ಸೋನಾಲ್ ಮಾನ್ಸಿಂಗ್
ಸೋನಾಲ್ ಮಾನ್ಸಿಂಗ್ | |
---|---|
ಜನನ | ಸೋನಾಲ್ ಪಕ್ವಾಸ ಏಪ್ರಿಲ್ ೩೦, ೧೯೪೪ ಮುಂಬಯಿ |
ವೃತ್ತಿ(ಗಳು) | ಭಾರತೀಯ ಶಾಸ್ತ್ರೀಯ ನರ್ತಕಿ, ನೃತ್ಯ ಸಂಯೋಜಕಿ |
ಸಕ್ರಿಯ ವರ್ಷಗಳು | 1962–ಪ್ರಸಕ್ತ |
ಜಾಲತಾಣ | www.sonalmansingh.in |
ಸೋನಾಲ್ ಮಾನ್ಸಿಂಗ್ (ಏಪ್ರಿಲ್ ೩೦, ೧೯೪೪) ಭಾರತೀಯ ನೃತ್ಯಕಲೆಗಳಲ್ಲಿನ ಪ್ರಖ್ಯಾತ ಕಲಾವಿದೆಯಾಗಿದ್ದಾರೆ. ಅವರ ನೃತ್ಯ ಪ್ರದರ್ಶನ ಮತ್ತು ನೃತ್ಯ ಸಂಯೋಜನೆಗಳು ವಿಶ್ವದಾದ್ಯಂತ ಪ್ರಖ್ಯಾತವಾಗಿವೆ. ಪ್ರಧಾನವಾಗಿ ಒಡಿಸ್ಸಿ ನೃತ್ಯಪ್ರಕಾರದ ಕಲಾವಿದರೂ. ನೃತ್ಯರೂಪಕಗಳ ಸಂಯೋಜಕರೂ ಆದ ಸೋನಾಲ್ ಮಾನ್ಸಿಂಗರು ಇತರ ಭಾರತೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ, ಕೂಚಿಪುಡಿ ಮತ್ತು ಛಾವ್ ಕಲೆಗಳಲ್ಲೂ ವಿಶಿಷ್ಟ ಸಾಧಕರು.
ಕೌಟುಂಬಿಕ ಹಿನ್ನೆಲೆ
[ಬದಲಾಯಿಸಿ]ಮಹಾನ್ ಭಾರತೀಯ ನೃತ್ಯಕಲಾವಿದರಾದ ಸೋನಾಲ್ ಮಾನ್ಸಿಂಗ್ ಅವರು ಏಪ್ರಿಲ್ ೩೦, ೧೯೪೪ರಂದು ಮುಂಬಯಿನಲ್ಲಿ ಜನಿಸಿದರು. ಸೋನಾಲ್ ಮಾನ್ಸಿಂಗ್ ಅವರ ತಂದೆ ಅರವಿಂದ್ ಮತ್ತು ತಾಯಿ ಸಾಮಾಜಿಕ ಕಾರ್ಯಕರ್ತರಾಗಿ ಗುಜರಾತ್ ರಾಜ್ಯದಲ್ಲಿ ಮಹತ್ತರ ಸೇವೆ ಸಲ್ಲಿಸಿ, ಪದ್ಮಭೂಷಣ ಪ್ರಶಸ್ತಿ ಸ್ವೀಕೃತರಾದ ಪೂರ್ಣಿಮಾ ಪಕ್ವಾಸ ಅವರು. ಸೋನಾಲ್ ಅವರ ತಾತ ಮಂಗಲ್ ದಾಸ್ ಪಕ್ವಾಸ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದುದಲ್ಲದೆ ಸ್ವತಂತ್ರ ಭಾರತದಲ್ಲಿ ನಿಯೋಜಿತರಾದ ಪ್ರಥಮ ಐದು ರಾಜ್ಯಪಾಲರಲ್ಲಿ ಓರ್ವರು.
ಶಿಕ್ಷಣ
[ಬದಲಾಯಿಸಿ]- ಸೋನಾಲ್ ಮಾನ್ಸಿಂಗ್, ತಮ್ಮ ನಾಲ್ಕನೆಯ ವಯಸ್ಸಿನಲ್ಲಿಯೇ ನಾಗಪುರದಲ್ಲಿ ಮಣಿಪುರಿ ನೃತ್ಯ ಕಲಿಯಲು ಪ್ರಾರಂಭಿಸಿದರು. ತಮ್ಮ ಏಳನೆಯ ವಯಸ್ಸಿನಲ್ಲಿ ಭರತನಾಟ್ಯವನ್ನು ಕಲಿಯಲು ಪ್ರಾರಂಭಿಸಿದರು. ಮುಂಬಯಿನ ಭಾರತೀಯ ವಿದ್ಯಾಭವನದಿಂದ ಪ್ರವೀಣ ಮತ್ತು ಕೋವಿದ ಸಂಸ್ಕೃತ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಸೋನಾಲ್ ಮಾನ್ಸಿಂಗರು ಮುಂಬಯಿನ ಎಲ್ಫಿನ್ಸ್ಟನ್ ಕಾಲೇಜಿನಲ್ಲಿ ಜರ್ಮನ್ ಸಾಹಿತ್ಯದ ಓದನ್ನು ಒಳಗೊಂಡ ಬಿ.ಎ ಪದವಿಯನ್ನು ಗಳಿಸಿದರು.
- ಸೋನಾಲ್ ಮಾನ್ಸಿಂಗರು, ತಮ್ಮ ಕುಟುಂಬದ ವಿರೋಧವಿದ್ದಾಗ್ಯೂ ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ಪ್ರೊಫೆಸರ್ ಯು ಎಸ್ ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ ಅವರಿಂದ ಭರತನಾಟ್ಯದ ಉನ್ನತ ಶಿಕ್ಷಣವನ್ನು ಗಳಿಸತೊಡಗಿದರು. ಇದಲ್ಲದೆ ಮೈಲಾಪುರದ ಗೌರಿ ಅಮ್ಮಾಳ್ ಅವರಿಂದ ಅಭಿನಯ ಶಿಕ್ಷಣವನ್ನು ಗಳಿಸಿದರು. ೧೯೬೫ರಿಂದ ಮೊದಲ್ಗೊಂಡಂತೆ ಗುರು ಕೇಳುಚರಣ್ ಮಹಾಪಾತ್ರರಿಂದ ಒಡಿಸ್ಸಿ ನೃತ್ಯ ತರಬೇತಿಯನ್ನು ಪಡೆದರು.
ನೃತ್ಯ ಕಲಾವಿದರಾಗಿ
[ಬದಲಾಯಿಸಿ]೧೯೬೨ರ ವರ್ಷದಲ್ಲಿ ಮುಂಬಯಿನಲ್ಲಿ ತಮ್ಮ ಮೊದಲ ನೃತ್ಯಪ್ರದರ್ಶನವನ್ನು ನೀಡಿದ ಸೋನಾಲ್ ಮಾನಸಿಂಗರು, ೧೯೭೭ರ ವೇಳೆಗೆ ನವದೆಹಲಿಯಲ್ಲಿ ಸೆಂಟರ್ ಫಾರ್ ಇಂಡಿಯನ್ ಕ್ಲಾಸಿಕಲ್ ಡ್ಯಾನ್ಸಸ್ ಎಂಬ ಶಿಕ್ಷಣಕೇಂದ್ರವನ್ನು ಸ್ಥಾಪಿಸಿದರು. ನೃತ್ಯರಂಗದಲ್ಲಿನ ತಪಸ್ಸನ್ನು ನಿರಂತರ ಕೈಗೊಂಡ ಸೋನಲ್ ಮಾನ್ಸಿಂಗ್ ಅವರು ಮುಂಬಂದ ವರುಷಗಳಲ್ಲಿ ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದರು.
ಪ್ರಖ್ಯಾತ ನೃತ್ಯ ರೂಪಕಗಳು
[ಬದಲಾಯಿಸಿ]- ಇಂದ್ರಧನುಸ್ಸು,
- ಮಾನವತ,
- ಮೇರಾ ಭಾರತ್,
- ದ್ರೌಪದಿ,
- ಗೀತ ಗೋವಿಂದ,
- ಸಬ್ರಾಸ್,
- ಚತುರಂಗ,
- ಪಂಚಕನ್ಯಾ,
- ದುರ್ಗಾದೇವಿ,
- ಆತ್ಮಯಾನ,
- ಸಮನ್ವಯ- ಇವು ಸೋನಾಲ್ ಮಾನಸಿಂಗರು ಸೃಜಿಸಿದ ಕೆಲವೊಂದು ಪ್ರಖ್ಯಾತ ನೃತ್ಯರೂಪಕಗಳು.
ಪ್ರಶಸ್ತಿ ಗೌರವಗಳು
[ಬದಲಾಯಿಸಿ]- ಪದ್ಮಭೂಷಣ,
- ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ,
- ಪದ್ಮವಿಭೂಷಣ,
- ಕಾಳಿದಾಸ ಸಮ್ಮಾನ್,
- ಡಾಕ್ಟರೇಟ್ ಮುಂತಾದ ಹಲವಾರು ಗೌರವಗಳು ಸೋನಾಲ್ ಮಾನ್ಸಿಂಗ್ ಅವರನ್ನರಸಿ ಬಂದಿವೆ.
ಸಾಕ್ಷಚಿತ್ರ
[ಬದಲಾಯಿಸಿ]ಸೋನಾಲ್ ಮಾನ್ಸಿಂಗ್ ಅವರ ನಾಲ್ಕು ದಶಕಗಳ ನೃತ್ಯ ಸಾಧನೆಯನ್ನು ಪ್ರಸ್ತುತಪಡಿಸಿದ ಪ್ರಕಾಶ್ ಜಾ ಅವರ ನಿರ್ದೇಶನದ ‘ಸೋನಾಲ್’ ಎಂಬ ಸಾಕ್ಷ್ಯಚಿತ್ರವು ಚಿತ್ರವು ಕಳೆದ ವರ್ಷದ ರಾಷ್ಟ್ರೀಯ ಪ್ರಶಸ್ತಿ ಗಳಿಸಿತು.
ಕಲೆ ಎಂಬುದು ನಿಂತ ನೀರಲ್ಲ
[ಬದಲಾಯಿಸಿ]“ನೃತ್ಯಪಟು ಕೇವಲ ನೃತ್ಯಗಾರ ಇಲ್ಲವೇ ನೃತ್ಯಗಾತಿ ಮಾತ್ರವೇ ಅಲ್ಲ. ಆತ ಅಥವಾ ಆಕೆ ಪರಿಸರದ ಒಂದು ಭಾಗ. ಸಮಾಜದಲ್ಲಿನ ಆಗುಹೋಗುಗಳು ಪ್ರತೀ ವ್ಯಕ್ತಿಯ ಮೇಲೆ, ಆದರಲ್ಲೂ ಕಲಾವಿದರ ಮೇಲೆ ಅಪಾರವಾದ ಪ್ರಭಾವವನ್ನು ಬೀರುವಂತದ್ದಾಗಿರುತ್ತವೆ. ಕಲೆ ಎಂಬುದು ವರ್ತಮಾನವನ್ನು ಪ್ರತಿಬಿಂಭಿಸದಿದ್ದಲ್ಲಿ ಅದು ನಿಂತ ನೀರಾಗಿಬಿಡುತ್ತದೆ” ಎನ್ನುತ್ತಾರೆ ಸೋನಾಲ್ ಮಾನ್ಸಿಂಗ್.
ಕೃತಿ ರಚನೆ
[ಬದಲಾಯಿಸಿ]ಭಾರತೀಯ ನೃತ್ಯ ಕಲೆಗಳ ಕುರಿತಾಗಿ ಸೋನಾಲ್ ಮಾನ್ಸಿಂಗ್ ಅವರು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ.