ಸಾರ ಆರ್ನ್ ಜೂಯಿಟ್
ಸಾರ ಆರ್ನ್ ಜೂಯಿಟ್ - (1849-1903). ಅಮೆರಿಕ ಸಂಯುಕ್ತ ಸಂಸ್ಥಾನಗಳ ಪ್ರಾದೇಶಿಕ ಕಾದಂಬರಿ ಹಾಗೂ ಕತೆಗಳ ಲೇಖಕಿ.
ಬದುಕು
[ಬದಲಾಯಿಸಿ]ಈಕೆ ಮೇನ್ ಪ್ರಾಂತ್ಯದಲ್ಲಿನ ದಕ್ಷಿಣ ಬರ್ವಿಕ್‍ನಲ್ಲಿ ಹುಟ್ಟಿದಳು. ಶಾಲಾ ವಿದ್ಯಾಭ್ಯಾಸ ಅಷ್ಟಾಗಿ ದೊರಕಲಿಲ್ಲ. ಬರ್ವಿಕ್ ಅಕಾಡೆಮಿ ಶಾಲೆಗೆ ಕೆಲವು ದಿನ ಹೋದಳಷ್ಟೆ. ಆದರೆ ಮನೆಯಲ್ಲಿ ತಂದೆಯ ಪ್ರಸ್ತಕಭಂಡಾರದಲ್ಲಿನ ಅನೇಕಾನೇಕ ಪುಸ್ತಕಗಳನ್ನೀಕೆ ವ್ಯಾಸಂಗಮಾಡಿದಳು. ಅಲ್ಲದೆ ಇಂಗ್ಲಿಷ್ ಕಾದಂಬರಿಕಾರ್ತಿ ಜಾರ್ಜ್ ಎಲೀಯಟ್‍ಳಂತೆಯೇ ಈಕೆಯೂ ವೈದ್ಯನಾದ ತನ್ನ ತಂದೆಯೊಂದಿಗೆ ಕುದುರೆಬಂಡಿಯಲ್ಲಿ ಊರೂರಿಗೆ ಸುತ್ತಿದಳು. ಅಂಥ ಸಂದರ್ಭಗಳಲ್ಲಿ ತಂದೆ ಆಡುತ್ತಿದ್ದ ಮಾತುಕತೆಗಳು ಸಾರಳಿಗೆ ಸಾಕಷ್ಟು ತಿಳಿವಳಿಕೆ ನೀಡುತ್ತಿದ್ದವು. ಹಳ್ಳಿಗಾಡಿನ ಹಿನ್ನೆಲೆ, ಜನ, ರೀತಿನೀತಿಗಳು ಮತ್ತು ನಡೆನುಡಿಗಳನ್ನು ಸೂಕ್ಷ್ಮದೃಷ್ಟಿಯಿಂದ ಕಂಡು ಮನನಮಾಡಿದ ಸಾರ ತನ್ನ ಚಿಕ್ಕವಯಸ್ಸಿನಲ್ಲೇ ಅವುಗಳ ಬಗ್ಗೆ ಲೇಖನ ಬರೆಯುವುದಾಗಿ ತೀರ್ಮಾನಿಸಿಕೊಂಡಿದ್ದಳು.
ಬರಹ
[ಬದಲಾಯಿಸಿ]ತನ್ನ ಸುತ್ತಲಿನ ಪ್ರಾಂತೀಯ ಬದುಕು ಕ್ರಮೇಣ ನಶಿಸಿ ಹೋಗುತ್ತಿರುವುದನ್ನು ಕಂಡ ಈಕೆ ಸಾಹಿತ್ಯದಲ್ಲಿ ಅದು ಅಮರವಾಗುವಂತೆ ಬರೆವಣಿಗೆಯಲ್ಲಿ ಯಥಾವತ್ತಾಗಿ ಚಿತ್ರಿಸಿದಳು. ಈಕೆಯ ಗದ್ಯದ ಶೈಲಿ ಫ್ರೆಂಚ್ ಲೇಖಕ ಗಸ್ತಾವ್ ಫ್ಲೊಬೆರ್‍ನ ಶೈಲಿಯಂತೆ ಸಹಜವೂ ನೇರವೂ ಆಗಿದೆ.
1869ರಲ್ಲಿ ಅಟ್ಲಾಂಟಿಕ್ ಮಂತ್ಲಿ ಪತ್ರಿಕೆ ಇವಳ ಸಣ್ಣಕತೆಯೊಂದನ್ನು ಪ್ರಕಟಿಸಿತು. ಅನುಕಂಪವೇ ಇವಳ ಕೃತಿಗಳ ಜೀವಾಳ. ಸೂಕ್ಷ್ಮದೃಷ್ಟಿಯಿಂದ ಎಲ್ಲವನ್ನೂ ವಿವರವಾಗಿ ಅರಿತ ಇವಳ ಪ್ರಮುಖ ಕೃತಿಗಳು ಮೇನ್ ಪ್ರಾಂತ್ಯದ ಸಾಮಾನ್ಯ ಜನರ, ಮುಖ್ಯವಾಗಿ ಅಳಿಸಿಹೋಗುತ್ತಿದ್ದ ಹಳೆಯ ಪರಂಪರೆಯ ಜನರ ಚಿತ್ರಗಳು. ಅವರ ನುಡಿಗಟ್ಟುಗಳು, ನಡೆ, ವ್ಯಕ್ತಿತ್ವ, ಸಮಾಜ ಜೀವನ-ಇವನ್ನು ತನ್ನದೇ ಆದ ಕಟು ಹಾಗೂ ಹಾಸ್ಯದ ರೀತಿಯಲ್ಲಿ ಈಕೆ ಬಣ್ಣಿಸಿದ್ದಾಳೆ. ಅತಿಭಾವುಕತೆಯ ಸೋಂಕೂ ಇಲ್ಲದ ಯಥಾವತ್ತಾದ ಜೀವನಚಿತ್ರಣ ಇವಳ ಕೃತಿಗಳ ಸೊಗಸನ್ನು ಹೆಚ್ಚಿಸಿದೆ. ಡೀಪ್ ಹೇವನ ಎಂಬುದು 1877ರಲ್ಲಿ ಪ್ರಕಟವಾದ ಜೀವನ ಚಿತ್ರಗಳ ಸಂಕಲನ. ಅನಂತರ ಸುಮಾರು 20 ಸಂಪುಟಗಳಲ್ಲಿ ಈಕೆಯ ಕತೆಗಳೂ ಕಾದಂಬರಿಗಳೂ ಪ್ರಕಟವಾದವು. ಉದ್ರೇಕದ ಘಟನೆಗಳು ಇಲ್ಲದಿದ್ದರೂ ನಾಟಕತೆಯ ಸೊಗಡು ಕಾಣದಿದ್ದರೂ ಇವಳ ಕೃತಿಗಳಿಗೆ ಸಹಜ ಬದುಕಿನ ನೈಜತೆಯ ಸೊಗಸಿದೆ. 1884ರಲ್ಲಿ ಪ್ರಕಟವಾದ ಕಂಟ್ರಿ ಡಾಕ್ಟರ್ ಇವಳ ತಂದೆಯ ಬದುಕನ್ನು ಚಿತ್ರಿಸುವ ಉತ್ತಮ ಕಾದಂಬರಿ. ಎ ಮಾರ್ಷ್ ಐಲೆಂಡ್ (1885), ಮತ್ತು ದಿ ಟೋರಿ ಲವರ್ (1901) ಕಾದಂಬರಿಗಳು. ಈಕೆಯ ಅತ್ಯುತ್ತಮ ಕಾದಂಬರಿ ದಿ ಕಂಟ್ರಿ ಆಫ್ ದಿ ಪಾಯಿಂಟೆಡ್ ಫರ್ಸ್ (1895) ಪ್ರಕಟವಾಯಿತು. ಇವಳ ಕವಿತೆಯ ಸಂಕಲನ 1916ರಲ್ಲಿ ಈಕೆಯ ಮರಣಾನಂತರ ಪ್ರಕಟವಾಯಿತು. 1901ರಲ್ಲಿ ಬರ್ವಿಕ್‍ನ ಚೌಡಾಯಿನ್ ಕಾಲೇಜು ಈಕೆಗೆ ಗೌರವಪದವಿಯನ್ನು ಕೊಟ್ಟಿತು. 1902ರಲ್ಲಿ ಆಕಸ್ಮಿಕದಲ್ಲಿ ತನ್ನ ಕೈಕಾಲು ಊನವಾದ ಅನಂತರ ಈಕೆಯ ಬರೆವಣಿಗೆ ನಿಂತೇಹೋಯಿತೆನ್ನಬಹುದು. ದಿ ಕಿಂಗ್ ಆಫ್ ಫಾಲಿ ಐಲೆಂಡ್ (1888), ಟೇಲ್ಸ್ ಆಫ್ ನ್ಯೂ ಇಂಗ್ಲೆಂಡ್ (1890) ಈಕೆಯ ಇತರ ಮುಖ್ಯ ಗ್ರಂಥಗಳು. ಸಾರಳ ಪತ್ರಸಂಕಲನ ಆಕೆಯ ಮರಣಾನಂತರ, 1911ರಲ್ಲಿಯೂ ಕವಿತಾಸಂಕಲನ 1916ರಲ್ಲಿಯೂ ಪ್ರಕಾಶಗೊಂಡವು.