ಸುಲಭ್ ಇಂಟರ್ನ್ಯಾಶನಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಲಭ್ ಇಂಟರ್ನ್ಯಾಶನಲ್ ಎಂಬುದು 'ಸುಲಭ್ ಇಂಟರ್ನ್ಯಾಶನಲ್ ಸಮಾಜ ಸೇವಾ ಸಂಸ್ಥೆ' (SISSO)ಯ ಸಂಕ್ಷಿಪ್ತ ರೂಪವಾಗಿದೆ. ೧೯೭೦ರಲ್ಲಿ ಡಾ.ಬಿಂದೇಶ್ವರ್ ಪಾಟಕ್ ಎಂಬುವವರಿಂದ ಸ್ಥಾಪಿತಗೊಂಡ ಈ ಸಂಸ್ಥೆಯ ಮುಖ್ಯ ಕಚೇರಿ ದೆಹಲಿಯಲ್ಲಿದೆ. ಆರೋಗ್ಯವಂತ ಸಮಾಜ ನಿರ್ಮಾಣ ಮತ್ತು ಪರಿಸರ ನೈರ್ಮಲ್ಯ ನಿವಾರಣೆಗಾಗಿ ಹುಟ್ಟಿಕೊಂಡ ಸುಲಭ್ ಇಂಟರ್ ನ್ಯಾಶನಲ್ ಭಾರತದ ಉದ್ದಗಲಕ್ಕೂ ಶೌಚಾಲಯಗಳನ್ನು ನಡೆಸುತ್ತಿದ್ದು ತನ್ಮೂಲಕ ಸಹಸ್ರಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿದೆ.ಇದಲ್ಲದೇ ಸುಲಭ್ ಇಂಟರ್ ನ್ಯಾಶನಲ್ ಸಮಾಜಮುಖಿ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಪ್ರತಿವರ್ಷ ಪ್ರಶಸ್ತಿ ನೀಡಿ ಗೌರವಿಸುತ್ತ ಬಂದಿದೆ. ಜನರ ಮನೆಯ ಹೊರಗಿನ ಶೌಚಾಲಯಗಳಲ್ಲಿನ ಮಲವನ್ನು ಬಳಿದು ಮಡಕೆಯಲ್ಲಿ ಶೇಖರಿಸಿ, ತಲೆಯಮೇಲೆ ಹೊತ್ತು ಊರಿನ ಹೊರಗೆ ಸಾಗಿಸುವ ಅನಿಷ್ಟ ಪದ್ಧತಿಯನ್ನು ಕಂಡು ಹೇಸಿ ಭಂಗಿ ಸಮಾಜದ ಮುಕ್ತಿಗಾಗಿ ಆರಂಭಿಸಿದ ಸುಲಭ್, ಈಗ ಅದರ ಮೂಲ ಉದ್ದೇಶ್ಯದ ಜೊತೆಗೆ ಸಾರ್ವಜನಿಕ ಜೀವನವನ್ನು ಸಹ್ಯಗೊಳಿಸಿದೆ. ನಗರಗಳ ಮೂಲೆ ಮೂಲೆಗಳಲ್ಲೂ ಕಾಣಬರುವ ಸುಲಭ್ ಶೌಚಾಲಯಗಳ ಸ್ಥಾಪನೆ, ನಗರ ಜನರ ನಿವಾಸಿಗಳ ಜೀವನವನ್ನು ಸುಗಮಮಾಡಲೋಸುಗ ರೂಪಿಸಿದ್ದಲ್ಲ. ಭಂಗಿಗಳ ಜೀವನ ಪದ್ಧತಿಯನ್ನು ನಿರ್ಮೂಲ ಮಾಡುವುದೇ ಮುಖ್ಯ ಉದ್ದೇಶ್ಯವಾಗಿತ್ತು. 'ಸುಲಭ್' ಆ ದಿಶೆಯಲ್ಲಿ ಮಾಡಿದ ಒಂದು ಪ್ರಾಯೋಗಿಕ ಹೆಚ್ಚೆ. ಮಹಾತ್ಮ ಗಾಂಧಿಯವರು ಈ ಅನಿಷ್ಟ ಪದ್ಧತಿಯ ವಿರುದ್ಧ ಬಹಳವಾಗಿ ಹೊರಾಡಿದರು. ಸಮಯದ ಅಭಾವದಿಂದ ಈ ಕೆಲಸಕ್ಕೆ ಅವರು ಹೆಚ್ಚು ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಗಾಂಧೀಜಿಯವರ ಆದರ್ಶವನ್ನು ಡಾ.ಬಿಂದೇಶ್ವರ್ ಪಾಠಕರು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಪೂರ್ವಜೀವನದ ಪರಿಚಯ[ಬದಲಾಯಿಸಿ]

ಡಾ. ಬಿಂದೇಶ್ವರ್ ಪಾಠಕ್, ಬಿಹಾರದ ಸ್ಥಿತಿವಂತ ಬ್ರಾಹ್ಮಣ ಕುಟುಂಬದಲ್ಲಿ ಸನ್. ೧೯೪೩ ರ ಎಪ್ರಿಲ್ ೨ ರಂದು ಜನಿಸಿದರು. ಸನ್. ೧೯೬೪ ರಲ್ಲಿ ಸಮಾಜ ಶಾಸ್ತ್ರದಲ್ಲಿ ಪದವಿಗಳಿಸಿದರು. ಸನ್ ೧೯೮೦ ರಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಭಂಗಿಗಳ ಜೀವನಕುರಿತಂತೆ ಅಧ್ಯಯನ ನಡೆಸಿ ೧೯೮೫ ರಲ್ಲಿ ಪಿ. ಎಚ್.ಡಿ ಪದವಿಯನ್ನು ಪಡೆದರು. ೧೯೬೮ ರಲ್ಲಿ,ಬಿಹಾರದ ಗಾಂಧಿ ಸೆಂಟಿನೆರಿ ಸೆಲೆಬ್ರೇಶನ್ಸ ಸಮಿತಿಯ 'ಭಂಗಿ ಮುಕ್ತಿ ಸೆಲ್' ಗೆ ಸೇವಾರ್ಥಿಯಾಗಿ ಸೇರಿಕೊಂಡ ಬಳಿಕ ಭಂಗಿಗಳ ಜೀವನದ ಹಲವು ಸಮಸ್ಯೆಗಳ ಬಗ್ಗೆ ಅವರಿಗೆ ಹೆಚ್ಚು ಅರ್ಥವಾಯಿತು. ಮುಂದೆ ಅವರ ಜೀವನವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡರು ತಲತಲಾಂತರಗಳಿಂದ ಭಂಗಿ ಜನ ಸಮುದಾಯದಲ್ಲಿ ನಡೆದುಕೊಂಡು ಬರುತ್ತಿರುವ ಅಮಾನವೀಯ ಪದ್ಧತಿಗೆ ತೆರೆ ಎಳೆದು ಆ ಜನರನ್ನು ಮುಖ್ಯವಾಹಿನಿಯಲ್ಲಿ ಸೇರಿಸಲು ಬಹಳವಾಗಿ ಶ್ರಮಿಸಿದರು. ಹಲವು ಧರ್ಮ ಗ್ರಂಥಗಳನ್ನೂ ಓದಿ ಅದರಲ್ಲಿ ಪರಿಹಾರ ದೊರಕುವುದೇ, ಎಂದು ಹುಡುಕಾಡಿ ಸೊತರು. ಕೊನೆಗೆ ರಾಷ್ಟ್ರಾದ್ಯಂತ ಪ್ರವಾಸ ಮಾಡಿ ಭಂಗಿ ಸಮುದಾಯದ ಜೊತೆ ವಾಸಿಸಿ, ಅವರ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡರು.

ಭಂಗಿ ವೃತ್ತಿಯಬಗ್ಗೆ ಅಧ್ಯಯನ ನಡೆಸಿದರು[ಬದಲಾಯಿಸಿ]

ಇಂತಹ ಹಲವಾರು ಅಧ್ಯಯನಗಳ ಹಾಗೂ ಚಿಂತನೆಗಳ ಪರಿಣಾಮವಾಗಿ ಸುಲಭ್ ಇಂಟರ್ ನ್ಯಾಷನಲ್ ಸೋಶಿಯಲ್ ಸರ್ವೀಸ್ ಅರ್ಗನಿಸೆಶನ್ ಎಂಬ ಸರಕಾತೇತರ ಸಂಸ್ಥೆ (ಎನ್. ಜಿ. ಒ.) ಸನ್. ೧೯೭೦ ರಲ್ಲಿ ಜನ್ಮ ತಾಳಿತು. ಸಂಸ್ಥೆಯ ಮೂಲ ಉದ್ದೇಶ್ಯ ಭಂಗಿಗಳ ಮುಕ್ತಿ -ಅರ್ಥಾತ್ ಮಲಹೊರುವ ಪದ್ಧತಿಯ ನಿರ್ಮೂಲನೆ ಹಾಗೂ ಸುಸ್ಥಿರವಾದ ಒಂದು ಪರ್ಯಾಯ ಪದ್ಧತಿಯ ಅನ್ವೇಷಣೆ. ಮಾನವ ಹಕ್ಕುಗಳ ರಕ್ಷಣೆ ಪರಿಸರ ನೈರ್ಮಲ್ಯ , ತ್ಯಾಜ್ಯ ನಿರ್ವಹಣೆ. ಇತ್ಯಾದಿಗಳು. ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆ ಮೊದಲಾದ ಧ್ಯೇಯಗಳಿಂದ ಹುಟ್ಟಿಕೊಂಡ ಈ ಸಂಸ್ಥೆ ಹುಟ್ಟು ಹಾಕಿದ ಮೊತ್ತ ಮೊದಲ ಪರಿಕಲ್ಪನೆ, 'ಸುಲಭ್ ಶೌಚಾಲಯ್'.

ಭಂಗಿಗಳಿಗೆ ಪರ್ಯಾಯ ಉದ್ಯೋಗ[ಬದಲಾಯಿಸಿ]

ಮಲಹೊರುವ ಕೆಲಸವೇ ಭಂಗಿಗಳಿಗೆ ತಲತಲಾಂತರದಿಂದ ದೊರಕಿಬಂದ ಉದ್ಯೋಗವಾಗಿತ್ತು ಈಗ ಅದರಿಂದ ಮುಕ್ತಿ ದೊರಕಿದ ಬಳಿಕ ಅವರಿಗೆ ಬೇರೆ ವೃತ್ತಿಯನ್ನು ಒದಗಿಸುವ ಉದ್ದೇಶ್ಯದಿಂದ ಅವರಿಗಾಗಿಯೇ ತರಬೇತಿ ಕೇಂದ್ರಗಳನ್ನು ತೆರೆದಿದೆ. ಸ್ವಾವಲಂಭನೆ ಕಲಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಒಂದು ಆಂಗ್ಲ ಮಾಧ್ಯಮ ಶಾಲೆಯನ್ನು ತೆರೆದು ಅವರಿಗೆ ಮುಖ್ಯವಾಹಿನಿಯಲ್ಲಿ ಸಲೀಸಾಗಿ ಬೆರೆಯಲು ಅನುಕೂಲಮಾಡಿಕೊಟ್ಟಿದೆ. ಡಾ. ಪಾಠಕರು, ಸಿರಿವಂತ ಕುಟುಂಬಗಳು ಬಡ ಕುಟುಂಬಗಳ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಸೂಚಿಸಿ ಮನವಿ ಮಾಡಿಕೊಂಡಿದ್ದರು. ಮಾಜಿ ಪ್ರಧಾನಿ ಐ. ಕೆ. ಗುಜ್ರಾಲ್ ಈ ಕರೆಗೆ ಮನ್ನಿಸಿ ದತ್ತುತೆಗೆದುಕೊಂಡಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

  • ಪದ್ಮ ಭೂಷಣ
  • ಇಂದಿರಾ ಗಾಂಧಿ ಪ್ರಿಯ ದರ್ಶಿನಿ ಪ್ರಶಸ್ತಿ
  • ಗ್ಲೋಬಲ್ ೫೦೦ ರೋಲ್ ಪ್ರಶಸ್ತಿ
  • ರೋಡ್ ಟು ಫ್ರೀಡಂ ಪುಸ್ತಕ ರಚನೆ
  • ನೈರ್ಮಲಯಕ್ಕೆ ಸಂಬಂಧಿಸಿದ ಒಂದು ವಿಶ್ವ ವಿದ್ಯಾಲಯವನ್ನು ಸ್ಥಾಪಿಸುವ ಬಯಕೆ.
  • ನೈರ್ಮಲ್ಯಕ್ಕೇ ಮೀಸಲಾಗಿಡಲಾದ ಒಂದು ವಿಶ್ವ ಕೋಶ ನಿರ್ಮಾಣದ ಆಶೆ.
  • ಸುಲಭ್ ಇಂಟರ್ ನ್ಯಾಶನಲ್ ಸಂಸ್ಥೆಯು ದೆಹಲಿಯಲ್ಲಿ ಶೌಚಾಲಯದ ಪರಿಕರಣಗಳ ಕುರಿತಂತೆ ಮ್ಯೂಸಿಯಂ ನಡೆಸುತ್ತಲಿದೆ.
  • ಫ್ರೆಂಚ್ ಸರಕಾರದ ಪ್ರಶಸ್ತಿ
  • ಗ್ಲೋ ಬಲ್ ಎನರ್ಜಿ ಪ್ರಶಸ್ತಿ
  • ದುಬೈ ಇಂಟರ್ನ್ಯಾಷನಲ್ ಅವಾರ್ಡ್ ಫಾರ್ ಬೆಸ್ಟ್ ಪ್ರಾಕ್ತೀಸಸ್
  • ಸ್ಟಾಕ್ ಹೋಂ ವಾಟರ್ ಪ್ರೈಜ್

ಆರೋಗ್ಯ ಶುಚಿತ್ವಕ್ಕೆ ಮೀಸಲಾದ ಸಂಸ್ಥೆ[ಬದಲಾಯಿಸಿ]

ಅಧ್ಯಾಪಕರು, ಮಹಿಳೆಯರು, ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ನೈರ್ಮಲ್ಯಾಯದ ಬಗ್ಗೆ ಕ್ರಿಯಾ ಯೋಜನೆ ರೂಪಿಸಿವೆ. ಸುಮಾರು ೧೫೦ ಮಹಿಳೆಯರು ಈಗಾಗಲೇ ಕೆಲಸದಲ್ಲಿ ತತ್ಪರರಾಗಿದ್ದಾರೆ. ಇವರು ಸ್ಲಂ ಗಳಿಂದ ಆಯ್ದವರು. ತಾಂತ್ರಿಕ ಬೆಂಬಲ ನೀಡಲು ತರಪೇತಿಗಾಗಿ ವಿದೇಶಗಳಿಗೆ ಹೋಗಿ ಬಂದಿದ್ದಾರೆ. ವಿಜ್ಞಾನಿಗಳು ಇಂಜಿನಿಯರ್ ಗಳೂ ಸುಲಭ್ ಕಾರ್ಯದಲ್ಲಿ ತಮ್ಮ ಶ್ರಮದಾನ ಮಾಡುತ್ತಿದ್ದಾರೆ.

ಉಚಿತ ಸಾರ್ವಜನಿಕ ಶೌಚಾಲಯ[ಬದಲಾಯಿಸಿ]

೫,೫೦೦ ಉಚಿತ ಮತ್ತು ಸ್ನಾನ ಗೃಹಗಳು ನಿರ್ಮಿತವಾಗಿವೆ.ಹಣ ತೆತ್ತು ಬಳಸುವ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ವಿರುವ ಶೌಚಾಲಯಗಳಿವೆ. ಕೆಲವು ಕಡೆ ದೂರವಾಣಿ, ಕ್ಲೋಕ್ ರೂಮ್ ವ್ಯವಸ್ಥೆಗಳಿವೆ. ಸರಕಾರದ ಜೊತೆಗೂಡಿ ಸಾರ್ವಜನಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಯಾಗಿದೆ. ಆಫ್ಘಾನಿಸ್ತಾನ್, ದಕ್ಷಿಣ ಆಫ್ರಿಕಾ, ಚೀನಾ ,ಭೂತಾನ್, ನೇಪಾಳ, ಇಥಿಯೋಪಿಯ, ಸೇರಿದಂತ ೧೦ ದೇಶಗಳಲ್ಲಿ ಈ ಸೇವೆ ಲಬ್ಯವಿದೆ. ೫೦ ಕ್ಕಿಂತ ಹೆಚ್ಚು ಅಭಿವೃದ್ಧಿ ಶೀಲದೇಶಗಳಲ್ಲಿ ಈ ಯೋಜನೆಗೆ ಮನ್ನಣೆ ದೊರಕಿದೆ.

ಶೌಚಾಲಯದ ಬಗ್ಗೆ ಕಿರು ಚಿತ್ರ[ಬದಲಾಯಿಸಿ]

ಫ್ರಾನ್ಸ್ ದೇಶ, ಸುಲಭ್ ಶೌಚಾಲಯಗಳ ಎಲ್ಲಾ ವ್ಯವಸ್ಥೆಗಳ ಬಗ್ಗೆ ಮಾಹಿತಿಗಳನ್ನು ದೊರಕಿಸುವ ಒಂದು ಚಿಕ್ಕ ಚಿತ್ರವನ್ನು ತಯಾರಿಸಿದೆ. ಪಾರಂಪರಿಕವಾಗಿ ವರ್ಷಾನುಗಟ್ಟಲೆ ಭಂಗಿಗಳ ಕಾರ್ಯದಲ್ಲಿ ನಿರತರಾಗಿದ್ದ ಇಬ್ಬರು ಭಂಗಿಗಳು ಆ ಕಾರ್ಯದಿಂದ ಮುಕ್ತರಾದಬಳಿಕದ ತಮ್ಮ ಅನುಭವಗಳನ್ನು, ವೀಕ್ಷಕ ರೊಂದಿಗೆ ಹಂಚಿಕೊಳ್ಳುವ ದೃಶ್ಯವೂ ಇದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]