ಸೂರ್ಯನಾರಾಯಣ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೂರ್ಯನಾರಾಯಣ ದೇವಾಲಯಇದು ೧೨-೧೩ನೇ ಶತಮಾನಕ್ಕೆ ಸೇರಿರುವ ಕದಂಬರ ದೇಗುಲ.ಇದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೊಕಿನ ಹಳೆಹೊನ್ನತ್ತಿ ಗ್ರಾಮದಲ್ಲಿದೆ. ನಾಗರಶೈಲಿಯ ವಿಷ್ಣುವಿನ ೨೪ ಅವತಾರವಾದ ಕೇಶವಮೂರ್ತಿಯ ಶಿಲ್ಪ ಇದರ ಆಕರ್ಷಣೆ. ಅಪೂರ್ವ ಕಲಾಕೃತಿಗಳಿಂದ ಇನ್ನಷ್ಟು ಆಕರ್ಷಿಸಬೇಕಾದ ದೇಗುಲ ಮಾತ್ರ ಇದೀಗ ಮೌನ ಧರಿಸಿ ಕುಳಿತಿದೆ. ಬಹುಸುಂದರವಾದ ಕಲಾ ನೈಪುಣ್ಯತೆಯ ಸೂಕ್ಷ್ಮಾತಿಸೂಕ್ಷ್ಮ ಕುಸುರಿ ಕಲೆಗಳಿಂದ ಕೆತ್ತಲ್ಪಟ್ಟ ಕಪ್ಪು ಶಿಲೆಯ ನಿಂತ ಭಂಗಿಯಲ್ಲಿರುವ ವಿಗ್ರಹವುಳ್ಳ ಇಲ್ಲಿಯ ಸೂರ್ಯನಾರಾಯಣನನ್ನು ನೋಡುವುದೇ ಒಂದು ಸೂಗಸು.

ವಾಸ್ತು ಶಿಲ್ಪ[ಬದಲಾಯಿಸಿ]

ನಾಲ್ಕು ಕೈಗಳು, ಬಲಗೈಯಲ್ಲಿ ಶಂಖ ಮತ್ತು ಅಭಯ ಹಸ್ತದೂಂದಿಗೆ ಪದ್ಮ, ಎಡಗೈಯಲ್ಲಿ ಚಕ್ರ ಮತ್ತು ಗದೆ, ಕಾಲುಗಳ ಅಕ್ಕ ಪಕ್ಕದಲ್ಲಿ ಎರಡೂ ಕಡೆಗೂ ಚಾಮರಧಾರಿ ಸುಂದರಿಯರು, ಎಡಗೈಯಲ್ಲಿ ಅಸಮಾನ್ಯವಾದ ಮತ್ತು ವೈಶಿಷ್ಟ್ಯತೆಯಿಂದ ಕೂಡಿದ ಬೀಜಫಲ ಈ ಮೂರ್ತಿಯ ಪ್ರಮುಖ ಆಕರ್ಷಣೆ. ಕೇಶವಮೂರ್ತಿಯ ಪ್ರಭಾವಳಿಯಲ್ಲಿ ಚಿಕ್ಕದಾದ ದಶಾವತಾರ ಮೂರ್ತಿಗಳಿದ್ದು ಅವು ಕ್ರಮವಾಗಿ ಮತ್ಸ್ಯ, ಕೂರ್ಮ ಮತ್ತು ವರಾಹ ಅವತಾರಗಳು ಪ್ರಾಣೆಗಳ ರೂಪದಲ್ಲಿ, ನರಸಿಂಹ, ವಾಮನ, ಪರಶುರಾಮ, ಬಲರಾಮ, ದಶರಥರಾಮ, ಬುದ್ದ ಮತ್ತು ಕಲ್ಕಿಯನ್ನೂ ಕುಳಿತ ಭಂಗಿಯಲ್ಲಿ ಕೆತ್ತಲಾಗಿದೆ.

ಈ ಕೇಶವಮೂರ್ತಿಯ ಶಿಲ್ಪವನ್ನು ಗರುಡ ಪೀಠದ ಮೇಲೆ ಸ್ಠಾಪಿಸಲಾಗಿದೆ. ಇದೇ ಕಾಲಘಟ್ಟದ ಬಾದಾಮಿ ಚಾಲುಕ್ಯರಿಗೆ ಸೇರಿದ ಗಳಗನಾಥದಲ್ಲಿರುವ ಶಿಲ್ಪಕ್ಕೆ ಈ ಕೇಶವಮೂರ್ತಿಯ ಶಿಲ್ಪವು ಹೋಲಿಕೆಯಾಗುತ್ತದೆ. ಇದೇ ದೇವಾಸ್ಥಾನದಲ್ಲಿ ಅನಂತಶಯನ ಮೂರ್ತಿಯ ಶಿಲ್ಪ, ಅನೇಕ ಚಿಕ್ಕ ಚಿಕ್ಕ ನಾಗರಹಾವುಗಳನ್ನೂ ಕೆತ್ತಲ್ಪಟ್ಟ ಶಿಲ್ಪಗಳು ಇವೆ. ಈ ದೇವಾಸ್ಥಾನದ ಪ್ರಾಂಗಣದಲ್ಲಿ ಅನೇಕ ಕಲ್ಲಿನ ಕಂಬಗಳಿದ್ದು, ಅವು ಸಹ ವಿಭಿನ್ನ ಶೈಲಿಯಲ್ಲಿ ಕೆತ್ತಲ್ಪಟ್ಟಿವೆ. ೧೨-೧೩ನೇ ಶತಮಾನಕ್ಕೆ ಸೇರಿದ ಒಂದು ಶಾಸನವಿದ್ದು, ಇಷ್ಟಾರ್ಥಗಳನ್ನು ನೀಡೆಂದು ವಿಷ್ಣುವಿನ ಸ್ತುತಿಸಿದಂತೆ ದೇವನಾಗರ ಲಿಪಿಯಲ್ಲಿ ಸುಸ್ಥಿತಿಯಲ್ಲಿದೆ. ಈ ದೇವಸ್ಥಾನವು ಪುರಾತನವಾಗಿದ್ದು, ಕಾಲಾಂತರದಲ್ಲಿ ಜೀರ್ಣೋದ್ಧಾರಗೊಂಡ ಅನೇಕ ಅಂಶಗಳು ಗೋಚರಿಸುತ್ತವೆ. ಈ ಕಲಾನೈಪುಣ್ಯತೆಯಿಂದ ಕಂಗೂಳಿಸುವ ಕೇಶವಮೂರ್ತಿಯನ್ನೊಳಗೊಂಡ ಈ ದೇವಾಸ್ಥಾನವು ತುಂಬಾ ಹಾಳಾಗಿದ್ದು, ಜೀರ್ಣಾವಸ್ಥೆಯಲ್ಲಿದೆ.

ನಮ್ಮ ಪ್ರಾಚೀನ ಇತಿಹಾಸವನ್ನು ಕಟ್ಟುವ ನಿಟ್ಟಿನಲ್ಲಿ ಪುರಾತತ್ವ ಸರ್ವೇಕ್ಷಣಾಧಿಕಾರಿಗಳು ಇತ್ತ ಗಮನ ಹರಿಸಿ ದೇವಾಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಸ್ಮಾರಕಗಳನ್ನು ಸಂರಕ್ಷಿಸಬೇಕಿದೆ.