲ್ಲಿ ಪ್ರಚಲಿತವಿದೆ. ಈ ಸಿದ್ಧಾಂತದ ಪ್ರಕಾರ ಸ್ವಾಧೀನವೇ ಸ್ವತ್ತಿನ ಮೇಲೆ ಸ್ವಾಮ್ಯವನ್ನು ಕೊಡುತ್ತದೆ. ಆಕ್ರಮಣವೇ ಆಸ್ತಿಯ ಮೂಲ, ಸ್ವಾಧೀನವೇ ಸ್ವಾಮ್ಯಕ್ಕೆ ಕಾರಣ, ಎಂಬ ಈ ಸಿದ್ಧಾಂತ ಆಧುನಿಕ ಕಾಲದಲ್ಲಿ ಅಷ್ಟೇ ಮಾನ್ಯತೆ ಪಡೆದಿಲ್ಲ. ಏಕೆಂದರೆ, ಅದೃಷ್ಟಶಾಲಿಯಾದ ಯಾವನೋ ಒಬ್ಬ ಒಂದು ಸಾವಿರ ಎಕರೆ ಭೂಮಿಯನ್ನು ಹಿಡಿದುಕೊಳ್ಳಲು ಸಮರ್ಥನಾದರೆ ಆವನಿಗೆ ಆ ಭೂಮಿಯ ಸ್ವಾಮ್ಯ, ಒಡೆತನ-ಏಕೆ ದೊರೆಯಬೇಕು? ಅಮೆರಿಕದ ಪ್ರಪ್ರಥಮ ಸಮಾಜವಾದಿ ಹೆನ್ರಿ ಜಾರ್ಜ್ ಎಂಬಾತ ತನ್ನ ಪ್ರೋಗ್ರೆಸ್ ಅಂಡ್ ಪಾವರ್ಟಿ ಎಂಬ ಗ್ರಂಥದಲ್ಲಿ ಸ್ವಾಧೀನವೇ ಸ್ವಾಮ್ಯಕ್ಕೆ ಮೂಲ, ಆಕ್ರಮಣವೇ ಆಸ್ತಿಗೆ ಕಾರಣ, ಎಂಬ ಸಿದ್ಧಾಂತವನ್ನು ಬಹು ಕಟುವಾಗಿ ಟೀಕಿಸುತ್ತಾನೆ. ಒಬ್ಬ ಮನುಷ್ಯ ಎಲ್ಲರಿಗಿಂತ ಮೊದಲೇ ಒಂದು ಚಿತ್ರಮಂದಿರ ಅಥವಾ ರಂಗಮಂಟಪಕ್ಕೆ ಬಂದು ಎಲ್ಲ ಪ್ರವೇಶಪತ್ರಗಳನ್ನೂ ಕೊಂಡು, ಇತರರು ಬರಬಾರದು ಎಂದು ಬಾಗಿಲು ಮುಚ್ಚುವುದು ನ್ಯಾಯವೇ?-ಎಂದು ಕೇಳುತ್ತಾನೆ. ಒಬ್ಬ ಶ್ರೀಮಂತ ರೈಲುಗಾಡಿಯ ಎಲ್ಲ ಟಿಕೇಟುಗಳನ್ನೂ ಕೊಂಡು, ತನ್ನೊಬ್ಬನಿಗೇ ಎಲ್ಲ ಸ್ಥಳಗಳೂ ಮೀಸಲಾಗಿರಬೇಕು ಎಂದು ವಾದಿಸುವುದು ನೈತಿಕ ದೃಷ್ಟಿಯಿಂದ ನ್ಯಾಯ ಎನಿಸುವುದಿಲ್ಲ ಎಂದು ಆ ಸಮಾಜವಾದಿ ಗ್ರಂಥಕರ್ತ ಪ್ರತಿಪಾದಿಸುತ್ತಾನೆ. ಅವನ ಈ ವಾದದಲ್ಲಿ ಸತ್ಯವಿದೆಯೆಂದು ಈಗ ಲೋಕ ಬಹುಮಟ್ಟಿಗೆ ಒಪ್ಪಿಕೊಂಡಿದೆ.
  2. ಸ್ವತ್ತು ವ್ಯಕ್ತಿಯ ದುಡಿಮೆಯ ಫಲ, ಎಂಬುದು ಇನ್ನೊಂದು ಸಿದ್ಧಾಂತ. ಒಬ್ಬ ಶ್ರಮಜೀವಿ, ಬುದ್ಧಿಜೀವಿ ಕಷ್ಟಪಟ್ಟು ಸೃಷ್ಟಿಸಿದ ವಸ್ತು ಅಥವಾ ರಚಿಸಿದ ಕೃತಿ ಅವನದೇ ಆಗುತ್ತದೆ. ಅದು ಅವನ ಸ್ವಂತ ಆಸ್ತಿ; ಅವನಿಗೆ ಅದು ಸೇರುತ್ತದೆ, ಸೇರಬೇಕು ಎಂಬುದು ಈ ಸಿದ್ಧಾಂತದ ತಿರುಳು. ಇದು ಸ್ವಲ್ಪಮಟ್ಟಿಗೆ ಸತ್ಯ. ಆದರೆ ಇದು ಬಹುಮಟ್ಟಿಗೆ ಅಸಮರ್ಪಕ ತತ್ತ್ವ. ಗ್ರಂಥಕರ್ತ ರಚಿಸುವ ಸ್ವತಂತ್ರ ಗ್ರಂಥ ಅಥವಾ ಚಿತ್ರಕಾರ ಬರೆಯುವ ಸುಂದರ ಸ್ವತಂತ್ರ ಕೃತಿ, ಅದನ್ನು ರಚಿಸಿದವನಿಗೆ ಸೇರಬೇಕೆಂಬುದು ಸರಿಯಾದ ಮಾತು. ಆದರೆ, ಇತರ ಸ್ವತ್ತಿನ ವಿಚಾರದಲ್ಲಿ ಈ ಸಿದ್ಧಾಂತ ಪುರ್ಣ ಸತ್ಯವಾಗಲಾರದು. ಇಂದಿನ ಬಹು ಜಟಿಲ ಸಮಾಜದಲ್ಲಿ ಜೀವನಕ್ಕೆ ಬೇಕಾದುದನ್ನೆಲ್ಲ ಅವರವರೇ ಉತ್ಪಾದಿಸುವರೆಂಬುದು, ದುಡಿದು ತಯಾರಿಸುವ ರೆಂಬುದು ನಿಜವಲ್ಲ. ಯಾವುದಾದರೂ ಸ್ವತ್ತು ನಿರ್ಮಾಣವಾಗಬೇಕಾದರೆ, ಅದಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿ ಎಲ್ಲಿಂದ ಬರುತ್ತದೆ? ಕಾಡಿನಲ್ಲಿ ಹೇರಳವಾಗಿ, ತನಗೆ ತಾನೇ ಬೆಳೆದು ಯಾರಿಗೂ ಸೇರದ ಕಚ್ಚಾ ಸಾಮಗ್ರಿಯಿಂದ ತಯಾರಿಸಿದ ವಸ್ತು ತಯಾರಿಸಿದವನಿಗೇ ಸೇರುತ್ತದೆ ಎಂದರೆ ಒಪ್ಪಬಹುದು. ಆದರೆ, ಬಟ್ಟೆಯನ್ನು ತಯಾರಿಸುವ ನೇಕಾರನಿಗೇ ಬಟ್ಟೆ ಸೇರುತ್ತದೆ ಎಂದರೆ ಒಪ್ಪುವ ಮಾತಲ್ಲ. ಹತ್ತಿ ಬೆಳೆದವನಿಗೆ ಬಟ್ಟೆಯಲ್ಲಿ ಪಾಲಿಲ್ಲವೇ? ಸಿಂಪಿಗ ಅಂಗಿ ಹೊಲೆಯುತ್ತಾನೆ. ಅಂದಮಾತ್ರಕ್ಕೆ ಆ ಅಂಗಿ ಸಿಂಪಿಗನಿಗೆ ಸೇರಬೇಕು ಎಂದರೆ ಯಾರೂ ಒಪ್ಪುವುದಿಲ್ಲ. ದುಡಿದವನಿಗೆ ಸ್ವತ್ತು ಸೇರಬೇಕು ಎಂಬ ಮಾತಿನಲ್ಲಿ ಕೆಲಮಟ್ಟಿಗೆ ಸತ್ಯಾಂಶವಿದೆ. ಉತ್ಪತ್ತಿಮಾಡಿದ ಆಸ್ತಿಯಲ್ಲಿ ಒಡೆತನವಿಲ್ಲದಿದ್ದರೆ ದುಡಿಯುವ ಶ್ರದ್ಧೆ ಹೇಗೆ ಉಳಿದೀತು? ಸಂಪದಭಿವೃದ್ಧಿ ಹೇಗೆ ಆಗಬೇಕು? ಈ ಕಾರಣದಿಂದ ವೈಯಕ್ತಿಕ ಆಸ್ತಿಗೆ ಮಾನ್ಯತೆ ಕೊಡಬೇಕೆಂಬ ವಾದವುಂಟು. ಹಾಗೆಯೇ ಸಮಾಜವಾದಿಗಳೂ ಶ್ರಮಜೀವಿಗೆ ಸ್ವತ್ತು ಸೇರಬೇಕು ಎಂದು ವಾದಿಸುತ್ತಾರೆ. ಏಕೆಂದರೆ ಭೂಮಿ, ಗಿರಣಿ ಮುಂತಾದ ಉತ್ಪಾದಕ ಸಾಧನ ಮತ್ತು ಉಪಕರಣಗಳ ಸ್ವಾಮ್ಯವಿರುವ ಭೂಸ್ವಾಮಿಯೂ ಗಿರಣಿಯ ಮಾಲೀಕನೂ ಕೃಷಿಕರನ್ನು ಕಾರ್ಮಿಕರನ್ನು ಶೋಷಣೆ ಮಾಡುವುದನ್ನು ಇವರು ವಿರೋಧಿಸುತ್ತಾರೆ. ದುಡಿದು ಪಡೆಯದ ಯಾವ ಆಸ್ತಿಯ ಮೇಲೂ ಯಾರಿಗೂ ನೈತಿಕವಾಗಿ ಹಕ್ಕಿಲ್ಲ ಎಂದು ಎಚ್.ಜೆ.ಲಾಸ್ಕಿ ಬರೆಯುತ್ತಾನೆ. ಇದು ನೀತಿಶಾಸ್ತ್ರಕ್ಕೂ ಸಮ್ಮತ; ಅರ್ಥಶಾಸ್ತ್ರಕ್ಕೂ ಸಮ್ಮತ.
  3. ಹೆಗೆಲ್ ಎಂಬ ತತ್ತ್ವಜ್ಞಾನಿ ಒಂದು ಸಿದ್ಧಾಂತ ಮಂಡಿಸಿದ್ದಾನೆ. ವ್ಯಕ್ತಿಯ ಸರ್ವತೋಮುಖ ವಿಕಾಸಕ್ಕೆ, ಸ್ವತಂತ್ರ ಜೀವನಕ್ಕೆ, ಆಸ್ತಿ ಅತ್ಯಂತ ಅಗತ್ಯ. ಸ್ವಾತಂತ್ರ್ಯಪ್ರಿಯನಾದ ಮಾನವ ತನ್ನ ವ್ಯಕ್ತಿತ್ವದ ವಿಕಾಸಕ್ಕೆ ಆಸ್ತಿಯನ್ನು ಪಡೆದ ಮತ್ತು ಅದನ್ನು ಊರ್ಜಿತ ಮಾಡಿದ ಎಂದು ಅವನು ವಾದಿಸುತ್ತಾನೆ. ಯಾರು ಆರ್ಥಿಕವಾಗಿ ಅಸ್ವತಂತ್ರರೋ ಅವರು ನಿಜವಾದ ಸ್ವಾತಂತ್ರ್ಯ ಅನುಭವಿಸಲಾರರು. ಅವರು ಪರಿಪುರ್ಣ ಸಾರ್ಥಕ ಜೀವನ ನಡೆಸಲಾರರು. ಆದಕಾರಣ ಆಸ್ತಿ ವ್ಯಕ್ತಿಯ ಸ್ವಾತಂತ್ರ್ಯಾಪೇಕ್ಷೆಯ ಪರಿಣಾಮ ಎಂಬುದು ವಾದ. ವೈಯಕ್ತಿಕ ಆಸ್ತಿಗೆ ಪ್ರತಿಯೊಬ್ಬ ವ್ಯಕ್ತಿಗೂ ಹಕ್ಕು ಇರಬೇಕೆಂಬುದು ಈ ಸಿದ್ಧಾಂತದ ತಿರುಳು. ಆದರೆ ವೈಯಕ್ತಿಕ ಆಸ್ತಿಗೆ ಅನಿರ್ಬಂಧ ಹಕ್ಕಿರಬೇಕೆಂಬ ವಾದದಿಂದ ಕೆಲವೇ ಜನರ ಕೈಯಲ್ಲಿ ಸಮಾಜದ ಆಸ್ತಿಯೆಲ್ಲ ಕೇಂದ್ರೀಕೃತವಾಗಿ ಬಹುಜನರು ದಟ್ಟ ದಾರಿದ್ರ್ಯದಲ್ಲಿ ನರಳುವ ದುಃಸ್ಥಿತಿಯುಂಟಾಗಿದೆ. ಆದಕಾರಣ ಆಸ್ತಿಯ ಉಗಮದ ಈ ಸಿದ್ಧಾಂತ ಅಷ್ಟೇನೂ ನ್ಯಾಯಸಮ್ಮತವಾಗಿಲ್ಲ.
  4. ಆಕ್ರಮಣವೇ ಆಸ್ತಿಯ ಉಗಮ, ಸ್ವಾಧೀನವೇ ಸ್ವತ್ತಿನ ಮೂಲ, ಉತ್ಪಾದನೆಯೇ ಆಸ್ತಿಗೆ ಒಡೆತನವನ್ನು ಕೊಡುತ್ತದೆ-ಎಂಬ ಈ ಎಲ್ಲ ಸಿದ್ಧಾಂತಗಳಲ್ಲೂ ಅಲ್ಪಸ್ವಲ್ಪ ಸತ್ಯವಿದೆ. ಯಾವುದೂ ಪುರ್ಣ ಸತ್ಯವನ್ನು ಮೂಡಿಸುವುದಿಲ್ಲ. ಆಕ್ರಮಣ ಅಥವಾ ಸ್ವಾಧೀನವೇ ಆಸ್ತಿಗೆ ಮೂಲಕಾರಣವೆಂಬುದು ನಿಜವಾಗಿದ್ದರೆ, ಯಾರು ಒಂದು ಆಸ್ತಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಸಮರ್ಥರೋ ಅದು ಅವರದೇ ಆಗುತ್ತಿತ್ತು. ಆದರೆ ಕೇವಲ ಸ್ವಾಧೀನವೇ ಆಸ್ತಿಗೆ ಹಕ್ಕುದಾರಿಕೆಯನ್ನು ಕೊಡಲಾರದು. ಒಬ್ಬನ ಆಸ್ತಿಯನ್ನು ಮತ್ತೊಬ್ಬ ಅಪಹರಿಸಿದರೆ, ಆಕ್ರಮಣ ಮಾಡಿದರೆ, ಶಾಸನ ಅದನ್ನು ತಡೆಗಟ್ಟುತ್ತದೆ. ಆಸ್ತಿಯ ಒಡೆತನವನ್ನು ಶಾಸನ ರಕ್ಷಿಸುತ್ತದೆ. ಒಬ್ಬ ನೂರು ವರ್ಷ ಒಂದು ಆಸ್ತಿಯನ್ನು ಸ್ವಾಧೀನದಲ್ಲಿಟ್ಟುಕೊಂಡಿದ್ದರೂ ಅವನಿಗಿಂತ ಬಲಿಷ್ಠನಾದವ ಅದನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು, ಸ್ವಾಮ್ಯವನ್ನು ಸ್ಥಾಪಿಸಲು ಸಮರ್ಥನಾದರೆ, ಸ್ವಾಧೀನಕ್ಕೆ ಪ್ರಾಧಾನ್ಯ ಏನಿದೆ? ಪಾವಿತ್ರ್ಯವೇನಿದೆ? ಆ ಸ್ವಾಧೀನತೆಯನ್ನು ಮಾನ್ಯಮಾಡಿ, ಶಾಸನದ ಬೆಂಬಲದಿಂದ ಅದನ್ನು ಸ್ಥಿರಪಡಿಸಿದರೆ ಮಾತ್ರ ಆಸ್ತಿಯಲ್ಲಿ ಹಕ್ಕು ಸ್ಥಿರವಾಗುತ್ತದೆ. ಈ ದೃಷ್ಟಿಯಿಂದ ಆಸ್ತಿಯ ಮೂಲ, ರಾಜ್ಯಶಾಸನ ಎಂಬ ಒಂದು ಸಿದ್ಧಾಂತದಿಂದ ಏರ್ಪಟ್ಟಿದೆ. ರಾಜ್ಯಶಾಸನ ಆಸ್ತಿಯನ್ನು ರಕ್ಷಿಸುವುದರಿಂದಲೇ ಖಾಸಗಿ ಆಸ್ತಿ ಪದ್ಧತಿ ಇಂದು ಆಸ್ತಿತ್ವದಲ್ಲಿದೆ. ಆದರೆ ಈ ಸಿದ್ಧಾಂತವೂ ಆಸ್ತಿಯ ಉಗಮವನ್ನು ಖಚಿತವಾಗಿ ಸಕಾರಣವಾಗಿ ವಿವರಿಸುವುದಿಲ್ಲ.

ಆಸ್ತಿಯ ಸ್ವಾಮ್ಯ

[ಬದಲಾಯಿಸಿ]

ಅಸ್ತಿತ್ವದಲ್ಲಿರುವುದೆಲ್ಲ ಆಸ್ತಿ ಎನ್ನುವುದಾದರೆ, ಈ ವಿಶ್ವದಲ್ಲಿರುವುದೆಲ್ಲ ಆಸ್ತಿಯೇ ಎನ್ನಬೇಕಾಗುತ್ತದೆ. ಆದರೆ, ಆಸ್ತಿ ಎಂದೊಡನೆ ಯಾರ ಆಸ್ತಿ ಎಂಬ ಪ್ರಶ್ನೆ ಏಳುತ್ತದೆ. ಅಸ್ತಿತ್ವದಲ್ಲಿರುವ ವಸ್ತು ಆಸ್ತಿಯ ಸ್ಥಾನ ಪಡೆಯಬೇಕಾದರೆ, ಅದಕ್ಕೊಬ್ಬ ಒಡೆಯನಿರಬೇಕು. ಏಕೆಂದರೆ, ಯಾರಿಗೂ ಸೇರದ ವಸ್ತು ಆಸ್ತಿಯಾಗಲಾರದು. ಸರ್ಕಾರಿ ಅಡವಿಯಲ್ಲಿ ಬೆಳೆದ ಮರಗಳು, ಹಣ್ಣು ಹಂಪಲುಗಳು, ಭೂಗರ್ಭದಲ್ಲಿರುವ ಖನಿಜ ಸಂಪತ್ತು, ನಿಧಿ ನಿಕ್ಷೇಪಗಳು ಕೂಡ ಸರ್ಕಾರದ ಆಸ್ತಿ. ಖಾಸಗಿ ಜನರ ಸ್ವಾಧೀನಾನುಭವ ದಲ್ಲಿರುವ ವಸ್ತುಗಳಂತೂ ನಿಸ್ಸಂಶಯವಾಗಿ ಆಸ್ತಿ. ಬೀದಿಯಲ್ಲಿ ಬಿದ್ದಿರುವ ಬೆಲೆಯುಳ್ಳ ಒಡವೆಗೂ ಒಬ್ಬ ಒಡೆಯನಿರಬೇಕು. ಒಡವೆಯ ಸ್ವಾಧೀನ ತಪ್ಪಿದ ಕೂಡಲೇ ಸ್ವಾಮ್ಯ ತಪ್ಪುವುದಿಲ್ಲ. ಹಾಗಿದ್ದಿದ್ದರೆ, ಕಳೆದ ಒಡವೆಯ ಒಡೆತನವೂ ಕಳೆದುಹೋಗುತ್ತಿತ್ತು; ಅದನ್ನು ಸ್ವಾಧೀನಕ್ಕೆ ತೆಗೆದುಕೊಂಡವನದೇ ಅದರ ಸ್ವಾಮ್ಯವಾಗುತ್ತಿತ್ತು. ಆದಕಾರಣ ಸ್ವತ್ತಿನ ಅವಿಭಾಜ್ಯ ಗುಣ ಸ್ವಾಮ್ಯ. ಒಡವೆ ಒಡೆತನ, ಸ್ವತ್ತು ಸ್ವಾಮ್ಯ. ಹಾಲು ಅದರ ಬಿಳುಪು ಇದ್ದಂತೆ. ಒಂದಕ್ಕೊಂದಕ್ಕೆ ಅವಿನಾಭಾವ ಸಂಬಂಧ. ‘ನೀವಿರುವ ಮನೆ ಸ್ವಂತದ್ದೋ, ಬಾಡಿಗೆಯದೋ?’ ಎಂದು ಕೇಳುವ ಪ್ರಶ್ನೆಯಲ್ಲಿ ಮನೆ ಅಸ್ತಿತ್ವದಲ್ಲಿದೆ ಎಂಬ ದೃಷ್ಟಿಯಿಂದ ಆಸ್ತಿಯಾದರೂ ಅದು ಬಾಡಿಗೆದಾರನ ‘ಸ್ವತ್ತು’ ಆಗಲಾರದು. ಏಕೆಂದರೆ, ಯಾವುದು ಸ್ವಂತ ಆಸ್ತಿಯೋ ಅದೇ ಸ್ವತ್ತು; ನಿಜವಾದ ಆಸ್ತಿ. ಸ್ವಂತದ್ದಲ್ಲದ ವಸ್ತು ಆಸ್ತಿಯಾದರೂ ಸ್ವತ್ತಲ್ಲ. ಇದರಿಂದ ತಿಳಿಯುವುದೇನೆಂದರೆ, ಸ್ವತ್ತಿನ ಅನಿವಾರ್ಯಲಕ್ಷಣ ಸ್ವಾಮ್ಯ, ಒಡೆತನ, ಒಡೆತನವಿಲ್ಲದ ಸ್ವತ್ತು ಇರಲಾರದು.

ಒಡೆತನದ, ಸ್ವಾಮ್ಯದ ಇಂಗಿತವೇನು? ಒಂದು ಸ್ವತ್ತು ತನ್ನದು, ಸ್ವಂತದ್ದು, ಸ್ವಾಮ್ಯವಿದೆ ಎಂದು ಯಾರಾದರೂ ಹೇಳಿಕೊಳ್ಳಬೇಕಾದರೆ ಈ ಕೆಲವು ಷರತ್ತುಗಳ ಪುರೈಕೆಯಾಗಬೇಕು:

  1. ಅವನು ಅದರ ಸ್ವಾಧೀನ ಪಡೆದಿರಬೇಕು;
  2. ಅದನ್ನು ತನಗಿಷ್ಟ ಬಂದಂತೆ ಅನುಭವಿಸುವ, ಹೇಗೆ ಬೇಕಾದರೆ ಹಾಗೆ ಉಪಯೋಗಿಸುವ, ಬೇಕಾದರೆ ಅದನ್ನು ನಾಶಪಡಿಸುವ, ಅಧಿಕಾರ ಅವನಿಗೆ ಇರಬೇಕು;
  3. ಬದುಕಿದ್ದಾಗ ತನ್ನಿಚ್ಛೆ ಬಂದಂತೆ ಅದನ್ನು ಪರಭಾರೆ ಮಾಡುವ ಅಧಿಕಾರ ಇರಬೇಕು;
  4. ಕೊನೆಯದಾಗಿ, ತಾನು ಸತ್ತಮೇಲೂ ತನ್ನ ಆಸ್ತಿ ಹೇಗೆ ವಿಲೇವಾರಿ ಆಗ ಬೇಕೆಂಬುದನ್ನು ನಿರ್ಧರಿಸುವ ಹಕ್ಕು ಅವನಿಗೆ ಇರಬೇಕು.

ಆಸ್ತಿಯ ಸ್ವಾಮ್ಯಕ್ಕೆ ಸ್ವಾಧೀನ ಅನಿವಾರ್ಯವಾದ ಅಂಶ. ಒಂದು ಸ್ವತ್ತು ಸ್ವಂತದ್ದು, ತನ್ನದು ಎಂದು ಹೇಳಬೇಕಾದರೆ, ಆ ಸ್ವತ್ತು ಒಡೆಯನ ವಶದಲ್ಲಿರಬೇಕು. ಆದರೆ, ಈ ಹಿಂದೆ ಪ್ರಸ್ತಾಪಿಸಿದಂತೆ ಸ್ವಾಧೀನ ತಪ್ಪಿದರೆ, ಸ್ವಾಮ್ಯವೂ ತಪ್ಪುವುದಿಲ್ಲ. ಕಳೆದ ಒಡವೆ ಪರರ ಸ್ವಾಧೀನವಾದರೂ ಸ್ವಾಮ್ಯ ಒಡೆಯನದೇ. ಆದರೂ, ಸ್ವಾಧೀನವಿಲ್ಲದ ಆಸ್ತಿ ತನ್ನದೆಂದು ಭಾವಿಸಿಕೊಂಡರೆ ಮಾನಸಿಕ ತೃಪ್ತಿಯಾಗಬಹುದೇ ಹೊರತು, ಒಡೆತನದ ಪುರ್ಣ ಪ್ರಯೋಜನ ದಕ್ಕುವುದಿಲ್ಲ. ಸ್ವಾಧೀನ ತಪ್ಪಿದ ಆಸ್ತಿಯನ್ನು ಅನುಭವಿಸಲು ಸಾಧ್ಯವಿಲ್ಲ. ಆದಕಾರಣ, ಒಡೆತನ ನ್ಯಾಯವಾಗಿ ತನ್ನದಾಗಿದ್ದು ತನ್ನ ಅನುಮತಿಯಿಲ್ಲದೆ ಪರರ ಸ್ವಾಧೀನದಲ್ಲಿರುವ ವಸ್ತುವನ್ನು ಸ್ವಾಧೀನಕ್ಕೆ ಕೊಡಿಸಬೇಕೆಂದು ಶಾಸನದ ಸಹಾಯ ಬೇಡಿದಾಗ, ಕೊರತೆಯಾದ ಸ್ವಾಮ್ಯವನ್ನು ಮತ್ತೆ ತುಂಬಿಕೊಳ್ಳುವುದೇ ಉದ್ದೇಶ. ಬಹುಕಾಲ ಸ್ವಾಧೀನ ತಪ್ಪಿದರೆ ಸ್ವಾಮ್ಯ ಸತ್ತುಹೋಗುವ ಸಂಭವವಿದೆ. ಸ್ವಾಧೀನ ಎಂದರೆ ಅದು ವಾಸ್ತವಿಕ ಸ್ವಾಧೀನವೇ ಆಗಿರಬೇಕಾಗಿಲ್ಲ. ಅದು ರಚನಾತ್ಮಕ ಸ್ವಾಧೀನವಾಗಿಯೂ ಇರಬಹುದು. ಒಂದು ಮನೆಯಲ್ಲಿದ್ದು ವಾಸ ಮಾಡುವಂತೆ, ಒಂದು ಲೇಖನಿಯನ್ನು ಕೈಯಲ್ಲಿಟ್ಟುಕೊಂಡು ಉಪಯೋಗಿಸುವಂತೆ, ಒಂದು ಕಾರನ್ನು ನಡೆಸಿಕೊಂಡು ಹೋಗುವಂತೆ ಒಂದು ವಸ್ತುವನ್ನು ವಾಸ್ತವವಾಗಿ ತನ್ನ ವಶದಲ್ಲೇ ಇಟ್ಟುಕೊಂಡು ಅದರ ಸ್ವಾಮ್ಯ ಸ್ಥಾಪಿಸಬಹುದು. ಹೊಲಗದ್ದೆಯನ್ನು ವಾಸ್ತವವಾಗಿ ಉಳುವಾಗ ಇನ್ನೊಬ್ಬನ ವಶದಲ್ಲಿದ್ದರೂ ಅದು ಒಡೆಯನ ಸ್ವಾಧೀನದಲ್ಲೇ ಇದ್ದಂತೆ. ಒಡೆಯನ ನೌಕರ, ಕಾರು ತೆಗೆದುಕೊಂಡು ತನ್ನ ವಶದಲ್ಲಿಟ್ಟುಕೊಂಡರೂ ಅದು ಮಾಲೀಕನ ಸ್ವಾಧೀನದಲ್ಲೇ ಇದ್ದಂತೆ. ಹಾಗೆಯೇ ಮನೆ ವಾಸ್ತವವಾಗಿ ಬಾಡಿಗೆದಾರನ ಸ್ವಾಧೀನದಲ್ಲಿದ್ದರೂ ಮಾಲೀಕನೇ ಅದರ ಸ್ವಾಧೀನ ಹೊಂದಿದ್ದಂತೆ. ಬಾಡಿಗೆದಾರನ ವಾಸ್ತವಿಕ ಸ್ವಾಧೀನ ಅನುಭವಕ್ಕಾಗಿ ಮಾತ್ರ. ಒಡೆಯನ ರಚನಾತ್ಮಕ ಸ್ವಾಧೀನ ಅವನ ಸ್ವಾಮ್ಯಕ್ಕಾಗಿ.

ಸ್ವಾಮ್ಯಕ್ಕೆ ಸ್ವಾಧೀನಕ್ಕಿಂತಲೂ ಅನುಭವವೇ ಮುಖ್ಯವೆಂಬಂತೆ ತೋರುತ್ತದೆ. ಬಾಡಿಗೆದಾರ ಮನೆಯಲ್ಲಿ ವಾಸ್ತವವಾಗಿ ವಾಸವಾಗಿದ್ದು ಅದರ ಸ್ವಾಧೀನಾನು ಭವದಲ್ಲಿದ್ದರೂ ಅದರ ಮೇಲೆ ಅವನಿಗೆ ಸ್ವಾಮ್ಯವಿಲ್ಲ. ಇಲ್ಲಿ ಮನೆಯ ಮಾಲೀಕನಿಗೆ ಸ್ವಾಧೀನವೂ ಇಲ್ಲ, ಅನುಭವವೂ ಇಲ್ಲ. ಹಾಗಾದರೆ ಅವನ ಸ್ವಾಮ್ಯವೆಲ್ಲಿದೆ ? ಬಾಡಿಗೆದಾರ ಅನುಭವಿಸುವುದು ವಾಸ್ತವ್ಯವನ್ನು, ಸ್ವಾಮ್ಯವನ್ನಲ್ಲ. ಮಾಲೀಕ ಅನುಭವಿಸುವುದು, ಸ್ವಾಮ್ಯದ ಫಲವಾಗಿ ಬಂದ ಬಾಡಿಗೆಯನ್ನು. ಮಾಲೀಕನ ಅನುಭವ ಈ ಸಂದರ್ಭದಲ್ಲಿ ಬಾಡಿಗೆಯನ್ನು ಪಡೆಯುವು ದರಲ್ಲಿದೆ. ಬಾಡಿಗೆದಾರ ಮನೆಯನ್ನು ಅನುಭವದಲ್ಲಿಟ್ಟುಕೊಂಡಿದ್ದರೂ ಆ ಅನುಭವ ಸುಖಕ್ಕೆ ಅವನು ಬಾಡಿಗೆ ತೆರಬೇಕು. ಮೂಲತಃ ಬಾಡಿಗೆದಾರ ವಾಸ್ತವ್ಯದ ಅನುಭವವನ್ನು ಹಣಕೊಟ್ಟು ಅಥವಾ ಮತ್ತಾವ ರೂಪದಿಂದಲಾದರೂ ಕೊಂಡುಕೊಳ್ಳಲೇಬೇಕು. ತನ್ನದೇ ಆಗಿರುವ ವಸ್ತುವನ್ನು ಬೆಲೆ ಕೊಟ್ಟು ಯಾರೂ ಕೊಳ್ಳುವುದಿಲ್ಲ. ಆದಕಾರಣ ಬಾಡಿಗೆದಾರ ಮನೆಯಲ್ಲಿ ವಾಸ್ತವ್ಯಾನುಭವ ಹೊಂದಿದ್ದರೂ ಅವನಿಗೆ ಸ್ವಾಮ್ಯವಿಲ್ಲ.

ಒಡೆತನದ ಲಕ್ಷಣ, ಪ್ರಮುಖ ಲಕ್ಷಣ, ಅನುಭವಸ್ವಾತಂತ್ರ್ಯ ಎಂದು ಮೇಲೆ ಹೇಳಿದೆ. ಆದರೆ, ಈ ಅನುಭವಸ್ವಾತಂತ್ರ್ಯ ಅನಿರ್ಬಂಧವಾಗಿಲ್ಲ. ತನಗಿಷ್ಟ ಬಂದಂತೆ, ಹಿಂದಿನ ಕಾಲದಲ್ಲಿ ಸ್ವೇಚ್ಛೆಯಿಂದ ಅನುಭವಿಸುತ್ತಿದ್ದಂತೆ, ಈಗಿನ ಕಾಲದಲ್ಲಿ ಒಡೆಯ ತನ್ನ ವಸ್ತು ಒಡವೆ ಆಸ್ತಿಯನ್ನು ಅನುಭವಿಸುವಂತಿಲ್ಲ. ಭೂಸುಧಾರಣಾ ಕಾಯಿದೆ, ಬಾಡಿಗೆ ನಿಯಂತ್ರಣ ಕಾಯಿದೆ, ಮುಂತಾದ ನಿಯಂತ್ರಣ ಶಾಸನಗಳು ಮಾಲೀಕನ ಅನುಭವ ಸ್ವಾತಂತ್ರ್ಯವನ್ನು ಬಹು ಕುಂಠಿತಗೊಳಿಸಿವೆ. ಆಹಾರ ಧಾನ್ಯ ಸಂಗ್ರಹ ನಿಯಂತ್ರಣಾಜ್ಞೆಗಳ ಮೂಲಕವಾಗಿ ರೈತ ಬೆಳೆದ ಧಾನ್ಯದಲ್ಲಿ ಎಷ್ಟನ್ನು ತನ್ನಲ್ಲಿಟ್ಟುಕೊಳ್ಳಬೇಕು, ಎಷ್ಟನ್ನು ಯಾರಿಗೆ ಯಾವ ದರದಲ್ಲಿ ಮಾರಬೇಕು ಎಂಬುದನ್ನೂ ನಿಯಂತ್ರಿಸಲಾಗಿದೆ. ಅಂದಮೇಲೆ, ಅನುಭವ ಸ್ವಾತಂತ್ರ್ಯ ಎಂಬುದು ತತ್ತ್ವದಲ್ಲಿ ಉಳಿದಿದೆಯೇ ಹೊರತು ವಸ್ತುತಃ ಎಷ್ಟೋ ಮೊಟಕಾಗಿ ಹೋಗಿದೆ. ಅನುಭವ ಸ್ವಾತಂತ್ರ್ಯ ಕುಂಠಿತವಾಗಿರುವುದಕ್ಕೆ ಶಾಸನಗಳು ಮಾತ್ರವೇ ಕಾರಣವಲ್ಲ. ಒಬ್ಬರ ಹೊಲದಲ್ಲಿ ಇನ್ನೊಬ್ಬರು ಗೊಬ್ಬರದ ಗಾಡಿ ಹೊಡೆದುಕೊಂಡು ಹೋಗುವುದು ಹಳ್ಳಿಗಳಲ್ಲಿ ಬಹು ಸಾಮಾನ್ಯ ಸಂಗತಿ. ಕಲ್ಲಪ್ಪನ ಹೊಲದಲ್ಲಿ ಮಲ್ಲಪ್ಪನ ಗಾಡಿ ಅಡ್ಡಾಡುವುದರಿಂದ ಕಲ್ಲಪ್ಪ ಅಷ್ಟು ಹೊಲವನ್ನು ತನಿಗಿಷ್ಟ ಬಂದಂತೆ ಅನುಭವಿಸಲಾರ. ಅಷ್ಟರಮಟ್ಟಿಗೆ ಅವನ ಅನುಭವಸ್ವಾತಂತ್ರ್ಯ ಮೊಟಕಾಗುತ್ತದೆ. ಕಲ್ಲಪ್ಪನಿಗೆ ಭೂಮಿಯ ಸ್ವಾಧೀನಾನುಭವವಿದೆ. ಆದರೆ ಮಲ್ಲಪ್ಪನಿಗೆ ಕಲ್ಲಪ್ಪನ ಹೊಲದಲ್ಲಿ ಗಾಡಿ ಹೊಡೆಯುವ ಹಕ್ಕಿದೆ. ಇಂಥ ಹಕ್ಕನ್ನು ಅನುಭೋಗದ ಹಕ್ಕು ಅಥವಾ ಮಾಮೂಲು ಹಕ್ಕು ಎಂದು ಕರೆಯುತ್ತಾರೆ. ಈ ಹಕ್ಕು, ಕಲ್ಲಪ್ಪ ಮಲ್ಲಪ್ಪ ಇಬ್ಬರ ನಡುವೆ ಆದ ಒಪ್ಪಂದದ ಫಲವಲ್ಲ. ಒಬ್ಬರ ಆಸ್ತಿಯಲ್ಲಿ ಮತ್ತೊಬ್ಬರಿಗೆ ಶಾಸನಬದ್ಧವಾಗಿ ದೊರಕಿರುವ ಹಕ್ಕು. ಇನ್ನೊಂದು ರೀತಿಯಿಂದಲೂ ಅನುಭವಸ್ವಾತಂತ್ರ್ಯ ಕುಂಠಿತವಾಗಬಹುದು. ಅದು ಒಪ್ಪಂದದಿಂದ ಆದ ಪರಿಣಾಮ. ಒಬ್ಬಾತ ತನ್ನ ಭೂಮಿಯನ್ನು ಇನ್ನೊಬ್ಬಾತನಿಗೆ ಸ್ವಾಧೀನ ಆಯಕ ಅಥವಾ ಭೋಗ್ಯ (ಪೊಸೆಸರಿ ಮಾರ್ಗಿಜ್) ಮಾಡಬಹುದು. ಇಂಥ ಸಂದರ್ಭಗಳಲ್ಲಿ ಒಡೆಯನ ಅನುಭವ ಅಷ್ಟರ ಮಟ್ಟಿಗೆ ಕುಂಠಿತವಾಗುತ್ತದೆ. ಆದರೂ ಒಡೆಯ ತನ್ನ ಆಸ್ತಿಯನ್ನು ಹೇಗೆ ಅನುಭವಿಸಬೇಕೆಂಬ ಬಗ್ಗೆ ಆತನಿಗೆ ಸ್ವಾತಂತ್ರ್ಯವಿದ್ದೇ ಇರುತ್ತದೆ. ಸ್ವಾಧೀನ ಆಯಕ ಮಾಡುವುದೂ ಬಿಡುವುದೂ ಒಡೆಯನ ಇಷ್ಟ. ಮೇಲಿನ ಚರ್ಚೆಯಿಂದ ಈ ಕೆಲವು ಅಂಶಗಳು ವ್ಯಕ್ತವಾಗುತ್ತವೆ:

ಆಸ್ತಿಯ ಸ್ವಾಧೀನಾನುಭವವನ್ನು ತಾತ್ಕಾಲಿಕವಾಗಿ ಮತ್ತೊಬ್ಬರಿಗೆ ಬಿಟ್ಟುಕೊಟ್ಟು ಒಡೆಯ ತನ್ನ ಸ್ವಾಮ್ಯವನ್ನು ಕಾಪಾಡಿಕೊಳ್ಳಬಹುದು;ತನ್ನ ಒಡೆತನದಲ್ಲಿ ಕೆಲವು ಭಾಗ ಅಥವಾ ಬಹುಭಾಗವನ್ನು ಪರಸ್ಪರ ಒಪ್ಪಂದದ ಮೂಲಕ ಇತರರಿಗೆ ಬಿಟ್ಟುಕೊಟ್ಟು ಒಡೆತನದ ತಿರುಳನ್ನು ಮಾತ್ರ ತಾನಿಟ್ಟುಕೊಂಡಿರಬಹುದು;ಒಡೆಯನೇ ಆಸ್ತಿಯ ಸ್ವಾಧೀನಾನು ಭವದಲ್ಲಿದ್ದುಕೊಂಡು ಶಾಸನಬದ್ಧವಾಗಿ ತನಗಿರುವ ಎಲ್ಲ ಹಕ್ಕನ್ನೂ ತಾನೇ ಅನುಭವಿಸಬಹುದು.

ಒಂದು ವಸ್ತುವಿನ ಮೇಲಿರುವ ಒಡೆತನದ ಮತ್ತೊಂದು ಲಕ್ಷಣವೆಂದರೆ ತಾನು ಬದುಕಿದ್ದಾಗ ಆ ವಸ್ತುವನ್ನು ತನಗಿಷ್ಟ ಬಂದಂತೆ ವಿನಿಯೋಗಿಸುವ ಅಥವಾ ಪರಭಾರೆ ಮಾಡುವ ಹಕ್ಕು. ಸ್ವಯಾರ್ಜಿತ ಸ್ವತ್ತನ್ನು ವಿಕ್ರಯಿಸಲೂ, ದಾನ ಮಾಡಲೂ ಒತ್ತೆಯಿಡಲೂ ಅಡವಿಡಲೂ ತನಗಿಷ್ಟ ಬಂದರೆ ನಾಶಪಡಿಸಲೂ ಆ ಸ್ವತ್ತಿನ ಮಾಲೀಕನಿಗೆ ಅಧಿಕಾರವಿರುತ್ತದೆ. ಒಂದು ವಸ್ತು ಸ್ವಂತದ್ದು ಎಂಬುದಾದರೆ ಅದನ್ನು ಏನು ಬೇಕಾದರೂ ಮಾಡುವ ಅಧಿಕಾರ ಒಡೆಯನಿಗಿರಬೇಕು. ಆ ಅಧಿಕಾರವಿಲ್ಲದಿದ್ದರೆ ಒಡೆತನ ಪುರ್ಣವಲ್ಲ. ಒಂದು ಸ್ವತ್ತು ‘ನನ್ನದು’ ಎಂದು ಹೇಳಿ, ಅದನ್ನು ಹೀಗೆಯೇ ವಿನಿಯೋಗಿಸಬೇಕು ಎಂಬ ನಿರ್ಬಂಧಕ್ಕೆ ಒಳಪಟ್ಟಿರುವುದು ಒಡೆತನದ ಲಕ್ಷಣವಲ್ಲ.

ಮೇಲಿನ ಈ ಮಾತು ಹಿಂದಿನ ಕಾಲದಲ್ಲಿ ನಿಜವಾಗಿತ್ತು. ಆದರೆ ಸಮಾಜ ಜಟಿಲವಾದಂತೆ, ಆರ್ಥಿಕ ವ್ಯವಸ್ಥೆ ನವಸಮಾಜದ ಆವಶ್ಯಕತೆಗಳಿಗೆ ಹೊಂದಿಕೆಯಾದಂತೆ ಆಸ್ತಿಯ ವಿನಿಯೋಗ ಮತ್ತು ವಿಲೇವಾರಿಯ ಹಕ್ಕು ಬಹುಮಟ್ಟಿಗೆ ಕುಂಠಿತವಾಗಿದೆ. ಭೂಸುಧಾರಣಾ ಕಾಯಿದೆಯ ಪ್ರಕಾರ ಭೂಸ್ವಾಮಿ ಗೇಣಿದಾರರ ಮತ್ತು ಸಾಗುವಳಿಗಾರರ ಸ್ವಾಧೀನದಲ್ಲಿರುವ ಭೂಮಿಯನ್ನು ತನ್ನ ಇಷ್ಟಾನುಸಾರ ಯಾರಿಗಾದರೂ ಮಾರುವಂತಿಲ್ಲ. ಹಿಡುವಳಿದಾರನಿಗೆ ಇಂತಿಷ್ಟೇ ಕ್ರಯಕ್ಕೆ ಮಾರಬೇಕೆಂದು ಶಾಸನವಾಗಿದೆ. ಫ್ರಾನ್್ಸ ದೇಶದಲ್ಲಿ ತಂದೆ ಬದುಕಿರುವಾಗ ತನ್ನ ಆಸ್ತಿಯಲ್ಲಿ ಒಂದು ಪ್ರಮಾಣಕ್ಕಿಂತ ಹೆಚ್ಚಿಗೆ ವಿಲೇವಾರಿ ಮಾಡುವಂತಿಲ್ಲ. ಅವನು ಸತ್ತಮೇಲೆ ಆ ಆಸ್ತಿ ಹೀಗೆಯೇ ವಿಲೇವಾರಿ ಆಗಬೇಕೆಂದು ಮೃತ್ಯುಪತ್ರದ ಅಥವಾ ಉಯಿಲಿನ ಮೂಲಕವಾಗಿ ನಿರ್ದೇಶಿಸುವಂತೆಯೂ ಇಲ್ಲ. 1933ರಲ್ಲಿ ಜರ್ಮನಿಯಲ್ಲಿ ಮಧ್ಯಮ ಪ್ರಮಾಣದ ಭೂಮಿಯನ್ನು ಮಾರಕೂಡದೆಂದೂ ತುಂಡು ಮಾಡಬಾರದೆಂದೂ ಶಾಸನ ಮಾಡಲಾಗಿತ್ತು. ಆದಕಾರಣ ನಿರುಪಾಧಿಕ ವಿನಿಯೋಗದ ಹಕ್ಕು ಇದ್ದವನೇ ಒಡೆಯ ಎಂದು ಹೇಳುವುದಾದರೆ ಆಧುನಿಕ ಸಮಾಜದಲ್ಲಿ ಒಬ್ಬನಾದರೂ ನಿಜವಾದ ಒಡೆಯ ಇದ್ದಾನೆಂದು ಹೇಳುವುದು ಕಷ್ಟ.

ಕೊನೆಯದಾಗಿ ಮೃತ್ಯುಪತ್ರದ ಮೂಲಕ ಆಸ್ತಿಯನ್ನು ವಿಲೇಮಾಡುವ ಅಧಿಕಾರವೂ ಒಡೆಯನಿಗಿರಬೇಕೆಂಬುದು ಪಾಶ್ಚಾತ್ಯ ಶಾಸನ ಪದ್ಧತಿಯಲ್ಲಿ ಪ್ರಚಲಿತವಾಗಿದ್ದ ಒಂದು ನಿಶ್ಚಿತ ಅಭಿಪ್ರಾಯ. ಅಲ್ಲಿ ಆಸ್ತಿಯ ಖಾಸಗಿ ಒಡೆತನದಲ್ಲಿ ನಂಬಿಕೆ ಹೆಚ್ಚು. ಆದರೆ ಭಾರತದಲ್ಲಿ, ಅದರಲ್ಲೂ ಹಿಂದೂ ನ್ಯಾಯಶಾಸ್ತ್ರದ ಪ್ರಕಾರ, ಕುಟುಂಬದ ಯಜಮಾನನಿಗಿದ್ದ ದಾನ ಮಾಡುವ ಹಕ್ಕು, ಮೃತ್ಯುಪತ್ರದ ಮೂಲಕ ಆಸ್ತಿಯನ್ನು ವಿಲೇಮಾಡುವ ಅಧಿಕಾರ ನಿರುಪಾಧಿಕವಲ್ಲ. ಕೆಲವು ಸಂದರ್ಭಗಳಲ್ಲಿ ಮಾತ್ರ, ಸ್ವಲ್ಪ ಪ್ರಮಾಣದಲ್ಲಿ ಮಾತ್ರ, ಮೃತ್ಯುಪತ್ರದ ಮೂಲಕ ಆಸ್ತಿಯನ್ನು ವಿಲೇಮಾಡುವ ಅಧಿಕಾರ ಅವನಿಗೆ ಇದೆ. ಪಾಶ್ಚಾತ್ಯ ದೇಶಗಳಲ್ಲಿ ಒಡೆಯನ ಮರಣಾನಂತರ ಭೂಮಿ ಹಿರಿಯ ಮಗನಿಗೇ ಕ್ರಮಿಸಬೇಕೆಂಬ ಶಾಸನ ಬಹುಕಾಲದಿಂದಲೂ ಜಾರಿಯಲ್ಲಿದೆ. ಮೃತ್ಯುಪತ್ರದ ಮೂಲಕ ತನ್ನ ಭೂಮಿಯನ್ನು ಬೇಕಾದಂತೆ ಹಂಚುವ ಅಧಿಕಾರ ಬಹುಮಟ್ಟಿಗೆ ಕುಂಠಿತವಾಗಿದೆ.

ಆಸ್ತಿಯ ಸ್ವಾಧೀನ (ಪೊಸೆಷನ್)

[ಬದಲಾಯಿಸಿ]

[]ಒಂದು ವಸ್ತು ಯಾರ ವಶದಲ್ಲಿದೆಯೆಂಬುದನ್ನು ನೋಡಿ ಅದು ಯಾರದೆಂಬುದನ್ನು ಹಿಂದಿನ ಕಾಲದಲ್ಲಿ ನಿರ್ಧರಿಸುತ್ತಿದ್ದರು. ಅದರಲ್ಲೂ ಇಂಗ್ಲೆಂಡಿನಲ್ಲಿ ಸ್ವಾಧೀನವೇ ಸ್ವಾಮ್ಯದ ಒಂದು ಸ್ಪಷ್ಟವಾದ ಲಕ್ಷಣವೆಂದು ಬಗೆದಿದ್ದರು. ಸ್ವಾಮ್ಯಕ್ಕೆ ಎಷ್ಟು ಪ್ರಾಧಾನ್ಯ ಕೊಟ್ಟಿದ್ದರೆಂದರೆ, ಸ್ವಾಧೀನವಿದ್ದರೆ ಸ್ವಾಮ್ಯವೂ ಆತನದೇ ಎಂದು ಭಾವಿಸಲಾಗಿತ್ತು. ಸ್ವಾಧೀನವಿಲ್ಲದ ಸ್ವತ್ತಿನ ಒಡೆಯ ತನ್ನ ಹಕ್ಕನ್ನು ಸ್ಥಿರಪಡಿಸಿ ಆ ಸ್ವತ್ತನ್ನು ಸ್ವಾಧೀನಕ್ಕೆ ಪಡೆಯಬೇಕಾಗುತ್ತಿತ್ತು. ಸ್ವಾಧೀನವೇ ಶಾಸನದಲ್ಲಿ ನೂರಕ್ಕೆ ತೊಂಬತ್ತು ಅಂಶದ ಬಲ ಎನ್ನುತ್ತಾರೆ-ಇಂಗ್ಲಿಷ್ ಶಾಸನದಲ್ಲಿ. ರೋಮನ್ ನ್ಯಾಯದಲ್ಲಿ ಸ್ವಾಧೀನಕ್ಕೆ ಇಂಗ್ಲಿಷ್ ನ್ಯಾಯದಲ್ಲಿರುವಷ್ಟು ಪ್ರಾಮುಖ್ಯವಿಲ್ಲ. ಆದರೆ ಅಲ್ಲೂ ಸ್ವಾಧೀನಕ್ಕೆ ತಕ್ಕಮಟ್ಟಿನ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಇಂಗ್ಲಿಷ್ ಮತ್ತು ರೋಮನ್ ನ್ಯಾಯಗಳ ಬಹು ಅಂಶವೇ ಈಗ ಭಾರತದಲ್ಲಿ ಪ್ರಚಲಿತವಾಗಿದೆ. ಪ್ರಾಚೀನ ಭಾರತದ ನ್ಯಾಯ ಆಸ್ತಿಯ ವೈಯಕ್ತಿಕ ಒಡೆತನಕ್ಕೆ ಪ್ರಾಮುಖ್ಯ ಕೊಡದೆ ಹಿಂದೂ ಅವಿಭಕ್ತ ಕುಟುಂಬದಲ್ಲಿರುವಂತೆ ಸಾಮೂಹಿಕ ಒಡೆತನಕ್ಕೆ ಪ್ರಾಮುಖ್ಯ ಕೊಡುತ್ತಿದ್ದ ಕಾರಣ ಭಾರತೀಯ ನ್ಯಾಯದಲ್ಲಿ ಸ್ವಾಧೀನಕ್ಕೆ ಇಂಗ್ಲಿಷ್ ನ್ಯಾಯದಲ್ಲಿದ್ದಷ್ಟು ಪ್ರಾಮುಖ್ಯ ಇದ್ದಿರಲಾರದು. ಅರ್ವಾಚೀನ ಭಾರತೀಯ ನ್ಯಾಯ ರೋಮನ್ ಮತ್ತು ಇಂಗ್ಲಿಷ್ ನ್ಯಾಯಗಳ ಆಧಾರದ ಮೇಲೆ ನಿಂತಿರುವುದರಿಂದ ಅವುಗಳಿಂದಲೇ ಇದು ಪ್ರಭಾವಿತವಾಗಿರುವುದರಿಂದ, ಸ್ವಾಧೀನದ ಬಗ್ಗೆ ಪಾಶ್ಚಾತ್ಯ ನ್ಯಾಯಪದ್ಧತಿಯ ಅಭಿಪ್ರಾಯವನ್ನು ಗ್ರಹಿಸುವುದು ಇಲ್ಲೂ ಅತ್ಯಗತ್ಯ.

ಇಂಗ್ಲಿಷ್ ನ್ಯಾಯಪದ್ಧತಿಯ ಪ್ರಕಾರ ಸ್ವಾಧೀನಕ್ಕೆ ಬಹಳ ಪ್ರಾಮುಖ್ಯವಿದೆಯೆಂಬುದಕ್ಕೆ ಕೆಲವು ದೃಷ್ಟಾಂತಗಳನ್ನು ಕೊಡಬಹುದು. ಒಬ್ಬ ಜಾಡಮಾಲಿಗೆ ಕಸ ಗುಡಿಸುವಾಗ ಒಂದು ಉಂಗುರ ಸಿಕ್ಕರೆ ಅದು ಅವನದೇನಲ್ಲ. ಅದರ ಒಡೆಯ ಯಾರೆಂಬುದು ಅವನಿಗೆ ಗೊತ್ತಿಲ್ಲದಿರಬಹುದು. ಆದರೆ ಯಾರೋ ಒಬ್ಬ ಒಡೆಯ ಇರಲೇಬೇಕು ಎಂಬುದಂತೂ ನಿಶ್ಚಯ. ಒಂದು ವೇಳೆ ಜಾಡಮಾಲಿ ಆ ಉಂಗುರದ ಹರಳನ್ನು ರತ್ನಪರೀಕ್ಷಕನಿಗೆ ಕೊಟ್ಟರೆ ಆ ಪರೀಕ್ಷಕ ಅದನ್ನು ಎತ್ತಿಹಾಕಿದರೆ ಜಾಡಮಾಲಿಗೆ ಅದರ ಬೆಲೆಯನ್ನು ಅಥವಾ ಹರಳನ್ನು ನ್ಯಾಯಬದ್ಧವಾಗಿ ವಸೂಲು ಮಾಡಿಕೊಳ್ಳುವ ಅಧಿಕಾರವಿದೆ. ಜಾಡಮಾಲಿಯೇನೂ ಅದರ ಒಡೆಯನಲ್ಲ, ರತ್ನ ಪರೀಕ್ಷಕನೂ ಅಷ್ಟೆ. ಇಬ್ಬರ ಸ್ವಾಧೀನವೂ ಒಡೆತನದ ಸ್ವಾಧೀನವಲ್ಲ. ಆದರೂ ಜಾಡಮಾಲಿಯ ಸ್ವಾಧೀನವನ್ನು ಇಂಗ್ಲಿಷ್ ಶಾಸನ ಮನ್ನಿಸುತ್ತದೆ, ಅದನ್ನು ರತ್ನಪರೀಕ್ಷಕನಿಂದ ವಾಪಸು ಕೊಡಿಸಲು ನೆರವಾಗುತ್ತದೆ. ಜಾಡಮಾಲಿಯ ಹಕ್ಕು, ಸ್ವಾಮ್ಯದ ಹಕ್ಕಲ್ಲ; ಸ್ವಾಧೀನದ ಹಕ್ಕು. ಕೃಷ್ಣನ ಕಾರನ್ನು ರಾಮ ತೆಗೆದುಕೊಂಡು ಹೋಗಿ ಅದನ್ನು ವಾಪಸು ಕೊಡದಿದ್ದರೆ ಕೃಷ್ಣ ಅದನ್ನು ನ್ಯಾಯಬದ್ಧವಾಗಿ ರಾಮನಿಂದ ವಾಪಸು ಪಡೆಯುವ ಹಕ್ಕಿದೆ. ಕೃಷ್ಣ ಅದನ್ನು ಕದ್ದು ತಂದಿದ್ದಾನೆಂಬ ಮಾತನ್ನು ನ್ಯಾಯಾಲಯವು ಕೇಳುವುದೇ ಇಲ್ಲ. ಕೃಷ್ಣ ಕಳ್ಳನಾದರೂ ಅವನ ಸ್ವಾಧೀನ ರಾಮನ ಸ್ವಾಧೀನಕ್ಕಿಂತ ಹೆಚ್ಚು ನ್ಯಾಯಸಮ್ಮತವಾಗಿದೆ. ರೋಮನ್ ನ್ಯಾಯಶಾಸ್ತ್ರದಲ್ಲಿ ಹೀಗಿಲ್ಲ. ಕೃಷ್ಣ ತನ್ನ ಸ್ವಾಧೀನ ನೀತಿಗೂ ನ್ಯಾಯಕ್ಕೂ ಸಮ್ಮತವಾದದ್ದೆಂದು ಸಿದ್ಧಾಂತ ಮಾಡಿದರೆ ಮಾತ್ರ ರಾಮನಿಂದ ಆ ಕಾರಿನ ಸ್ವಾಧೀನ ಪಡೆಯಲು ಸಮರ್ಥನಾಗುತ್ತಾನೆ. ಕಳ್ಳನ ಕಳ್ಳಮಾಲು ಕದ್ದ ಮತ್ತೊಬ್ಬ ಕಳ್ಳನಿಗೂ ಸ್ವಾಧೀನದ ಹಕ್ಕು ಬರುತ್ತದೆ-ಎಂಬುದಾಗಿ ರೋಮನ್ ನ್ಯಾಯಪದ್ಧತಿ ನಂಬಿತ್ತು.

ಈ ರೀತಿಯಾಗಿ ಸ್ವಾಧೀನಕ್ಕೆ ಪ್ರಾಶಸ್ತ್ಯ ಕೊಡುವುದರ ಕಾರಣವೇನು? ಮೊದಲನೆ ಯದಾಗಿ, ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಉಳಿಸಿಕೊಳ್ಳಲು ಇದ್ದ ಪರಿಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಲೇಬೇಕು. ಸ್ವಾಧೀನವನ್ನು ತಪ್ಪಿಸಲು ಮಾಡುವ ಎಲ್ಲ ಪ್ರಯತ್ನಗಳೂ ಅನಿವಾರ್ಯವಾಗಿ ಹಿಂಸಾಕೃತ್ಯ ಮತ್ತು ಅಶಾಂತಿಗೆ ಎಡೆಕೊಡುತ್ತವೆ. ಎರಡನೆಯದಾಗಿ, ಸ್ವಾಧೀನವು ಸ್ವಾಮ್ಯದ ಒಂದು ಮುಖ್ಯ ಲಕ್ಷಣ. ಆದಕಾರಣ ಸ್ವಾಧೀನ ಹೊಂದಿರುವಾತನಿಗೆ ಸ್ವಾಮ್ಯವಿಲ್ಲವೆಂದು ಸಿದ್ಧಾಂತ ಮಾಡಿದರೆ, ಅದರ ಜೊತೆಗೆ ಸ್ವಾಧೀನ ಬೇಕೆಂದು ಬೇಡುವಾತನ ಸಾಮ್ಯದ ಹಕ್ಕು ಸದ್ಯ ಸ್ವಾಧೀನದಲ್ಲಿರುವಾತನ ಸ್ವಾಧೀನಕ್ಕಿಂತ ಉತ್ತಮವಾದದ್ದೆಂದು ತೋರಿಸಬೇಕು.

ಸ್ವತ್ತಿನ ಪ್ರಾಪ್ತಿ: ಕೊನೆಯದಾಗಿ ಆಸ್ತಿಯನ್ನು ಗಳಿಸುವ ಬಗೆ ಹೇಗೆಂದು ಪರಿಶೀಲಿಸೋಣ. ಜನಾಂಗದ ಬಾಲ್ಯಾವಸ್ಥೆಯಲ್ಲಿ, ಜನರು ಬಹು ಅಲ್ಪ ಸಂಖ್ಯೆಯಲ್ಲಿದ್ದಾಗ, ಸ್ವತ್ತುಗಳು ಹೇರಳವಾಗಿ ದೊರೆಯುತ್ತಿದ್ದ ಆ ಒಳ್ಳೆಯ ಕಾಲದಲ್ಲಿ ಸಿಕ್ಕಿದ್ದನ್ನು ಸಿಕ್ಕಷ್ಟು ಆಕ್ರಮಿಸಿ ಕೈವಶಮಾಡಿಕೊಳ್ಳುವುದು ಸ್ವತ್ತನ್ನು ಗಳಿಸುವ ಪ್ರಥಮ ಮತ್ತು ಸುಲಭೋಪಾಯ. ಯಾರದೂ ಅಲ್ಲದ, ಪ್ರಕೃತಿದತ್ತ ಸ್ವತ್ತನ್ನು ಸ್ವಾಧೀನಪಡಿಸಿಕೊಂಡರೆ ಅದು ಆತನ ಆಸ್ತಿಯಾಗುತ್ತದೆ. ಹರಿಯುವ ನೀರಿನಲ್ಲಿ ಸಿಗುವ ಮೀನೂ ಆಕಾಶದಲ್ಲಿ ಹಾರುವ ಹಕ್ಕಿಗಳೂ ಯಾರು ಹಿಡಿದರೋ ಅವರದೇ ಆಗುತ್ತವೆ. ಒಂದು ವೇಳೆ, ಒಂದು ಸ್ವತ್ತು ಮತ್ತೊಬ್ಬರಿಗೆ ಸೇರಿದ್ದರೆ, ಅದನ್ನು ತನ್ನದನ್ನಾಗಿ ಮಾಡಿಕೊಳ್ಳಲು ಬರುತ್ತದೆ. ಯಾರಿಗೆ ಆ ಸ್ವತ್ತು ಸೇರಿದೆಯೋ ಅವರೊಡನೆ ಒಪ್ಪಂದ ಮಾಡಿಕೊಂಡು ಸ್ವತ್ತನ್ನು ಕ್ರಯಕ್ಕೆ ಕೊಂಡು, ಇಲ್ಲವೇ ಪುಕ್ಕಟೆಯಾಗಿ ಪಡೆದುಕೊಂಡು, ಅಥವಾ ಮತ್ತಾವುದೋ ರೀತಿಯಿಂದ, ಒಡೆತನ ಹೊಂದಬಹುದು. ಒಪ್ಪಂದವಿಲ್ಲದೆ ವಸ್ತುವನ್ನು ಬಲಾತ್ಕಾರವಾಗಿ ಆಕ್ರಮಿಸಿಕೊಂಡು, ನಿಯಮಿತ ಕಾಲಕ್ಕಿಂತ ದೀರ್ಘಕಾಲ ಬಹಿರಂಗವಾಗಿ ಆಕ್ಷೇಪಣೆಯಿಲ್ಲದೆ ಅನುಭೋಗಿಸಿದರೂ ಮೂಲ ಒಡೆಯನ ಸ್ವಾಮ್ಯ ತಾನಾಗಿಯೇ ಲುಪ್ತವಾಗಿ ಬಲಾಢ್ಯನ ಸ್ವಾಧೀನ ಸ್ವಾಮ್ಯವಾಗಿ ಮಾರ್ಪಡುತ್ತದೆ. ಆಸ್ತಿಯ ಮಾಲೀಕ ಮೃತ್ಯುಪತ್ರದ ಮೂಲಕ ತನ್ನಿಷ್ಟ ಬಂದವರಿಗೆ ಆಸ್ತಿಯನ್ನು ಕೊಡುವುದರಿಂದಲೂ ಆಸ್ತಿ ಪ್ರಾಪ್ತಿಯಾಗುತ್ತದೆ. ಹಿಂದೂ ನ್ಯಾಯಶಾಸ್ತ್ರ ಹಾಗೂ ಇತರ ಪ್ರಮುಖ ನ್ಯಾಯಶಾಸ್ತ್ರ ಪದ್ಧತಿಯಂತೆ ವಂಶಾನುಗತವಾಗಿ ಆಸ್ತಿ ಸಂಕ್ರಮಿಸುವುದರಿಂದಲೂ ಅದು ಪ್ರಾಪ್ತವಾಗುತ್ತದೆ.

ಸಾಮಾಜಿಕವಾಗಿ ಸ್ವತ್ತಿನ ಕಲ್ಪನೆ

[ಬದಲಾಯಿಸಿ]

ಸ್ವತ್ತನ್ನು ಕುರಿತ ಜಿಜ್ಞಾಸೆಯನ್ನು ವ್ಯಕ್ತಿಯ ಮತ್ತು ಸಮಾಜದ ದೃಷ್ಟಿಯಿಂದ ಮಾಡುವುದು ರೂಢಿಯಾಗಿದೆ. ಒಬ್ಬ ವ್ಯಕ್ತಿ ಒಂದು ಸ್ವತ್ತನ್ನು ಪಡೆದುಕೊಂಡು ಅದರ ಒಡೆತನ ಹೊಂದುವುದರ ಉದ್ದೇಶವೇನೆಂಬುದನ್ನು ವಿವೇಚಿಸುವ ಪ್ರಯತ್ನಗಳು ನಡೆದಿವೆ. ಒಬ್ಬ ವ್ಯಕ್ತಿ ಸ್ವತ್ತಿನ ಸ್ವಾಧೀನ ಹಾಗೂ ಸ್ವಾಮ್ಯ ಪಡೆಯುವುದರಿಂದ ಸಮಾಜದ ಮೇಲೆ ಉಂಟಾಗುವ ಪರಿಣಾಮಗಳೇನೆಂಬುದನ್ನು ಪರಿಶೀಲಿಸುವ ಪ್ರಯತ್ನಗಳೂ ಅಷ್ಟೇ ಪ್ರಮುಖವಾಗಿ ನಡೆದಿವೆ. ವ್ಯಕ್ತಿಗೂ ಸಮಾಜಕ್ಕೂ ಇರುವ ಸಂಬಂಧವನ್ನು ಮರೆತು ಕೇವಲ ವ್ಯಕ್ತಿಯ ದೃಷ್ಟಿಯಿಂದಲೋ ಸಮಾಜದ ದೃಷ್ಟಿಯಿಂದಲೋ ಇದರ ಜಿಜ್ಞಾಸೆಯಲ್ಲಿ ತೊಡಗುವುದರಿಂದ ಏನೂ ಪ್ರಯೋಜನವಿಲ್ಲ. ಸ್ವತ್ತೂ ಒಂದು ಹಕ್ಕು. ಒಂದು ಪದಾರ್ಥದ ಸುತ್ತ ಬೆಳೆದ ಸಂಬಂಧಗಳ ವ್ಯೂಹ (ಲೇಖನದ ಮೊದಲ ಭಾಗ ನೋಡಿ). ಸಮಾಜದ ಒಪ್ಪಿಗೆಯಿಲ್ಲದೆ ಯಾವ ಹಕ್ಕೂ ಸಿಂಧುವಾಗದೆಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಸ್ವತ್ತಿನ ವಿಚಾರದಲ್ಲೂ ಈ ಮಾತು ನಿಜ. ಆದ್ದರಿಂದ ಈ ವಿಚಾರವಾಗಿ ವಿವೇಚಿಸಬೇಕಾದ ಅಂಶಗಳು ಹಲವುಂಟು. ಸ್ವತ್ತಿನ ಸ್ವಾಧೀನ, ಒಡೆತನ, ಪ್ರೇರಣೆ, ಸ್ವತ್ತಿನ ನಿಮಿತ್ತವಾಗಿ ಇತರರೊಂದಿಗೆ ಉದ್ಭವಿಸುವ ಸಂಬಂಧಗಳು (ಉದಾ: ಪ್ರತಿಷ್ಠೆಯ ಚಿಹ್ನೆ), ಪ್ರಾಬಲ್ಯ, ಅಧಿಕಾರ, ಅವಲಂಬನೆ, ಅಂತಸ್ತು ಮುಂತಾದವನ್ನೆಲ್ಲ ವಿವೇಚಿಸಬೇಕಾಗುವುದು. ಇತರ ವ್ಯವಸ್ಥೆಗಳಂತೆ ಸ್ವತ್ತೂ ಒಂದು ವ್ಯವಸ್ಥೆಯಾದ್ದರಿಂದ ಇದರ ಜಿಜ್ಞಾಸೆಯಲ್ಲಿ ನೈತಿಕ ಸಾಮಾಜಿಕ ಸಮಸ್ಯೆಗಳು ಅತ್ಯಂತ ಮುಖ್ಯವಾದುವು. ಏಕೆಂದರೆ ಮಿಕ್ಕೆಲ್ಲದರಂತೆಯೇ ಸ್ವತ್ತೂ ಸಾಮಾಜಿಕ ವ್ಯವಸ್ಥೆ. ಮಿಕ್ಕೆಲ್ಲ ಹಕ್ಕುಗಳಂತೆಯೇ ಸ್ವತ್ತೂ ಒಂದು ಹಕ್ಕಾದರೂ ಭೌತ ವಸ್ತುಗಳಿಗೆ ಮಾತ್ರವೇ ಸ್ವತ್ತಿನ ಹಕ್ಕು ಮಿತಿಗೊಳ್ಳುವುದಿಲ್ಲ. ಅದು ಅದ್ರವ್ಯ ವಿಷಯಗಳಿಗೂ ಎಂದರೆ ಹಾಡುಗಳು, ಮಾಟದ ಮಂತ್ರಗಳು, ಹೆಸರುಗಳು ಮುಂತಾದವಕ್ಕೂ, ಅನ್ವಯವಾಗುತ್ತದೆ. ಆಕ್ರಮಣ ಮತ್ತು ಅನುಭೋಗಗಳಿಂದ ಸ್ವತ್ತು ಹುಟ್ಟಿದೆ, ನಿಜ; ಆದರೆ ಅದು ಬೇಗನೆ ಸ್ವಾಮಿತ್ವಕ್ಕೆ ಬೆಳೆಯುತ್ತದೆ ಮತ್ತು ಸಾಮಾಜಿಕ ಸಂಬಂಧವಾಗಿ ಬಹು ವ್ಯಾಪಕವಾದ ಪರಿಣಾಮವನ್ನು ಉಂಟುಮಾಡುತ್ತದೆ. ಸರಳ ಸಮಾಜಗಳಲ್ಲಿ ಒಂದು ಸ್ವತ್ತನ್ನು ಬಹುಮಟ್ಟಿಗೆ ಅದರ ಒಡೆಯ ತನ್ನ ಕುಲದವರೊಂದಿಗೆ ಭೋಗಿಸುವುದು ವಾಡಿಕೆ. ಆದರೆ ಆಧುನಿಕ ಸಮಾಜಗಳಲ್ಲಿ ವ್ಯಕ್ತಿಗಳೇ ಸಾಮಾನ್ಯವಾಗಿ ಸ್ವತ್ತಿನ ಒಡೆಯರು ಹಾಗೂ ಉಪಭೋಕ್ತೃಗಳು. ಭವಿಷ್ಯದ ಅಭದ್ರತೆಯನ್ನು ನಿವಾರಿಸುವ ಉದ್ದೇಶದಿಂದಲೇ ಸಾಮಾನ್ಯವಾಗಿ ಜನ ಸ್ವತ್ತನ್ನರಸಿ ಹೋಗುತ್ತಾರೆ. ಸಾಕಷ್ಟು ಆಹಾರ ದೊರಕುವಂತಾದರೆ ಸಾಕೆಂಬುದು ಒಂದು ಉದ್ದೇಶ. ಇದು ಪ್ರಥಮ. ಸ್ವತ್ತಿನೊಡೆತನಕ್ಕೆ ಮೋಡಿಯ ಪವಾಡವುಂಟು. ಜಡವಾದ ಸ್ವತ್ತಿಗೂ ಚೇತನವನ್ನಾರೋಪಿಸಿ ಅದನ್ನು ವಶಪಡಿಸಿ ಕೊಳ್ಳಬೇಕೆಂಬ ಹಂಬಲವೂ ಉಂಟು. ಈ ಕಾರಣಗಳಿಂದಲೂ ಸ್ವತ್ತನ್ನರಸುವುದುಂಟು. ಸ್ವತ್ತಿನ ಒಡೆತನದಿಂದ ವ್ಯಕ್ತಿಯ ಅರ್ಹತೆಯ ವಿಸ್ತರಣವಾಗುತ್ತದೆ. ಆ ಕಾರಣದಿಂದ ಅವನು ಸ್ವತ್ತನ್ನು ರೂಢಿಸುತ್ತ ಹೋಗಬಹುದು. ಸಂಗ್ರಹಿಸಬೇಕೆಂಬ ಸಹಜಪ್ರವೃತ್ತಿ ಸ್ವತ್ತಿನ ಸಂಪಾದನೆಗೂ ಒಡೆತನಕ್ಕೂ ಒಂದು ಕಾರಣ.

ಸಾಕಷ್ಟು ಸುಖೋಪಭೋಗಗಳ ಲಾಲಸೆಯಿಂದಲೂ ಸ್ವತ್ತಿನ ಅವತಾರವಾಗಬಹುದು. ಇದು ಅಂತಸ್ತಿನ ಚಿಹ್ನೆಯೂ ಆಗುವುದು. ಇತರರ ಕಣ್ಣು ಕೋರೈಸುವಂತೆ ವಸ್ತುಗಳನ್ನು ಅನುಭೋಗಿಸುವುದು, ಪೋಲುಮಾಡುವುದು ಹಿಂದೂ ಇತ್ತು; ಇಂದೂ ಇದನ್ನು ಕಾಣಬಹುದು. ಇತರರನ್ನು ಮೀರಿಸಬೇಕೆಂಬುದೂ ಮಾನವರಲ್ಲಿ ಬಹಳ ಸಾಮಾನ್ಯವಾಗಿರುವ ಆಸೆ. ಇತರರ ಮೇಲೆ ಹತೋಟಿ ಹೊಂದಿ ಅಧಿಕಾರ ಚಲಾಯಿಸಲು ಸ್ವತ್ತು ಒಂದು ಸಾಧನವಾಗಿ ಪರಿಣಮಿಸಿರುವುದು ಇಂದಿನ ನಾಗರಿಕತೆಗಳ ಒಂದು ಲಕ್ಷಣ. ಹಣದ ಆಗಮನ ಹಾಗೂ ಬಂಡವಾಳ ಶೇಖರಣೆಯ ಫಲವಾಗಿ ಇದು ಈಗ ಬಹಳ ಪ್ರಧಾನ ಲಕ್ಷಣವಾಗಿದೆ.

ಸರಳ ಸಮಾಜಗಳಲ್ಲಿ ಸ್ವತ್ತು ಇದ್ದದ್ದು ಮುಖ್ಯವಾಗಿ ಬಳಕೆಗಾಗಿ, ಪ್ರದರ್ಶನಕ್ಕಾಗಿ. ಇತರರ ಮೇಲೆ ಹಿಡಿತ ಹಾಗೂ ಅಧಿಕಾರ ಪಡೆಯವ ಸಾಧನವಾಗಿ ಆಗ ಅದನ್ನು ಇಂದಿನಷ್ಟು ಹೆಚ್ಚಾಗಿ ಉಪಯೋಗಿಸುವ ಸಾಧ್ಯತೆ ಇರಲಿಲ್ಲ. ಸರಳ ಸಮಾಜಗಳಲ್ಲಿ ವ್ಯಕ್ತಿಗಳ ಜೀವನಮಟ್ಟ ಹೆಚ್ಚು ಕಡಿಮೆ ಸಮಾನವಾಗಿತ್ತು. ಬಂಡವಾಳ ಶೇಖರಣೆ ಹಾಗೂ ವಿನಿಯೋಗದ ಸಾಧ್ಯತೆಗಳು ಹೆಚ್ಚಿದಂತೆಲ್ಲ ಇದು ವ್ಯಕ್ತಿಗಳ ಮೇಲಣ ಹತೋಟಿ ಹಾಗೂ ಅಧಿಕಾರಿಗಳ ಸಾಧನವಾಯಿತು. ತತ್ಫಲವಾಗಿ ಸ್ವತ್ತಿನ ಒಡೆಯರಿಗೂ ಸ್ವತ್ತೇ ಇಲ್ಲದವರಿಗೂ ಅಂತರ ಹೆಚ್ಚಿತು. ಇಡೀ ಸಮಾಜದ ತಾರತಮ್ಯಗಳು ಸ್ವತ್ತಿನ ಒಡೆತನದ ಆಧಾರದ ಮೇಲೆ ರಚಿತವಾದುವು. ಸ್ವತ್ತಿನಿಂದ ರಾಜಕೀಯ ಪರಿಣಾಮಗಳೂ ಉಂಟಾದುವು. ಇದಕ್ಕೆ ಅನುಗುಣವಾಗಿ ಅಧಿಕಾರದ ಹಂಚಿಕೆಯಾಯಿತು. ಇಡೀ ಸಮಾಜದ ಸ್ವರೂಪವೇ ಇಂದು ಸ್ವತ್ತಿಗೆ ಅನುಗುಣವಾಗಿದೆ. ಉಳ್ಳವರು, ಇಲ್ಲದವರು-ಎಂಬ ವಿಶಿಷ್ಟ ವಿಂಗಡಣೆಯಾಗಿದೆ. ಸ್ವತ್ತಿನ ಒಡೆತನದ ಹಿಂದೆ ನೈತಿಕ ಪ್ರಶ್ನೆಗಳೂ ಅಡಗಿವೆ. ಆದಿಕಾಲದಲ್ಲಿ ಸ್ವತ್ತಿನ ಸ್ವರೂಪ: ಹಿಂದಿನ ಸಮಾಜಗಳಲ್ಲಿ ಸ್ವತ್ತಿಗೆ ಅದರ ಆಕ್ರಮಣ, ಉಪಯೋಗ ಹಾಗೂ ಒಡೆತನಗಳು ಆಧಾರವಾಗಿದ್ದವೆಂದು ಹಿಂದೆ ಹೇಳಿದೆ. ಅದನ್ನು ಉಪಯುಕ್ತವಾಗಿ ಮಾರ್ಪಡಿಸಿದವರು ಯಾರೋ, ಅದರ ಮೇಲೆ ಯಾರು ಕೆಲಸ ಮಾಡುತ್ತಿದ್ದರೋ ಅವರೇ ಅದಕ್ಕೆ ಒಡೆಯರಾಗುತ್ತಿದ್ದರು; ಇದು ನ್ಯಾಯವೆಂದೇ ಎನಿಸಿತ್ತು. ಒಂದು ಕುಟುಂಬವೋ ಕುಲವೋ ಸಾಮಾನ್ಯವಾಗಿ ಅದರ ಸ್ವಾಮ್ಯ ಹೊಂದಿತ್ತು. ಅದನ್ನು ಬಳಸುತ್ತಿತ್ತು. ಮಾಟ, ಮಂತ್ರ, ತಂತ್ರಗಳು ಮುಂತಾದ ಕೆಲವು ಸ್ವತ್ತುಗಳು ವ್ಯಕ್ತಿಗಳ ವಶದಲ್ಲಿದ್ದುವಾದರೂ ಉಳಿದದ್ದಕ್ಕೆ ಸಮಷ್ಟಿಯ ಒಡೆತನವೇ ಸಾಮಾನ್ಯವಾಗಿತ್ತು. ವೈಯಕ್ತಿಕ ಒಡೆತನವಿಲ್ಲದ ಸ್ವತ್ತಿನ ಸ್ವಾಮ್ಯಕ್ಕೆ ಬಳಕೆಯೇ ಆಧಾರವಾಗಿತ್ತು. ಹಿಂದೆಯೇ ಹೇಳಿದಂತೆ ಅದು ಅಂತಸ್ತಿನ ಚಿಹ್ನೆಯೂ ಆಗಿತ್ತು. ಪುರಾತನ ಸಮಾಜದಲ್ಲಿ ಬಳುವಳಿ ಕೊಡುವುದೂ ಅದನ್ನು ಹಿಂತಿರುಗಿಸುವುದೂ ಒಂದು ದೊಡ್ಡ ಕಲಾಪವೆನಿಸಿತ್ತು. ಸ್ವತ್ತಿನ ಶೇಖರಣೆಗಿಂತ ಅದರ ಬಳಕೆ ಹಾಗೂ ವಿತರಣೆಯೇ ಉದ್ದೇಶವಾದ್ದರಿಂದಲೇ ಈ ಬಗೆಯ ಪದ್ಧತಿಗಳಿದ್ದುವು. ಸ್ವತ್ತಿನ ಸ್ವರೂಪವೂ ಇದಕ್ಕೆ ಕಾರಣವಾಗಿತ್ತು. ಸ್ವತ್ತೆಲ್ಲ ಸಾಮಾನ್ಯವಾಗಿ ಅನುಭೋಗ ವಸ್ತುಗಳೇ ಆಗಿದ್ದುದರಿಂದ ಇದನ್ನು ಹಣರೂಪದ ಬಂಡವಾಳದಂತೆ ಅನಿರ್ದಿಷ್ಟಕಾಲ ಶೇಖರಿಸಿಡಲು ಸಾಧ್ಯವಾಗುತ್ತಿರಲಿಲ್ಲ. ಸ್ವತ್ತನ್ನು ಇತರರೊಂದಿಗೆ ಭೋಗಿಸಬೇಕೆಂಬ ಕಟ್ಟಳೆಗಳೂ ಇದ್ದುವು. ಈ ಕಾರಣದಿಂದ ಸ್ವತ್ತುಳ್ಳವರಿಗೂ ಇಲ್ಲದವರಿಗೂ ಅಂತರ ಕಡಿಮೆಯಾಗಿತ್ತು. ಸ್ವತ್ತಿನ ಸಮಷ್ಟಿ ಸ್ವಾಮ್ಯ ಹಾಗೂ ಅನುಭೋಗಗಳಿವೆಯೆಂದೇ ಭಾಸವಾಗುತ್ತಿತ್ತು. ಆದ್ದರಿಂದ ಸ್ವತ್ತಿನ ಒಡೆಯರ ವಿಚಾರದಲ್ಲಿ ಅಸೂಯೆ ದ್ವೇಷಗಳಿಗೆ ಅವಕಾಶ ಕಡಿಮೆಯಿತ್ತು.

ಸಾಮುದಾಯಿಕ ಸ್ವತ್ತು

[ಬದಲಾಯಿಸಿ]

ಆದಿ ಸಮಾಜಗಳಲ್ಲಿ ಬೆಳೆ ತೆಗೆಯಲು ಎಲ್ಲರೂ ನೆರವಾಗುತ್ತಿದ್ದರು. ಬೆಳೆದದ್ದು ಇಡಿಯ ಕುಟುಂಬಕ್ಕೋ ಕುಲಕ್ಕೋ ಸೇರಿದ್ದಾಗಿತ್ತು. ಅನಾಗರಿಕ ಜನಾಂಗಗಳಲ್ಲಿ ಹೇಗೋ ಹಾಗೆ ಆಧುನಿಕ ಸಮಾಜಗಳಲ್ಲೂ ನೆಲದ ಜಂಟಿ ಒಡೆತನವನ್ನು ಕಾಣಬಹುದು. ಇಪ್ಪತ್ತನೆಯ ಶತಮಾನದ ನಾಲ್ಕನೆಯ ದಶಕದ ಆದಿಕಾಲದಲ್ಲೂ ದಕ್ಷಿಣ ಸರ್ಬಿಯದಲ್ಲಿ ನೆಲದ ಸಾಮೂಹಿಕ ಒಡೆತನಕ್ಕೆ ಉದಾಹರಣೆಗಳನ್ನು ಕೊಡಬಹುದಿತ್ತು. ಸಾಧನಗಳನ್ನು ಒಟ್ಟು ಹಾಕುವುದೂ ಉತ್ಪನ್ನವನ್ನು ಹಂಚಿಕೊಳ್ಳುವುದೂ ಸಾಮಾನ್ಯವಾಗಿತ್ತು. ದನಗಾಹಿಗಳ ಸಮಾಜದಲ್ಲಿ ಗೋಮಾಳದ ದೃಷ್ಟಿಯಿಂದ ನೆಲಕ್ಕೆ ಪ್ರಾಮುಖ್ಯ. ಇಲ್ಲೂ ಇದರ ಸ್ವಾಮ್ಯವೂ ಬಳಕೆಯೂ ಸಾಮುದಾಯಿಕ. ಬೇಟೆಗಾರರು, ಬೆಸ್ತರು ಮುಂತಾದವರು ಸಂಘಟಿಸಿಕೊಂಡು ಒಂದು ಗೊತ್ತಾದ ಪ್ರದೇಶದ ಮೇಲೆ ತಮ್ಮ ಒಡೆತನ ಸ್ಥಾಪಿಸಿಕೊಳ್ಳುತ್ತಿದ್ದರು. ಇತರರು ಪ್ರವೇಶಿಸಿ ಅಲ್ಲಿನ ನಿಸರ್ಗದತ್ತ ವಸ್ತುಗಳ ಮೇಲೆ ತಮ್ಮ ಹಕ್ಕು ಸ್ಥಾಪಿಸದಂತೆ ತಡೆಯುತ್ತಿದ್ದರು. ಈ ಆದ್ಯ ಸಮಾಜಗಳಲ್ಲಿ ನೆಲದ ಫಲಾನುಭವದ ಮೇಲೆ ಸಾಮೂಹಿಕ ಒಡೆತನವಿತ್ತು. ಮತಶ್ರದ್ಧೆಯಿದ್ದ ಸಮಾಜಗಳು ತಮ್ಮ ಧಾರ್ಮಿಕ ಕರ್ಮಕಾಂಡಗಳ ಪುರಾಣಗಳ, ಹಾಗೂ ನರ್ತನ ಪದ್ಧತಿಗಳ ಮೇಲೆ ಒಡೆತನದ ಹಕ್ಕು ಪಡೆದಿದ್ದುವು. ಸ್ಥಿರಸ್ವತ್ತಿನ ಒಡೆತನ ಸಮಷ್ಟಿಯ ದಾಗಿತ್ತು. ಆಧುನಿಕ ಕಾಲದಲ್ಲೂ ಸರ್ವಜನೋಪಯೋಗಿ ಸ್ವತ್ತುಗಳು ಸರ್ವರ ಸ್ವತ್ತು. ಪ್ರಭುತ್ವಗಳು ಅವುಗಳ ಆಡಳಿತ ನಡೆಸುತ್ತವೆ. ಆದ್ಯ ಸಮಾಜಗಳಲ್ಲಿ ಸಾಮಾನ್ಯವಾಗಿ ಸ್ವತ್ತಿನ ಸಾಮುದಾಯಿಕ ಒಡೆತನವಿದ್ದರೂ ವೈಯಕ್ತಿಕ ಸ್ವಾಮ್ಯಕ್ಕೂ ಮೌನಸಮ್ಮತಿಯಿತ್ತು.

ವೈಯಕ್ತಿಕ ಸ್ವತ್ತು

[ಬದಲಾಯಿಸಿ]

ಸ್ವತ್ತು ಯಾರದೆಂದರೆ ಯಾರು ಅದನ್ನು ಚೆನ್ನಾಗಿ ಬಳಸುತ್ತಾರೊ ಅವರದು. ಸಾಧನ ಸಲಕರಣೆಗಳೂ ತಾಯಿತಿಗಳೂ ಹಾಡುಗಳೂ ಉಡಿಗೆಗಳೇ ಮುಂತಾದವೂ ಸ್ವತ್ತಿಗೆ ಸೇರಿದ್ದವು. ತನ್ನ ಒಡಹುಟ್ಟಿದವನ ಸಮ್ಮತಿಯಿಲ್ಲದೆ ಆತನ ಭೂಮಿಯಲ್ಲಿ ಬೇಟೆಯನ್ನೂ ಆಡಕೂಡದೆಂಬ ನಿರ್ಬಂಧ ಕೆಲವು ಸಂದರ್ಭಗಳಲ್ಲಿ ಇತ್ತೆಂಬುದು ಗೊತ್ತಾಗಿದೆ. ಹೆಚ್ಚು ಕಡಿಮೆ ಯಾವೊಬ್ಬ ಮನುಷ್ಯ ತಾನೇನನ್ನು ಮಾಡುತ್ತಾನೋ ಉಟ್ಟುತೊಡುತ್ತಾನೋ ಏನನ್ನು ಸಲಕರಣೆಯಾಗಿಯೋ ಆಯುಧವಾಗಿಯೋ ಉಪಯೋಗಿಸುತ್ತಾನೋ ಅವೆಲ್ಲ ಅವನ ಸ್ವತ್ತಾಗಿದ್ದುವು. ಇದು ಗಂಡಸರಿಗೂ ಹೆಂಗಸರಿಗೂ ಅನ್ವಯಿಸುತ್ತದೆ. ಈ ದೃಷ್ಟಿಯಲ್ಲಿ ವೈಯಕ್ತಿಕ ಸ್ವತ್ತು ಆದಿ ಸಮಾಜಗಳಲ್ಲಿ ಅನ್ಯಾದೃಶವಾಗಿದೆ. ಹೀಗೆ ವೈಯಕ್ತಿಕವಾಗಿ ಪಡೆದಿರುವ ಸ್ವತ್ತನ್ನು ತನಗಿಷ್ಟ ಬಂದ ರೀತಿಯಲ್ಲಿ ವಿತರಣೆ ಮಾಡುವ ಹಕ್ಕು ಅದರ ಮಾಲೀಕನಿಗುಂಟು. ಉದಾಹರಣೆಗೆ, ಅಂಥ ಸ್ವತ್ತನ್ನು ಆತ ತನ್ನ ಜ್ಯೇಷ್ಠ ಪುತ್ರನಿಗಾಗಲಿ, ಕನಿಷ್ಠ ಪುತ್ರನಿಗಾಗಲಿ ಅಥವಾ ಜ್ಯೇಷ್ಠ ಪುತ್ರಿಗಾಗಲಿ, ಕನಿಷ್ಠ ಪುತ್ರಿಗಾಗಲಿ, ಕೊಟ್ಟುಬಿಡಬಹುದು. ಚರಸ್ವತ್ತು ಸಾಮಾನ್ಯವಾಗಿ ವ್ಯಕ್ತಿಯ ವಶದಲ್ಲಿರುತ್ತಿತ್ತೇ ಹೊರತು ಸಮುದಾಯದ ವಶದಲ್ಲಿರುತ್ತಿರಲಿಲ್ಲ; ಆದ್ದರಿಂದ ಆತ ಅದನ್ನು ತನ್ನ ಇಷ್ಟಾನುಸಾರವಾಗಿ ವಿತರಿಸುತ್ತಿದ್ದ. ಆದ್ಯ ಸಮಾಜಗಳಲ್ಲಿ ಹೆಂಗಸರೂ ಗಂಡಸರೂ ವೈಯಕ್ತಿಕವಾಗಿ ಸ್ವತ್ತಿನ ಮಾಲೀಕರಾಗಿರುತ್ತಿದ್ದರು. ಹೀಗೆ ಮಾಲೀಕರಾಗುವ ಮೂಲೋದ್ದೇಶ ಅದನ್ನು ಬಳಸಿಕೊಳ್ಳುವುದೇ ಆಗಿತ್ತು; ಮತ್ತು ಅಂಥ ಸ್ವತ್ತು ಸಾಮಾಜಿಕ ಸ್ಥಾನಮಾನದ ಗುರುತಾಗಿತ್ತೇ ಹೊರತು ಬಲಪ್ರದರ್ಶಕವಾಗಿರಲಿಲ್ಲ. ವ್ಯಕ್ತಿಗಳು ಸ್ವತ್ತಿನ ಮಾಲೀಕರಾಗಿರುವುದೇ ಆಧುನಿಕ ಸಮಾಜಗಳ ವಿಶಿಷ್ಟಲಕ್ಷಣ. ಇಂಥ ಸ್ವಾಮಿತ್ವದಿಂದ ಆಧುನಿಕ ಸಮಾಜಗಳಲ್ಲಿ ಸಾಮಾಜಿಕ ಸಂಬಂಧಗಳು, ಕ್ರಮಬದ್ಧ ಶ್ರೇಣಿ, ನಿಯಂತ್ರಣ, ಅಧಿಕಾರ ಇತ್ಯಾದಿಗಳ ವಿಷಯದಲ್ಲಿ ದೂರಗಾಮಿಯಾದ ಪರಿಣಾಮ ಉಂಟಾಗುತ್ತದೆ. ಜೊತೆಗೆ ಪರಸ್ಪರ ವೈವಾಹಿಕ ಸಂಬಂಧಗಳಿಂದ ಆಸ್ತಿ ಮತ್ತು ಐಶ್ವರ್ಯಗಳು ಕೇವಲ ಕೆಲವು ಕುಟುಂಬಗಳಲ್ಲೇ ಶೇಖರಗೊಳ್ಳುವ ಪ್ರವೃತ್ತಿ ಹುಟ್ಟಿಕೊಳ್ಳುತ್ತದೆ. ಆದಿ ಸಮಾಜದಲ್ಲಿ ಇಂಥ ಪ್ರಸಂಗಕ್ಕೆ ಅವಕಾಶವಿರಲಿಲ್ಲ. ಆದಿ ಸಮಾಜಗಳ ಸ್ವತ್ತು ಸಾಮಾನ್ಯವಾಗಿ ಅಳಿದುಹೋಗುವಂಥದು. ಅದು ಬಿಟ್ಟು ಹೋಗುವಂಥದಾಗಿರಲಿಲ್ಲ. ಆದ್ದರಿಂದ ವಂಶಪಾರಂಪರ್ಯವಾಗಿ ಅನುಭವಿಸುವುದು ಸಾಧ್ಯವಾಗುತ್ತಿರಲಿಲ್ಲ. ಉದಾಹರಣೆಗೆ ಧಾನ್ಯ, ಸಾಕಿದ ಪ್ರಾಣಿ, ಸ್ವತ್ತಿನ ಶೇಖರಣೆಯಾದಾಗಲೇ ಅದನ್ನು ದೀರ್ಘಕಾಲ ಬಳಸಬಹುದಾಗಿತ್ತು ಮತ್ತು ಇತರರಿಗೆ ಕೊಡುವುದಕ್ಕಾಗಲಿ ವಿತರಿಸುವುದಕ್ಕಾಗಲಿ ಸಾಕಷ್ಟು ಸ್ವತ್ತು ಮಾಲೀಕನ ಹತ್ತಿರ ಉಳಿಯುತ್ತಲೂ ಇರಲಿಲ್ಲ. ಸ್ವತ್ತು ಅಧಿಕವಾಗಿ ಸೇರುತ್ತಾ ಬಂದ ಹಾಗೆಲ್ಲ ವಾರಸುದಾರರ ಪ್ರಶ್ನೆಗೆ ಹೆಚ್ಚು ಮಹತ್ತ್ವ ಬರುತ್ತದೆ. ಹೀಗಿದ್ದರೂ ಆದಿ ಸಮಾಜಗಳಲ್ಲಿಯೂ ಸ್ವತ್ತಿನ ಉತ್ತರಾಧಿಕಾರದ ವಿಷಯದಲ್ಲಿ ನಿರ್ದಿಷ್ಟ ಮನೋಭಾವಗಳಿದ್ದವೆಂಬುದನ್ನು ನೆನಪಿನಲ್ಲಿಡಬೇಕು.

ಉತ್ತರಾಧಿಕಾರದ ಶಾಸನ

[ಬದಲಾಯಿಸಿ]

ಸತ್ತ ಮನುಷ್ಯನೊಂದಿಗೆ ಆತನ ಸ್ವಂತ ಸ್ವತ್ತುಗಳನ್ನೆಲ್ಲ ಹೂಳುವುದರಿಂದ ಮೊದಲುಗೊಂಡು ಸುವ್ಯವಸ್ಥಿತವಾದ ಉತ್ತರಾಧಿಕಾರದ ನಿಯಮಗಳನ್ನು ಹಾಕಿಕೊಡುವ ವಿಧಾನಗಳವರೆಗೆ ಉತ್ತರಾಧಿಕಾರದ ನಿಯಮದ ವಿಕಾಸ ನಾನಾ ಅವಸ್ಥೆಗಳನ್ನು ಹೊಂದಿ ಬೆಳೆದುಬಂದಿದೆ. ಆದರೂ ಆದಿಮ ಸಮಾಜಗಳಲ್ಲಿ ಉತ್ತರಾಧಿಕಾರಿಗಳಿಗೆ ಬಿಟ್ಟುಹೋಗಲು ಗಣನೀಯ ಪ್ರಮಾಣದ ಸ್ವತ್ತೇ ಒಬ್ಬನ ಹತ್ತಿರ ಉಳಿಯುತ್ತಿರಲಿಲ್ಲ. ವಸ್ತುತಃ ಅಲ್ಲಿನ ಗುಂಪೇ ಆತನ ಉತ್ತರಾಧಿಕಾರಿ; ಅದು ಕುಟುಂಬವಾಗಿರಬಹುದು, ಕುಲವಾಗಿರಬಹುದು; ಪಂಗಡದ್ದೊಂದು ಭಾಗವಾಗಿರಬಹುದು ಅಥವಾ ಕುಲವೇ ಆಗಿರಬಹುದು. ಹೀಗಿದ್ದರೂ ವೈಯಕ್ತಿಕ ಸ್ವತ್ತನ್ನು ಅಂಗೀಕರಿಸಿದಾಗ ಅದರ ಮಾಲೀಕನಿಗೆ ಸಾಂಸ್ಕೃತಿಕ ಸಂಪ್ರದಾಯಗಳನ್ನು ಅಂಗೀಕರಿಸಿ ಅದನ್ನು ತನ್ನ ಇಷ್ಟ ಬಂದಂತೆ ವಿನಿಯೋಗಿಸಲು ಸ್ವಾತಂತ್ರ್ಯವಿತ್ತು. ಸ್ವತ್ತಿನ ವಿನಿಯೋಗದ ವಿಚಾರದಲ್ಲಿ ಈಗಿರುವ ಕಾನೂನನ್ನು ಹಿಂದಿನ ಕಾಲದ ಜನ ಎಂದಾದರೂ ಉಲಂಘಿಸುತ್ತಿದ್ದರೇ ಎಂಬ ವಿಷಯದಲ್ಲಿ ಕೆಲವು ಉದಾಹರಣೆಗಳು ಗೋಚರಕ್ಕೆ ಬಂದಿವೆ. ಸಾಧಾರಣವಾಗಿ ಯಾರೇ ಆಗಲಿ ಮಂತ್ರವಾದಿಗೆ ಯಾವುದನ್ನೂ ಕೊಡಬಾರದೆಂಬ ನಿಯಮವಿತ್ತು. ಏಕೆಂದರೆ, ಪ್ರತಿಯೊಬ್ಬನೂ ತನ್ನ ಸ್ವತ್ತನ್ನು ತನ್ನ ಕುಲದವರಿಗೆ ಮಾತ್ರ ಬಿಟ್ಟುಕೊಡಬೇಕಿತ್ತು. ಆದರೆ ಈ ನಿಯಮವನ್ನು ಬದಿಗೊತ್ತಲು ಉಪಾಯವೂ ಇತ್ತು. ಮಂತ್ರವಾದಿಯನ್ನು ಗಾಯಗೊಳಿಸಿದರೆ ಅವನು ಪರಿಹಾರ ಬಯಸಿ ದೂರು ಸಲ್ಲಿಸುತ್ತಿದ್ದ. ಪರಿಹಾರಕ್ಕಾಗಿ ಪಂಚಾಯತಿ ಹೂಡುವಂತೆ ಮಾಡಿದಾಗ ಅವನಿಗೆ ಪರಿಹಾರ ಕೊಟ್ಟ ಮೇಲೆ ಬಂಧುಬಳಗಗಳಿಗೆ ಹೆಚ್ಚು ಸ್ವತ್ತು ಉಳಿಯುತ್ತಿರಲಿಲ್ಲ.

ಸ್ವತ್ತಿನ ಮಾಲೀಕನಾಗುವುದು ಒಂದು ರೀತಿಯಾದರೆ ಅದರ ವಾರಸುದಾರನಾಗಿಯೇ ಹುಟ್ಟುವುದು ಮತ್ತೊಂದು ರೀತಿ. ಸ್ವತ್ತಿನ ಶೇಖರಣೆಯೂ ಅದು ವಂಶಾನುಗತವಾಗಿ ಮುಂದುವರಿಯುವುದೂ ಸಾಧ್ಯವಾದಾಗ ಅದು ಹೆಚ್ಚು ಹೆಚ್ಚಾಗಿ ಕೇಂದ್ರೀಕೃತವಾಗುತ್ತದೆ. ಅದರಿಂದ ಸಹಜವಾಗಿಯೇ ಸಾಮಾಜಿಕ ಸಂಬಂಧಗಳ ಮೇಲೆ ಪರಿಣಾಮಗಳಾಗುತ್ತವೆ. ಉತ್ತರಾಧಿಕಾರದ ನಿಯಮಗಳು ಒಂದು ಸಮಾಜದ ನೀತಿಸೂತ್ರಗಳನ್ನು ಪ್ರತಿಬಿಂಬಿಸುತ್ತವೆ. ಸತ್ತವರಿಗೆ ಸಂಬಂಧಪಟ್ಟ ಸ್ವಂತ ಚರಸ್ವತ್ತುಗಳನ್ನೆಲ್ಲ ಅವನೊಂದಿಗೆ ಹೂಳುವ ಸಂಪ್ರದಾಯಕ್ಕೆ ಕಾರಣವುಂಟು. ಹಾಗೆ ಮಾಡದಿದ್ದರೆ ಆತನ ಆತ್ಮ ಆ ಸ್ಥಳಕ್ಕೆ ಮರಳಿ ಬಂದೀತೆಂಬ ಭಯವಿತ್ತು. ಆದರೂ ಇಂಥ ವೈಯಕ್ತಿಕ ಸ್ವತ್ತುಗಳನ್ನು ಸಂಪುರ್ಣವಾಗಿ ನಾಶಪಡಿಸದಿದ್ದ ಸಂದರ್ಭಗಳೂ ಗೋಚರಕ್ಕೆ ಬಂದಿವೆ. ಆರ್ಥಿಕ ಹಿತದೃಷ್ಟಿಯಿಂದ ಉಪಯುಕ್ತ ಸಾಧನಗಳು, ಉಪಕರಣಗಳು ಮುಂತಾದವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದುದೂ ಉಂಟು. ಒಂದು ಗುಂಪಿನ ವಶದಲ್ಲಿರುವ ಸ್ವತ್ತಿನ ವಿಚಾರದಲ್ಲಿ ನಿಜವಾದ ವಂಶಪಾರಂಪರ್ಯವಾದ ಅಧಿಕಾರವೇ ಇಲ್ಲ. ಒಂದು ಸ್ವತ್ತಿಗೆ ಒಬ್ಬ ಒಡೆಯನಾಗಿದ್ದರೂ ಅದನ್ನು ಮತ್ತೊಬ್ಬನಿಗೆ ಬಿಟ್ಟುಕೊಡುವ ಸ್ವಾತಂತ್ರ್ಯಕ್ಕೆ ಕೆಲವು ಸಾಂಸ್ಕೃತಿಕ ಕಟ್ಟಳೆಗಳ ಮತ್ತು ಸಂಪ್ರದಾಯಗಳ ನಿರ್ಬಂಧವಿತ್ತು. ಒಬ್ಬಾತ ತನ್ನ ಸ್ವಂತ ಆಸ್ತಿಯನ್ನು ತನ್ನ ಇಚ್ಛೆಯಂತೆ ಕೊಡುವ ಹಾಗಿರಲಿಲ್ಲ. ಆತ ಸಂದರ್ಭಕ್ಕೆ ತಕ್ಕಂತೆ ತನ್ನ ಬಂಧುಗಳನ್ನಾಗಲಿ ತನ್ನ ಕುಲದವರನ್ನಾಗಲಿ ಆರಿಸಿಕೊಳ್ಳಬೇಕಾಗಿತ್ತು. ಜೊತೆಗೆ ಉತ್ತರಾಧಿಕಾರದ ವಿಚಾರದಲ್ಲಿ ಪವಿತ್ರ ಸ್ವತ್ತುಗಳನ್ನೂ ಲೌಕಿಕ ಸ್ವತ್ತುಗಳನ್ನೂ ಬೇರೆ ಬೇರೆ ವಿಂಗಡಿಸಲಾಗುತ್ತಿತ್ತು. ಮಾತೃವಂಶ ಮತ್ತು ಪಿತೃವಂಶಗಳ ನಿಯಮಗಳನ್ನೂ ಸಹ ಸ್ವಲ್ಪವೂ ಗೆರೆ ಮೀರದೆ ನಡೆಸಲಾಗುತ್ತಿತ್ತು. ಈ ತೆರದಲ್ಲಿ ಕೆಲವು ವೈಯಕ್ತಿಕ ಸ್ವತ್ತುಗಳು ಪಿತೃವಂಶದವರಿಗೇ ಸಲ್ಲುತ್ತ ಹೋಗುತ್ತಿದ್ದುವು. ಮಾತೃವಂಶದವರಿಗೆ ಸಲ್ಲುತ್ತ ಹೋಗುತ್ತಿದ್ದ ಸ್ವತ್ತುಗಳೂ ಇದ್ದುವು. ಜ್ಯೇಷ್ಠಾಧಿಕಾರವೋ ಅಥವಾ ಕನಿಷ್ಠಾಧಿಕಾರವೋ ಎಂಬುದನ್ನು ಪ್ರಚಲಿತ ನಿಯಮಗಳಿಗನುಸಾರವಾಗಿ ನಿರ್ಣಯಿಸಲಾಗುತ್ತಿತ್ತು.

ಜ್ಯೇಷ್ಠ ಸಂತಾನಾಧಿಕಾರ

[ಬದಲಾಯಿಸಿ]

ಹಿಂದಿನ ಕಾಲದಲ್ಲಿ ಹಿರಿಯ ಮಗನಿಗೆ ಸ್ವತ್ತನ್ನು ಬಿಟ್ಟುಕೊಡು ವುದು ಉತ್ತರಾಧಿಕಾರದ ಸ್ವತ್ತಿನ ವಾರಸುದಾರಿಕೆಯ ಮುಖ್ಯ ನಿಯಮವೆಂದು ಪರಿಗಣಿತ ವಾಗಿತ್ತು. ಒಂದು ಆಸ್ತಿ ಒಬ್ಬನಿಗೆ ಬರಬೇಕಾದರೆ ಜ್ಯೇಷ್ಠಾಧಿಕಾರ ಅನೇಕ ವೇಳೆ ಗಣನೆಗೆ ಬರುತ್ತದೆ. ಜ್ಯೇಷ್ಠಾಧಿಕಾರವೆಂದರೆ ಸಾಮಾನ್ಯವಾಗಿ ಆ ಕುಟುಂಬದ ಹಿರಿಯ ಗಂಡುಮಗನಿಗೆ ಪಿತ್ರಾರ್ಜಿತ ಸ್ವತ್ತಿನ ಸಂದಾಯ. ಆದರೆ ಇದರಲ್ಲಿ ಬದಲಾವಣೆಗಳೂ ಇರಬಹುದು. ಕೆಲವು ವಸ್ತುಗಳಿಗೆ ಹಿರಿಯ ಗಂಡುಮಗುವಿಗೆ ಅಧಿಕಾರವಿರುತ್ತದೆ. ಮತ್ತೆ ಕೆಲವು ಆಸ್ತಿಗಳು ಹಿರಿಯ ಮಗಳ ಸ್ವತ್ತು. ಪಿತೃವಂಶಾನುಕ್ರಮವನ್ನು ಅನುಸರಿಸುವ ಜುಲುಗಳಲ್ಲಿ ಹಿರಿಯ ಮಗನೇ ಮಿಕ್ಕೆಲ್ಲರಿಗಿಂತಲೂ ತಂದೆಯ ಸ್ವತ್ತಿಗೆ ಉತ್ತರಾಧಿಕಾರಿ. ವ್ಯವಸಾಯವನ್ನು ಅವಲಂಬಿಸಿ ಜೀವಿಸುವವರ ಪೈಕಿ ಜ್ಯೇಷ್ಠಾಧಿಕಾರಕ್ಕೆ ಮಾನ್ಯತೆಯಿರುವುದಕ್ಕೆ ಕಾರಣವಿದೆ. ಬೇಸಾಯದ ನೆಲವನ್ನು ಛಿದ್ರಗೊಳಿಸದೆ ಅದನ್ನು ಇಡಿಯಾಗಿ ಉಳಿಸುವುದು ಸಾಧ್ಯ. ಇದರಿಂದ ಬೇಸಾಯ ಲಾಭಪ್ರದವಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ಜ್ಯೇಷ್ಠ ಪುತ್ರನಿಗೆ ತಂದೆಯ ಅಥವಾ ತಾಯಿಯ ಜವಾಬ್ದಾರಿಯೆಲ್ಲ ಪ್ರಾಪ್ತವಾಗುತ್ತದೆ. ಆಳರಸರ ಕುಟುಂಬಗಳ ಲ್ಲಿಯೂ ಸಹ ಜ್ಯೇಷ್ಠಾಧಿಕಾರವಿತ್ತು.

ಕನಿಷ್ಠ ಸಂತಾನಾಧಿಕಾರ

[ಬದಲಾಯಿಸಿ]

ಜ್ಯೇಷ್ಠಾಧಿಕಾರಕ್ಕೆ ಸಂಪುರ್ಣ ವಿರುದ್ಧವಾದ ಈ ಪದ್ಧತಿಯಲ್ಲಿ ಕನಿಷ್ಠ ಪುತ್ರ ಅಥವಾ ಪುತ್ರಿಗೆ ಉತ್ತರಾಧಿಕಾರವಿರುತ್ತದೆ. ಕನಿಷ್ಠ ಪ್ರಾಶಸ್ತ್ಯ ಇಂಗ್ಲೆಂಡಿನ ಅನೇಕ ಭಾಗಗಳಲ್ಲೂ ಜರ್ಮನಿ, ರಷ್ಯ ಮತ್ತು ಹಂಗರಿಯ ಕೆಲವು ಭಾಗಗಳಲ್ಲೂ ಆಚರಣೆಯಲ್ಲಿತ್ತು. ಏಷ್ಯದಲ್ಲಿ ಇದು ತುರ್ಕಿ ಮತ್ತು ಮಂಗೋಲಿಯನ್ ಕುಲಗಳ ಮುಖ್ಯ ಲಕ್ಷಣವಾಗಿತ್ತು. ಭಾರತ, ಇಂಡೋಚೀನ ಮುಂತಾದ ಕಡೆಗಳಲ್ಲೂ ಇದು ಆಚರಣೆಯಲ್ಲಿತ್ತು. ಆದರೆ ಜ್ಯೇಷ್ಠಸಂತಾನಕ್ಕೆ ಕೊಡುವಷ್ಟು ಹೆಚ್ಚಿನ ಪ್ರಾಶಸ್ತ್ಯವನ್ನು ಕನಿಷ್ಠಸಂತಾನಕ್ಕೆ ಕೊಟ್ಟಿರುವ ಸಂದರ್ಭಗಳು ಕಡಿಮೆ. ಹಿರಿಯ ಮಕ್ಕಳೆಲ್ಲರೂ ಚದರಿಹೋಗಿ ಕಡೆಯ ಸಂತಾನ ತಂದೆ ತಾಯಿಗಳ ಜೊತೆಯಲ್ಲಿಯೇ ಹೆಚ್ಚು ಕಾಲ ಉಳಿದುಕೊಂಡ ಸಂದರ್ಭಗಳಲ್ಲಿ ಮಾತ್ರ ಕನಿಷ್ಠ ಸಂತಾನಕ್ಕೆ ಉತ್ತರಾಧಿಕಾರ ದೊರಕುತ್ತಿತ್ತು.

ಮಿತಾಕ್ಷರ ನ್ಯಾಯರೀತಿಯಾಗಿ ಉತ್ತರಾಧಿಕಾರ ನಿರ್ಣಯ

[ಬದಲಾಯಿಸಿ]

ಮೇಲೆ ಹೇಳಿದ ಆಸ್ತಿಯ ಉತ್ತರಾಧಿಕಾರದ ಚರ್ಚೆಯೆಲ್ಲ ಮುಖ್ಯವಾಗಿ ಸಾಧಾರಣ ರೀತಿಯಲ್ಲಿ ನಡೆದಿದೆ. ಭಾರತದಲ್ಲಿ ಪ್ರಚಲಿತವಾಗಿರುವ ಮತ್ತು ಸಂಪ್ರದಾಯಗಳ ಬಲದಿಂದ ಸುಪುಷ್ಟವಾಗಿರುವ ಉತ್ತರಾಧಿಕಾರದ ಶ್ರೇಷ್ಠವ್ಯವಸ್ಥೆಗಳನ್ನು ಕುರಿತು ಸ್ವಲ್ಪ ಚರ್ಚಿಸುವುದು ಈಗ ಯುಕ್ತವಾಗಿದೆ. ಭಾರತದ ನ್ಯಾಯಾಲಯಗಳಲ್ಲಿ ದತ್ತು ಸ್ವೀಕಾರ, ಉತ್ತರಾಧಿಕಾರ, ಆಸ್ತಿವಿಭಾಗ ಅಧಿಕಾರ ಮುಂತಾದ ವಿಷಯಗಳಲ್ಲಿ ಬಂಗಾಳವನ್ನು ಬಿಟ್ಟು ಎಲ್ಲ ಭಾಗಗಳಲ್ಲೂ ಮಿತಾಕ್ಷರ ಪದ್ಧತಿಯೇ ಪ್ರಮಾಣವಾಗಿದೆ. ಬಂಗಾಳದಲ್ಲಿ ಮಾತ್ರ ದಾಯಭಾಗ ಪದ್ಧತಿಯೇ ಪ್ರಮಾಣ (ಮಿತಾಕ್ಷರ ದಾಯಭಾಗ). ಉತ್ತರಾಧಿಕಾರವನ್ನು ನಿರ್ಣಯಿಸುವ ವಿಚಾರದಲ್ಲಿ ಮಿತಾಕ್ಷರ ಪದ್ಧತಿ ಪಿಂಡ ಹಾಗೂ ಹತ್ತಿರದ ರಕ್ತಸಂಬಂಧಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡುತ್ತದೆ. ಒಬ್ಬ ವ್ಯಕ್ತಿಯ ದೇಹ ಕಣಗಳಲ್ಲಿ ಸಮಭಾಗಿಗಳಾಗಿರುವ ರಕ್ತಸಂಬಂಧಿಗಳೇ ಇಲ್ಲಿ ಮುಖ್ಯ ಉತ್ತರಾಧಿಕಾರದ ಅನುಕ್ರಮವನ್ನು ನಿರ್ಧರಿಸಲು ರಕ್ತಸಂಬಂಧವೇ ಆಧಾರ. ಪುತ್ರ ಪೌತ್ರ ಪ್ರಪೌತ್ರರೆಲ್ಲರೂ ಪಿತ್ರಾರ್ಜಿತ ಸ್ವತ್ತಿಗೆ ಸಂಯುಕ್ತವಾಗಿ ಅಧಿಕಾರಿಗಳು. ಇದು ಅವರ ಆಜನ್ಮಸಿದ್ಧ ಹಕ್ಕು. ಮಿಕ್ಕವರಿಗೆ ಈ ಹಕ್ಕು ಇರುವುದಿಲ್ಲ. ಹುಟ್ಟಿದಂದಿನಿಂದಲೇ ಮಗನಿಗೆ ತಂದೆಯೊಂದಿಗೆ ಈ ಅಧಿಕಾರವಿರುತ್ತದೆ. ಆದರೆ ತಂದೆಯ ಸ್ವಯಾರ್ಜಿತ ಸ್ವತ್ತನ್ನು ಕೇಳಲು ಮಗನಿಗೆ ಹಕ್ಕಿಲ್ಲ.

ದಾಯಭಾಗ ರೀತಿಯಾಗಿ ಉತ್ತರಾಧಿಕಾರದ ನಿರ್ಣಯ: ಹಿಂದೂ ನ್ಯಾಯಶಾಸ್ತ್ರದ ವಿಷಯಗಳಾದ ಉತ್ತರಾಧಿಕಾರ, ವಿಭಾಗ, ಸ್ತ್ರೀಧನ ಮುಂತಾದುವುಗಳಲ್ಲಿ ದಾಯಭಾಗ ಪದ್ಧತಿ ಇನ್ನೊಂದು. ಬಂಗಾಳದ ನ್ಯಾಯಾಲಯಗಳಲ್ಲಿ ಇದೇ ಉಚ್ಚತಮ ಪ್ರಮಾಣಗ್ರಂಥ. ದಾಯಭಾಗದಲ್ಲಿ ಗಂಡುಮಕ್ಕಳಿಗೆ ತಮ್ಮ ಹುಟ್ಟಿನಿಂದಲೇ ಪುರ್ವಾರ್ಜಿತ ಆಸ್ತಿಯಲ್ಲಿ ಹಕ್ಕು ಬರುವುದಿಲ್ಲ, ತಮ್ಮ ತಂದೆಯ ಹಕ್ಕು ಆತ ಮೃತನಾಗುವುದರಿಂದಲೋ ಪತಿತನಾಗುವುದರಿಂದಲೋ ಅಥವಾ ಸನ್ಯಾಸಿಯಾಗುವುದರಿಂದಲೋ ಅವರಿಗೆ ದೊರಕುತ್ತದೆ. ಆಮೇಲೆ ಮಕ್ಕಳು ಆಸ್ತಿಯನ್ನು ಹಂಚಿಕೊಳ್ಳಬಹುದು. ತಂದೆ ಇಷ್ಟಪಟ್ಟರೆ ತಂದೆಗೂ ಮಕ್ಕಳಿಗೂ ಆಸ್ತಿ ವಿಭಾಗವಾಗಬಹುದು. ಅಣ್ಣತಮ್ಮಂದಿರು ಒಟ್ಟಿಗೆ ಇರುವಾಗಲೂ ಅವರಲ್ಲೊಬ್ಬ ಗತಿಸಿದರೆ ಅವನ ಹೆಂಡತಿಗೆ ಆತನ ಪಾಲು ಬರುತ್ತದೆ. ಸತ್ತವನ ಆತ್ಮಕ್ಕೆ ಪಿಂಡಪ್ರದಾನಮಾಡಿ ತೃಪ್ತಿಪಡಿಸುವವನಿಗೆ ಮೃತನ ಸ್ವತ್ತು ದೊರೆಯಬೇಕೆಂದು ನಿಯತವಾಗಿದೆ; ಮಿತಾಕ್ಷರದಲ್ಲಿರುವ ಹಾಗೆ ರಕ್ತಸಂಬಂಧದಿಂದಲೇ ಈ ಹಕ್ಕು ಇಲ್ಲ. ಈ ಹೊಸ ಸೂತ್ರದ ಕ್ಷಿಪ್ರ ಪರಿಣಾಮ ಏನಾಯಿತೆಂದರೆ, ಮಿತಾಕ್ಷರ ಮತದ ರೀತಿಯಾಗಿ ಜ್ಞಾತಿಗಳೆಂದು ಪರಿಣಿತರಾಗಿದ್ದು ಸ್ವತ್ತಿಗೆ ಅಧಿಕಾರದಿಂದ ಹೊರಗಿದ್ದವರೂ ಪಾಲುದಾರರ ಪಟ್ಟಿಯಲ್ಲಿ ಸೇರಿಕೊಳ್ಳುವಂತಾಯಿತು. ಕೊನೆಯ ಮಾಲೀಕನ ಇಷ್ಟದ ಪ್ರಕಾರ ಆಸ್ತಿಯ ಹಕ್ಕುದಾರಿಕೆ ಪ್ರಾಪ್ತವಾಗುತ್ತದೆ. ಮಿತಾಕ್ಷರದಲ್ಲಿರುವ ಹಾಗೆ ಸಪ್ರತಿಬಂಧದಾಯಕ್ಕೂ ಅಪ್ರತಿಬಂಧದಾಯಕ್ಕೂ ಇಲ್ಲಿ ಯಾವ ವ್ಯತ್ಯಾಸವೂ ಇಲ್ಲ. ತನ್ನ ಆಸ್ತಿಯನ್ನು ಇತರರಿಗೆ ಹಂಚಲು ತಂದೆಗೆ ಹಕ್ಕುಂಟು. ಪಾಲಾಗಬೇಕೆಂದು ಕೋರಲು ಮಗನಿಗೆ ಹಕ್ಕಿಲ್ಲ; ಜೀವನಾಂಶ ಕೇಳುವ ಹಕ್ಕೂ ಇಲ್ಲ.

ಅಂತೂ ಸ್ವತ್ತೆಂಬುದು ಒಂದು ಸಾಮಾಜಿಕ ವ್ಯವಸ್ಥೆಯೆಂಬ ದೃಷ್ಟಿಯಿಂದ ಇಲ್ಲಿ ಚರ್ಚಿಸಲಾಗಿದೆ. ಸಾಮಾಜಿಕ ಸಂಬಂಧಗಳೇ ಬಹಳ ಮುಖ್ಯವೆಂಬುದು ಸಹಜವೇ ಆಗಿದೆ. ಸಾಮಾಜಿಕ ಸಂಬಂಧಗಳ ದೃಷ್ಟಿಯಲ್ಲಿ ಸ್ವತ್ತಿನ ಪಾತ್ರವನ್ನೇ ಅಲ್ಲದೆ ಸ್ವತ್ತನ್ನು ಕುರಿತ ಭಾವನೆಗಳಲ್ಲಾಗಿರುವ ವ್ಯತ್ಯಾಸಗಳಿಗೂ ಸಾಮಾಜಿಕ ವ್ಯವಸ್ಥೆಗಳಿಗೂ ಇರುವ ಕಾರ್ಯಕಾರಣ ಸಂಬಂಧಗಳನ್ನು ಇಲ್ಲಿ ವಿವೇಚಿಸಿದ್ದಾಗಿದೆ. ಅಂತೂ ಒಟ್ಟಿನಲ್ಲಿ ಹೇಳಬಹುದಾದ ವಿಚಾರವಿಷ್ಟು:

  1. ಸ್ವತ್ತು ಒಂದು ಸಾಮಾಜಿಕ ವ್ಯವಸ್ಥೆ. ಸಾಮಾಜಿಕ ಸಂಬಂಧಗಳಿಗೆ ಅನುಸಾರವಾಗಿ ಸ್ವತ್ತಿನ ಕಲ್ಪನೆ ಮಾರ್ಪಟ್ಟಿದೆ. ಇವೆರಡಕ್ಕೂ ಕಾರ್ಯಕಾರಣಸಂಬಂಧವಿದೆ.
  2. ಆದ್ಯ ಸಮಾಜಗಳಲ್ಲಿ ಸ್ವತ್ತಿನ ಸಾಮೂಹಿಕ ಒಡೆತನವೇ ಸಾಮಾನ್ಯವಾಗಿತ್ತು.
  3. ಸ್ವತ್ತಿನ ವೈಯಕ್ತಿಕ ಒಡೆತನಕ್ಕೆ ಹೆಚ್ಚಿನ ಪ್ರಾಶಸ್ತ್ಯವಿರುವ ಈಗಿನ ಕಾಲದಲ್ಲಿ ಇದರ ಪರಿಣಾಮವಾಗಿ ಅಸಮತೆ, ಅನ್ಯಾಯ, ಅಧಿಕಾರದ ಕೇಂದ್ರೀಕರಣ ಮುಂತಾದ ಸಮಸ್ಯೆಗಳು ಉದ್ಭವವಾಗಿವೆ. ಆಧುನಿಕ ಸಮಾಜಗಳಲ್ಲಿ ಇತರರ ಮೇಲೆ ಅಧಿಕಾರ ಹಾಗೂ ಹತೋಟಿ ಹೊಂದಲು ಸ್ವತ್ತು ಒಂದು ಸಾಧನವಾಗಿದೆ.
  4. ಸ್ವತ್ತನ್ನು ಶೇಖರಿಸುವುದೂ ಉತ್ತರಾಧಿಕಾರಿಗಳಿಗೆ ಬಿಟ್ಟುಕೊಡುವುದೂ ಸಾಧ್ಯವಾಗಿರುವುದರಿಂದ ಈ ಸಮಸ್ಯೆಗಳು ಪ್ರಧಾನವಾಗಿವೆ.
  5. ತತ್ಫಲವಾಗಿ ಸ್ವತ್ತು ಉಳ್ಳವರು, ಸ್ವತ್ತು ಇಲ್ಲದವರು ಎಂಬ ವರ್ಗಗಳು ಏರ್ಪಟ್ಟಿವೆ. ರಾಜಕೀಯವಾಗಿಯೂ ಇದರ ಪರಿಣಾಮಗಳುಂಟಾಗಿವೆ. ಕಾರ್ಲ್ಮಾಕ್ರ್್ಸ (ಮಾಕ್ರ್್ಸ,-ಕಾರ್ಲ್) ತನ್ನ ವರ್ಗಸಿದ್ಧಾಂತದಲ್ಲಿ ಇದನ್ನೆಲ್ಲಾ ಬಹು ಯುಕ್ತಿಯುಕ್ತವಾಗಿ ವಿವೇಚಿಸಿದ್ದಾನೆ.
  6. ಖಾಸಗಿ ಒಡೆತನ ಹಾಗೂ ವರ್ಗಾವಣೆಯ ಹಕ್ಕಿನ ಫಲವಾಗಿ ಸ್ವತ್ತಿನ ಅತಿಯಾದ ಕೇಂದ್ರೀಕರಣವಾಗುವುದನ್ನು ತಪ್ಪಿಸಲು ಆಧುನಿಕ ಸರ್ಕಾರಗಳು ಮಧ್ಯಪ್ರವೇಶ ಮಾಡುತ್ತಿವೆ. ಸೂಕ್ತವಾದ ತೆರಿಗೆಯ ಪದ್ಧತಿಯೂ (ತೆರಿಗೆ) ಉತ್ತರಾಧಿಕಾರ ಸಂಬಂಧವಾದ ಶಾಸನಗಳೂ (ಉತ್ತರಾಧಿಕಾರ) ಈ ದೃಷ್ಟಿಯಿಂದ ರಚಿತವಾಗಿವೆ. ಸ್ವತ್ತಿನ ಕೇಂದ್ರೀಕರಣದಿಂದಾಗಿ ಅದರ ಒಡೆಯನಿಗೆ ಹೆಚ್ಚು ಧಾರಣಶಕ್ತಿಯಿರುವುದರಿಂದ, ಆ ಶಕ್ತಿಯಿಲ್ಲದವರೊಂದಿಗೆ ನಡೆಸುವ ವ್ಯವಹಾರಗಳಲ್ಲಿ ಅವನದೇ ಮೇಲುಗೈ ಆಗಿರುವ ಸಂಭವವುಂಟು. ಕರಾರಿನ ಷರತ್ತುಗಳು ಇತರರಿಗೆ ಎಷ್ಟೇ ಕಠಿಣವಾಗಿದ್ದರೂ ಅವರಿಗೆ ಧಾರಣಶಕ್ತಿಯಿಲ್ಲದ್ದರಿಂದ ಆ ಷರತ್ತುಗಳಿಗೆ ಅವರು ಒಪ್ಪಬೇಕಾಗುತ್ತದೆ. ಆದ್ದರಿಂದಲೇ ಆಧುನಿಕ ಸಮಾಜಗಳಲ್ಲಿ ಸ್ವತ್ತು ಅಗಾಧವಾಗಿಯೂ ಅಪಾಯಕಾರಿಯಾಗಿಯೂ ಬೆಳೆದಿದೆ. ಆಸ್ತಿಯಿಲ್ಲದವರ ಹಿತರಕ್ಷಿಸುವ ಉದ್ದೇಶದಿಂದ ಆಸ್ತಿಯನ್ನು ಹದ್ದಿನಲ್ಲಿಡಲು ಆಧುನಿಕ ಸರ್ಕಾರಗಳು ನಾನಾಕ್ರಮಗಳನ್ನು ಜಾರಿಗೆ ತಂದಿವೆ.

ಉಲ್ಲೇಖನಗಳು

[ಬದಲಾಯಿಸಿ]
  1. Clarke, Alison; Paul Kohler (2005). Property law: commentary and materials. Cambridge University Press. p. 207. ISBN 9780521614894.
  2. Dyckman, Intermediate Accounting, Revised Ed. (Homewood IL: Irwin, Inc. 1992),195.
  3. Legal-dictionary.thefreedictionary.com
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಆಸ್ತಿ&oldid=1177389" ಇಂದ ಪಡೆಯಲ್ಪಟ್ಟಿದೆ