ಸದಸ್ಯ:Vidhathri Bhat/ನನ್ನ ಪ್ರಯೋಗಪುಟ7
ಚಂದ್ರನಾಥ ಸ್ವಾಮಿ ಬಸದಿ, ಕರೆಂಕಿದೋಡಿ (ಕರಂಕಿತೋಡಿ)
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಒಂದು ಸುಂದರವಾದ ಪುಟ್ಟ ಊರು ಪೆರಾಡಿ. ಸುಂದರವಾದ ಊರಿನ ಹಚ್ಚಹಸುರಿನ ಪ್ರಕೃತಿಯ ನಡುವಿನ ಬಯಲು ಪ್ರದೇಶದಲ್ಲಿ ಅತಿ ಸುಂದರವಾಗಿ ಕಂಗೊಳಿಸುತ್ತಿರುವುದು ಇತ್ತೀಚೆಗೆ ಪೂರ್ಣ ಜೀರ್ಣೋದ್ಧಾರಗೊಂಡಿರುವ ಕರಂಕಿತೋಡಿಯ ಶ್ರೀ ಚಂದ್ರನಾಥ ಸ್ವಾಮಿ ಬಸದಿ.
ಮಾರ್ಗಸೂಚಿ
[ಬದಲಾಯಿಸಿ]ಈ ಬಸದಿಗೆ ಬರುವ ಮಾರ್ಗಸೂಚಿ ಎಂದರೆ ನಾವು ಬೆಳ್ತಂಗಡಿಯಿಂದ ಹೊರಟು ಗುರುವಾಯನಕೆರೆ ಮಾರ್ಗವಾಗಿ ಸುಲ್ಕೇರಿಗೆ ಬಂದು ಅಲ್ಲಿಂದ ಕೊಕ್ರಾಡಿ ಮಾರ್ಗವಾಗಿ ಮಾವಿನಕಟ್ಟೆ ತಲುಪಬೇಕು. ಅಲ್ಲಿಂದ ಎರಡು ಕಿ.ಮೀ ಒಳಗೆ ಚಲಿಸಿದರೆ ಅಲ್ಲಿ ನಮಗೆ ಈ ಬಸದಿ ಸಿಗುತ್ತದೆ. ಇಲ್ಲಿಗೆ ಬರಲು ಮಾವಿನಕಟ್ಟೆಯ ವರೆಗೆ ಸಾರ್ವಜನಿಕ ವಾಹನದ ವ್ಯವಸ್ಥೆ ಇದೆ. ಅಲ್ಲಿಂದ ಆಟೋರಿಕ್ಷಾ ಅಥವಾ ನಮ್ಮ ಸ್ವಂತ ವಾಹನದಲ್ಲಿ ಬರಬೇಕಾಗುತ್ತದೆ. ಈ ಬಸದಿಯು ಪೆರಾಡಿ ಗ್ರಾಮಕ್ಕೆ ಸೇರಿದೆ. ಇದರ ಆಡಳಿತ ಕರಂಕಿತೋಡಿಯ ಮನೆತನದ್ದಾಗಿದೆ.
ಪೂಜಾ ಮೂರ್ತಿ
[ಬದಲಾಯಿಸಿ]ಈ ಬಸದಿಯಲ್ಲಿ ಪೂಜೆಗೊಳ್ಳುವ ಮೂಲ ನಾಯಕ ಶ್ರೀ ಚಂದ್ರನಾಥ ಸ್ವಾಮಿ. ಮೂಲ ಸ್ವಾಮಿಯ ಮೂರ್ತಿಯು ಖಡ್ಗಾಸನ ಭಂಗಿಯಲ್ಲಿ ಅಮೃತಶಿಲೆಯಿಂದ ಮಾಡಲ್ಪಟ್ಟಿದೆ. ಸುತ್ತಲೂ ಚಿನ್ನದ ಬಣ್ಣದಿಂದ ಕಂಗೊಳಿಸುವ ಪ್ರಭಾವಳಿ ಇದೆ. [೧]
ಇತಿಹಾಸ
[ಬದಲಾಯಿಸಿ]ಇದು ಅತ್ಯಂತ ಪುರಾತನವಾದ ಜಿನಾಲಯ ಎಂದು ಹೇಳಲಾಗುತ್ತಿದೆ. ಕರಂಕಿತೋಡಿಯ ಮನೆತನದವರಿಗೆ, ಬಸದಿಗೆ ಸಂಬಂಧಿಸಿದ ೧೮೩೬ನೇ ಇಸವಿಯ ದಾಖಲೆಗಳು ಸಿಕ್ಕಿವೆ. ಅದಕ್ಕಿಂತಲೂ ಸುಮಾರು ೧೫೦ ವರ್ಷಗಳ ಹಿಂದೆಯೇ ಈ ಬಸದಿಯನ್ನು ನಿರ್ಮಿಸಲಾಗಿತ್ತು ಎಂದು ಹೇಳುತ್ತಾರೆ. ಈ ಕರಂಕಿತೋಡಿಯ ಮನೆತನದವರು ಮೂಲತಃ ವಾಮಂಜೂರಿನವರು. ಸುಮಾರು ಐದು ತಲೆಮಾರುಗಳ ಹಿಂದೆ ಈಗ ಬಸದಿ ಇರುವ ಜಾಗವನ್ನು ಕರಂಕಿತೋಡಿ ಮನೆತನದವರು ಖರೀದಿಸಿದರು ಎಂದು ತಿಳಿದುಬರುತ್ತದೆ. ಮೂಲ ನಾಯಕ ಬಿಂಬದ ಪ್ರಭಾವಲಯದಲ್ಲಿ ಅಷ್ಟಮಹಾಪ್ರಾತಿಹಾರ್ಯಗಳನ್ನು ತೋರಿಸಲಾಗಿದೆ. ಇಲ್ಲಿನ ಯಕ್ಷ ಶ್ಯಾಮ, ಯಕ್ಷಿ ಜ್ವಾಲಾಮಾಲಿನಿ ಮೂರ್ತಿಗಳನ್ನು ಕಪ್ಪು ಶಿಲೆಯಿಂದ ಮಾಡಲಾಗಿದೆ. ಅಲ್ಲದೆ ಕೆಲವು ಜಿನೇಶ್ವರರ ಮತ್ತು ಜಿನ ದೇವಿಯರ ಮೂರ್ತಿಗಳು ಕೂಡಾ ಇವೆ. ಮೂಲ ಸ್ವಾಮಿಗೆ ದಿನದಲ್ಲಿ ಒಂದು ಬಾರಿ ಅಭಿಷೇಕ ಪೂಜೆ ಮಾಡಲಾಗುತ್ತದೆ ಅಭಿಷೇಕ ಮಾಡುವಾಗ ಜಲ, ಕ್ಷೀರ, ಪಂಚಾಮೃತ, ಸೀಯಾಳ ಮುಂತಾದವುಗಳನ್ನು ಬಳಸಲಾಗುತ್ತದೆ. ಬಸದಿಯಲ್ಲಿ ಉಳಿದ ಕೆಲವು ತೀರ್ಥಂಕರರ ಚಿಕ್ಕ ಚಿಕ್ಕ ಮೂರ್ತಿಗಳು ಕೂಡಾ ಇವೆ.
ಪೂಜಾ ವಿಧಿವಿಧಾನ
[ಬದಲಾಯಿಸಿ]ನಾವು ಬಸದಿಯಲ್ಲಿ ತೀರ್ಥಂಕರರ ಕೆಲವು ಚಿಕ್ಕ ಚಿಕ್ಕ ಮೂರ್ತಿಗಳನ್ನಲ್ಲದೆ ಶ್ರೀಮಾತೆ ಪದ್ಮಾವತಿಯಮ್ಮನವರ ಮೂರ್ತಿಯನ್ನು ಕೂಡಾ ಕಾಣಬಹುದು. ಮೂರ್ತಿಯನ್ನು ಕರೀ ಶಿಲೆಯಿಂದ ಮಾಡಿದ ಅತ್ಯಂತ ಸುಂದರವಾದ ಸಿಂಹಾಲಯದಲ್ಲಿ ಇಡಲಾಗಿದೆ. ಪ್ರತ್ಯೇಕ ದೇವಕೋಷ್ಠವಿಲ್ಲ. ಪದ್ಮಾವತಿ ಅಮ್ಮನವರ ಮೂರ್ತಿಯ ಪೂರ್ವಾಭಿಮುಖವಾಗಿದೆ. ದಿನಾ ಪೂಜೆಯ ವೇಳೆಗೆ ಸೀರೆ, ಬಳೆ, ಕರಿಮಣಿ ತೊಡಿಸಿ ಕಿರೀಟ, ಹಣೆಪಟ್ಟಿ, ದೃಷ್ಟಿ ತೊಡಿಸಿ ಪೂಜೆ ಕೈಗೊಳ್ಳಲಾಗುತ್ತದೆ. ವಾರದ ಶುಕ್ರವಾರದಂದು ವಿಶೇಷ ಪೂಜೆ ನಡೆಯುತ್ತದೆ. ಪದ್ಮಾವತಿ ಅಮ್ಮನ ಎದುರು ಹೂವು ಹಾಕಿ ನೋಡುವ ಕ್ರಮ ಮತ್ತು ಪ್ರಸಾದ ಕೇಳುವ ಕ್ರಮ ಕೂಡಾ ಇದೆ. ವಿಶೇಷ ಹರಕೆಗಳನ್ನೂ ಹೇಳಲಾಗುತ್ತದೆ. ದೇವಿಯ ಎದುರು ತೆಂಗಿನಕಾಯಿ ಇಟ್ಟು ನಾವು ಅಂದುಕೊಂಡ ಕೆಲಸ ನೆರವೇರಲಿ ಎಂದು ಪ್ರಾರ್ಥಿಸಿದರೆ ಆ ಕೆಲಸ ನೆರವೇರುತ್ತದೆ ಎಂದು ಇಲ್ಲಿನ ಪುರೋಹಿತರು ಹೇಳುತ್ತಾರೆ.
ವಿನ್ಯಾಸ
[ಬದಲಾಯಿಸಿ]ನಾವು ಬಸದಿಯ ಗರ್ಭಗೃಹದಿಂದ ಹೊರಗಡೆ ಬರುತ್ತಿರುವಂತೆಯೇ ಗಂಧಕುಟಿ ಇದೆ. ಪ್ರಾರ್ಥನಾ ಮಂಟಪ, ಘಂಟಾ ಮಂಟಪ, ಗೋಪುರ ಮುಂತಾದವುಗಳನ್ನು ಕಾಣಬಹುದು. ಬಸದಿಯ ಗರ್ಭಗುಡಿ ಒಳಗಡೆ ಸಿಮೆಂಟಿನ ನೆಲ ಇದೆ. ಅದನ್ನು ಬಿಟ್ಟು ಹೊರಗಿನ ಎಲ್ಲಾ ಕಡೆ ಟೈಲ್ಸ್ ಹಾಕಲಾಗಿದೆ. ಗೋಪುರವನ್ನು ವಿಶೇಷ ಪೂಜೆಗಳ ಸಮಯದಲ್ಲಿ ಜನರಿಗೆ ಕುಳಿತುಕೊಳ್ಳಲು ಉಪಯೋಗಿಸಲಾಗುತ್ತದೆ. ಬಸದಿಯಲ್ಲಿ ಮೇಗಿನ ನೆಲೆ ಎಂಬುದು ಇಲ್ಲ. ಆದರೆ ಮಾಡು ಸಹಿತವಾದ ಅಂತಹ ರಚನೆ ಇದೆ. ಬಸದಿಯಲ್ಲಿ ನಾವು ಬೇರೆ ಬಿಂಬಗಳ ಜೊತೆಯಲ್ಲಿ ಬ್ರಹ್ಮದೇವರ ಮೂರ್ತಿಯನ್ನು ಕೂಡಾ ಕಾಣಬಹುದು. ಈ ಮೂರ್ತಿಯ ಕೆಳಗೆ ಕುದುರೆಯ ಮೇಲೆ ಕುಳಿತುಕೊಂಡಿರುವ ಬ್ರಹ್ಮದೇವರನ್ನು ನಾವು ಕಾಣಬಹುದು. ಬ್ರಹ್ಮದೇವರ ಆವೇಶ ಯಾರಮೇಲೂ ಬರುವುದಿಲ್ಲ. ನಾವು ಇಲ್ಲಿನ ವಿಶೇಷವನ್ನು ಹೇಳುವುದಾದರೆ ಶ್ರೀ ಚಾಮುಂಡೇಶ್ವರಿಯ ಪಂಚಲೋಹದ ಒಂದು ಮೂರ್ತಿಯನ್ನು ಬಸದಿಯ ಗರ್ಭಗುಡಿಯ ಒಳಗಡೆ ಕಾಣುತ್ತೇವೆ. ಇಲ್ಲಿಯ ಗಂಧಕುಟಿಯ ಮೇಲ್ಗಡೆ ಒಂದು ಸಿದ್ಧರ ಬಿಂಬವಿದೆ.ಬಸದಿಯಲ್ಲಿ ಯಾವುದೇ ರೀತಿಯ ವಿಶಿಷ್ಟ ಕಲ್ಲಿನ ಕಂಬಗಳನ್ನು ಕಾಣಲಾರೆವು. ಮತ್ತು ಯಾವುದೇ ರೀತಿಯಾದ ಶಿಲಾಶಾಸನಗಳು ಕೂಡಾ ಇಲ್ಲಿ ಇಲ್ಲ. ಬಸದಿಯ ಎಲ್ಲಾ ಗೋಡೆಗಳು ಮಣ್ಣಿನಿಂದ ಮತ್ತು ಪಂಚಾAಗ ಕೂಡ ಮಣ್ಣಿನಿಂದ ಮಾಡಿದ್ದಾಗಿದೆ. ಬಸದಿಯಲ್ಲಿ ಮರದ ಸುಂದರವಾದ ಕೆತ್ತನೆಗಳನ್ನು ನಾವು ಕಾಣಬಹುದು. ಬಸದಿಯು ಇತ್ತೀಚಿಗೆ ಜೀರ್ಣೋದ್ಧಾರಗೊಂಡು, ಚಿರನೂತನವಾಗಿ ಕಂಡುಬರುತ್ತದೆ. ವರ್ಣಗಳಿಂದ ಅಲಂಕೃತಗೊಂಡಿದೆ. ಒಳಾಂಗಣದ ದೇವರ ಬಾವಿಯಲ್ಲಿ ಧಾರಾಳ ನೀರು ಇದೆ. ಈ ಸಮಗ್ರ ಬಸದಿಯ ಜೀರ್ಣೋದ್ಧಾರ ಮಾಡಿದವರು ಕರಂಕಿತೋಡಿ ಮನೆತನದವರು. ಈಗ ಮೊದಲಿಗಿಂತಲೂ ಹೆಚ್ಚು ವ್ಯವಸ್ಥಿತವಾಗಿ ದಿನಂಪ್ರತಿ ಪೂಜೆಗಳು ನಡೆಯುತ್ತಿರುವುದನ್ನು ನಾವು ಕಾಣಬಹುದು. ನಾವು ಗಂಟ ಮಂಟಪದಿಂದ ಹೊರಗಡೆ ಬರುವಾಗ ಹೊರಗಿನ ಗೋಡೆಗಳ ಮೇಲೆ ದ್ವಾರಪಾಲಕರ ಸುಂದರವಾದ ಪೈಂಟಿ<ಗ್ ಚಿತ್ರಗಳನ್ನು ಕಾಣಬಹುದು. ಇದನ್ನು ಬಿಟ್ಟರೆ ಬಸದಿಯಲ್ಲಿ ಬೇರೆ ಯಾವುದೇ ರೀತಿಯ ಪೈಂಟಿಂಗ್ ಚಿತ್ರಗಳು ಕಾಣಸಿಗುವುದಿಲ್ಲ.
ವಿಶೇಷ ಪೂಜೆಗಳು
[ಬದಲಾಯಿಸಿ]ಚಾಮುಂಡೇಶ್ವರಿ ಮೂರ್ತಿಗೂ ದಿನಂಪ್ರತಿ ಪೂಜೆ ನಡೆಸಲಾಗುತ್ತದೆ. ಇನ್ನೊಂದು ವಿಷಯವನ್ನು ಹೇಳುವುದಾದರೆ ಇಲ್ಲಿಯ ವಿಶಿಷ್ಟವಾದ ಕ್ಷೇತ್ರಪಾಲನ ಸಾನಿಧ್ಯ. ಕ್ಷೇತ್ರಪಾಲ ಪೂರ್ವಾಭಿಮುಖವಾಗಿ ಇದ್ದರೂ ಕೂಡ ಅವನ ದೃಷ್ಟಿ ದಕ್ಷಿಣಕ್ಕಿದೆ. ಆತ ದಕ್ಷಿಣ ದಿಕ್ಕಿಗೆ ಇಣುಕಿ ನೋಡುವಂತಿದೆ. ದಶದಿಕ್ಪಾಲಕರ ಕಲ್ಲುಗಳು ಇವೆ. ಬಸದಿಯಲ್ಲಿ ನೋಂಪಿ ಉದ್ಯಾಪನೆ ಮಾಡಿದ ಕೆಲವೊಂದು ಮೂರ್ತಿಗಳಿವೆ. ಬಸದಿಯಲ್ಲಿ ನಡೆಯುವ ವಿಶೇಷ ಪೂಜೆಗಳೆಂದರೆ ವಾರ್ಷಿಕೋತ್ಸವ, ದೀಪಾವಳಿಯ ದಿನದ ಪೂಜೆ, ನೂಲ ಹುಣ್ಣಿಮೆಯ ಪೂಜೆ, ಜೀವದಯಾಷ್ಟಮಿಯ ಪೂಜೆ, ಹೊಸ ತೆನೆ ಕಟ್ಟುವುದು, ಹೊಸ ಅಕ್ಕಿಯ ಪೂಜೆ ಮತ್ತು ಊಟ ಮುಂತಾದವುಗಳು.
ಉಲ್ಲೇಖಗಳು
[ಬದಲಾಯಿಸಿ]- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೨೧೪-೨೧೫.