ಹ್ಯಾರಲ್ಡ್‌ ಹಾರ್ಟ್ ಕ್ರೇನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹ್ಯಾರಲ್ಡ್‌ ಹಾರ್ಟ್ ಕ್ರೇನ್ (1899-1932). ಅಮೆರಿಕದ ಕವಿ.

ಚಿತ್ರ:Hart Crane.jpg

ಬದುಕು[ಬದಲಾಯಿಸಿ]

ಒಹಾಯೊದ ಗಾರೆಟ್ಸ್ ವಿಲ್ಲೆಯಲ್ಲಿ ಹುಟ್ಟಿದ. ಚಿಕ್ಕಂದಿನಲ್ಲಿ ಈತನ ತಂದೆ ತಾಯಿಗಳು ಕ್ಲೀವ್‍ಲೆಂಡಿಗೆ ತೆರಳಿದುದರಿಂದ ಈತನೂ ಅವರನ್ನು ಹಿಂಬಾಲಿಸಿದ. ಅಲ್ಲಿ ಈತನ ತಂದೆ ಮಿಠಾಯಿ ಅಂಗಡಿಯ ದೊಡ್ಡ ವ್ಯಾಪಾರಿಯಾಗಿದ್ದ. ಕೆಲ ಸಮಯದ ಅನಂತರ ತಂದೆ ತಾಯಿಗಳು ದಾಂಪತ್ಯ ವಿಚ್ಛೇದನ ಪಡೆದುದರಿಂದ ಕ್ರೇನ್ ಅನಾಥನಾದ. ಕೇವಲ 13ನೇ ವಯಸ್ಸಿನಲ್ಲೆ ಪದ್ಯಗಳನ್ನು ಬರೆಯತೊಡಗಿದ. ತನ್ನ 17ನೆಯ ವಯಸ್ಸಿನಲ್ಲಿ ಒಂದು ವರ್ಷ ಕಾಲ ತಂದೆಯ ನೆಲಸು ನಾಡಿನಲ್ಲಿ ಕಳೆದ. ಅನಂತರ ಒಂದನೆಯ ಮಹಾಯುದ್ಧದಲ್ಲಿ ಶಸ್ತ್ರಗಳ ಸರಬರಾಜಿನಲ್ಲಿ ನಿರತನಾದ. ಆ ಮೇಲೆ ಕ್ಲೀವ್‍ಲೆಂಡನ 'ಪ್ಲೇನ್ ಡೀಲರ್‍ನ ಸುದ್ದಿಗಾರನಾದ. 1931ರಲ್ಲಿ ಗುಗೆನ್‍ಹೈಮ್‍ನ ಫೆಲೊ ಪದವಿಯನ್ನು ಪಡೆದು ಮೆಕ್ಸಿಕೋಗೆ ತೆರಳಿದ. ಆ ವೇಳೆಗಾಗಲೇ ಕ್ರೇನ್ ತನ್ನ ನಿರ್ಲಕ್ಷ್ಯ ಜೀವನ ಹಾಗೂ ಅತಿಯಾದ ಮದ್ಯಪಾನದಿಂದಾಗಿ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದ. ದೈಹಿಕವಾಗಿ ಸೊರಗಿಹೋಗಿದ್ದ. ಜೀವನದಲ್ಲಿ ಜುಗುಪ್ಸೆಗೊಂಡ ಈತ ನ್ಯೂಯಾರ್ಕಿಗೆ ಹೋಗುವ ದಾರಿಯಲ್ಲಿ ಹಡಗಿನಿಂದ ಹಾರಿ ಮೆಕ್ಸಿಕೋ ಖಾರಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ.

ಸಾಹಿತ್ಯ[ಬದಲಾಯಿಸಿ]

ಈತನ ಮುಖ್ಯ ಕೃತಿಗಳೆಂದರೆ ವೈಟ್ ಬಿಲ್ಡಿಂಗ್ಸ್ (1926) ಮತ್ತು ದಿ ಬ್ರಿಜ್ (1930) ಎಂಬ ಕವನ ಸಂಕಲನಗಳು. ದಿ ಬ್ರಿಜ್ ಅಮೆರಿಕನರ ಮನೋಧರ್ಮವನ್ನು ತಿಳಿಸುವ ವಿಚಾರಾತ್ಮಕ ದೀರ್ಘಕವನ. 1933ರಲ್ಲಿ ಈತನ ಕಲೆಕ್ಟೆಡ್ ಪೊಯಮ್ಸ್ ಮತ್ತು 1952ರಲ್ಲಿ ಲೆಟರ್ಸ್ ಎಂಬ ಕೃತಿಗಳು ಪ್ರಕಟಗೊಂಡವು. ಕ್ರೇನ್ ಅಮೆರಿಕದ ಆಧುನಿಕ ಕವಿಗಳಲ್ಲಿ ಇಂದಿಗೂ ಅಗ್ರಪಂಕ್ತಿಯಲ್ಲಿ ಸೇರಿದ್ದಾನೆ. ತನ್ನ ಕೃತಿಗಳಲ್ಲಿ ಈತ ಸೂಚ್ಯಾರ್ಥವನ್ನು ಬಳಸಿರುವ ಬಗೆ ವಿಶಿಷ್ಟ ರೀತಿಯದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: