ಸಾರಾ ಟೀಸ್ಡೇಲ್
ಸಾರಾ ಟೀಸ್ಡೇಲ್ (1884-1933). ಅಮೆರಿಕದ ಕವಯಿತ್ರಿ.
ಬದುಕು
[ಬದಲಾಯಿಸಿ]ಹುಟ್ಟಿದ್ದು ಸೇಂಟ್ ಲೂಯಿ ಎಂಬ ಊರಿನಲ್ಲಿ. ತಂದೆ ಜಾನ್ ವಾರೆನ್. ತಾಯಿ ಮೇರಿ ಎಲಿಜûಬೆತ್ (ವಿಲ್ಲಾರ್ಡ್). ತಂದೆತಾಯಿಗಳಿಗೆ ಅಪರ ವಯಸ್ಸಿನಲ್ಲಿ ಅನಿರೀಕ್ಷಿತವಾಗಿ ಹುಟ್ಟಿದ ಮಗು ಇವಳು. ಅದರ ಮಾನಸಿಕ ಪರಿಣಾಮಗಳು ಈಕೆಯ ಸೂಕ್ಷ್ಮವಾದ ಮನಸ್ಸಿನ ಮೇಲೆ, ಆರೋಗ್ಯದ ಮೇಲೆ ಆಯಿತಾಗಿ ಜೀವನಪರ್ಯಂತ ಈಕೆ ವಿಚಿತ್ರವಾಗಿ ನಡೆದುಕೊಂಡು ಅದರ ಫಲವನ್ನನುಭವಿಸಬೇಕಾಯಿತು. ತಂದೆತಾಯಿ ಮುಂತಾಗಿ ಮನೆಯ ಎಲ್ಲರನ್ನೂ ತುಂಬ ಹಚ್ಚಿಕೊಂಡು ಕೊರಗುವ ಸ್ವಭಾವದೊಂದಿಗೆ ಎಲ್ಲರ ಮೇಲೂ ಹರಿಹಾಯುವ ಹಾಗೆ ಒಳಗೇ ಏನೊ ಒಂದು ಅತೃಪ್ತಿ, ಅಸಮಾಧಾನ ಇವಳಲ್ಲಿ ಬೆಳೆದವು. ಈ ಬಗೆಯ ದ್ವಂದ್ವ ಈಕೆಯ ಸ್ವಭಾವದಲ್ಲಿ ಜೀವನದುದ್ದಕ್ಕೂ ಇತ್ತು. ಮೊದಲೇ ಆರೋಗ್ಯ ತುಂಬ ನಾಜೂಕು. ಅದರ ಜೊತೆಗೆ ತನಗೇನೇನೋ ಕಾಯಿಲೆಗಳಿವೆ ಎಂಬ ಭ್ರಮೆ, ನಿಷ್ಕಾರಣವಾದ ಭಯ. ಇದರಿಂದಾಗಿ ಆಗಾಗ ಉದಾಸಭಾವದಲ್ಲಿ ಮುಳುಗಿರುತ್ತಿದ್ದಳು. ಮೊದಲು ವಿದ್ಯಾಭ್ಯಾಸ ಮನೆಯಲ್ಲೇ ಏರ್ಪಾಟಾಯಿತು. ಅನಂತರ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಮುಂದುವರಿದು 1903ರಲ್ಲಿ ಪದವೀಧರೆಯಾದಳು. ಶಾಲೆಯಲ್ಲಿದ್ದಾಗಲೇ ಈಕೆಯ ಬಾಲಪ್ರತಿಭೆ, ವಯಸ್ಸಿಗೆ ಮೀರಿದ ಬುದ್ಧಿ ವ್ಯಕ್ತವಾದವು. ಸಾಹಿತ್ಯದ ಕಡೆ ಅದರಲ್ಲೂ ಕವನಗಳ ಕಡೆಗೆ ಹೆಚ್ಚು ಒಲವು. ಇಂಗ್ಲಿಷ್ ಕವಯಿತ್ರಿ ಕ್ರಿಸ್ತೀನ ರೊಸೆಟ್ಟಿ ತುಂಬ ಅಚ್ಚುಮೆಚ್ಚು. ಆಕೆಯಿಂದ ಪಡೆದ ಸ್ಫೂರ್ತಿ, ಪ್ರಭಾವಗಳಿಂದ ತಾನೂ ಕವನಗಳನ್ನು ರಚಿಸತೊಡಗಿದಳು. ಅವರಿಬ್ಬರ ಕವನಗಳಲ್ಲೂ ಅನೇಕ ಸಾದೃಶ್ಯಗಳಿವೆ. ಪದವೀಧರೆಯಾದ ಮೇಲೆ ಸಾರ ಮಿತ್ರಬಳಗವೊಂದನ್ನು ಮಾಡಿಕೊಂಡು ಪಾಟರ್ಸ್ ಹ್ವೀಲ್ ಎಂಬ ಕೈಬರೆಹದ ಮಾಸಿಕ ಪತ್ರಿಕೆಯನ್ನು ತಪ್ಪದೆ ನಿಯತವಾಗಿ ಅನೇಕ ವರ್ಷಗಳ ಕಾಲ ನಡೆಸಿದಳು. ಆ ಕಾಲದ ಹಲವಾರು ಉದಯೋನ್ಮುಖ ಕವಿಗಳನ್ನು ಅವರ ಪ್ರಥಮ ಕವನಗಳನ್ನು ಪ್ರಕಟಿಸಿ, ಬೆಳಕಿಗೆ ತಂದ ರೀಡೀಸ್ ಮಿರರ್ ಪತ್ರಿಕೆಯೇ ಸಾರಾಳ ಮೊದಲ ಕೃತಿಯನ್ನು ಪ್ರಕಟಿಸಿತು. ಹಣಕಾಸಿನ ಅನುಕೂಲ ಚೆನ್ನಾಗಿದ್ದುದರಿಂದ ಸಾರ ತನ್ನ ಗೆಳತಿ ಜೆಸಿ ರಿಟ್ಟೆನ್ ಹೌಸ್‍ಳೊಂದಿಗೆ ಯೂರೋಪು ಮುಂತಾದ ಹಲವಾರು ವಿದೇಶಗಳಲ್ಲಿ ಪ್ರವಾಸ ಮಾಡಿಬಂದಳು. ನ್ಯೂಯಾರ್ಕಿಗೆ ಪದೇ ಪದೇ ಹೋಗಿ ಬರುತ್ತಿದ್ದಳು. ಷಿಕಾಗೊ ಈಕೆಗೆ ಮತ್ತೊಂದು ಮನೆಯೇ ಆಗಿತ್ತು. ಹೊಸದಾಗಿ ಆರಂಭವಾಗಿದ್ದ ಅಲ್ಲಿನ ಸಾಹಿತ್ಯ ಸಂಘಕ್ಕೆ ಈಕೆ ಅತಿಥಿಸದಸ್ಯಳು. ಆಗ ಪರಿಚಯವಾದ ವಾಷೆಲ್ ಲಿಂಡ್ಸೆ ಎಂಬ ಯುವಕ ಈಕೆಯ ಪ್ರೇಮಯಾಚಕನಾದ. ಈ ಪ್ರಣಯ ಪ್ರಸಂಗ ಕೆಲವು ಕಾಲ ನಡೆಯಿತು. ಸಾರ ಆತನನ್ನು ವರಿಸಲೂ ಆರಳು ಬಿಡಲೂ ಆರಳು. ಕೊನೆಗೊಮ್ಮೆ 1914ರಲ್ಲಿ ಇದ್ದಕ್ಕಿದ್ದಂತೆ ಸಾರಾ ಸೇಂಟ್ ಲೂಯಿ ನಗರದ ವರ್ತಕ ಅರ್ನೆಸ್ಟ್ ಫಿಲ್ಸಿಂಗರ್ ಎಂಬಾತನನ್ನು ಮದುವೆಯಾದ ಸುದ್ದಿ ವಾಷೆಲ್‍ನ ಮೇಲೆರಗಿದ ಸಿಡಿಲಾಯಿತು. ತೀವ್ರವಾಗಿ ನಿರಾಶೆಗೊಂಡ ಆತ ಅನಂತರ ಆತ್ಮಹತ್ಯೆ ಮಾಡಿಕೊಂಡ. ದಾಂಪತ್ಯಜೀವನಕ್ಕೆ ಒಗ್ಗಿಕೊಳ್ಳಲಾರದ ಸಾರ ಕ್ರಮೇಣ ಹೆಚ್ಚು ಹೆಚ್ಚು ಏಕಾಂತವಾಗಿರುತ್ತ ಕಡೆಗೆ 1929ರಲ್ಲಿ ವಿವಾಹವಿಚ್ಛೇದನ ಮಾಡಿಕೊಂಡಳು. ಜೀವಿತದ ಕಡೆಯ ವರ್ಷಗಳಲ್ಲಿ ನ್ಯೂಯಾರ್ಕಿನಲ್ಲಿದ್ದಳು. ತನ್ನ ಆರು ಕವನ ಸಂಕಲನಗಳನ್ನೂ ಬೇರೆ ಬೇರೆ ಕವಿಗಳ ಕವನಗಳನ್ನಾಯ್ದು ಸಂಪಾದಿಸಿದ ಎರಡು ಕಾವ್ಯಸಂಗ್ರಹಗಳನ್ನೂ ಪ್ರಕಟಿಸಿದಳು. ಈಕೆಯ ಲವ್ ಸಾಂಗ್ಸ್ ಎಂಬ ಸಂಕಲನ ಅತ್ಯಂತ ಜನಪ್ರಿಯವಾಗಿ ಹಲವಾರು ಮುದ್ರಣಗಳನ್ನು ಕಂಡಿತು. ಪೋಯೆಟ್ರಿ ಸೊಸೈಟಿ ಆಫ್ ಅಮೆರಿಕ ಉತ್ತಮ ಕಾವ್ಯಕೃತಿಗೆ ಕೊಡುವ ಬಹುಮಾನವನ್ನು ಈಕೆಗಿತ್ತು ಗೌರವಿಸಿತು.
