ಸದಸ್ಯ:Varsha Prabhu. T/ನನ್ನ ಪ್ರಯೋಗಪುಟ6
ಶ್ರೀ ಚಂದ್ರನಾಥ ಸ್ವಾಮಿ ಬಸದಿ, ಧರ್ಮಸ್ಥಳ
ಇತಿಹಾಸ
[ಬದಲಾಯಿಸಿ]ಶ್ರೀ ಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿಯ ಸನ್ನಿಧಿಯ ಜತೆಯಲ್ಲಿ ದೈವಗಳ ಸ್ಥಾನವಾದ ಬದಿನಡೆ, ನೆಲ್ಯಾಡಿ ಬೀಡು, ಶ್ರೀ ಚಂದ್ರನಾಥ ಸ್ವಾಮಿಯ ಸನ್ನಿಧಿಯೂ ಇದೆ. ಧರ್ಮಸ್ಥಳದಲ್ಲಿ ಎಂಟನೆಯ ತೀರ್ಥಂಕರರಾದ ಭಗವಾನ್ ಚಂದ್ರಪ್ರಭ ಸ್ವಾಮಿಯ ಜಿನಮಂದಿರ ಇದ್ದು, ಐತಿಹ್ಯದ ಪ್ರಕಾರ ಬರ್ಮಣ್ಣ ಪೆರ್ಗಡೆ ಹಾಗೂ ಅಮ್ಮು ಬಲ್ಲಾಳ್ತಿಯವರ ಕಾಲದಿಂದಲೂ ಅಂದರೆ ಕಳೆದ ೮೦೦ ವರ್ಷಗಳಿಂದಲೂ ಈ ಜಿನೇಶ್ವರರನ್ನು ಇಲ್ಲಿ ಪೂಜಿಸಿಕೊಂಡು ಬರಲಾಗುತ್ತಿದೆ.
ಬಿಂಬಗಳು
[ಬದಲಾಯಿಸಿ]ಬಸದಿಯ ಗರ್ಭಗೃಹದಲ್ಲಿ ವಿರಾಜಮಾನವಾಗಿರುವ ಶ್ರೀ ಚಂದ್ರನಾಥ ಸ್ವಾಮಿಯ ವಿಗ್ರಹವು ಪದ್ಮಾಸನ ಭಂಗಿಯಲ್ಲಿ ಧ್ಯಾನಸ್ಥ ಮುದ್ರೆಯಲ್ಲಿದೆ. ಅರುಣ ಚಂದ್ರಕಾಂತ ಶಿಲೆಯಿಂದ ಮಾಡಿದುದಾಗಿದೆ. ಜಾನು ಪ್ರದೇಶದಲ್ಲಿ ಯಕ್ಷ-ಯಕ್ಷಿಣಿಯರಾಗಿ ಶ್ಯಾಮ ಯಕ್ಷ ಮತ್ತು ಜ್ವಾಲಾಮಾಲಿನಿ ಯಕ್ಷಿ ನಿಂತ ಭಂಗಿಯಲ್ಲಿದ್ದಾರೆ. ಚಂದ್ರ ಲಾಂಛನವೂ ಇಲ್ಲಿದೆ. ಗರ್ಭಗುಡಿಯ ಮೊದಲ ಅಂತಸ್ತಿನಲ್ಲಿ ಸುಂದರವಾದ ಮುಖ, ಅಜಾನುಬಾಹುವುಳ್ಳ ಬಾಹುಬಲಿ ಸ್ವಾಮಿಯ ವಿಗ್ರಹವನ್ನು ಕಾಣಬಹುದು. ಈ ಮೂರ್ತಿ ಖಡ್ಗಾಸನ ಭಂಗಿಯಲ್ಲಿದ್ದು, ಪಂಚಲೋಹದಿಂದ ನಿರ್ಮಿತವಾಗಿದೆ. ಗರ್ಭಗೃಹದ ಬಲಕ್ಕೆ ಶ್ರೀ ಪದ್ಮಾವತಿ ದೇವಿಯ ಪ್ರತ್ಯೇಕ ಸಾನಿಧ್ಯವಿದ್ದು ವಿಗ್ರಹವು ಕರಿಶಿಲೆಯಿಂದ ಮಾಡಲ್ಪಟ್ಟಿದೆ. ಈ ವಿಗ್ರಹವು ಸುಖಾಸೀನ ಭಂಗಿಯಲ್ಲಿದೆ. ಪೀಠದಲ್ಲಿ ಕುಕ್ಕುಟ ಸರ್ಪದ ಲಾಂಛನವೂ ಇದೆ. ದೇವಿಯು ತನ್ನ ಕೈಗಳಲ್ಲಿ ಪಾಶ, ಅಂಕುಶಗಳನ್ನು ಹಿಡಿದುಕೊಂಡಿದ್ದು, ವರದ ಮುದ್ರೆಯಲ್ಲಿದೆ. ಮಾತೆ ಪದ್ಮಾವತಿಗೂ ಚಂದ್ರನಾಥ ಸ್ವಾಮಿಯಂತೆ ತ್ರಿಕಾಲದಲ್ಲಿಯೂ ಪ್ರತ್ಯೇಕ ಪೂಜೆ ಇದೆ. ಈ ಜಿನಮಂದಿರದಲ್ಲಿರುವ ಮತ್ತೊಂದು