ಸಾಮರ್ಸೆಟ್ ಮಾಮ್
ವಿಲಿಯಮ್ ಸಾಮರ್ಸೆಟ್ ಮಾಮ್ (1874-1965) ಇಂಗ್ಲಿಷ್ ಕಾದಂಬರಿಕಾರ. ನಾಟಕಕಾರ.
ಬದುಕು ಮತ್ತು ಬರಹ
[ಬದಲಾಯಿಸಿ]25 ಜನವರಿ 1874ರಂದು ಪ್ಯಾರಿಸ್ಸಿನಲ್ಲಿ ಹುಟ್ಟಿದ. ತಂದೆ ರಾಬರ್ಟ್ ಆರ್ಮಾಂಡ್ ಮಾಮ್ ಖ್ಯಾತ ಐರಿಷ್ ಮನೆತನಕ್ಕೆ ಸೇರಿದವ ಪ್ಯಾರಿಸ್‍ನಲ್ಲಿದ್ದ ಬ್ರಿಟಿಷ್ ರಾಯಭಾರಿ ಕಚೇರಿಯಲ್ಲಿ ಕಾನೂನು ಸಲಹೆಗಾರನಾಗಿ ನೇಮಕಗೊಂಡಿದ್ದ ವಕೀಲ, ತಾತ ರಾಬರ್ಟ್ ಮಾಮ್ ಸಹ ಸುಪ್ರಸಿದ್ಧ ಲಾಯರ್ ಆಗಿದ್ದ.
ಮಾಮ್ ಆರು ಜನ ಮಕ್ಕಳಲ್ಲಿ ಎಲ್ಲರಿಗಿಂತ ಕಿರಿಯವ. ಅಣ್ಣ ಲಾರ್ಡ್ ಮಾಮ್ ಮುಂದೆ ಇಂಗ್ಲೆಂಡಿನ ಉಚ್ಚನ್ಯಾಯಾಲಯದ ಮುಖ್ಯನ್ಯಾಯಾಧೀಶನಾದ. ಈತ ಎಂಟುವರ್ಷದವನಿರುವಾಗಲೇ ತಾಯಿ ಕ್ಷಯರೋಗದಿಂದ ಸತ್ತಳು. ಆಕೆಯ ಸಾವಿನಿಂದಾದ ಮಾನಸಿಕ ಆಘಾತ ಮತ್ತು ಅತೀವ ದುಃಖ ಉಳಿದೆಲ್ಲರಿಗಿಂತ ಪುಟ್ಟ ಮಾಮ್‍ಗೆ ಆಗಿತ್ತು. ತಾಯಿಯನ್ನು ಕಳೆದುಕೊಂಡು ನಲವತ್ತು ವರ್ಷಗಳಾದ ಮೇಲೂ ಮಾಮ್ ತನ್ನ ಮನಸ್ಸಿನ ಮೇಲೆ ಆ ದುಃಖದಿಂದಾದ ಗಾಯ ಇನ್ನೂ ಮಾಗಿಲ್ಲ ಎಂದು ಪರಿತಪಿಸುತ್ತಿದ್ದ. ತಾಯಿ ಸತ್ತು ಎರಡು ವರ್ಷಗಳಾಗುತ್ತಿದ್ದಂತೆ ತಂದೆಯೂ ಕ್ಯಾನ್ಸರ್ ಆಗಿ ತೀರಿಹೋದ. ಹೀಗೆ 10 ವರ್ಷ ವಯಸ್ಸಿನಲ್ಲೇ ಅನಾಥನಾದ ಮಾಮ್‍ನನ್ನು 1884ರಲ್ಲಿ ಇಂಗ್ಲೆಂಡಿಗೆ ಕರೆತಂದು ಕೆಂಟ್‍ನ ಆಲ್‍ಸೇಂಟ್ಸ್ ಚರ್ಚಿನಲ್ಲಿ ಪಾದ್ರಿಯಾಗಿದ್ದ ದೊಡ್ಡಪ್ಪನ ಮನೆಯಲ್ಲಿ ಬಿಟ್ಟರು. ಅಲ್ಲಿಯ ಪ್ರೀತಿರಹಿತವಾದ ವಾತಾವರಣದಲ್ಲಿ ಬೆಳೆದ ಬಾಲ್ಯದ ದಿನಗಳ ಅನುಭವವನ್ನು ಆತ್ಮಕಥೆ ರೂಪದ ಆಫ್ ಹ್ಯೂಮನ್ ಬಾಂಡೇಜ್ ಎಂಬ ಕಾದಂಬರಿಯಲ್ಲಿ ಮಾಮ್ ಬಣ್ಣಿಸಿದ್ದಾನೆ.
