ಸಿಡಿ
ಸಿಡಿ ಎಂದರೆ ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದ್ದ, ನಿರ್ದಿಷ್ಟದೈವಕ್ಕೆ ಹೊತ್ತ ಹರಕೆ ತೀರಿಸುವ ಜನಪದ ಉಗ್ರ ಸಂಪ್ರದಾಯಗಳಲ್ಲಿ ಒಂದು. ಈ ಸಂಪ್ರದಾಯ ಶಾಕ್ತೇಯ ಪಂಥದ ಪ್ರಭಾವದಿಂದ ರೂಢಿಗೆ ಬಂದಂತೆ ತಿಳಿಯುತ್ತದೆ. ಸಿಡಿ ಆಡುವುದು ನಿರ್ದಿಷ್ಟ ದೇವತೆಯ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ನಡೆಯುತ್ತದೆ. ಈ ಸಂಪ್ರದಾಯವಿರುವ ಎಲ್ಲ ದೇವತೆಗಳೂ ಮಾರಿ, ದುರ್ಗಿ, ಊರಮ್ಮಗಳೇ ಆಗಿರುತ್ತಾರೆ.[೧]
ಸಿಡಿಯಲ್ಲಿ ಮುಖ್ಯವಾಗಿ ಬೆನ್ನುಸಿಡಿ, ಬಟ್ಟೆಸಿಡಿ ಎಂಬ ಎರಡು ವಿಧಾನಗಳಿವೆ. ಬೆನ್ಸಿಡಿ ಆಡುವುದು ತುಂಬ ಅಪಾಯಕರ ಹಾಗೂ ಭಯಂಕರ ದೃಶ್ಯ. ಕುಣಿಗಲ್ ತಾಲ್ಲೂಕಿನಲ್ಲಿ ಗುನ್ನಾಗೆರೆ ಎಂಬ ಗ್ರಾಮದಲ್ಲಿ ಬೆನ್ಸಿಡಿಯಾಡುವ ಪರಿಪಾಠವಿದೆ. ಈ ಊರಿನ ಗ್ರಾಮದೇವತೆ ಎಲ್ಲಮ್ಮನ ನಿಷ್ಠಾವಂತ ಭಕ್ತರು ಆ ದೇವತೆಯ ಜಾತ್ರೆಯಂದು ಬೆನ್ಸಿಡಿಯಾಡುತ್ತಾರೆ. ಸಿಡಿಯಾಡುವ ಹರಕೆ ಹೊತ್ತ ಭಕ್ತ ಆ ದಿನ ಸ್ನಾನ, ಮಡಿಗಳೊಂದಿಗೆ ಸಂಜೆಯವರೆಗೆ ಉಪವಾಸವಿದ್ದು ಸಂಜೆಯ ಹೊತ್ತಿಗೆ ಚೆನ್ನಾಗಿ ಹೆಂಡ ಕುಡಿದು, ವೀರಗಚ್ಚೆ ಹಾಕಿ, ಕೋರೆಪೇಟ ಧರಿಸಿ, ಅಂಗವಸ್ತ್ರವನ್ನು ಹೊದ್ದು ಹರೇ ದೋಣಿನ ಮೊರೆತಕ್ಕೆ ತಕ್ಕಂತೆ ಆವೇಶಭರಿತನಾಗಿ ವೀರಗುಣಿತ ಕುಣಿಯುತ್ತ ದೇವಸ್ಥಾನದ ಹತ್ತಿರ ಬರುತ್ತಾನೆ. ರಾತ್ರಿ ಎಂಟು ಗಂಟೆಯ ಸುಮಾರಿಗೆ ಆತ ದೇವರಿಗೆ ಎದುರಾಗಿ ಅಂಗಾತ ಮಲಗಿಕೊಳ್ಳುವನು. ಆಗ ತಲೆತಲಾಂತರದಿಂದ ನಡೆದುಬಂದ ಪರಿಪಾಠದಂತೆ ಆಯಾ ಕಾರ್ಯದ ವಂಶಸ್ಥ ಹಿರಿಯ ಪರಿಣತರು ಬೆನ್ಸಿಡಿಯಾಡುವಾತನ ಬೆನ್ನು(ಹುರಿ)ನರವನ್ನು ಹಿಡಿದು, ಶಸ್ತ್ರದಿಂದ ಅದರ ಹಿಂದಿನ ಭಾಗಕ್ಕೆ ಚುಚ್ಚಿ, ಕಬ್ಬಿಣದ ಕೊಂಡಿಗಳನ್ನು ನರಕ್ಕೆ ಸಿಕ್ಕಿಸುವರು. ಇದೇ ರೀತಿ ಇನ್ನೊಂದು ಭಾಗದ ಬೆನ್ನುಹುರಿ ನರಕ್ಕೂ ಚುಚ್ಚಿದ ಅನಂತರ ಅವನ ಮೇಲೆ ದೇವರ ತೀರ್ಥ ತಳಿಯುವರು. ಆತ ಎದ್ದು ಶ್ರದ್ಧಾಭಕ್ತಿಯಿಂದ ದೇವತೆಗೆ ಕೈಮುಗಿದ ಅನಂತರ ಆತನ ಒಂದು ಕೈಗೆ ಅಡಕೆಯ ಹೊಂಬಾಳೆಯನ್ನೂ ಇನ್ನೊಂದು ಕೈಗೆ ಕತ್ತಿಯನ್ನೂ ಕೊಟ್ಟು ಬೆನ್ನಿಗೆ ನಾಟಿಕೊಂಡಿರುವ ಕಬ್ಬಿಣದ ಕೊಕ್ಕೆಗಳಿಗೆ ಹೊಂದಿಕೊಂಡಿರುವ ಸರಪಳಿಗಳನ್ನು ತುಸು ಬಿಗಿಯಾಗಿ ಹಿಡಿದುಕೊಂಡು ಮುನ್ನಡೆಸುವರು. ಧಗಧಗನೆ ಕೆಂಡ ಕಾರುತ್ತ ಸಿದ್ಧವಾಗಿರುವ ಕೊಂಡವನ್ನು ಆತನಿಂದ ಹಾಯಿಸಿದ ಅನಂತರ, ಸಿಡಿಕಂಬವನ್ನು ನೆಲದತ್ತ ಬಗ್ಗಿಸುವರು. ಕಲ್ಲುಕಂಬದ ನಡುವೆ ನೆಟ್ಟ ತಿರುಗಣೆಗೆ ಅಡ್ಡಲಾಗಿ ಏತದ ಮರದಂತೆ ತೋರುವ ದಪ್ಪ ಮರದ ಮುಂದಿನ ತುದಿಗೆ ಸಿಕ್ಕಿಸಿದ ಕಬ್ಬಿಣದ ಕೊಂಡಿಗೆ ಸಿಡಿಯಾಡುವಾತನ ಬೆನ್ನ ಸರಪಳಿಗಳನ್ನು ಸಮಾಂತರವಾಗಿ ಕಟ್ಟಿ, ಸಿಡಿಕಂಬವನ್ನು ಭೂಮಿಗೆ ಸಮಾಂತರವಾಗಿ ಮೇಲಕ್ಕೆ ಏರಿಸುವರು. ಆಗ ಸಿಡಿಕಂಬಕ್ಕೆ ಬೆನ್ನು ಹಿಂದಾಗಿ ನೇತು ಬಿದ್ದ ಸಿಡಿಯಾಡುವಾತ ಮರಕ್ಕೆ ಕಾಲು ಮೇಲಾಗಿ ನೇತುಬಿದ್ದ ಬಾವಲಿಯಂತೆ ತೋರುತ್ತಿದ್ದು, ತನಗಾದ ನೋವಿನ ಪರಿವೆಯೇ ಇಲ್ಲದೆ ಅಟ್ಟಹಾಸದಿಂದ ಕತ್ತಿಯನ್ನು ಎಡಬಲಕ್ಕೆ ಬೀಸುತ್ತ, ದೇವತೆಗೆ ಎತ್ತಿ ಎತ್ತಿ ಕೈಮುಗಿಯುತ್ತಿರುತ್ತಾನೆ.
ಅನಂತರ ಸಿಡಿಕಂಬ ಮೆಲ್ಲಗೆ ತಿರುಗಲಾರಂಭಿಸುತ್ತದೆ. ಎಡಗಡೆ ಯಿಂದ ಬಲಗಡೆಗೆ, ಬಲಗಡೆಯಿಂದ ಎಡಗಡೆಗೆ ಮೂರಾವರ್ತಿ ತಿರುಗಿದ ಅನಂತರ, ಸಿಡಿಯಾಡುವವನನ್ನು ಸಿಡಿಕಂಬದಿಂದ ಕೆಳಗಿಳಿಸುತ್ತಾರೆ. ಅಲ್ಲಿಂದ ಆತನನ್ನು ದೇವರೆದುರು ಕರೆದೊಯ್ದು, ಅಲ್ಲಿ ಬೆನ್ನಿಗೆ ಸಿಕ್ಕಿಸಿದ ಕೊಂಡಿಗಳನ್ನು ತೆಗೆದು, ಗಾಯಗಳಿಗೆ ದೇವರ ಭಂಡಾರವನ್ನು (ಅರಿಸಿನ ಕುಂಕುಮದ ವಿಶೇಷ ಮಿಶ್ರಣ) ಮೆತ್ತಿ ಬಿಳಿಯ ವಸ್ತ್ರದ ಪಟ್ಟು ಕಟ್ಟುತ್ತಾರೆ. ಗಾಯಗಳು ಅಲ್ಲಿಂದ ಒಂಬತ್ತು ದಿನಗಳಲ್ಲಿ ಸಂಪೂರ್ಣ ವಾಸಿಯಾಗುತ್ತವಂತೆ. ಅನಂತರ ಯಥಾಕ್ರಮ ಇನ್ನೊಬ್ಬ ಸಿಡಿಯಾಡುವವನಿಗೆ ಬೆನ್ನಿಗೆ ಚುಚ್ಚಿ ಅಣಿಗೊಳಿಸುತ್ತಾರೆ. ಸಿಡಿಯಾಡಿದಾತ ಮಾರನೆಯ ದಿನ ಮದುವೆಯ ಗಂಡಿನಂತೆ ವೇಷ ಧರಿಸಿಕೊಂಡು ಮನೆಮನೆಯ ಭಿಕ್ಷಕ್ಕೆ ಬರುತ್ತಾನೆ. ಆಗ ಹಳ್ಳಿಯ ಸಮಸ್ತರು ಆತನಿಗೆ ತಮ್ಮ ಕೈಲಾದುದನ್ನು ನೀಡುತ್ತಾರೆ.
ಬಟ್ಟೆ ಸಿಡಿಯಾಡುವುದು ಸುಲಭ ಹಾಗೂ ನಿರಪಾಯಕರ. ಬೆನ್ಸಿಡಿಯಾಡುವವರಂತೆಯೇ ಸ್ನಾನ ಉಪವಾಸಾದಿಗಳನ್ನು ಮಾಡಿದ ಭಕ್ತರು, ಸಿಡಿಕಂಬದ ತುದಿಗೆ ಬಂದು ತಮ್ಮ ದೇಹವನ್ನು ಚಾಚಿ ಮಲಗಿಕೊಳ್ಳುತ್ತಾರೆ. ಅವರನ್ನು ಸಿಡಿಕಂಬಕ್ಕೆ ಬಟ್ಟೆಯ ಕಟ್ಟುಗಳಿಂದ ಬಿಗಿದು, ಸಿಡಿಕಂಬ ಏರಿಸಿ ಸುತ್ತ ತಿರುಗಿಸಿ ಸಿಡಿಯಾಡಿಸುತ್ತಾರೆ. ಬಟ್ಟೆಸಿಡಿಯನ್ನು ಹೆಂಗಸರೂ ಆಡಬಹುದೆಂಬುದಕ್ಕೆ ಜನಪದ ಗೀತೆಗಳು ನಿದರ್ಶನ ಒದಗಿಸುತ್ತವೆ. ಬೆನ್ಸಿಡಿ ಮಾತ್ರ ಗಂಡುಗಳ ವೀರಕ್ಷೇತ್ರ.
ಸಿಡಿಯಾಡುವುದರ ಜೊತೆಗೆ ಹಿಂದೆ ಸಿಡಿದಲೆ ಕೊಡುವ ಸಂಪ್ರದಾಯವೂ ಕರ್ನಾಟಕದಲ್ಲಿ ರೂಢಿಯಲ್ಲಿದ್ದುದಕ್ಕೆ ಶಾಸನಾಧಾರವಿದೆ. ಸಿಡಿದಲೆಯಾಗುವ ಹರಕೆಹೊತ್ತ ಜನ ಸಿಡಿಕಂಬಕ್ಕೆ ಕಟ್ಟಿರುತ್ತಿದ್ದ ಹಸಿಬಿದಿರಿನ ತುದಿಯನ್ನು ಬಗ್ಗಿಸಿ ತಮ್ಮ ತಲೆಯನ್ನು ಅದಕ್ಕೆ ಕಟ್ಟಿಸಿಕೊಂಡು, ಕತ್ತನ್ನು ಕತ್ತರಿಸುವಂತೆ ಮಾಡಿ, ತಮ್ಮ ವೀರಭಕ್ತಿ, ಸ್ವಾಮಿನಿಷ್ಠೆಯನ್ನು ಮೆರೆಯುತ್ತಿದ್ದರು. ಅಂಥವರನ್ನು ಕುರಿತು ಶಾಸನಗಳು ಪ್ರಶಂಸೆ ಮಾಡಿವೆ.
ಉಲ್ಲೇಖಗಳು
[ಬದಲಾಯಿಸಿ]