ವಿಷಯಕ್ಕೆ ಹೋಗು

೧೦೦೮ ಪಾರ್ಶ್ವನಾಥ ಸ್ವಾಮಿ ಬಸದಿ, ಕಾಯ್ಕಿಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ ಬಸದಿ ಕರಾವಳಿಯ ಪ್ರಾಚೀನ ಬಸದಿಗಳಲ್ಲೊಂದು.

ಈ ಬಸದಿಯು ಭಟ್ಕಳ ತಾಲೂಕು ಕಾಯ್ಕಿಣಿ ಗ್ರಾಮದ ಚಿಕ್ಕ ಪೇಟೆಯಲ್ಲಿ ಮಂಗಳೂರು - ಕಾರವಾರ ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿದೆ . ಇದರ ಎದುರಲ್ಲಿ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ ಬಸದಿ ಎಂದು ಮೂರು ( ಕನ್ನಡ , ಇಂಗ್ಲೀಷ್ , ದೇವನಾಗರಿ ) ಲಿಪಿಯಲ್ಲಿ ಬರೆದ ಹಲಗೆ ಹಾಗೂ ಅದರ ಮೇಲ್ಗಡೆ ಅರಳುತ್ತಿರುವ ಕಮಲದ ಸಿಮೆಂಟ್ ಆಕೃತಿ ಇರುವ ಸ್ವಾಗತ ಗೋಪುರವಿದೆ. ಇದು ಭಟ್ಕಳ ತಾಲೂಕು ಕೇಂದ್ರದಿಂದ ೧೨ ಕಿ.ಮೀ. ದೂರದಲ್ಲಿದೆ.

ಕಲಾಕೃತಿ

[ಬದಲಾಯಿಸಿ]

ಒಳಗಿರುವ ನಿವೇಶನದಲ್ಲಿ ಈಗ ಜೀಣೋದ್ಧಾರಗೊಂಡಿರುವ ಬಸದಿಯಿದೆ. ದ್ವಾರದ ಬಳಿಯಲ್ಲಿ ಹಸ್ತ ಮತ್ತು ಸ್ವಸ್ತಿಕ ಚಿಹ್ನೆ ಇರುವ ಜೈನ ಲಾಂಛನವಿದೆ. []

ದೇವಾಲಯದ ವಿಶೇಷ ವಿನ್ಯಾಸ, ಆಚರಣೆಗಳು

[ಬದಲಾಯಿಸಿ]

ಬಸದಿಯು ಸ್ವಾದಿ ಮಠಕ್ಕೆ ಸೇರಿರುತ್ತದೆ. ಇದು ಶಿಲಾಮಯ ಅಲ್ಲ. ೫ ಶತಮಾನದಷ್ಟು ಹಿಂದಿನದು ಎಂದು ಹೇಳುತ್ತಾರೆ .ಇತ್ತೀಚೆಗೆ ಪಂಚಕಲ್ಯಾಣ ನಡೆದಿದೆ. ಬಸದಿಗೆ ಮೇಗಿನ ನೆಲೆ ಇಲ್ಲ. ಆದ್ದರಿಂದ ಮೂಲನಾಯಕ ಶ್ರೀ ೧೦೦೮ ಪಾರ್ಶ್ವನಾಥ ತೀರ್ಥಂಕರರ ಪೂಜೆ ಮಾತ್ರ ನಡೆಯುತ್ತಿದೆ. ಬಸದಿಯಲ್ಲಿ ಶ್ರೀ ಪದ್ಮಾವತಿ ಅಮ್ಮನವರ ಅಥವ ಬ್ರಹ್ಮದೇವರ ಮೂರ್ತಿಗಳು ಇಲ್ಲ. ಇಲ್ಲಿ ಅಭಿಷೇಕ, ಪೂಜಾದಿಗಳನ್ನು ಮಾಡಿಸಲಾಗುತ್ತದೆ. ಗರ್ಭಗೃಹದ ಎದುರಲ್ಲಿ ಸಿಮೆಂಟಿನಿಂದ ಮಾಡಿರುವ ಎರಡು ದ್ವಾರಪಾಲಕರ ಮೂರ್ತಿಗಳಿವೆ. ಹಾಗೂ ಗೋಡೆಯಲ್ಲಿ ಸಿಮೆಂಟಿನಿಂದ ರಚಿಸಿರುವ ಜಾಲಂದ್ರವಿದೆ. ಚಿಕ್ಕದಾಗಿರುವ ಒಂದು ಪುರಾತನ ಮಂಟಪವಿದೆ. ಅಲ್ಲಿಂದ ನೇರವಾಗಿ ಜಿನೇಶ್ವರನ ದರ್ಶನ ಪಡೆಯಬಹುದು. ಇಲ್ಲಿ ಬೇರೆಯೇ ಆದ ನಾಲ್ಕು ಕಂಬಗಳ ಮಂಟಪವಿಲ್ಲ. ಇಲ್ಲಿಯ ಗೋಡೆಯ ಮೇಲಾಗಲೀ , ಕಂಬಗಳ ಮೇಲಾಗಲೀ ಯಾವುದೇ ಚಿತ್ರ ಶಿಲ್ಪ ಕಲಾಕೃತಿಯಾಗಳು ಇಲ್ಲ. ಇಲ್ಲಿಂದ ಮುಂದೆ ಹೋದಾಗ ಗಂಧಕುಟಿಯಿಲ್ಲದೆ, ಗರ್ಭಗೃಹವೇ ಸಿಗುತ್ತದೆ. ಆದರೆ ಪ್ರಾರ್ಥನಾ ಮಂಟಪದ ಪ್ರವೇಶದ್ವಾರದ ಮೇಲ್ಗಡೆ ಸಿಮೆಂಟಿನ ಅಕ್ಷರಗಳಲ್ಲಿ “ ಭಗವಾನ್ ೧೦೦೮ ಶ್ರೀ ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ ಬಸದಿ, ಕಾಯ್ಕಿಣಿ ” ಎಂದು ಬರೆಯಲಾಗಿದೆ.

ಒಳಾಂಗಣ

[ಬದಲಾಯಿಸಿ]

ಶ್ರೀ ಪಾರ್ಶ್ವನಾಥ ಸ್ವಾಮಿಯ ಮೂಲನಾಯಕ ವಿಗ್ರಹವು ಖಡ್ಗಾಸನ ಭಂಗಿಯಲ್ಲಿ ಕರಿಶಿಲೆಯಿಂದ ಮಾಡಲ್ಪಟ್ಟಿದೆ. ಸುಮಾರು ಮೂರು ಅಡಿ ಎತ್ತರವಿದೆ. ಐದು ಹೆಡೆಗಳಿರುವ ಧರಣೇಂದ್ರ ಶಿರೋಭಾಗದ ಮೇಲಿದ್ದು ರಕ್ಷಣೆ ಕೊಡುತ್ತಿದ್ದಾನೆ. ಉಳಿದ ಭಾಗವು ಸ್ವಾಮಿಯ ಹಿಂಬದಿ ಸುರುಳಿಯಾಗಿ ಚಾಚಿಕೊಂಡಿದೆ. ಅದರ ಮೇಲ್ಗಡೆ ಮೂರು ಅಂತಸ್ತಿನ ಆತಪತ್ರವಿದ್ದು, ಅದಕ್ಕಿಂತ ಮೇಲ್ಗಡೆ ಅಗಲವಾಗಿ ನಾಲಗೆ ಚಾಚಿರುವ ಸಿಂಹಲಲಾಟವಿದೆ. ಅಲ್ಲಿಯವರೆಗೆ, ಕೆಳಗಿರುವ ಮಕರದ ಬಾಯಿಂದ ಹೊರಟಿರುವ ತೋರಣವು ಸುರುಳಿ ಸುರುಳಿಯಾಗಿ ಹರಡಿದೆ. ಅದರ ಕೆಳಗಡೆ ಧರಣೇಂದ್ರ-ಪದ್ಮಾವತಿ ಯಕ್ಷ-ಯಕ್ಷಿಯರನ್ನು ನಿಂತುಕೊಂಡಿರುವ ಭಂಗಿಯಲ್ಲಿ ತೋರಿಸಲಾಗಿದೆ. ಕೆಳಗಿರುವ ಸಿಂಹ ಪೀಠದಲ್ಲಿ ಸಿಂಹದ ಆಕೃತಿಯು ಬಹಳ ಪ್ರಬಲವಾಗಿ ಕಾಣುತ್ತದೆ. ಸ್ವಾಮಿಗೆ ಪ್ರತಿದಿನ ಜಲಾಭಿಷೇಕ, ಪರ್ವ ದಿನಗಳಲ್ಲಿ ಪಂಚಾಮೃತಾಭಿಷೇಕ ಮತ್ತು ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಗರ್ಭಗೃಹಕ್ಕೆ ಬಲವಾದ ಬಾಗಿಲನ್ನು ಜೋಡಿಸಲಾಗಿದೆ. ಬಸದಿಯ ಅಂಗಳದಲ್ಲಿ ಎಡ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಅಲ್ಲಿ ಕ್ಷೇತ್ರಪಾಲನ ಮೂರ್ತಿ ಮತ್ತು ತ್ರಿಶೂಲ, ನಾಗರಕಲ್ಲು ಇತ್ಯಾದಿಗಳನ್ನು ಇಡಲಾಗಿದೆ. ಇವೆಲ್ಲವನ್ನು ಒಂದು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಬಸದಿಯ ಸುತ್ತಲೂ ಕೆಂಪುಕಲ್ಲಿನಿಂದ ಕಟ್ಟಿದ ಪ್ರಾಕಾರಗೋಡೆ ಇದೆ.

ಈ ಬಸದಿಯ ಪರಿಸರದಲ್ಲಿ ಹಲವಾರು ಶಿಲಾಶಾಸನ , ವೀರಗಲ್ಲು ಮತ್ತು ಮಾಸ್ತಿಗಲ್ಲುಗಳನ್ನು ಸಂರಕ್ಷಿಸಿ ಇಡಲಾಗಿದೆ. ಇವುಗಳು ಏನು? ಇವುಗಳಲ್ಲಿ ಏನಿದೆ? ಎಂಬ ಕುತೂಹಲ ನಮ್ಮಲ್ಲಿ ಸಹಜವಾಗಿ ಮೂಡುವುದರಿಂದ ಇವುಗಳ ಕುರಿತು ಇಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗುತ್ತದೆ. ಇವುಗಳಲ್ಲಿ ಒಂದು ಶಿಲಾಶಾಸನವು ಕ್ರಿ.ಶ. ೧೪೧೬ ನೇ ಇಸವಿಯದ್ದಾಗಿದ್ದು ಕಾಯ್ಕಿಣಿಯು ವಿಜಯನಗರದ ಆಳ್ವಿಕೆಯಲ್ಲಿ ಒಂದು ' ವಿಷಯ ' ಎಂಬ ಆಡಳಿತ ವಿಭಾಗವಾಗಿತ್ತೆಂದು ತಿಳಿಸುತ್ತದೆ. ಇನ್ನೊಂದು ಶಾಸನವು ವೀರಗಲ್ಲಿನ ರೂಪದಲ್ಲಿದ್ದು ೧೪೧೫ ನೇ ಇಸವಿ ಮೇ ತಿಂಗಳ ೨೬ ನೇ ತಾರೀಖು ಆದಿತ್ಯವಾರದ್ದಾಗಿದೆ. ಇದರಲ್ಲಿ ಹೇಳಿರುವಂತೆ ರಾಜ ಪರಮೇಶ್ವರ ದೇವರಾಯ ವಿಜಯನಗರ ಸಾಮ್ರಾಜ್ಯವನ್ನು ಆಳುತ್ತಿದ್ದಾಗ, ಮಹಾಪ್ರಧಾನಿ ಶಂಕರ ದೇವವೊಡೆಯನು ತನ್ನ ಸೈನ್ಯವನ್ನು ನಗರ ರಾಜ್ಯಕ್ಕೆ ಸೇರಿದ್ದ ಭಟ್ಕಳದಲ್ಲಿ ಬೀಡು ಬಿಟ್ಟಿದ್ದ. ಇದನ್ನು ವಿರೋಧಿಸಿದ ನಗಿರೆಯ ಅರಸ ಸಂಗಿರಾಯನು ಆತನೊಡನೆ ಯುದ್ಧ ಮಾಡುತ್ತಿದ್ದಾಗ ಮಾಬುನಾಯಕ ಎಂಬ ಸೇನಾನಿ ವೀರ ಸ್ವರ್ಗವನ್ನೇರಿದ್ದ. ಆತನ ಸ್ಮರಣಾರ್ಥ ಈ ವೀರಗಲ್ಲನ್ನು ನೆಡಲಾಗಿದೆ. ಇಲ್ಲಿರುವ ಇನ್ನೊಂದು ವೀರಗಲ್ಲು ಕ್ರಿ.ಶ. ೧೪೨೨ ನೇ ಜುಲೈ ೧೫ ಕ್ಕೆ ಸಂಬಂಧಿಸಿದ್ದು. ಇನ್ನೊಂದು ವೀರಗಲ್ಲು ಕ್ರಿ.ಶ. ೧೪೨೨ ನೇ ಆಗಸ್ಟ್ ೬ ನೇ ತಾರೀಖು ಶುಕ್ರವಾರ ಬರೆಯಲ್ಪಟ್ಟಿದ್ದು ಅದೇ ಸಂಗಿರಾಯನ ಸೈನಿಕ ತಮ್ಮ ನಾಯಕನು ಯುದ್ಧ ಮಾಡುತ್ತಿದ್ದಾಗ ವೀರ ಮರಣವನ್ನಪ್ಪಿದ ವಿವರವನ್ನು ಹೇಳುತ್ತದೆ. ಒಟ್ಟಿನಲ್ಲಿ ಇವೆಲ್ಲವುಗಳ ಅಧ್ಯಯನವು ಅಮೂಲ್ಯವಾದ ಐತಿಹಾಸಿಕ ಮಾಹಿತಿಯನ್ನು ನೀಡಬಲ್ಲುದೆಂದು ಹೇಳಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೬೪-೩೬೫.