ವಿಷಯಕ್ಕೆ ಹೋಗು

ಸಾಲಿಗ್ರಾಮ ಶಿಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಲಿಗ್ರಾಮ'ಎಂಬುವುದು ಒಂದು ಶಿಲೆ ಭೂಮಿಯ ಮೇಲೆ ಕೋಟ್ಯಾಂತರ ವರ್ಷಗಳ ಹಿಂದಿನಿಂದಲೇ ಸಾಲಿಗ್ರಾಮ ಇದೆ. ಪದ್ಮಪುರಾಣದಲ್ಲಿ ಸಾಲಿಗ್ರಾಮ ಶಿಲೆಯ ಬಗ್ಗೆ ಶಿವನು ಈ ರೀತಿ ಹೇಳಿದ್ದಾನೆ.

  • "ಮಹಾಲಿಂಗ ಕೋಟಿಭಿಃ ದೃಷ್ಟಿ ಯದ್ ಫಲಂ ಪೂಜತಿ
  • ಸಾಲಿಗ್ರಾಮ ಶಿಲಾಯಂತು ಏಕಸ್ಯಂ ಇವ ತದ್ಭವೇದ್"

ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸುವುದು ಸಾಮಾನ್ಯ.ಜತೆಗೆ ಪ್ರಪಂಚಾದ್ಯಂತ ಶಿವ ದೇಗುಲಗಳೂ ಇವೆ. ಆದರೆ ಶಿಲಾರೂಪದ ವಿಷ್ಣುವೇ ಸಾಲಿಗ್ರಾಮ.ಒಂದು ಸಾಲಿಗ್ರಾಮ ಶಿಲೆಯನ್ನು ಪೂಜಿಸಿದರೆ ನೂರು ಶಿವಲಿಂಗವನ್ನು ನೋಡುವುದು ಮತ್ತು ಪೂಜಿಸಿದಕ್ಕೆ ಸಮಾನ.

ಸಾಲಿಗ್ರಾಮ ಶಿಲೆ ದೊರಕುವ ಸ್ಥಳ

[ಬದಲಾಯಿಸಿ]
  • ನೇಪಾಳ ದೇಶದ ಮಸ್ತಾಂಗ್ ಪ್ರದೇಶದಲ್ಲಿ, ಹಿಮಾಲಯ ಪರ್ವತದ ತಪ್ಪಲಲ್ಲಿ ಹರಿಯುವ ಕಾಲಿ-ಗಂಡಕಿ ನದಿ ಸಮೀಪ ಶಾಲಗ್ರಾಮ ಎಂಬ ಸ್ಥಳ ಇದೆ. ಅಲ್ಲಿ ಈ ಕಲ್ಲು ಸಾಲಿಗ್ರಾಮದ ರೂಪ ಪಡೆಯುತ್ತದೆ. ಹೀಗಾಗಿ ಆ ಪ್ರದೇಶವನ್ನು ಶಾಲಗ್ರಾಮ ಶಿಲಾ ಎಂದು ಕರೆಯಲಾಗುತ್ತದೆ. ಗಂಡಕಿ ನದಿಯ ಪಾತ್ರದಲ್ಲಿರುವ ಮುಕ್ತಿನಾಥ, ದಾಮೋದರ ಕುಂಡಗಳನ್ನು ಸಾಲಿಗ್ರಾಮ ಕ್ಷೇತ್ರ ಎಂದು ಕರೆಯಲಾಗುತ್ತದೆ. ಈ ನದಿಯ ಗರ್ಭದಲ್ಲಿ ಸಾಲಿಗ್ರಾಮ ಶಿಲೆ ಯಥೇಚ್ಛವಾಗಿ ದೊರೆಯುತ್ತದೆ.
  • ಹಿಂದುಗಳ ಸಂಪ್ರದಾಯದಂತೆ ಈ ಕಲ್ಲು 'ವಜ್ರ ಕೀಟ' ಎಂಬ ಹುಳುವಿಗೆ ಆಶ್ರಯ ತಾಣ. ವಜ್ರದ ಹಲ್ಲು ಹೊಂದಿರುವ ಈ ಕೀಟ, ಕಲ್ಲಿಗೆ ಒಂದು ಸಣ್ಣ ರಂಧ್ರ ಕೊರೆದು ಒಳ ಸೇರುತ್ತದೆ. ಒಳಕ್ಕೆ ತನ್ನ ಹಲ್ಲುಗಳಿಂದ ಕೊರೆಯುವುದರಿಂದ ಚಕ್ರದ ರೀತಿಯ ಕೆತ್ತನೆ ಮೂಡುತ್ತದೆ. ಈ ಕೀಟ ಸ್ರವಿಸುವ ದ್ರವದಿಂದ ಚಿನ್ನ ಉತ್ಪತ್ತಿಯಾಗುತ್ತದೆ. ಇದುವೇ ಅಸಲಿ ಸಾಲಿಗ್ರಾಮ ಎಂದು ಹೇಳಲಾಗುತ್ತದೆ. ಹಾಗೆಯೇ ಗಂಡಕಿ ನದಿಯ ಆಳವಾದ ಗರ್ಭದಲ್ಲಿ ಅಡಗಿರುವ ಸಾಲಿಗ್ರಾಮವೇ ಅಸಲಿ ಎಂಬ ನಂಬುಗೆಯೂ ಇದೆ.
  • ಪಾಲಿಷ್ ಮಾಡಿದ, ನಕಲಿ ರೇಖೆ ಸೃಷ್ಟಿಸಿದ ಸಾಲಿಗ್ರಾಮಗಳು ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಸಿಗುತ್ತವೆ. ಅಸಲಿ ಎಂಬುದನ್ನು ತಜ್ಞರಿಂದಲಷ್ಟೇ ಪತ್ತೆ ಹಚ್ಚಲು ಸಾಧ್ಯ. ಭಕ್ತರು ಈ ಬಗ್ಗೆ ಎಚ್ಚರ ವಹಿಸಿಬೇಕು. ಅಂಗಡಿಯಲ್ಲಿ ದೇವರ ಆರಾಧನೆ ಮಾಡಿಯೇ ಇದನ್ನು ವ್ಯಾಪಾರಕ್ಕೆ ಇಡುತ್ತಾರೆ. ಹೀಗಾಗಿ ತೊಂದರೆ ಕಾಣಿಸುವುದಿಲ್ಲ. ಅಸಲಿ ಸಾಲಿಗ್ರಾಮವನ್ನು ಪೂಜಿಸಿದರೆ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ.

ಹಲವು ಬಣ್ಣಗಳಲ್ಲಿ ಸಾಲಿಗ್ರಾಮಶಿಲೆ

[ಬದಲಾಯಿಸಿ]
  • ನಾಲ್ಕಾಣೆ ಅಗಲದಿಂದ ಹಿಡಿದು ಮುಷ್ಟಿಯಷ್ಟು ಗಾತ್ರದ ದೊಡ್ಡ ಸಾಲಿಗ್ರಾಮವೂ ಇದೆ. ಈ ಕಲ್ಲು ಕೆಂಪು, ನೀಲಿ, ಹಳದಿ, ಕಪ್ಪು ಮತ್ತು ಹಸಿರು ಬಣ್ಣಗಳಲ್ಲಿ ದೊರೆಯುತ್ತವೆ. ಹಳದಿ ಮತ್ತು ಚಿನ್ನದ ಬಣ್ಣದ ಸಾಲಿಗ್ರಾಮವು ಶುಭಕಾರಕ. ಇದನ್ನು ಪೂಜಿಸಿದರೆ ಆರ್ಥಿಕ ಸುಧಾರಣೆಯಾಗಿ ಅಭ್ಯುದಯವಾಗುತ್ತದೆ. ಮನಸ್ಸಿಗೆ ಶಾಂತಿಯೂ ದೊರೆಯುತ್ತದೆ. ಆದರೆ ಕಪ್ಪುಬಣ್ಣದ ಸಾಲಿಗ್ರಾಮವನ್ನು ಪೂಜಿಸುವುದೇ ಜಾಸ್ತಿ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಣ್ಣ ಬದಲಾಗುತ್ತಿರುತ್ತದೆ.
  • ಸ್ಕಂದ ಮತ್ತು ಪದ್ಮ ಪುರಾಣದ ಪ್ರಕಾರ ಸಾಲಿಗ್ರಾಮವನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಒಳ್ಳೆಯ ಪತ್ನಿ, ಮಕ್ಕಳು, ಆರೋಗ್ಯ, ಐಶ್ವರ್ಯ, ಶಾಂತಿ ದೊರೆಯುತ್ತದೆ. ಇದರ ನೀರಿನ ಸ್ಪರ್ಶದಿಂದ ಚಿಂತೆ, ಒತ್ತಡ, ಕಡಿಮೆಯಾಗುತ್ತದೆ. ಸಕಲ ಇಚ್ಛೆಗಳೂ ಪೂರೈಸುತ್ತವೆ. ಸಾಲಿಗ್ರಾಮದಲ್ಲಿ ದಿವ್ಯಶಕ್ತಿ ಇದ್ದು, ಇದಕ್ಕೆ ಅಭಿಷೇಕ ಮಾಡಿದ ಪದಾರ್ಥ ಸೇವಿಸಿದರೆ (ಹಾಲು, ಮೊಸರು, ನೀರು ಇತ್ಯಾದಿ) ಆರೋಗ್ಯ ವೃದ್ಧಿಯಾಗುತ್ತದೆ. ಸಾಮಾನ್ಯಾವಾಗಿ ಗುಂಡಗೆ ಇರುವ ಈ ಶಿಲೆ, ನಾನಾ ಆಕಾರದಲ್ಲೂ ಸಿಗುತ್ತದೆ.

