ಹಂದಿಗಳಲ್ಲಿ ರೋಗ ತಡೆಗಟ್ಟುವಲ್ಲಿ ಜೈವಿಕ ಭದ್ರತೆಯ ಪಾತ್ರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಹಂದಿ ಸಾಕಾಣಿಕೆ ಇತ್ತೀಚಿನ ದಿನಗಳಲ್ಲಿ ಕೃಷಿ ಯೇತರ ಚಟುವಟಿಕೆಗಳಲ್ಲಿ ಮುಖ್ಯವಾದ ಕಸುಬಾಗಿ ಹೊರಹೊಮ್ಮುತ್ತಿದೆ. ಲಾಭದಾಯಕ ಹಂದಿಸಾಕಾಣಿಕೆಗೆ ಹಂದಿಗಳ ಆರೋಗ್ಯ ನಿರ್ವಹಣೆ ಬಹಳ ಮುಖ್ಯ. ಹಂದಿಗಳಲ್ಲಿ ಬರುವ ಸಾಂಕ್ರಾಮಿಕ ರೋಗಗಳಿಂದ ರೈತರಿಗೆ ಬಹಳಷ್ಟು ಆರ್ಥಿಕ ನಷ್ಟ ಉಂಟಾಗುತ್ತದೆ. ರೋಗ ಬಂದ ಮೇಲೆ ಚಿಕಿತ್ಸೆಯನ್ನು ನೀಡಿ ರೋಗ ಗುಣಪಡಿಸುವದರಿಂದ ಬರುವ ಆದಾಯದಲ್ಲಿ ಇಳಿಮುಖ ಕಾಣುವದು ಸಹಜ. ಆದರೆ ಹಂದಿಗಳಲ್ಲಿ ರೋಗ ಬರದಂತೆ ತಡೆಗಟ್ಟುವದು ಉತ್ತಮ ಹಾಗು ಲಾಭದಾಯಕ. ಸಾಮಾನ್ಯವಾಗಿ ಹಂದಿಗಳಲ್ಲಿ ರೋಗ ತಡೆಗಟ್ಟುಲು ಎರಡು ಮುಖ್ಯ ವಿಧಾನಗಳನ್ನು ಅನುಸರಿಸಬಹುದು: ಮೊದಲನೆಯದು ಹಂದಿಗಳಿಗೆ ಲಸಿಕೆಯನ್ನು ನೀಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವದು. ಎರಡನೆಯದು ಜೈವಿಕ ಭದ್ರತೆಯ ಕ್ರಮಗಳನ್ನು ಅಳವಡಿಸಿಕೊಂಡು ಹಂದಿಗಳಿಗೆ ಸೋಂಕು ತಗುಲದ ಹಾಗೆ ನೋಡಿಕೊಳ್ಳುವದು. ಲಭ್ಯವಿರುವ ಲಸಿಕೆಗಳನ್ನು ಸಮಯಕ್ಕನುಸಾರವಾಗಿ ಹಾಕಿಸುವದರ ಜೊತೆಗೆ ರೈತರು ಹಂದಿಗಳ ಶೆಡ್ ಗಳಲ್ಲಿ ಜೈವಿಕ ಭದ್ರತಾ ಕ್ರಮಗಳನ್ನು ಅಳವಡಿಸಿಕೊಂಡಲ್ಲಿ ಬಹಳಷ್ಟು ಮಟ್ಟಿಗೆ ಹಂದಿ ಸಾಕಾಣಿಕೆಯಲ್ಲಿ ರೋಗಗಳಿಂದಾಗುವ ಹಾನಿಯನ್ನು ತಡೆಗಟ್ಟಬಹುದು.
