ವಿಷಯಕ್ಕೆ ಹೋಗು

ಹೈಡ್ರೋಕಾರ್ಬನ್ನುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೈಡ್ರೋಕಾರ್ಬನ್ನುಗಳು ಅಂದರೆ ಕೇವಲ ಹೈಡ್ರೋಜನ್ ಮತ್ತು ಇಂಗಾಲದ ಪರಮಾಣುಗಳುಳ್ಳ ರಾಸಾಯನಿಕ ಸಂಯುಕ್ತಗಳು. ಈ ಸಂಯುಕ್ತಗಳಲ್ಲಿ ಕಾರ್ಬನ್ ಪರಮಾಣುಗಳು ಒಂದರೊಡನೊಂದು ಬಂಧಿಸಿಕೊಂಡು ನೇರ ಸರಪಳಿ ರೂಪಿಸಿರಬಹುದು, ಟಿಸಿಲೊಡೆದ ಸರಪಳಿ ರೂಪಿಸಿರಬಹುದು ಅಥವಾ ಚಕ್ರಗಳನ್ನು ರೂಪಿಸಿರಬಹುದು. ವೇಲೆನ್ಸಿಗಳೆಲ್ಲ ಪರ್ಯಾಪ್ತವಾಗಿರಬಹುದು. ಅಪರ್ಯಾಪ್ತವಾಗಿ ದ್ವಿಬಂಧ ಅಥವಾ ತ್ರಿಬಂಧಗಳಿರಬಹುದು. ಒಂದು ಕಾರ್ಬನ್ನಿನ ಪರಮಾಣು ಹಾಗೂ ನಾಲ್ಕು ಹೈಡ್ರೋಜನ್‍ವುಳ್ಳ ಮೀಥೇನ್ ಅನಿಲ, ಹೈಡ್ರೋಕಾರ್ಬನ್ ಕುಟುಂಬದ ಮೊದಲ ಸದಸ್ಯ. ಇದನ್ನು ಚಿತ್ರದಲ್ಲಿ ತೋರಿಸಿದಂತೆ ವ್ಯಕ್ತಪಡಿಸುತ್ತಾರೆ. ಕಾರ್ಬನ್ನಿನ ಪರಮಾಣುವಿನಿಂದ ಹೊರಟ ನಾಲ್ಕು ಗೆರೆಗಳು ಅದರ ನಾಲ್ಕು ಬಂಧಗಳನ್ನು ಪ್ರತಿನಿಧಿಸುತ್ತದೆ. ಮೀಥೇನ್

ಈ ಬಂಧಗಳೇ ಕಾರ್ಬನ್ನನ್ನು ನಾಲ್ಕು ಹೈಡ್ರೋಜನ್ ಪರಮಾಣುಗಳಿಗೆ ಬಂಧಿಸಿ ಅಣುವನ್ನು ಒಟ್ಟಾರೆ ಧಾರಣ ಮಾಡಿ ಅದಕ್ಕೆ ಒಂದು ಆಕ್ರುತಿಯನ್ನು ಕೊಡುತ್ತವೆ. ಬಂಧ ಅಂದರೆ ಕೇವಲ ಭೌತಿಕ ಜೋಡಣೆಯಲ್ಲ ಅದು ಎರಡು ಪರಮಾಣುಗಳ ಮಧ್ಯ ಇರುವ ಅಗೋಚರ ಪರಸ್ಪರ ಆಕರ್ಷಣಾ ಪ್ರೇರಣೆ. ಕಾರ್ಬನ್ನಿನ ಪರಮಾಣು ಯಾವುದೇ ಅಣುವಿನಲ್ಲಿರಲಿ ಅದರ ಈ ನಾಲ್ಕು ಬಂಧಗಳಲ್ಲಿ ಪ್ರತಿಯೊಂದು ಬಂಧ ಬೇರೊಂದು ಪರಮಾಣುವಿನ ಬಂಧದೊಡನೆ ಜೋಡನೆ ಹೊಂದಿರುತ್ತದೆ. ಹೀಗಾಗಿ ಹೈಡ್ರೋಕಾರ್ಬನ್ನಿನ ಉಚ್ಚ ಸದಸ್ಯ ಅಣುಗಳಲ್ಲಿ ಪ್ರತಿಯೊಂದು ಕಾರ್ಬನ್ ಪರಮಾಣುವಿನ ನಾಲ್ಕು ಬಂಧಗಳೂ ಹೈಡ್ರೋಜನ್ ಪರಮಾಣುವಿನ ಜೊತೆ ಅಥವಾ ಬಾಕಿ ಕಾರ್ಬನ್ನಿನ ಪರಮಾಣುವಿನ ಜೊತೆ ಬಂಧಿತವಾಗಿರುತ್ತದೆ. ಕಾರ್ಬನ್ನಿನ ಪರಮಾಣುವಿಗೆ ನಾಲ್ಕು ಬಂಧಗಳಿವೆ ಅಂದರೆ "ಕಾರ್ಬನ್ನಿನ ವೇಲೆನ್ಸಿ"ನಾಲ್ಕು ಎಂದರ್ಥ. ಅದೇ ರೀತಿ ಬೇರೆ ಧಾತುಗಳ ಬಂಧಸಂಖ್ಯೆ ಬೇರೆ ಇದ್ದು ಅವುಗಳ ಸಂಖ್ಯೆ ಕಾರ್ಬನ್ನಿಗಿಂತ ಬೇರೆಯಾಗಿರುತ್ತದೆ. ಉದಾಹರಣೆಗೆ, ಹೈಡ್ರೋಜನ್ನಿಗೆ ಇರುವುದು ಒಂದೇ ಬಂಧ. ಹೈಡ್ರೋಕಾರ್ಬನ್ನುಗಳಲ್ಲಿ ಈ ಬಂಧ ಕಾರ್ಬನ್ನಿನ ನಾಲ್ಕು ಬಂಧಗಳ ಪೈಕಿ ಒಂದರೊಂದಿಗೆ ಜೋಡಣೆ ಆಗಿರುತ್ತದೆ.

ಕಾರ್ಬನ್ನಿನ ನಾಲ್ಕು ಬಂಧಗಳು ನಾಲ್ಕು ಪರಮಾಣುಗಳ ಬಂಧದೊಡಣೆ ಪ್ರತ್ಯೇಕವಾಗಿ ಜೋಡಣೆ ಹೊಂದಿದಾಗ ಅಂಥ ಅಣು "ಪರ್ಯಾಪ್ತ ಅಣು". ಪರ್ಯಾಪ್ತ ಹೈಡ್ರೋಕಾರ್ಬನ್ನುಗಳು ರಾಸಾಯನಿಕ ದೃಷ್ಟಿಯಿಂದ ಜಡ ಪದಾರ್ಥಗಳು. ಸುಲಭವಾಗಿ ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಆದ್ದರಿಂದಲೇ ಅವುಗಳಿಗೆ "ಪ್ಯಾರಫಿನ್ನುಗಳು" ಅನ್ನುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ಪ್ಯಾರಮ್ ಅಂದರೆ 'ಅಲ್ಪ';' ಅಫಿನಿಸ್' ಅಂದರೆ ಒಲವು. ಈ ಕುಟುಂಬದ ಸದಸ್ಯರಲ್ಲಿ ಒಂದರಿಂದ ನಾಲ್ಕು ಕಾರ್ಬನ್ನಿನ ಪರಮಾಣುಗಳನ್ನು ಹೊಂದಿದ ಹೈಡ್ರೋಕಾರ್ಬನ್ನುಗಳು ಅನಿಲ ರೂಪದಲ್ಲಿರುತ್ತವೆ. ಇವುಗಳನ್ನು ನೈಸರ್ಗಿಕವಾಗಿ ಪಡೆಯಬಹುದು.

೫-೧೦ ಕಾರ್ಬನ್ನಿನ ಪರಮಾಣುಗಳನ್ನೂ ಮತ್ತು ಅದಕ್ಕೆ ತಕ್ಕಂತೆ ಹೆಚ್ಚಿನ ಹೈಡ್ರೋಜನ್ ಪರಮಾಣುಗಳನ್ನು ಹೊಂದಿರುವ ಹೈಡ್ರೋಕಾರ್ಬನ್ನುಗಳು ದ್ರವರೂಪದಲ್ಲಿರುತ್ತವೆ. ಹೈಡ್ರೋಕಾರ್ಬನ್ನುಗಳಲ್ಲಿ ಕಾರ್ಬನ್ನಿನ ಪರಮಾಣುಗಳ ಸಂಖ್ಯೆ ೧೧-೧೯ರವರೆಗೆ ಏರುತ್ತಾ ಹೋದಂತೆ ಅವುಗಳ ಸ್ನಿಗ್ಧತೆ ಹೆಚ್ಚುತ್ತಾ ಹೋಗುತ್ತದೆ. ಈ ಹೈಡ್ರೋಕಾರ್ಬನ್ನುಗಳು ಸೀಮೆಎಣ್ಣೆ, ಡೀಸೆಲ್ ಎಣ್ಣೆಗಳಲ್ಲಿ ಇರುತ್ತವೆ. ಕಾರ್ಬನ್ನಿನ ಪರಮಾಣುಗಳ ಸಂಖ್ಯೆ ಇನ್ನೂ ಹೆಚ್ಚಾದಂತೆ ಹೈಡ್ರೋಕಾರ್ಬನ್ನುಗಳು ಘನರೂಪ ತಾಳುತ್ತವೆ. ವಿಟಮಿನ್ನುಗಳು, ಮೇಣಗಳಲ್ಲಿ ಇಂಥ ಹೈಡ್ರೋಕಾರ್ಬನ್ನುಗಳು ಇರುತ್ತವೆ.

ಹೈಡ್ರೋಕಾರ್ಬನ್ ಅಣುಗಳ ಗಾತ್ರವು ಅವುಗಳ ಅನಿಲ, ದ್ರವ ಹಾಗೂ ಘನರೂಪಗಳನ್ನು ನಿರ್ಧರಿಸುವಂತೆ ಅವುಗಳ ಆಕಾರ (ರಚನೆ) ಕೂಡ ಅವುಗಳ ಗುಣಧರ್ಮಗಳನ್ನು ನಿರ್ಧರಿಸುತ್ತದೆ. ಕಾರ್ಬನ್ನಿನ ಪರಮಾಣುಗಳು ನೇರ ಶ್ರೇಣೆಯಲ್ಲಿದ್ದರೆ ಅಂಥ ಹೈಡ್ರೋಕಾರ್ಬನ್ನುಗಳಿಗೆ 'ಸಾಮಾನ್ಯ ಹೈಡ್ರೋಕಾರ್ಬನ್' ಅಥವಾ n ಆಕ್ಟೇನು (n=ನಾರ್ಮಲ್) ಎನ್ನುತ್ತೇವೆ. ಕಾರ್ಬನ್ನುಗಳು ಟಿಸಿಲೊಡೆದ (ಶಾಖಾ) ಶ್ರೇಣಿಯಲ್ಲಿದ್ದರೆ ಅದಕ್ಕೆ 'ಐಸೋಹೈಡ್ರೋಕಾರ್ಬನ್' ಎನ್ನುತ್ತೇವೆ. ಉದಾಹರಣೆಗೆ, ಐಸೋಆಕ್ಟೇನು. ನೇರಶ್ರೇಣಿಯ ಆಕ್ಟೇನಿಗಿಂತ ಟಿಸಿಲೊಡೆದ ಆಕ್ಟೇನು ಮೋಟಾರು ಎಂಜಿನುಗಳಲ್ಲಿ ಹೆಚ್ಚು ಉಪಯುಕ್ತ. ತೆರೆದ ಶ್ರೇಣಿಯ ಹೈಡ್ರೋಕಾರ್ಬನ್ನುಗಳಲ್ಲದೆ ಚಕ್ರಾಕೃತಿಯ (ಉಂಗುರಾಕೃತಿ) ಹೈಡ್ರೋಕಾರ್ಬನ್ನುಗಳಿವೆ, ಇವುಗಳನ್ನು ಸೈಕ್ಲೊಪ್ಯಾರಾಫಿನ್ನುಗಳು ಅನ್ನುತ್ತಾರೆ. ಉದಾಹರಣೆ, ಸೈಕ್ಲೊಪೆಂಟೇನು. ಸೈಕ್ಲೊಪೆಂಟೇನಿನಲ್ಲಿ ಐದು ಕಾರ್ಬನ್ನು ಹಾಗೂ ಹತ್ತು ಹೈಡ್ರೋಜನ್ ಪರಮಾಣುಗಳಿರುತ್ತವೆ. ಆದ್ದರಿಂದ ಕಾರ್ಬನ್ನಿನ ಪ್ರಮಾಣ ಸ್ವಲ್ಪ ಜಾಸ್ತಿ. ಆದರೂ ಪ್ರತಿಯೊಂದು ಕಾರ್ಬನ್ನಿನ ನಾಲ್ಕೂ ಬಂಧಗಳು ಪ್ರತ್ಯೇಕವಾಗಿ ಬೇರೆ ಬೇರೆ ಪರಮಾಣುಗಳೊಂದಿಗೆ ಬಂಧಿಸಿಕೊಂಡು ಪರ್ಯಾಪ್ತವಾಗಿವೆ. n-ಆಕ್ಟೇನ್ ಐಸೋಆಕ್ಟೇನು ಸೈಕ್ಲೊಪೆಂಟೇನು

ಆದರೆ ಇನ್ನು ಕೆಲವು ಹೈಡ್ರೋಕಾರ್ಬಾನ್ನುಗಳಲ್ಲಿ ಕಾರ್ಬನ್ನಿನ ಎಲ್ಲಾ ವೇಲೆನ್ಸಿಗಳನ್ನೂ ಪ್ರತ್ಯೇಕ ಪರಮಾಣುಗಳೊಂದಿಗೆ ಬಂಧಿಸಿ ಪರ್ಯಾಪ್ತಪಡಿಸುವಷ್ಟು ಇತರ ಪರಮಾಣುಗಳು ಇರುವುದಿಲ್ಲ. ಅಂಥ ಸಂದರ್ಭದಲ್ಲಿ ಎರಡು ಅಕ್ಕಪಕ್ಕದ ಕಾರ್ಬನ್ನುಗಳಲ್ಲಿ ಪ್ರತಿಯೊಂದು ಎರಡು ಪ್ರತ್ಯೇಕ ಪರಮಾಣುಗಳ ಜೊತೆ ಬ೦ಧಿಸಿಕೊಂಡು ಉಳಿದ ಎರಡು ಬಂಧಗಳಿಂದ ಪರಸ್ಪರ ಅಂಟಿಕೊಳ್ಳುತ್ತವೆ. ಇಂಥ ಬಂಧಕ್ಕೆ 'ದ್ವಿಬಂಧ' ಅನ್ನುತ್ತಾರೆ. ಈ ರೀತಿಯ ದ್ವಿಬಂಧಗಳುಳ್ಳ ಹೈಡ್ರೋಕಾರ್ಬನ್ನುಗಳಿಗೆ ಅಪರ್ಯಾಪ್ತ ಹೈಡ್ರೋಕಾರ್ಬನ್ನುಗಳು ಅಥವಾ ಓಲಿಫಿನ್ನುಗಳು ಅನ್ನುತ್ತಾರೆ. ದ್ವಿಬಂಧ ಏಕಬಂಧದಿಂದ ಬಲವಾಗಿರುವುದಿಲ್ಲ, ಆದ್ದರಿಂದ ದ್ವಿಬಂಧವುಳ್ಳ ಹೈಡ್ರೋಕಾರ್ಬನ್ನುಗಳು ರಾಸಾಯನಿಕ ಕ್ರಿಯೆಯಲ್ಲಿ ಪಟುತ್ವದಿಂದ ಭಾಗವಹಿಸುತ್ತವೆ.

ಮತ್ತೊಂದು ವಿಧದ ಹೈಡ್ರೋಕಾರ್ಬನ್ನುಗಳು ಸೈಕ್ಲೊಪ್ಯಾರಫಿನ್ನುಗಳಿಗಿಂತ ಭಿನ್ನ. ಇವೂ ಸಹ ಉಂಗುರಾಕಾರದವು (ಚಕ್ರಾಕಾರದವು). ಉದಾಹರಣೆಗೆ ಬೆಂಜೀನು. ಉಂಗುರದಲ್ಲಿ ಆರು ಕಾರ್ಬನ್ನಿನ ಪರಮಾಣುಗಳಿದ್ದು ಪ್ರತಿಯೊಂದು ಒಂದೊಂದು ಹೈಡ್ರೋಜನ್ ಪರಮಾಣುವಿನ ಜೊತೆ ಬಂಧಿಸಿಕೊಂಡಿರುತ್ತದೆ. ಆದ್ದರಿಂದ ಸಾಪೇಕ್ಷ್ಹವಾಗಿ ಕಾರ್ಬನ್ನಿನ ಪ್ರಮಾಣ ಜಾಸ್ತಿ. ಹೀಗಾಗಿ ಕಾರ್ಬನ್ನಿನ ಪರಮಾಣುಗಳು ಅಪರ್ಯಾಪ್ತ. ಇವುಗಳನ್ನು ಪರ್ಯಾಪ್ತ ಮಾಡಲು ಉಂಗುರದಲ್ಲಿ ಮೂರು ದ್ವಿಬಂಧ ಮತ್ತು ಮೂರು ಏಕಬಂಧಗಳಿರುತ್ತವೆ. ಇಂಥ ಉಂಗುರವುಳ್ಳ ಸಂಯುಕ್ತಗಳಿಗೆ "ಆರೋಮ್ಯಾಟಿಕ್"ಅನ್ನುತ್ತಾರೆ. ‍ಆರೋಮ್ಯಾಟಿಕ್ಗಳಲ್ಲಿ ದ್ವಿಬಂಧವಿದ್ದರೂ ಅವು ರಾಸಾಯನಿಕವಾಗಿ ಚುರುಕಾಗಿಲ್ಲ. ಅವು ಓಲಿಫಿನ್ನುಗಳಿಗಿಂತ ಸ್ಥಿರವಾದವುಗಳು. ಉಂಗುರದಲ್ಲಿ ಏಕಬಂಧ ಹಾಗೂ ದ್ವಿಬ೦ಧ ಇವು ಒಂದರ ಅನಂತರ ಒಂದು ಇರುವುದೇ ಸ್ಥಿರತೆಗೆ ಕಾರಣ. ಬೆಂಜೀನು

ಹೈಡ್ರೋಕಾರ್ಬನ್ನುಗಳು ಪೆಟ್ರೋಲಿಯಮ್ಮಿನಲ್ಲಿ ಇರುತ್ತವೆ. ಓಲಿಫಿನ್ನುಗಳು ಮಾತ್ರ ಅದರಲ್ಲಿರುವುದಿಲ್ಲ. ಅವುಗಳನ್ನು ಟೊಮೇಟೊ ಹಾಗೂ ಗಜ್ಜರಿ ಬಣ್ಣಗಳಿಕದ ಪಡೆಯಬಹುದು. ರಬ್ಬರಿನಲ್ಲಿ ಅದು ಪಾಲಿಮರ್ ರೂಪದಲ್ಲಿರುತ್ತದೆ. ಕೆಲವು ಮರಗಿಡಗಳಲ್ಲಿ ಸಹ ಹೈಡ್ರೋಕಾರ್ಬನ್ನುಗಳು ಇರುತ್ತವೆ. ಉದಾಹರಣೆಗೆ ಪೈನೀನ್, ಟರ್ಪೆಂಟೈನ್. ಹೈಡ್ರೋಕಾರ್ಬನ್ನುಗಳು ಒಳ್ಳೆಯ ಇಂಧನಗಳು. ಇವು ನೀರಿನಲ್ಲಿ ವಿಲೀನವಾಗುವುದಿಲ್ಲ. ಪರ್ಯಾಪ್ತ ಹೈಡ್ರೋಕಾರ್ಬನ್ನುಗಳನ್ನು ಕ್ಲೋರೀನಿನಂತಹ ಕ್ರಿಯಾಪಟುಗಳ ಸಂಪರ್ಕಕ್ಕೆ ಒಡ್ಡಿ ಉತ್ಪನ್ನಗಳನ್ನು ಪಡೆದು ಅದರಿಂದ ಅನೇಕ ಸಂಯುಕ್ತಗಳನ್ನು ಪಡೆಯಲು ಸಾಧ್ಯ ಉದಾಹರಣೆಗೆ ಕೃತಕ ರಬ್ಬರು.

ಉಲ್ಲೇಖ

[ಬದಲಾಯಿಸಿ]