ಕುಳ್ಳು, ಸಣ್ಣ ಮೈಕಟ್ಟಿನ ಮಾಮ್ ನಾಚಿಕೆಯ ಹಾಗೂ ಸಂಕೋಚ ಸ್ವಭಾವದವನಾಗಿದ್ದ. ಜೊತೆಗೆ ವಿಪರೀತ ಉಗ್ಗುವಿಕೆಯಿಂದ ಮಾತನಾಡುವುದು ಬಹಳ ಕಷ್ಟವಾಗುತ್ತಿತ್ತು ಸಹಪಾಠಿಗಳೂ ಶಿಕ್ಷಕರೂ ಸಹ ನಿರ್ದಯರಾಗಿ ಗೇಲಿ ಮಾಡುತ್ತಿದ್ದುದರಿಂದ ಸೂಕ್ಷ್ಮ ಮನಸ್ಸಿನ ಬಾಲಕನಿಗೆ ಶಾಲಾಜೀವನ ನರಕಸದೃಶವಾಯಿತು.
ಕ್ಯಾಂಟರ್ಬರಿಯ ಕಿಂಗ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸವಾದ ಬಳಿಕ 13ನೆಯ ವಯಸ್ಸಿಗೆ ಚರ್ಚ್ ಸೇವೆಗೆ ಆವಶ್ಯಕವಾದ ತರಬೇತಿ ಕೊಡುವ, ತನ್ನಂತೆ ಈತನೂ ಪಾದ್ರಿಯಾಗಲಿ ಎಂಬ ಆಲೋಚನೆಯಲ್ಲಿದ್ದ ದೊಡ್ಡಪ್ಪನ ಮನವೊಲಿಸಿ ಅನುಮತಿ ಪಡೆದು ಹೈಡೆಲ್‍ಬರ್ಗ್‍ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋದ. ಚಿಕ್ಕಂದಿನಲ್ಲಿ ಫ್ರಾನ್ಸಿನಲ್ಲಿದ್ದುದರಿಂದ ಇಂಗ್ಲಿಷಿಗಿಂತ ಮೊದಲು ಫ್ರೆಂಚ್ ಭಾಷೆ ಬರುತ್ತಿತ್ತು. ಜರ್ಮನಿಗೆ ಬಂದು ಜರ್ಮನ್ ಕಲಿತ. ಸ್ವತಂತ್ರ ವಾತಾವರಣದಲ್ಲಿ ಇರುವ ಈ ಅವಕಾಶದಿಂದ ಉಲ್ಲಸಿತನಾದ ಮಾಮ್ ತನಗೆ ಪ್ರಿಯವಾಗಿದ್ದ ಸಾಹಿತ್ಯ, ತತ್ತ್ವಶಾಸ್ತ್ರ, ನಾಟಕಕಲೆಗಳಲ್ಲಿ ಆಸಕ್ತನಾದ. ಕತೆಗಳನ್ನು ಬರೆಯುವ ಹವ್ಯಾಸವೂ ಬೆಳೆಯಿತು. ಪ್ರೌಢವಿದ್ಯಾಭ್ಯಾಸ ಮುಗಿಯಿತಾದರೂ ಮ್ಯಾಟ್ರಿಕ್ ಪರೀಕ್ಷೆಗೆ ಕೂಡದೆ ಕೆಂಟ್‍ಗೆ ವಾಪಸ್ಸು ಬಂದ. ಚರ್ಚ್ ಶಿಕ್ಷಣವನ್ನು ತಪ್ಪಿಸಿಕೊಳ್ಳಲು ವೈದ್ಯಕೀಯ ಶಿಕ್ಷಣ ಪಡೆಯುವ ಆಸೆಯನ್ನು ವ್ಯಕ್ತಪಡಿಸಿ ಲಂಡನ್‍ನ ಕೊಳಚೆಪ್ರದೇಶ ಲ್ಯಾಂಬೆತ್‍ನಲ್ಲಿದ್ದ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿಯಾಗಿ ಸೇರಿದ. ಅಲ್ಲಿ ಆರು ವರ್ಷಗಳ ಶಿಕ್ಷಣ ಮತ್ತು ತರಬೇತಿ ಪಡೆಯುವ ಕಾಲದಲ್ಲಿ ಕೊಳೆಗೇರಿ ಜೀವನದ ದಾರುಣ ಸ್ಥಿತಿಯ ನಿಕಟ ಪರಿಚಯವಾಯಿತು. ಈ ಅನುಭವಗಳೆಲ್ಲ ಮುಂದೆ ಬರೆದ ಮೊದಲ ಕಾದಂಬರಿ ಲಿಜಾ ಆಫ್ ಲ್ಯಾಂಬೆತ್‍ಗೆ (1897) ಸಾಮಗ್ರಿಯಾದುವು. 1898ರಲ್ಲಿ ವೈದ್ಯಕೀಯ ಪದವೀಧರನಾಗಿ ವೃತ್ತಿಸನ್ನದನ್ನು ಪಡೆದ. ಆದರೆ ವೈದ್ಯವೃತ್ತಿಯನ್ನು ಈತ ಎಂದೂ ಅವಲಂಬಿಸಲಿಲ್ಲ. 1903ರಲ್ಲಿ ಎ ಮ್ಯಾನ್ ಆಫ್ ಆನರ್ ಎಂಬ ನಾಟಕವನ್ನು ಬರೆದ. ಅದು ರಂಗದ ಮೇಲೆ ಯಶಸ್ವಿಯಾಗಲಿಲ್ಲ. ಸಾಹಿತ್ಯವನ್ನೇ ವೃತ್ತಿಯಾಗಿ ಆರಿಸಿಕೊಂಡ ಮಾಮ್‍ಗೆ ಜೀವನ ನಿರ್ವಹಣೆ ಕಷ್ಟವಾಯಿತು. ಮೂವತ್ತು ವರ್ಷದ ಪ್ರಾಯಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಸಿನಿಕ, ನಿರಾಶಾವಾದಿ, ವಾಸ್ತವತೆಯ ಪ್ರತಿಪಾದಕ ಎಂಬ ಖ್ಯಾತಿಯೇನೊ ಬಂದಿತ್ತು. ತನ್ನ ಸಾಹಿತ್ಯ ರಚನೆಯಲ್ಲಿದ್ದ ಕೃತಜ್ಞತೆಯ ಅರಿವಾಗಿ ಅನುಭವಸಾಂದ್ರವಾದ ಸಹಜ-ಸರಳ ನಿರೂಪಣೆಯ ಸಂಕಲ್ಪದಿಂದ ನೇರವಾಗಿ ಬದುಕಿಗೆ ಧುಮುಕಿದ. ತಾಜಾ ಅನುಭವಗಳೇ ಮುಖ್ಯ. ವ್ಯಾಸಂಗ ಅದಕ್ಕೆ ಪೂರಕ ಎಂಬ ದೃಷ್ಟಿಯನ್ನು ಬೆಳೆಸಿಕೊಂಡ. ಕಲೆ ಮತ್ತು ಜೀವನ ಎರಡನ್ನೂ ಒಳಹೊಕ್ಕು ಅವಲೋಕಿಸುವ ತೀವ್ರವಾದ ಚಿಕಿತ್ಸಕ ಮನೋಧರ್ಮವಿದ್ದ ಮಾಮ್‍ನ ಸಾಹಿತ್ಯದ ಹೊಸ ತಿರುವು ಫಲಕೊಟ್ಟಿತು. ಅನಂತರ ಬರೆದ ಸಣ್ಣ ಕಥೆ, ಕಾದಂಬರಿ, ನಾಟಕಗಳು ಸತ್ತ್ವಪೂರ್ಣವಾಗತೊಡಗಿದುವು.
1907ರಲ್ಲಿ ಬರೆದು ಮರುವರ್ಷ ಲಂಡನ್‍ನ ಕೋಟ್ ಥಿಯೇಟರ್‍ನಲ್ಲಿ ಆಡಿದ ಮಾಮ್ ಬೆಳಗಾಗುವುದರಲ್ಲಿ ಶ್ರೇಷ್ಠ ನಾಟಕಕಾರನೆಂದು ಪ್ರಸಿದ್ಧನಾದ. ಆ ಎರಡು ವರ್ಷಗಳಲ್ಲಿ ಜಾಕ್ ಸ್ಟ್ರಾ, ಮಿಸೆನ್ ಡಾಟ್, ದಿ ಎಕ್ಸ್‍ಪ್ಲೋರರ್ ಎಂಬ ಮೂರು ನಾಟಕಗಳು ರಚಿತವಾಗಿ, ಲೇಡಿ ಫ್ರೆಡ್ರಿಕ್ ನಾಟಕವೂ ಸೇರಿ ನಾಲ್ಕು ನಾಟಕಗಳು ನಾಲ್ಕು ಥಿಯೇಟರ್‍ಗಳಲ್ಲಿ ಏಕಕಾಲದಲ್ಲಿ ಕಿಕ್ಕಿರಿದ ಜನಸ್ತೋಮದೊಂದಿಗೆ ಪ್ರದರ್ಶಿತವಾದುವು. ಅಲ್ಲಿಂದ ಆರಂಭವಾದ ಅಪಾರವಾದ ಕೀರ್ತಿ ಮತ್ತು ಹಣ ಸಂಪಾದನೆ ಮಾಮ್‍ನ ಜೀವನ ಪರ್ಯಂತ ಬೆಳೆಯುತ್ತ ಹೋದುವು. ಹೀಗೆ ಪ್ರೋತ್ಸಾಹಿತನಾದ ಮಾಮ್ ಇನ್ನೂ ಕೆಲವು ನಾಟಕಗಳನ್ನು ರಚಿಸುವುದರ ಜೊತೆಗೆ ಲಾರೆನ್ಸ್ ಹೌಸ್‍ಮನ್‍ನೊಡನೆ ಸೇರಿ 19ನೆಯ ಶತಕದ ದಿ ವೆಂಚರ್ ಎಂಬ ವಾರ್ಷಿಕ ಪತ್ರಿಕೆಯನ್ನು ಪುನರುಜ್ಜೀವನಗೊಳಿಸಿದ.
1897ರಲ್ಲೇ ಬರೆಯಲಾರಂಭಿಸಿದ್ದ ಆಫ್ ಹ್ಯೂಮನ್ ಬಾಂಡೇಜ್ ಎಂಬ ಕಾದಂಬರಿ ಅನೇಕ ಬಾರಿ ತಿದ್ದಿ, ಬದಲಿಸಿ, ಪೂರ್ಣಗೊಂಡು 1915ರಲ್ಲಿ ಪ್ರಕಟವಾಯಿತು. ಇದನ್ನು ಮಾಮ್‍ನ ಸಾಹಿತ್ಯ ಕೃತಿಗಳಲ್ಲಿ ಮಹೋನ್ನತವಾದುದು ಎಂದು ಪರಿಗಣಿಸಲಾಗಿದೆ. ಮಾಮ್‍ನ ಜೀವನದ ಹಲವಾರು ಸಂಗತಿಗಳನ್ನೂ ಅನುಭವಗಳನ್ನೂ ಕಥೆಯಲ್ಲಿ ಆತನ ವ್ಯಕ್ತಿತ್ವ ಚಿತ್ರಣವನ್ನು ಕಥಾನಾಯಕ ಫಿಲಿಪ್ ಕ್ಯಾರಿಯ ಪಾತ್ರದಲ್ಲಿ ಸಮನ್ವಯಗೊಳಿಸಿರುವುದರಿಂದ ಇದೊಂದು ಆತ್ಮಕಥಾ ರೂಪದ ಕೃತಿಯೆನಿಸಿದೆ.
ಸಾರ್ಮರ್ಸೆಟ್ ಮಾಮ್ ಕ್ಷಯರೋಗಿಯಾಗಿ ಎರಡು ವರ್ಷಕಾಲ ಸ್ಕಾಟ್ ಸ್ಯಾನಿಟೋರಿಯಮ್‍ನಲ್ಲಿದ್ದು ಚಿಕಿತ್ಸೆ ಪಡೆದು ಗುಣಮುಖನಾದ. ಈ ಅನುಭವಗಳೆಲ್ಲ ಹಲವು ಕತೆಗಳಾಗಿ ರೂಪ ತಳೆದವು. 1919ರಲ್ಲಿ ದಿ ಮೂನ್ ಆ್ಯಂಡ್ ಸಿಕ್ಸ್‍ಪೆನ್ಸ್ ಎಂಬ ಇನ್ನೊಂದು ಪ್ರಸಿದ್ಧವಾದ ಕಾದಂಬರಿ ಹೊರಬಂದಿತು. ಕೇಕ್ಸ್ ಆ್ಯಂಡ್ ಏಲ್ ಚಿಕ್ಕದಾದರೂ ತಂತ್ರದಲ್ಲಿ ಪರಿಪೂರ್ಣವಾದ ಕೃತಿ.
ಒಂದನೆಯ ಮಹಾಯುದ್ಧದಲ್ಲಿ ಗೂಢಚಾರನಾಗಿ ಪಡೆದ ಅನುಭವಗಳನ್ನೂ ನೋಡಿದ ಘಟನೆಗಳನ್ನೂ ಬಳಸಿ ಅಷೆಂಡೆನ್ ಎಂಬ ಕಥಾಸರಣಿಯನ್ನು ಬರೆದ.
ಎರಡನೆಯ ಮಹಾಯುದ್ಧ ಕಾಲದಲ್ಲಿ ಮತ್ತೆ ಪ್ಯಾರಿಸ್‍ನಲ್ಲಿದ್ದ ಬ್ರಿಟಿಷ್ ವಾರ್ತಾ ಸಚಿವಾಲಯದಲ್ಲಿ ನೇಮಕಗೊಂಡು ಗೂಢಚಾರನಾಗಿ ಸೇವೆ ಮಾಡಿದ.
1921ರಲ್ಲಿ ಪ್ರಕಟವಾದ ದಿ ಟ್ರೆಂಬಲಿಂಗ್ ಆಫ್ ಎ ಲೀಫ್ ಎಂಬ ಕಥಾಸಂಕಲನದಲ್ಲಿಯ ರೇನ್ ಎಂಬ ಉತ್ಕøಷ್ಟವಾದ ಸಣ್ಣಕತೆ ವಿಮರ್ಶಕರ ಪ್ರಶಂಸೆಯನ್ನು ಗಳಿಸಿತು. ಯಾವ ಒಂದು ನೈತಿಕ ಚರ್ಚೆ, ವ್ಯಾಖ್ಯಾನಗಳಿಗೆ ತೊಡಗದೆ ಕೇವಲ ಸಾಕ್ಷಿಭೂತನಾಗಿ ಕಥೆ ಹೇಳುವ ವಿಶಿಷ್ಟತಂತ್ರ ಇಲ್ಲಿನ ಕಥೆಗಳಲ್ಲಿ ಯಶಸ್ವಿಯಾಗಿದೆ.
ಎರಡನೆಯ ಮಹಾಯುದ್ಧ ನಡೆಯುತ್ತಿದ್ದಾಗ 1940ರಲ್ಲಿ ಫ್ರಾನ್ಸನ್ನು ಜರ್ಮನಿ ಆಕ್ರಮಿಸಿಕೊಂಡಾಗ ಮಾಮ್ ತನ್ನ ಆಸ್ತಿ-ಪಾಸ್ತಿ ಸರ್ವಸ್ವವನ್ನೂ ಕಳೆದುಕೊಂಡು ಅಮೆರಿಕೆಗೆ ಓಡಿಹೋಗಬೇಕಾಗಿ ಬಂದಿತು. ಅಮೆರಿಕೆಯಲ್ಲಿ ಆರುವರ್ಷ ಇದ್ದ. ಆಗ ಭಾರತದ ಯೋಗ, ಅನುಭಾವಗಳ ಬಗೆಗೆ ಆಸಕ್ತಿ ಬೆಳೆದು ಅವುಗಳ ನಿಕಟ ಪರಿಚಯವಾಯಿತು. ಅದರ ಫಲವಾಗಿ ಬಂದದ್ದು ದಿ ರೇಜರ್ಸ್ ಎಡ್ಜ್ (1944) ಎಂಬ ಕಾದಂಬರಿ.