ಜೈವಿಕ ಭದ್ರತೆ
ರೋಗಾಣುವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬರುವ ಮತ್ತು ಹರಡುವ ಸಾಧ್ಯತೆಯನ್ನು ಕಡಿಮೆಗೊಳಿಸಲು ವಹಿಸುವ ಕ್ರಮಗಳಿಗೆ ಜೈವಿಕ ಭದ್ರತೆ ಎಂದು ಹೇಳಲಾಗುತ್ತದೆ. ಯಾವದೇ ಒಂದು ರೋಗ ಉಲ್ಭಣಗೊಳ್ಳಲು ರೋಗಾಣು, ರೋಗಾಶ್ರಯ (ಹಂದಿ) ಮತ್ತು ಪರಿಸರ ಈ ಮೂರು ಅಂಶಗಳ ಪರಸ್ಪರ ಸ್ಪಂದನೆ ಅತ್ಯಾವಶ್ಯಕ. ಈ ಮೂರು ಅಂಶಗಳ ಪರಸ್ಪರ ಸ್ಪಂದನೆಯನ್ನು ಯಶಸ್ವಿಯಾಗಿ ಮೂರಿಯುವುದೇ ಜೈವಿಕ ಭದ್ರತೆ ಕ್ರಮಗಳ ಮೂಲ ಉದ್ದೇಶ. ಹಂದಿ ಫಾರ್ಮ್ ಗಳಲ್ಲಿ ಜೈವಿಕೆ ಭದ್ರತೆಯನ್ನು ಮೂರು ಹಂತಗಳಲ್ಲಿ ಅಳವಡಿಸಿಕೊಳ್ಳಬಹುದು: ರೋಗಗ್ರಸ್ಥ ಹಂದಿಗಳನ್ನು ಪ್ರತ್ಯೇಕಿಸುವದು, ಶುಚಿತ್ವ ಮತ್ತು ನೈರ್ಮಲ್ಯತೆ ಹಾಗೂ ಸೋಂಕು ನಿವಾರಣೆ. ಜೈವಿಕ ಭದ್ರತೆಯ ಗುರಿ ಹಂದಿಗಳ ಮತ್ತು ಅದರ ಉತ್ಪನ್ನಗಳಿಗೆ ರೋಗಾಣುಗಳ ಸೋಂಕು ತಗುಲದಂತೆ, ಮತ್ತು ಸೋಂಕು ತಗುಲಿದಲ್ಲಿ ರೋಗಾಣು ಬೇರೆಡೆ ಹರಡದಂತೆ ನೋಡಿಕೊಳ್ಳುವದು.
1. ರೋಗಗ್ರಸ್ಥ ಹಂದಿಗಳನ್ನು ಪ್ರತ್ಯೇಕಿಸುವದು
ರೋಗಗ್ರಸ್ಥ ಹಂದಿಗಳನ್ನು ಪ್ರತ್ಯೇಕಿಸುವದು ಜೈವಿಕ ಭದ್ರತೆಯ ಮೊದಲ ಮತ್ತು ಪ್ರಮುಖ ಅಂಶವಾಗಿದೆ. ಸೋಂಕಿತ ಹಂದಿಗಳು ಮತ್ತು ವಸ್ತುಗಳನ್ನು ಸೋಂಕುರಹಿತ ಹಂದಿಗಳಿಂದ ದೂರವಿಡುವುದೇ ಈ ಹಂತದ ಮುಖ್ಯ ಗುರಿಯಾಗಿದ್ದು, ರೋಗ ಪ್ರಸರಣೆ ತಡೆಗಟ್ಟುವಲ್ಲಿ ಈ ಹಂತ ಅತ್ಯಂತ ಪರಿಣಾಮಕಾರಿಯಾಗಿದೆ. ಹಂದಿ ಫಾರ್ಮ್ ಒಳಗೆ ಬರುವ ಯಾವದೇ ಜೀವಿ ಅಥವಾ ವಸ್ತುಗಳು ರೋಗಾಣುವಿನ ಸೋಂಕುತರುವ ಮಾಧ್ಯಮಗಳಾಗಿದ್ದು ರೈತರು ಇಂಥಹ ಪರಿಪಾಠಗಳನ್ನು ವಿಶೇಷ ಗಮನವಿಟ್ಟು ಸರಿಯಾದ ಕ್ರಮಗಳನ್ನು ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸದ್ದೆ ಆದಲ್ಲಿ ಸಾಂಕ್ರಾಮಿಕ ರೋಗಗಳನ್ನು ಬಹಳಷ್ಟು ಮಟ್ಟಕ್ಕೆ ತಡೆಗಟ್ಟಬಹುದು. ರೋಗಗ್ರಸ್ಥ ಹಂದಿಗಳಿಂದ ಆರೋಗ್ಯಕರ ಹಂದಿಗಳಿಗೆ ನೆರ ಸಂಪರ್ಕ, ಪರೋಕ್ಷ ಸಂಪರ್ಕ, ಗಾಳಿ, ನೀರು, ಹನಿ ಸೋಂಕು, ಪ್ರಾಣಿ ಮತ್ತು ಕೀಟವಾಹಕಗಳು, ಈ ರೀತಿ ಬೇರೆ ಬೇರೆ ಮಾರ್ಗಗಳ ಮೂಲಕ ರೋಗವು ಹರಡುತ್ತದೆ.
