ಸರ್ ಥಾಮಸ್ ಎಲ್ಯಟ್
ಎಲ್ಯಟ್, ಸರ್ ಥಾಮಸ್: ೧೪೯೦-೧೫೪೬. ಇಂಗ್ಲೆಂಡಿನ ರಾಯಭಾರ ಕುಶಲಿ, ವಿದ್ವಾಂಸ, ಲೇಖಕ, ನಿಘಂಟುಕಾರ. ನ್ಯಾಯಮೂರ್ತಿಯೊಬ್ಬನ ಮಗನಾಗಿ ಜನಿಸಿದ ಈತ ಖಾಸಗಿಯಾಗಿ ವಿದ್ಯಾಭ್ಯಾಸ ಪಡೆದು ನಾನಾ ಹುದ್ದೆಗಳಲ್ಲಿದ್ದು ಆಕ್ಸ್‌ಫರ್ಡ್ಷೈರ್ ಮತ್ತು ಬರ್ಕ್ಷೈರ್ಗಳ ಶರೀಫನಾದ (೧೫೨೭). ೧೫೩೦ರಲ್ಲಿ ಈತನಿಗೆ ನೈಟ್ ಪದವಿ ದೊರಕಿತು. ಮುಂದಿನ ಎರಡು ವರ್ಷಗಳ ಕಾಲ ಈತ ಸ್ಪೇನಿನ ಐದನೆಯ ಚಾರಲ್ಸನ ಆಸ್ಥಾನದಲ್ಲಿ ಇಂಗ್ಲೆಂಡಿನ ಎಂಟನೆಯ ಹೆನ್ರಿಯ ರಾಯಭಾರಿಯಾಗಿದ್ದ. ೧೫೩೫ರಲ್ಲಿ ಮತ್ತೆ ಆ ಹುದ್ದೆಯಲ್ಲಿದ್ದನೆಂದೂ ಕಾಣುತ್ತದೆ. ಇಂಗ್ಲೆಂಡಿನ ಮಾನವಹಿತಜ್ಞರ (ಹ್ಯೂಮನಿಸ್ಟ್‌್ಸ) ಪೈಕಿ ಎಲ್ಯಟನೂ ಒಬ್ಬ. ಅಭಿಜಾತ ನೀತಿಬೋಧಕರ ಸಿದ್ಧಾಂತಗಳನ್ನು ತನ್ನ ದೇಶಬಾಂಧವರಲ್ಲಿ ಪ್ರಚುರಪಡಿಸುವುದರಲ್ಲಿ ಈತ ನಿರತನಾಗಿದ್ದ; ಈ ಉದ್ದೇಶದಿಂದಲೇ ಐಸಾಕ್ರಟೀಸ್ ಮತ್ತು ಪ್ಲುಟಾರ್ಕರ ಕೃತಿಗಳನ್ನು ಆಂಗ್ಲೀಕರಿಸಿದ. ದಿ ಬ್ಲೋಕ್ ನೇಮ್ಡ್ ದಿ ಗವರ್ನರ್ ಈತನ ಅತ್ಯಂತ ಪ್ರಸಿದ್ಧ ಕೃತಿ. ಇದು ಪ್ಲೇಟೋ, ಅರಿಸ್ಟಾಟಲ್, ಸಿಸರೋ, ಕ್ವಿಂಟಲ್ಯನ್, ಪ್ಲುಟಾರ್ಕ್ ಮುಂತಾದವರ ಅಭಿಜಾತ ಕೃತಿಗಳ ಸಾರಸಂಗ್ರಹವಾಗಿದೆ.
ಎಲ್ಯಟ್ನ ಚಿಂತನದಲ್ಲಿ ಅವನ ಸ್ವಂತದ್ದೇನೂ ಅಷ್ಟಾಗಿ ಇಲ್ಲ. ಆದರೆ ಆಗಿನ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಸ್ವಂತಿಕೆಗೆ ಅಷ್ಟಾಗಿ ಬೆಲೆ ಇರಲಿಲ್ಲ. ಅಭಿಜಾತ ಸಾಹಿತ್ಯವೇ ನಿಜವಾದ ಜ್ಞಾನದ ಗಣಿ; ಸಮಕಾಲೀನ ಬರ್ಬರತನವನ್ನು ಹೋಗಲಾಡಿಸಲು ಅದೊಂದು ಸಂಜೀವಿನಿ- ಎಂಬ ಭಾವನೆ ಇದ್ದ ಕಾಲದಲ್ಲಿ ಎಲ್ಯಟ್ ಬದುಕಿದ್ದ. ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಶ್ರೀಮಂತ ಪ್ರಭುತ್ವ, ಸಮಾಜನಿಷ್ಠೆ, ಉಪಕೃತಿ ಮುಂತಾದ ಅರ್ಥಗಳುಳ್ಳ ಪದಗಳನ್ನು ಇಂಗ್ಲಿಷಿನಲ್ಲಿ ಬಳಕೆಗೆ ತಂದವನು ಎಲ್ಯಟ್. ನೀತಿಬೋಧೆಯ ಕಾರ್ಯದಲ್ಲಿ ಅವನಿಗೆ ಈ ಶಬ್ದಗಳು ಅನುವಾಗಿ ಒದಗಿಬಂದುವು. ಈತ ಲ್ಯಾಟಿನ್ ನಿಘಂಟೊಂದನ್ನು ರಚಿಸಿದ್ದಾನೆ (1538).
ಉಲ್ಲೇಖನಗಳು
[ಬದಲಾಯಿಸಿ]- ↑ "Sir Thomas Elyot". carlton-cambridgeshire.org.uk. Retrieved 31 March 2015.