ಕ್ವಾರ್ಟೆಟ್ (1948), ಟ್ರೈಯೊ (1950) ಮತ್ತು ಎನ್‍ಕೋರ್ (1951) ಎಂಬ ಸಣ್ಣಕತೆಗಳು ಚಲನಚಿತ್ರಗಳಾಗಿ ಪ್ರದರ್ಶಿತವಾದುವು.
1899ರಲ್ಲಿ ಓರಿಯಂಟೇಷನ್ಸ್ ಎಂಬ ಪ್ರಥಮ ಕಥಾಸಂಕಲನ ಪ್ರಕಟವಾಯಿತು. 1948ರಲ್ಲಿ ಕೊನೆಯ ಕಥಾಸಂಕಲನ ಕ್ರೀಚರ್ಸ್ ಆಫ್ ಸರ್ಕಮ್‍ಸ್ಟೆನ್ಸ್ ಬಂದಿತು. ಮೂರು ಸಂಪುಟಗಳಲ್ಲಿ ಈತನ ಸಣ್ಣಕತೆಗಳು ಸಂಗ್ರಹವಾಗಿವೆ. ರೇನ್, ದಿ ಲೆಟರ್, ರೆಡ್, ಎಪಿಸೋಡ್ ಯಾವ ಕಾಲಕ್ಕೂ ನಿಲ್ಲುವಂಥ ಶ್ರೇಷ್ಠ ಸಣ್ಣಕತೆಗಳಾಗಿವೆ. ಇಂಗ್ಲಿಷಿನ ಮೊಪಾಸಾ ಎಂದು ವಿಮರ್ಶಕರು ಮಾಮ್‍ನನ್ನು ಶ್ಲಾಘಿಸಿದ್ದಾರೆ.
ನಾಟಕಗಳೆಲ್ಲ ಕಲೆಕ್ಟೆಡ್ ಪ್ಲೇಸ್ (1931) ಎಂಬ ಒಂದು ಸಂಪುಟದಲ್ಲಿ ಪ್ರಕಟವಾಗಿವೆ. ಇವೆಲ್ಲ ಆಸ್ಕರ್ ವೈಲ್ಡ್‍ನ ನಾಟಕಗಳ ಮಾದರಿಯ ಸಾಮಾಜಿಕ ಪ್ರಹಸನಗಳು, ಹರ್ಷಕಗಳು. ದಿ ಮ್ಯಾನ್ ಆಫ್ ಆನರ್ ಎಂಬ ಮೊದಲ ನಾಟಕದಿಂದ 1933ರಲ್ಲಿ ಬರೆದ ಪೆಪ್ಟೆ ಎಂಬ ಕೊನೆಯ ನಾಟಕದ ತನಕ ಇಪ್ಪತ್ತೈದು ನಾಟಕಗಳಿಗೂ ಮಕ್ಕು ಬರೆದಿದ್ದಾನೆ. ಅವುಗಳಲ್ಲಿ ಲೇಡಿ ಫ್ರೆಡ್ರಿಕ್, ದಿ ಸೇಕ್ರೆಡ್ ಫ್ಲೇಮ್, ದಿ ಲೆಟರ್, ದಿ ಸರ್ಕಲ್, ಈಸ್ಟ್ ಆಫ್ ಸೂಯೆಜ್, ಅವರ್ ಬೆಟರ್ಸ್ ಎಂಬುವು ಉತ್ತಮವಾದ ನಾಟಕಗಳು.
