ಹೊಸಕೋಟೆ ಕೃಷ್ಣಶಾಸ್ತ್ರಿ
ಹೊಸಕೋಟೆ ಕೃಷ್ಣಶಾಸ್ತ್ರಿ | |
---|---|
Born | ೧೮೭೦ ಹೊಸಕೋಟೆ, ಬೆಂಗಳೂರು ಜಿಲ್ಲೆ |
Died | ೧೯೨೮ |
Occupation | ಭಾರತ ಸರ್ಕಾರದ ಮುಖ್ಯ ಶಾಸನತಜ್ಞರು |
Known for | ಶಾಸನತಜ್ಞರು, ಸಂಶೋಧಕರು |
ಹೊಸಕೋಟೆ ಕೃಷ್ಣಶಾಸ್ತ್ರಿಗಳು (೧೮೭೦ - ೧೯೨೮) ಇತಿಹಾಸ ತಜ್ಞರಾಗಿ, ಭಾರತೀಯ ಶಾಸನ ಇಲಾಖೆಯ ಮುಖ್ಯಸ್ಥರಾಗಿ ಮತ್ತು ಸಂಶೋಧಕರಾಗಿ ಮಹತ್ವದ ವ್ಯಕ್ತಿಗಳಲ್ಲೊಬ್ಬರೆನಿಸಿದ್ದಾರೆ.
ಜೀವನ
[ಬದಲಾಯಿಸಿ]ಹೊಸಕೋಟೆ ಕೃಷ್ಣಶಾಸ್ತ್ರಿಗಳು ೧೮೭೦ರ ವರ್ಷದಲ್ಲಿ ಬೆಂಗಳೂರು ಜಿಲ್ಲೆಯ ಹೊಸಕೋಟೆಯಲ್ಲಿ ಜನಿಸಿದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನಡೆಯಿತು. ಬಿ. ಎ. ಪದವಿ ಗಳಿಸಿದ ಶಾಸ್ತ್ರಿಗಳು ಭಾರತ ಸರ್ಕಾರದ ಶಾಸನ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು.
ಶಾಸನತಜ್ಞರಾಗಿ
[ಬದಲಾಯಿಸಿ]1908ರಲ್ಲಿ ಕೃಷ್ಣಶಾಸ್ತ್ರಿಗಳು ಶಾಸನ ಇಲಾಖೆಯ ಸಹಾಯಕ ಅಧೀಕ್ಷ’ರಾದರು. 1920ರ ವರ್ಷದಲ್ಲಿ ಕೃಷ್ಣಶಾಸ್ತ್ರಿಗಳು ಭಾರತ ಸರ್ಕಾರದ ಮುಖ್ಯ ಶಾಸನತಜ್ಞರಾಗಿ ನೇಮಕಗೊಂಡರು. ತಮ್ಮ ಸೇವಾ ಕಾಲದಲ್ಲಿ 35 ವರ್ಷಕ್ಕೂ ಹೆಚ್ಚು ಕಾಲ ಕಾರ್ಯನಿಮಿತ್ತ ದೇಶ ವಿದೇಶಗಳಲ್ಲಿ ಸಂಚರಿಸಿದ ಕೃಷ್ಣಶಾಸ್ತ್ರಿಗಳು ಅಪಾರ ಅನುಭವಗಳಿಸಿಕೊಂಡಿದ್ದರು.
ಇತಿಹಾಸದ ಮೇಲೆ ಬೆಳಕು
[ಬದಲಾಯಿಸಿ]ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಶಾಸನಗಳನ್ನು ಕೂಲಂಕಷವಾಗಿ ಸಂಶೋಧಿಸಿದ್ದ ಶಾಸ್ತ್ರಿಗಳು ಹಲವಾರು ನಿಟ್ಟಿನಲ್ಲಿ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದರು. ಮಹಾರಾಷ್ಟ್ರದಲ್ಲಿನ ಚಾಲುಕ್ಯ, ರಾಷ್ಟ್ರಕೂಟರ ಶಾಸನಗಳು ಮರಾಠಿಯಲ್ಲಿಲ್ಲದೆ, ಕನ್ನಡದಲ್ಲಿವೆ ಎಂಬುದನ್ನು ಅವರು ತೋರಿಸಿಕೊಟ್ಟರು. ದಕ್ಷಿಣಭಾರತದ ಶಾಸನಗಳಿಗೆ ಸಂಬಂಧಿಸಿದಂತೆ ಶಾಸ್ತ್ರಿಗಳು ಸಂಪಾದಿಸಿ ಶಾಸನ ಇಲಾಖೆಯ ಮೂಲಕ ಪ್ರಕಟಿಸಿರುವ ವಾರ್ಷಿಕ ವರದಿಗಳು ಇತಿಹಾಸಕಾರರಿಗೆ ಉತ್ತಮ ಆಕರಗಳಾಗಿವೆ.
ಕೃತಿಗಳು
[ಬದಲಾಯಿಸಿ]ಹೊಸಕೋಟೆ ಕೃಷ್ಣಶಾಸ್ತ್ರಿಗಳು ರಚಿಸಿರುವ ಪ್ರಮುಖ ಕೃತಿಗಳೆಂದರೆ: ದಕ್ಷಿಣ ಭಾರತದ ಪ್ರತಿಮೆಗಳು (೧೯೧೬), ದಕ್ಷಿಣ ಭಾರತದ ಶಾಸನ (ಸಂಪುಟ ೪, ೫). ಇದಲ್ಲದೆ ಶಾಸ್ತ್ರಿಗಳು ಎಪಿಗ್ರಾಫಿಯಾ ಇಂಡಿಯಾದ ಹಲವಾರು ಸಂಚಿಕೆಗಳ ಸಂಪಾದಕರಾಗಿದ್ದರು..
ಏಕೀಕೃತ ಕರ್ನಾಟಕಕ್ಕೊಂದು ಸ್ವರೂಪ
[ಬದಲಾಯಿಸಿ]ಕರ್ನಾಟಕ ಏಕೀಕರಣದ ವಿಚಾರದಲ್ಲಿ ಅವರು ತಮ್ಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಚೆಲ್ಲಿದ ಬೆಳಕು ಮಹತ್ವಪೂರ್ಣದ್ದಾಗಿವೆ. “ಮೈಸೂರು ದೇಶವಂತೂ ಈ ಕರ್ನಾಟಕಕ್ಕೆ ಮಧ್ಯ ರಾಷ್ಟ್ರವಾಗಿರುವುದು ಸರಿಯಷ್ಟೇ. ಮದರಾಸು ಅಧಿಪತ್ಯದಲ್ಲಿ ದಕ್ಷಿಣ ಕನ್ನಡ, ಸೇಲಂ, ಕೊಯಮತ್ತೂರು, ಚಿತ್ತೂರು, ಅನಂತಪುರ ಜಿಲ್ಲೆಗಳ ಕೆಲವು ಭಾಗಗಳು, ಬಳ್ಳಾರಿ ಇವೆಲ್ಲ ಪೂರ್ವದಲ್ಲಿ ಕನ್ನಡ ದೇಶವೇ ಎನ್ನಬಹುದು. ಹಾಗೆಯೇ ಮುಂಬಯಿ ಅಧಿಪತ್ಯದಲ್ಲಿ ಧಾರವಾಡ, ಬೆಳಗಾವಿ, ಕಾರವಾರ, ವಿಜಾಪುರ, ರತ್ನಗಿರಿ ಜಿಲ್ಲೆಗಳೂ, ಹೈದರಾಬಾದಿನಲ್ಲಿ ರಾಯಚೂರು, ಸೋಲಾಪುರ, ಉಸ್ಮನಾಬಾದ್ ಜಿಲ್ಲೆಗಳೂ, ಕೊಡಗು ಇವನ್ನೆಲ್ಲಾ ಭಾಷಾವ್ಯಾಪ್ತಿಯಿಂದ ಕರ್ನಾಟಕ ರಾಜ್ಯದಲ್ಲಿಯೇ ಸೇರಿಸಬೇಕು.” ಎಂದು ೧೯೨೪ರ ವರ್ಷದಲ್ಲಿಯೇ ಅವರು ಸ್ಪಷ್ಟವಾಗಿ ನುಡಿದದ್ದು ಮುಂದೆ ರೂಪುಗೊಂಡ ಕರ್ನಾಟಕ ರಾಜ್ಯದ ಬಹುತೇಕ ಸ್ವರೂಪವನ್ನೇ ನೀಡಿದಂತಿದೆ.
ಪ್ರಶಸ್ತಿ ಗೌರವಗಳು
[ಬದಲಾಯಿಸಿ]ಕೃಷ್ಣಶಾಸ್ತ್ರಿಗಳ ಅಪಾರ ಹಾಗೂ ಅಮೂಲ್ಯ ಸೇವೆಯನ್ನು ಪರಿಗಣಿಸಿದ ಅಂದಿನ ಬ್ರಿಟಿಷ್ ಸರ್ಕಾರವು ಅವರಿಗೆ ‘ರಾವ್ ಸಾಹೇಬ್’ ಮತ್ತು ‘ರಾವ್ ಬಹದ್ದೂರ್’ ಪ್ರಶಸ್ತಿಗಳನ್ನಿತ್ತು ಸನ್ಮಾನಿಸಿತ್ತು. ಹೊಸಕೋಟೆ ಕೃಷ್ಣಶಾಸ್ತ್ರಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ೧೯೨೪ರ ವರ್ಷದ ಮೇ ೧೬, ೧೭ ಮತ್ತು ೧೮ರಂದು ನಡೆದ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸಿ ಗೌರವಿಸಿತು.
ವಿದಾಯ
[ಬದಲಾಯಿಸಿ]ಹೊಸಕೋಟೆ ಕೃಷ್ಣಶಾಸ್ತ್ರಿಗಳು ೧೯೨೮ರ ವರ್ಷದಲ್ಲಿ ಈ ಲೋಕವನ್ನಗಲಿದರು.
ಆಕರಗಳು
[ಬದಲಾಯಿಸಿ]- ಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು' ಕೃತಿ : ಲೇಖಕರು: ಎಸ್. ವಿ. ಶ್ರೀನಿವಾಸರಾವ್
- ಶಾಸ್ತ್ರೀಯ ಕನ್ನಡ ತಾಣ