ವಿಷಯಕ್ಕೆ ಹೋಗು

ಸುಖ್‌ಸಾಗರ ದತ್ತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಖ್‌ಸಾಗರ ದತ್ತಾ
Born೧೮೯೦
Died೩ ನವೆಂಬರ್ ೧೯೬೭
ಬ್ರಿಸ್ಟಲ್
Nationalityಭಾರತೀಯರು/ ಬ್ರಿಟಿಷ್
Education
  • ಮರ್ಚೆಂಟ್ ವೆಂಚರರ್ಸ್ ಟೆಕ್‌ನಿಕಲ್ ಕಾಲೇಜು
  • ಯುನಿವರ್ಸಿಟಿ ಆಫ್ ಬ್ರಿಸ್ಟೋಲ್ ಮೆಡಿಕಲ್ ಸ್ಕೂಲ್
Occupationವೈದ್ಯ ಮತ್ತು ರಾಜಕೀಯ ಕಾರ್ಯಕರ್ತ
Spouseರೂಬಿ ನೀ ಯಂಗ್
Childrenಅಲ್ಬಿಯಾನ್ ಮತ್ತು ಡೇವಿಡ್

ಸುಖ್‌ಸಾಗರ ದತ್ತಾ, ಅಲಿಯಾಸ್ ಸುಖ ಸಾಗರ್ ದತ್ತಾ (೧೮೯೦-೧೯೬೭), ಒಬ್ಬ ವೈದ್ಯ ಮತ್ತು ರಾಜಕೀಯ ಕಾರ್ಯಕರ್ತ. ಇವರು ಭಾರತದ ಬಂಗಾಳದಲ್ಲಿ ಜನಿಸಿದರು. [] ೧೯೦೮ ರಲ್ಲಿ, ಅವರ ಸಹೋದರ ಉಲ್ಲಾಸಕರ್ ದತ್ತ ಅವರು ತಮ್ಮ ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬ್ರಿಟಿಷ್ ರಾಜ್‍ನ ಅಡಿಯಲ್ಲಿ ಬಂಧಿಸಲ್ಪಟ್ಟರು ಮತ್ತು ದೀರ್ಘಾವಧಿಯ ಜೈಲು ಶಿಕ್ಷೆಗೆ ಗುರಿಯಾದರು. [] ತಮ್ಮನ್ನೂ ಬಂಧಿಸುವ ಭಯದಿಂದ, ಸುಖಸಾಗರ್ ಲಂಡನ್‌ಗೆ ಓಡಿಹೋದರು. ಅಲ್ಲಿ ಅವರು ಲಂಡನ್ ಟ್ಯುಟೋರಿಯಲ್ ಕಾಲೇಜಿಗೆ ಸೇರಿಕೊಂಡರು ಮತ್ತು ಬ್ಲೂಮ್ಸ್‌ಬರಿ ಗ್ರೂಪ್‌ನ ಸದಸ್ಯರೊಂದಿಗೆ ಸಂಪರ್ಕ ಬೆಳೆಸಿಕೊಂಡರು. [] ೧೯೧೦-೧೧ ರ ಸುಮಾರಿಗೆ ಅವರು ಬ್ರಿಸ್ಟಲ್‌ನ ರೂಬಿ ಯಂಗ್ ಅವರನ್ನು ಭೇಟಿಯಾದರು ಮತ್ತು ಇಬ್ಬರ ನಡುವೆ ಪ್ರೀತಿ ಚಿಗುರಿತು, ನಂತರ ಅವರು ವಿವಾಹವಾದರು. [] ನಟರಾಗಲು ಪ್ರಯತ್ನಿಸಿ ವಿಫಲರಾದ ನಂತರ, ಅವರು ಬ್ರಿಸ್ಟಲ್‌ನಲ್ಲಿರುವ ಸೇಂಟ್ ಪಾಲ್ಸ್‌ಗೆ ತೆರಳಿದರು. ಅಲ್ಲಿ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಅವರೆಂದರೆ, ಅಲ್ಬಿಯಾನ್ ಮತ್ತು ಡೇವಿಡ್. []

೧೯೧೩ ಅಥವಾ ೧೯೧೪ ರಲ್ಲಿ ದತ್ತ ಅವರು ಮರ್ಚೆಂಟ್ ವೆಂಚರರ್ಸ್ ತಾಂತ್ರಿಕ ಕಾಲೇಜಿಗೆ ಸೇರಿದರು. ಅಲ್ಲಿ ಅವರು ೧೯೧೫ ರಲ್ಲಿ ಬ್ರಿಸ್ಟಲ್ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಗೆ ಸೇರಲು ಅವಕಾಶ ಮಾಡಿಕೊಡುವ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಅವರು ೨೨ ಅಕ್ಟೋಬರ್ ೧೯೨೦ ರಂದು ವೈದ್ಯರಾಗಿ ಅರ್ಹತೆ ಪಡೆದರು. [] ಬ್ರಿಟನ್‌ನಲ್ಲಿ ಭಾರತೀಯ ವೈದ್ಯರು ತುಂಬಾ ವಿರಳವಾಗಿದ್ದ ಸಮಯದಲ್ಲಿ ಅವರು ಬ್ರಿಸ್ಟಲ್ ಜನರಲ್ ಆಸ್ಪತ್ರೆಯನ್ನು ಹೌಸ್ ಫಿಸಿಶಿಯನ್ ಆಗಿ ಸೇರಿದರು. ಅವರು ಬ್ರಿಸ್ಟಲ್‌ನಲ್ಲಿ ವಿವಿಧ ವೈದ್ಯಕೀಯ ಸಂಸ್ಥೆಗಳಿಗೆ ಕೆಲಸ ಮಾಡಿದರು ಮತ್ತು ಸೇಂಟ್ ಜಾನ್ಸ್ ಆಂಬ್ಯುಲೆನ್ಸ್ ಬ್ರಿಗೇಡ್‌ಗೆ ಸ್ವಯಂಪ್ರೇರಿತ ಆಧಾರದ ಮೇಲೆ ತಮ್ಮ ಸೇವೆಗಳನ್ನು ನೀಡಿದರು. ಬ್ರಿಗೇಡ್‌ಗೆ ಅವರು ನೀಡಿದ ಜೀವಮಾನದ ಸೇವೆಗಳಿಗಾಗಿ ೧೯೫೯ ರಲ್ಲಿ ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು. []

ದತ್ತ ಅವರು ತಮ್ಮ ಜೀವನದುದ್ದಕ್ಕೂ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಬದ್ಧರಾಗಿದ್ದರು. ಅವರು ಈ ಗುರಿಯೆಡೆಗೆ ಹೆಚ್ಚು ಗಮನ ಕೊಟ್ಟಿದ್ದರಿಂದ ೧೯೨೬ ರಲ್ಲಿ ಲೇಬರ್ ಪಕ್ಷಕ್ಕೆ ಸೇರಿದರು. [] ಅವರು ಸ್ಥಳೀಯ ರಾಜಕೀಯದೊಂದಿಗೆ ಹೆಚ್ಚು ತೊಡಗಿಸಿಕೊಂಡಿದ್ದರು. ಅವರು ಬ್ರಿಸ್ಟಲ್ ಲೇಬರ್ ಪಾರ್ಟಿಯ ಅಧ್ಯಕ್ಷರಾದರು (೧೯೪೬) ಮತ್ತು ಬ್ರಿಸ್ಟಲ್ ಟ್ರೇಡ್ಸ್ ಕೌನ್ಸಿಲ್ (೧೯೪೬-೭)ನ ಅಧ್ಯಕ್ಷರಾದರು.

೧೯೩೦ ರ ದಶಕದಲ್ಲಿ ದತ್ತಾ ಲಂಡನ್ ಮೂಲದ ಇಂಡಿಯಾ ಲೀಗ್‌ಗೆ ಸೇರಿದರು. ಇದು ಭಾರತೀಯ ಸ್ವಾತಂತ್ರ್ಯಕ್ಕಾಗಿ ಪ್ರಚಾರ ಮಾಡುತ್ತಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಶಾಖೆಯಾಯಿತು. ೧೯೪೪ ರಲ್ಲಿ ಲೇಬರ್ ಪಾರ್ಟಿ ಭಾರತೀಯ ಸ್ವಾತಂತ್ರ್ಯವನ್ನು ಬೆಂಬಲಿಸುವ ನಿರ್ಣಯವನ್ನು ಅಂಗೀಕರಿಸುವಲ್ಲಿ ದತ್ತಾ ಪ್ರಮುಖ ಪಾತ್ರ ವಹಿಸಿದರು. ೧೯೪೫ ರ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ವಿಜಯದ ನಂತರ ೧೯೪೭ ರಲ್ಲಿ ಇದು ವಾಸ್ತವವಾಯಿತು. []

ದತ್ತ ಅವರು ೧೯೫೬ ರಲ್ಲಿ ನಿವೃತ್ತರಾದರು ಮತ್ತು ಅವರ ಪತ್ನಿ ರೂಬಿ ಅವರೊಂದಿಗೆ ಆರು ತಿಂಗಳ ಭಾರತ ಪ್ರವಾಸಕ್ಕೆ ತೆರಳಿದರು. ಅವರು ೩ ನವೆಂಬರ್ ೧೯೬೭ ರಂದು ಹೃದಯಾಘಾತದಿಂದ ಬ್ರಿಸ್ಟಲ್‌ನಲ್ಲಿ ನಿಧನರಾದರು. [೧೦] ಅವರ ಪತ್ನಿ ಮತ್ತು ಇಬ್ಬರು ಪುತ್ರರು ಬದುಕುಳಿದರು.


ಉಲ್ಲೇಖಗಳು

[ಬದಲಾಯಿಸಿ]