ಪ್ರವಾಸ ಪ್ರಿಯನಾಗಿದ್ದ ಮಾಮ್ ಯೂರೊಪ್, ಅಮೆರಿಕಗಳಲ್ಲದೆ, ಚೀನ ಮತ್ತು ಮಲೇಷಿಯ ಮುಂತಾದ ದೂರಪ್ರಾಚ್ಯದ ದೇಶಗಳಲ್ಲಿ ಪ್ರವಾಸ ಮಾಡಿ, ದಿ ಲ್ಯಾಂಡ್ ಆಫ್ ದಿ ಬ್ಲೆಸ್ಸಡ್ ವರ್ಜಿನ್ (1905); ಆನ್ ಎ ಚೈನೀಸ್ ಸ್ಕ್ರೀನ್ (1922); ದಿ ಜೆಂಟ್ಲ್‍ಮನ್ ಇನ್ ದಿ ಪಾರ್ಲರ್ (1930), ಡಾನ್ ಫನ್ರ್ಯಾಂಡೊ (1935)-ಎಂಬ ನಾಲ್ಕು ಪ್ರವಾಸ ಕಥನಗಳಲ್ಲಿ ತನ್ನ ಅನುಭವಗಳನ್ನು ಹಿಡಿದಿಟ್ಟಿದ್ದಾನೆ.
ಜೀವನ, ಕಲೆ, ಸಾಹಿತ್ಯಗಳನ್ನು ಕುರಿತ ತನ್ನ ದೃಷ್ಟಿ, ವಿಚಾರ ಸರಣಿ, ವಿಮರ್ಶಾವಲೋಕನಗಳನ್ನು ಟೆನ್ ನಾವೆಲ್ಸ್ ಆ್ಯಡ್ ದೇರ್ ಆತರ್ಸ್ (1948), ಎ ರೈಟರ್ಸ್ ನೋಟ್‍ಬುಕ್ (1949), ದಿ ವ್ಯಾಗ್ರೆಂಚ್ ಮೂಡ್ (1952) ಪಾಯಿಂಟ್ಸ್ ಆಫ್ ವ್ಯೂ (1958) ಎಂಬ ಪುಸ್ತಕಗಳಲ್ಲೂ ತನ್ನ ಬಾಳಿನ ಹಲವಾರು ಸಂಗತಿಗಳನ್ನೂ ನೆನಪುಗಳನ್ನೂ ದಿ ಸಮಿಂಗ್ ಆಫ್ (1938), ಸ್ಟ್ರಿಕ್ಟ್‍ಲಿ ಪರ್ಸನಲ್ (1942) ಎಂಬ ಆತ್ಮಕತೆಗಳಲ್ಲೂ ದಾಖಲಿಸಿದ್ದಾನೆ.
ಮಾಮ್ ತನ್ನ ದೀರ್ಘ ಸಾಹಿತ್ಯ ಜೀವನದಲ್ಲಿ ಬರೆದುದು ಕಡಿಮೆ. ಆದರೆ ಬರೆದಷ್ಟರಲ್ಲಿ ದಟ್ಟವಾದ, ವಿಸ್ತಾರವಾದ, ವೈವಿಧ್ಯಮಯ ಅನುಭವಗಳು ತುಂಬಿವೆ. ಸುಲಲಿತವಾದ ಸುಂದರವಾದ ಚೊಕ್ಕ ಬರಹಕ್ಕೆ, ಸೊಗಸಾದ ಗದ್ಯಶೈಲಿಗೆ ಈತನ ಕೃತಿಗಳು ಹೆಸರಾಗಿವೆ. ಮಾಮ್‍ನದು ಸರಳವಾದರೂ ಮಾರ್ಮಿಕವಾದ ಶೈಲಿ. ತಾನು ಕಂಡುದನ್ನು ಅನುಭವಿಸಿದುದನ್ನು ಪ್ರಾಮಾಣಿಕವಾಗಿ ನಿಷ್ಠುರವಾಗಿ ಬರೆಯುವ ಸ್ವಭಾವ. ಅಲ್ಲಿಯಾವ ಭಾವಾವೇಗವಾಗಲಿ, ಭಾವುಕತೆಯಾಗಲಿ ಇಲ್ಲದ ನಿರ್ವೇಗ-ನಿರ್ಲಿಪ್ತತೆಗಳು ಕಾಣುತ್ತವೆಯಾದರೂ ಆತನ ಒಲವು ಸಮಾಜದಲ್ಲಿಯ ಹಲವು ವ್ಯಕ್ತಿಗಳ ದೋಷ ದೌರ್ಬಲ್ಯಗಳನ್ನು ಬಯಲಿಗೆಳೆಯುವುದರ ಕಡೆ ಇರುವುದು ವ್ಯಕ್ತವಾಗಿದೆ. ಬಾಳಿನ ಪಾತ್ರ ಚಿತ್ರಣವೇ ಆಗಲಿ, ಸನ್ನಿವೇಶ ಚಿತ್ರಣವೇ ಆಗಲಿ ವರ್ಣರಂಜಿತವಾಗಿ ಕಣ್ಣಿಗೆ ಕಟ್ಟುವಂತಿರುತ್ತದೆ. ಮಾಮ್ ತಾನು ಹೇಳಬೇಕೆಂದಿರುವುದನ್ನು ನಿರ್ದಾಕ್ಷಿಣ್ಯವಾಗಿ, ಖಚಿತವಾಗಿ ಹೇಳಿಬಿಡುತ್ತಾನೆ. ಹತ್ತು ಮಾತುಗಳಲ್ಲಿ ಹೇಳುವುದನ್ನು ಆಯ್ದ ಒಂದೆರಡು ಮಾತುಗಳಲ್ಲಿ ಹೇಳಿ ಮುಗಿಸುತ್ತಾನೆ. ಪ್ರೇಕ್ಷಕರನ್ನಾಗಲಿ, ಓದುಗರನ್ನಾಗಲಿ ಸಂತೋಷಪಡಿಸಲಿಕ್ಕಾಗಿ ತನ್ನ ಮನಸ್ಸಾಕ್ಷಿಗೆ ವಿರೋಧವಾದ ಯಾವ ವಿಚಾರಗಳನ್ನೂ ಬರೆಹದಲ್ಲಿ ತರುವುದಿಲ್ಲ. ಆದರೂ ಈತನ ನಾಟಕಗಳು ಅಪಾರ ಜನಸ್ತೋಮವನ್ನು ಆಕರ್ಷಿಸಿದವು. ಕಥೆಗಳು ಓದುಗರ ಹೃದಯವನ್ನು ಗೆದ್ದವು. ಎಲ್ಲ ಬರೆಹಗಳಲ್ಲೂ ಒಂದು ಸೂಕ್ಷ್ಮ ಸಂವೇದನಾಶೀಲವಾದ, ಸುಸಂಸ್ಕøತವಾದ ಮನಸ್ಸು ಕೆಲಸಮಾಡುವುದು ಗೋಚರವಾಗುತ್ತದೆ.
ಗೌರವಗಳು, ಪ್ರಶಸ್ತಿಗಳು
[ಬದಲಾಯಿಸಿ]1929ರಲ್ಲಿ ಸಾಮರ್ಸೆಟ್ ಮಾಮ್‍ನಿಗೆ ಷೆವೆಲಿಯರ್ ಆಫ್ ದಿ ಲೀಜನ್ ಆಫ್ ಆನರ್, ಅನಂತರ 1939ರಲ್ಲಿ ಕಮ್ಯಾಂಡರ್, ಎಫ್.ಆರ್.ಎಸ್.ಎಲ್. ಪ್ರಶಸ್ತಿಗಳು ದೊರೆತವು.
1954ರಲ್ಲಿ ಕಂಪ್ಯಾನಿಯನ್ ಆಫ್ ಆನರ್, 1961ರಲ್ಲಿ ರಾಯಲ್ ಸೊಸೈಟಿ ಆಫ್ ಲಿಟರೇಚರ್ ಪ್ರಧಾನ ಮಾಡಿದ ಕಂಪ್ಯಾನಿಯನ್ ಆಫ್ ಲಿಟರೇಚರ್ ಎಂಬ ಪ್ರಶಸ್ತಿಗಳನ್ನು ಪಡೆದ.