2. ಶುಚಿತ್ವ ಮತ್ತು ನೈರ್ಮಲ್ಯತೆ
ಜೈವಿಕ ಭದ್ರತೆಯ ಮುಂದಿನ ಅತ್ಯಂತ ಪರಿಣಾಮಕಾರಿ ಹಂತವೆಂದರೆ ಶುಚಿಗೊಳಿಸುವಿಕೆ. ಫಾರ್ಮ್ ಗಳಲ್ಲಿ ಸ್ವಚ್ಚತೆ ಮತ್ತು ನೈರ್ಮಲ್ಯತೆಯನ್ನು ಪಾಲಿಸುವುದರಿಂದ ಹಂದಿಗಳು ಆರೋಗ್ಯಕರವಾಗಿ ಇಡಲು ಸಾಧ್ಯ. ಹಂದಿಗಳ ನಿರ್ವಹಣೆಗೆ ಉಪಯೋಗಿಸಲ್ಪಡುವ ವಸ್ತುಗಳ ಮೇಲೆ ಅಂಟಿಕೊಂಡಿರುವ ಮಲ, ಮೂತ್ರ ಅಥವಾ ಸ್ರವಿಕೆಗಳಲ್ಲಿ ಬಹಳಷ್ಟು ರೋಗಾಣುಗಳಿರುತ್ತವೆ. ಆದ್ದರಿಂದ ಕ್ರಮಬದ್ಧವಾಗಿ ಈ ವಸ್ತುಗಳನ್ನು ಶುಚಿಗೊಳಿಸುವುದರಿಂದ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು. ಯಾವುದೇ ವಸ್ತುಗಳನ್ನು ಹಂದಿಯ ಶೆಡ್ ಒಳಗೆ ಒಯ್ಯುವ ಮುನ್ನ ವೈಜ್ಞಾನಿಕವಾಗಿ ಸಾಬೂನು,ನೀರು ಮತ್ತು ಬ್ರಷ್ ಉಪಯೋಗಿಸಿ ಶುಚಿಗೊಳಸಿಬೇಕು. ವಾಹನಗಳು(ಲಾರಿಗಳು ಅಥವಾ ಟ್ರಾಕ್ಟರ್), ಹಂದಿ ಗೂಡಿನ ನೆಲ ಮತ್ತು ಗೋಡೆಗಳನ್ನು ಹೆಚ್ಚಿನ ಒತ್ತಡದ ನೀರಿನಿಂದ (ಪ್ರೆಷರ್ ವಾಶ್) ತೊಳೆಯಬೇಕು.
3. ಸೋಂಕು ನಿವಾರಣೆ
ಜೈವಿಕ ಭದ್ರತೆಯ ಅಂತಿಮ ಹಂತವೆಂದರೆ ಸೋಂಕು ನಿವಾರಣೆ. ನೀರಿನಿಂದ ಸಂಪೂರ್ಣ ಶುಚಿಗೊಳಿಸಿದ ನಂತರ, ಪ್ರಾಣಿಜನ್ಯ ರೋಗಾಣುಗಳು ಸೇರಿದಂತೆ ಹಂದಿಗಳಲ್ಲಿ ಇರುವ ವಿವಿಧ ಸಾಂಕ್ರಾಮಿಕ ಮತ್ತು ಪರಾವಲಂಬಿ ರೋಗಾಣುಗಳನ್ನು ನಾಶಮಾಡಲು ಸೂಕ್ತವಾದ ರಾಸಾಯನಿಕ ಸೋಂಕು ನಿವಾರಕಗಳನ್ನು ಉಪಯೋಗಿಸಿ ಸೋಂಕು ನಿವಾರಣೆಯ ಕ್ರಮಗಳನ್ನು ಅಳವಡಿಸಿಕೊಳ್ಳುವದು ಮೂರನೇ ಅತಿ ಮುಖ್ಯ ಜೈವಿಕ ಭದ್ರತೆಯ ಹಂತವಾಗಿದೆ. ಸೋಂಕು ನಿವಾರಣೆಗೆ ಉಪಯೋಗಿಸುವ ರಾಸಾಯನಿಕಗಳನ್ನು ಸೋಂಕುನಿವಾರಕಗಳೆಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಹಳ್ಳಿಯ ಪರಿಸ್ಥಿತಿಗಳಲ್ಲಿ ಲಭ್ಯವಿರುವು ಸೋಂಕು ನಿವಾರಕಗಳೆಂದರೆ ಫಿನೈಲ್, ಡೆಟಾಲ್ ಮತ್ತು ಬ್ಲೀಚಿಂಗ್ ಪೌಡರ್. ಆದರೆ ಈ ಸೋಂಕುನಿವಾರಕಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಮಾತ್ರ ಪರಿಣಾಮಕಾರಿ ಸೋಂಕುನಿವಾರಣೆ ಸಾಧ್ಯ. ಬಹಳಷ್ಟು ರೈತರು ಸೋಂಕುನಿವಾರಕಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸದೇ ಇರುವದರಿಂದ ಸೋಂಕುನಿವಾರಕಗಳ ಸಂಪೂರ್ಣ ಲಾಭ ಪಡೆಯಲು ಆಗದೆ ಹಂದಿಗಳಲ್ಲಿ ಅರೋಗ್ಯ ನಿರ್ವಹಣೆ ವಿಫಲಗೊಂಡು ಆರ್ಥಿಕ ಹಾನಿ ಅನುಭವಿಸುವ ಅನಿವಾರ್ಯತೆ ಎದುರಾಗುತ್ತದೆ.
ಜೈವಿಕ ಭದ್ರತೆಯು ಹಂದಿಯ ಆರೋಗ್ಯ ನಿರ್ವಹಣೆಯ ಮೂಲಾಧಾರವಾಗಿದೆ. ಹೊಸದಾಗಿ ಉಲ್ಬಣವಾಗುವ ರೋಗಗಳ ನಿರ್ವಹಣೆ ಮತ್ತು ಸ್ಥಳೀಯ (ಎಂಡಮಿಕ್) ರೋಗಗಳ ನಿಯಂತ್ರಣವು ಹಂದಿ ಸಾಕಾಣಿಕೆಯಲ್ಲಿ ಎದುರಿಸಬೇಕಾದ ಮುಖ್ಯ ಹಾಗು ಕಷ್ಟಕರವಾದ ಸವಾಲಾಗಿದೆ. ಆರ್ಥಿಕವಾಗಿ ಹಿಂದುಳಿದ ಹಾಗು ಸಣ್ಣ ಹಿಡುವಳಿದಾರರ ಹಂದಿ ಸಾಕಾಣಿಕೆಯಲ್ಲಿ ಸುಸಜ್ಜಿತ ಜೈವಿಕ ಭದ್ರತೆ ಕ್ರಮಗಳನ್ನು ರೂಢಿಸಿಕೊಳ್ಳದೇ ಇರುವುದರಿಂದ ಹಂದಿಗಳಲ್ಲಿ ಹೆಚ್ಹಿನ ಸೋಂಕು ಮತ್ತು ಮರಣ ಪ್ರಮಾಣ ಇಂದಿಗೂ ಒಂದು ಪ್ರಮುಖ ಸಮಸ್ಯೆಯಾಗಿ ಉಳಿದಿದೆ.
