ವಿಷಯಕ್ಕೆ ಹೋಗು

ಸ್ಥಾಯೀ ವಿದ್ಯುತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾರುಗಾಡಿಯೊಂದಿಗಿನ ಸಂಪರ್ಕ ಈ ಮಗುವಿನ ಕೂದಲುಗಳನ್ನು ಧನಾತ್ಮಕವಾಗಿ ಆವಿಷ್ಟವಾಗಿಸಿದೆ. ಹಾಗಾಗಿ ಪ್ರತ್ಯೇಕ ಕೂದಲುಗಳು ಒಂದನ್ನೊಂದು ವಿಕರ್ಷಿಸುತ್ತವೆ. ಕೂದಲು ಋಣಾತ್ಮಕವಾಗಿ ಆವಿಷ್ಟವಾದ ಜಾರುಗಾಡಿಯ ಮೇಲ್ಮೈಗೆ ಕೂಡ ಆಕರ್ಷಿತವಾಗಬಹುದು.

ಸ್ಥಾಯೀ ವಿದ್ಯುತ್ತು ಎಂದರೆ ಎರಡು ಕಾಯಗಳು ಪರಸ್ಪರ ಘರ್ಷಿಸಿ ಆವೇಶಗಳು ಆಂಶಿಕವಾಗಿ ಒಂದರಿಂದ ಇನ್ನೊಂದಕ್ಕೆ ವರ್ಗಾವಣೆ ಆಗುವಾಗ ಉಂಟಾಗುವ ವಿದ್ಯಮಾನ (ಸ್ಟ್ಯಾಟಿಕ್ ಎಲೆಕ್ಟ್ರಿಸಿಟಿ).[][] ಇದಕ್ಕೆ ಧನಾತ್ಮಕ ಮತ್ತು ಋಣಾತ್ಮಕ ಆವೇಶಗಳ ಅಸಂತುಲನೆ ಉಂಟಾಗುವುದರಿಂದ ಪ್ರಕಟವಾಗುವ ವಿದ್ಯಮಾನ, ಪ್ರವಾಹೀ ವಿದ್ಯುತ್ತಿಗೆ ವೈದೃಶ್ಯವಾಗಿ ವಿಶ್ರಾಂತ ಸ್ಥಿತಿಯಲ್ಲಿರುವ ವಿದ್ಯುತ್ತು ಮುಂತಾದ ವ್ಯಾಖ್ಯಾನಗಳೂ ಉಂಟು. ಸ್ಥಾಯೀವಿದ್ಯುತ್ತಿಗೆ ಸಂಬಂಧಿಸಿದ ಪರಿಣಾಮಗಳು ಪ್ರಕಟವಾಗುವುದು ಆವೇಶ ಉತ್ಪಾದಿಸುವ ಸ್ಥಾಯೀ ವಿದ್ಯುತ್‌ಕ್ಷೇತ್ರದಿಂದಾಗಿ, ಪ್ರವಾಹೀ ವಿದ್ಯುತ್ತಿನ ಸಂದರ್ಭದಲ್ಲಾದರೋ ವಿದ್ಯುತ್ ಮತ್ತು ಕಾಂತಕ್ಷೇತ್ರಗಳಿಂದಾಗಿ.

ವಿದ್ಯುದಾವೇಶಗಳ ನಡುವೆ ವರ್ತಿಸುವ ಸ್ಥಾಯೀವಿದ್ಯುದ್ಬಲಸಂಬಂಧೀ ನಿಯಮವನ್ನು ಆವಿಷ್ಕರಿಸಿದಾತ (1785) ಫ್ರೆಂಚ್ ಭೌತವಿಜ್ಞಾನಿ ಚಾರ್ಲ್ಸ್ ಆಗಸ್ಟಿನ್ ಡೆ ಕೂಲಾಮ್ (1736-1806). ಕೂಲಾಮ್‌ನ ನಿಯಮದಂತೆ ಎರಡು 'ಬಿಂದು ಆವೇಶಗಳ (Q1,Q2) ನಡುವಿನ ಆಕರ್ಷಣ ಅಥವಾ ವಿಕರ್ಷಣ ಬಲ (F) ಆ ಆವೇಶಗಳ ಗುಣಲಬ್ಧಕ್ಕೆ ಅನುಲೋಮಾನುಪಾತೀಯವಾಗಿಯೂ ಅವುಗಳ ನಡುವಿನ ಅಂತರದ (r) ವರ್ಗಕ್ಕೆ ವಿಲೋಮಾನುಪಾತೀಯವಾಗಿಯೂ ಇರುತ್ತದೆ.’ ಸೂತ್ರೀಕರಿಸಿದಾಗ ಈ ನಿಯಮ ಇಂತಾಗುತ್ತದೆ: ಇಲ್ಲಿ k ಎಂಬುದೊಂದು ಸ್ಥಿರಾಂಕ. k ಯ ಮೌಲ್ಯ ಬಲ, ಆವೇಶ ಮತ್ತು ಅಂತರಗಳ ಅಳತೆಯ ಏಕಮಾನಗಳು ಯಾವ ಪದ್ಧತಿಯವು ಎಂಬುದನ್ನೂ ಆ ಆವೇಶಗಳು ನೆಲಸಿರುವ ಮಾಧ್ಯಮದ ವಿದ್ಯುಚ್ಛೀಲತೆಯನ್ನೂ ಅವಲಂಬಿಸಿದೆ. ಯಾವುದೇ ಬಿಂದುವಿನಲ್ಲಿ ಏಕಮಾನ ಆವೇಶ ಅನುಭವಿಸುವ ಬಲ ಅಲ್ಲಿಯ ವಿದ್ಯುತ್‌ಕ್ಷೇತ್ರದ ತೀವ್ರತೆ. ಒಂದು ಆವೇಶದ ಮೇಲೆ ಎರಡು ಅಥವಾ ಹೆಚ್ಚು ಆವೇಶಗಳು ಏಕಕಾಲದಲ್ಲಿ ಬಲ ಪ್ರಯೋಗಿಸುತ್ತಿದ್ದರೆ ಆ ಆವೇಶ ಅನುಭವಿಸುತ್ತಿರುವ ಒಟ್ಟಾರೆ ಬಲ ಆ ಎಲ್ಲ ಬಲಗಳ ಸದಿಶ ಮೊತ್ತ. ಇದೇ ಅಧ್ಯಾರೋಪಣ (ಸೂಪರ್‌ಪೊಸಿಷನ್) ತತ್ತ್ವ. ವಿದ್ಯುತ್‌ಕ್ಷೇತ್ರದ ಯಾವುದೇ ಬಿಂದುವಿನಲ್ಲಿ ಏಕಮಾನ ಆವೇಶದ ವಿಭವಶಕ್ತಿ ಅನನ್ಯ. ಇದೇ ವಿದ್ಯುದ್ವಿಭವ ಅಥವಾ ಸರಳವಾಗಿ ವಿಭವ. ಎರಡು ಬಿಂದುಗಳ ವಿಭವಗಳ ನಡುವಿನ ಅಂತರವೇ ವಿಭವಾಂತರ.

ಉಲ್ಲೇಖಗಳು

[ಬದಲಾಯಿಸಿ]
  1. "static electricity ." World Encyclopedia. . Encyclopedia.com. 23 Aug. 2023 <https://www.encyclopedia.com>.
  2. Stewart, Ken. "static electricity". Encyclopedia Britannica, 24 Mar. 2023, https://www.britannica.com/science/static-electricity. Accessed 24 August 2023.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: