ಸದಸ್ಯ:Vaibhavi manglore/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                               :ಕ್ಷಿತಿಜದ ಬಗ್ಗೆ ಒಂದಿಷ್ಟು ಮಾಹಿತಿ:                                                                                                                                 ಕಣ್ಣು ಅತ್ಯಂತ ಸೂಕ್ಷ್ಮ ಅಷ್ಟೇ ಅನರ್ಘ್ಯವೂ ಹೌದು. ಕಣ್ಣಿನ ಬಗ್ಗೆ ಕೊಂಚ ಅಸಡ್ಡೆಯಾದರೂ ಅದೊಂದು ದೊಡ್ಡ ದುರಂತವಾಗಲು ಸಾಧ್ಯ. ಹಾಗಾಗಿ ಇಲ್ಲಿದೆ ಸ್ವಲ್ಪ ಕಾಳಜಿಯ ಮಾತು ನಿಮಗಾಗಿ.                                                                  * ವೈದ್ಯರ ಸಲಹೆ ಇಲ್ಲದೇ ಯಾವುದೇ ಹನಿಗಳ ಸ್ವಯಂ ವೈದ್ಯಕೀಯ ಸರ್ವಥಾ ಸಲ್ಲದು. ಕಣ್ಣಿನ ಹನಿಗಳಲ್ಲಿ ಬಹಳಷ್ಟು ವಿಧಗಳಿದ್ದು ಗೊತ್ತಿಲ್ಲದೇ ಉಪಯೋಗಿಸಿದರೆ ಸೂಕ್ಷ್ಮವಾದ ಕಣ್ಣಿಗೆ ಹಾನಿಯಾಗುವ ಸಾಧ್ಯತೆಯಿದೆ.
  • ಔಷಧ ಬಾಟಲಿಯ ಮುಚ್ಚಳ ತೆಗೆದ ಮೇಲೆ ಒಂದು ತಿಂಗಳು ಮಾತ್ರ ಅದನ್ನು ಉಪಯೋಗಿಸುವುದು ಒಳ್ಳೆಯದು.
  • ಬಾಟಲಿಯನ್ನು ಕೊಂಡ ಬಳಿಕ ಅದರಲ್ಲಿ ರಂಧ್ರ ಮಾಡಲು ಕಡ್ಡಿಯನ್ನೋ ತುಕ್ಕು ಹಿಡಿಯುತ್ತಿರುವ ಪಿನ್ನನ್ನೋ ಬಳಸುವದು ವಿದ್ಯಾವಂತರೂ ಮಾಡುವ ತಪ್ಪು. ಅದರ ಮುಚ್ಚಳದಲ್ಲೇ ಆ ಸೌಲಭ್ಯವಿರುವದನ್ನು ಗಮನಿಸಬೇಕು.
  • ಬಾಟಲಿಯ ತುದಿಯು ಗಲೀಜಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಔಷಧವೂ ಕೆಡುವ ಸಾಧ್ಯತೆಯಿರುತ್ತದೆ.
  • ವೈದ್ಯರು ಒಮ್ಮೆ ಪರೀಕ್ಷಿಸಿ ಬರೆದುಕೊಟ್ಟ ಔಷಧವನ್ನು ಮುಂದೆ ಯಾವುದೇ ಕಣ್ಣಿನ ತೊಂದರೆ ಬಂದರೆ ತಾವೇ ಹಾಕಿಕೊಳ್ಳುವುದು ಕೆಲವೊಮ್ಮೆ ತೊಂದರೆಗೆ ದೂಡಬಹುದು. ಅಜ್ಜಿಗೆ ಕಣ್ಣಿನ ಆಪರೇಶನ್ ಆದಾಗ ಕೊಟ್ಟ ಹನಿಯನ್ನು ಮೊಮ್ಮಗಳು ಕಣ್ಣು ಕೆಂಪಾದುದಕ್ಕೆ ಹಾಕಿಕೊಂಡರೆ ಏನಾಗಬಹುದು ಯೋಚಿಸಿ..
  • ದ್ರಷ್ಟಿದೋಷವುಳ್ಳವರು ಸೌಂದರ್ಯದ ನೆಪದಲ್ಲಿ ಕನ್ನಡಕ ಹಾಕಿಕೊಳ್ಳದೇ ಕಣ್ಣಿನ ಹನಿಗಳ ಮೂಲಕ ಸಮಸ್ಯೆ ಪರಿಹಾರವಾಗುವುದೆಂದು ಭಾವಿಸುವುದು ತಪ್ಪು. ಹೀಗಿದ್ದಲ್ಲಿ ಕಾಂಟಾಕ್ಟ್ ಲೆನ್ಸ್ ಅಥವಾ ಲೇಸರ್ ಚಿಕಿತ್ಸೆಗೆ ಮೊರೆಹೋಗುವುದು ಲೇಸು. ಕಣ್ಣಿನ ಪೊರೆ( ಕಾಟರಾಕ್ಟ್)ಗೆ ಶಸ್ತ್ರಚಿಕಿತ್ಸೆಯೊಂದೇ ಮಾರ್ಗವೇ ಹೊರತು ಹನಿಗಳ ಮೂಲಕ ಪೊರೆಯನ್ನು ಕರಗಿಸುವ ವಿಧಾನ ಸದ್ಯಕ್ಕಂತೂ ಲಭ್ಯವಿಲ್ಲ.
  • ಕಣ್ಣಿನಲ್ಲಿ ಕಸ ಬಿದ್ದರೆ ವೈದ್ಯರಿಂದ ತೆಗೆಸಿಕೊಳ್ಳದೇ ತಾವೇ ಕಣ್ಣಿನ ಹನಿಯನ್ನೋ ಮುಲಾಮನ್ನು ಹಾಕಿಕೊಳ್ಳುತ್ತ ಕಣ್ಣಿಗೆ ಬೆಣ್ಣೆಯನ್ನೋ ಎಲೆ ರಸವನ್ನೋ ಹಿಂಡಿಸಿಕೊಂಡು ಕರಿಗುಡ್ಡೆಗೆ ಗಾಯವಾಗಿ ಶಾಶ್ವತವಾಗಿ ದ್ರಷ್ಟಿಯನ್ನು ಕಳೆದುಕೊಂಡ ಉದಾಹರಣೆಗಳಿವೆ. ಅತಿ ನಾಜೂಕಾದ ಕಣ್ಣಿನ ಮೇಲೆ ಇಂಥ ಪ್ರಯೋಗ ಸಲ್ಲದು.
  • ಕಣ್ಣಿನ ಹನಿಯನ್ನು ಹಾಕಿಕೊಂಡೊಡನೆ ಸ್ವಲ್ಪ ಉರಿದಂತಾಗುವುದು ಸಹಜ. ಆದರೆ ಹೆಚ್ಚು ಕಾಲ ಈ ಬಗೆಯ ಉರಿ ಅಥವಾ ಕೆರೆತ ಉಂಟಾದರೆ ವೈದ್ಯರೊಂದಿಗೆ ಚರ್ಚಿಸುವುದು ಉತ್ತಮ. ಕೆಲವು ಔಷಧಗಳು ಕೆಲವರಲ್ಲಿ ಅಲರ್ಜಿ ಉಂಟುಮಾಡಬಹುದು.
  • ಔಷಧ ಹನಿಯ ಬಣ್ಣ ಬದಲಾದಲ್ಲಿ ಅದನ್ನು ಉಪಯೋಗಿಸಬಾರದು.
  • ಒಂದು ದಿನಕ್ಕೆ ಎಷ್ಟು ಸಲ ಹನಿಗಳನ್ನು ಹಾಕಿಕೊಳ್ಳಬೇಕೆಂದು ವೈದ್ಯರಿಂದ ತಿಳಿದು ಅದನ್ನು ಸರಿಯಾಗಿ ಪಾಲಿಸಬೇಕಾದುದು ಅಗತ್ಯ. ಕೆಲವನ್ನು ದಿನಕ್ಕೆ ಒಂದು ಸಲ ಹಾಕಿದರೆ ಸಾಕು ಆದರೆ ಕೆಲವನ್ನು ತಾಸಿಗೊಮ್ಮೆ ಹಾಕಬೇಕಾಗಬಹುದು. ಆಗಷ್ಟೇ ಪರಿಣಾಮ ಬೀರಬಲ್ಲದು. ಹೀಗೆ ಮಾಡದೇ ಚಿಕಿತ್ಸೆ ಫಲಕಾರಿಯಾಗಲಿಲ್ಲವೆಂದು ಔಷಧಗಳನ್ನೂ ವೈದ್ಯರನ್ನೂ ಬದಲಿಸುತ್ತಲೇ ಇರುವವರಿದ್ದಾರೆ.
  • ಒಂದು ಬಾರಿಗೆ ಒಂದು ಹನಿ ಹಾಕಿದರೆ ಸಾಕು. ಕಣ್ಣಿನೊಳಗೆ ಹಿಡಿಯಬಹುದಾದುದು ಅಷ್ಟೇ. ಬೇಗನೆ ವಾಸಿಯಾಗಲಿ ಎಂದು ಹೆಚ್ಚು ಹಾಕಿದರೆ ಹೊರ ಚೆಲ್ಲಿ ವ್ಯರ್ಥವಾಗುತ್ತದೆ.
  • ಹನಿಯನ್ನು ಹಾಕಿಕೊಂಡ ಮೇಲೆ ಎರಡು ನಿಮಿಷ ಕಣ್ಮುಚ್ಚಿರುವುದು ಒಳ್ಳೆಯದು. ಇಲ್ಲವಾದಲ್ಲಿ ಔಷಧವು ಮೂಗಿಗೆ ಹೋಗಿ ರಕ್ತನಾಳಗಳಲ್ಲಿ ಸೇರಬಹುದು. ಬೇಕಾದ ಜಾಗದಲ್ಲಿ ಕೆಲಸ ಮಾಡದೇ ಅನಗತ್ಯ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು.
  • ಔಷಧಗಳನ್ನು ಅಂಗಡಿಯಿಂದ ಒಯ್ದು ಉಪಯೋಗಿಸುವ ಮುನ್ನ ವೈದ್ಯರಿಂದ ಸಮರ್ಪಕವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಉತ್ತಮ. ನೂರಾರು ಕಂಪೆನಿಗಳ ಸಾವಿರಾರು ಬ್ರಾಂಡ್ಗಳಿಂದಾಗಿ ಕೆಲವೊಮ್ಮೆ ತಪ್ಪುಗಳಾಗುವ ಸಾಧ್ಯತೆಯಿದೆ.