ಜೈವಿಕ ಭದ್ರತೆಯನ್ನಾಧರಿಸಿ ರೋಗ ಬರದಂತೆ ತಡೆಗಟ್ಟುವ ಕ್ರಮಗಳು
ರೋಗಾಣುಗಳು ಅಥವಾ ಸೋಂಕು ಹಂದಿ ಗೂಡು ಪ್ರವೇಶಿಸದಂತೆ ತಡೆಯಲು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು
1. ಹಂದಿಗಳನ್ನು ಖರೀದಿಸುವಾಗ, ರೋಗ ಮುಕ್ತವಾಗಿರುವ ಮತ್ತು ಜೈವಿಕ ಭದ್ರತೆ ಕ್ರಮಗಳನ್ನು ಪಾಲಿಸುತ್ತಿರುವ ಸಾಕಾಣಿಕೆ ಕೇಂದ್ರಗಳಿಂದ ಹಂದಿಗಳನ್ನು ಖರೀದಿಸುವುದು ಒಳ್ಳೆಯದು
2. ಹೊಸದಾಗಿ ಖರೀದಿಸಿದ ತಂದ ಹಂದಿಗಳನ್ನು ತಕ್ಷಣವೇ ಹಿಂಡಿಗೆ ಸೇರಿಸ ಬೇಡಿ. ಈ ಹೊಸ ಹಂದಿಗಳನ್ನು ಎರಡು ವಾರಗಳ ಕಾಲ ಪ್ರತ್ಯೇಕವಾಗಿರಿಸಿ (ಕ್ವಾರಂಟೈನ್), ಅವುಗಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬರದೇ ಇದ್ದಲ್ಲಿ ನಂತರ ಉಳಿದ ಹಂದಿಗಳೊಡನೆ ಸೇರಿಸಬಹುದು
3. ಹಂದಿಗಳನ್ನು ಹೊರಗೆ ಬಿಡುವುದರಿಂದ ಕೆಲವೊಮ್ಮೆ ಇತರೆ ಸೋಂಕಿತ ಪ್ರಾಣಿಗಳು ಅಥವಾ ಸೋಂಕಿತ ವಸ್ತುಗಳ ಸಂಪರ್ಕಕ್ಕೆ ಬಂದು, ಹಂದಿಗಳಿಗೆ ಸೋಂಕುತಗುಲಬಹುದು. ಆದ್ದರಿಂದ ಹಂದಿಗಳನ್ನು ಗೂಡಿನಲ್ಲಿ ಇಟ್ಟು ಸಾಕುವುದನ್ನು ರೂಢಿಸಿಕೊಳ್ಳುವುದು ಉತ್ತಮ.
4. ಹಂದಿ ಫಾರ್ಮ್ ನ ಒಳಗೆ ಇತರೆ ಪ್ರಾಣಿ-ಪಕ್ಷಿಗಳು, ಅನಧಿಕೃತ ವಾಹನಗಳು ಮತ್ತು ವ್ಯಕಿಗಳು ಅನವಶ್ಯಕವಾಗಿ ಪ್ರವೇಶಿಸುವುದನ್ನು ನಿರ್ಬಂದಿಸಬೇಕು
5. ಫಾರ್ಮ್ ನ ಒಳಗೆ ಪ್ರವೇಶಿಸುವುದು ಅನಿವಾರ್ಯವಾದಲ್ಲಿ, ವಾಹನಗಳ ಟೈರ್ ಮತ್ತು ಹೊರಭಾಗಗಳಿಗೆ ಸೋಂಕುನಿವಾರಕಗಳನ್ನು ಸಿಂಪಡಿಸಿ ನಂತರ ಸೋಂಕುನಿವಾರಕ ಹೊಂದಿರುವ ತೊಟ್ಟಿಯ ಮೂಲಕ ಹಾದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಅಪರಿಚಿತ ವ್ಯಕ್ತಿಗಳು ತಮ್ಮ ಪಾದರಕ್ಷೆಗಳನ್ನು ಸೋಂಕುನಿವಾರಕಗಳಲ್ಲಿ ಅದ್ದಿ ನಂತರ ಫಾರ್ಮ್ ನ ಒಳಗೆ ಪ್ರವೇಶಿಸಬೇಕು
6. ಹಂದಿಗಳಿಗೆ ಆಹಾರವಾಗಿ ಹೋಟೆಲ್ ಗಳಿಂದ ಸಂಗ್ರಹಿಸಿದ ಆಹಾರವನ್ನು ನೀಡುತ್ತಿದ್ದಲ್ಲಿ, ಅಂಥಹಾ ಆಹಾರವನ್ನು ಚೆನ್ನಾಗಿ ಬೇಯಿಸಿದ ನಂತರವೇ ನೀಡತಕ್ಕದ್ದು.
7. ಹಂದಿಗಳಿಗೆ ನೀಡುವ ಆಹಾರವನ್ನು (ಫೀಡ್) ಇಲಿ, ಹೆಗ್ಗಣ ಅಥವಾ ಪಕ್ಷಿಗಳಿಗೆ ಸಿಗದಂತೆ ಭಧ್ರವಾಗಿ ಮುಚ್ಚಿದ ಡ್ರಮ್ ಗಳಲ್ಲಿ ಶೇಖರಿಸಿಟ್ಟುಕೊಳ್ಳಬೇಕು
8. ಹಂದಿಗಳಿಗೆ ಕುಡಿಯಲು ನೀಡುವ ನೀರಿನ ಮೂಲಗಳು (ಬಾವಿ, ಬೋರ್ ವೆಲ್) ಮತ್ತು ನೀರು ಸಂಗ್ರಹಿಸುವ ಜಾಗಗಳನ್ನು (ತೊಟ್ಟಿ, ಟ್ಯಾಂಕ್, ಬಾವಿ) ಕಲುಷಿತವಾಗದಂತೆ ನೋಡಿಕೊಳ್ಳಬೇಕು
9. ಫಾರ್ಮ್ ನ ಸುತ್ತಲಿನ ಪರಿಸರವನ್ನು ಸ್ವಚ್ಚ ಮತ್ತು ನೈರ್ಮಲ್ಯತೆಯಿಂದ ಇಟ್ಟುಕೊಳ್ಳಬೇಕು
ಜೈವಿಕ ಭದ್ರತೆಯನ್ನಾಧರಿಸಿ ರೋಗ ಹರಡದಂತೆ ತಡೆಗಟ್ಟುವ ಕ್ರಮಗಳು
ರೋಗೋದ್ರೇಕವಾದ ಸಂಧರ್ಭದಲ್ಲಿ ಹಂದಿ ಫಾರ್ಮ್ಗಳಲ್ಲಿ ರೋಗ ಫಾರ್ಮಿನ ಉಳಿದ ಹಂದಿಗಳಲ್ಲಿ ಹರಡದಂತೆ ಮತ್ತು ಸೋಂಕಿತ ಫಾರ್ಮಿನಿಂದ ಬೇರೆ ಫಾರ್ಮಗಳಿಗೆ ರೋಗ ಪ್ರಸಾರಣಗೊಳ್ಳದಂತೆ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು ಈ ಕೆಳೆಗಿನಂತಿವೆ
1. ಹಂದಿಗಳಲ್ಲಿ ಸಾಂಕ್ರಾಮಿಕ ರೋಗದ ಲಕ್ಷಣಗಳು ಕಂಡುಬಂದಲ್ಲಿ ರೋಗಗ್ರಸ್ಥ ಹಂದಿಗಳನ್ನು ತಕ್ಷಣವೇ ಹಿಂಡಿನಿಂದ ಬೇರ್ಪಡಿಸಿ (ಐಸೋಲೇಷನ್) ವೈದ್ಯರ ಸಲಹೆಯ ಮೇರೆಗೆ ಸೂಕ್ತವಾದ ಚಿಕಿತ್ಸೆ ನೀಡಬೇಕು
2. ರೋಗಗ್ರಸ್ಥ ಹಂದಿಗಳು ವಾಸವಿದ್ದ ಕೊಠಡಿಗಳನ್ನುಸೋಂಕುನಿವಾರಕಗಳನ್ನು ಬಳಸಿ ಸ್ವಚ್ಚಗೊಳಿಸಬೇಕು
3. ಫಾರ್ಮ್ ಅನ್ನು ಸ್ವಚ್ಚಗೊಳಿಸುವಾಗ ಅಥವಾ ಆಹಾರ ನೀಡುವಾಗ ಮೊದಲು ಆರೋಗ್ಯವಂತ ಹಂದಿಗಳ ಕೊಠಡಿಗಳನ್ನು ಸ್ವಚ್ಚಗೊಳಿಸಿದ ನಂತರ ರೋಗಗ್ರಸ್ಥ ಹಂದಿಗಳು ವಾಸವಿರುವ ಕೊಠಡಿಗಳನ್ನು ಸ್ವಚ್ಚಗೊಳಿಸಬೇಕು. ಸಾಧ್ಯವಿದ್ದಲ್ಲಿ ರೋಗಗ್ರಸ್ಥ ಹಂದಿಗಳ ಉಪಚಾರಕ್ಕಾಗಿ ನಿಗದಿತ ಸಿಬ್ಬಂದಿಯನ್ನು ನೇಮಿಸಿವುದು ಉತ್ತಮ
4. ರೋಗಗ್ರಸ್ಥ ಹಂದಿಗಳ ಉಪಚಾರಕ್ಕಾಗಿ ಬಳಸಿದ ಪರಿಕರಗಳನ್ನು (ಟಬ್, ಬಕೇಟ್, ಮಗ್, ಪಾತ್ರೆ) ಇತರೆ ಹಂದಿಗಳಿಗೆ ಬಳಸಬಾರದು
5. ರೋಗಗ್ರಸ್ಥ ಹಂದಿಗಳ ಸಂಪರ್ಕಕ್ಕೆ ಬಂದಂತಹ ಸಿಬ್ಬಂದಿಗಳು/ಕೆಲಸಗಾರರು ತಮ್ಮ ಬಟ್ಟೆ, ಪಾದರಕ್ಷೆ ಮತ್ತು ಇತರೆ ಪರಿಕರಗಳನ್ನು ಸೋಂಕು ನಿವಾರಕವನ್ನು ಬಳಸಿ ಸ್ವಚ್ಚಗೊಳಿಸಬೇಕು
6. ರೋಗಗ್ರಸ್ಥ ಹಂದಿಗಳ ಮಲ, ಮೂತ್ರ, ಗರ್ಭಪಾತವಾದ ಭ್ರೂಣ, ಸತ್ತೆ (ಮಾಸು) ಮತ್ತು ಸಾವನ್ನಪ್ಪಿದ ಹಂದಿಗಳನ್ನು ಫಾರ್ಮ್ ನಿಂದ ಆದಷ್ಟು ದೂರದಲ್ಲಿ ವೈಜ್ಞಾನಿಕ ರೀತಿಯಲ್ಲಿ (ಆಳವಾಗಿ ಹೂಳುವುದರಿಂದ ಅಥವಾ ಸುಡುವುದರ ಮೂಲಕ) ವಿಲೇವಾರಿ ಮಾಡಬೇಕು
7. ರೋಗಗ್ರಸ್ಥ ಹಂದಿಗಳು ಮತ್ತು ಮತ್ತು ಅವುಗಳ ಉತ್ಪನ್ನಗಳನ್ನು ಮಾರಾಟ ಮಾಡಬೇಡಿ