ಪೂಜಿಸುವ ವಿಧಾನ

[ಬದಲಾಯಿಸಿ]
  • ಪಂಚಾಯತನ ಪೂಜೆ ಮಾಡುವಾಗ ವಿಷ್ಣುವಿನ ವಿಗ್ರಹದ ಬದಲಿಗೆ ಸಾಲಿಗ್ರಾಮವನ್ನು ಇಡುವುದು ಸಾಮಾನ್ಯ. ಇದನ್ನು ಪೂಜಿಸಬೇಕಾದರೆ ಯಾವುದೇ ದೀಕ್ಷೆಯನ್ನೂ ತೆಗೆದುಕೊಳ್ಳಬೇಕಾಗಿಲ್ಲ. ವಿಶೇಷವಾದ ಶಾಸ್ತ್ರವಿಧಿ ಹಾಗೂ ನಿಶ್ಚಿತವಾದ ಕಾರ್‍ಯ ವಿಧಾನ ಬೇಡ. ಅರ್ಹತೆ ಪಡೆದ ಪೂಜಾರಿಯೂ ಬೇಕಾಗಿಲ್ಲ. ಪ್ರತಿನಿತ್ಯ ಸ್ನಾನ ಮಾಡಿ ಸಾಲಿಗ್ರಾಮಕ್ಕೆ ಮೊಸರು, ತುಪ್ಪ, ಹಾಲು ಅಥವಾ ನೀರಿನಲ್ಲಿ ಅಭಿಷೇಕ ಮಾಡಬೇಕು. ಒಂದು ಬಾರಿ ಅಭಿಷೇಕ ಮಾಡಲು ಆರಂಭಿಸಿದರೆ ಪ್ರತಿನಿತ್ಯ ಮಾಡಲೇಬೇಕು.
  • ಅಭಿಷೇಕ ಮಾಡಲು ಸಾಧ್ಯವಿಲ್ಲ ಎಂದಾದರೆ ಅಕ್ಕಿಯಲ್ಲಿ ಹಾಕಿಡಬೇಕು. ಆ ಅಕ್ಕಿ ಮುಗ್ಗಲು ಬರುತ್ತಿದೆಯಾ ಎಂಬುದನ್ನು ಗಮನಿಸುತ್ತಿರಬೇಕು. ಸ್ನಾನ ಮಾಡದೆ, ದುರಭ್ಯಾಸ ಮತ್ತು ಮೈಲಿಗೆಯಾದವರು ಇದನ್ನು ಮುಟ್ಟಬಾರದು. ನೆಲದ ಮೇಲೆ ಹಾಗೆಯೇ ಇಡಬಾರದು ಹಾಗೂ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯ ಕರಂಡಿಕೆಯಲ್ಲಿ ಹಾಕಿ ಇಡಬೇಕು. ಇದರ ಮೇಲೆ ಜನರ ಕೆಟ್ಟ ದೃಷ್ಟಿ ಬಿದ್ದರೆ ಶಕ್ತಿ ವ್ಯಯವಾಗುತ್ತದೆ.
  • ದೇವಾಲಯಗಳಲ್ಲಿ ಅವರವರ ಧರ್ಮಾಚರಣೆಗೆ ಅನುಗುಣವಾಗಿ ಯಾವುದೇ ಸಾಲಿಗ್ರಾಮವನ್ನು ಇಟ್ಟು ಪೂಜಿಸಬಹುದು.ಸಾಲಿಗ್ರಾಮವನ್ನು ಮನೆಗಳಲ್ಲಿ ಎಷ್ಟು ಸಂಖ್ಯೆಯಲ್ಲಿ ಬೇಕಾದರೂ ಇಟ್ಟು ಪೂಜಿಸಬಹುದು. ಆದರೆ ಎರಡು ಅಥವಾ ಬೆಸ ಸಂಖ್ಯೆಯಲ್ಲಿ ಪೂಜಿಸಬಾರದು. ಒಂದೇ ಒಂದು ಕಲ್ಲನ್ನು ಪೂಜಿಸುವುದು ತುಂಬಾ ಒಳ್ಳೆಯದು. ಪ್ರತಿನಿತ್ಯ ೧೨ ಸಾಲಿಗ್ರಾಮಗಳನ್ನು ಪೂಜಿಸಿದರೆ ವ್ಯಕ್ತಿಯ ಶ್ರೇಷ್ಠತೆಯು ವೃದ್ಧಿಸುತ್ತದೆ ಮತ್ತು ಅಪರಾಧದಿಂದ ಮುಕ್ತಿ ಹೊಂದುತ್ತಾನೆ ಎಂಬ ನಂಬುಗೆಯೂ ಇದೆ.
  • ಯಾವುದಾದರೂ ಕಾರಣದಿಂದ ಈ ಕಲ್ಲಿಗೆ ಹಾನಿಯಾದರೆ ಅಥವಾ ಒಡೆದರೂ ಪೂಜಿಸಬಹುದು. ಪೂರ್ವಜರ ಕಾಲದಿಂದ ಪೂಜೆ ಮಾಡಿಕೊಂಡು ಬರುತ್ತಿರುವ ಸಾಲಿಗ್ರಾಮಕ್ಕೆ ಕಾರಣಾಂತರಗಳಿಂದ ಪೂಜೆ ಮುಂದುವರಿಸಲು ಸಾಧ್ಯವಾಗದಿದ್ದರೆ ದೇವಸ್ಥಾನ ಅಥವಾ ಮಠಕ್ಕೆ ಕೊಡಬಹುದು. ದೇವಸ್ಥಾನಗಳಲ್ಲೂ ಇವು ಅಧಿಕ ಸಂಖ್ಯೆಯಾದಾಗ ಪೂಜಿಸಲು ಸಾಧ್ಯವಾಗದಿದ್ದರೆ ಪ್ರಧಾನ ಶಕ್ತಿಯ ಆರಾಧನೆ ಮಾಡಿ ಕೆರೆ ಅಥವಾ ಬಾವಿಯಲ್ಲಿ ವಿಸರ್ಜಿಸಬಹುದು.

ಸುದರ್ಶನ ಸಾಲಿಗ್ರಾಮ ಶಿಲೆ

[ಬದಲಾಯಿಸಿ]

ಚರಿತ್ರೆ

[ಬದಲಾಯಿಸಿ]

ದೇವಿ ಭಾಗವತ ಪುರಾಣದ ಪ್ರಕಾರ; ಜಲಂಧರನನ್ನು ಕೊಲ್ಲಲು ವಿಷ್ಣುವು ಆತನ ಸತಿ ಬೃಂದಾಳ ಪಾತಿವ್ರತ್ಯ ಭಂಗ ಮಾಡಬೇಕಾಗುತ್ತದೆ. ಇದರಿಂದ ಕೋಪಗೊಂಡ ಆಕೆ ವಿಷ್ಣುವಿಗೆ ನಾಲ್ಕು ಅವತಾರವನ್ನು ಎತ್ತು ಎಂದು ಶಾಪ ಕೊಡುತ್ತಾಳೆ. ಶಾಪ ಮುಕ್ತಿಗಾಗಿ ವಿಷ್ಣುವು ಕಲ್ಲು (ಸಾಲಿ ಗ್ರಾಮ), ಹುಲ್ಲು (ದರ್ಬೆ), ಮರ (ಅಶ್ವತ್ಥ) ಮತ್ತು ಗಿಡವಾಗಿ (ತುಳಸಿ) ಅವತಾರ ಎತ್ತಿದ. ಇತಿಹಾಸದ ಪ್ರಕಾರ ಗಂಡಕಿ ಎಂಬ ಭಕ್ತೆ ಹಲವು ವರ್ಷ ತಪಸ್ಸು ಮಾಡಿ ವರವನ್ನು ಪಡೆದ ಫಲವಾಗಿ ವಿಷ್ಣುವು ಆಕೆಯ ಗರ್ಭವನ್ನು ಪ್ರವೇಶಿಸುತ್ತಾನೆ. ಹೀಗಾಗಿ ಸಾಲಿಗ್ರಾಮವನ್ನು ವಿಷ್ಣುವಿನ ಅವತಾರ ಎಂದೇ ಹೇಳಲಾಗುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]