ವಿಗ್ರಹ ಆದಿನಾಥ ತೀರ್ಥಂಕರರದ್ದು, ಈ ಬಿಂಬದ ಪ್ರಭಾವಳಿಯಲ್ಲಿ ೨೪ ತೀರ್ಥಂಕರರ ಧ್ಯಾನಸ್ಥ ಬಿಂಬಗಳಿವೆ. ಗೋಮುಖ -ಚಕ್ರೇಶ್ವರಿಯರು ಯಕ್ಷ ಯಕ್ಷಿಣಿಯರಾಗಿದ್ದು ವಿಗ್ರಹದ ಎರಡೂ ಪಾರ್ಶ್ವದಲ್ಲಿ ನಿಂತಿದ್ದಾರೆ. ಈ ಮೂರ್ತಿಯು ಪಂಚಲೋಹದಿಂದ ಮಾಡಲ್ಪಟ್ಟಿದೆ.
ಇತರ ಬಿಂಬಗಳು
[ಬದಲಾಯಿಸಿ]ಮೇಲೆ ಉಲ್ಲೇಖಿಸಿದ ಪ್ರಮುಖ ವಿಗ್ರಹಗಳಲ್ಲದೆ ಅನೇಕ ಜಿನ ಬಿಂಬಗಳು ಇಲ್ಲಿವೆ. ವೃಷಭಾದಿ ಅನಂತ ತೀರ್ಥಂಕರರ ಪಂಚಲೋಹದ ವಿಗ್ರಹವೊಂದಿದೆ. ಧರ್ಮಚಕ್ರವನ್ನು ಹೊತ್ತಿರುವ ಸರ್ವಹ್ಣ ಯಕ್ಷನ ಇಲ್ಲಿಯ ವಿಗ್ರಹವು ಬಹಳ ಸುಂದರವಾದದ್ದು. ಈ ಲೋಹದ ಧರ್ಮಚಕ್ರವು ‘ಅಂತರಂಗದಲ್ಲಿರುವ ಶತ್ರುವಿನ ನಿಗ್ರಹ ಮಾಡಿ, ಮುಕ್ತಿ ಸಿಗಲಿ’ ಎಂಬ ಸಂಕೇತವನ್ನು ಹೊಂದಿದುದ್ದಾಗಿದೆ. ಬಸದಿಯ ಗಂಧಕುಟಿಯಲ್ಲಿ ವೃಷಭನಾಥರಿಂದ ಆರಂಭಗೊಂಡು ಕಡೆಯ ಭಗವಾನ್ ವರ್ಧಮಾನರ ವರೆಗಿನ ೨೪ ತೀರ್ಥಂಕರರ ವಿಗ್ರಹಗಳು ಇವೆ. ವಿಶೇಷವಾಗಿ ಅರ, ಮಲ್ಲಿ, ಮುನಿಸೂವ್ರತ ತೀರ್ಥಂಕರರಿರುವ ರತ್ನತ್ರಯ ವಿಗ್ರಹವಿದ್ದು, ಕರಿಶಿಲೆಯಿಂದ ಮಾಡಲ್ಪಟ್ಟಿದ್ದಾಗಿದೆ. ಇದಲ್ಲದೆ ಕಂಚಿನ ಪರಮೇಷ್ಠಿಯ ವಿಗ್ರಹ ಒಂದಿದ್ದು, ಅದನ್ನು ವಿಶೇಷವಾಗಿ ಗಮನಿಸಬೇಕು. ಮಂದಿರದಲ್ಲಿರುವ ಮತ್ತೊಂದು ಮುಖ್ಯ ವಿಗ್ರಹವೆಂದರೆ ನಂದೀಶ್ವರ ದ್ವೀಪದ ಒಂದೊಂದು ದಿಕ್ಕಿನಲ್ಲಿ ೧೩ರಂತೆ ಒಟ್ಟು ೫೨ ಪರ್ವತಗಳಿದ್ದು, ಅವುಗಳಲ್ಲಿ ಒಂದೊಂದರಂತೆ ೫೨ ಜಿನ ಬಿಂಬಗಳಿರುತ್ತವೆ.ಆ ಜಿನಬಿಂಬಗಳನ್ನು ದೇವಾದಿದೇವತೆಗಳು ಪೂಜಿಸುತ್ತಾರೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಅಷ್ಟಮನಂದೀಶ್ವರರ ಬಿಂಬ ಪ್ರತಿಷ್ಠಾಪನೆಯಾಗಿದೆ. ಬಸದಿಯಲ್ಲಿರುವ ಮತ್ತೊಂದು ಆಕರ್ಷಕ ವಿಗ್ರಹ ಸರಸ್ವತಿಯದ್ದು. ತಲೆಯ ಹಿಂಭಾಗದಲ್ಲಿ ಶಿರಶ್ಚಕ್ರವಿದ್ದು, ಇದು ಶಕ್ತಿಯ ಸಂಕೇತವಾಗಿದೆ. ಕುದುರೆಯ ಮೇಲೆ ಕುಳಿತ ಭಂಗಿಯಲ್ಲಿರುವ ಬ್ರಹ್ಮನ ವಿಗ್ರಹವೂ ಇದೆ.
ಬಸದಿಯ ಹೊರಾಂಗಣ
[ಬದಲಾಯಿಸಿ]ಧಮಾಧಿಕಾರಿ ಹೆಗ್ಗಡೆಯವರ ಪಟ್ಟಾಭಿಷೇಕದ ವಿಧಿಯು ಶ್ರೀ ಚಂದ್ರನಾಥ ಸ್ವಾಮಿಯ ಬಸದಿಯಿಂದಲೇ ಆರಂಭವಾಗುತ್ತದೆ. ಚಂದ್ರನಾಥ ಸ್ವಾಮಿಯ ಬಸದಿಯು ೮ ಶತಮಾನಗಳಷ್ಟು ಹಳೆಯದೆಂದು ತಿಳಿಯಲಾಗಿದೆ. ೧೯೯೦ರಲ್ಲಿ ಹಳೆಯ ಬಸದಿ ಕಟ್ಟಡ ಬಿಚ್ಚುವಾಗ ಒಂದು ಶಾಸನ ದೊರೆತಿದ್ದು, ಶಾಲಿವಾಹನ ಶಕ ೧೮೨೩ರಲ್ಲಿ ಇಮ್ಮಡಿ ಮಂಜಯ್ಯ ಹೆಗ್ಗಡೆಯವರು ಬಸದಿಯನ್ನು ಜೀರ್ಣೋದ್ಧಾರಗೊಳಿಸಿದ್ದರು ಎಂದು ಅದು ತಿಳಿಸುತ್ತದೆ. ಇತ್ತೀಚೆಗೆ ೨೦೦೧ರಲ್ಲಿ ಇದು ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಂದ ಪೂರ್ಣ ಜೀರ್ಣೋದ್ಧಾರವಾಗಿದೆ. ಧರ್ಮಸ್ಥಳದ ಪೂಜಾಗೃಹಗಳ ಪೈಕಿ ಇದು ಅತ್ಯಂತ ಪ್ರಾಚೀನವಾದದ್ದು. [೧] ಹೊರಗಿನ ಪ್ರದಕ್ಷಿಣಾ ಪಥಕ್ಕೆ ರಕ್ಷಣೆಯಾಗಿರುವ ಅರ್ಧ ಗೋಡೆಯ ಮೇಲಿರುವ ಒಟ್ಟು ೨೬ ಶಿಲೆ ಸ್ತಂಭಗಳಿವೆ. ಭಗವಾನ್ ಚಂದ್ರಪ್ರಭಾ ಸ್ವಾಮಿಯ ಎಲ್ಲಾ ಪಂಚಕಲ್ಯಾಣಕ್ಕೆ ಸಂಬAಧಿಸಿದ ದೃಶ್ಯಗಳನ್ನು ಜೈನ ತೀರ್ಥಕ್ಷೇತ್ರಗಳಿಗೆ ಸಂಬಂಧಿಸಿದ ವಿವರಗಳನ್ನು ಮತ್ತು ಮುನಿ, ಆಚಾರ್ಯರ ಆಕೃತಿಯನ್ನು ಈ ಕಂಬಗಳಲ್ಲಿ ಕೊರೆದು ಮಾಡಲಾಗಿದೆ. ಇದು ಉಬ್ಬು ಶಿಲ್ಪಗಳ ಮಾದರಿಯಲ್ಲಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್. pp. ೧೮೩.