ಸಿಸು ಸಂಗಮೇಶ
ಸಿಸು ಸಂಗಮೇಶ | |
---|---|
ಜನನ | ಸಂಗಮೇಶ ಸಿದ್ಧರಾಮಪ್ಪ ಮನಗೊಂಡ ಏಪ್ರಿಲ್ ೨೯, ೧೯೨೯ |
ಮರಣ | ಮೇ ೨೯, ೨೦೦೧ |
ವೃತ್ತಿ | ಶಿಕ್ಷಕರು, ಸಾಹಿತಿಗಳು, ಪ್ರಕಾಶಕಾರರು |
ವಿಷಯ | ಸಾಹಿತ್ಯ, ಶಿಶು ಸಾಹಿತ್ಯ, |
ಸಿಸು ಸಂಗಮೇಶ (ಏಪ್ರಿಲ್ ೨೯, ೧೯೨೯ - ಮೆ ೨೯, ೨೦೦೧) ಆದರ್ಶ ಶಿಕ್ಷಕರಾಗಿ, ಸಾಹಿತ್ಯ ರಚನಕಾರರಾಗಿ ಅದರಲ್ಲೂ ಪ್ರಮುಖವಾಗಿ ಇಂದಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಮೌಲ್ಯಯುತ ಶಿಶು ಸಾಹಿತ್ಯ ರಚನಕಾರರಾಗಿ, ಪ್ರಕಾಶಕರಾಗಿ ಸಾಧಿಸಿದ ಕೆಲಸ ಮಹತ್ವಯುತವಾದದ್ದು.[೧]
ಜೀವನ
[ಬದಲಾಯಿಸಿ]ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದ ‘ಸಿಸು’ ಸಂಗಮೇಶರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಯರನಾಳವೆಂಬ ಗ್ರಾಮದಲ್ಲಿ ೨೯ನೇ ಏಪ್ರಿಲ್ ೧೯೨೯ರಂದು ಜನಿಸಿದರು. ಇವರ ಮೊದಲ ಹೆಸರು ಸಂಗಮೇಶ ಸಿದ್ಧರಾಮಪ್ಪ ಮನಗೊಂಡ. ತಂದೆ ಸಿದ್ಧರಾಮಪ್ಪನವರು ಮತ್ತು ತಾಯಿ ಗೌರಮ್ಮನವರು. ಅವರ ಶಿಕ್ಷಣ ವಿಜಾಪುರ ಜಿಲ್ಲೆಯ ಹಲವೆಡೆಗಳಲ್ಲಿ ನೆರವೇರಿತು. ಸಂಗಮೇಶರು ಶಾಲಾ ಅಧ್ಯಾಪಕರಾಗಿ ೧೯೪೮ರಲ್ಲಿ ಉದ್ಯೋಗಕ್ಕೆ ಸೇರಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ೧೯೮೪ರಲ್ಲಿ ನಿವೃತ್ತರಾದರು.
ಸಾಧನೆ
[ಬದಲಾಯಿಸಿ]ಸಂಗಮೇಶರು ವೃತ್ತಿಯಲ್ಲಿ ಅಧ್ಯಾಪಕರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತರು. ಕವಿತೆ, ಅನುವಾದ, ಪ್ರೌಢಸಾಹಿತ್ಯ, ಸಂಪಾದನೆ, ಮಕ್ಕಳ ಸಾಹಿತ್ಯ ಹೀಗೆ ಹಲವಾರು ಪ್ರಕಾರಗಳಲ್ಲಿ ಮಹತ್ತರವಾದ ಸಾಹಿತ್ಯ ಕೃಷಿ ಮಾಡಿದರು. ತಮ್ಮಂತೆಯೇ ಶಿಕ್ಷಕರಲ್ಲಿ ಹುದುಗಿದ್ದ ಸಾಹಿತ್ಯವನ್ನು ಪ್ರಕಾಶಿಸಲು ಅವರು ಪ್ರಾರಂಭಿಸಿದ್ದು ‘ಭಾರತೀಯ ಸಾಹಿತ್ಯ ಭಂಡಾರ ಪ್ರಕಾಶನ’ ಎಂಬ ಸಂಸ್ಥೆ. ಈ ಸಂಸ್ಥೆಗೆ ಪೂರಕವಾಗಿ ೧೯೬೪ರಲ್ಲಿ ಪ್ರಾರಂಭಿಸಿದ್ದು ಶಕ್ತಿ ಮುದ್ರಣಾಲಯ. ತಮ್ಮ ಕೃತಿಗಳನಷ್ಟೇ ಅಲ್ಲದೆ ಭಾರತೀಯ ಸಾಹಿತ್ಯ ಭಂಡಾರ ಪ್ರಕಾಶನದಲ್ಲಿ ಹಲವಾರು ಕೃತಿಗಳನ್ನು ಪ್ರಕಟಿಸಿದರು. ಸಾಹಿತಿಗಳಿಗೆ ಮಕ್ಕಳ ಸಾಹಿತ್ಯ ರಚಿಸಲು ಪ್ರೇರೇಪಿಸಿ ಅದಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ್ದೇ ಅಲ್ಲದೆ, ಅಗಾಧ ನೆರವನ್ನು ಕೂಡಾ ನೀಡಿದರು. ಬಾಲಭಾರತಿ ಪ್ರಕಾಶನದಡಿ ಸುಮಾರು ೮೦ಕ್ಕೂ ಹೆಚ್ಚು ಕೃತಿ ಪ್ರಕಟಿಸಿದ ಹಿರಿಮೆ ಸಂಗಮೇಶರದು. ಇವುಗಳಲ್ಲಿ ಹನ್ನೆರಡು ಕೃತಿಗೆ ರಾಷ್ಟ್ರ ಪ್ರಶಸ್ತಿ, ಹದಿನಾರು ಕೃತಿಗಳಿಗೆ ರಾಜ್ಯ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಸಂದಿವೆ. ೧೯೭೮ರ ಅಂತಾರಾಷ್ಟ್ರೀಯು ಮಕ್ಕಳ ವರ್ಷದಲ್ಲಿ ಮಕ್ಕಳ ಮಾಸಪತ್ರಿಕೆ ‘ಬಾಲಭಾರತಿ’ ಆರಂಭಿಸಿ ನಾಲ್ಕು ವರ್ಷ ನಡೆಸಿದರು. ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಅಕಾಡಮಿಯನ್ನು ೧೯೮೩ರಲ್ಲಿ ಸ್ಥಾಪಿಸಿದರು.
ಸಾಹಿತ್ಯ ರಚನೆ
[ಬದಲಾಯಿಸಿ]ಸಂಗಮೇಶರ ಸಾಹಿತ್ಯ ಕೃಷಿಯಲ್ಲಿ ಮಕ್ಕಳಿಗಾಗಿ ರಚಿಸಿದ ಕೃತಿಗಳು-ನಾಯಿ ಫಜೀತಿ, ಯಾರು ಜಾಣರು? ಮಂಕು ಮರಿ, ಆಶೆಬುರುಕಿ ಆಶಾ, ಹೇಗಿದ್ದರು ಹೇಗಾದರು, ದಾರಿಯ ಬುತ್ತಿ ಮುಂತಾದುವು. ಕವಿತಾ ಸಂಕಲನಗಳು-ಸವಿ ಸಾಹಿತ್ಯ, ಕಾಡಿನ ಕಲಿಗಳು, ಶಾಲೆಗಿಂತ ಚೀಲಭಾರ, ಚುಟುಕು-ಗುಟುಕು, ಸೂರ್ಯು ಚಂದ್ರರ ನಡುವೆ ಮೊದಲಾದುವು. ಅನುವಾದಿತ-ಗೋಮುಖಯಾತ್ರೆ, ಕನಸಿನ ಲೋಕ, ಚತುರ ಚಾಣಾಕ್ಷ. ಸಂಪಾದಿತ-ಪುಟಿಚೆಂಡು, ಆಣೆಕಲ್ಲು, ನಾವು ನಮ್ಮವರು ಮೊದಲಾದುವು. ರಾಜ್ಯಮಟ್ಟದಲ್ಲಲ್ಲದೆ ದೇಶದ ವಿವಿಧೆಡೆ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಮ್ಮೇಳನ, ಕಮ್ಮಟ, ವಿಚಾರ ಗೋಷ್ಠಿಗಳಲ್ಲಿ ಭಾಗಿಯಾದರು.
ಪ್ರಶಸ್ತಿ ಗೌರವಗಳು
[ಬದಲಾಯಿಸಿ]ಸಂಗಮೇಶರಿಗೆ ಹಲವಾರು ಗೌರವ ಪುರಸ್ಕಾರಗಳು ಸಂದಿದ್ದವು. ಇವುಗಳಲ್ಲಿ ಪ್ರಮುಖವೆಂದರೆ ಆದರ್ಶ ಶಿಕ್ಷಕ ಪ್ರಶಸ್ತಿ, ‘ನನ್ನ ಮನೆ’ ಮತ್ತು ‘ನನ್ನ ಗೆಳೆಯ ಜಪಾನದ ಟಾರೊ’ ಕೃತಿಗೆ ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿ, ಚನ್ನಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸಿದ್ದ ಮಕ್ಕಳ ಸಾಹಿತ್ಯ ಸಮಾವೇಶದ ಸರ್ವಾಧ್ಯಕ್ಷತೆ. ಭೂಪಾಲದಲ್ಲಿ ನಡೆದ ಅಖಿಲ ಭಾರತ ಭಾಷಾ ಸಮ್ಮೇಳನದ ‘ಭಾರತ ಭಾಷಾ ಭೂಷಣ ಪ್ರಶಸ್ತಿ’ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದುವು. ಅವರಿಗೆ ಸಂದ ಕೆಲವೊಂದು ಪುರಸ್ಕಾರ ವಿವರಗಳು ಇಂತಿವೆ.
- ೧೯೬೩ ರಲ್ಲಿ ನನ್ನ ಮನೆಗೆ, ೧೯೬೮ರಲ್ಲಿ ನನ್ನ ಗೆಳೆಯ ಜಪಾನದ ಜಾರೊ ಕೃತಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿವೆ.
- ೧೯೭೮ರಲ್ಲಿ ವಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರಿಗೆ ಶಿಶು ಸಾಹಿತ್ಯ ಶಿಲ್ಪಿ ಎನ್ನುವ ಬಿರುದು ನೀಡಿ ಗೌರವಿಸಿದೆ.
- ೧೯೮೦ರಲ್ಲಿ ನನ್ನ ಗೆಳೆಯ ಎಸ್ಕೊಮೊ ಇಗ್ಲಿಯಿನ್ ಕೃತಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದಿದೆ.
- ೧೯೮೦ರಲ್ಲಿ ಮೊಲದ ಮೂಗು ಮೊಂಡಾಯಿತು ಕೃತಿಗೆ ಕಾವ್ಯಾನಂದ ಪ್ರಶಸ್ತಿ ಲಭಿಸಿದೆ.
- ೧೯೮೦ರಲ್ಲಿ ಕರ್ನಾಟಕ ರಾಜ್ಯ ಸರಕಾರ ಇವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
ಸಾಹಿತ್ಯ
[ಬದಲಾಯಿಸಿ]ಇವರ ಕೆಲವೊಂದು ಕೃತಿಗಳು ಇಂತಿವೆ:
- ನನ್ನ ಮನೆ
- ನನ್ನ ಗೆಳೆಯ ಜಪಾನದ ಜಾರೊ
- ನನ್ನ ಗೆಳೆಯ ಎಸ್ಕಿಮೊ ಇಗ್ಲಿಯಿನ್
- ಮೊಲದ ಮೂಗು ಮೊಂಡಾಯಿತು
- ನರಿಯ ಫಜೀತಿ
- ಯಾರು ಜಾಣರು
- ಮಂಕು ಮರಿ
- ಅಲಿಯ ಒಂಟೆ
- ಕಳ್ಳ ಸಿಕ್ಕ
- ಚತುರ ಚಾಣಾಕ್ಷ
- ಹೊರನಾಡ ರೈತರು
- ಪುಟ ಚಂಡು (೧,೨)
- ಆಣೆಕಲ್ಲು (೧,೨)
- ನಾವು ನಮ್ಮವರು (೧,೨)
- ಸೀತೆನಿ ಸುಲಗಾಯಿ
- ಪಂಚಗಂಗೆ
- ಆನಿ ಬಂತೊಂದಾನಿ
- ಮಿಡಿ ಗೊಂಚಲು
- ಮಕ್ಕಳ ಸಾಹಿತ್ಯ-೧೯೮೪
ವಿದಾಯ
[ಬದಲಾಯಿಸಿ]ಈ ಮಹಾನ್ ಕ್ರಿಯಾಶೀಲರು ಮೇ ೨೯, ೨೦೦೧ರಂದು ಈ ಲೋಕವನ್ನಗಲಿದರು.