ಬರಹ
[ಬದಲಾಯಿಸಿ]ಕ್ರಿಸ್ತೀನ ರೊಸೆಟ್ಟಿಯ ಜೀವನ ಚರಿತ್ರೆ ಸಾರಳ ಒಂದೇ ಗದ್ಯಕೃತಿ. ಸಾರ ಬರೆದ ಹಲವಾರು ಕವನಗಳು ಕೇವಲ ತತ್ಕಾಲ ಪ್ರಶಂಸೆಯನ್ನು ಪಡೆದು ಅನಂತರ ಹಳೆಯವಾಗಿ ಹೋದರೂ ಕೆಲವು ಭಾವಗೀತೆಗಳು ಮಾತ್ರ ಯಾವ ಕಾಲಕ್ಕೂ ಮಾಸದ ಸಾರ್ವತ್ರಿಕ ಮೆಚ್ಚುಗೆಯ ಶ್ರೇಷ್ಠ ಕವನಗಳಾಗಿವೆ. ಸಾರಳಿಗೆ ಸ್ನೇಹಿತರ ಪ್ರೀತಿ ಅಭಿಮಾನಗಳ ಕೊರತೆ ಎಂದೂ ಉಂಟಾಗಲಿಲ್ಲ. ಆದರೂ ಈಕೆಯನ್ನಾವರಿಸಿದ ವ್ಯಾಕುಲ ವಿಷಣ್ಣತೆಗಳು ನಿರಂತರವಾಗಿ ಹೆಚ್ಚುತ್ತಲೆ ಇದ್ದುವು. ಕ್ರಮೇಣ ಈಕೆ ಸ್ನೇಹಗೋಷ್ಠಿಗಳಿಂದ, ಸಂತೋಷಕೂಟಗಳಿಂದ ದೂರವಿರತೊಡಗಿದಳು. ಒಮ್ಮೆ ಎಲ್ಲರ ಸ್ನೇಹ-ಸಹವಾಸಗಳನ್ನು ಬಹಳವಾಗಿ ಅಪೇಕ್ಷಿಸುವಳು; ಮಗುದೊಮ್ಮೆ ಯಾರೂ ಬೇಡ ಎಂದು ದೂರವಾಗಿ ಏಕಾಕಿಯಾಗಿರಬೇಕೆನ್ನುವಳು. ಈ ದ್ವಂದ್ವವನ್ನು ಹೋಗಲಾಡಿಸಲು ಸಾಧ್ಯವಾಗಲಿಲ್ಲ. ಲಿಂಡ್ಸೇಯ ಆತ್ಮಹತ್ಯೆ ಮನಸ್ಸಿನ ಮೇಲೆ ದೊಡ್ಡ ಆಘಾತವನ್ನುಂಟು ಮಾಡಿತು. ಸಾವನ್ನು ಬಯಸತೊಡಗಿದಳು. ತನ್ನ ಜಗತ್ತು ಹೆಚ್ಚು ಹೆಚ್ಚು ನೀರಸವಾಗುತ್ತಿರುವಂತೆ ತೋರಿದಾಗ, ಎಷ್ಟು ಕಾಳಜಿಯಿಂದ ನೋಡಿಕೊಂಡರೂ ತನ್ನ ಆರೋಗ್ಯ ಕೆಡುತ್ತಹೋದಾಗ ಸಾಯುವ ಬಯಕೆ ಇನ್ನೂ ಹೆಚ್ಚಾಯಿತು. ಕಡೆಗೆ 1933ರಲ್ಲಿ ಒಂದು ದಿನ ನಿದ್ರೆ ಬರುವ ಗುಳಿಗೆಗಳನ್ನು ಅತಿಯಾಗಿ ಸೇವಿಸಿ ನೀರಿನ ತೊಟ್ಟೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಳು. ಆಗ ಆಕೆಗೆ 49 ವರ್ಷ. ಸಾರಳ ವ್ಯಕ್ತಿತ್ವದಲ್ಲಿ ಅನೇಕ ಬಗೆಯ ದ್ವಂದ್ವಗಳಿದ್ದುದನ್ನು ನಿಕಟವಾಗಿ ಬಲ್ಲ ಉಂಟರ್ ಮೆಯರ್ ಆಕೆಯನ್ನು ಕುರಿತಾದ ತನ್ನ ಲೇಖನದಲ್ಲಿ ಗುರುತಿಸಿದ್ದಾನೆ. ಆಕೆ ಬರೆದಿರುವುದರಲ್ಲಿ ಅತ್ಯಂತ ಸತ್ತ್ವಯುತ ಶೈಲಿಯ ಕವನಗಳೂ ಇವೆ. ಕೆಲವು ಲಘುವಾದ ಅಶ್ಲೀಲವಾದ ಪದ್ಯಗಳೂ ಇವೆ. ಸಾರ ಅಮೆರಿಕದ ಬಹು ಒಳ್ಳೆಯ ಭಾವಗೀತಾ ಕವಯಿತ್ರಿ ಎಂಬುದರಲ್ಲಿ ಸಂದೇಹವಿಲ್ಲ. ಆಕೆ ಹುಟ್ಟಿದುದೇ ಸ್ತ್ರೀವಾಣಿಯನ್ನು ಮೊಳಗಿಸುವ ಅಂಥ ಸೊಗಸಾದ ಗೀತೆಯನ್ನು ರಚಿಸುವುದಕ್ಕೆ ಎನ್ನುವಷ್ಟು ಚೆನ್ನಾಗಿ ಹೆಣ್ಣಿನ ಹೃದಯ, ಮನಸ್ಸು ಆಕೆಯ ಕವನಗಳಲ್ಲಿ ಅಭಿವ್ಯಕ್ತವಾಗಿವೆ. ದಿ ನ್ಯೂ ರಿಪಬ್ಲಿಕ್ ಪತ್ರಿಕೆ ಸಾರಳನ್ನು ಆಕೆಯ ಆದರ್ಶಮೂರ್ತಿ ಕ್ರಿಸ್ತೀನಾ ರೊಸೆಟ್ಟಯೊಂದಿಗೆ ಹೋಲಿಸಿ ಅನೇಕ ಸಾದೃಶ್ಯಗುಣಗಳನ್ನು ಉಭಯರ ಕವನಗಳಲ್ಲೂ ತೋರಿಸಿದೆ. ಇಬ್ಬರೂ ಅಭಿಜಾತ ಕವಯಿತ್ರಿಯರು. ಇಬ್ಬರು ಸ್ವಭಾವದಲ್ಲೂ ಭಾವಾವೇಗ ಮತ್ತು ಚಿಂತನಶೀಲತೆ ಎರಡೂ ಬೆರೆತ ಅನುಭಾವದ ಲಕ್ಷಣಗಳು ಕಂಡುಬರುತ್ತವೆ ಎಂದು ಆ ಪತ್ರಿಕೆ ಅಭಿಪ್ರಾಯಪಟ್ಟಿದೆ. ಸಾರಳ ಕೃತಿಗಳು : ಸಾನೆಟ್ಸ್ ಟು ಡ್ಯೂಸ್ ಅಂಡ್ ದಿ ಪೊಯೆಮ್ಸ್ (1907). ಹೆಲೆನ್ ಆಫ್ ಟ್ರಾಯ್ ಅಂಡ್ ಅದರ್ ಪೊಯೆಮ್ಸ್ (1911), ರಿವರ್ಸ್ ಟು ದಿ ಸೀ (1915), ಲವ್ ಸಾಂಗ್ಸ್ (1917), ಫ್ಲೇಮ್ ಅಂಡ್ ಷ್ಯಾಡೊ (1920), ಡಾರ್ಕ್ ಆಫ್ ದಿ ಮೂನ್ (1926), ಸ್ಟಾರ್ಸ್ ಟುನೈಟ್ (1930), ಸ್ಟ್ರೇಂಜ್ ವಿಕ್ಟರಿ (1933), ಕಲೆಕ್ಟೆಡ್ ಪೊಯೆಮ್ಸ್ (1937).
ದಿ ಆ್ಯನ್ಸರಿಂಗ್ ವಾಯ್ಸ್ ಮತ್ತು ರೇಯ್ನ್ ಬೋ ಗೋಲ್ಡ್ ಈ ಎರಡೂ ಸಂಪಾದಿತ ಕಾವ್ಯಸಂಗ್ರಹಗಳು.